ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ಡಿಸೆಂಬರ್ 15ರಿಂದ 16ರ ವರೆಗೆ ಜೋರ್ಡಾನ್‌ನ ಹ್ಯಾಶೆಮೈಟ್ ಸಾಮ್ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನ ಮಂತ್ರಿ ಅವರು ಗೌರವಾನ್ವಿತ ದೊರೆ ಅಬ್ದುಲ್ಲಾ II ಬಿನ್ ಅಲ್ ಹುಸೇನ್ ಅವರನ್ನು ಭೇಟಿ ಮಾಡಿ ಭಾರತ ಮತ್ತು ಜೋರ್ಡಾನ್ ನಡುವಿನ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಲಿದ್ದಾರೆ, ಪ್ರಾದೇಶಿಕ ವಿಷಯಗಳ ಕುರಿತು ದೃಷ್ಟಿಕೋನಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಗುರುತಿಸುವ ಈ ಭೇಟಿಯು, ಭಾರತ-ಜೋರ್ಡಾನ್ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು, ಪರಸ್ಪರ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಪ್ರಾದೇಶಿಕ ಶಾಂತಿ, ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆ ಉತ್ತೇಜಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಅವಕಾಶ ಒದಗಿಸುತ್ತದೆ.
ಭೇಟಿಯ 2ನೇ ಹಂತದಲ್ಲಿ, ಇಥಿಯೋಪಿಯಾದ ಪ್ರಧಾನಮಂತ್ರಿ ಗೌರವಾನ್ವಿತ ಡಾ. ಅಬಿಯ್ ಅಹ್ಮದ್ ಅಲಿ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಮೋದಿ ಅವರು 2025 ಡಿಸೆಂಬರ್ 16ರಿಂದ 17ರ ವರೆಗೆ ಇಥಿಯೋಪಿಯಾಕ್ಕೆ ಭೇಟಿ ನೀಡಲಿದ್ದಾರೆ. ಇದು ಇಥಿಯೋಪಿಯಾಕ್ಕೆ ಪ್ರಧಾನಮಂತ್ರಿ ಮೋದಿ ಅವರ ಮೊದಲ ಭೇಟಿಯಾಗಲಿದೆ. ಭಾರತ - ಇಥಿಯೋಪಿಯಾ ದ್ವಿಪಕ್ಷೀಯ ಸಂಬಂಧಗಳ ಎಲ್ಲಾ ಅಂಶಗಳ ಕುರಿತು ಅವರು ಪ್ರಧಾನಮಂತ್ರಿ ಡಾ. ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ವಿಸ್ತೃತ ಚರ್ಚೆಗಳನ್ನು ನಡೆಸಲಿದ್ದಾರೆ. ಜಾಗತಿಕ ದಕ್ಷಿಣ ದೇಶಗಳ ಪಾಲುದಾರರಾಗಿ, ಈ ಭೇಟಿಯು ಸ್ನೇಹ ಮತ್ತು ದ್ವಿಪಕ್ಷೀಯ ಸಹಕಾರದ ನಿಕಟ ಸಂಬಂಧಗಳನ್ನು ಮುನ್ನಡೆಸಲು ಎರಡೂ ರಾಷ್ಟ್ರಗಳ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಲಿದೆ.
ತಮ್ಮ ಭೇಟಿಯ ಕೊನೆಯ ಹಂತದಲ್ಲಿ, ಓಮನ್‌ನ ಗೌರವಾನ್ವಿತ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ, ಪ್ರಧಾನ ಮಂತ್ರಿ ಅವರು 2025 ಡಿಸೆಂಬರ್ 17ರಿಂದ 18ರ ವರೆಗೆ ಓಮನ್ ಗೆ ಭೇಟಿ ನೀಡಲಿದ್ದಾರೆ. ಇದು ಪ್ರಧಾನಮಂತ್ರಿ ಮೋದಿ ಅವರ 2ನೇ ಓಮನ್ ಭೇಟಿಯಾಗಲಿದೆ. ಶತಮಾನಗಳಷ್ಟು ಹಳೆಯದಾದ ಸ್ನೇಹ, ವ್ಯಾಪಾರ ಸಂಪರ್ಕಗಳು ಮತ್ತು ಬಲವಾದ ಜನರಿಂದ ಜನರ ಸಂಬಂಧಗಳಿಂದ ಬೇರೂರಿರುವ ಸಮಗ್ರ ಕಾರ್ಯತಂತ್ರ ಪಾಲುದಾರಿಕೆಯನ್ನು ಭಾರತ ಮತ್ತು ಒಮಾನ್ ಹಂಚಿಕೊಂಡಿವೆ. ಈ ಭೇಟಿಯು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳನ್ನು ಗುರುತಿಸುತ್ತದೆ. 2023 ಡಿಸೆಂಬರ್ ನಲ್ಲಿ ಓಮನ್‌ನ ಗೌರವಾನ್ವಿತ ಸುಲ್ತಾನ್ ತಾರಿಕ್ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಈ ಭೇಟಿಯು ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ಭದ್ರತೆ, ತಂತ್ರಜ್ಞಾನ, ಕೃಷಿ ಮತ್ತು ಸಂಸ್ಕೃತಿ ಕ್ಷೇತ್ರಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಪಾಲುದಾರಿಕೆಯನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಉಭಯ ನಾಯಕರಿಗೆ ಅವಕಾಶ ಕಲ್ಪಿಸುತ್ತದೆ.


