"ಜೈ ಹಿಂದ್ ಮಂತ್ರವು ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ"
"ಯುವಜನತೆಯೊಂದಿಗೆ ಸಂವಹನ ನಡೆಸುವುದೆಂದರೆ ನನಗೆ ಯಾವಾಗಲೂ ವಿಶೇಷವಾಗಿರುತ್ತದೆ"
"ಎನ್ ಸಿಸಿ ಮತ್ತು ಎನ್ ಎಸ್ ಎಸ್ ಗಳು ಯುವ ಪೀಳಿಗೆಯನ್ನು ರಾಷ್ಟ್ರೀಯ ಗುರಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿ, ಕಾಳಜಿಗಳ ಜೊತೆ ಬೆಸೆಯುತ್ತದೆ''
'ವಿಕ್ಷಿತ್ ಭಾರತ್' ನ ದೊಡ್ಡ ಫಲಾನುಭವಿಗಳು ನೀವಾಗಲಿದ್ದು, ಅದನ್ನು ನಿರ್ಮಿಸುವ ದೊಡ್ಡ ಜವಾಬ್ದಾರಿಯನ್ನು ನೀವು ಹೊಂದಿದ್ದೀರಿ
"ಭಾರತದ ಸಾಧನೆಗಳಲ್ಲಿ ಜಗತ್ತು ತನಗಾಗಿ ಹೊಸ ಭವಿಷ್ಯವನ್ನು ನೋಡುತ್ತದೆ"
“ನಿಮ್ಮ ಗುರಿಗಳನ್ನು ದೇಶದ ಗುರಿಗಳೊಂದಿಗೆ ಬೆಸೆದಾಗ ನಿಮ್ಮ ಯಶಸ್ಸಿನ ವ್ಯಾಪ್ತಿ ವಿಸ್ತಾರವಾಗುತ್ತದೆ. ನಿಮ್ಮ ಯಶಸ್ಸನ್ನು ಭಾರತದ ಯಶಸ್ಸು ಎಂದು ಜಗತ್ತು ನೋಡುತ್ತದೆ''.
"ಭಾರತದ ಯುವಕರು ಕಾಣದಿರುವ ಸಾಧ್ಯತೆಗಳನ್ನು ಹುಡುಕಬೇಕು, ಊಹಿಸಲಾಗದ ಪರಿಹಾರಗಳನ್ನು ಅನ್ವೇಷಿಸಬೇಕು"
“ನೀವು ಯುವಕರು, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಿಮಗಿದು ಸರಿಯಾದ ಸಮಯ. ಹೊಸ ಆಲೋಚನೆಗಳು ಮತ್ತು ಹೊಸ ಮಾನದಂಡಗಳ ಸೃಷ್ಟಿಕರ್ತರು ನೀವು. ನವ ಭಾರತದ ಹಾದಿಯನ್ನು ಶೋಧಿಸುವವರು ನೀವು''

ಕೇಂದ್ರ ಸಚಿವ ಸಂಪುಟದ ನನ್ನ ಹಿರಿಯ ಸಹೋದ್ಯೋಗಿಗಳೇ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್‌ ಅವರೇ, ಎನ್‌ಸಿಸಿ ಮಹಾನಿರ್ದೇಶಕರೇ, ಶಿಕ್ಷಕರೇ, ಅತಿಥಿಗಳೇ, ನನ್ನ ಮಂತ್ರಿ ಮಂಡಲದ ಇತರೆ ಎಲ್ಲ ಸಹೋದ್ಯೋಗಿಗಳೇ, ಇತರೆ ಗಣ್ಯರೇ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಕಲಾವಿದರೇ ಹಾಗೂ ನನ್ನ ಯುವ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ಒಡನಾಡಿಗಳೇ!

ಸಾಕಷ್ಟು ಮಕ್ಕಳು ನೇತಾಜಿಯವರಂತೆ ವೇಷಭೂಷಣ ಧರಿಸಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳ ನಿವಾಸಕ್ಕೆ ಬಂದಿರುವುದನ್ನು ನಾನು ಗಮನಿಸಿದ್ದು, ನಿಮಗೆಲ್ಲಾ ಮೊದಲಿಗೆ ವಂದಿಸುತ್ತೇನೆ. "ಜೈ ಹಿಂದ್‌ʼ ಎಂಬ ಮಂತ್ರವು ನಮ್ಮೆಲ್ಲರಿಗೂ ಸದಾಕಾಲ ಸ್ಫೂರ್ತಿ ನೀಡುತ್ತದೆ.

ಸ್ನೇಹಿತರೆ,

ಕಳೆದ ಕೆಲ ವಾರಗಳಲ್ಲಿ ಯುವ ಸಹೋದ್ಯೋಗಿಗಳನ್ನು ಆಗಾಗ್ಗೆ ಭೇಟಿಯಾಗುವ ಅವಕಾಶ ನನಗೆ ಒದಗಿ ಬಂದಿದೆ. ಒಂದು ತಿಂಗಳ ಹಿಂದಷ್ಟೇ ನಾವು ʼವೀರ್ ಬಾಲ್ ದಿವಸ್' ಆಚರಿಸಿದ್ದು, ವೀರ್ ಸಾಹಿಬ್‌ಜಾದಾ (ಸಿಖ್ಖರ ಗುರು ಗೋಬಿಂದ್ ಸಿಂಗ್ ಅವರ ಪುತ್ರರು)ಗಳ ಶೌರ್ಯ ಹಾಗೂ ತ್ಯಾಗವನ್ನು ಸ್ಮರಿಸಿ ನಮನ ಸಲ್ಲಿಸುವ ಅವಕಾಶ ನಮಗೆ ದೊರಕಿತ್ತು. ಬಳಿಕ ನಾನು ಕರ್ನಾಟಕದಲ್ಲಿ ನಡೆದ ‘ರಾಷ್ಟ್ರೀಯ ಯುವಜನೋತ್ಸವ’ದಲ್ಲಿ ಪಾಲ್ಗೊಂಡಿದ್ದೆ. ಎರಡು ದಿನಗಳ ತರುವಾಯ, ದೇಶದ ಯುವ ಅಗ್ನಿವೀರರನ್ನು ಭೇಟಿಯಾಗಿದ್ದೆ. ನಂತರ ಉತ್ತರ ಪ್ರದೇಶದಲ್ಲಿ ನಡೆದ ಖೇಲ್ ಮಹಾಕುಂಭದ ಸಂದರ್ಭದಲ್ಲಿ ಯುವ ಆಟಗಾರರನ್ನು ಕಂಡಿದ್ದೆ. ಈ ದಿನ ʼನಿಮ್ಮ ನಾಯಕನನ್ನು ತಿಳಿದುಕೊಳ್ಳಿʼ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶದ ಎಲ್ಲ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಸಂಸತ್‌ ಭವನ ಹಾಗೂ ಬಳಿಕ ಪ್ರಧಾನ ಮಂತ್ರಿಗಳ ನಿವಾಸದಲ್ಲಿ ಭೇಟಿಯಾಗುವ ಅವಕಾಶ ನನಗೆ ದೊರಕಿದೆ. ನಿನ್ನೆಯಷ್ಟೇ ರಾಷ್ಟ್ರೀಯ ಮಕ್ಕಳ ಪ್ರಶಸ್ತಿಗೆ ಭಾಜನರಾದ ದೇಶದ ಭರವಸೆಯ ಮಕ್ಕಳನ್ನು ಭೇಟಿಯಾಗಿದ್ದೆ. ಇದೀಗ ವಿಶೇಷ ಕಾರ್ಯಕ್ರಮದಲ್ಲಿ ನಿಮ್ಮನ್ನೆಲ್ಲಾ ಭೇಟಿಯಾಗುತ್ತಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ನಾನು "ಪರೀಕ್ಷಾ ಪೆ ಚರ್ಚಾʼ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಲಕ್ಷಾಂತರ ಯುವಜನತೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದೇನೆ. ಪ್ರತಿವರ್ಷದಂತೆ ಈ ಬಾರಿಯೂ ಎನ್‌ಸಿಸಿ ಕಾರ್ಯಕ್ರಮದ ಭಾಗವಾಗಲು ನನಗೆ ಅವಕಾಶ ದೊರಕಿದೆ.

ಸ್ನೇಹಿತರೆ,

ಯುವಜನರೊಂದಿಗಿನ ನನ್ನ ಸಂವಾದವು ಎರಡು ಕಾರಣಕ್ಕಾಗಿ ವಿಶೇಷ ಮಹತ್ವ ಪಡೆದಿದೆ. ಮೊದಲನೆಯದಾಗಿ, ಯುವಜನತೆಯಲ್ಲಿ ಅಗಾಧ ಸಾಮರ್ಥ್ಯ, ಉತ್ಸಾಹ, ಕ್ರಿಯಾಶೀಲತೆ, ಹೊಸತನವಿರುತ್ತದೆ. ಈ ಎಲ್ಲ ಧನಾತ್ಮಕ ಅಂಶಗಳು ನಾನು ಹಗಲು- ರಾತ್ರಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುವ ಜತೆಗೆ ಪ್ರೋತ್ಸಾಹಿಸುತ್ತವೆ. ಎರಡನೆಯದಾಗಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲಘಟ್ಟದಲ್ಲಿ ನೀವೆಲ್ಲಾ ದೇಶದ ಆಕಾಂಕ್ಷೆಗಳು ಹಾಗೂ ಕನಸುಗಳನ್ನು ಪ್ರತಿನಿಧಿಸುತ್ತಿದ್ದೀರಿ. ನೀವೆಲ್ಲಾ ಮುಂದೆ ಅಭಿವೃದ್ಧಿ ಹೊಂದಿದ ಭಾರತದ ಬಹುದೊಡ್ಡ ಫಲಾನುಭವಿಗಳಾಗುವ ಜತೆಗೆ ಅದಕ್ಕೆ ಸುದೃಢ ಅಡಿಪಾಯ ಹಾಕುವ ಮಹತ್ತರ ಜವಾಬ್ದಾರಿಯು ನಿಮ್ಮ ಹೆಗಲ ಮೇಲಿದೆ. ನಾನಾ ಕಾರ್ಯಕ್ರಮಗಳಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿರುವುದು ಉತ್ತೇಜನಕಾರಿಯಾಗಿದೆ. ಮಹತ್ತರ ಸಂದೇಶ ಸಾರುವಂತಹ ʼಪರಾಕ್ರಮ ದಿವಸʼದ ಸ್ಪರ್ಧೆಗಳಲ್ಲಿ ನಿಮ್ಮಂತಹ ಮಕ್ಕಳು ಭಾಗವಹಿಸಿರುವುದು ಇದಕ್ಕೊಂದು ಉದಾಹರಣೆಯಂತಿದೆ. ದೇಶದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಬಂಧ ಈ ರೀತಿಯ ಸಾಕಷ್ಟು ಕಾಯಕ್ರಮಗಳು, ಸ್ಪರ್ಧೆಗಳು ನಿಯಮಿತವಾಗಿ ಆಯೋಜನೆಯಾಗುತ್ತಿದ್ದು, ಅದರಲ್ಲಿ ಕೋಟ್ಯಂತರ ಯುವಜನತೆ ಪಾಲ್ಗೊಳ್ಳುತ್ತಿದ್ದಾರೆ. ಇದು ಎಳೆಯ ವಯಸ್ಸಿನಲ್ಲಿ ದೇಶಕ್ಕಾಗಿ ಕನಸು ಕಾಣುವ, ಸಮರ್ಪಣಾ ಮನೋಭಾವ ತೋರುವುದನ್ನು ಪ್ರತಿಬಿಂಬಿಸುತ್ತದೆ. ಇದು ಭಾರತದ ಯುವ ಜನಾಂಗವು ದೇಶದ ಜವಾಬ್ದಾರಿಯನ್ನು ಹೊರಲು ಸಿದ್ಧವಾಗಿರುವುದು ಹಾಗೂ ಅದನ್ನು ನಿಭಾಯಿಸಲು ಬದ್ಧವಾಗಿರುವುದಕ್ಕೆ ಸಾಕ್ಷ್ಯವೆನಿಸಿದೆ. ಹಾಗೇಯೇ ಕವನ, ಚಿತ್ರಕಲೆ, ವೇಷಭೂಷಣ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳನ್ನು ನಾನು ಅಭಿನಂದಿಸುತ್ತೇನೆ. ಇದೇ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ಕೆಡೆಟ್‌ಗಳು ಹಾಗೂ ನಾನಾ ಕಲಾವಿದರಿಗೂ ಶುಭ ಕೋರುತ್ತೇನೆ.

ಸ್ನೇಹಿತರೆ,

ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಸಂಸ್ಥೆಗಳು ಯುವ ಪೀಳಿಗೆಯನ್ನು ರಾಷ್ಟ್ರೀಯ ಗುರಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಜೋಡಿಸುವ ಸಂಸ್ಥೆಗಳಾಗಿವೆ. ಕರೋನಾ ಹಾವಳಿ ಸಂದರ್ಭದಲ್ಲಿ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ನ ಸ್ವಯಂಸೇವಕರು ದೇಶದ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿದರು ಎಂಬುದನ್ನು ಇಡೀ ದೇಶ ಕಂಡಿದೆ. ಹಾಗಾಗಿ, ಸರ್ಕಾರವು ಇಂತಹ ಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಜತೆಗೆ ಅದರ ವ್ಯಾಪ್ತಿ ವಿಸ್ತರಣೆಗೆ ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಉದಾಹರಣೆಗೆ, ನಮ್ಮ ಗಡಿ ಹಾಗೂ ಕರಾವಳಿ ತೀರದ ಜಿಲ್ಲೆಗಳು ನಾನಾ ಸವಾಲುಗಳನ್ನು ಎದುರಿಸುತ್ತಲೇ ಇವೆ. ಅವುಗಳನ್ನು ಸಮರ್ಥವಾಗಿ ಎದುರಿಸಲು ಸರ್ಕಾರವು ನಿಮ್ಮಂತಹ ಯುವಜನತೆಯನ್ನು ಸಜ್ಜುಗೊಳಿಸುತ್ತಿದೆ. ಎನ್‌ಸಿಸಿಯು ವಿಶೇಷ ಕಾರ್ಯಕ್ರಮವನ್ನು ಇಂತಹ ಹತ್ತಾರು ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆ ಮೂಲಕ ವಿಶೇಷ ತರಬೇತಿಯನ್ನೂ ಕಲ್ಪಿಸಲಾಗುತ್ತಿದೆ. ಇದರ ಪರಿಣಾಮವಾಗಿ, ಯುವ ಸಹೋದ್ಯೋಗಿಗಳು ಭವಿಷ್ಯಕ್ಕಾಗಿ ಸಿದ್ಧರಾಗುವ ಜತೆಗೆ ಅಗತ್ಯಬಿದ್ದಾಗ ಪ್ರಥಮ ಸ್ಪಂದನೆಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಇದೀಗ ನಾವು ʼವೈಬ್ರಂಟ್‌ ಬಾರ್ಡರ್‌ ಏರಿಯಾʼ (ಪ್ರಖರ ಗಡಿ ಪ್ರದೇಶ) ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದಡಿ ಗಡಿ ಭಾಗದ ಗ್ರಾಮಗಳಿಗೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಗಡಿ ಭಾಗದ ಯುವಕರ ಸಾಮರ್ಥ್ಯ ವೃದ್ಧಿಸುವುದು ಹಾಗೂ ಅಲ್ಲಿನ ಕುಟುಂಬಗಳು ಆಯಾ ಗ್ರಾಮಗಳಲ್ಲೇ ನೆಲೆಯೂರುವಂತೆ ಮಾಡಿ ಶಿಕ್ಷಣ ಹಾಗೂ ಉದ್ಯೋಗಕ್ಕೆ ಸುಧಾರಿತ ಅವಕಾಶಗಳನ್ನು ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶ.

ಸ್ನೇಹಿತರೆ,

ಸರ್ಕಾರದ ಈ ರೀತಿಯ ಪ್ರಯತ್ನಗಳ ಫಲವಾಗಿ ನೀವು ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಉಪಯುಕ್ತವಾದ ಒಂದು ವಿಷಯವನ್ನು ತಿಳಿದುಕೊಳ್ಳುವಿರಿ. ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ, ಉತ್ತಮ ಕಾರ್ಯ ಮಾಡಿದರೆ ಅದರ ಹಿಂದೆ ನಿಮ್ಮ ಪೋಷಕರು, ಕುಟುಂಬದವರ ಪಾತ್ರವೂ ಇರುತ್ತದೆ. ಹಾಗೆಯೇ ನಿಮ್ಮ ಶಿಕ್ಷಕರು, ಶಾಲೆ ಹಾಗೂ ನಿಮ್ಮ ಸ್ನೇಹಿತರು ಪಾತ್ರವೂ ದೊಡ್ಡದಿರಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನೀವು ಎಲ್ಲರ ಸಹಕಾರ ಪಡೆಯುತ್ತಿರುವುದು ಯಶಸ್ಸಿಗೆ ಕಾರಣವಾಗಿರುತ್ತದೆ. ಪ್ರತಿಯೊಬ್ಬರೂ ನಿಮ್ಮಲ್ಲಿರುವ ಸಾಮರ್ಥ್ಯ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ಅಚಲ ವಿಶ್ವಾಸವಿಟ್ಟುಕೊಳ್ಳಬೇಕು. ಪ್ರತಿಯೊಬ್ಬರೂ ನಿಮ್ಮ ಪ್ರಯತ್ನದೊಂದಿಗೆ ಕೈಜೋಡಿಸಿರುತ್ತಾರೆ. ಇದೀಗ, ನೀವು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲಿದ್ದು, ಇದು ನಿಮ್ಮ ಕುಟುಂಬ, ಶಾಲೆ, ಕಾಲೇಜು ಹಾಗೂ ಸ್ಥಳೀಯರ ಗೌರವವನ್ನು ಹೆಚ್ಚಿಸಲಿದೆ. ಅಂದರೆ ಕೇವಲ ನಮ್ಮೊಬ್ಬರ ಪ್ರಯತ್ನದ ಫಲವಾಗಿ ಯಶಸ್ಸು ಸಿಗುವುದಿಲ್ಲ. ಹಾಗೆಯೇ ನಮ್ಮ ಯಶಸ್ಸಿನ ಶ್ರೇಯ ನಮ್ಮೊಬ್ಬರಿಗೇ ಸಲ್ಲುವುದಿಲ್ಲ. ನೀವು ನಿಮ್ಮ ಜೀವನದಲ್ಲಿ ಸಮಾಜ ಹಾಗೂ ದೇಶ ಕುರಿತಂತೆ ಇದೇ ಮನೋಭಾವವನ್ನು ಕಾಪಾಡಿಕೊಳ್ಳಬೇಕು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರಿಯಬೇಕು. ಆ ಕ್ಷೇತ್ರದಲ್ಲಿ ಗುರಿ ಸಾಧಿಸಲು ನಿಮ್ಮೊಂದಿಗೆ ಸಾಕಷ್ಟು ಜನರನ್ನೂ ಕೊಂಡೊಯ್ಯಬೇಕು. ನೀವು ತಂಡ ಸ್ಫೂರ್ತಿಯಲ್ಲಿ ಕಾರ್ಯ ನಿರ್ವಹಿಸಬೇಕು. ನೀವು ನಿಮ್ಮ ಗುರಿಯನ್ನು ದೇಶದ ಗುರಿಗಳೊಂದಿಗೆ ಜೋಡಿಸಿಕೊಂಡಾಗ ನಿಮ್ಮ ಯಶಸ್ಸಿನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ. ಆಗ ಜಗತ್ತು ನಿಮ್ಮ ಯಶಸ್ಸನ್ನು ಭಾರತದ ಯಶಸ್ಸಿನಂತೆ ಕಾಣುತ್ತದೆ. ವಿಜ್ಞಾನಿಗಳಾದ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ, ಹೋಮಿ ಜಹಾಂಗೀರ್‌ ಬಾಬಾ ಹಾಗೂ ಡಾ.ಸಿ.ವಿ. ರಾಮನ್‌ ಅಥವಾ ಮೇಜರ್‌ ಧ್ಯಾನ್‌ಚಂದ್‌ ಹಾಗೂ ಸದ್ಯದ ಕ್ರೀಡಾಪಟುಗಳಂತಾಗಬೇಕು. ಏಕೆಂದರೆ ಜಗತ್ತು ಅವರ ಸಾಧನೆಯ ಮೈಲಿಗಲ್ಲನ್ನು ಭಾರತದ ಸಾಧನೆಯಾಗಿ ಪರಿಗಣಿಸುತ್ತದೆ. ಅಲ್ಲದೆ, ಜಗತ್ತು ಭಾರತ ಯಶಸ್ಸಿನಲ್ಲಿ ತನ್ನ ಹೊಸ ಭವಿಷ್ಯವನ್ನು ಕಾಣುತ್ತಿದೆ. ಅಂದರೆ ಐತಿಹಾಸಿಕ ಯಶಸ್ಸುಗಳು ಇಡೀ ಮನುಕುಲದ ಅಭಿವೃದ್ಧಿಗೆ ಅಡಿಗಲ್ಲಾಗಲಿವೆ. ಇದು ʼಸಬ್‌ ಕಾ ಪ್ರಯಾಸʼ (ಸರ್ವರ ಪ್ರಯತ್ನ) ಸ್ಫೂರ್ತಿಯ ನಿಜವಾದ ಸಾಮರ್ಥ್ಯ.

ಸ್ನೇಹಿತರೆ,

ನೀವು ಇಂದು ಇಲ್ಲಿರುವ ಸಂದರ್ಭಕ್ಕೆ ಮತ್ತೊಂದು ವಿಶೇಷತೆಯೂ ಇದೆ. ಇಂದು, ದೇಶದಲ್ಲಿ ಯುವಜನತೆಗೆ ಅಭೂತಪೂರ್ವ ಅವಕಾಶಗಳಿವೆ. ದೇಶ ಇಂದು ಸ್ಟಾರ್ಟ್‌ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದಂತಹ ಅಭಿಯಾನಗಳನ್ನು ನಡೆಸುತ್ತಿದೆ. ಭಾರತ ಇಂದು ಬಾಹ್ಯಾಕಾಶ ಕ್ಷೇತ್ರದಿಂದ ಹಿಡಿದು ಪರಿಸರ, ಹವಾಮಾನ ಸೇರಿದಂತೆ ನಾನಾ ಸವಾಲುಗಳ ಸಂಬಂಧ ಇಡೀ ಜಗತ್ತಿನ ಭವಿಷ್ಯಕ್ಕಾಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಮಿಷಿನ್‌ ಲರ್ನಿಂಗ್‌, ವರ್ಚ್ಯುವಲ್‌ ರಿಯಾಲಿಟಿ ಸೇರಿದಂತೆ ಭವಿಷ್ಯದ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿದೆ. ಹಾಗೆಯೇ ದೇಶವು ಕ್ರೀಡೆ ಹಾಗೂ ಸೃಜನಶೀಲತೆಗೆ ಪೂರಕ ವಾತಾವರಣವನ್ನೂ ಸೃಷ್ಟಿಸಿದ್ದು, ನೀವೆಲ್ಲಾ ಅದರ ಭಾಗವಾಗಬೇಕು. ನೀವೆಲ್ಲಾ ಈವರೆಗೆ ಕಾಣದ ಸಾಧ್ಯತೆಗಳು, ಪ್ರವೇಶಿಸದ ವಲಯಗಳನ್ನು ಪತ್ತೆ ಹಚ್ಚಿ ಊಹಿಸಲಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳಬೇಕು.

ಸ್ನೇಹಿತರೆ,

ಭವಿಷ್ಯಕ್ಕಾಗಿ ದೊಡ್ಡ ಗುರಿಗಳು ಹಾಗೂ ಪೂರಕ ನಿರ್ಧಾರಗಳು ನಮಗೆ ಬಹಳ ಮುಖ್ಯವೆನಿಸಿದೆ. ಇದೇ ವೇಳೆ, ಸಣ್ಣ ಸಣ್ಣ ಆದ್ಯತೆಗಳಿಗೂ ಸಮಾನ ಮಹತ್ವ ನೀಡಬೇಕು. ಹಾಗಾಗಿ, ಪ್ರತಿಯೊಬ್ಬರು ದೇಶದಲ್ಲಿ ಆಗುತ್ತಿರುವಂತಹ ಬದಲಾವಣೆಗಳ ಬಗ್ಗೆ ಸದಾ ಜಾಗೃತರಾಗಿರಬೇಕೆಂದು ಹೇಳುತ್ತೇನೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ಹೊಸ ಅಭಿಯಾನಗಳಲ್ಲಿ ನೀವೆಲ್ಲಾ ಪಾಲ್ಗೊಳ್ಳಬೇಕು. ‘ಸ್ವಚ್ಛ ಭಾರತ ಅಭಿಯಾನ’ದ ಯಶಸ್ಸಿನ ಉದಾಹರಣೆ ನಮ್ಮ ಮುಂದಿದೆ. ಯುವಜನತೆ ಇದನ್ನೇ ನಿಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಳ್ಳಬೇಕು. ನಿಮ್ಮಲ್ಲಿ ಕ್ರಿಯಾಶೀಲತೆ ಜತೆಗೆ ಉತ್ಸಾಹವಿದೆ. ಹಾಗಾಗಿ ನೀವು ಸ್ನೇಹಿತರ ತಂಡ ರಚಿಸಿಕೊಂಡು ನಿಮ್ಮ ಪ್ರದೇಶ, ಗ್ರಾಮ, ನಗರ ಹಾಗೂ ಪಟ್ಟಣವನ್ನು ಸ್ವಚ್ಛವಾಗಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುವ ಸಂಕಲ್ಪ ಮಾಡಬೇಕು. ನೀವು ಸ್ವಚ್ಛತಾ ಮಿಷನ್‌ಗೆ ಹೊರಗೆಹೋದಾಗ, ಅದು ಹಿರಿಯ ನಾಗರಿಕರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಹಾಗೆಯೇ, ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಪಟ್ಟಂತೆ ಕನಿಷ್ಠ ಒಂದು ಪುಸ್ತಕವನ್ನಾದರೂ ಓದುವ ನಿರ್ಧಾರ ಮಾಡಬೇಕು. ನಿಮ್ಮಲ್ಲಿ ಅನೇಕರು ಕವನ, ಕತೆಗಳನ್ನು ಬರೆಯುವರಿದ್ದಾರೆ. ಹಾಗೆಯೇ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜೀವನದ ಬಗ್ಗೆ ಕ್ರಿಯಾಶೀಲವಾಗಿ ಕೆಲಸ ಮಾಡಲು ಮುಂದಾಗಬೇಕು. ಈ ವಿಷಯಗಳ ಕುರಿತಾಗಿ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸುವಂತೆಯೂ ನಿಮ್ಮ ಶಾಲೆಗಳಲ್ಲಿ ಕೇಳಬಹುದು. ನಿಮ್ಮ ಪ್ರತಿಯೊಂದು ಜಿಲ್ಲೆಗಳಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ. ನಿಮ್ಮ ಸ್ನೇಹಿತರೊಂದಿಗೆ ಸೇರಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ನೆರೆಹೊರೆಯಲ್ಲಿ ಅಮೃತ ಸರೋವರ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಬಹುದು. ಉದಾಹರಣೆಗೆ ಹೇಳುವುದಾದರೆ, ಅಮೃತ ಸರೋವರದ ಸುತ್ತ ಸಸಿಗಳನ್ನು ನೆಡಬಹುದು. ಆ ಕೆರೆಗಳ ನಿರ್ವಹಣೆ ಬಗ್ಗ ಜನರಲ್ಲಿ ಜಾಗೃತಿ ಮೂಡಿಸಲು ರ‌್ಯಾಲಿ ನಡೆಸಬಹುದು. ದೇಶದಲ್ಲಿ ಫಿಟ್‌ ಇಂಡಿಯಾ ಅಭಿಯಾನ ನಡೆಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಇದು ಯುವಜನತೆಗೆ ಬಹಳ ಆಕರ್ಷಕವಾದ ಅಭಿಯಾನವಾಗಿದೆ. ನೀವಷ್ಟೇ ಈ ಅಭಿಯಾನದಲ್ಲಿ ಪಾಲ್ಗೊಂಡರೆ ಸಾಲದು, ನಿಮ್ಮ ಕುಟುಂಬದ ಸದಸ್ಯರೂ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಪ್ರತಿನಿತ್ಯ ಬೆಳಗ್ಗೆ ನಿಮ್ಮ ಕುಟುಂಬ ಸದಸ್ಯರೊಂದಿಗೆ ಯೋಗಾಭ್ಯಾಸದ ಮೂಲಕ ಇದನ್ನು ಆರಂಭಿಸಬಹುದು. ಈ ವರ್ಷ ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿರುವುದನ್ನು ನೀವು ಕೇಳಿರಬಹುದು. ಇದು ಭಾರತಕ್ಕೆ ಅತ್ಯಂತ ಮಹತ್ವದ ಅವಕಾಶವಾಗಿದ್ದು, ಈ ಕುರಿತಾಗಿ ಓದಿಕೊಳ್ಳುವ ಜತೆಗೆ ನಿಮ್ಮ ಶಾಲೆ, ಕಾಲೇಜುಗಳಲ್ಲಿ ಈ ಕುರಿತಂತೆ ಚರ್ಚಿಸಬೇಕು.

ಸ್ನೇಹಿತರೆ,

ಸದ್ಯ ದೇಶವು 'ನಮ್ಮ ಪರಂಪರೆಯ ಹೆಮ್ಮೆ' ಮತ್ತು 'ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತಿ' ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಈ ನಿರ್ಣಯಗಳ ಪಾಲನೆಯು ದೇಶದ ಯುವಜನತೆಯ ಜವಾಬ್ದಾರಿಯೂ ಆಗಿದೆ. ಭವಿಷ್ಯಕ್ಕಾಗಿ ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವ ಜತೆಗೆ ಸಂರಕ್ಷಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ದೇಶದ ಪರಂಪರೆಯನ್ನು ಅರಿತು ಅದನ್ನು ಅರ್ಥ ಮಾಡಿಕೊಂಡಾಗ ಮಾತ್ರ ನೀವು ಈ ಕಾರ್ಯ ಮಾಡಲು ಸಾಧ್ಯವಾಗಲಿದೆ. ನೀವು ಎಲ್ಲಾದರೂ ಪ್ರವಾಸಕ್ಕೆ ಹೋದಾಗ ಪಾರಂಪರಿಕ ತಾಣಗಳಿಗೂ ಭೇಟಿ ನೀಡಬೇಕೆಂದು ಸಲಹೆ ನೀಡುತ್ತೇನೆ. ನೀವೆಲ್ಲಾ ಸಣ್ಣ ವಯಸ್ಸಿನವರಾಗಿದ್ದು, ಭವಿಷ್ಯದ ಬಗ್ಗೆ ದೃಷ್ಟಿಕೋನವನ್ನು ರೂಪಿಸಿಕೊಳ್ಳುವ ಕಾಲಘಟ್ಟದಲ್ಲಿದ್ದೀರಿ. ನೀವು ಹೊಸ ಹೊಸ ಚಿಂತನೆ, ಆಲೋಚನೆ ಹಾಗೂ ಮಾನದಂಡಗಳನ್ನು ಸೃಷ್ಟಿಸುವವರಾಗಿದ್ದೀರಿ. ನವ ಭಾರತ ನಿರ್ಮಾಣಕ್ಕೆ ದಾರಿ ಮಾಡಿಕೊಡುವಂತಹವರೂ ನೀವೇ ಆಗಿದ್ದೀರಿ. ನೀವು ದೇಶದ ನಿರೀಕ್ಷೆ ಹಾಗೂ ಆಕಾಂಕ್ಷೆಗಳಿಗೆ ತಕ್ಕಂತೆ ಮುಂದುವರಿಯುತ್ತೀರಿ ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ ನಿಮಗೆಲ್ಲಾ ಶುಭಾಶಯಗಳು!

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Why India is becoming a hotspot for steel capacity addition

Media Coverage

Why India is becoming a hotspot for steel capacity addition
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 6 ನವೆಂಬರ್ 2024
November 06, 2024

Crafting Change: The Impact of PM Modi's Leadership on India's Future