ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಗುಂಟೂರು, ತಮಿಳುನಾಡಿನ ತಿರುಪ್ಪೂರು ಮತ್ತು ಕರ್ನಾಟಕದ ಹುಬ್ಬಳ್ಳಿಗೆ ನಾಳೆ ಭೇಟಿ ನೀಡಲಿದ್ದಾರೆ. ಈ ಮೂರೂ ರಾಜ್ಯದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅವರು ಅನಾವರಣ ಮಾಡಲಿದ್ದಾರೆ.
ಆಂಧ್ರಪ್ರದೇಶದಲ್ಲಿ ಪಿ.ಎಂ.
ಪ್ರಧಾನಮಂತ್ರಿಯವರ ಮೊದಲಿಗೆ ಆಂಧ್ರಪ್ರದೇಶದ ಗುಂಟೂರಿಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಗುಂಟೂರಿನ ಯೆಟುಕೂರು ಬೈಪಾಸ್ ನಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ದೇಶದ ಇಂಧನ ಭದ್ರತೆಗೆ ಚೈತನ್ಯ ನೀಡಲು ಪ್ರಧಾನಮಂತ್ರಿಯವರು, ಭಾರತೀಯ ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಮೀಸಲು ನಿಯಮಿತ (ಐ.ಎಸ್.ಪಿ.ಆರ್.ಎಲ್.)ನ 1.33 ಎಂ.ಎಂ.ಟಿ. ವಿಶಾಖಪಟ್ಟಣಂ ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಸಂಗ್ರಹ (ಎಸ್.ಪಿ.ಆರ್.)ವನ್ನು ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
ಆಂಧ್ರಪ್ರದೇಶದ ಕೃಷ್ಣ – ಗೋದಾವರಿ (ಕೆಜಿ) ಕೊಳ್ಳದಾಚೆ ಓಎನ್.ಜಿ.ಸಿ.ಯ ವಶಿಷ್ಠ ಮತ್ತು ಎಸ್. 1 ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.
ಕೃಷ್ಣಪಟ್ಟಣಂನಲ್ಲಿ ಅವರು ಭಾರತ್ ಪೆಟ್ರೋಲಿಯಂ ಲಿಮಿಟೆಡ್ (ಬಿಪಿಸಿಎಲ್)ನ ಹೊಸ ಟರ್ಮಿನಲ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ಯೋಜನೆಯು ಆಂಧ್ರಪ್ರದೇಶ ಮತ್ತು ಸುತ್ತಮುತ್ತಲ ರಾಜ್ಯಗಳ ಅನಿಲ ಆಧಾರಿತ ಕೈಗಾರಿಕಾ ಘಟಕಗಳಿಗೆ ಭಾರೀ ಉತ್ತೇಜನ ನೀಡಲಿದೆ.
ಅಲ್ಲಿಂದ ಪ್ರಧಾನಮಂತ್ರಿಯವರು ತಮಿಳುನಾಡಿನ ತಿರುಪ್ಪೂರ್ ಗೆ ಪ್ರಯಾಣ ಬೆಳೆಸುವರು.
ತಮಿಳುನಾಡಿನಲ್ಲಿ ಪಿ.ಎಂ.
ಪ್ರಧಾನಮಂತ್ರಿಯವರು ತಮಿಳುನಾಡಿನ, ತಿರುಪ್ಪೂರಿನ ಪೆರಮನಲ್ಲೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಅನಾವರಣ ಮಾಡಲಿದ್ದಾರೆ.
ತಿರುಪ್ಪೂರು ಇಎಸ್.ಐ.ಸಿ. ಆಸ್ಪತ್ರೆಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಸಜ್ಜಿತವಾದ ಈ ಆಸ್ಪತ್ರೆಯು 100 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ತಿರುಪ್ಪೂರು ಮತ್ತು ಸುತ್ತಲ ಪ್ರದೇಶದಲ್ಲಿ ಇ.ಎಸ್.ಐ. ಕಾಯ್ದೆ ವ್ಯಾಪ್ತಿಗೆ ಬರುವ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಆರೋಗ್ಯ ಸೇವೆ ಒದಗಿಸುತ್ತದೆ.
ಟ್ರಿಚಿ ವಿಮಾನ ನಿಲ್ದಾಣದ ನೂತನ ಸಮಗ್ರ ಕಟ್ಟಡ ಮತ್ತು ಚೆನ್ನೈ ವಿಮಾನ ನಿಲ್ದಾಣದ ಆಧುನೀಕರಣಕ್ಕೂ ಪ್ರಧಾನಮಂತ್ರಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಚೆನ್ನೈ ಇ.ಎಸ್.ಐ.ಸಿ. ಆಸ್ಪತ್ರೆಯನ್ನು ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ. 470 ಹಾಸಿಗೆಗಳ ಈ ಅತ್ಯಾಧುನಿಕ ವ್ಯವಸ್ಥೆಯ ಆಸ್ಪತ್ರೆ ಎಲ್ಲ ರೀತಿಯ ವೈದ್ಯ ಪದ್ಧತಿಯಲ್ಲಿ ಗುಣಮಟ್ಟದ ಸೇವೆ ಒದಗಿಸಲಿದೆ.
ಬಿಪಿಸಿಎಲ್ ನ ಎಣ್ಣೂರು ಕರಾವಳಿ ಟರ್ಮಿನಲ್ ಅನ್ನು ಇದೇ ಸಂದರ್ಭದಲ್ಲಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಅವರು ಚೆನ್ನೈ ಬಂದರಿನಿಂದ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಸಿಪಿಸಿಎಲ್) ಮನಾಲಿ ರಿಪೈನರಿವರೆಗೆ ಹೊಸ ಕಚ್ಚಾ ತೈಲ ಕೊಳವೆ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಕೊಳವೆ ಮಾರ್ಗವನ್ನು ಹೆಚ್ಚಿನ ಸುರಕ್ಷತೆಯೊಂದಿಗೆ ನಿರ್ಮಿಸಲಾಗಿದ್ದು, ಇದು ಸುರಕ್ಷಿತ ಮತ್ತು ವಿಶ್ವಾಸಾರ್ಹತೆಯೊಂದಿಗೆ ಕಚ್ಚಾ ತೈಲವನ್ನು ಪೂರೈಸುತ್ತದೆ ಮತ್ತು ತಮಿಳುನಾಡು ಮತ್ತು ಸುತ್ತಮುತ್ತಲ ರಾಜ್ಯಗಳ ಅಗತ್ಯವನ್ನು ಪೂರೈಸುತ್ತದೆ.
ಚೆನ್ನೈ ಮೆಟ್ರೋ ದ ಎಜಿ –ಡಿಎಂ.ಎಸ್. ಮೆಟ್ರೋ ನಿಲ್ದಾಣದಿಂದ ವಾಷರ್ ಮೆನ್ ಪೆಟ್ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಕರ ಸೇವೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. 10 ಕಿ.ಮೀ. ಮಾರ್ಗವು ಚೆನ್ನೈ ಮೆಟ್ರೋ 1ನೇ ಹಂತದ ಭಾಗವಾಗಿದೆ.
ನಂತರ ಪ್ರಧಾನಮಂತ್ರಿಯವರು ಕರ್ನಾಟಕದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕದಲ್ಲಿ ಪಿ.ಎಂ.
ದಿನದ ಪ್ರವಾಸದ ಕೊನೆಯ ಚರಣದಲ್ಲಿ ನಾಳೆ ಪ್ರಧಾನಮಂತ್ರಿಯವರು ಕರ್ನಾಟಕದ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಗಬ್ಬೂರುವಿನಲ್ಲಿ ಅವರು ಹಲವು ಯೋಜನೆಗಳ ಅನಾವರಣ ಮಾಡಲಿದ್ದಾರೆ.
ಪ್ರಧಾನಮಂತ್ರಿಯವರು ಅಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ – ಧಾರವಾಡ ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ – ಧಾರವಾಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಧಾರವಾಡದಲ್ಲಿ ನಗರ ಅನಿಲ ಪೂರೈಕೆ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಸ್ವಚ್ಛ ಇಂಧನ ಜನರಿಗೆ ದೊರಕುವಂತೆ ಮಾಡಲು ಸರ್ಕಾರವು ನಗರ ಅನಿಲ ಪೂರೈಕೆ (ಸಿಜಿಡಿ) ಜಾಲದ ವ್ಯಾಪ್ತಿಯನ್ನು ದೇಶದಲ್ಲಿ ಹೆಚ್ಚಿಸುವುದಕ್ಕೆ ಬಲವಾದ ಒತ್ತು ನೀಡಿದೆ.
ದೇಶಕ್ಕೆ ಇಂಧನ ಸುರಕ್ಷತೆ ಒದಗಿಸುವ ಮತ್ತೊಂದು ಪ್ರಯತ್ನದಲ್ಲಿ ಪ್ರಧಾನಮಂತ್ರಿಯವರು, 1.5 ಎಂಎಂಟಿ ಮಂಗಳೂರು ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಸಂಗ್ರಹ (ಎಸ್.ಪಿ.ಆರ್.) ಸೌಲಭ್ಯ ಮತ್ತು 2.5 ಎಂ.ಎಂ.ಟಿ. ಪಾದೂರು ಎಸ್.ಪಿ.ಆರ್. ಸೌಲಭ್ಯ ಐಎಸ್.ಪಿ.ಆರ್.ಎಲ್. ಅನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
18 ಕಿಮೀ ಉದ್ದದ ಚಿಕ್ಕಜಾಜೂರು – ಮಾಯಕೊಂಡ ವಲಯದ ರೈಲು ಮಾರ್ಗ ವನ್ನು ಜೋಡಿ ಮಾರ್ಗ ಮಾಡುವುದು ಮತ್ತೊಂದು ಮುಖ್ಯ ಕಾರ್ಯಕ್ರಮವಾಗಿದೆ. ಈ ವಿಭಾಗವು 190 ಕಿ.ಮೀ.ಉದ್ದದ ಹುಬ್ಬಳ್ಳಿ – ಚಿಕ್ಕಜಾಜೂರು ಜೋಡಿ ಮಾರ್ಗ ಯೋಜನೆಯ ಭಾಗವಾಗಿದ್ದು ನೈಋತ್ಯ ರೈಲ್ವೆಯ ಬೆಂಗಳೂರು – ಹುಬ್ಬಳ್ಳಿ ಮಾರ್ಗದಲ್ಲಿದೆ. ಇದನ್ನು ಜೋಡಿ ಮಾರ್ಗ ಮಾಡುವುದು ಬೆಂಗಳೂರಿನಿಂದ – ಹುಬ್ಬಳ್ಳಿ, ಬೆಳಗಾವಿ, ಗೋವಾ, ಪೂನಾ ಮತ್ತು ಮುಂಬೈಯನ್ನು ಸಂಪರ್ಕಿಸಲಿರುವ ಈ ಪ್ರಮುಖ ಮಾರ್ಗದ ಸಾಮರ್ಥ್ಯ ಹೆಚ್ಚಿಸುತ್ತದೆ ಮತ್ತು ರೈಲುಗಳ ವೇಗದ ಸಂಚಾರಕ್ಕೆ ಕಾರಣವಾಗುತ್ತದೆ.
ಪ್ರಧಾನಮಂತ್ರಿಯವರು 346 ಕಿ.ಮೀ ಉದ್ದದ ಹೊಸಪೇಟೆ – ಹುಬ್ಬಳ್ಳಿ – ವಾಸ್ಕೋ ಡ ಗಾಮಾ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿಯ ಆರಂಭಕ್ಕೂ ಉದ್ಘಾಟನೆ ನೆರವೇರಿಸಲಿದ್ದಾರೆ. ಇದು ಪ್ರಯಾಣದ ಅವಧಿ ತಗ್ಗಿಸಲಿದೆ ಜೊತೆಗೆ ಡೀಸೆಲ್ ನ ಬಳಕೆಯ ಇಳಿಕೆಯೊಂದಿಗೆ, ಜಿಎಚ್.ಜಿ. (ಹಸಿರು ಮನೆ ಅನಿಲ) ಹೊರಸೂಸುವಿಕೆ ತಗ್ಗಿಸಲಿದೆ.
ಸರ್ವರಿಗೂ ಸೂರು ಬದ್ಧತೆಗನುಗುಣವಾಗಿ ಪ್ರಧಾನಮಂತ್ರಿಯವರು ಧಾರವಾಡದಲ್ಲಿ ಪಿ.ಎಂ.ಎ.ವೈ (ನಗರ) ಅಡಿಯಲ್ಲಿ ನಿರ್ಮಾಣವಾದ 2384 ಮನೆಗಳ ಇ-ಗೃಹಪ್ರವೇಶವನ್ನು ವೀಕ್ಷಿಸಲಿದ್ದಾರೆ.


