ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಜನವರಿ 18ರಂದು ರೋಮಾಂಚಕ ಗುಜರಾತ್ ಶೃಂಗದ 9 ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಈ 9 ನೇ ರೋಮಾಂಚಕ ಗುಜರಾತ್ ಜಾಗತಿಕ ಶೃಂಗದಲ್ಲಿ ರಾಜ್ಯಗಳ ಮುಖ್ಯಸ್ಥರು, ಜಾಗತಿಕ ಕೈಗಾರಿಕೋದ್ಯಮದ ನಾಯಕರು ಮತ್ತು ಚಿಂತಕರು ಭಾಗವಹಿಸಲಿದ್ದಾರೆ.
9 ನೇ ರೋಮಾಂಚಕ ಗುಜರಾತ್ 2019 ಶೃಂಗವು ’ನವ ಭಾರತ’ ಕ್ಕಾಗಿ ಸರ್ವಾಂಗೀಣ ಆರ್ಥಿಕ ಅಭಿವೃದ್ದಿಯ ಆದ್ಯತೆಯೊಂದಿಗೆ ಜಾಗತಿಕ , ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕಾರ್ಯಪಟ್ಟಿಯನ್ನು ಹೊಂದಿದೆ.
ಇದರ ಜೊತೆಗೆ ರೋಮಾಂಚಕ ಗುಜರಾತ್ ಅಂಗವಾಗಿ ಇತರ ಪ್ರಮುಖ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ, 9 ನೇ ಆವೃತ್ತಿಯ ಶೃಂಗದಲ್ಲಿ ವೈವಿಧ್ಯಮಯ ಸ್ವರೂಪದ ಜ್ಞಾನ ವಿನಿಮಯವಾಗುವಂತೆ ಮಾಡಲು ಸಂಪೂರ್ಣವಾಗಿ ಹೊಸ ವೇದಿಕೆಗಳನ್ನು ಆರಂಭಿಸಲಾಗುತ್ತದೆ . ಮತ್ತು ಪಾಲ್ಗೊಂಡ ಪ್ರತಿನಿಧಿಗಳ ನಡುವೆ ಸಂಪರ್ಕ ಜೋಡಣಾ ಜಾಲದ ಮಟ್ಟವನ್ನು ಇನ್ನಷ್ಟು ತೀವ್ರಗೊಳಿಸಲಿದೆ.
ರೋಮಾಂಚಕಾರಿ ಗುಜರಾತಿನ ಇಡೀಯ ಚಿಂತನೆ ಶ್ರೀ ನರೇಂದ್ರ ಮೋದಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೂಪುಗೊಂಡದ್ದಾಗಿದೆ. 2003 ರಲ್ಲಿ ಇದು ಆರಂಭಗೊಂಡಂದಿನಿಂದ, ರೋಮಾಂಚಕಾರಿ ಗುಜರಾತ್ ಈಗ ಭಾರತದ ಎಲ್ಲಾ ರಾಜ್ಯಗಳಿಗೆ ಭಾಗವಹಿಸಲು, ಹೂಡಿಕೆ ಉತ್ತೇಜಿಸಲು ಜಾಗತಿಕ ಜಾಲದ ವೇದಿಕೆಯಾಗಿದೆ. ಶೃಂಗವು ಜಾಗತಿಕ ಸಮಾಜೋ-ಆರ್ಥಿಕ ಅಬಿವೃದ್ದಿ ಕಾರ್ಯಪಟ್ಟಿಯ ಗಹನ ಸಮಾಲೋಚನೆಯ ವೇದಿಕೆಯಾಗಿ ರೂಪುಗೊಂಡಿದೆ. ಮತ್ತು ಅದು ಜ್ಞಾನ ಹಂಚಿಕೆ ಹಾಗು ಸಕ್ರಿಯ, ಸಮರ್ಥ ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ಅನುಕೂಲತೆ ಒದಗಿಸುತ್ತಿದೆ.
8 ನೇ ರೋಮಾಂಚಕ ಗುಜರಾತ್ ಜಾಗತಿಕ ಶೃಂಗ 2017ರ ಜನವರಿಯಲ್ಲಿ ನಡೆದಿತ್ತು. 4 ರಾಜ್ಯಗಳ ಮುಖ್ಯಸ್ಥರು, ನೋಬೆಲ್ ಪ್ರಶಸ್ತಿ ಪುರಸ್ಕೃತರು, ಜಾಗತಿಕ ಕೈಗಾರಿಕೋದ್ಯಮದ ನಾಯಕರು, ಮತ್ತು ಚಿಂತಕರು ಸಹಿತ 100ಕ್ಕೂ ಅಧಿಕ ರಾಷ್ಟ್ರಗಳಿಂದ 25,000 ಕ್ಕೂ ಅಧಿಕ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
ರೋಮಾಂಚಕ ಗುಜರಾತ್ 2019 ರ ಪ್ರಮುಖಾಂಶಗಳು.
ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಶಿಕ್ಷಣ ಮತ್ತು ಸಂಶೋಧನೆ ಅವಕಾಶಗಳಿಗಾಗಿ ದುಂಡು ಮೇಜಿನ ಸಭೆ.
ಈ ದುಂಡು ಮೇಜಿನ ಸಭೆಯಲ್ಲಿ ಭಾರತದ ಪ್ರಮುಖ ಶಿಕ್ಷಣ ತಜ್ಞರು, ಮತ್ತು ಭಾರತದ ಹಾಗು ರಾಜ್ಯ ಸರಕಾರಗಳ ಪ್ರಮುಖ ನೀತಿ ನಿರೂಪಕರು ಭಾಗವಹಿಸುತ್ತಾರೆ. ದುಂಡು ಮೇಜಿನ ಸಮಾಲೋಚನೆಗಳನ್ನು ಒಗ್ಗೂಡಿಸಿ “ ಭಾರತದಲ್ಲಿ ಸ್ಟೆಮ್ ಶಿಕ್ಷಣ ಮತ್ತು ಸಂಶೋಧನೆಯ ಅವಕಾಶಗಳ ಪಥ” ವನ್ನು ರೂಪಿಸಲಾಗುವುದು.
ಭವಿಷ್ಯದ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಅನ್ವೇಷಣೆಯ ವಸ್ತುಪ್ರದರ್ಶನ
ಬಾಹ್ಯಾಕಾಶ ಪ್ರಯಾಣದ ಭವಿಷ್ಯದ ಚಿಂತನೆ , ನೋಟವನ್ನು ಒದಗಿಸುತ್ತದೆ.
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ಕುರಿತು ಅಂತಾರಾಷ್ಟ್ರೀಯ ಸಮ್ಮೇಳನ
ರೋಮಾಂಚಕ ಗುಜರಾತ್ ಜಾಗತಿಕ ವ್ಯಾಪಾರ ಪ್ರದರ್ಶನ
ಈ ಪ್ರಮುಖ ವ್ಯಾಪಾರ ಪ್ರದರ್ಶನ 200,000 ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿದೆ ಮತ್ತು 25 ವಲಯಗಳ ವಸ್ತುಗಳು ಪ್ರದರ್ಶನಾಂಗಳದಲ್ಲಿರುತ್ತವೆ.
ಏಶ್ಯಾದ ಹಡಗು ಸಂಚಾರದ ಕೇಂದ್ರವಾಗಿ ಭಾರತವನ್ನು ರೂಪಿಸುವ ಬಂದರು ಕೇಂದ್ರಿತ ಅಭಿವೃದ್ದಿ ಮತ್ತು ವ್ಯೂಹಗಳನ್ನು ಕುರಿತ ವಿಚಾರ ಸಂಕಿರಣ.
ಈ ವಿಚಾರ ಸಂಕಿರಣವು ಗುಜರಾತ್ ಮತ್ತು ಭಾರತದಲ್ಲಿ ಸಾರಿಗೆ ವಲಯದ ಭವಿಷ್ಯತ್ತಿನ ಅಭಿವೃದ್ದಿಗೆ ಸಂಬಂಧಿಸಿದ ವಿಷಯಗಳ ಚರ್ಚೆಯನ್ನು ಒಳಗೊಂಡಿರುತ್ತದೆ.
ಮೇಕ್ ಇನ್ ಇಂಡಿಯಾ ಕುರಿತು ವಿಚಾರ ಸಂಕಿರಣ
ಈ ವಿಚಾರ ಸಂಕಿರಣವು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಯಶೋಗಾಥೆಗಳ ಕಾರ್ಯಕ್ರಮ ಮತ್ತು ಈ ಕಾರ್ಯಕ್ರಮದ ಯಶಸ್ಸನ್ನು ಖಾತ್ರಿಪಡಿಸಲು ಸರಕಾರ ಕೈಗೊಂಡ ಮದ್ಯಪ್ರವೇಶದ ಪ್ರಮುಖ ಕ್ರಮಗಳ ಬಗ್ಗೆ ಗಮನ ಸೆಳೆಯಲಿದೆ.
ರಕ್ಷಣಾ ಮತ್ತು ವಾಯುಯಾನ ಕೈಗಾರಿಕೆಗೆ ಇರುವ ಅವಕಾಶಗಳು ಕುರಿತ ವಿಚಾರ ಸಂಕಿರಣ
ಈ ವಿಚಾರ ಸಂಕಿರಣವನ್ನು ಗುಜರಾತಿನಲ್ಲಿ ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ಭಾಗವಹಿಸಿದ ಪ್ರತಿನಿಧಿಗಳಲ್ಲಿ ಸೂಕ್ಷ್ಮತ್ವ ಮೂಡಿಸುವುದಕ್ಕಾಗಿ ಮತ್ತು ರಕ್ಷಣಾ ಹಾಗು ವಾಯುಯಾನ ಕ್ಷೇತ್ರದಲ್ಲಿ ಭಾರತ ಮತ್ತು ಗುಜರಾತ್ ಗಳು ಉತ್ಪಾದನಾ ತಾಣವಾಗಿ ರೂಪುಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸುವುದಕ್ಕಾಗಿ ಆಯೋಜಿಸಲಾಗಿದೆ.
ಚಲನೆ ಪ್ರಧಾನವಾದ ನಗರ ಅಭಿವೃದ್ದಿ
ಈ ಕಾರ್ಯಕ್ರಮ ನಗರ ಅಭಿವೃದ್ಧಿಗೆ ಚಲನಶೀಲತೆಯನ್ನು ಪ್ರಮುಖವಾಗಿಟ್ಟುಕೊಂಡು ಜೀವಿಸುವುದಕ್ಕೆ ಅನುಕೂಲಕರವಾದ ನಗರಗಳ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರ ವಿನಿಮಯವನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನ ಬಳಸಿ , ಪಾರ್ಕಿಂಗ್ ಪರಿಹಾರಗಳು, ವಿದ್ಯುತ್ ಚಾಲಿತ ವಾಹನಗಳು ಮತ್ತು ಬೃಹತ್ ದತ್ತಾಂಶಗಳನ್ನು ಒಳಗೊಂಡು ನಗರಾಭಿವೃದ್ಧಿಯ ಬಗ್ಗೆ ಚರ್ಚೆಯಾಗಲಿದೆ.
ನವ ಭಾರತಕ್ಕಾಗಿ ಸಹ್ಯ ತಂತ್ರಜ್ಞಾನ ಚಾಲಿತ ಕೃಷಿ
ಜವಳಿ ಸಮ್ಮೇಳನ-ನವ ಭಾರತ ನಿರ್ಮಾಣಕ್ಕೆ ಜವಳಿ ಕ್ಷೇತ್ರದಲ್ಲಿ ಬೆಳವಣಿಗೆ ಸಾಮರ್ಥ್ಯದ ಅನ್ವೇಷಣೆ
ಗೌರವಾನ್ವಿತ ಪ್ರಧಾನ ಮಂತ್ರಿ ಅವರ ನವ ಭಾರತದ ಚಿಂತನೆಯನ್ನು ಮುಂದುವರೆಸುವ ಜವಳಿ ಸಮಾವೇಶದಲ್ಲಿ ಕೈಗಾರಿಕಾ ವಲಯದ ನಾಯಕರು, ಸರಕಾರದ ಮುಖ್ಯಸ್ಥರು, ನೀತಿ ನಿರೂಪಕರು ಮತ್ತು ಚಿಂತಕರ ಚಾವಡಿಯ ಸದಸ್ಯರು ಪಾಲ್ಗೊಂಡು, ಚರ್ಚೆ, ಸಮಾಲೋಚನೆಗಳ ಮೂಲಕ ಭಾರತದಲ್ಲಿ ಜವಳಿ ಉದ್ಯಮದ ಬೆಳವಣಿಗೆಯನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಅವಶ್ಯವಾದ ತೀರ್ಮಾನಕ್ಕೆ ಬರಲಿದ್ದಾರೆ ಮತ್ತು ನವ ಭಾರತ ನಿರ್ಮಾಣದ ಉಪಕ್ರಮಕ್ಕೆ ಬೆಂಬಲಿಸಲಿದ್ದಾರೆ.


