ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಲೋಹಿತ್ ನದಿಗೆ ಅಡ್ಡಲಾಗಿ ಕಲೈ-II ಜಲ ವಿದ್ಯುತ್ ಯೋಜನೆ (ಹೆಚ್ ಇ ಪಿ) ನಿರ್ಮಾಣಕ್ಕಾಗಿ ರೂ.14,105.83 ಕೋಟಿ ಹೂಡಿಕೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ಅಂದಾಜು 78 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಈ ಯೋಜನೆಯು 1200 ಮೆಗಾ ವ್ಯಾಟ್ (6 x 190 ಮೆಗಾವ್ಯಾಟ್ ಮತ್ತು 1 x 60 ಮೆಗಾವ್ಯಾಟ್) ಸ್ಥಾಪಿತ ಸಾಮರ್ಥ್ಯದೊಂದಿಗೆ ವಾರ್ಷಿಕವಾಗಿ 4852.95 ದಶಲಕ್ಷ ಯೂನಿಟ್ (ಎಂಯು) ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಲೋಹಿತ್ ಜಲಾನಯನ ಪ್ರದೇಶದಲ್ಲಿನ ಮೊದಲ ಜಲವಿದ್ಯುತ್ ಯೋಜನೆಯಾಗಿ, ರಾಜ್ಯದಲ್ಲಿ ವಿದ್ಯುತ್ ಸರಬರಾಜನ್ನು ಬಲಪಡಿಸಲಿದ್ದು, ಗರಿಷ್ಠ ಬೇಡಿಕೆ ನಿರ್ವಹಣೆಯಲ್ಲಿ ಬೆಂಬಲ ನೀಡುತ್ತಾ ರಾಷ್ಟ್ರೀಯ ಗ್ರಿಡ್ ಅನ್ನು ಸಮತೋಲನಗೊಳಿಸಲು ಕೊಡುಗೆ ನೀಡಲಿದೆ.
ಟಿ ಹೆಚ್ ಡಿ ಸಿ ಇಂಡಿಯಾ ಲಿಮಿಟೆಡ್ ಮತ್ತು ಅರುಣಾಚಲ ಪ್ರದೇಶ ಸರ್ಕಾರದ ಜಂಟಿ ಉದ್ಯಮ ಕಂಪನಿಯಾಗಿ ಈ ಯೋಜನೆಯು ಕಾರ್ಯಗತಗೊಳ್ಳಲಿದೆ. ಮೂಲಸೌಕರ್ಯವನ್ನು ಸಕ್ರಿಯಗೊಳಿಸುವ ಪ್ರಕ್ರಿಯೆಯಡಿಯಲ್ಲಿ ರಸ್ತೆಗಳು, ಸೇತುವೆಗಳು ಮತ್ತು ಸಂಬಂಧಿತ ಪ್ರಸರಣ ಮಾರ್ಗಗಳ ನಿರ್ಮಾಣಕ್ಕಾಗಿ ರಾಜ್ಯದ ಈಕ್ವಿಟಿ ಪಾಲಿಗೆ ₹750 ಕೋಟಿ ಕೇಂದ್ರದ ಹಣಕಾಸಿನ ನೆರವಿನ ಜೊತೆಗೆ ಭಾರತ ಸರ್ಕಾರವು ಬಜೆಟ್ ಬೆಂಬಲವಾಗಿ ₹599.88 ಕೋಟಿಗಳನ್ನು ನೀಡಲಿದೆ.
ರಾಜ್ಯಕ್ಕೆ ಶೇ. 12 ರಷ್ಟು ಉಚಿತ ವಿದ್ಯುತ್ ಮತ್ತು ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ (ಎಲ್‌ಎಡಿಎಫ್) ಗೆ ಮೀಸಲಾದ ಶೇ. 1 ರಷ್ಟು ಹೆಚ್ಚುವರಿ ವಿದ್ಯುತ್ ಸಿಗಲಿದೆ, ಇದರ ಜೊತೆಗೆ ಪ್ರದೇಶಕ್ಕೆ ಮಹತ್ವದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಪ್ರಯೋಜನಗಳು ದೊರೆಯಲಿವೆ.
ಅರುಣಾಚಲ ಪ್ರದೇಶದ ನಮ್ಸಾಯಿ ಮತ್ತು ಅಂಜಾವ್ ಜಿಲ್ಲೆಯಲ್ಲಿ, ಸ್ಥಳೀಯ ಬಳಕೆಗೆ ಬಹುತೇಕ ಲಭ್ಯವಾಗುವ ಸುಮಾರು 29 ಕಿಲೋಮೀಟರ್ ರಸ್ತೆಗಳು ಮತ್ತು ಸೇತುವೆಗಳ ಅಭಿವೃದ್ಧಿಯೂ ಸೇರಿದಂತೆ ಮೂಲಸೌಕರ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿದೆ. ಸ್ಥಳೀಯ ಜನರಿಗೆ ಹಲವು ರೀತಿಯ ಪರಿಹಾರಗಳು, ಉದ್ಯೋಗ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಚಟುವಟಿಕೆಗಳ ಅನುಕೂಲ ದೊರೆಯಲಿದೆ.
A major boost to clean energy and development in the Northeast! The approval of the Kalai-II Hydro Electric Project in Arunachal Pradesh will strengthen power supply, generate sustainable energy and bring infrastructure and opportunities to the region. https://t.co/49DhkiKdp6
— Narendra Modi (@narendramodi) April 8, 2026


