2005ರ ಮಟ್ಟಕ್ಕೆ ಹೋಲಿಸಿದರೆ 2035ರ ವೇಳೆಗೆ ತನ್ನ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು ಶೇಕಡಾ 47 ರಷ್ಟು ಕಡಿಮೆ ಮಾಡಲು ಭಾರತ ಬದ್ಧವಾಗಿದೆ
2035ರ ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಶೇಕಡಾ 60 ರಷ್ಟು ಸಂಚಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಭಾರತ ಸಾಧಿಸಲಿದೆ
2005ರ ಮಟ್ಟಕ್ಕೆ ಹೋಲಿಸಿದರೆ 2035ರ ವೇಳೆಗೆ ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ 3.5 ರಿಂದ 4.0 ಬಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಗೆ ಸಮಾನವಾದ 'ಕಾರ್ಬನ್ ಸಿಂಕ್' ಸೃಷ್ಟಿಸಲು ಭಾರತದ ಗುರಿ
ಭಾರತದ ಈ ಬದ್ಧತೆಗಳು 'ವಿಕಸಿತ ಭಾರತ @2047' ಮತ್ತು 2070ರ ವೇಳೆಗೆ 'ನೆಟ್-ಝೀರೋ' (ಶೂನ್ಯ ಹೊರಸೂಸುವಿಕೆ) ಗುರಿಗೆ ಅನುಗುಣವಾಗಿವೆ

ಭಾರತದ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2031 ರಿಂದ 2035ರ ಅವಧಿಯ ಭಾರತದ ರಾಷ್ಟ್ರೀಯ ನಿರ್ಧರಿತ ಕೊಡುಗೆಯನ್ನು (ಎನ್‌ ಡಿ ಸಿ) ಅನುಮೋದಿಸಿದೆ. ಇದು ಯು ಎನ್‌ ಎಫ್‌ ಸಿ ಸಿ ಸಿ ಮತ್ತು ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ದೇಶದ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವುದಲ್ಲದೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ನ್ಯಾಯದ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

2031-35ರ ಅವಧಿಯ ಭಾರತದ ಎನ್‌ ಡಿ ಸಿ ವಿಕಸಿತ ಭಾರತದ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಇದು ಕೇವಲ 2047ರ ಗುರಿಯಲ್ಲ, ಬದಲಿಗೆ ಮುಂದಿನ ಪೀಳಿಗೆಗಾಗಿ ಸಮೃದ್ಧ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವುಳ್ಳ ಭಾರತವನ್ನು ನಿರ್ಮಿಸಲು ಇಂದು ಕ್ರಮ ಕೈಗೊಳ್ಳುವ ಬದ್ಧತೆಯಾಗಿದೆ. ಭಾರತದ ಸತತ ಹವಾಮಾನ ಗುರಿಗಳು ತನ್ನ ಹಿಂದಿನ ಬದ್ಧತೆಗಳ ಮೇಲೆ ಆಧಾರಿತವಾಗಿವೆ. ಅವುಗಳಲ್ಲಿ ಹಲವು ಈಗಾಗಲೇ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸಾಧಿಸಲ್ಪಟ್ಟಿವೆ, ಇದು ಹವಾಮಾನ ಕ್ರಮಗಳನ್ನು ಜಾರಿಗೊಳಿಸುವಲ್ಲಿ ದೇಶದ ಸ್ಥಿರ ದಾಖಲೆಯನ್ನು ಪ್ರತಿಬಿಂಬಿಸುತ್ತದೆ. ಈ ಐದು ಗುಣಾತ್ಮಕ ಗುರಿಗಳು ಸುಸ್ಥಿರತೆಯನ್ನು ದೈನಂದಿನ ಜೀವನ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಲು, ಹವಾಮಾನ-ಸ್ಥಿತಿಸ್ಥಾಪಕ ಅಭಿವೃದ್ಧಿ ಪಥಗಳನ್ನು ಉತ್ತೇಜಿಸಲು ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯಯುತ ಹಾಗೂ ಅಂತರ್ಗತ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಉದ್ದೇಶಿಸಿವೆ.

ಆರಂಭಿಕ ಸಾಧನೆಯಿಂದ ಉನ್ನತ ಮಹತ್ವಾಕಾಂಕ್ಷೆಯವರೆಗೆ

ಸಕಾರಾತ್ಮಕ ಹವಾಮಾನ ಕ್ರಮಗಳ ಕಡೆಗೆ ತನ್ನ ಬದ್ಧತೆಗಳನ್ನು ಪ್ರಾರಂಭಿಸಿದ ಭಾರತವು, ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ನಿಯತಕಾಲಿಕವಾಗಿ ತನ್ನ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುತ್ತಿದೆ. 2022ರ ಪರಿಷ್ಕರಣೆಯ ನಂತರ, ಈಗ 2031-35ರ ಅವಧಿಯ ಗುರಿಗಳನ್ನು ಘೋಷಿಸಿದ್ದು, ಇದು 2070ರ ವೇಳೆಗೆ 'ನೆಟ್-ಝೀರೋ' ಗುರಿಯನ್ನು ತಲುಪುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. 2015 ರಲ್ಲಿ ಸಲ್ಲಿಸಲಾದ ಭಾರತದ ಮೂಲ ಹವಾಮಾನ ಬದ್ಧತೆಗಳು, 2030ರ ವೇಳೆಗೆ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು ಶೇ. 33-35 ರಷ್ಟು ಕಡಿಮೆ ಮಾಡುವ ಮತ್ತು ಪಳೆಯುಳಿಕೆಯೇತರ ಮೂಲಗಳಿಂದ ಶೇ. 40 ರಷ್ಟು ವಿದ್ಯುತ್ ಸ್ಥಾಪಿತ ಸಾಮರ್ಥ್ಯ ಹೊಂದುವ ಗುರಿಗಳೊಂದಿಗೆ ಬಲವಾದ ಅಡಿಪಾಯ ಹಾಕಿದ್ದವು. ಈ ಎರಡೂ ಗುರಿಗಳನ್ನು ನಿಗದಿತ ಅವಧಿಗಿಂತ ಕ್ರಮವಾಗಿ 11 ವರ್ಷ ಮತ್ತು 9 ವರ್ಷಗಳ ಮುಂಚಿತವಾಗಿಯೇ ತಲುಪಲಾಗಿದೆ, ಇದು ಹವಾಮಾನ ಆಡಳಿತದಲ್ಲಿ ಭಾರತದ ಕ್ರಿಯಾಶೀಲ ವಿಧಾನವನ್ನು ಪ್ರದರ್ಶಿಸುತ್ತದೆ.

ನಮ್ಮ ಹೊರಸೂಸುವಿಕೆಯ ತೀವ್ರತೆಯು 2005 ರಿಂದ 2020 ರ ಅವಧಿಯಲ್ಲಿ ಶೇ. 36 ರಷ್ಟು ಕಡಿಮೆಯಾಗಿದೆ ಮತ್ತು ಈ ಗುರಿಯನ್ನು ಈಗ 2035ರ ವೇಳೆಗೆ ಶೇ. 47 ಕ್ಕೆ ಏರಿಸಲಾಗಿದೆ. ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳ ಪಾಲನ್ನು ಹೆಚ್ಚಿಸುವ ಗುರಿಯಲ್ಲಿ, ದೇಶವು ಈಗಾಗಲೇ ಶೇ. 52.57 ರಷ್ಟು (ಫೆಬ್ರವರಿ 2026 ರಂತೆ) ಸಾಮರ್ಥ್ಯವನ್ನು ಸಾಧಿಸಿದೆ. ಐದು ವರ್ಷ ಮುಂಚಿತವಾಗಿಯೇ ಗುರಿ ತಲುಪಿರುವ ಹಿನ್ನೆಲೆಯಲ್ಲಿ, ಈಗ ಈ ಗುರಿಯನ್ನು 2035ರ ವೇಳೆಗೆ ಶೇ. 60 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ ಹೆಚ್ಚುವರಿ ಕಾರ್ಬನ್ ಸಿಂಕ್ ಸೃಷ್ಟಿಸುವ ಗುರಿಯಲ್ಲಿ, ಭಾರತವು ಈಗಾಗಲೇ 2021ರ ವೇಳೆಗೆ 2.29 ಬಿಲಿಯನ್ ಟನ್ CO2 ಸಮಾನತೆಯನ್ನು ಸೃಷ್ಟಿಸಿದೆ. ಅರಣ್ಯೀಕರಣ ಮತ್ತು ಪರಿಸರ ವ್ಯವಸ್ಥೆಯ ಮರುಸ್ಥಾಪನೆಯ ಪ್ರಯತ್ನಗಳು ಗ್ರಾಮೀಣ ಜೀವನೋಪಾಯವನ್ನು ಬೆಂಬಲಿಸುವ ಜೊತೆಗೆ ಭಾರತದ ಕಾರ್ಬನ್ ಸಿಂಕ್ ಗುರಿಗಳಿಗೆ ಕೊಡುಗೆ ನೀಡುತ್ತಿವೆ. ನಮ್ಮ ಅರಣ್ಯೀಕರಣ ಪ್ರಯತ್ನಗಳನ್ನು ಆಹಾರ ಮತ್ತು ಕೃಷಿ ಸಂಸ್ಥೆ (FAO) ಯಂತಹ ಸ್ವತಂತ್ರ ಸಂಸ್ಥೆಗಳು ಶ್ಲಾಘಿಸಿದ್ದು, ಅರಣ್ಯ ಪ್ರದೇಶದ ನಿವ್ವಳ ಲಾಭದಲ್ಲಿ ಭಾರತಕ್ಕೆ ಮೂರನೇ ಸ್ಥಾನ ಮತ್ತು ಅರಣ್ಯದ ಅಡಿಯಲ್ಲಿರುವ ಪ್ರದೇಶದಲ್ಲಿ ಒಂಬತ್ತನೇ ಸ್ಥಾನವನ್ನು ನೀಡಿವೆ. ಹೆಚ್ಚಿನ ಜಿಡಿಪಿ ಬೆಳವಣಿಗೆಯ ದರವನ್ನು ಕಾಯ್ದುಕೊಳ್ಳುವ ನಡುವೆಯೇ ಭಾರತವು ಆರ್ಥಿಕತೆ ಮತ್ತು ಪರಿಸರದ ನಡುವೆ ಸಮತೋಲನವನ್ನು ಕಾಯ್ದುಕೊಂಡಿದೆ ಎಂಬುದಕ್ಕೆ ಈ ಪ್ರಗತಿಯೇ ಸಾಕ್ಷಿ. ಈಗ, ಅರಣ್ಯ ಮತ್ತು ಮರಗಳ ಹೊದಿಕೆಯ ಮೂಲಕ ಕಾರ್ಬನ್ ಸಿಂಕ್ ಸೃಷ್ಟಿಸುವ ಮಹತ್ವಾಕಾಂಕ್ಷೆಯನ್ನು 2005ರ ಮಟ್ಟಕ್ಕೆ ಹೋಲಿಸಿದರೆ 2035ರ ವೇಳೆಗೆ 3.5-4.0 ಬಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಸಮಾನತೆಗೆ ಏರಿಸಲಾಗಿದೆ.

ಭಾರತದ ಹವಾಮಾನ ಕ್ರಮವು ಸುಸ್ಥಿರ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಗುರಿಗಳನ್ನು ಸಾಧಿಸಿರುವ ನಮ್ಮ ದಾಖಲೆಯು ಭವಿಷ್ಯದ ಬದ್ಧತೆಗಳನ್ನು ಪೂರೈಸುವ ನಮ್ಮ ಸಾಮರ್ಥ್ಯದ ಮೇಲೆ ಬಲವಾದ ವಿಶ್ವಾಸವನ್ನು ನೀಡುತ್ತದೆ.

ಸ್ವಚ್ಛ ಇಂಧನ ಮತ್ತು ಹಸಿರು ಬೆಳವಣಿಗೆಯ ವೇಗವರ್ಧನೆ

ಭಾರತದ ಹವಾಮಾನ ಕಾರ್ಯತಂತ್ರವನ್ನು ಬೃಹತ್ ಪ್ರಮಾಣದ ನವೀಕರಿಸಬಹುದಾದ ಇಂಧನ ವಿಸ್ತರಣೆ, ಬ್ಯಾಟರಿ ಸಂಗ್ರಹಣಾ ವ್ಯವಸ್ಥೆಗಳು, ಹಸಿರು ಇಂಧನ ಕಾರಿಡಾರ್‌ ಗಳು, ಸ್ವಚ್ಛ ಉತ್ಪಾದನೆ ಮತ್ತು ದೇಶಾದ್ಯಂತ ಸುಸ್ಥಿರ ಮೂಲಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಹಲವಾರು ಕ್ರಮಗಳ ಮೂಲಕ ಜಾರಿಗೊಳಿಸಲಾಗುತ್ತಿದೆ.

ಇದು ಸಾಂಸ್ಥಿಕ ಸಾಮರ್ಥ್ಯ, ನಾವೀನ್ಯತೆ ಮತ್ತು ಸ್ಥಳೀಯ ಮಟ್ಟದ ಹೊಂದಾಣಿಕೆಯ ಕ್ರಮಗಳನ್ನು ಬಲಪಡಿಸಲು ಒತ್ತು ನೀಡುತ್ತದೆ. ಹಸಿರು ಹೈಡ್ರೋಜನ್ ಮಿಷನ್, ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ, ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆ (ಪಿ ಎಲ್‌ ಐ), ಪಿಎಂ-ಕುಸುಮ್, ಕಾರ್ಬನ್ ಕ್ಯಾಪ್ಚರ್, ಬಳಕೆ ಮತ್ತು ಸಂಗ್ರಹಣೆ (ಸಿಸಿಯುಎಸ್) ಹಾಗೂ ಪರಮಾಣು ಇಂಧನದಂತಹ ವಿವಿಧ ಯೋಜನೆಗಳ ಮೂಲಕ ಹವಾಮಾನದ ಅಂಶಗಳನ್ನು ಆರ್ಥಿಕತೆಯ ಪ್ರಮುಖ ವಲಯಗಳಲ್ಲಿ ಸಂಯೋಜಿಸಲಾಗಿದೆ. ಇದಲ್ಲದೆ, ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐ ಎಸ್‌ ಎ), ವಿಪತ್ತು ನಿರೋಧಕ ಮೂಲಸೌಕರ್ಯ ಒಕ್ಕೂಟ (ಸಿ ಡಿ ಆರ್‌ ಐ), ಗ್ಲೋಬಲ್ ಬಯೋ-ಫ್ಯೂಯೆಲ್ ಅಲಯನ್ಸ್ (ಜಿಬಿಎ) ಮತ್ತು ಇಂಡಸ್ಟ್ರಿ ಟ್ರಾನ್ಸಿಶನ್ ಲೀಡರ್‌ಶಿಪ್ ಗ್ರೂಪ್ (Lead-IT) ಇತ್ಯಾದಿ ಉಪಕ್ರಮಗಳ ಮೂಲಕ ಭಾರತವು ಜಾಗತಿಕ ಪಾಲುದಾರಿಕೆಯನ್ನು ರೂಪಿಸುತ್ತಿದೆ.

ಹವಾಮಾನ ಅಳವಡಿಕೆಯ ಹೆಚ್ಚಳ

ಭಾರತದ ಹವಾಮಾನ ವಿಧಾನವು ಕೇವಲ ಹೊರಸೂಸುವಿಕೆ ತಗ್ಗಿಸುವಿಕೆಗೆ ಸೀಮಿತವಾಗಿಲ್ಲ, ಬದಲಿಗೆ ಅಳವಡಿಕೆಯ ಕ್ರಮಗಳನ್ನು ವಿಸ್ತರಿಸುವತ್ತ ಗಮನ ಹರಿಸಿದೆ. ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಕಂಡುಬರುತ್ತಿರುವುದನ್ನು ಗುರುತಿಸಿರುವ ಭಾರತವು, ಆರ್ಥಿಕತೆಯ ಪ್ರಮುಖ ವಲಯಗಳಲ್ಲಿ ಅಳವಡಿಕೆ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವಕ್ಕೆ ಹೆಚ್ಚಿನ ಒತ್ತು ನೀಡಿದೆ. ಕಾಂಡ್ಲಾ ಪುನಃಸ್ಥಾಪನೆ, ಕರಾವಳಿ ನಿಯಂತ್ರಣ ಮತ್ತು ಹವಾಮಾನ-ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಮೂಲಕ ದುರ್ಬಲ ಕರಾವಳಿ ಪ್ರದೇಶಗಳ ರಕ್ಷಣೆ; ಚಂಡಮಾರುತಗಳ ಬಗ್ಗೆ ಮುನ್ನೆಚ್ಚರಿಕೆ ವ್ಯವಸ್ಥೆಗಳು; ಹಿಮನದಿಗಳ ಮೇಲ್ವಿಚಾರಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಹಿಮಾಲಯದ ರಾಜ್ಯಗಳಲ್ಲಿ ಸುಸ್ಥಿರ ಜೀವನೋಪಾಯಕ್ಕಾಗಿ ಉದ್ದೇಶಿತ ಕಾರ್ಯಕ್ರಮಗಳು; ಭೂಕುಸಿತ ಮತ್ತು ಹಿಮನದಿ ಸರೋವರಗಳ ಉಕ್ಕಿ ಹರಿಯುವ ಅಪಾಯಗಳನ್ನು ಎದುರಿಸಲು ಮೂಲಸೌಕರ್ಯ; ರಾಜ್ಯಗಳಲ್ಲಿ ಶಾಖದ ಕ್ರಿಯಾ ಯೋಜನೆಗಳ ಅನುಷ್ಠಾನ; ಮತ್ತು ಸಮುದಾಯ ಆಧಾರಿತ ವಿಪತ್ತು ಸನ್ನದ್ಧತೆ ಕಾರ್ಯಕ್ರಮಗಳು ಈ ಗುರಿಗಳನ್ನು ಸಾಧಿಸಲು ಕೈಗೊಂಡ ಪ್ರಮುಖ ಕ್ರಮಗಳಾಗಿವೆ.

ಹವಾಮಾನ ಕ್ರಿಯಾ ಚೌಕಟ್ಟಿನ ಅಡಿಯಲ್ಲಿ, ಭಾರತದ ಎನ್‌ ಡಿ ಸಿ ಯನ್ನು ಹವಾಮಾನ ಬದಲಾವಣೆಯ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ ಎ ಪಿ ಸಿ ಸಿ) ಮತ್ತು ಅದರ ಒಂಬತ್ತು ರಾಷ್ಟ್ರೀಯ ಮಿಷನ್‌ ಗಳು ಹಾಗೂ ಹವಾಮಾನ ಬದಲಾವಣೆಯ ರಾಜ್ಯ ಕ್ರಿಯಾ ಯೋಜನೆಗಳ (ಎಸ್‌ ಎ ಪಿ ಸಿ ಸಿ) ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳೊಂದಿಗೆ ಸಮನ್ವಯ ಸಾಧಿಸಿ, ಹವಾಮಾನ-ಸ್ಥಿತಿಸ್ಥಾಪಕ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನಗಳನ್ನು ಖಚಿತಪಡಿಸಲಾಗುತ್ತಿದೆ.

ಜಲ ಜೀವನ್ ಮಿಷನ್, ಸುಸ್ಥಿರ ಕೃಷಿಯ ರಾಷ್ಟ್ರೀಯ ಮಿಷನ್, ಸುಸ್ಥಿರ ಆವಾಸಸ್ಥಾನ, ಮಿಸ್ಟಿ (MISHTI - ಮ್ಯಾಂಗ್ರೋವ್ ಉಪಕ್ರಮ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ, ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮುಂತಾದ ವಿವಿಧ ಯೋಜನೆಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಈ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.

ಜನಕೇಂದ್ರೀಯ ವಿಧಾನ

ಭಾರತದ ಹವಾಮಾನ ಪ್ರಯತ್ನಗಳು "ಪರಿಸರಕ್ಕಾಗಿ ಜೀವನಶೈಲಿ (LiFE)" ತತ್ವದ ಸುತ್ತ ಕೇಂದ್ರೀಕೃತವಾಗಿವೆ, ಇದು ಸುಸ್ಥಿರ ಜೀವನವನ್ನು ಒಂದು ಜನಾಂದೋಲನವನ್ನಾಗಿ ಪರಿವರ್ತಿಸುತ್ತಿದೆ. 'ಏಕ್ ಪೇಡ್ ಮಾ ಕೆ ನಾಮ್' ನಂತಹ ಉಪಕ್ರಮಗಳು ಗಿಡ ನೆಡುವುದನ್ನು ಜನಚಾಲಿತ ಹವಾಮಾನ ಕ್ರಮವನ್ನಾಗಿ ಬದಲಿಸುತ್ತಿವೆ.

ಎನ್‌ ಡಿ ಸಿ (2031-35) ರೂಪಿಸುವ ವಿಧಾನ

2031-2035ರ ಎನ್‌ ಡಿ ಸಿ ಯನ್ನು ರೂಪಿಸುವಲ್ಲಿ ಸರ್ಕಾರವು ಮೊದಲ ಜಾಗತಿಕ ಸ್ಟಾಕ್‌ಟೇಕ್ (ಜಿ ಎಸ್‌ ಟಿ) ಫಲಿತಾಂಶಗಳು, 'ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ' (ಸಿಬಿಡಿಆರ್-ಆರ್ ಸಿ) ತತ್ವ ಹಾಗೂ ಸಮಾನತೆಯನ್ನು ಪರಿಗಣಿಸಿದೆ. ಇದು ಪ್ಯಾರಿಸ್ ಒಪ್ಪಂದದ ದೀರ್ಘಕಾಲೀನ ಗುರಿಗಳಿಗೆ ಅನುಗುಣವಾಗಿ ರಾಷ್ಟ್ರೀಯ ವಾಸ್ತವಗಳು, ಅಭಿವೃದ್ಧಿಯ ಆದ್ಯತೆಗಳು ಮತ್ತು ಇಂಧನ ಭದ್ರತೆಯೊಂದಿಗೆ ಹವಾಮಾನ ಕ್ರಮದ ಮಹತ್ವಾಕಾಂಕ್ಷೆಯನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ.

ಭಾರತದ ಸತತ ಹವಾಮಾನ ಬದ್ಧತೆಗಳು ನೀತಿ ಆಯೋಗದ ಹತ್ತು ಕಾರ್ಯಕಾರಿ ಗುಂಪುಗಳು ನಡೆಸಿದ ವ್ಯಾಪಕ ಸಮಾಲೋಚನೆಗಳು ಮತ್ತು ಅಧ್ಯಯನಗಳ ಫಲಿತಾಂಶವಾಗಿದೆ. ಈ ಗುಂಪುಗಳಲ್ಲಿ ಕೇಂದ್ರ ಸಚಿವಾಲಯಗಳು, ತಜ್ಞರು, ಉದ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಂಘಟನೆಗಳು ಸೇರಿದ್ದವು. ಇಂಧನ, ಉದ್ಯಮ, ಸಾರಿಗೆ, ಕೃಷಿ, ನೀರು ಮತ್ತು ನಗರಾಭಿವೃದ್ಧಿ ವಲಯಗಳ ಮಾಹಿತಿಯನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ, ಪರಿಷ್ಕೃತ ಗುರಿಗಳು ಮಹತ್ವಾಕಾಂಕ್ಷೆಯಾಗಿಯೂ, ಸಾಧಿಸಬಹುದಾದಂತೆಯೂ ಇರುವಂತೆ ನೋಡಿಕೊಳ್ಳಲಾಗಿದೆ. ಈ ಸಮಾಲೋಚನಾ ವಿಧಾನವು ಒಳಗೊಳ್ಳುವಿಕೆಯ ನೀತಿ ನಿರೂಪಣೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಭಾರತದ ಈ ಸತತ ಹವಾಮಾನ ಬದ್ಧತೆಗಳು ಯುವಜನರು ಮತ್ತು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ, ಅವರನ್ನು ಹಸಿರು ಪರಿವರ್ತನೆಯಲ್ಲಿ ಪ್ರಮುಖ ಪಾಲುದಾರರನ್ನಾಗಿ ಮಾಡುತ್ತದೆ.

ಬಲವಾದ ನೀತಿ ನಿರ್ದೇಶನ, ತಾಂತ್ರಿಕ ನಾವೀನ್ಯತೆ ಮತ್ತು ಜನರ ಸಹಭಾಗಿತ್ವದೊಂದಿಗೆ, ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಜವಾಬ್ದಾರಿಯು ಜೊತೆಜೊತೆಯಾಗಿ ಸಾಗಬಲ್ಲದು ಎಂಬುದನ್ನು ಭಾರತವು ನಿರಂತರವಾಗಿ ಪ್ರದರ್ಶಿಸುತ್ತಿದೆ.

2031 ರಿಂದ 2035ರ ಅವಧಿಯ ಎನ್‌ ಡಿ ಸಿ ಗೆ ಸಚಿವ ಸಂಪುಟದ ಅನುಮೋದನೆಯು ಭಾರತದ ಕಡಿಮೆ-ಇಂಗಾಲದ, ಹವಾಮಾನ-ಸ್ಥಿತಿಸ್ಥಾಪಕ ಭವಿಷ್ಯದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಮತ್ತು ಹವಾಮಾನ ಕ್ರಮದಲ್ಲಿ ಜಾಗತಿಕ ನಾಯಕನಾಗಿ ಭಾರತದ ಪಾತ್ರವನ್ನು ಮತ್ತಷ್ಟು ಬಲಪಡಿಸಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
EPFO settles 8.3 crore claims in FY26; cheque leaf upload reform benefits 7 crore members, says govt

Media Coverage

EPFO settles 8.3 crore claims in FY26; cheque leaf upload reform benefits 7 crore members, says govt
NM on the go

Nm on the go

Always be the first to hear from the PM. Get the App Now!
...
Prime Minister Narendra Modi receives a telephone call from the US Vice President
August 08, 2026
PM and Vice President Vance review progress in the India-U.S. Strategic Partnership.
PM and Vice President Vance exchange views on regional and global developments.
PM warmly congratulates Vice President Vance and Ms. Usha Vance on the birth of their son.

Prime Minister Shri Narendra Modi received a telephone call today from the Vice President of the United States, Mr. J.D. Vance.

Prime Minister and Vice President Vance reviewed progress in the India-U.S. Comprehensive Global Strategic Partnership. They noted the sustained momentum in the high-level engagements and reaffirmed their commitment to further strengthening cooperation in trade, defence, critical and emerging technologies, energy security and critical minerals.

They also exchanged views on regional and global developments of mutual interest.

Prime Minister warmly congratulated Vice President Vance and Ms. Usha Vance on the birth of their son and conveyed best wishes to the family.