ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರು ಇಂದು ಉಕ್ರೇನ್ ಅಧ್ಯಕ್ಷ ಶ್ರೀ ವೊಲೊದಿಮೈರ್ ಜೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು..
ಉಕ್ರೇನಿಯನ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆಲುವಿನ ಬಗ್ಗೆ ಅಧ್ಯಕ್ಷ ಜೆಲೆನ್ಸ್ಕಿಯವರನ್ನು ಪ್ರಧಾನಿ ಅಭಿನಂದಿಸಿದರು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಚುನಾವಣೆಯಲ್ಲಿ ಅವರ ‘Servant of the People Party’ ವಿಜಯಕ್ಕಾಗಿ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷ ಜೆಲೆನ್ಸ್ಕಿಯವರು ಪ್ರಧಾನಮಂತ್ರಿಯನ್ನು ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದಿಸಿದರು.
ಭಾರತ ಮತ್ತು ಉಕ್ರೇನ್ ನಡುವಿನ ಸೌಹಾರ್ದ ಸಂಬಂಧವನ್ನು ಉಲ್ಲೇಖಿಸಿ ಪ್ರಧಾನಿಯವರು, ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳ ಬೆಳವಣಿಗೆಯ ತೃಪ್ತಿದಾಯಕ ಪ್ರಗತಿಯ ಬಗ್ಗೆ ಗಮನ ಸೆಳೆದರು. ಇತರ ಹಲವಾರು ಕ್ಷೇತ್ರಗಳಲ್ಲಿ ಉಕ್ರೇನ್‌ನೊಂದಿಗಿನ ನಮ್ಮ ದೀರ್ಘಕಾಲದ ಸಹಕಾರವನ್ನು ಅವರು ಒತ್ತಿಹೇಳಿದರು. ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳ ಉಪಸ್ಥಿತಿಯು ಉಭಯ ದೇಶಗಳ ನಡುವಿನ ಜನರಿಂದ ಜನರ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು. ಕಳೆದ ವರ್ಷದಿಂದ ಆರಂಭವಾಗಿರುವ ಕೈವ್ ಮತ್ತು ದೆಹಲಿ ನಡುವಿನ ನೇರ ವಿಮಾನ ಸಂಪರ್ಕದಿಂದಾಗಿ ನಮ್ಮ ಸಂಬಂಧಗಳು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದೆ ಎಂಬ ಬಗ್ಗೆಯೂ ಪ್ರಧಾನಿಯವರು ತಿಳಿಸಿದರು.
ಪರಸ್ಪರ ಲಾಭದಾಯಕ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು.


