ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದ ಮಾರ್ಗದರ್ಶನದಲ್ಲಿ ಉತ್ಪಾದನಾ ವಲಯಕ್ಕೆ ನೀಡಲಾಗುತ್ತಿರುವ ವಿವಿಧ ನೆರವುಗಳಿಂದಾಗಿ ಭಾರತದ ಆರ್ಥಿಕ ವೃದ್ಧಿ ಮತ್ತಷ್ಟು ವೇಗಗೊಳ್ಳುತ್ತಿದೆ: ಜಪಾನ್ ನ ಪ್ರಧಾನಮಂತ್ರಿ ಕಿಶಿದಾ
ಮಾರುತಿ-ಸುಜುಕಿಯ ಯಶಸ್ಸು ಭಾರತ-ಜಪಾನ್ ನಡುವಿನ ಬಲಿಷ್ಠ ಪಾಲುದಾರಿಕೆಯ ಸೂಚಕ "
ಕಳೆದ ಎಂಟು ವರ್ಷಗಳಲ್ಲಿ, ಭಾರತ ಮತ್ತು ಜಪಾನ್ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ತಲುಪಿವೆ"
ಈ ಗೆಳೆತನದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿ ನಮ್ಮ ಸ್ನೇಹಿತ, ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆ ಅವರನ್ನು ಸ್ಮರಿಸುತ್ತಾರೆ"
ನಮ್ಮ ಪ್ರಯತ್ನಗಳು ಸದಾ ಜಪಾನ್ ಬಗ್ಗೆ ಗಂಭೀರತೆ ಮತ್ತು ಗೌರವವನ್ನು ಹೊಂದಿವೆ, ಹೀಗಾಗೆ ಗುಜರಾತ್ ನಲ್ಲಿ ಸುಮಾರು 125 ಜಪಾನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ"
ಪೂರೈಕೆ, ಬೇಡಿಕೆ ಮತ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ, ಇವಿ ವಲಯವು ಖಂಡಿತವಾಗಿಯೂ ಪ್ರಗತಿ ಸಾಧಿಸಲಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಭಾರತದಲ್ಲಿ ಸುಜುಕಿಯ 40 ವರ್ಷಗಳ ಕಾರ್ಯಾಚರಣೆ ಅಂಗವಾಗಿ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಭಾರತದಲ್ಲಿನ ಜಪಾನ್ ರಾಯಭಾರಿ ಮಾನ್ಯ ಶ್ರೀ ಸತೋಶಿ ಸುಜುಕಿ, ಗುಜರಾತ್ ಮುಖ್ಯಮಂತ್ರಿ ಮಾನ್ಯ ಶ್ರೀ ಭೂಪೇಂದ್ರ ಪಟೇಲ್, ಸಂಸದ ಶ್ರೀ ಸಿ.ಆರ್.ಪಾಟೀಲ್, ರಾಜ್ಯ ಸಚಿವ ಶ್ರೀ ಜಗದೀಶ್ ಪಾಂಚಾಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷರಾದ ಶ್ರೀ ಒ. ಸುಜುಕಿ, ಸುಜುಕಿ ಮೋಟಾರ್ ಕಾರ್ಪೊರೇಷನ್ ಅಧ್ಯಕ್ಷ ಶ್ರೀ ಟಿ. ಸುಜುಕಿ ಮತ್ತು ಮಾರುತಿ-ಸುಜುಕಿಯ ಅಧ್ಯಕ್ಷ ಶ್ರೀ ಆರ್.ಸಿ ಭಾರ್ಗವ ಉಪಸ್ಥಿತರಿದ್ದರು. ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು ಮತ್ತು ಜಪಾನಿನ ಪ್ರಧಾನ ಮಂತ್ರಿ ಮಾನ್ಯ ಶ್ರೀ ಫುಮಿಯೋ ಕಿಶಿದಾ ಅವರ ವೀಡಿಯೊ ಸಂದೇಶವನ್ನು ಸಹ ಪ್ರದರ್ಶಿಸಲಾಯಿತು.

ಜಪಾನಿನ ಪ್ರಧಾನಮಂತ್ರಿ ಕಿಶಿದಾ ಅವರು ಈ ಸಂದರ್ಭಕ್ಕೆ ಶುಭ ಕೋರಿ, 4 ದಶಕಗಳ ಅವಧಿಯಲ್ಲಿ ಮಾರುತಿ ಸುಜುಕಿಯ ಬೆಳವಣಿಗೆಯು ಭಾರತ ಮತ್ತು ಜಪಾನ್ ನಡುವಿನ ಬಲವಾದ ಆರ್ಥಿಕ ಸಂಬಂಧಗಳನ್ನು ಸಾಕಾರಗೊಳಿಸಿದೆ ಎಂದು ಹೇಳಿದರು. ಭಾರತೀಯ ಮಾರುಕಟ್ಟೆಯ ಸಾಮರ್ಥ್ಯವನ್ನು ಗುರುತಿಸಿದ್ದಕ್ಕಾಗಿ ಸುಜುಕಿಯ ಆಡಳಿತವನ್ನು ಅವರು ಶ್ಲಾಘಿಸಿದರು. "ನಾವು ಈ ಯಶಸ್ಸಿಗೆ ಜನರು ಮತ್ತು ಭಾರತ ಸರ್ಕಾರದ ತಿಳಿವಳಿಕೆ ಮತ್ತು ಬೆಂಬಲಕ್ಕೆ ಋಣಿಯಾಗಿದ್ದೇವೆ ಎಂದು ತಾವು ಭಾವಿಸುವುದಾಗಿ ಹೇಳಿದರು. ಇತ್ತೀಚೆಗೆ, ಪ್ರಧಾನಮಂತ್ರಿ ಮೋದಿ ಅವರ ಬಲಿಷ್ಠ ನಾಯಕತ್ವದಿಂದ ಮಾರ್ಗದರ್ಶಿತವಾಗಿ ಉತ್ಪಾದನಾ ವಲಯಕ್ಕೆ ನೀಡಲಾಗಿರುವ ವಿವಿಧ ನೆರವಿನ ಕ್ರಮಗಳಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯು ಮತ್ತಷ್ಟು ವೇಗಗೊಳ್ಳುತ್ತಿದೆ", ಎಂದು ಅವರು ಹೇಳಿದರು. ಜಪಾನಿನ ಇತರ ಅನೇಕ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ಅವರು ಮಾಹಿತಿ ನೀಡಿದರು. ಭಾರತ ಮತ್ತು ಜಪಾನ್ ತಮ್ಮ ಬಾಂಧವ್ಯದ 70 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷದ ಮಹತ್ವವನ್ನು ಅವರು ಒತ್ತಿ ಹೇಳಿದರು. "ಪ್ರಧಾನಮಂತ್ರಿ ಮೋದಿ ಅವರೊಂದಿಗೆ ತಾವು 'ಜಪಾನ್-ಭಾರತ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆ'ಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು "ಮುಕ್ತ ಮತ್ತು ತೆರೆದ ಇಂಡೋ ಪೆಸಿಫಿಕ್" ಅನ್ನು ಸಾಕಾರಗೊಳಿಸಲು ಪ್ರಯತ್ನಗಳನ್ನು ಕೈಗೊಳ್ಳಲು ನಿರ್ಧರಿಸಿರುವುದಾಗಿ ಅವರು ಹೇಳಿದರು.


ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸುಜುಕಿ ಕಾರ್ಪೊರೇಷನ್ ಗೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಅಭಿನಂದಿಸಿದರು. "ಭಾರತದ ಕುಟುಂಬಗಳೊಂದಿಗೆ ಸುಜುಕಿಯ ಸಂಬಂಧವು ಈಗ 40 ವರ್ಷಗಳಷ್ಟು ಬಲವಾಗಿದೆ" ಎಂದು ಅವರು ಹೇಳಿದರು. "ಮಾರುತಿ-ಸುಜುಕಿಯ ಯಶಸ್ಸು ಭಾರತ-ಜಪಾನ್ ನಡುವಿನ ಬಲವಾದ ಪಾಲುದಾರಿಕೆಯನ್ನು ಸಹ ಸೂಚಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ, ನಮ್ಮ ಎರಡೂ ದೇಶಗಳ ನಡುವಿನ ಈ ಸಂಬಂಧಗಳು ಹೊಸ ಎತ್ತರವನ್ನು ತಲುಪಿವೆ. ಇಂದು, ಗುಜರಾತ್-ಮಹಾರಾಷ್ಟ್ರದ ಬುಲೆಟ್ ರೈಲಿನಿಂದ ಹಿಡಿದು ಯುಪಿಯ ಬನಾರಸ್ ನ ರುದ್ರಾಕ್ಷ ಕೇಂದ್ರದವರೆಗೆ, ಅನೇಕ ಅಭಿವೃದ್ಧಿ ಯೋಜನೆಗಳು ಭಾರತ-ಜಪಾನ್ ಸ್ನೇಹಕ್ಕೆ ಉದಾಹರಣೆಗಳಾಗಿವೆ. " ಈ ಸ್ನೇಹದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿಯೂ ನಮ್ಮ ಸ್ನೇಹಿತ, ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆ ಅವರನ್ನು ಸ್ಮರಿಸುತ್ತಾರೆ" ಎಂದು ಪ್ರಧಾನಮಂತ್ರಿ ಹೇಳಿದರು. ಅಬೆ ಸಾನ್ ಅವರು ಗುಜರಾತ್ ಗೆ ಬಂದು ಇಲ್ಲಿ ತಮ್ಮ ಸಮಯವನ್ನು ಕಳೆದಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇದನ್ನು ಗುಜರಾತ್ ನ ಜನರು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ ಎಂದು ಹೇಳಿದರು. "ಇಂದು ಪ್ರಧಾನಮಂತ್ರಿ ಕಿಶಿದಾ ಅವರು ನಮ್ಮ ದೇಶಗಳನ್ನು ಹತ್ತಿರಕ್ಕೆ ತರಲು ಅವರು ಮಾಡಿದ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದಾರೆ" ಎಂದೂ ಅವರು ಹೇಳಿದರು.

13 ವರ್ಷಗಳ ಹಿಂದೆ ಸುಝುಕಿ ಗುಜರಾತ್ ಗೆ ಆಗಮಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಆಡಳಿತದ ಉತ್ತಮ ಮಾದರಿಯಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುವ ಗುಜರಾತ್ ನ ವಿಶ್ವಾಸವನ್ನೂ ಸ್ಮರಿಸಿದರು. "ಗುಜರಾತ್ ಸುಜುಕಿಯೊಂದಿಗೆ ತನ್ನ ಭರವಸೆಯನ್ನು ಉಳಿಸಿಕೊಂಡಿದೆ ಮತ್ತು ಸುಜುಕಿ ಕೂಡ ಗುಜರಾತ್ ನ ಆಶಯಗಳನ್ನು ಅದೇ ಘನತೆಯಿಂದ ಕಾಪಾಡಿದೆ ಎಂಬುದು ತಮಗೆ ಸಂತೋಷ ತಂದಿದೆ. ಗುಜರಾತ್ ವಿಶ್ವದ ಅಗ್ರಗಣ್ಯ ವಾಹನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ" ಎಂದು ಅವರು ಹೇಳಿದರು.  ಗುಜರಾತ್ ಮತ್ತು ಜಪಾನ್ ನಡುವೆ ಅಸ್ತಿತ್ವದಲ್ಲಿರುವ ಸಂಬಂಧದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ರಾಜತಾಂತ್ರಿಕ ಆಯಾಮಗಳಿಗಿಂತ ಉನ್ನತವಾಗಿದೆ ಎಂದು ಹೇಳಿದರು. "2009ರಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆ ಪ್ರಾರಂಭವಾದಾಗಿನಿಂದ, ಜಪಾನ್ ಪಾಲುದಾರ ರಾಷ್ಟ್ರವಾಗಿ ಅದರೊಂದಿಗೆ ಸಂಬಂಧ ಹೊಂದಿತ್ತು ಎಂಬುದು ನನಗೆ ನೆನಪಿದೆ" ಎಂದು ಪ್ರಧಾನಮಂತ್ರಿ ಹೇಳಿದರು. 
ಜಪಾನಿನ ಹೂಡಿಕೆದಾರರಿಗೆ ಗುಜರಾತಿನಲ್ಲಿ ಸ್ವದೇಶದ ಅನುಭವ ನೀಡಲು ಗುಜರಾತ್ ನಲ್ಲಿ ಮಿನಿ ಜಪಾನ್ ಅನ್ನು ರೂಪಿಸುವ ತಮ್ಮ ಸಂಕಲ್ಪವನ್ನು ಅವರು ಸ್ಮರಿಸಿದರು. ಇದನ್ನು ಸಾಕಾರಗೊಳಿಸಲು ಅನೇಕ ಸಣ್ಣ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಜಪಾನಿನ ಪಾಕಪದ್ಧತಿಗಳೊಂದಿಗೆ ಅನೇಕ ವಿಶ್ವದರ್ಜೆಯ ಗಾಲ್ಫ್ ಕೋರ್ಸ್ ಗಳು ಮತ್ತು ರೆಸ್ಟೋರೆಂಟ್ ಗಳ ಸೃಷ್ಟಿ ಮತ್ತು ಜಪಾನಿನ ಭಾಷೆಯನ್ನು ಉತ್ತೇಜಿಸುವುದು ಅಂತಹ ಕೆಲವು ಉದಾಹರಣೆಗಳಾಗಿವೆ. "ನಮ್ಮ ಪ್ರಯತ್ನಗಳು ಸದಾ ಜಪಾನ್ ಬಗ್ಗೆ ಗಂಭೀರತೆ ಮತ್ತು ಗೌರವವನ್ನು ಹೊಂದಿದ್ದವು, ಅದಕ್ಕಾಗಿಯೇ ಸುಜುಕಿಯೊಂದಿಗೆ ಸುಮಾರು 125 ಜಪಾನಿನ ಕಂಪನಿಗಳು ಗುಜರಾತ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ" ಎಂದು ಅವರು ಹೇಳಿದರು. ಅಹ್ಮದಾಬಾದ್ ನಲ್ಲಿ ಜೆಟ್ರೋ ನಡೆಸುತ್ತಿರುವ ಬೆಂಬಲ ಕೇಂದ್ರವು ಅನೇಕ ಕಂಪನಿಗಳಿಗೆ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳನ್ನು ಒದಗಿಸುತ್ತಿದೆ. ಜಪಾನ್ ಇಂಡಿಯಾ ಇನ್ ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ ಅನೇಕ ಜನರಿಗೆ ತರಬೇತಿ ನೀಡುತ್ತಿದೆ. ಗುಜರಾತ್ ನ ಅಭಿವೃದ್ಧಿ ಯಾತ್ರೆಯಲ್ಲಿ 'ಕೈಜೆನ್' ಅವರ ಕೊಡುಗೆಯನ್ನು ಪ್ರಧಾನಮಂತ್ರಿಯವರು ಗುರುತಿಸಿದರು. ಕೈಜೆನ್ ನ ಮುಖಗಳನ್ನು ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಇತರ ಇಲಾಖೆಗಳಲ್ಲಿಯೂ ಅನ್ವಯಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.


ವಿದ್ಯುತ್ ಚಾಲಿತ ವಾಹನಗಳ ಪ್ರಮುಖ ಲಕ್ಷಣಗಳಲ್ಲಿ ಒಂದನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಅವು ನಿಶ್ಶಬ್ದವಾಗಿರುತ್ತವೆ ಎಂದು ಹೇಳಿದರು. ಅದು 2 ಚಕ್ರದ ವಾಹನವೇ ಆಗಿರಲಿ ಅಥವಾ 4 ಚಕ್ರದ ವಾಹನವೇ ಆಗಿರಲಿ, ಅವು ಯಾವುದೇ ಶಬ್ದವನ್ನು ಮಾಡುವುದಿಲ್ಲ. "ಈ ನಿಶ್ಶಬ್ದ ಅದರ ಎಂಜಿನಿಯರಿಂಗ್ ಬಗ್ಗೆ ಮಾತ್ರವಲ್ಲ, ಇದು ದೇಶದಲ್ಲಿ ಮೌನ ಕ್ರಾಂತಿಯ ಪ್ರಾರಂಭಿಸಿದೆ" ಎಂದು ಅವರು ಹೇಳಿದರು. ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ, ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ವಿವಿಧ ಪ್ರೋತ್ಸಾಹಕಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆದಾಯ ತೆರಿಗೆಯಲ್ಲಿ ರಿಯಾಯಿತಿ ಮತ್ತು ಸಾಲ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವಂತಹ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. "ಪೂರೈಕೆಯನ್ನು ಹೆಚ್ಚಿಸಲು, ಆಟೋಮೊಬೈಲ್ ಮತ್ತು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪಿಎಲ್ಐ ಯೋಜನೆಗಳನ್ನು ಪರಿಚಯಿಸುವ ಕಾರ್ಯಕ್ಕೆ ಸಹ ವೇಗವಾಗಿ ನಡೆಸಲಾಗುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೃಢವಾದ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ರೂಪಿಸಲು ಸಾಕಷ್ಟು ನೀತಿ ನಿರ್ಧಾರಗಳನ್ನು ಸಹ ಕೈಗೊಳ್ಳಲಾಗಿದೆ. "2022ರ ಹಣಕಾಸು ವರ್ಷದ ಬಜೆಟ್ ನಲ್ಲಿ ಬ್ಯಾಟರಿ ವಿನಿಮಯ ನೀತಿಯನ್ನು ಸಹ ಪರಿಚಯಿಸಲಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. "ಪೂರೈಕೆ, ಬೇಡಿಕೆ ಮತ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ, ಇವಿ ವಲಯವು ಪ್ರಗತಿ ಹೊಂದಲಿದೆ ಎಂಬುದು ಖಚಿತವಾಗಿದೆ" ಎಂದು ಅವರು ಹೇಳಿದರು.

2030ರ ವೇಳೆಗೆ ಪಳೆಯುಳಿಕೆಯೇತರ ಮೂಲಗಳಿಂದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಸಾಧಿಸುವುದಾಗಿ ಭಾರತ ಕಾಪ್-26ರಲ್ಲಿ ಘೋಷಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ನಾವು 2070ಕ್ಕೆ 'ನಿವ್ವಳ ಶೂನ್ಯ' ಗುರಿಯನ್ನು ನಿಗದಿಪಡಿಸಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು. ಜೈವಿಕ ಇಂಧನ, ಎಥೆನಾಲ್ ಮಿಶ್ರಣ ಮತ್ತು ಹೈಬ್ರೀಡ್ ಇವಿಗಳಂತಹ ವಿಷಯಗಳಲ್ಲೂ ಮಾರುತಿ ಸುಜುಕಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದರು. ಸಂಕುಚಿತ ಬಯೋಮೀಥೇನ್ ಅನಿಲಕ್ಕೆ ಸಂಬಂಧಿಸಿದ ಯೋಜನೆಗಳ ಕಾಮಗಾರಿಗಳನ್ನು ಸುಜುಕಿ ಆರಂಭಿಸಬೇಕು ಎಂದು ಪ್ರಧಾನಮಂತ್ರಿ ಅವರು ಸಲಹೆ ನೀಡಿದರು.  ಆರೋಗ್ಯಕರ ಸ್ಪರ್ಧೆ ಮತ್ತು ಪರಸ್ಪರ ಕಲಿಕೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕೆಂದು ಪ್ರಧಾನಮಂತ್ರಿಯವರು ಹಾರೈಸಿದರು. "ಇದು ರಾಷ್ಟ್ರ ಮತ್ತು ವ್ಯವಹಾರ ಎರಡಕ್ಕೂ ಪ್ರಯೋಜನಕಾರಿಯಾಗಿದೆ" ಎಂದು ಅವರು ಹೇಳಿದರು. "ಅಮೃತ ಕಾಲದ ಮುಂದಿನ 25 ವರ್ಷಗಳಲ್ಲಿ ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಸ್ವಾವಲಂಬಾಗಬೇಕೆಂಬುದು ನಮ್ಮ ಗುರಿಯಾಗಿದೆ. ಇಂಧನ ಬಳಕೆಯ ಪ್ರಮುಖ ಭಾಗವು ಸಾರಿಗೆ ವಲಯದಲ್ಲಿರುವುದರಿಂದ, ಈ ವಲಯದಲ್ಲಿನ ನಾವೀನ್ಯತೆ ಮತ್ತು ಪ್ರಯತ್ನಗಳು ನಮ್ಮ ಆದ್ಯತೆಯಾಗಿರಬೇಕು. ನಾವು ಇದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ತಮಗಿದೆ", ಎಂದು ಅವರು ತಮ್ಮ ಮಾತಿಗೆ ಪೂರ್ಣ ವಿರಾಮ ಹೇಳಿದರು.

ಹಿನ್ನೆಲೆ :
ಈ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ಭಾರತದ ಸುಜುಕಿ ಸಮೂಹದ ಎರಡು ಪ್ರಮುಖ ಯೋಜನೆಗಳಾದ ಗುಜರಾತ್ ನ ಹನ್ಸಾಲ್ ಪುರದಲ್ಲಿ ಗುಜರಾತ್ ಸುಜುಕಿ ಮೋಟಾರ್ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಉತ್ಪಾದನಾ ಸೌಲಭ್ಯ ಮತ್ತು ಹರಿಯಾಣದ ಖಾರ್ಖೋಡಾದಲ್ಲಿ ಮಾರುತಿ ಸುಜುಕಿಯ ಮುಂಬರುವ ವಾಹನ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

ಗುಜರಾತ್ ನ ಹನ್ಸಾಲ್ ಪುರದಲ್ಲಿ ಗುಜರಾತ್ ಸುಜುಕಿ ಮೋಟಾರ್ ಎಲೆಕ್ಟ್ರಿಕ್ ವೆಹಿಕಲ್ ಬ್ಯಾಟರಿ ಉತ್ಪಾದನಾ ಘಟಕವನ್ನು ಸುಮಾರು  7,300 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವೆಹಿಕಲ್ ಗಳಿಗಾಗಿ ಅಡ್ವಾನ್ಸ್ ಕೆಮಿಸ್ಟ್ರಿ ಕೋಶದ ಬ್ಯಾಟರಿಗಳನ್ನು ತಯಾರಿಸಲು ಸ್ಥಾಪಿಸಲಾಗುವುದು. ಹರಿಯಾಣದ ಖಾರ್ಖೋಡಾದಲ್ಲಿರುವ ವಾಹನ ಉತ್ಪಾದನಾ ಸೌಲಭ್ಯವು ವರ್ಷಕ್ಕೆ 10 ಲಕ್ಷ ಪ್ರಯಾಣಿಕ ವಾಹನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಇದು ವಿಶ್ವದ ಅತಿದೊಡ್ಡ ಪ್ರಯಾಣಿಕ ವಾಹನ ಉತ್ಪಾದನಾ ಸೌಲಭ್ಯಗಳಲ್ಲಿ ಒಂದಾಗಿದೆ. ಯೋಜನೆಯ ಮೊದಲ ಹಂತವನ್ನು 11,000 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯೊಂದಿಗೆ ಸ್ಥಾಪಿಸಲಾಗುವುದು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
From Kashmir to Kota, India’s riverfronts are getting a makeover

Media Coverage

From Kashmir to Kota, India’s riverfronts are getting a makeover
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 20 ಫೆಬ್ರವರಿ 2024
February 20, 2024

Vikas Bhi, Virasat Bhi under the Leadership of PM Modi