ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದ ಮಾರ್ಗದರ್ಶನದಲ್ಲಿ ಉತ್ಪಾದನಾ ವಲಯಕ್ಕೆ ನೀಡಲಾಗುತ್ತಿರುವ ವಿವಿಧ ನೆರವುಗಳಿಂದಾಗಿ ಭಾರತದ ಆರ್ಥಿಕ ವೃದ್ಧಿ ಮತ್ತಷ್ಟು ವೇಗಗೊಳ್ಳುತ್ತಿದೆ: ಜಪಾನ್ ನ ಪ್ರಧಾನಮಂತ್ರಿ ಕಿಶಿದಾ
ಮಾರುತಿ-ಸುಜುಕಿಯ ಯಶಸ್ಸು ಭಾರತ-ಜಪಾನ್ ನಡುವಿನ ಬಲಿಷ್ಠ ಪಾಲುದಾರಿಕೆಯ ಸೂಚಕ "
ಕಳೆದ ಎಂಟು ವರ್ಷಗಳಲ್ಲಿ, ಭಾರತ ಮತ್ತು ಜಪಾನ್ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ತಲುಪಿವೆ"
ಈ ಗೆಳೆತನದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬ ಭಾರತೀಯರೂ ಖಂಡಿತವಾಗಿ ನಮ್ಮ ಸ್ನೇಹಿತ, ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆ ಅವರನ್ನು ಸ್ಮರಿಸುತ್ತಾರೆ"
ನಮ್ಮ ಪ್ರಯತ್ನಗಳು ಸದಾ ಜಪಾನ್ ಬಗ್ಗೆ ಗಂಭೀರತೆ ಮತ್ತು ಗೌರವವನ್ನು ಹೊಂದಿವೆ, ಹೀಗಾಗೆ ಗುಜರಾತ್ ನಲ್ಲಿ ಸುಮಾರು 125 ಜಪಾನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ"
ಪೂರೈಕೆ, ಬೇಡಿಕೆ ಮತ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದರೊಂದಿಗೆ, ಇವಿ ವಲಯವು ಖಂಡಿತವಾಗಿಯೂ ಪ್ರಗತಿ ಸಾಧಿಸಲಿದೆ"

ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಜೀ, ಉಪ ಮುಖ್ಯಮಂತ್ರಿ ಶ್ರೀ ಕೃಷ್ಣ ಚೌಟಾಲಾ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಸಿ.ಆರ್. ಪಾಟೀಲ್, ಸುಜುಕಿ ಮೋಟಾರ್ ಕಾರ್ಪೊರೇಷನ್ ನ ಹಿರಿಯ ಅಧಿಕಾರಿಗಳೇ, ಭಾರತದಲ್ಲಿನ ಜಪಾನ್ ರಾಯಭಾರಿಯವರೇ, ಮಾರುತಿ-ಸುಜುಕಿಯ ಹಿರಿಯ ಅಧಿಕಾರಿಗಳೇ, ಇತರ ಎಲ್ಲ ಗಣ್ಯರು, ಮಹಿಳೆಯರು ಮತ್ತು ಮಹನೀಯರೇ!

ಆರಂಭದಲ್ಲಿ, ನಾನು ಸುಜುಕಿ ಮತ್ತು ಸುಜುಕಿ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಅಭಿನಂದಿಸಲು ಬಯಸುತ್ತೇನೆ.

ಭಾರತ ಮತ್ತು ಭಾರತದ ಜನರೊಂದಿಗೆ ಸುಜುಕಿ ಕುಟುಂಬದ  ಸಂಬಂಧವು ಈಗ 40 ವರ್ಷಗಳಷ್ಟು ಹಳೆಯದಾಗಿದೆ. ಇಂದು, ಗುಜರಾತ್ ನಲ್ಲಿ ಎಲೆಕ್ಟ್ರಿಕ್ ವಾಹನಗಳ  ಬ್ಯಾಟರಿಗಳನ್ನು  ಉತ್ಪಾದಿಸುವ  ಮಹತ್ವಾಕಾಂಕ್ಷೆಯ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದ್ದು, ಹರಿಯಾಣದಲ್ಲಿ ಹೊಸ ಕಾರು ಉತ್ಪಾದನಾ ಸೌಲಭ್ಯವನ್ನು ಸಹ ಪ್ರಾರಂಭಿಸಲಾಗುತ್ತಿದೆ.

ಈ ವಿಸ್ತರಣೆಯು ಸುಜುಕಿಗೆ ಉತ್ತಮ ಭವಿಷ್ಯದ ಸಾಮರ್ಥ್ಯಕ್ಕೆ ತಳಹದಿಯನ್ನು ರೂಪಿಸುತ್ತದೆ ಎಂದು ನಾನು ನಂಬುತ್ತೇನೆ. ನಾನು ಸುಜುಕಿ ಮೋಟಾರ್ಸ್ ಗೆ ಮತ್ತು ಈ ವಿಶಾಲ ಕುಟುಂಬದ ಎಲ್ಲಾ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿ, ನಾನು ಶ್ರೀ ಒಸಾಮು ಸುಜುಕಿ ಮತ್ತು ಶ್ರೀ ತೋಶಿಹಿರೋ ಸುಜುಕಿ ಅವರನ್ನು ಅಭಿನಂದಿಸಲು ಬಯಸುತ್ತೇನೆ. ನೀವು ನನ್ನನ್ನು ಭೇಟಿಯಾದಾಗಲೆಲ್ಲಾ, ನೀವು ಭಾರತದಲ್ಲಿ ಸುಜುಕಿಯ ಹೊಸ ದೃಷ್ಟಿಕೋನವನ್ನು, ಚಿಂತನೆಯನ್ನು ಪ್ರಸ್ತುತಪಡಿಸುತ್ತೀರಿ. ಈ ವರ್ಷದ ಮೇ ತಿಂಗಳಲ್ಲಿ ನಾನು ಶ್ರೀ ಒಸಾಮು ಸುಜುಕಿ ಅವರನ್ನು ಭೇಟಿಯಾಗಿದ್ದೆ  ಮತ್ತು ಅವರು ಭಾರತದಲ್ಲಿ ಸುಜುಕಿಯ 40 ವರ್ಷಗಳ ಸಮಾರಂಭದಲ್ಲಿ ಭಾಗವಹಿಸಲು ನನ್ನನ್ನು ಕೋರಿದರು. ಇಂತಹ ಭವಿಷ್ಯದ ಉಪಕ್ರಮಗಳಿಗೆ ಸಾಕ್ಷಿಯಾಗುವುದು  ನನಗೆ ಸಂತೋಷದ ಸಂಗತಿಯಾಗಿದೆ.

ಸ್ನೇಹಿತರೇ,

ಮಾರುತಿ-ಸುಜುಕಿಯ ಯಶಸ್ಸು ಭಾರತ-ಜಪಾನ್ ನಡುವಿನ ಬಲವಾದ ಪಾಲುದಾರಿಕೆಯನ್ನು, ಸಹಭಾಗಿತ್ವವನ್ನು  ಸೂಚಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ, ನಮ್ಮ ಎರಡೂ ದೇಶಗಳ ನಡುವಿನ ಸಂಬಂಧಗಳು ಹೊಸ ಎತ್ತರವನ್ನು ತಲುಪಿವೆ. ಇಂದು, ಗುಜರಾತ್-ಮಹಾರಾಷ್ಟ್ರದ ಬುಲೆಟ್ ರೈಲಿನಿಂದ ಹಿಡಿದು ಉತ್ತರ ಪ್ರದೇಶದ ಬನಾರಸ್ ನ ರುದ್ರಾಕ್ಷಿ ಕೇಂದ್ರದವರೆಗಿನ ಅನೇಕ ಅಭಿವೃದ್ಧಿ ಯೋಜನೆಗಳು  ಭಾರತ-ಜಪಾನ್ ಬಾಂಧವ್ಯಕ್ಕೆ  ಉದಾಹರಣೆಗಳಾಗಿವೆ. ಮತ್ತು ಈ ಸ್ನೇಹದ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬ ಭಾರತೀಯರೂ  ನಮ್ಮ ಸ್ನೇಹಿತ, ದಿವಂಗತ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಶಿಂಜೋ ಅಬೆ ಅವರು ಗುಜರಾತಿಗೆ ಬಂದಾಗೆಲ್ಲ ಗುಜರಾತಿನ ಜನರು ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದರು. ಇಂದು ಪ್ರಧಾನ ಮಂತ್ರಿ (ಫುಮಿಯೊ) ಕಿಶಿದಾ ಅವರು ನಮ್ಮ ದೇಶಗಳನ್ನು ಹತ್ತಿರಕ್ಕೆ ತರಲು ಶಿಂಜೊ ಅಬೆ ಅವರ ಪ್ರಯತ್ನಗಳನ್ನು ಮುಂದುವರಿಸುತ್ತಿದ್ದಾರೆ. ಪ್ರಧಾನಿ ಕಿಶಿದಾ ಅವರ ವೀಡಿಯೊ ಸಂದೇಶವನ್ನು ಸಹ ನಾವು ಈಗಷ್ಟೇ ಕೇಳಿದ್ದೇವೆ. ಭಾರತದ ಪರವಾಗಿ ಪ್ರಧಾನಮಂತ್ರಿ ಕಿಶಿದಾ ಮತ್ತು ಜಪಾನಿನ ಎಲ್ಲ ನಾಗರಿಕರಿಗೂ ನಾನು ಶುಭ ಕೋರುತ್ತೇನೆ.

ಸ್ನೇಹಿತರೇ,

ದೇಶದ ಕೈಗಾರಿಕಾ ಅಭಿವೃದ್ಧಿ ಮತ್ತು 'ಮೇಕ್ ಇನ್ ಇಂಡಿಯಾ'ಕ್ಕೆ ನಿರಂತರವಾಗಿ ಪ್ರಚೋದನೆ ನೀಡುತ್ತಿರುವ ಗುಜರಾತ್ ಮತ್ತು ಹರಿಯಾಣದ ಜನರಿಗೆ ನನ್ನ ಶುಭ ಹಾರೈಕೆಗಳನ್ನು ತಿಳಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಈ ಎರಡೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಮತ್ತು ಕೈಗಾರಿಕಾ ಆಧಾರಿತ ನೀತಿಗಳು ಮತ್ತು 'ಸುಗಮ ವ್ಯಾಪಾರೋದ್ಯಮ'ದ ಪ್ರಯತ್ನಗಳು ರಾಜ್ಯಗಳ ಕೋಟ್ಯಂತರ ಜನರಿಗೆ ಅದರಲ್ಲೂ  ವಿಶೇಷವಾಗಿ ಯುವಜನರಿಗೆ ಬಹಳ ಪ್ರಯೋಜನಕಾರಿಯಾಗಿವೆ.

ಸ್ನೇಹಿತರೇ,

ಈ ವಿಶೇಷ ಕಾರ್ಯಕ್ರಮದಲ್ಲಿ , ನನಗೆ ಬಹಳ ಹಳೆಯ ಯಾವುದೋ ಒಂದು ವಿಷಯ ನೆನಪಾಗುತ್ತದೆ. ಮತ್ತು ಅದು ಸಹಜವಾದದ್ದು ಕೂಡಾ. ಸುಮಾರು 13 ವರ್ಷಗಳ ಹಿಂದೆ ಸುಜುಕಿ ಕಂಪನಿಯು ತನ್ನ ಉತ್ಪಾದನಾ ಘಟಕವನ್ನು ನಿರ್ಮಿಸಲು ಗುಜರಾತ್ ಗೆ ಬಂದಾಗ ನನಗೆ ನೆನಪಿದೆ. ಆ ಸಮಯದಲ್ಲಿ, ನಾನು ಹೇಳಿದೆ - 'ನಮ್ಮ ಮಾರುತಿ ಸ್ನೇಹಿತರು ಗುಜರಾತಿನ ನೀರನ್ನು ಕುಡಿಯುವಾಗ, ಅಭಿವೃದ್ಧಿಯ ಪರಿಪೂರ್ಣ ಮಾದರಿ ಎಲ್ಲಿದೆ ಎಂಬುದನ್ನು  ಅವರು ತಿಳಿದುಕೊಳ್ಳುತ್ತಾರೆ'. ಇಂದು, ಗುಜರಾತ್ ಸುಜುಕಿಗೆ ನೀಡಿದ ಭರವಸೆಯನ್ನು ಪೂರೈಸಿದೆ ಮತ್ತು ಸುಜುಕಿ ಕೂಡ ಗುಜರಾತ್ ನ ಬದ್ಧತೆಯನ್ನು ಗೌರವಿಸಿದೆ ಎಂಬುದು ನನಗೆ ಸಂತೋಷ ತಂದಿದೆ. ಇಂದು ಗುಜರಾತ್ ದೇಶದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ.

ಸ್ನೇಹಿತರೇ,

ಇಂದಿನ ಸಂದರ್ಭವು ಹೇಗಿದೆಯೆಂದರೆ, ನಾನು ಗುಜರಾತ್ ಮತ್ತು ಜಪಾನ್ ನಡುವಿನ ನಿಕಟ ಸಂಬಂಧವನ್ನು ಹೆಚ್ಚು ಹೆಚ್ಚು ಚರ್ಚಿಸಿದರೂ, ಅದು ಕಡಿಮೆ ಎಂದೆನಿಸುತ್ತದೆ. ಗುಜರಾತ್ ಮತ್ತು ಜಪಾನ್ ನಡುವಿನ ಸಂಬಂಧವು ರಾಜತಾಂತ್ರಿಕ ವಲಯಗಳನ್ನು ಮೀರಿದೆ.

2009 ರಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆ ಪ್ರಾರಂಭವಾದಾಗ, ಜಪಾನ್ ಸದಾ ಅದರ  ಪಾಲುದಾರ ರಾಷ್ಟ್ರವಾಗಿ ಅದರೊಂದಿಗೆ ಸಂಬಂಧ ಹೊಂದಿರುವುದು ನನ್ನ ನೆನಪಿನಲ್ಲಿದೆ.  ಮತ್ತು ಒಂದು ಕಡೆ ಒಂದು ರಾಜ್ಯ ಮತ್ತು ಇನ್ನೊಂದು ಕಡೆ ಅಭಿವೃದ್ಧಿ ಹೊಂದಿದ ದೇಶವಿದ್ದಾಗ ಮತ್ತು ಎರಡೂ ಪರಸ್ಪರ ಬೆಂಬಲಿಸುತ್ತಿರುವಾಗ ಇದು ಬಹಳ ಅರ್ಥವನ್ನು ನೀಡುತ್ತದೆ.  ಇಂದಿಗೂ, ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಜಪಾನ್ ಪಾಲುದಾರಿಕೆ ಅತ್ಯಂತ ಹೆಚ್ಚಾಗಿದೆ.

ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ  ಆಗಾಗ್ಗೆ ಒಂದು ಮಾತನ್ನು ಹೇಳುತ್ತಿದ್ದೆ- 'ನಾನು ಗುಜರಾತ್ ನಲ್ಲಿ ಮಿನಿ ಜಪಾನ್ ಅನ್ನು ನಿರ್ಮಾಣ ಮಾಡಲು  ಬಯಸುತ್ತೇನೆ' ಎಂಬುದಾಗಿ. ಜಪಾನಿನ ನಮ್ಮ ಅತಿಥಿಗಳಿಗೆ ಗುಜರಾತಿನಲ್ಲಿ ಜಪಾನಿನ ಭಾವನೆ ಇರಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಜಪಾನಿನ ಜನರು ಮತ್ತು ಕಂಪನಿಗಳು ಇಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬಾರದೆಂದು ನಾವು ಪ್ರಯತ್ನಗಳನ್ನು ಮಾಡಿದೆವು.

ನಾವು ಸಣ್ಣ ವಿಷಯಗಳಿಗೆ ಎಷ್ಟು ಗಮನ ಕೊಡುತ್ತಿದ್ದೆವು ಎಂಬುದನ್ನು ನೀವು ಊಹಿಸಬಹುದು. ಜಪಾನಿನ ಜನರಿಗೆ ಗಾಲ್ಫ್ ಆಡದೆ ಬದುಕಲು ಸಾಧ್ಯವಿಲ್ಲ. ಇದನ್ನು  ಹೇಳಿದರೆ ಅನೇಕರು ಬಹುಶಃ ಆಶ್ಚರ್ಯಚಕಿತರಾಗಬಹುದು. ಗಾಲ್ಫ್ ಇಲ್ಲದೆ ಜಪಾನೀಯರನ್ನು ನೀವು ಊಹಿಸಲು ಸಾಧ್ಯವಿಲ್ಲ. ಈಗ ಗುಜರಾತ್ ನ ಗಾಲ್ಫ್ ಲೋಕದಲ್ಲಿ ನಾವು ಮಾಡಬೇಕಾದುದೇನೂ  ಇಲ್ಲ. ಆದ್ದರಿಂದ ನಾನು ಜಪಾನ್ ಅನ್ನು ಇಲ್ಲಿಗೆ ತರಲು ಬಯಸಿದರೆ, ನಾನು ಇಲ್ಲಿ ಗಾಲ್ಫ್ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಬೇಕು. ಇಂದು ಗುಜರಾತ್ ನಲ್ಲಿ ಅನೇಕ ಗಾಲ್ಫ್ ಮೈದಾನಗಳಿವೆ, ಮತ್ತು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜಪಾನೀಯರು ತಮ್ಮ ವಾರಾಂತ್ಯವನ್ನು ಕಳೆಯಲು ಈ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ವಿಶೇಷವಾಗಿ ಜಪಾನಿನ ಪಾಕಪದ್ಧತಿಯನ್ನು ಅಳವಡಿಸಿಕೊಂಡ  ಅನೇಕ ರೆಸ್ಟೋರೆಂಟ್ ಗಳೂ ಇಲ್ಲಿ  ಇವೆ. ನಾವು ಜಪಾನೀ ಆಹಾರದ ಬಗ್ಗೆಯೂ ಕಾಳಜಿ ವಹಿಸಿದ್ದೇವೆ.

ಅನೇಕ ಗುಜರಾತಿಗಳು ಜಪಾನಿನ ಭಾಷೆಯನ್ನು ಕೂಡ ಕಲಿತರು, ಇದರಿಂದಾಗಿ ಜಪಾನಿನ ತಮ್ಮ ಸ್ನೇಹಿತರು ಯಾವುದೇ ಸಮಸ್ಯೆಯನ್ನು ಎದುರಿಸುವಂತಾಗಲಿಲ್ಲ. ಮತ್ತು ಇತ್ತೀಚಿನ ದಿನಗಳಲ್ಲಿ ಗುಜರಾತ್ ನಲ್ಲಿ ಅನೇಕ ಜಪಾನೀ ಭಾಷಾ ತರಗತಿಗಳು ನಡೆಯುತ್ತಿವೆ.

ಸ್ನೇಹಿತರೇ,

ಜಪಾನಿನ ಕುರಿತಾದ ನಮ್ಮ ಪ್ರಯತ್ನಗಳಲ್ಲಿ ನಾವು ಸದಾ ಗಂಬೀರವಾಗಿದ್ದೆವು ಮತ್ತು ಜಪಾನ್ ಬಗ್ಗೆ ನಮಗೆ ವಾತ್ಸಲ್ಯವಿದೆ.  ಇದರ ಪರಿಣಾಮವಾಗಿ, ಸುಜುಕಿ ಸೇರಿದಂತೆ 125 ಕ್ಕೂ ಹೆಚ್ಚು ಜಪಾನಿನ ಕಂಪನಿಗಳು ಗುಜರಾತಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಪಾನಿನ ಕಂಪನಿಗಳು ಇಲ್ಲಿ ಆಟೋಮೊಬೈಲ್ ಗಳಿಂದ ಜೈವಿಕ ಇಂಧನದವರೆಗೆ ವ್ಯಾಪ್ತಿಯನ್ನು ವಿಸ್ತರಿಸುತ್ತಿವೆ. ಜೆಟ್ರೋ ಸ್ಥಾಪಿಸಿದ ಅಹ್ಮದಾಬಾದ್ ಬಿಸಿನೆಸ್ ಸಪೋರ್ಟ್ ಸೆಂಟರ್ ಏಕಕಾಲದಲ್ಲಿ ಅನೇಕ ಕಂಪನಿಗಳಿಗೆ ಪ್ಲಗ್ ಮತ್ತು ಪ್ಲೇ ವರ್ಕ್-ಸ್ಪೇಸ್ ಸೌಲಭ್ಯಗಳನ್ನು ಒದಗಿಸುವ ಅವಕಾಶವನ್ನು ಹೊಂದಿದೆ. ಇಂದು, ಗುಜರಾತ್ ನಲ್ಲಿ ಉತ್ಪಾದನೆಗಾಗಿರುವ ಎರಡು ಜಪಾನ್-ಭಾರತ ಸಂಸ್ಥೆಗಳಿವೆ, ಅವು ಪ್ರತಿ ವರ್ಷ ನೂರಾರು ಯುವಜನರಿಗೆ ತರಬೇತಿ ನೀಡುತ್ತಿವೆ.

ಜಪಾನಿನ ಅನೇಕ ಕಂಪನಿಗಳು ಗುಜರಾತ್ ನ ತಾಂತ್ರಿಕ ವಿಶ್ವವಿದ್ಯಾಲಯಗಳು ಮತ್ತು ಐಟಿಐಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿವೆ. ಅಹ್ಮದಾಬಾದ್ ನಲ್ಲಿ ಝೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿ ಸ್ಥಾಪನೆಯಲ್ಲಿ ಹ್ಯೋಗೊ ಇಂಟರ್ನ್ಯಾಷನಲ್ ಅಸೋಸಿಯೇಷನ್ ನೀಡಿದ ಅಮೂಲ್ಯ ಕೊಡುಗೆಯನ್ನು ಗುಜರಾತ್ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಏಕತಾ ಪ್ರತಿಮೆಯ ಬಳಿ ಇಂತಹ ಪರಿಸರ ಸ್ನೇಹಿ ಉದ್ಯಾನವನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಯುತ್ತಿದೆ. 18-19 ವರ್ಷಗಳ ಹಿಂದೆ ಕೈಜೆನ್ ಸ್ಥಾಪಿಸುವಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಿದ ನಂತರ ಗುಜರಾತ್ ಸಾಕಷ್ಟು ಪ್ರಯೋಜನ ಪಡೆಯಿತು. ಗುಜರಾತ್ ನ ಅಭಿವೃದ್ಧಿಯ ಯಶಸ್ಸಿನ ಹಿಂದೆ ಕೈಜೆನ್ ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸಿದೆ.

ನಾನು ಪ್ರಧಾನ ಮಂತ್ರಿಯಾಗಿ ದೆಹಲಿಗೆ ತೆರಳಿದಾಗ, ಪ್ರಧಾನಮಂತ್ರಿ ಕಾರ್ಯಾಲಯ ಮತ್ತು ಕೇಂದ್ರ ಸರ್ಕಾರದ ಇತರ ಇಲಾಖೆಗಳಲ್ಲಿ ಕೈಜೆನ್ ಅನುಭವಗಳನ್ನು ಕಾರ್ಯಗತಗೊಳಿಸಿದೆ. ಈಗ ಕೈಜೆನ್ ನಿಂದಾಗಿ ದೇಶವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದೆ. ನಾವು ಸರ್ಕಾರದಲ್ಲಿ ಜಪಾನ್-ಪ್ಲಸ್  ಎಂಬ ವಿಶೇಷ ವ್ಯವಸ್ಥೆಯನ್ನು ಕೂಡಾ ಮಾಡಿದ್ದೇವೆ. ಗುಜರಾತ್ ಮತ್ತು ಜಪಾನಿನ ಈ ಹಂಚಿಕೆಯ ಪ್ರಯಾಣವನ್ನು ಅವಿಸ್ಮರಣೀಯವಾಗಿಸಿದ ಜಪಾನಿನ ಅನೇಕ ಹಳೆಯ ಸ್ನೇಹಿತರು ಇಂದು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಮತ್ತೊಮ್ಮೆ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಭಾರತದಲ್ಲಿ ಎಲೆಕ್ಟ್ರಿಕ್ (ವಿದ್ಯುತ್ ಚಾಲಿತ)  ವಾಹನ ಮಾರುಕಟ್ಟೆಯು ಬೆಳೆಯುತ್ತಿರುವ ವೇಗವನ್ನು ಕೆಲವು ವರ್ಷಗಳ ಹಿಂದೆ ಯಾರಿಗೂ ಊಹಿಸುವುದಕ್ಕೂ ಸಾಧ್ಯವಿರಲಿಲ್ಲ. ಎಲೆಕ್ಟ್ರಿಕ್ ವಾಹನಗಳ ಒಂದು ಉತ್ತಮ ಲಕ್ಷಣವೆಂದರೆ ಅವು ಮೌನವಾಗಿರುತ್ತವೆ. ಅದು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳಾಗಿರಲಿ, ಅವು ಯಾವುದೇ ಶಬ್ದವನ್ನು ಮಾಡುವುದಿಲ್ಲ. ಈ ಮೌನವು ಅದರ ಎಂಜಿನಿಯರಿಂಗ್ ಬಗ್ಗೆ ಮಾತ್ರವಲ್ಲ, ಇದು ದೇಶದಲ್ಲಿ ಒಂದು ಮೌನ ಕ್ರಾಂತಿಯ ಆರಂಭವೂ ಆಗಿದೆ. ಇಂದು ಜನರು ಇವಿಯನ್ನು ಹೆಚ್ಚುವರಿ ವಾಹನವಾಗಿ ಪರಿಗಣಿಸುತ್ತಿಲ್ಲ, ಆದರೆ ಪ್ರಮುಖ ಸಾಧನವಾಗಿ ಪರಿಗಣಿಸುತ್ತಿದ್ದಾರೆ.

 

ಕಳೆದ ಎಂಟು ವರ್ಷಗಳಿಂದ ದೇಶವು ಈ ಬದಲಾವಣೆಗೆ ಭೂಮಿಯನ್ನು ಸಿದ್ಧಪಡಿಸುತ್ತಿತ್ತು. ಇಂದು, ನಾವು ಎಲೆಕ್ಟ್ರಿಕ್ ವೆಹಿಕಲ್ (ವಿದ್ಯುತ್ ಚಾಲಿತ ವಾಹನ)  ಪರಿಸರ ವ್ಯವಸ್ಥೆಯಲ್ಲಿ ಪೂರೈಕೆ ಮತ್ತು ಬೇಡಿಕೆ ಎರಡರ ಬಗ್ಗೆಯೂ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದ್ದೇವೆ. ವಿದ್ಯುತ್ ಚಾಲಿತ ವಾಹನಗಳ ಖರೀದಿದಾರರಿಗೆ ಸರ್ಕಾರವು ವಿವಿಧ ಪ್ರೋತ್ಸಾಹಕಗಳನ್ನು ನೀಡುತ್ತಿದೆ, ಇದರಿಂದ ಬೇಡಿಕೆ ಹೆಚ್ಚಾಗುತ್ತದೆ. ಆದಾಯ ತೆರಿಗೆ ವಿನಾಯಿತಿಯಿಂದ ಹಿಡಿದು ಸುಲಭದಲ್ಲಿ  ಸಾಲ ಸೌಲಭ್ಯ ಒದಗಿಸುವವರೆಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಅಂತೆಯೇ, ಮೋಟಾರು ವಾಹನ  ಮತ್ತು ಆಟೋ ಘಟಕಗಳಲ್ಲಿ ಪಿಎಲ್ಐ ಯೋಜನೆಯ ಮೂಲಕ ಪೂರೈಕೆಯನ್ನು ಹೆಚ್ಚಿಸಲು ತ್ವರಿತ ಪ್ರಯತ್ನಗಳು ನಡೆಯುತ್ತಿವೆ. ವಿದ್ಯುತ್ ಚಾಲಿತ ವಾಹನಗಳ ಸಂಪೂರ್ಣ ಪರಿಸರ ವ್ಯವಸ್ಥೆಗೆ ವೇಗ ದೊರಕಿಸಿಕೊಡಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಪಿಎಲ್ಐ ಯೋಜನೆಯ ಮೂಲಕ ಬ್ಯಾಟರಿ ಉತ್ಪಾದನಾ ಘಟಕಗಳಿಗೆ  ಸಾಕಷ್ಟು ಉತ್ತೇಜನ ದೊರೆಯುತ್ತಿದೆ.

ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯವನ್ನು ಸಿದ್ಧಪಡಿಸಲು ದೇಶವು ಹಲವಾರು ನೀತಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಬ್ಯಾಟರಿ ವಿನಿಮಯ ನೀತಿಯನ್ನು 2022 ರ ಬಜೆಟಿನಲ್ಲಿ ಅಳವಡಿಸಲಾಗಿದೆ. ತಂತ್ರಜ್ಞಾನ ಹಂಚಿಕೆಯಂತಹ ನೀತಿಗಳಲ್ಲಿ ಹೊಸ ಆರಂಭ ಕಂಡುಬಂದಿದೆ. ಇವಿ ವಲಯವು ಪೂರೈಕೆ, ಬೇಡಿಕೆ ಮತ್ತು ಪರಿಸರ ವ್ಯವಸ್ಥೆಯ ಶಕ್ತಿಯೊಂದಿಗೆ ಮುಂದೆ ಸಾಗಲು ಸಜ್ಜಾಗಿದೆ. ಅಂದರೆ, ಸದ್ಯೋಭವಿಷ್ಯದಲ್ಲಿ ಈ ಮೌನ ಕ್ರಾಂತಿಯು ಒಂದು ದೊಡ್ಡ ಬದಲಾವಣೆಯನ್ನು ತರಲು ಸಿದ್ಧವಾಗಿದೆ.

ಸ್ನೇಹಿತರೇ,

ಇಂದು, ನಾವು ಇವಿಯಂತಹ ವಿಷಯಗಳ ಬಗ್ಗೆ ಮಾತನಾಡುವಾಗ, ನಮ್ಮ ದೇಶದ ಹವಾಮಾನ ಬದ್ಧತೆ ಮತ್ತು ಅದರ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ನಮಗೆ ಬಹಳ ಮುಖ್ಯ. 2030ರ ವೇಳೆಗೆ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸುವುದಾಗಿ ಭಾರತ ಸಿಒಪಿ-26ರಲ್ಲಿ ಘೋಷಿಸಿದೆ. ನಾವು 2070 ಕ್ಕೆ 'ನೆಟ್ ಝೀರೋ' ಗುರಿಯನ್ನು ನಿಗದಿಪಡಿಸಿದ್ದೇವೆ. ಇದಕ್ಕಾಗಿ, ಇವಿ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಇಂಧನ ದಾಸ್ತಾನು ವ್ಯವಸ್ಥೆಯಂತಹ  ಗ್ರಿಡ್ ಸ್ಕೇಲ್ ಬ್ಯಾಟರಿ ವ್ಯವಸ್ಥೆಗಳನ್ನು ಮೂಲಸೌಕರ್ಯಗಳ ಪಟ್ಟಿಯಲ್ಲಿ ಸೇರಿಸಲು ನಾವು ತಯಾರಿ ನಡೆಸುತ್ತಿದ್ದೇವೆ. ಅದೇ ಸಮಯದಲ್ಲಿ, ನಾವು ಜೈವಿಕ ಅನಿಲ ಮತ್ತು ಫ್ಲೆಕ್ಸ್ ಇಂಧನದಂತಹ ಪರ್ಯಾಯಗಳತ್ತ ಸಾಗಬೇಕಾಗಿದೆ.

ಮಾರುತಿ-ಸುಜುಕಿಯು  ಜೈವಿಕ ಇಂಧನ, ಎಥೆನಾಲ್ ಮಿಶ್ರಣ ಮತ್ತು ಹೈಬ್ರಿಡ್ ಇವಿಯಂತಹ ವಿವಿಧ ಆಯ್ಕೆಗಳಲ್ಲಿ ಕೆಲಸ ಮಾಡುತ್ತಿರುವುದು ನನಗೆ ಸಂತೋಷ ತಂದಿದೆ.  ಜೈವಿಕ-ಮೀಥೇನ್ ಅನಿಲವನ್ನು ಒತ್ತಡಕ್ಕೊಳಪಡಿಸಿ ಸಂಕುಚಿತಗೊಳಿಸುವ  ಸಾಧ್ಯತೆಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ನಾನು ಸುಜುಕಿಗೆ ಸಲಹೆ ಮಾಡುತ್ತೇನೆ ಅಂದರೆ, ಸಿಬಿಜಿ. ಭಾರತದ ಇತರ ಕಂಪನಿಗಳು ಸಹ ಈ ದಿಕ್ಕಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿವೆ. ಪರಸ್ಪರ ಕಲಿಕೆಗೆ ಆರೋಗ್ಯಕರ ಸ್ಪರ್ಧೆ ಮತ್ತು ಉತ್ತಮ ವಾತಾವರಣವನ್ನು ಹೊಂದಲು ನಾನು ಬಯಸುತ್ತೇನೆ. ಇದು ದೇಶ ಮತ್ತು ವ್ಯವಹಾರ ಎರಡಕ್ಕೂ ಪ್ರಯೋಜನವನ್ನು ಒದಗಿಸುತ್ತದೆ.

ಸ್ನೇಹಿತರೇ,

ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅದರ ಇಂಧನ ಅಗತ್ಯಗಳಿಗೆ ಸಂಬಂಧಿಸಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಇಂದು ಹೆಚ್ಚಿನ ಪ್ರಮಾಣದ ಇಂಧನ ಆಮದು ಸಾರಿಗೆಗೆ ಸಂಬಂಧಿಸಿದ್ದಾಗಿದೆ ಎಂಬುದು ನಮಗೆ ತಿಳಿದಿದೆ. ಆದ್ದರಿಂದ, ಈ ದಿಕ್ಕಿನಲ್ಲಿ ಅನ್ವೇಷಣೆ  ಮತ್ತು ಪ್ರಯತ್ನಗಳು ನಮ್ಮ ಆದ್ಯತೆಯಾಗಿರಬೇಕು.

ನಿಮ್ಮ ಸಹಕಾರದೊಂದಿಗೆ  ಮತ್ತು ಆಟೋ ವಲಯದ ಎಲ್ಲಾ ಸಹೋದ್ಯೋಗಿಗಳೊಂದಿಗೆ ದೇಶವು ಖಂಡಿತವಾಗಿಯೂ ಈ ಗುರಿಯನ್ನು ಪೂರೈಸುತ್ತದೆ ಎಂಬುದು ನನಗೆ ಖಾತ್ರಿಯಿದೆ. ಇಂದು ನಮ್ಮ ಎಕ್ಸ್ ಪ್ರೆಸ್ ವೇಗಳಲ್ಲಿ ಸ್ಪಷ್ಟವಾಗಿ ಗೋಚರಿಸುವ ಅದೇ ವೇಗದಲ್ಲಿ ನಾವು ಬೆಳವಣಿಗೆ ಮತ್ತು ಸಮೃದ್ಧಿಯ ಗುರಿಯನ್ನು ತಲುಪುತ್ತೇವೆ.

ಈ ಮನೋಭಾವ, ಸ್ಪೂರ್ತಿಯೊಂದಿಗೆ ನಾನು ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಸುಜುಕಿ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ. ನಿಮ್ಮ ವಿಸ್ತರಣೆಯ ಕನಸುಗಳಿಗೆ ಉತ್ತೇಜನ ನೀಡುವಲ್ಲಿ ರಾಜ್ಯ ಅಥವಾ ಕೇಂದ್ರ ಸರ್ಕಾರವು ಎಲ್ಲಿಯೂ ಹಿಂದೆ ಬೀಳುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
In 3-year PLI push, phones, pharma, food dominate new jobs creation

Media Coverage

In 3-year PLI push, phones, pharma, food dominate new jobs creation
NM on the go

Nm on the go

Always be the first to hear from the PM. Get the App Now!
...
Prime Minister receives Foreign Minister of Kuwait H.E. Abdullah Ali Al-Yahya
December 04, 2024

The Prime Minister Shri Narendra Modi today received Foreign Minister of Kuwait H.E. Abdullah Ali Al-Yahya.

In a post on X, Shri Modi Said:

“Glad to receive Foreign Minister of Kuwait H.E. Abdullah Ali Al-Yahya. I thank the Kuwaiti leadership for the welfare of the Indian nationals. India is committed to advance our deep-rooted and historical ties for the benefit of our people and the region.”