ಗೌರವಾನ್ವಿತ ಅಧ್ಯಕ್ಷರೆ,
ನನಗೆ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಮಕರಿಯೋಸ್ III' ಪುರಸ್ಕಾರ ನೀಡಿದ್ದಕ್ಕಾಗಿ ನಾನು ನಿಮಗೆ, ನಿಮ್ಮ ಸರ್ಕಾರಕ್ಕೆ ಮತ್ತು ಸೈಪ್ರಸ್ ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಇದು ನರೇಂದ್ರ ಮೋದಿ ಅವರಿಗೆ ಮಾತ್ರ ಸಲ್ಲುವ ಗೌರವವಲ್ಲ. ಇದು 1.4 ಶತಕೋಟಿ ಭಾರತೀಯರಿಗೆ ಸಲ್ಲುವ ಗೌರವವಾಗಿದೆ. ಇದು ಅವರ ಶಕ್ತಿ ಮತ್ತು ಆಕಾಂಕ್ಷೆಗಳಿಗೆ ಸಿಕ್ಕ ಮನ್ನಣೆಯಾಗಿದೆ. ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು "ವಸುಧೈವ ಕುಟುಂಬಕಂ" ತತ್ವಶಾಸ್ತ್ರಕ್ಕೆ, ಅಂದರೆ "ಇಡೀ ವಿಶ್ವವೇ ಒಂದು ಕುಟುಂಬ"ಕ್ಕೆ ಸಂದ ಮನ್ನಣೆಯಾಗಿದೆ.
ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳಿಗೆ, ನಮ್ಮ ಹಂಚಿಕೆಯ ಮೌಲ್ಯಗಳಿಗೆ ಮತ್ತು ನಮ್ಮ ಪರಸ್ಪರ ತಿಳಿವಳಿಕೆಗೆ ನಾನು ಈ ಗೌರವ ಪುರಸ್ಕಾರವನ್ನು ಸಮರ್ಪಿಸುತ್ತೇನೆ.
ನಾನು ಈ ಪ್ರಶಸ್ತಿಯನ್ನು ಎಲ್ಲಾ ಭಾರತೀಯರ ಪರವಾಗಿ ವಿನಮ್ರವಾಗಿ ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ.
ಈ ಪ್ರಶಸ್ತಿಯು ಶಾಂತಿ, ಭದ್ರತೆ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ನಮ್ಮ ಜನರ ಸಮೃದ್ಧಿಗೆ ನಾವು ಇಟ್ಟಿರುವ ಅಚಲ ಬದ್ಧತೆಯ ಸಂಕೇತವಾಗಿದೆ.

ಸನ್ಮಾನ್ಯರೆ,
ಭಾರತ ಮತ್ತು ಸೈಪ್ರಸ್ ನಡುವಿನ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯಾಗಿ ನಾನು ಈ ಗೌರವವನ್ನು ಸ್ವೀಕರಿಸುತ್ತೇನೆ.
ನಮ್ಮ ಪಾಲುದಾರಿಕೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸ ನನಗಿದೆ. ಒಟ್ಟಾಗಿ, ನಾವು ನಮ್ಮ ದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದಲ್ಲದೆ, ಜಾಗತಿಕ ಶಾಂತಿ ಮತ್ತು ಭದ್ರತೆಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ.
ಮತ್ತೊಮ್ಮೆ, ಈ ಗೌರವ ನೀಡಿದ್ದಕ್ಕಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.
ತುಂಬು ಧನ್ಯವಾದಗಳು.


