ಭಾರತದಲ್ಲಿ, ಸಂಪ್ರದಾಯವು ನಾವೀನ್ಯತೆಯನ್ನು ಭೇಟಿ ಮಾಡುತ್ತದೆ, ಆಧ್ಯಾತ್ಮಿಕತೆಯು ವಿಜ್ಞಾನವನ್ನು ಭೇಟಿ ಮಾಡುತ್ತದೆ ಮತ್ತು ಕುತೂಹಲವು ಸೃಜನಶೀಲತೆಯನ್ನು ಭೇಟಿ ಮಾಡುತ್ತದೆ; ಶತಮಾನಗಳಿಂದ, ಭಾರತೀಯರು ಆಕಾಶವನ್ನು ವೀಕ್ಷಿಸುತ್ತಿದ್ದಾರೆ ಮತ್ತು ದೊಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ: ಪ್ರಧಾನಮಂತ್ರಿ
ನಾವು ವಿಶ್ವದ ಅತಿ ಎತ್ತರದ, ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿ ಖಗೋಳ ವೀಕ್ಷಣಾಲಯಗಳಲ್ಲಿ ಒಂದನ್ನು ಲಡಾಖ್‌ನಲ್ಲಿ ನಿಯೋಜಿಸಿದ್ದೇವೆ, ಇದು ನಕ್ಷತ್ರಗಳೊಂದಿಗೆ ಕೈಕುಲುಕುವಷ್ಟು ಹತ್ತಿರದಲ್ಲಿದೆ: ಪ್ರಧಾನಮಂತ್ರಿ
ಭಾರತವು ವೈಜ್ಞಾನಿಕ ಕುತೂಹಲವನ್ನು ಪೋಷಿಸಲು ಮತ್ತು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಕಟಿಬದ್ಧವಾಗಿದೆ: ಪ್ರಧಾನಮಂತ್ರಿ
ನಾವು ವಿಶ್ವವನ್ನು ಅನ್ವೇಷಿಸುವಾಗ, ಬಾಹ್ಯಾಕಾಶ ವಿಜ್ಞಾನವು ಹೇಗೆ ಭೂಮಿಯ ಮೇಲಿನ ಜನರ ಜೀವನವನ್ನು ಇನ್ನಷ್ಟು ಸುಧಾರಿಸಬಲ್ಲುದು ಎಂಬುದನ್ನು ನಾವು ಕೇಳಬೇಕು: ಪ್ರಧಾನಮಂತ್ರಿ
ಭಾರತವು ಅಂತಾರಾಷ್ಟ್ರೀಯ ಸಹಯೋಗದ ಶಕ್ತಿಯನ್ನು ನಂಬುತ್ತದೆ ಮತ್ತು ಈ ಒಲಿಂಪಿಯಾಡ್ ಆ ಮನೋಭಾವವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ

ಮಾನ್ಯ ಅತಿಥಿಗಳೇ, ಗಣ್ಯ ಪ್ರತಿನಿಧಿಗಳೇ, ಶಿಕ್ಷಕರು, ಮಾರ್ಗದರ್ಶಕರು ಮತ್ತು ನನ್ನ ಪ್ರೀತಿಯ ಯುವ ಮಿತ್ರರೇ, ನಮಸ್ಕಾರ!

64 ದೇಶಗಳಿಂದ ಆಗಮಿಸಿರುವ 300 ಕ್ಕೂ ಹೆಚ್ಚು ತರುಣ ಪ್ರತಿಭೆಗಳ ಜೊತೆ ಸಂವಾದ ನಡೆಸಲು ನನಗೆ ಸಂತೋಷವಾಗುತ್ತಿದೆ. 18ನೇ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಒಲಿಂಪಿಯಾಡ್‌ ಗೆ ನಿಮ್ಮೆಲ್ಲರನ್ನೂ ಭಾರತಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಭಾರತದಲ್ಲಿ ಸಂಪ್ರದಾಯ ಮತ್ತು ಹೊಸತನ, ಆಧ್ಯಾತ್ಮಿಕತೆ ಮತ್ತು ವಿಜ್ಞಾನ, ಕುತೂಹಲ ಮತ್ತು ಸೃಜನಶೀಲತೆ ಒಂದಾಗುತ್ತವೆ. ಶತಮಾನಗಳಿಂದಲೂ ಭಾರತೀಯರು ಆಕಾಶವನ್ನು ವೀಕ್ಷಿಸುತ್ತಾ, ಅನೇಕ ದೊಡ್ಡ ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದಾರೆ. ಉದಾಹರಣೆಗೆ, 5ನೇ ಶತಮಾನದಲ್ಲಿ, ಆರ್ಯಭಟ ಸೊನ್ನೆಯನ್ನು ಕಂಡುಹಿಡಿದರು. ಭೂಮಿಯು ತನ್ನದೇ ಅಕ್ಷದ ಮೇಲೆ ಸುತ್ತುತ್ತದೆ ಎಂದು ಹೇಳಿದ ಮೊದಲ ವ್ಯಕ್ತಿ ಕೂಡ ಇವರೇ. ಅಕ್ಷರಶಃ, ಅವರು ಸೊನ್ನೆಯಿಂದಲೇ ಇತಿಹಾಸ ಸೃಷ್ಟಿಸಿದರು!

ಇಂದು, ಲಡಾಖ್‌ ನಲ್ಲಿ ವಿಶ್ವದ ಅತಿ ಎತ್ತರದ ಖಗೋಳ ವೀಕ್ಷಣಾಲಯವನ್ನು ನಾವು ಹೊಂದಿದ್ದೇವೆ. ಸಮುದ್ರ ಮಟ್ಟದಿಂದ 4,500 ಮೀಟರ್ ಎತ್ತರದಲ್ಲಿರುವ ಇದು, ನಕ್ಷತ್ರಗಳ ಜೊತೆ ಕೈಕುಲುಕುವಷ್ಟು ಹತ್ತಿರದಲ್ಲಿದೆ! ಪುಣೆಯಲ್ಲಿರುವ ನಮ್ಮ ದೈತ್ಯ ಮೀಟರ್‌ ವೇವ್ ರೇಡಿಯೋ ಟೆಲಿಸ್ಕೋಪ್ ವಿಶ್ವದ ಅತ್ಯಂತ ಸೂಕ್ಷ್ಮ ರೇಡಿಯೋ ದೂರದರ್ಶಕಗಳಲ್ಲಿ ಒಂದಾಗಿದೆ. ಇದು ಪಲ್ಸರ್‌ ಗಳು, ಕ್ವೇಸರ್‌ ಗಳು ಮತ್ತು ಗ್ಯಾಲಕ್ಸಿಗಳ ರಹಸ್ಯಗಳನ್ನು ಅರಿಯಲು ನಮಗೆ ಸಹಾಯ ಮಾಡುತ್ತಿದೆ.

ಸ್ಕವೇರ್ ಕಿಲೋಮೀಟರ್ ಅರೇ ಮತ್ತು ಲಿಗೋ-ಇಂಡಿಯಾ (LIGO-India) ದಂತಹ ಜಾಗತಿಕ ಮೆಗಾ-ವಿಜ್ಞಾನ ಯೋಜನೆಗಳಿಗೆ ಭಾರತ ಹೆಮ್ಮೆಯಿಂದ ಕೊಡುಗೆ ನೀಡುತ್ತಿದೆ. ಎರಡು ವರ್ಷಗಳ ಹಿಂದೆ, ನಮ್ಮ ಚಂದ್ರಯಾನ-3 ಇತಿಹಾಸ ನಿರ್ಮಿಸಿತು. ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದ ಮೊದಲ ದೇಶ ನಾವಾದೆವು. ನಾವು ಆದಿತ್ಯ - ಎಲ್‌1 ಸೌರ ವೀಕ್ಷಣಾಲಯದ ಮೂಲಕ ಸೂರ್ಯನ ಮೇಲೂ ನಮ್ಮ ದೃಷ್ಟಿ ನೆಟ್ಟಿದ್ದೇವೆ. ಇದು ಸೌರ ಜ್ವಾಲೆಗಳು, ಸೌರ ಬಿರುಗಾಳಿಗಳು ಮತ್ತು ಸೂರ್ಯನ ಬದಲಾಗುವ ಮನಸ್ಥಿತಿಯ ಮೇಲೆ ಕಣ್ಣಿಡುತ್ತದೆ! ಕಳೆದ ತಿಂಗಳು, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಮ್ಮ ಐತಿಹಾಸಿಕ ಮಿಷನ್ ಅನ್ನು ಪೂರ್ಣಗೊಳಿಸಿದರು. ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ಕ್ಷಣ, ಮತ್ತು ನಿಮ್ಮಂತಹ ಯುವ ಅನ್ವೇಷಕರಿಗೆ ಸ್ಫೂರ್ತಿಯಾಗಿದೆ.

ಸ್ನೇಹಿತರೇ,

ವೈಜ್ಞಾನಿಕ ಕುತೂಹಲವನ್ನು ಪೋಷಿಸಲು ಮತ್ತು ಯುವ ಮನಸ್ಸುಗಳನ್ನು ಸಬಲೀಕರಣಗೊಳಿಸಲು ಭಾರತವು ದೃಢವಾಗಿ ಬದ್ಧವಾಗಿದೆ. ಅಟಲ್ ಟಿಂಕರಿಂಗ್ ಲ್ಯಾಬ್‌ ಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಯ ಮೂಲಕ STEM (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ) ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಇದು ಕಲಿಕೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಸೃಷ್ಟಿಸುತ್ತಿದೆ. ಜ್ಞಾನ ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಲು, ನಾವು 'ಒಂದು ರಾಷ್ಟ್ರ, ಒಂದು ಚಂದಾದಾರಿಕೆ' ಯೋಜನೆಯನ್ನು ಆರಂಭಿಸಿದ್ದೇವೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಉಚಿತವಾಗಿ ಬಳಸಬಹುದು. STEM ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಶತಕೋಟಿ ಡಾಲರ್‌ ಗಳಷ್ಟು ಹಣವನ್ನು ಹೂಡಿಕೆ ಮಾಡಲಾಗುತ್ತಿದೆ. ನಿಮ್ಮಂತಹ ಯುವ ಅನ್ವೇಷಕರನ್ನು ಭಾರತಕ್ಕೆ ಬಂದು ಅಧ್ಯಯನ, ಸಂಶೋಧನೆ ಮತ್ತು ಸಹಯೋಗ ಮಾಡಲು ನಾವು ಆಹ್ವಾನಿಸುತ್ತೇವೆ. ಯಾರಿಗೆ ಗೊತ್ತು?! ಮುಂದಿನ ಮಹತ್ವದ ವೈಜ್ಞಾನಿಕ ಆವಿಷ್ಕಾರವು ಇಂತಹ ಪಾಲುದಾರಿಕೆಯಿಂದಲೇ ಹುಟ್ಟಬಹುದು!

ಸ್ನೇಹಿತರೇ,

ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ, ನಾವು ಮಾನವಕುಲದ ಕಲ್ಯಾಣಕ್ಕಾಗಿ ಹೇಗೆ ಶ್ರಮಿಸಬಹುದು ಎಂಬುದರ ಬಗ್ಗೆ ಯೋಚಿಸಿ ಎಂದು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ನಾವು ಬ್ರಹ್ಮಾಂಡವನ್ನು ಅನ್ವೇಷಿಸುವಾಗ, ಬಾಹ್ಯಾಕಾಶ ವಿಜ್ಞಾನವು ಭೂಮಿಯ ಮೇಲಿನ ಜನರ ಜೀವನವನ್ನು ಇನ್ನಷ್ಟು ಹೇಗೆ ಸುಧಾರಿಸಬಹುದು ಎಂಬುದನ್ನೂ ನಾವು ಕೇಳಿಕೊಳ್ಳಬೇಕು. ರೈತರಿಗೆ ಇನ್ನಷ್ಟು ಉತ್ತಮ ಹವಾಮಾನ ಮುನ್ಸೂಚನೆಗಳನ್ನು ಹೇಗೆ ನೀಡಬಹುದು? ನೈಸರ್ಗಿಕ ವಿಕೋಪಗಳನ್ನು ಊಹಿಸಬಹುದೇ? ಕಾಡ್ಗಿಚ್ಚು ಮತ್ತು ಕರಗುತ್ತಿರುವ ಹಿಮನದಿಗಳನ್ನು ನಾವು ನಿಗಾವಹಿಸಬಹುದೇ? ದೂರದ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ನಾವು ನಿರ್ಮಿಸಬಹುದೇ? ವಿಜ್ಞಾನದ ಭವಿಷ್ಯ ನಿಮ್ಮ ಕೈಯಲ್ಲಿದೆ. ಇದು ಕಲ್ಪನೆ ಮತ್ತು ಮಾನವೀಯತೆಯೊಂದಿಗೆ ನೈಜ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿದೆ. 'ಅಲ್ಲಿ ಏನಿದೆ?' ಎಂದು ಕೇಳಿಕೊಳ್ಳಿ ಮತ್ತು ಅದು 'ಇಲ್ಲಿ ನಮಗೆ ಹೇಗೆ ಸಹಾಯ ಮಾಡುತ್ತದೆ' ಎಂಬುದನ್ನು ಕಂಡುಕೊಳ್ಳಿ.

ಸ್ನೇಹಿತರೇ,

ಭಾರತವು ಅಂತಾರಾಷ್ಟ್ರೀಯ ಸಹಯೋಗದ ಶಕ್ತಿಯನ್ನು ನಂಬುತ್ತದೆ. ಈ ಒಲಿಂಪಿಯಾಡ್ ಆ ಸ್ಪೂರ್ತಿಯನ್ನು ಪ್ರತಿಬಿಂಬಿಸುತ್ತದೆ. ನನಗೆ ತಿಳಿದುಬಂದಂತೆ, ಈ ಬಾರಿಯ ಒಲಿಂಪಿಯಾಡ್ ಇದುವರೆಗಿನ ಅತಿದೊಡ್ಡ ಆವೃತ್ತಿಯಾಗಿದೆ. ಈ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಉನ್ನತ ಗುರಿಯಿಡಿ, ದೊಡ್ಡ ಕನಸು ಕಾಣಿ. ಮತ್ತು ನೆನಪಿಡಿ, ಭಾರತದಲ್ಲಿ, ಆಕಾಶವೇ ನಮ್ಮ ಮಿತಿಯಲ್ಲ, ಅದು ಕೇವಲ ಆರಂಭ ಎಂದು ನಾವು ನಂಬುತ್ತೇವೆ!

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions