ಮಹಾರಾಷ್ಟ್ರದ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ಅವರೇ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಸರ್ಬಾನಂದ ಸೋನೊವಾಲ್ ಅವರೇ, ಶಂತನು ಠಾಕೂರ್ ಅವರೇ ಮತ್ತು ಕೀರ್ತಿವರ್ಧನ್ ಸಿಂಗ್ ಅವರೇ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಅವರೇ ಮತ್ತು ಅಜಿತ್ ಪವಾರ್ ಅವರೇ, ಸಮುದ್ರಯಾನ ಮತ್ತು ಇತರ ಉದ್ಯಮಗಳ ಪ್ರಮುಖರೇ, ಇತರ ಗೌರವಾನ್ವಿತ ಅತಿಥಿಗಳೇ, ಮಹಿಳೆಯರೇ ಮತ್ತು ಮಹನೀಯರೇ.
ಸ್ನೇಹಿತರೇ,
ಜಾಗತಿಕ ಕಡಲಯಾನ ನಾಯಕರ ಸಮಾವೇಶಕ್ಕೆ ನಾನು ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಕೋರುತ್ತೇನೆ. ಈ ಕಾರ್ಯಕ್ರಮವು 2016 ರಲ್ಲಿ ಮುಂಬೈನಲ್ಲಿ ಪ್ರಾರಂಭವಾಯಿತು ಮತ್ತು ಇಂದು ಈ ಸಮಾವೇಶವು ನಿಜವಾದ ಜಾಗತಿಕ ಕಾರ್ಯಕ್ರಮವಾಗಿ ವಿಕಸನಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದಲ್ಲಿ 85ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿರುವುದು ಸ್ವತಃ ಪ್ರಬಲ ಸಂದೇಶವನ್ನು ರವಾನಿಸುತ್ತದೆ. ಹಡಗು ದೈತ್ಯ ಕಂಪನಿಗಳ ಸಿಇಒಗಳಿಂದ ಹಿಡಿದು ನವೋದ್ಯಮಗಳವರೆಗೆ ಮತ್ತು ನೀತಿ ನಿರೂಪಕರಿಂದ ಹೂಡಿಕೆದಾರರವರೆಗೆ ಎಲ್ಲರೂ ಇಂದು ಇಲ್ಲಿ ಉಪಸ್ಥಿತರಿದ್ದಾರೆ. ಸಣ್ಣ ದ್ವೀಪ ರಾಷ್ಟ್ರಗಳ ಪ್ರತಿನಿಧಿಗಳು ಸಹ ಹಾಜರಿದ್ದಾರೆ. ನಿಮ್ಮ ಸಾಮೂಹಿಕ ದೃಷ್ಟಿಕೋನವು ಈ ಶೃಂಗಸಭೆಯ ಸಹಕಾರ ಮತ್ತು ಶಕ್ತಿ ಎರಡನ್ನೂ ಹೆಚ್ಚಿಸಿದೆ.

ಸ್ನೇಹಿತರೇ,
ಕಡಲಯಾನ ವಲಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ. ಕಡಲಯಾ ವಲಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದು ಭಾರತದ ಕಡಲಯಾನ ಸಾಮರ್ಥ್ಯದ ಮೇಲೆ ವಿಶ್ವದ ವಿಶ್ವಾಸ ಹೆಚ್ಚಾಗುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ನಿಮ್ಮ ಉಪಸ್ಥಿತಿಯು ಈ ದೃಷ್ಟಿಕೋನಕ್ಕೆ ನಮ್ಮ ಸಮಾನ ಬದ್ಧತೆಯ ಪ್ರತಿಬಿಂಬವಾಗಿದೆ.
ಸ್ನೇಹಿತರೇ,
21ನೇ ಶತಮಾನದ ಈ ಯುಗದಲ್ಲಿ, ಭಾರತದ ಕಡಲಯಾನ ವಲಯವು ಹೆಚ್ಚಿನ ವೇಗ ಮತ್ತು ಚೈತನ್ಯದಿಂದ ಮುನ್ನಡೆಯುತ್ತಿದೆ. ನಿರ್ದಿಷ್ಟವಾಗಿ, 2025ನೇ ವರ್ಷವು ಭಾರತದ ಕಡಲಯಾನ ಉದ್ಯಮಕ್ಕೆ ಹೆಗ್ಗುರುತಿನ ವರ್ಷವಾಗಿದೆ. ಈ ವರ್ಷದ ಕೆಲವು ಪ್ರಮುಖ ಸಾಧನೆಗಳನ್ನು ನಾನು ಎತ್ತಿ ತೋರಿಸಲು ಬಯಸುತ್ತೇನೆ. ವಿಜಿಂಜಮ್ ಬಂದರಿನಲ್ಲಿ ಭಾರತದ ಮೊದಲ ಆಳ-ಸಮುದ್ರ ಅಂತರರಾಷ್ಟ್ರೀಯ ಸಾಗಣೆ ಕೇಂದ್ರವು ಈಗ ಕಾರ್ಯಾರಂಬ ಮಾಡಿದೆ. ಇತ್ತೀಚೆಗೆ, ವಿಶ್ವದ ಅತಿದೊಡ್ಡ ಕಂಟೈನರ್ ಹಡಗು ಅಲ್ಲಿಗೆ ಆಗಮಿಸಿತು, ಇದು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ಕ್ಷಣವಾಗಿತ್ತು. 2024-25ರಲ್ಲಿ, ಭಾರತದ ಪ್ರಮುಖ ಬಂದರುಗಳು ಇದುವರೆಗಿನ ಅತ್ಯಧಿಕ ಸರಕು ಪ್ರಮಾಣವನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿವೆ. ಇದಲ್ಲದೆ, ಭಾರತೀಯ ಬಂದರು ಮೊದಲ ಬಾರಿಗೆ ಮೆಗಾವ್ಯಾಟ್ ಪ್ರಮಾಣದ ಸ್ಥಳೀಯ ಹಸಿರು ಹೈಡ್ರೋಜನ್ ಸೌಲಭ್ಯವನ್ನು ಪ್ರಾರಂಭಿಸಿದೆ ಮತ್ತು ನಮ್ಮ ಕಾಂಡ್ಲಾ ಬಂದರು ಈ ಸಾಧನೆ ಮಾಡಿದೆ. 'ಜವಾಹರ್ ಲಾಲ್ ನೆಹರು ಬಂದರು ಟ್ರಸ್ಟ್'ನಲ್ಲಿ (ಜೆಎನ್‌ಪಿಟಿ) ಮತ್ತೊಂದು ಪ್ರಮುಖ ಮೈಲುಗಲ್ಲು ಸಾಧಿಸಲಾಗಿದೆ, ಅಲ್ಲಿ ಭಾರತ್ ಮುಂಬೈ ಕಂಟೈನರ್ ಟರ್ಮಿನಲ್‌ನ 2ನೇ ಹಂತವನ್ನು ಉದ್ಘಾಟಿಸಲಾಗಿದೆ. ಇದು ಟರ್ಮಿನಲ್‌ನ ನಿರ್ವಹಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ, ಇದು ಭಾರತದ ಅತಿದೊಡ್ಡ ಕಂಟೈನರ್ ಬಂದರಾಗಿದೆ. ಭಾರತದ ಬಂದರು ಮೂಲಸೌಕರ್ಯದಲ್ಲಿ ಇದುವರೆಗಿನ ಅತಿಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಇದು ಸಾಧ್ಯವಾಗಿದೆ, ತ್ತು ಇದಕ್ಕಾಗಿ ಸಿಂಗಾಪುರದ ಜೊತೆಗಿನ ನಮ್ಮ ಪಾಲುದಾರರಿಗೆ ನನ್ನ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಸ್ನೇಹಿತರೇ,
ಈ ವರ್ಷ, ಭಾರತವು ಕಡಲ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳತ್ತ ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ನಾವು ಒಂದು ಶತಮಾನದಷ್ಟು ಹಳೆಯದಾದ ವಸಾಹತುಶಾಹಿ ಕಡಲಯಾನ ಕಾನೂನುಗಳನ್ನು ರದ್ದುಗೊಳಿಸಿದ್ದೇವೆ ಮತ್ತು ಅವುಗಳ ಸ್ಥಾನದಲ್ಲಿ ಆಧುನಿಕ, ಭವಿಷ್ಯ ಸನ್ನದ್ಧ 21ನೇ ಶತಮಾನದ ಶಾಸನಗಳನ್ನು ಪರಿಚಯಿಸಿದ್ದೇವೆ. ಈ ಹೊಸ ಕಾನೂನುಗಳು 'ರಾಜ್ಯ ಕಡಲಯಾನ ಮಂಡಳಿ'ಗಳಿಗೆ ಅಧಿಕಾರ ಹೆಚ್ಚಿಸಿವೆ. ಸುರಕ್ಷತೆ ಮತ್ತು ಸುಸ್ಥಿರತೆಗೆ ಒತ್ತು ನೀಡುತ್ತವೆ ಮತ್ತು ಬಂದರು ನಿರ್ವಹಣೆಯ ಡಿಜಿಟಲೀಕರಣವನ್ನು ವಿಸ್ತರಿಸುತ್ತವೆ.
ಸ್ನೇಹಿತರೇ,
'ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ'ಯಡಿಯಲ್ಲಿ ನಾವು ಭಾರತೀಯ ಕಡಲಯಾನ ಕಾನೂನುಗಳನ್ನು ಅಂತರರಾಷ್ಟ್ರೀಯ ನಿಮಗಳೊಂದಿಗೆ ಸಮನ್ವಯಗೊಳಿಸಿದ್ದೇವೆ. ಇದು ಸುರಕ್ಷತೆಯ ಭರವಸೆಯನ್ನು ಬಲಪಡಿಸಿದೆ, ವ್ಯವಹಾರವನ್ನು ಸುಲಭಗೊಳಿಸಿದೆ ಮತ್ತು ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಿದೆ. ಈ ಪ್ರಯತ್ನಗಳು ಹೂಡಿಕೆದಾರರು ಮತ್ತು ಎಲ್ಲಾ ಪಾಲುದಾರರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೇ,
ವ್ಯಾಪಾರವನ್ನು ಸುಗಮ ಮತ್ತು ಸುಲಭವಾಗಿಸಲು 'ಕರಾವಳಿ ಹಡಗುಯಾ ಕಾಯ್ದೆ'ಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಪೂರೈಕೆ ಸರಪಳಿ ಭದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದ ಸುದೀರ್ಘ ಕರಾವಳಿಯಲ್ಲಿ ಸಮತೋಲಿತ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ಅಂತೆಯೇ, 'ಒಂದು ರಾಷ್ಟ್ರ - ಒಂದು ಬಂದರು' ಪ್ರಕ್ರಿಯೆಯು ಬಂದರು ಸಂಬಂಧಿತ ಕಾರ್ಯವಿಧಾನಗಳನ್ನು ಪ್ರಮಾಣೀಕರಿಸುತ್ತದೆ ಮತ್ತು ಕಾಗದಪತ್ರಗಳ ಕಾರ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಸ್ನೇಹಿತರೇ,
ಕಡಲಯಾನ ವಲಯದಲ್ಲಿನ ಈ ಸುಧಾರಣೆಗಳು ಒಂದು ರೀತಿಯಲ್ಲಿ ನಮ್ಮ ದಶಕದ ಸುಧಾರಣಾ ಪಯಣದ ಮುಂದುವರಿಕೆಯಾಗಿದೆ. ಕಳೆದ ಹತ್ತರಿಂದ ಹನ್ನೊಂದು ವರ್ಷಗಳಲ್ಲಿ ನಾವು ಹಿಂತಿರುಗಿ ನೋಡಿದರೆ, ಭಾರತದ ಕಡಲಯಾನ ಕ್ಷೇತ್ರದಲ್ಲಿನ ಪರಿವರ್ತನೆಯು ನಿಜವಾಗಿಯೂ ಐತಿಹಾಸಿಕವಾಗಿದೆ. 'ಮ್ಯಾರಿಟೈಮ್ ಇಂಡಿಯಾ ವಿಷನ್' ಅಡಿಯಲ್ಲಿ, 150ಕ್ಕೂ ಹೆಚ್ಚು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಇದರ ಪರಿಣಾಮವಾಗಿ, ಪ್ರಮುಖ ಬಂದರುಗಳ ಸಾಮರ್ಥ್ಯವು ಬಹುತೇಕ ದ್ವಿಗುಣಗೊಂಡಿದೆ, ವಹಿವಾಟಿನ ಸಮಯವು ಗಮನಾರ್ಹವಾಗಿ ಕಡಿಮೆಯಾಗಿದೆ, ಕ್ರೂಸ್ ಪ್ರವಾಸೋದ್ಯಮವು ಹೊಸ ವೇಗವನ್ನು ಪಡೆದುಕೊಂಡಿದೆ, ಒಳನಾಡಿನ ಜಲಮಾರ್ಗಗಳಲ್ಲಿ ಸರಕು ಸಾಗಣೆಯು ಶೇ.700 ಕ್ಕಿಂತ ಹೆಚ್ಚಾಗಿದೆ, ಕಾರ್ಯಾಚರಣೆಯ ಜಲಮಾರ್ಗಗಳ ಸಂಖ್ಯೆ 3 ರಿಂದ 32 ಕ್ಕೆ ಏರಿದೆ ಮತ್ತು ನಮ್ಮ ಬಂದರುಗಳ ನಿವ್ವಳ ವಾರ್ಷಿಕ ಹೆಚ್ಚುವರಿಯು ಕೇವಲ ಒಂದು ದಶಕದಲ್ಲಿ ಒಂಬತ್ತು ಪಟ್ಟು ಹೆಚ್ಚಾಗಿದೆ.
ಸ್ನೇಹಿತರೇ,
ಇಂದು ಭಾರತದ ಬಂದರುಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅತ್ಯಂತ ಪರಿಣಾಮಕಾರಿ ಬಂದರುಗಳಾಗಿ ಪರಿಗಣಿಸಲಾಗಿದೆ ಮತ್ತು ಅನೇಕ ಅಂಶಗಳಲ್ಲಿ, ಅವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಬಂದರುಗಳನ್ನು ಸಹ ಮೀರಿಸುತ್ತವೆ ಎಂಬುದು ಹೆಮ್ಮೆಯ ವಿಷಯವಾಗಿದೆ. ನಾನು ಇನ್ನೂ ಕೆಲವು ಅಂಕಿ-ಅಂಶಗಳನ್ನು ಹಂಚಿಕೊಳ್ಳುತ್ತೇನೆ: ಭಾರತದಲ್ಲಿ ಸರಾಸರಿ ಕಂಟೇನರ್ ಲಂಗರು ಸಮಯವು ಮೂರು ದಿನಗಳಿಗಿಂತ ಕಡಿಮೆಯಾಗಿದೆ, ಇದು ಹಲವಾರು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಉತ್ತಮವಾಗಿದೆ. ಸರಕು ಸಾಗಣೆ ಹಡಗು ಸರಾಸರಿ ನಿಲುಗಡೆ ಸಮಯವು 96 ಗಂಟೆಗಳಿಂದ ಕೇವಲ 48 ಗಂಟೆಗಳಿಗೆ ಇಳಿದಿದೆ. ಈ ಸುಧಾರಣೆಗಳು ಭಾರತೀಯ ಬಂದರುಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಿವೆ ಮತ್ತು ಜಾಗತಿಕ ಹಡಗು ಮಾರ್ಗಗಳಿಗೆ ಆಕರ್ಷಕವಾಗಿವೆ. ವಿಶ್ವ ಬ್ಯಾಂಕಿನ ಲಾಜಿಸ್ಟಿಕ್ಸ್ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತವು ಗಮನಾರ್ಹ ಸುಧಾರಣೆಯನ್ನು ಪ್ರದರ್ಶಿಸಿದೆ.
ಮತ್ತು ಸ್ನೇಹಿತರೇ,
ಕಡಲಯಾನ ಕ್ಷೇತ್ರದ ಮಾನವ ಸಂಪನ್ಮೂಲ ಅಂಶದಲ್ಲೂ ಭಾರತವು ಜಾಗತಿಕವಾಗಿ ತನ್ನ ಛಾಪು ಮೂಡಿಸುತ್ತಿದೆ. ಕಳೆದ ದಶಕದಲ್ಲಿ ಭಾರತೀಯ ನಾವಿಕರ ಸಂಖ್ಯೆ 1.25ಲಕ್ಷದಿಂದ 3 ಲಕ್ಷಕ್ಕೆ ಏರಿದೆ. ನೀವು ಪ್ರಪಂಚದಾದ್ಯಂತ ಯಾವುದೇ ಕರಾವಳಿಗೆ ಭೇಟಿ ನೀಡಿದರೂ, ಭಾರತೀಯ ನಾವಿಕರನ್ನು ಹೊಂದಿರುವ ಹಡಗನ್ನು ನೀವು ಖಂಡಿತವಾಗಿಯೂ ಕಾಣಬಹುದು. ಇಂದು, ನಾವಿಕರ ಸಂಖ್ಯೆಯಲ್ಲಿ ಭಾರತವು ವಿಶ್ವದ ಅಗ್ರ ಮೂರು ದೇಶಗಳಲ್ಲಿ ಒಂದಾಗಿದೆ.

ಸ್ನೇಹಿತರೇ,
21ನೇ ಶತಮಾನದ ಕಾಲು ಭಾಗ ಈಗಾಗಲೇ ಕಳೆದಿದೆ. ಈ ಶತಮಾನದ ಮುಂದಿನ 25 ವರ್ಷಗಳು ಇನ್ನಷ್ಟು ನಿರ್ಣಾಯಕವಾಗಲಿವೆ. ಅದಕ್ಕಾಗಿಯೇ ನಮ್ಮ ಗಮನವು ನೀಲಿ ಆರ್ಥಿಕತೆಯ ಮೇಲೆ, ಸುಸ್ಥಿರ ಕರಾವಳಿ ಅಭಿವೃದ್ಧಿಯ ಮೇಲೆ ನೆಟ್ಟಿದೆ. ನಾವು ಪರಿಸರ ಸ್ನೇಹಿ (ಹಸಿರು) ಸರಕು-ಸಾಗಣೆ, ಬಂದರು ಸಂಪರ್ಕ ಮತ್ತು ಕರಾವಳಿ ಕೈಗಾರಿಕಾ ಕ್ಲಸ್ಟರ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ.
ಸ್ನೇಹಿತರೇ,
ಹಡಗು ನಿರ್ಮಾಣವೂ ಇಂದು ಭಾರತದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಭಾರತವು ವಿಶ್ವದ ಪ್ರಮುಖ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಒಂದಾಗಿತ್ತು. ಇಲ್ಲಿಂದ ಸ್ವಲ್ಪ ದೂರದಲ್ಲಿ ಅಜಂತಾ ಗುಹೆಗಳಿವೆ, ಅಲ್ಲಿ ನೀವು ಆರನೇ ಶತಮಾನದ ವರ್ಣಚಿತ್ರವನ್ನು, ಅದರಲ್ಲಿ ಮೂರು ಸ್ತಂಭಗಳ ಹಡಗಿನ ವಿನ್ಯಾಸವನ್ನು ನೋಡಬಹುದು. ಆರನೇ ಶತಮಾನದ ಕಲಾಕೃತಿಯೊಂದು ಅಂತಹ ಸುಧಾರಿತ ಮೂರು-ಸ್ತಂಭಗಳ ಹಡಗು ವಿನ್ಯಾಸವನ್ನು ಹೊಂದಿದೆಯೆಂದರೆ ನೀವೇ ಊಹಿಸಿ. ಇದನ್ನು ಇತರ ದೇಶಗಳು ಶತಮಾನಗಳ ನಂತರ ಅಳವಡಿಸಿಕೊಂಡವು. ಈ ವಿಚಾರದಲ್ಲಿ ಹಲವಾರು ಶತಮಾನಗಳ ಅಂತರವನ್ನು ಕಾಣಬಹುದು.
ಸ್ನೇಹಿತರೇ,
ಭಾರತದಲ್ಲಿ ನಿರ್ಮಿಸಲಾದ ಹಡಗುಗಳು ಒಂದು ಕಾಲದಲ್ಲಿ ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ನಂತರ, ನಾವು ಹಡಗು ಒಡೆಯುವ ಕ್ಷೇತ್ರದಲ್ಲಿಯೂ ಮುಂದುವರೆದೆವು. ಈಗ, ಭಾರತವು ಮತ್ತೊಮ್ಮೆ ಹಡಗು ತಯಾರಿಕೆಯಲ್ಲಿ ಹೊಸ ಎತ್ತರವನ್ನು ತಲುಪುವ ಪ್ರಯತ್ನಗಳನ್ನು ವೇಗಗೊಳಿಸುತ್ತಿದೆ. ಭಾರತವು ಈಗ ದೊಡ್ಡ ಹಡಗುಗಳಿಗೆ ಮೂಲಸೌಕರ್ಯ ಸ್ವತ್ತುಗಳ ಸ್ಥಾನಮಾನವನ್ನು ನೀಡಿದೆ. ಈ ನೀತಿ ನಿರ್ಧಾರವು ಇಲ್ಲಿರುವ ಎಲ್ಲಾ ಹಡಗು ನಿರ್ಮಾಣಕಾರರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಇದು ಹೊಸ ಹಣಕಾಸು ಆಯ್ಕೆಗಳನ್ನು ಒದಗಿಸುತ್ತದೆ, ಬಡ್ಡಿ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಸಾಲ ಸೌಲಭ್ಯಗಳ ಲಭ್ಯತೆಯನ್ನು ಸುಧಾರಿಸುತ್ತದೆ.

ಮತ್ತು ಸ್ನೇಹಿತರೇ,
ಈ ಸುಧಾರಣೆಯನ್ನು ಮತ್ತಷ್ಟು ವೇಗಗೊಳಿಸಲು ಸರ್ಕಾರ ಸುಮಾರು 70,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಇದು ದೇಶೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ದೀರ್ಘಕಾಲೀನ ಹಣಕಾಸು ಉತ್ತೇಜಿಸುತ್ತದೆ, ‘ಗ್ರೀನ್‌ಫೀಲ್ಡ್' ಮತ್ತು 'ಬ್ರೌನ್‌ಫೀಲ್ಡ್' ಶಿಪ್‌ಯಾರ್ಡ್‌ಗಳ ಅಭಿವೃದ್ಧಿಗೆ ಕಾರಣವಾಗುತ್ತದೆ, ಸುಧಾರಿತ ಕಡಲಯಾನ ಕೌಶಲ್ಯಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಯುವಕರಿಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದು ನಿಮ್ಮೆಲ್ಲರಿಗೂ ಹೊಸ ಹೂಡಿಕೆ ಅವಕಾಶಗಳನ್ನು ತೆರೆಯುತ್ತದೆ.
ಸ್ನೇಹಿತರೇ,
ಇದು ಛತ್ರಪತಿ ಶಿವಾಜಿ ಮಹಾರಾಜರ ನಾಡು. ಛತ್ರಪತಿ ಶಿವಾಜಿ ಮಹಾರಾಜರು ಕಡಲ ಭದ್ರತೆಗೆ ಅಡಿಪಾಯ ಹಾಕಿದ್ದಲ್ಲದೆ, ಅರೇಬಿಯನ್ ಸಮುದ್ರದ ವ್ಯಾಪಾರ ಮಾರ್ಗಗಳಲ್ಲಿ ಭಾರತದ ಶಕ್ತಿಯನ್ನು ಪ್ರದರ್ಶಿಸಿದರು. ಸಮುದ್ರಗಳು ಕೇವಲ ಗಡಿಗಳಲ್ಲ, ಅವು ಅವಕಾಶಗಳ ಹೆಬ್ಬಾಗಿಲುಗಳು ಎಂದು ಶಿವಾಜಿಯವರ ದೂರದೃಷ್ಟಿಯಿಂದ ನಾವು ಕಲಿತುಕೊಂಡೆವು. ಇಂದು, ಭಾರತವು ಅದೇ ಮನೋಭಾವ ಮತ್ತು ದೃಷ್ಟಿಕೋನದಿಂದ ಮುನ್ನಡೆಯುತ್ತಿದೆ.
ಸ್ನೇಹಿತರೇ,
ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುವ ಗುರಿಯನ್ನು ಭಾರತವು ಹೊಂದಿದೆ. ನಾವು ವಿಶ್ವದರ್ಜೆಯ ಬೃಹತ್ ಬಂದರುಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ಮಹಾರಾಷ್ಟ್ರದ ವಾಧ್ವಾನ್‌ನಲ್ಲಿ 76,000 ಕೋಟಿ ರೂಪಾಯಿ ವೆಚ್ಚದ ಹೊಸ ಬಂದರನ್ನು ನಿರ್ಮಿಸಲಾಗುತ್ತಿದೆ. ನಮ್ಮ ಪ್ರಮುಖ ಬಂದರುಗಳ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಕಂಟೇನರ್ ಸರಕುಗಳಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ನಾವು ಬಯಸುತ್ತೇವೆ ಮತ್ತು ಈ ಎಲ್ಲಾ ಗುರಿಗಳನ್ನು ಸಾಧಿಸುವಲ್ಲಿ, ನೀವು ನಮ್ಮ ಪ್ರಮುಖ ಪಾಲುದಾರರು. ನಿಮ್ಮ ಆಲೋಚನೆಗಳು, ಆವಿಷ್ಕಾರಗಳು ಮತ್ತು ಹೂಡಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮಗೆ ತಿಳಿದಿರುವಂತೆ, ಭಾರತವು ಬಂದರುಗಳು ಮತ್ತು ಹಡಗುಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ವೇಗವಾಗಿ ಬೆಳೆಯುತ್ತಿದೆ. "ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್"(ಭಾರತದಲ್ಲಿ ತಯಾರಿಸಿ, ಜಗತ್ತಿಗಾಗಿ ತಯಾರಿಸಿ) ದೃಷ್ಟಿಕೋನದ ಅಡಿಯಲ್ಲಿ ನಾವು ವಿವಿಧ ಪ್ರೋತ್ಸಾಹಕಗಳನ್ನು ನೀಡುತ್ತಿದ್ದೇವೆ. ಹೂಡಿಕೆಗಳನ್ನು ಆಕರ್ಷಿಸಲು ನಾವು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ. ಆದ್ದರಿಂದ, ವಿವಿಧ ದೇಶಗಳ ಹೂಡಿಕೆದಾರರಿಗೆ, ಭಾರತದ ಹಡಗು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಸ್ತರಿಸಲು ಇದು ಸರಿಯಾದ ಸಮಯ, ಸೂಕ್ತ ಸಮಯ.

ಸ್ನೇಹಿತರೇ,
ಭಾರತದ ಮತ್ತೊಂದು ದೊಡ್ಡ ಶಕ್ತಿಯೆಂದರೆ ನಮ್ಮ ರೋಮಾಂಚಕ ಪ್ರಜಾಪ್ರಭುತ್ವ ಮತ್ತು ವಿಶ್ವಾಸಾರ್ಹತೆ. ಜಾಗತಿಕ ಸಮುದ್ರಗಳು ಪ್ರಕ್ಷುಬ್ಧವಾಗಿದ್ದಾಗ, ಜಗತ್ತು ಸ್ಥಿರವಾದ ಲೈಟ್ ಹೌಸ್ ಗಾಗಿ ಎದುರು ನೋಡುತ್ತದೆ. ಭಾರತವು ಆ ಲೈಟ್ ಹೌಸ್‌ನ ಪಾತ್ರವನ್ನು ಬಹಳ ಶಕ್ತಿಯಿಂದ ನಿರ್ವಹಿಸಬಲ್ಲದು. ಜಾಗತಿಕ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ಬದಲಾಗುತ್ತಿರುವ ಪೂರೈಕೆ ಸರಪಳಿಗಳ ನಡುವೆ, ಭಾರತವು ಕಾರ್ಯತಂತ್ರದ ಸ್ವಾಯತ್ತತೆ, ಶಾಂತಿ ಮತ್ತು ಸಮಗ್ರ ಬೆಳವಣಿಗೆಯ ಸಂಕೇತವಾಗಿ ನಿಂತಿದೆ. ನಮ್ಮ ಕಡಲ ಮತ್ತು ವ್ಯಾಪಾರ ಉಪಕ್ರಮಗಳು ಈ ವಿಶಾಲ ದೃಷ್ಟಿಕೋನದ ಭಾಗವಾಗಿದೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯೆಂದರೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್, ಇದು ಜಾಗತಿಕ ವ್ಯಾಪಾರ ಮಾರ್ಗಗಳನ್ನು ಮರುವ್ಯಾಖ್ಯಾನಿಸುತ್ತದೆ ಮತ್ತು ಶುದ್ಧ ಇಂಧನ ಹಾಗೂ ಸ್ಮಾರ್ಟ್ ಸರಕು ಸಾಗಣೆಯನ್ನು ಉತ್ತೇಜಿಸುತ್ತದೆ.
ಸ್ನೇಹಿತರೇ,
ಇಂದು ನಾವು ಎಲ್ಲರನ್ನೂ ಒಳಗೊಂಡ ಕಡಲಯಾನದ ಅಭಿವೃದ್ಧಿಯ ಮೇಲೂ ಗಮನ ಹರಿಸಿದ್ದೇವೆ. ಸಣ್ಣ ದ್ವೀಪ ರೂಪದಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಂತ್ರಜ್ಞಾನ, ತರಬೇತಿ ಮತ್ತು ಮೂಲಸೌಕರ್ಯಗಳ ಮೂಲಕ ಸಬಲೀಕರಣಗೊಂಡಾಗ ಮಾತ್ರ ಇದನ್ನು ಸಾಧಿಸಬಹುದು. ಒಟ್ಟಾಗಿ, ನಾವು ಹವಾಮಾನ ಬದಲಾವಣೆ, ಪೂರೈಕೆ ಸರಪಳಿ ಅಡೆತಡೆಗಳು, ಆರ್ಥಿಕ ಅನಿಶ್ಚಿತತೆ ಮತ್ತು ಕಡಲ ಭದ್ರತೆಯ ಸವಾಲುಗಳನ್ನು ಎದುರಿಸಬೇಕಾಗಿದೆ.
ಸ್ನೇಹಿತರೇ,
ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಮುನ್ನಡೆಸಲು ಮತ್ತು ಜಗತ್ತಿಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ನಾವೆಲ್ಲರೂ ಒಗ್ಗೂಡೋಣ. ಮತ್ತೊಮ್ಮೆ, ಈ ಸಮಾವೇಶದ ಭಾಗವಾಗಿರುವ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು.


