ಮಣಿಪುರದಲ್ಲಿ ರೈಲು ಸಂಪರ್ಕ ವಿಸ್ತರಿಸುತ್ತಿದೆ: ಪ್ರಧಾನಮಂತ್ರಿ
ಮಣಿಪುರದಲ್ಲಿ ಬಡವರ ಪರವಾದ ಅಭಿವೃದ್ಧಿ ಉಪಕ್ರಮಗಳನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ: ಪ್ರಧಾನಮಂತ್ರಿ
ಮಣಿಪುರದಲ್ಲಿ ಭರವಸೆ ಮತ್ತು ನಂಬಿಕೆಯ ನವೋದಯವಾಗುತ್ತಿದೆ: ಪ್ರಧಾನಮಂತ್ರಿ
ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ!

ರಾಜ್ಯಪಾಲರಾದ ಶ್ರೀ ಅಜಯ್ ಭಲ್ಲಾ ಜಿ, ಇಲ್ಲಿರುವ ರಾಜ್ಯ ಸರ್ಕಾರದ ಅಧಿಕಾರಿಗಳೆ ಮತ್ತು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಣಿಪುರದ ನನ್ನ ಸಹೋದರ ಸಹೋದರಿಯರೆ, ನಿಮ್ಮೆಲ್ಲರಿಗೂ ನಮಸ್ಕಾರ!

ಮಣಿಪುರವು ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ. ಈ ಬೆಟ್ಟ ಗುಡ್ಡಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಅದೇ ಸಮಯದಲ್ಲಿ, ಈ ಬೆಟ್ಟಗಳು ನಿಮ್ಮೆಲ್ಲರ ನಿರಂತರ ಕಠಿಣ ಪರಿಶ್ರಮದ ಸಂಕೇತವೂ ಹೌದು. ಮಣಿಪುರದ ಜನರ ಚೈತನ್ಯಕ್ಕೆ ನಾನು ನಮಸ್ಕರಿಸುತ್ತೇನೆ. ಈ ಭಾರಿ ಮಳೆಯಲ್ಲೂ ನೀವು ಇಲ್ಲಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ, ನಿಮ್ಮ ಈ ಪ್ರೀತಿಗೆ ನಾನು ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಭಾರಿ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್ ಬರಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾನು ರಸ್ತೆಯ ಮೂಲಕ ಪ್ರಯಾಣಿಸಲು ನಿರ್ಧರಿಸಿದೆ. ಇಂದು ನಾನು ರಸ್ತೆಯಲ್ಲಿ ನೋಡಿದ ದೃಶ್ಯಗಳು, ನನ್ನ ಹೆಲಿಕಾಪ್ಟರ್ ಇಂದು ಹಾರದಂತೆ ದೇವರು ಒಳ್ಳೆಯದನ್ನು ಮಾಡಿದನೆಂದು ನನ್ನ ಹೃದಯ ಹೇಳುತ್ತಿದೆ. ನಾನು ರಸ್ತೆಯ ಮೂಲಕ ಬರುವಾಗ ದಾರಿಯಲ್ಲಿ ತ್ರಿವರ್ಣ ಧ್ವಜ ಹಿಡಿದು ಚಿಕ್ಕವರಿಂದ ದೊಡ್ಡವರು ಸಹ ಎಲ್ಲರೂ ತೋರಿಸಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ನೋಡಿದೆ. ಈ ಕ್ಷಣವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮಣಿಪುರದ ಜನರಿಗೆ ನಾನು ತಲೆ ಬಾಗುತ್ತೇನೆ.

 

ಸ್ನೇಹಿತರೆ,

ಈ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳು, ಅದರ ವೈವಿಧ್ಯತೆ ಮತ್ತು ಚೈತನ್ಯವು ಭಾರತದ ಗಮನಾರ್ಹ ಶಕ್ತಿಯನ್ನು ಪ್ರತಿನಿಧಿಸುತ್ತದೆ. 'ಮಣಿಪುರ' ಎಂಬ ಹೆಸರಿನಲ್ಲೂ 'ಮಣಿ'(ರತ್ನ) ಎಂಬ ಪದವಿದೆ. ಇದು ಮುಂಬರುವ ದಿನಗಳಲ್ಲಿ ಇಡೀ ಈಶಾನ್ಯ ಪ್ರದೇಶದ ತೇಜಸ್ಸಿಗೆ ಮೆರುಗು ನೀಡುವ ರತ್ನವಾಗಿದೆ. ಭಾರತ ಸರ್ಕಾರವು ಮಣಿಪುರವನ್ನು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಮುನ್ನಡೆಸಲು ಸದಾ ಶ್ರಮಿಸುತ್ತಿದೆ. ಈ ಉತ್ಸಾಹದಲ್ಲಿ, ನಾನು ಇಂದು ನಿಮ್ಮೆಲ್ಲರ ನಡುವೆ ಬಂದಿದ್ದೇನೆ. ಸ್ವಲ್ಪ ಸಮಯದ ಹಿಂದೆ, ಸುಮಾರು 7 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಈ ಯೋಜನೆಗಳು ಮಣಿಪುರದ ಜನರು ಮತ್ತು ಬೆಟ್ಟಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳ ಜೀವನವನ್ನು ಮತ್ತಷ್ಟು ಸುಧಾರಿಸುತ್ತವೆ. ಈ ಯೋಜನೆಗಳು ನಿಮ್ಮೆಲ್ಲರಿಗೂ ಹೊಸ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ನಿರ್ಮಿಸುತ್ತವೆ. ಈ ಯೋಜನೆಗಳಿಗಾಗಿ ಮಣಿಪುರದ ಎಲ್ಲಾ ಜನರಿಗೆ ಮತ್ತು ಚುರಾಚಂದ್‌ಪುರದ ಎಲ್ಲರಿಗೂ ನನ್ನ ಪ್ರಾಮಾಣಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಮಣಿಪುರ ಗಡಿಯಲ್ಲಿರುವ ರಾಜ್ಯ. ಇಲ್ಲಿ ಸಂಪರ್ಕವು ಯಾವಾಗಲೂ ಒಂದು ಪ್ರಮುಖ ಸವಾಲಾಗಿದೆ. ಉತ್ತಮ ರಸ್ತೆಗಳ ಕೊರತೆಯಿಂದಾಗಿ ನೀವು ಎದುರಿಸಿದ ತೊಂದರೆಗಳನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ. ಅದಕ್ಕಾಗಿಯೇ, 2014ರಿಂದ ಮಣಿಪುರದ ಸಂಪರ್ಕ ಸುಧಾರಿಸಲು ನಿರಂತರವಾಗಿ ಕೆಲಸ ಮಾಡಲು ನಾನು ಬಲವಾದ ಒತ್ತು ನೀಡಿದ್ದೇನೆ. ಇದನ್ನು ಸಾಧಿಸಲು ಭಾರತ ಸರ್ಕಾರ 2 ಹಂತಗಳಲ್ಲಿ ಪ್ರಯತ್ನಗಳನ್ನು ಕೈಗೊಂಡಿದೆ. ಮೊದಲನೆಯದಾಗಿ, ಮಣಿಪುರದಲ್ಲಿ ರೈಲ್ವೆ ಮತ್ತು ರಸ್ತೆಗಳಿಗೆ ಬಜೆಟ್ ಅನ್ನು ನಾವು ಹಲವಾರು ಬಾರಿ ಹೆಚ್ಚಿಸಿದ್ದೇವೆ. ಎರಡನೆಯದಾಗಿ, ನಗರಗಳಿಗೆ ಮಾತ್ರವಲ್ಲದೆ ಹಳ್ಳಿಗಳಿಗೂ ರಸ್ತೆಗಳನ್ನು ವಿಸ್ತರಿಸುವತ್ತ ಗಮನ ಹರಿಸಿದ್ದೇವೆ.

 

ಸ್ನೇಹಿತರೆ,

ಇತ್ತೀಚಿನ ವರ್ಷಗಳಲ್ಲಿ, ಇಲ್ಲಿ ರಾಷ್ಟ್ರೀಯ ಹೆದ್ದಾರಿಗಳಿಗೆ 3,700 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ, 8,700 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಹೊಸ ಹೆದ್ದಾರಿಗಳ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ಇಲ್ಲಿ ಹಳ್ಳಿಗಳನ್ನು ತಲುಪುವುದು ಎಷ್ಟು ಕಷ್ಟಕರವಾಗಿತ್ತು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಈಗ ಈ ಪ್ರದೇಶದ ನೂರಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಒದಗಿಸಲಾಗಿದೆ. ಇದು ಬೆಟ್ಟಗಳಲ್ಲಿ ವಾಸಿಸುವ ಜನರಿಗೆ ಮತ್ತು ಬುಡಕಟ್ಟು ಹಳ್ಳಿಗಳಿಗೆ ಹೆಚ್ಚಿನ ಪ್ರಯೋಜನ ನೀಡಿದೆ.

ಸ್ನೇಹಿತರೆ,

ನಮ್ಮ ಸರ್ಕಾರದ ಅವಧಿಯಲ್ಲಿ ಮಣಿಪುರದಲ್ಲಿ ರೈಲು ಸಂಪರ್ಕ ವಿಸ್ತರಿಸುತ್ತಿದೆ. ಜಿರಿಬಮ್-ಇಂಫಾಲ್ ರೈಲು ಮಾರ್ಗವು ಶೀಘ್ರದಲ್ಲೇ ರಾಜಧಾನಿ ಇಂಫಾಲ್ ಅನ್ನು ರಾಷ್ಟ್ರೀಯ ರೈಲು ಜಾಲಕ್ಕೆ ಸಂಪರ್ಕಿಸುತ್ತದೆ. ಈ ಯೋಜನೆಗೆ ಸರ್ಕಾರ 22,000 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. 400 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಲಾದ ಇಂಫಾಲ್ ವಿಮಾನ ನಿಲ್ದಾಣವು ವೈಮಾನಿಕ ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಈ ವಿಮಾನ ನಿಲ್ದಾಣದಿಂದ ದೇಶದ ಇತರ ಭಾಗಗಳಿಗೆ ಹೆಲಿಕಾಪ್ಟರ್ ಸೇವೆಗಳನ್ನು ಸಹ ಪ್ರಾರಂಭಿಸಲಾಗಿದೆ. ಈ ಬೆಳೆಯುತ್ತಿರುವ ಸಂಪರ್ಕವು ಮಣಿಪುರದ ಎಲ್ಲಾ ಜನರಿಗೆ ಅನುಕೂಲಗಳನ್ನು ಹೆಚ್ಚಿಸುತ್ತಿದೆ, ಇಲ್ಲಿನ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೆ,

ಭಾರತ ಇಂದು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಶೀಘ್ರದಲ್ಲೇ, ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಅಭಿವೃದ್ಧಿಯ ಪ್ರಯೋಜನಗಳು ದೇಶದ ಪ್ರತಿಯೊಂದು ಮೂಲೆಯನ್ನು ತಲುಪುವಂತೆ ನೋಡಿಕೊಳ್ಳುವುದು ನನ್ನ ನಿರಂತರ ಪ್ರಯತ್ನವಾಗಿದೆ. ದೆಹಲಿಯಲ್ಲಿ ಮಾಡಿದ ಘೋಷಣೆಗಳು ಇಲ್ಲಿ ಜಾರಿಗೆ ಬರಲು ದಶಕಗಳೇ ಬೇಕಾಗುವ ಸಮಯವಿತ್ತು. ಇಂದು ನಮ್ಮ ಚುರಚಂದ್‌ಪುರ, ನಮ್ಮ ಮಣಿಪುರ, ರಾಷ್ಟ್ರದ ಉಳಿದ ಭಾಗಗಳೊಂದಿಗೆ ಪ್ರಗತಿಯಲ್ಲಿದೆ. ಉದಾಹರಣೆಗೆ, ದೇಶಾದ್ಯಂತ ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ಮಣಿಪುರದಲ್ಲಿ ಸಾವಿರಾರು ಕುಟುಂಬಗಳು ಈ ಉಪಕ್ರಮದ ಪ್ರಯೋಜನ ಪಡೆದಿವೆ, ಇಲ್ಲಿ ಸುಮಾರು 60 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ, ಈ ಪ್ರದೇಶವು ಈ ಹಿಂದೆ ವಿದ್ಯುತ್ ಪೂರೈಕೆಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿತ್ತು. ನಮ್ಮ ಸರ್ಕಾರವು ನಿಮ್ಮನ್ನು ಈ ತೊಂದರೆಗಳಿಂದ ಮುಕ್ತಗೊಳಿಸಲು ಸಂಕಲ್ಪ ಮಾಡಿದೆ. ಇದರ ಪರಿಣಾಮವಾಗಿ, ಮಣಿಪುರದಲ್ಲಿ 1 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಉಚಿತ ವಿದ್ಯುತ್ ಸಂಪರ್ಕಗಳನ್ನು ಪಡೆದಿವೆ.

 

ಸ್ನೇಹಿತರೆ,

ನಮ್ಮ ತಾಯಂದಿರು ಮತ್ತು ಸಹೋದರಿಯರು ಕುಡಿಯುವ ನೀರು ಪಡೆಯಲು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರು. ಆದ್ದರಿಂದ, ಈ ಸಮಸ್ಯೆ ಪರಿಹರಿಸಲು ನಾವು 'ಹರ್ ಘರ್ ನಲ್ ಸೆ ಜಲ್' (ಪ್ರತಿ ಮನೆಗೆ ನಲ್ಲಿ ನೀರು) ಯೋಜನೆ ಪ್ರಾರಂಭಿಸಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, ದೇಶಾದ್ಯಂತ 15 ಕೋಟಿಗೂ ಹೆಚ್ಚು ನಾಗರಿಕರು ನಲ್ಲಿ ನೀರಿನ ಸೌಲಭ್ಯ ಪಡೆದಿದ್ದಾರೆ. ಮಣಿಪುರದಲ್ಲಿ, ಕೇವಲ 7-8 ವರ್ಷಗಳ ಹಿಂದೆ ಕೇವಲ 25,000ರಿಂದ 30,000 ಮನೆಗಳು ಪೈಪ್ ನೀರಿನ ಸಂಪರ್ಕ ಹೊಂದಿದ್ದವು. ಇಂದು, ಇಲ್ಲಿ 350,000ಕ್ಕೂ ಹೆಚ್ಚು ಮನೆಗಳು ನಲ್ಲಿ ನೀರಿನ ಸೌಲಭ್ಯ ಹೊಂದಿವೆ. ಮಣಿಪುರದ ಪ್ರತಿಯೊಂದು ಕುಟುಂಬವು ಶೀಘ್ರದಲ್ಲೇ ತಮ್ಮ ಮನೆಗಳಲ್ಲಿ ಪೈಪ್ ನೀರನ್ನು ಪಡೆಯುತ್ತವೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೆ,

ಹಿಂದಿನ ಕಾಲದಲ್ಲಿ ಬೆಟ್ಟ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಉತ್ತಮ ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳು ಕೇವಲ ಕನಸುಗಳಾಗಿದ್ದವು. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ, ರೋಗಿಯು ಆಸ್ಪತ್ರೆಗೆ ತಲುಪುವ ಹೊತ್ತಿಗೆ ಕೊನೆಯುಸಿರೆಳೆಯುತ್ತಿದ್ದ. ಆದರೆ ಇಂದು, ಭಾರತ ಸರ್ಕಾರದ ಪ್ರಯತ್ನಗಳಿಂದಾಗಿ ಪರಿಸ್ಥಿತಿ ಬದಲಾಗುತ್ತಿದೆ. ಚುರಾಚಂದ್‌ಪುರದಲ್ಲಿರುವ ವೈದ್ಯಕೀಯ ಕಾಲೇಜು ಈಗ ಸಿದ್ಧವಾಗಿದ್ದು, ಹೊಸ ವೈದ್ಯರನ್ನು ಸೃಷ್ಟಿಸುತ್ತಿದೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುತ್ತಿದೆ. ಸ್ವಾತಂತ್ರ್ಯದ ನಂತರ ಹಲವು ದಶಕಗಳಿಂದ ಮಣಿಪುರದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಯಾವುದೇ ವೈದ್ಯಕೀಯ ಕಾಲೇಜು ಇರಲಿಲ್ಲ. ಈ ಸಾಧನೆಯನ್ನು ನಮ್ಮ ಸರ್ಕಾರ ಮಾಡಿದೆ ಎಂಬುದನ್ನು ನೀವೇ ಊಹಿಸಿ. ಪ್ರಧಾನ ಮಂತ್ರಿ ದೈವಿಕ ಯೋಜನೆಯಡಿ, ನಮ್ಮ ಸರ್ಕಾರವು 5 ಗುಡ್ಡಗಾಡು ಜಿಲ್ಲೆಗಳಲ್ಲಿ ಆಧುನಿಕ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆಯುಷ್ಮಾನ್ ಭಾರತ ಯೋಜನೆಯ ಮೂಲಕ, ಸರ್ಕಾರವು ಬಡವರಿಗೆ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಒದಗಿಸುತ್ತದೆ. ಮಣಿಪುರದಲ್ಲಿ ಸುಮಾರು ಎರಡೂವರೆ ಲಕ್ಷ ರೋಗಿಗಳು ಈ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆದಿದ್ದಾರೆ. ಈ ಸೌಲಭ್ಯವಿಲ್ಲದಿದ್ದರೆ, ಇಲ್ಲಿನ ನನ್ನ ಬಡ ಸಹೋದರ ಸಹೋದರಿಯರು ವೈದ್ಯಕೀಯ ಚಿಕಿತ್ಸೆಗಾಗಿ ತಮ್ಮ ಜೇಬಿನಿಂದ 350 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡಬೇಕಾಗಿತ್ತು. ಆದರೆ ಸಂಪೂರ್ಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಿದೆ ಏಕೆಂದರೆ ಪ್ರತಿಯೊಬ್ಬ ಬಡ ವ್ಯಕ್ತಿಯ ಕಾಳಜಿಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ.

ಸ್ನೇಹಿತರೆ,

ಮಣಿಪುರದ ಭೂಮಿ ಮತ್ತು ಈ ಪ್ರದೇಶವು ಭರವಸೆ ಮತ್ತು ಆಶಾವಾದದ ಭೂಮಿ. ದುರದೃಷ್ಟವಶಾತ್, ಈ ಭವ್ಯವಾದ ಪ್ರದೇಶದಲ್ಲಿ ಹಿಂಸಾಚಾರ ಆವರಿಸಿತ್ತು. ಸ್ವಲ್ಪ ಸಮಯದ ಹಿಂದೆ, ನಾನು ಶಿಬಿರಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತ ಜನರನ್ನು ಭೇಟಿಯಾದೆ. ಅವರೊಂದಿಗೆ ಮಾತನಾಡಿದ ನಂತರ, ಮಣಿಪುರದಲ್ಲಿ ಭರವಸೆ ಮತ್ತು ಆತ್ಮವಿಶ್ವಾಸದ ಹೊಸ ಉದಯವು ಆಗುತ್ತಿದೆ ಎಂದು ನಾನು ಹೇಳಬಲ್ಲೆ.

 

ಸ್ನೇಹಿತರೆ,

ಎಲ್ಲಿಯೇ ಆಗಲಿ ಅಭಿವೃದ್ಧಿ ಆಗಬೇಕೆಂದರೆ ಶಾಂತಿ ಸ್ಥಾಪಿಸುವುದು ಅತ್ಯಗತ್ಯ. ಕಳೆದ 11 ವರ್ಷಗಳಲ್ಲಿ ಈಶಾನ್ಯದಲ್ಲಿ ಅನೇಕ ದೀರ್ಘಕಾಲದ ವಿವಾದಗಳು ಮತ್ತು ಸಂಘರ್ಷಗಳನ್ನು ಪರಿಹರಿಸಲಾಗಿದೆ. ಜನರು ಶಾಂತಿಯ ಮಾರ್ಗ ಆರಿಸಿಕೊಂಡಿದ್ದಾರೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಇತ್ತೀಚೆಗೆ ಬೆಟ್ಟಗಳು ಮತ್ತು ಕಣಿವೆಗಳಲ್ಲಿನ ವಿವಿಧ ಗುಂಪುಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಮಾತುಕತೆಗಳು ಪ್ರಾರಂಭವಾಗಿವೆ ಎಂಬ ವಿಷಯದಿಂದ ನನಗೆ ಸಂತೋಷವಾಗಿದೆ. ಈ ಪ್ರಯತ್ನಗಳು ಮಾತುಕತೆ, ಗೌರವ ಮತ್ತು ಪರಸ್ಪರ ತಿಳಿವಳಿಕೆಯ ಮೂಲಕ ಶಾಂತಿ ಸ್ಥಾಪಿಸುವ ಭಾರತ ಸರ್ಕಾರದ ಬದ್ಧತೆಯ ಭಾಗವಾಗಿದೆ. ಎಲ್ಲಾ ಸಂಸ್ಥೆಗಳು ಶಾಂತಿಯ ಹಾದಿಯಲ್ಲಿ ಮುಂದುವರಿಯಲು, ಅವರ ಕನಸುಗಳನ್ನು ಈಡೇರಿಸಲು ಮತ್ತು ಅವರ ಮಕ್ಕಳ ಭವಿಷ್ಯ ಭದ್ರಪಡಿಸಿಕೊಳ್ಳಲು ನಾನು ಒತ್ತಾಯಿಸುತ್ತೇನೆ. ಇಂದು ನಾನು ನಿಮ್ಮೊಂದಿಗಿದ್ದೇನೆ, ಭಾರತ ಸರ್ಕಾರ ನಿಮ್ಮೊಂದಿಗಿದೆ ಮತ್ತು ಮಣಿಪುರದ ಜನರೊಂದಿಗೆ ಇದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.

ಸ್ನೇಹಿತರೆ,

ಮಣಿಪುರದಲ್ಲಿ ಸಾಮಾನ್ಯ ಸ್ಥಿತಿ ಮರರುಸ್ಥಾಪಿಸಲು ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನಮ್ಮ ಸರ್ಕಾರವು ಸ್ಥಳಾಂತರಗೊಂಡ ಕುಟುಂಬಗಳಿಗೆ 7 ಸಾವಿರ ಹೊಸ ಮನೆಗಳನ್ನು ನಿರ್ಮಿಸಲು ನೆರವು ನೀಡುತ್ತಿದೆ. ಇತ್ತೀಚೆಗೆ, ಸುಮಾರು 3 ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಅನ್ನು ಸಹ ಅನುಮೋದಿಸಲಾಗಿದೆ. ಹೆಚ್ಚುವರಿಯಾಗಿ, ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು 500 ಕೋಟಿ ರೂಪಾಯಿಗಳ ವಿಶೇಷ ಅನುದಾನ ಪ್ರಕಟಿಸಲಾಗಿದೆ.

ಸ್ನೇಹಿತರೆ,

ಮಣಿಪುರದ ಬುಡಕಟ್ಟು ಯುವಕರ ಕನಸುಗಳು ಮತ್ತು ಹೋರಾಟಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಿಮ್ಮ ಕಳವಳಗಳನ್ನು ಪರಿಹರಿಸಲು, ವಿವಿಧ ಪರಿಹಾರಗಳನ್ನು ಹುಡುಕಲಾಗುತ್ತಿದೆ. ಸ್ಥಳೀಯ ಆಡಳಿತ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಅವರ ಅಭಿವೃದ್ಧಿಗೆ ಸರಿಯಾದ ಹಣ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.

 

ಸ್ನೇಹಿತರೆ,

ಇಂದು ಪ್ರತಿಯೊಂದು ಬುಡಕಟ್ಟು ಸಮುದಾಯದ ಅಭಿವೃದ್ಧಿಯು ದೇಶಕ್ಕೆ ಆದ್ಯತೆಯಾಗಿದೆ. ಮೊದಲ ಬಾರಿಗೆ, ಬುಡಕಟ್ಟು ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲು 'ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ' ನಡೆಯುತ್ತಿದೆ. ಈ ಉಪಕ್ರಮದಡಿ, ಮಣಿಪುರದ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಮಣಿಪುರದಲ್ಲಿಯೂ ಸಹ, ಅಂತಹ 18 ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಶಾಲೆಗಳು ಮತ್ತು ಕಾಲೇಜುಗಳ ಆಧುನೀಕರಣವು ಇಲ್ಲಿನ ಗುಡ್ಡಗಾಡು ಜಿಲ್ಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಸಜ್ಜಾಗಿದೆ.

ಸ್ನೇಹಿತರೆ,

ಮಣಿಪುರದ ಸಂಸ್ಕೃತಿ ಯಾವಾಗಲೂ 'ನಾರಿ ಶಕ್ತಿ'(ಮಹಿಳಾ ಸಬಲೀಕರಣ)ಯನ್ನು ಉತ್ತೇಜಿಸಿದೆ. ನಮ್ಮ ಸರ್ಕಾರವು ಮಹಿಳೆಯರ ಸಬಲೀಕರಣದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮಣಿಪುರದ ಹೆಣ್ಣು ಮಕ್ಕಳನ್ನು ಬೆಂಬಲಿಸಲು ಸರ್ಕಾರವು ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ಗಳನ್ನು ಸಹ ನಿರ್ಮಿಸುತ್ತಿದೆ.

ಸ್ನೇಹಿತರೆ,

ಮಣಿಪುರವನ್ನು ಶಾಂತಿ, ಸಮೃದ್ಧಿ ಮತ್ತು ಪ್ರಗತಿಯ ಸಂಕೇತವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಭಾರತ ಸರ್ಕಾರವು ಮಣಿಪುರ ಸರ್ಕಾರದೊಂದಿಗೆ ಮಣಿಪುರದ ಅಭಿವೃದ್ಧಿಯಲ್ಲಿ, ಸ್ಥಳಾಂತರಗೊಂಡ ಜನರನ್ನು ಸೂಕ್ತ ಸ್ಥಳಗಳಲ್ಲಿ ಸಾಧ್ಯವಾದಷ್ಟು ಬೇಗ ಪುನರ್ವಸತಿ ಕಲ್ಪಿಸಲು ಮತ್ತು ಶಾಂತಿ ಸ್ಥಾಪಿಸುವಲ್ಲಿ ಸಹಕರಿಸುವುದನ್ನು ಮುಂದುವರಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಮತ್ತೊಮ್ಮೆ, ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ನೀವು ತೋರಿಸಿದ ಪ್ರೀತಿ ಮತ್ತು ಗೌರವಕ್ಕಾಗಿ ಮಣಿಪುರದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಾವೆಲ್ಲರೂ ಒಟ್ಟಾಗಿ ಹೇಳೋಣ:

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ,

ಭಾರತ್ ಮಾತಾ ಕಿ ಜೈ,

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSMEs’ contribution to GDP rises, exports triple, and NPA levels drop

Media Coverage

MSMEs’ contribution to GDP rises, exports triple, and NPA levels drop
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of grasping the essence of knowledge
January 20, 2026

The Prime Minister, Shri Narendra Modi today shared a profound Sanskrit Subhashitam that underscores the timeless wisdom of focusing on the essence amid vast knowledge and limited time.

The sanskrit verse-
अनन्तशास्त्रं बहुलाश्च विद्याः अल्पश्च कालो बहुविघ्नता च।
यत्सारभूतं तदुपासनीयं हंसो यथा क्षीरमिवाम्बुमध्यात्॥

conveys that while there are innumerable scriptures and diverse branches of knowledge for attaining wisdom, human life is constrained by limited time and numerous obstacles. Therefore, one should emulate the swan, which is believed to separate milk from water, by discerning and grasping only the essence- the ultimate truth.

Shri Modi posted on X;

“अनन्तशास्त्रं बहुलाश्च विद्याः अल्पश्च कालो बहुविघ्नता च।

यत्सारभूतं तदुपासनीयं हंसो यथा क्षीरमिवाम्बुमध्यात्॥”