ಪ್ರಮುಖ ಯುದ್ಧ ಟ್ಯಾಂಕರ್ ಅರ್ಜುನ್ [ಎಂಕೆ-1ಎ] ಸೇನೆಗೆ ಹಸ್ತಾಂತರ
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಕೆ
ರಕ್ಷಣಾ ವಲಯದಲ್ಲಿ ಭಾರತವನ್ನು ಸ್ವಾವಲಂಬಿ ಮಾಡುವತ್ತ ಗಮನ
ಯೋಜನೆಗಳು ನಾವಿನ್ಯತೆ ಮತ್ತು ಸ್ಥಳೀಯ ಅಭಿವೃದ್ಧಿಯ ಸಂಕೇತ. ಇವುಗಳಿಂದ ತಮಿಳುನಾಡು ಮತ್ತಷ್ಟು ಪ್ರಗತಿಯಾಗಲಿದೆ
ಭಾರತದ ಕರಾವಳಿ ಭಾಗದ ಅಭಿವೃದ್ಧಿಗೆ ಆಯವ್ಯಯದಲ್ಲಿ ವಿಶೇಷ ಮಹತ್ವ ಕೊಡಲಾಗಿದೆ
ದೇವೇಂದ್ರಕುಲ ವೆಲಲಾರ್ ಸಮುದಾಯವನ್ನು ಅವರ ಪರಂಪರೆ ಹೆಸರಿನಿಂದ ಕರೆಯಲಾಗುತ್ತದೆ, ದೀರ್ಘಕಾಲೀನ ಬೇಡಿಕೆ ಈಡೇರಿದೆ
ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳು ಸಹೋದರರು ಮತ್ತು ಸಹೋದರರಿಯರ ಆಕಾಂಕ್ಷೆಗಳ ಬಗ್ಗೆ ಸರ್ಕಾರ ವಿಶೇಷ ನಿಗಾವಹಿಸಿದೆ: ಪ್ರಧಾನಮಂತ್ರಿ
ತಮಿಳುನಾಡಿನ ಸಂಸ್ಕೃತಿ ಆಚರಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ನಮ್ಮ ಗೌರವ. ತಮಿಳುನಾಡು ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯ

ವಣಕ್ಕಂ ಚೆನ್ನೈ!

ವಣಕ್ಕಂ ತಮಿಳು ನಾಡು!

ತಮಿಳುನಾಡು ರಾಜ್ಯಪಾಲರಾದ ಶ್ರೀ ಬನ್ವಾರಿಲಾಲ್ ಪುರೋಹಿತ್ ಜೀ, ತಮಿಳುನಾಡು ಮುಖ್ಯಮಂತ್ರಿ ಶ್ರೀ ಪಳನಿಸ್ವಾಮೀ ಜೀ, ಉಪಮುಖ್ಯಮಂತ್ರಿ ಶ್ರೀ ಪನೀರ್ ಸೆಲ್ವಂ ಜೀ, ತಮಿಳುನಾಡು ವಿಧಾನ ಸಭೆಯ ಸ್ಪೀಕರ್ ಶ್ರೀ ಧನಪಾಲ ಜೀ, ಕೈಗಾರಿಕಾ ಸಚಿವರಾದ ಶ್ರೀ ಸಂಪತ್ ಜೀ, ಗೌರವಾನ್ವಿತರೇ, ಮಹಿಳೆಯರೇ ಮತ್ತು ಮಹನೀಯರೇ,

ನನ್ನ ಪ್ರೀತಿಯ ಸ್ನೇಹಿತರೇ,

ಇಂದು ನಾನು ಚೆನ್ನೈಯಲ್ಲಿರುವುದಕ್ಕೆ ಬಹಳ ಸಂತೋಷಪಡುತ್ತೇನೆ. ಇಂದು ನನಗೆ ಹೃದಯಸ್ಪರ್ಶೀ ಸ್ವಾಗತ ನೀಡಿದುದಕ್ಕಾಗಿ ಈ ನಗರದ ಜನತೆಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ನಗರ ಬಹಳಷ್ಟು ಚೈತನ್ಯ ಮತ್ತು ಉತ್ಸಾಹವನ್ನು ಹೊಂದಿದೆ. ಇದು ಜ್ಞಾನ ಮತ್ತು ಸೃಜನಶೀಲತೆಯ ನಗರ. ಇಂದು ಚೆನ್ನೈಯಿಂದ, ನಾವು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ. ಈ ಯೋಜನೆಗಳು ಅನ್ವೇಷಣೆ ಮತ್ತು ದೇಶೀಯ ಅಭಿವೃದ್ಧಿಯ ಚಿಹ್ನೆಗಳು. ಈ ಯೋಜನೆಗಳು ತಮಿಳುನಾಡಿನ ಬೆಳವಣಿಗೆಗೆ ವೇಗ ಕೊಡಲಿವೆ.

ಸ್ನೇಹಿತರೇ,

ಈ ಕಾರ್ಯಕ್ರಮ ಬಹಳ ವಿಶೇಷವಾದುದು, ಯಾಕೆಂದರೆ ನಾವು ಆರುನೂರ ಮೂವತ್ತಾರು ಕಿಲೋಮೀಟರ್ ಉದ್ದದ ಗ್ರಾಂಡ್ ಅನಿಕಟ್ ಕಾಲುವೆ ವ್ಯವಸ್ಥೆಯನ್ನು (ಜಲಾಶಯದಿಂದ ನೀರು ಹರಿಸುವಂತಹ ಕಾಲುವೆ) ಆಧುನೀಕರಿಸಲು ಶಿಲಾನ್ಯಾಸ ಮಾಡಿದ್ದೇವೆ. ಇದರ ಪರಿಣಾಮ ಬಹಳ ದೊಡ್ಡದಾಗಲಿದೆ. ಇದರಿಂದ 2.27 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯದ ಸುಧಾರಣೆಯಾಗಲಿದೆ. ತಂಜಾವೂರು ಮತ್ತು ಪುದುಕೊಟ್ಟೈ ಜಿಲ್ಲೆಗಳಿಗೆ ವಿಶೇಷವಾದ ಪ್ರಯೋಜನಗಳಾಗಲಿವೆ. ದಾಖಲೆ ಪ್ರಮಾಣದ ಆಹಾರ ಧಾನ್ಯ ಉತ್ಪಾದನೆ ಮತ್ತು ಜಲ ಸಂಪನ್ಮೂಲಗಳ ಉತ್ತಮ ಬಳಕೆಗಾಗಿ ನಾನು ತಮಿಳು ನಾಡಿನ ರೈತರನ್ನು ಶ್ಲಾಘಿಸಲು ಇಚ್ಛಿಸುತ್ತೇನೆ. ಸಾವಿರಾರು ವರ್ಷಗಳಿಂದ ಈ ಬೃಹತ್ ಜಲಾಶಯ ಮತ್ತು ಕಾಲುವೆ ವ್ಯವಸ್ಥೆಗಳು ತಮಿಳು ನಾಡಿನ ಅನ್ನದ ಬಟ್ಟಲಿನ ಜೀವನ ರೇಖೆಯಾಗಿವೆ. ನಮ್ಮ ವೈಭವದ ಭೂತಕಾಲಕ್ಕೆ ಈ ಬೃಹತ್ ಜಲಾಶಯ ಮತ್ತು ಕಾಲುವೆ ಒಂದು ಜೀವಂತ ಉದಾಹರಣೆ. ಇದು ನಮ್ಮ ದೇಶದ “ಆತ್ಮನಿರ್ಭರ ಭಾರತ” ಗುರಿಗೆ ಒಂದು ಪ್ರೇರಣೆ ಕೂಡಾ. ಪ್ರಖ್ಯಾತ ತಮಿಳು ಕವಿ ಅವ್ವೈಯಾರ್ ಅವರ ಮಾತುಗಳಲ್ಲಿ ಹೇಳುವುದಾದರೆ

वरप्पु उयरा नीर उयरूम

नीर उयरा नेल उयरूम

नेल उयरा कुड़ी उयरूम

कुड़ी उयरा कोल उयरूम

कोल उयरा कोण उयरवान

ಜಲಮಟ್ಟ ಏರಿದಂತೆ ಬೆಳೆಯೂ ಹೆಚ್ಚುತ್ತದೆ. ಜನರಲ್ಲಿ ಸಮೃದ್ಧಿಯಾಗುತ್ತದೆ, ರಾಜ್ಯವೂ ಸಮೃದ್ಧವಾಗುತ್ತದೆ. ನೀರನ್ನು ಸಂರಕ್ಷಿಸಲು ನಾವು ಏನೇನೆಲ್ಲಾ ಮಾಡಬಹುದೋ ಅದನ್ನೆಲ್ಲಾ ಮಾಡಬೇಕು. ಇದು ರಾಷ್ಟ್ರೀಯ ವಿಷಯ ಮಾತ್ರವಲ್ಲ, ಇದು ಜಾಗತಿಕ ವಿಷಯ. ಹನಿಯೊಂದಕ್ಕೆ ಹೆಚ್ಚು ಬೆಳೆ ಎಂಬ ಮಂತ್ರವನ್ನು ಸದಾ ನೆನಪಿಡಿ, ಇದು ಭವಿಷ್ಯದ ತಲೆಮಾರುಗಳಿಗೆ ಸಹಾಯ ಮಾಡುತ್ತದೆ.

ಸ್ನೇಹಿತರೇ,

ಚೆನ್ನೈ ಮೆಟ್ರೋ ರೈಲಿನ ಮೊದಲ ಹಂತದ ಒಂಭತ್ತು ಕಿಲೋಮೀಟರ್ ಉದ್ದದ ಮಾರ್ಗವನ್ನು ನಾವು ಉದ್ಘಾಟಿಸುತ್ತಿರುವುದು ಪ್ರತಿಯೊಬ್ಬರಿಗೂ ಸಂತೋಷ ತರಬಲ್ಲ ಸಂಗತಿ. ಇದು ವಾಶರ್ ಮನ್ ಪೇಟ್ ನಿಂದ ವಿಂಕೋ ನಗರದವರೆಗೆ ಹೋಗುತ್ತದೆ. ಈ ಯೋಜನೆ ಜಾಗತಿಕ ಸಾಂಕ್ರಾಮಿಕದ ನಡುವೆಯೂ ನಿಗದಿತ ವೇಳಾಪಟ್ಟಿಯಂತೆ ಪೂರ್ಣಗೊಂಡಿದೆ. ನಿರ್ಮಾಣ ಕಾಮಗಾರಿಯನ್ನು ಭಾರತೀಯ ಗುತ್ತಿಗೆದಾರರು ನಿರ್ವಹಿಸಿದ್ದಾರೆ. ರೈಲ್ವೇ ವಾಹನಗಳನ್ನು, ಇಂಜಿನುಗಳನ್ನು ಸ್ಥಳೀಯವಾಗಿ ಖರೀದಿ ಮಾಡಲಾಗಿದೆ. ಇದೂ ಕೂಡಾ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಕೊಡುವಂತಹ ಸಂಗತಿಯಾಗಿದೆ. ಚೆನ್ನೈ ಮೆಟ್ರೋ ತ್ವರಿತವಾಗಿ ಬೆಳೆಯುತ್ತಿದೆ. ಈ ವರ್ಷದ ಬಜೆಟ್ಟಿನಲ್ಲಿ ಯೋಜನೆಯ ಎರಡನೆ ಹಂತದ ನೂರ ಹತ್ತೊಂಬತ್ತು ಕಿಲೋಮೀಟರ್ ಮಾರ್ಗ ನಿರ್ಮಾಣಕ್ಕೆ ಅರವತ್ತಮೂರು ಸಾವಿರ ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ. ಯಾವುದೇ ನಗರಕ್ಕೆ ಒಂದೇ ನಿಲುವಿನಲ್ಲಿ ಮಂಜೂರಾದ ದೊಡ್ಡ ಯೋಜನೆಗಳಲ್ಲಿ ಇದು ಒಂದು. ನಗರ ಸಾರಿಗೆಯ ಮೇಲಣ ಆದ್ಯ ಗಮನ ಇಲ್ಲಿಯ ನಾಗರಿಕರ ಜೀವನವನ್ನು ಇನ್ನಷ್ಟು ಸರಳ, ಸುಲಭಗೊಳಿಸಲಿದೆ.

ಸ್ನೇಹಿತರೇ,

ಸಂಪರ್ಕದಲ್ಲಿ ಸುಧಾರಣೆ ಅನುಕೂಲತೆಗಳನ್ನು ತರಲಿದೆ. ಇದರಿಂದ ವಾಣಿಜ್ಯಕ್ಕೂ ನೆರವು ಲಭಿಸಲಿದೆ. ಚೆನ್ನೈ ಕಡಲಕಿನಾರೆ, ಸುವರ್ಣ ಚತುರ್ಭುಜದ ಎನ್ನೋರ್-ಅಟ್ಟಿಪಟ್ಟು ವಿಭಾಗ ಅತ್ಯಂತ ಹೆಚ್ಚು ವಾಹನ ದಟ್ಟಣೆಯ ಮಾರ್ಗವಾಗಿದೆ. ಚೆನ್ನೈ ಬಂದರು ಮತ್ತು ಕಾಮರಾಜರ್ ಬಂದರು ನಡುವೆ ಸರಕು ಸಾಗಾಣಿಕೆ ಇನ್ನಷ್ಟು ವೇಗದಿಂದ, ತ್ವರಿತವಾಗಿ ನಡೆಯುವುದನ್ನು ಖಾತ್ರಿಪಡಿಸುವ ಅಗತ್ಯವಿದೆ. ಚೆನ್ನೈ ಕಡಲ ಕಿನಾರೆ ಮತ್ತು ಅಟ್ಟಿಪಟ್ಟು ನಡುವೆ ನಾಲ್ಕನೇ ಮಾರ್ಗ ಈ ನಿಟ್ಟಿನಲ್ಲಿ ಸಹಾಯ ಮಾಡಬಲ್ಲದು. ವಿಲ್ಲುಪುರಂ-ತಂಜಾವೂರು-ತಿರುವರೂರ್ ಯೋಜನೆಯ ವಿದ್ಯುದ್ದೀಕರಣ ಯೋಜನೆ ನದಿ ಮುಖಜ ಭೂಮಿ ಇರುವ ಜಿಲ್ಲೆಗಳಿಗೆ ದೊಡ್ಡದೊಂದು ವರದಾನ. ಇನ್ನೂರ ಇಪ್ಪತ್ತೆಂಟು ಕಿಲೋಮೀಟರ್ ಉದ್ದದ ಈ ಮಾರ್ಗ ಆಹಾರ ಧಾನ್ಯಗಳ ತ್ವರಿತ ಸಾಗಾಣಿಕೆಯನ್ನು ಖಾತ್ರಿಪಡಿಸುವಲ್ಲಿ ಬಹಳ ದೊಡ್ದ ಸಹಾಯ ಮಾಡಲಿದೆ.

ಸ್ನೇಹಿತರೇ,

ಈ ದಿನವನ್ನು ಯಾವ ಭಾರತೀಯರೂ ಮರೆಯಲಾರರು. ಎರಡು ವರ್ಷಗಳ ಹಿಂದೆ, ಪುಲ್ವಾಮಾ ದಾಳಿ ನಡೆಯಿತು. ಆ ದಾಳಿಯಲ್ಲಿ ಹುತಾತ್ಮರಾದ ಎಲ್ಲರಿಗೂ ನಾವು ಗೌರವಾರ್ಪಣೆ ಮಾಡುತ್ತೇವೆ. ನಮ್ಮ ಭದ್ರತಾ ಪಡೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಅವರ ಶೌರ್ಯ ನಮ್ಮ ಮುಂದಿನ ತಲೆಮಾರುಗಳಿಗೆ ನಿರಂತರ ಪ್ರೇರಣೆಯಾಗಲಿದೆ.

ಸ್ನೇಹಿತರೇ,

ವಿಶ್ವದ ಅತ್ಯಂತ ಪ್ರಾಚೀನ ಭಾಷೆಯಲ್ಲಿ,

ತಮಿಳಿನಲ್ಲಿ ಬರೆದ ಮಹಾಕವಿ ಸುಬ್ರಮಣ್ಯ ಭಾರತಿ ಹೇಳಿದ್ದಾರೆ

आयुथम सेयवोम नल्ला काकीतम सेयवोम

आलेकल वाईप्पोम कल्वी सालाइकल वाईप्पोम

नडेयुम परप्पु मुनर वंडीकल सेयवोम

ग्न्यलम नडुनका वरुं कप्पलकल सेयवोम

ಇದರರ್ಥ: -

ನಾವು ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ; ನಾವು ಕಾಗದವನ್ನು ತಯಾರಿಸುವ

ನಾವು ಕಾರ್ಖಾನೆಗಳನ್ನು ಮಾಡುವ; ನಾವು ಶಾಲೆಗಳನ್ನು ರೂಪಿಸುವ

ನಾವು ಚಲಿಸುವ ಮತ್ತು ಹಾರುವ ವಾಹನಗಳನ್ನು ತಯಾರಿಸುವ

ನಾವು ಜಗತ್ತನ್ನು ನಡುಗಿಸುವ ಹಡಗುಗಳನ್ನು ನಿರ್ಮಿಸುವ

ಈ ಚಿಂತನೆಯಿಂದ ಪ್ರೇರಿತವಾಗಿ, ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ವ್ಯಾಪಕವಾದ ಪ್ರಯತ್ನಗಳನ್ನು ಕೈಗೊಂಡಿದೆ. ಎರಡು ರಕ್ಷಣಾ ಕಾರಿಡಾರುಗಳಲ್ಲಿ ಒಂದು ತಮಿಳುನಾಡಿನಲ್ಲಿದೆ. ಕಾರಿಡಾರಿಗೆ ಈಗಾಗಲೇ ಎಂಟು ಸಾವಿರದ ಒಂದು ನೂರು ಕೋಟಿ ರೂಪಾಯಿಗಳ ಹೂಡಿಕೆ ಬದ್ಧತೆ ಈಗಾಗಲೇ ಬಂದಿದೆ. ಇಂದು ನಾನು ನಮ್ಮ ಗಡಿಗಳನ್ನು ರಕ್ಷಿಸಲು ಇನ್ನೋರ್ವ ಯೋಧನನ್ನು ದೇಶಕ್ಕೆ ಸಮರ್ಪಿಸಲು ಹೆಮ್ಮೆಪಡುತ್ತೇನೆ. ದೇಶೀಯವಾಗಿ ವಿನ್ಯಾಸ ಮಾಡಿದ ಮತ್ತು ತಯಾರಿಸಲಾದ “ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್ ಮಾರ್ಕ್ 1ಎ” ಯನ್ನು ಹಸ್ತಾಂತರಿಸಲು ನನಗೆ ಹೆಮ್ಮೆ ಇದೆ. ಇದು ದೇಶೀಯ ಮದ್ದು ಗುಂಡುಗಳನ್ನು ಬಳಸುತ್ತದೆ. ತಮಿಳುನಾಡು ಈಗಾಗಲೇ ಭಾರತದ ಅಟೊಮೊಬೈಲ್ ತಯಾರಿಕಾ ಕೇಂದ್ರವಾಗಿ ಮುಂಚೂಣಿಯಲ್ಲಿದೆ.

ಈಗ, ತಮಿಳುನಾಡು ಭಾರತದ ಟ್ಯಾಂಕ್ ತಯಾರಿಕಾ ತಾಣವಾಗಿ ಮೂಡಿ ಬರುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ತಮಿಳು ನಾಡಿನಲ್ಲಿ ತಯಾರಾದ ಟ್ಯಾಂಕ್ ಉತ್ತರದ ಗಡಿಯಲ್ಲಿ ದೇಶವನ್ನು ಸುರಕ್ಷಿತವಾಗಿಡಲು ಬಳಕೆಯಾಗುತ್ತದೆ. ಇದು ಭಾರತದ ಏಕೀಕೃತ ಚೈತನ್ಯವನ್ನು ತೋರಿಸುತ್ತದೆ. ಭಾರತದ ಏಕತಾ ದರ್ಶನವನ್ನು ಮಾಡಿಸುತ್ತದೆ. ನಾವು ನಮ್ಮ ಸಶಸ್ತ್ರ ಪಡೆಗಳನ್ನು ವಿಶ್ವದಲ್ಲಿಯೇ ಅತ್ಯಾಧುನಿಕ ಪಡೆಗಳನ್ನಾಗಿ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಇದೇ ವೇಳೆ, ಭಾರತವನ್ನು ರಕ್ಷಣಾ ವಲಯದಲ್ಲಿ “ಆತ್ಮನಿರ್ಭರ”ವನ್ನಾಗಿಸುವ ಕೆಲಸ ಪೂರ್ಣ ವೇಗದಿಂದ ನಡೆಯುತ್ತಿದೆ. ನಮ್ಮ ಸಶಸ್ತ್ರ ಪಡೆಗಳು ಭಾರತದ ಶೌರ್ಯದ ಹುರುಪನ್ನು ಸಾರುತ್ತವೆ. ಅವುಗಳು ನಮ್ಮ ತಾಯ್ನಾಡನ್ನು ರಕ್ಷಿಸಲು ಸಂಪೂರ್ಣವಾಗಿ ಸಮರ್ಥವಾಗಿವೆ ಎಂಬುದನ್ನು ಆಗಾಗ, ಸಮಯ ಬಂದಾಗೆಲ್ಲಾ ತೋರ್ಪಡಿಸಿವೆ. ಭಾರತವು ಶಾಂತಿಯಲ್ಲಿ ನಂಬಿಕೆ ಹೊಂದಿದೆ ಎಂಬುದನ್ನೂ ಅವು ಕಾಲಕಾಲಕ್ಕೆ ನಿರೂಪಿಸುತ್ತಾ ಬಂದಿವೆ. ಆದರೆ, ಭಾರತವು ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಲು ಯಾವ ಬೆಲೆ ತೆರಲೂ ಸಿದ್ದವಿದೆ. ನಮ್ಮ ಪಡೆಗಳ धीर भी है, वीर भी है , सैन्य शक्ति ಮತ್ತು धैर्य शक्ति ಗಮನೀಯವಾದುದು.

ಸ್ನೇಹಿತರೇ,

ಐ.ಐ.ಟಿ ಮದ್ರಾಸಿನ ಡಿಸ್ಕವರಿ ಕ್ಯಾಂಪಸ್ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳಿಗಾಗಿ 2 ಲಕ್ಷ ಚದರ ಮೀಟರ್ ಮೂಲಸೌಕರ್ಯವನ್ನು ಹೊಂದಲಿದೆ. ಬಹಳ ಶೀಘ್ರದಲ್ಲಿಯೇ ಐ.ಐ.ಟಿ. ಮದ್ರಾಸಿನ ಸಂಶೋಧನಾ ಕ್ಯಾಂಪಸ್ ಸಂಶೋಧನೆ ಮತ್ತು ಅನ್ವೇಷಣೆಯ ಪ್ರಮುಖ ಕೇಂದ್ರವಾಗಲಿದೆ ಎಂಬ ಬಗ್ಗೆ ನನಗೆ ಭರವಸೆ ಇದೆ. ಇದು ದೇಶಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸಲಿದೆ.

ಸ್ನೇಹಿತರೇ,

ಒಂದು ಸಂಗತಿ ಖಚಿತ- ಜಗತ್ತು ಬಹಳ ಆಸಕ್ತಿಯಿಂದ ಮತ್ತು ಧನಾತ್ಮಕತೆಯಿಂದ ಭಾರತದತ್ತ ನೋಡುತ್ತಿದೆ. ಇದು ಭಾರತದ ದಶಕವಾಗಲಿದೆ. ಮತ್ತು ಇದಕ್ಕೆ ಕಾರಣ 130 ಕೋಟಿ ಭಾರತೀಯರ ಕಠಿಣ ಶ್ರಮ ಮತ್ತು ಬೆವರು. ಭಾರತ ಸರಕಾರವು ಈ ಆಶೋತ್ತರಗಳನ್ನು ಮತ್ತು ಅನ್ವೇಷಣೆಗಳನ್ನು ಬೆಂಬಲಿಸಲು ಸಾಧ್ಯ ಇರುವುದೆಲ್ಲವನ್ನೂ ಮಾಡಲು ಬದ್ಧವಾಗಿದೆ. ಸರಕಾರದ ಸುಧಾರಣಾ ಬದ್ಧತೆಯನ್ನು ಈ ವರ್ಷದ ಬಜೆಟ್ ಮತ್ತೆ ತೋರಿಸಿಕೊಟ್ಟಿದೆ. ಈ ವರ್ಷದ ಬಜೆಟ್ಟಿನಲ್ಲಿ, ಭಾರತದ ಕರಾವಳಿ ತೀರಗಳನ್ನು ಅಭಿವೃದ್ಧಿ ಮಾಡಲು ವಿಶೇಷ ಮಹತ್ವ ನೀಡಲಾಗಿರುವುದು ನಿಮಗೆ ಸಂತೋಷ ತರಬಹುದು.

ಭಾರತವು ತನ್ನ ಮೀನುಗಾರ ಸಮುದಾಯದ ಬಗ್ಗೆ ಹೆಮ್ಮೆ ಹೊಂದಿದೆ. ಅವರು ಚುರುಕುತನ ಮತ್ತು ದಯಾಳುತನಕ್ಕೆ ಸಂಕೇತ. ಈ ಬಜೆಟ್ಟಿನಲ್ಲಿ ಅವರಿಗೆ ಹೆಚ್ಚುವರಿ ಮುಂಗಡವನು ಖಾತ್ರಿಪಡಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಮೀನುಗಾರಿಕೆಗೆ ಸಂಬಂಧಿಸಿದ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಚೆನ್ನೈ ಸಹಿತ ಐದು ಕೇಂದ್ರಗಳಲ್ಲಿ ಆಧುನಿಕ ಮೀನುಗಾರಿಕಾ ಬಂದರುಗಳು ತಲೆ ಎತ್ತಲಿವೆ. ಸಮುದ್ರ ಕಳೆ ಕೃಷಿಯ ಬಗ್ಗೆ ನಾವು ಆಶಾವಾದಿಯಾಗಿದ್ದೇವೆ. ಇದು ಕರಾವಳಿ ಸಮುದಾಯಗಳ ಜೀವನವನ್ನು ಸುಧಾರಿಸಲಿದೆ. ಸಮುದ್ರ ಕಳೆ ಕೃಷಿಗೆ ಬಹು ಉದ್ದೇಶಿತ ಸಮುದ್ರ ಕಳೆ ಪಾರ್ಕ್ ಕೂಡಾ ತಮಿಳು ನಾಡಿನಲ್ಲಿ ತಲೆ ಎತ್ತಲಿದೆ.

ಸ್ನೇಹಿತರೇ,

ಭಾರತವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ತ್ವರಿತಗತಿಯಿಂದ ಮೈಗೂಢಿಸಿಕೊಳ್ಳುತ್ತಿದೆ. ಇಂದು ಭಾರತವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಮೂಲಸೌಕರ್ಯಗಳು ರೂಪುಗೊಳ್ಳುತ್ತಿರುವ ದೇಶಗಳಲ್ಲಿ ಒಂದಾಗಿದೆ. ಇತ್ತೀಚೆಗೆ ನಾವು ನಮ್ಮ ಎಲ್ಲಾ ಹಳ್ಳಿಗಳನ್ನು, ಗ್ರಾಮಗಳನ್ನು ಅಂತರ್ಜಾಲದೊಂದಿಗೆ ಸಂಪರ್ಕಿಸುವ ಆಂದೋಲನ ಕೈಗೊಂಡಿದ್ದೇವೆ. ಅದೇ ರೀತಿ, ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಆರೋಗ್ಯ ರಕ್ಷಣಾ ಕಾರ್ಯಕ್ರಮವನ್ನು ಹೊಂದಿದೆ. ಭಾರತವು ತನ್ನ ಶಿಕ್ಷಣ ರಂಗದಲ್ಲಿ ಚೌಕಟ್ಟಿನಾಚೆಗಿನ ಚಿಂತನೆ ಮತ್ತು ತಂತ್ರಜ್ಞಾನದ ಮೂಲಕ ಪರಿವರ್ತನೆ ತರಲು ಮುಂದಡಿ ಇಟ್ಟಿದೆ. ಈ ಬೆಳವಣಿಗೆಗಳು ಯುವ ಜನತೆಗೆ ಅಸಂಖ್ಯಾತ ಅವಕಾಶಗಳನ್ನು ತರಲಿವೆ.

ಸ್ನೇಹಿತರೇ,

ತಮಿಳುನಾಡಿನ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಆಚರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಅದು ನಮ್ಮ ಗೌರವ. ತಮಿಳುನಾಡಿನ ಸಂಸ್ಕೃತಿ ಜಾಗತಿಕವಾಗಿ ಜನಪ್ರಿಯವಾಗಿದೆ. ಇಂದು, ತಮಿಳುನಾಡಿನ ದೇವೇಂದ್ರ ಕುಲ ವೆಲ್ಲಲಾರ್ ಸಮುದಾಯದ ಸಹೋದರಿಯರು ಮತ್ತು ಸಹೋದರರಿಗೆ ಒಂದು ಸಂದೇಶ ತಿಳಿಸಲು ನಾನು ಹರ್ಷಿಸುತ್ತೇನೆ. ಕೇಂದ್ರ ಸರಕಾರವು ದೇವೇಂದ್ರಕುಲ ವೆಲಾಲಾರ್ ಎಂದು ಗುರುತಿಸಲ್ಪಡಬೇಕು ಎಂಬ ಅವರ ಧೀರ್ಘ ಕಾಲದ ಬೇಡಿಕೆಯನ್ನು ಒಪ್ಪಿಕೊಂಡಿದೆ. ಅವರು ಇನ್ನು ಅವರ ಪಾರಂಪರಿಕ ಹೆಸರಿನಿಂದ ಗುರುತಿಸಲ್ಪಡುತ್ತಾರೆಯೇ ಹೊರತು ಸಂವಿಧಾನದ ಶೆಡ್ಯೂಲ್ ನಲ್ಲಿ ಪಟ್ಟಿ ಮಾಡಲಾಗಿರುವ ಆರರಿಂದ ಏಳು ಹೆಸರುಗಳಿಂದಲ್ಲ. ದೇವೇಂದ್ರಕುಲ ವೆಲಲಾರ್ ಎಂಬ ಹೆಸರಿನಿಂದ ಅವರನ್ನು ಗುರುತಿಸಲು ಸಂವಿಧಾನದ ಶೆಡ್ಯೂಲ್ ನ್ನು ತಿದ್ದುಪಡಿ ಮಾಡುವ ಕರಡು ರಾಜ್ಯಪತ್ರಕ್ಕೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಮುಂದಿನ ಅಧಿವೇಶನ ಆರಂಭಕ್ಕೆ ಮುನ್ನ ಇದನ್ನು ಸಂಸತ್ತಿನೆದುರು ಇಡಲಾಗುತ್ತದೆ. ಈ ಬೇಡಿಕೆಯ ಬಗ್ಗೆ ವಿಸ್ತ್ರತವಾದ ಅಧ್ಯಯನ ನಡೆಸಿದುದಕ್ಕಾಗಿ ನಾನು ತಮಿಳುನಾಡು ಸರಕಾರಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಬೇಡಿಕೆಗೆ ಅವರ ಬೆಂಬಲ ಬಹಳ ಧೀರ್ಘಾವಧಿಯಿಂದ ಇತ್ತು.

ಸ್ನೇಹಿತರೇ,

ನಾನು 2015ರಲ್ಲಿ ದಿಲ್ಲಿಯಲ್ಲಿ ದೇವೇಂದ್ರಾರ್ ಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದನ್ನು ಮರೆಯಲಾರೆ. ಅವರಲ್ಲಿ ಹತಾಶೆ, ದುಃಖ ಕಾಣಬಹುದಾಗಿತ್ತು. ವಸಾಹತುಶಾಹಿ ಆಡಳಿತಗಾರರು ಅವರ ಹೆಮ್ಮೆ ಮತ್ತು ಘನತೆಯನ್ನು ಮಣ್ಣುಪಾಲು ಮಾಡಿದ್ದರು. ದಶಕಗಳ ಕಾಲ ಏನೂ ನಡೆಯಲಿಲ್ಲ. ಅವರು ನನಗೆ ಹೇಳಿದ್ದರು- ಸರಕಾರಗಳನ್ನು ನಾವು ಬೇಡುತ್ತಲೇ ಬಂದೆವು, ಆದರೆ ಯಾವ ಬದಲಾವಣೆಯೂ ಆಗಲಿಲ್ಲ ಎಂಬುದಾಗಿ. ನಾನವರಿಗೆ ಒಂದು ಸಂಗತಿ ಹೇಳಿದ್ದೆ. ನಾನು ಹೇಳಿದ್ದೆ -ಅವರ ದೇವೇಂದರ್ ಹೆಸರು ಮತ್ತು ನನ್ನ ಹೆಸರು ನರೇಂದ್ರ ಪ್ರಾಸಬದ್ಧವಾಗಿದೆ ಎಂದು. ನಾನು ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡೆ. ಈ ನಿರ್ಧಾರ ಬರೇ ಹೆಸರು ಬದಲಾವಣೆಗಿಂತ ಹೆಚ್ಚಿನದ್ದು. ಇದು ನ್ಯಾಯ, ಘನತೆ, ಮತ್ತು ಅವಕಾಶಗಳಿಗೆ ಸಂಬಂಧಿಸಿದ್ದು. ದೇವೇಂದ್ರ ಕುಲ ಸಮುದಾಯದಿಂದ ನಾವೆಲ್ಲರೂ ಕಲಿಯಬೇಕಾದ್ದು ಬಹಳಷ್ಟಿದೆ. ಅವರು ಸೌಹಾರ್ದತೆಯನ್ನು, ಗೆಳೆತನವನ್ನು ಮತ್ತು ಸಹೋದರತ್ವವನ್ನು ಆಚರಿಸುತ್ತಾರೆ. ಅವರದ್ದು ನಾಗರಿಕತೆಯ ಆಂದೋಲನ. ಇದು ಅವರ ಆತ್ಮ ವಿಶ್ವಾಸ ಮತ್ತು ಆತ್ಮ ಘನತೆಯನ್ನು ತೋರಿಸುತ್ತದೆ--- आत्म-गौरव.

ಸ್ನೇಹಿತರೇ,

ನಮ್ಮ ಸರಕಾರವು ಶ್ರೀಲಂಕಾದಲ್ಲಿರುವ ನಮ್ಮ ತಮಿಳು ಸಹೋದರರು ಮತ್ತು ಸಹೋದರಿಯರ ಕಲ್ಯಾಣ ಹಾಗು ಆಶೋತ್ತರಗಳ ಬಗ್ಗೆ ಸದಾ ಕಾಳಜಿ ವಹಿಸಿದೆ. ಜಾಫ್ನಾಕ್ಕೆ ಭೇಟಿ ನೀಡಿದ ಏಕೈಕ ಭಾರತೀಯ ಪ್ರಧಾನ ಮಂತ್ರಿ ಎಂಬುದು ನನಗೆ ಲಭಿಸಿರುವ ಗೌರವವಾಗಿದೆ. ಅಭಿವೃದ್ಧಿ ಕೆಲಸಗಳ ಮೂಲಕ ನಾವು ಶ್ರೀಲಂಕಾ ತಮಿಳು ಸಮುದಾಯದ ಕಲ್ಯಾಣವನ್ನು ಖಾತ್ರಿಪಡಿಸುತ್ತಿದ್ದೇವೆ. ತಮಿಳರಿಗೆ ನಮ್ಮ ಸರಕಾರ ಕೊಡಮಾಡಿದ ಸಂಪನ್ಮೂಲಗಳು ಹಿಂದೆಂದಿಗಿಂತಲೂ ಬಹಳ ಹೆಚ್ಚಿನ ಪ್ರಮಾಣದವು. ಇದರಲ್ಲಿ ಅಡಕವಾಗಿರುವ ಯೋಜನೆಗಳೆಂದರೆ:-ಈಶಾನ್ಯ ಶ್ರೀಲಂಕಾದಲ್ಲಿ ಸ್ಥಳಾಂತರಗೊಂಡ ತಮಿಳರಿಗೆ ಐವತ್ತು ಸಾವಿರ ಮನೆಗಳು, ಪ್ಲಾಂಟೇಶನ್ ಪ್ರದೇಶಗಳಲ್ಲಿ ನಾಲ್ಕು ಸಾವಿರ ಮನೆಗಳು, ಆರೋಗ್ಯ ಕ್ಷೇತ್ರಕ್ಕೆ ಬಂದರೆ, ನಾವು ಉಚಿತ ಅಂಬುಲೆನ್ಸ್ ಸೇವೆಗೆ ಹಣಕಾಸು ಒದಗಿಸಿದ್ದು, ಈ ಸೇವೆಯನ್ನು ತಮಿಳು ಸಮುದಾಯ ವ್ಯಾಪಕವಾಗಿ ಬಳಸುತ್ತಿದೆ. ಡಿಕ್ಕೋಯಾದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಸಂಪರ್ಕವನ್ನು ಬೆಸೆಯಲು ಜಾಫ್ನಾಕ್ಕೆ ಮತ್ತು ಮನ್ನಾರ್ ಗೆ ರೈಲ್ವೇ ಜಾಲವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಚೆನ್ನೈಯಿಂದ ಜಾಫ್ನಾಕ್ಕೆ ವಿಮಾನ ಸಂಪರ್ಕವನ್ನು ಸ್ಥಾಪಿಸಲಾಗಿದೆ. ಭಾರತವು ಜಾಫ್ನಾ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಿರುವ ವಿಷಯವನ್ನು ಹಂಚಿಕೊಳ್ಳಲು ನನಗೆ ಬಹಳ ಸಂತೋಷವಾಗುತ್ತದೆ, ಇದು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂಬ ಭರವಸೆ ನಮಗಿದೆ. ತಮಿಳು ಹಕ್ಕುಗಳ ಬಗ್ಗೆ ನಾವು ನಿರಂತರವಾಗಿ ಶ್ರೀ ಲಂಕಾದ ನಾಯಕರ ಜೊತೆ ಸಮಾಲೋಚಿಸುತ್ತಿದ್ದೇವೆ. ಅವರು ಸಮಾನತೆ, ನ್ಯಾಯ, ಶಾಂತಿ ಮತ್ತು ಘನತೆಯೊಂದಿಗೆ ಬದುಕುವುದನ್ನು ಖಾತ್ರಿಪಡಿಸುವುದಕ್ಕೆ ನಾವು ಸದಾ ಬದ್ಧರಾಗಿದ್ದೇವೆ.

ಸ್ನೇಹಿತರೇ,

ನಮ್ಮ ಮೀನುಗಾರರು ಎದುರಿಸುತ್ತಿರುವ ಸಮಸ್ಯೆ ಬಹಳ ಧೀರ್ಘ ಕಾಲದಿಂದ ಇರುವಂತಹದ್ದು.ನಾನು ಸಮಸ್ಯೆಯ ಇತಿಹಾಸದೊಳಗೆ ಹೋಗಲು ಇಚ್ಛಿಸುವುದಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ, ನನ್ನ ಸರಕಾರ ಅವರ ಕಾನೂನುಬದ್ಧ ಹಿತಾಸಕ್ತಿಗಳನ್ನು ಸದಾ ರಕ್ಷಿಸುತ್ತದೆ. ಶ್ರೀಲಂಕಾದಲ್ಲಿ ಮೀನುಗಾರರು ಬಂಧಿಸಲ್ಪಟ್ಟಾಗೆಲ್ಲಾ ನಾವು ಆದಷ್ಟು ಬೇಗ ಅವರ ಬಿಡುಗಡೆಯಾಗುವುದನ್ನು ಖಾತ್ರಿಪಡಿಸಿದ್ದೇವೆ. ನಮ್ಮ ಅವಧಿಯಲ್ಲಿ ಸಾವಿರದ ಆರುನೂರಕ್ಕೂ ಅಧಿಕ ಮೀನುಗಾರರು ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಯಾವುದೇ ಭಾರತೀಯ ಮೀನುಗಾರರು ಶ್ರೀ ಲಂಕಾ ವಶದಲ್ಲಿ ಇಲ್ಲ. ಅದೇ ರೀತಿ ಮುನ್ನೂರ ಹದಿಮೂರು ದೋಣಿಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು ನಾವು ಇನ್ನುಳಿದ ದೋಣಿಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.

ಸ್ನೇಹಿತರೇ,

ಮಾನವ ಕೇಂದ್ರಿತ ಧೋರಣೆಯಿಂದ ಪ್ರೇರಣೆ ಪಡೆದು, ಭಾರತವು ಕೋವಿಡ್ -19 ರ ವಿರುದ್ಧ ವಿಶ್ವದ ಯುದ್ದವನ್ನು ಬಲಿಷ್ಟಗೊಳಿಸುತ್ತಿದೆ. ನಮ್ಮ ದೇಶವನ್ನು ಅಭಿವೃದ್ಧಿ ಮಾಡಲು ನಾವು ಏನೇನು ಮಾಡಬಹುದೋ ಅದನ್ನು ನಾವು ಮಾಡುತ್ತಲೇ ಇರಬೇಕು. ಮತ್ತು ವಿಶ್ವವನ್ನು ಉತ್ತಮ ಸ್ಥಳವನ್ನಾಗಿಸಬೇಕು. ನಮ್ಮ ಸಂವಿಧಾನದ ನಿರ್ಮಾತೃಗಳು ನಾವು ಇದನ್ನು ಮಾಡಬೇಕು ಎಂದು ಆಶಿಸಿದ್ದರು. ಇಂದು ಆರಂಭ ಮಾಡಿದ ಅಭಿವೃದ್ಧಿ ಕಾರ್ಯಗಳಿಗಾಗಿ ನಾನು ಮತ್ತೊಮ್ಮೆ ತಮಿಳುನಾಡಿನ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಧನ್ಯವಾದಗಳು!

ಬಹಳ ಬಹಳ ಧನ್ಯವಾದಗಳು!

ವಣಕ್ಕಂ!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi launches Unified Genomic Chip for cattle: How will it help farmers?

Media Coverage

PM Modi launches Unified Genomic Chip for cattle: How will it help farmers?
NM on the go

Nm on the go

Always be the first to hear from the PM. Get the App Now!
...
Prime Minister shares memorable moments of Mumbai metro journey
October 06, 2024

The Prime Minister Shri Narendra Modi today shared his memorable moments of Mumbai metro journey.

In a post on X, he wrote:

“Memorable moments from the Mumbai Metro. Here are highlights from yesterday’s metro journey.”