ಕೆಲವು ದಿನಗಳ ಹಿಂದಷ್ಟೇ ಪ್ರೊಫೆಸರ್ ಎಂ.ಎಸ್. ಸ್ವಾಮಿನಾಥನ್ ಅವರು ನಮ್ಮನ್ನು ಅಗಲಿದರು. ಕೃಷಿ ವಿಜ್ಞಾನದಲ್ಲಿ ಕ್ರಾಂತಿ ತಂದ ದಾರ್ಶನಿಕರೊಬ್ಬರನ್ನು ನಮ್ಮ ದೇಶವು ಕಳೆದುಕೊಂಡಿತು. ಆದರೂ ಭಾರತಕ್ಕೆ ಅವರ ಕೊಡುಗೆಯು ಸುವರ್ಣಾಕ್ಷರಗಳಲ್ಲಿ ಅಚ್ಚಳಿಯದೆ ಸದಾ ಅಜರಾಮರವಾಗಲಿದೆ.

ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರು ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ನಮ್ಮ ರಾಷ್ಟ್ರ, ವಿಶೇಷವಾಗಿ ನಮ್ಮ ರೈತರು ಸಮೃದ್ಧಿಯ ಜೀವನವನ್ನು ನಡೆಸಬೇಕೆಂದು ಬಯಸಿದ್ದರು. ಶೈಕ್ಷಣಿಕವಾಗಿ ಪ್ರತಿಭಾವಂತರಾಗಿದ್ದ ಅವರಿಗೆ ಯಾವುದೇ ವೃತ್ತಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು. ಆದರೆ, 1943ರ ಬಂಗಾಳದ ಕ್ಷಾಮ ಅವರ ಮೇಲೆ ಎಷ್ಟು ಪ್ರಭಾವ ಬೀರಿತೆದಂದರೆ, ತಾವು ಮಾಡುವ ಒಂದೇ ಒಂದು ಕೆಲಸ ಯಾವುದಾದರೂ ಇದ್ದರೆ ಅದು ಕೃಷಿಯ ಅಧ್ಯಯನ ಎಂದು ಸ್ಪಷ್ಟ ಸಂಕಲ್ಪತೊಟ್ಟರು.

ವಯಸ್ಸಿನಲ್ಲಿ ಚಿಕ್ಕವರಾದರೂ ಅವರು ಡಾ. ನಾರ್ಮನ್ ಬೋರ್ಲಾಗ್ ಅವರೊಂದಿಗೆ ಸಂಪರ್ಕಕ್ಕೆ ಬಂದರು, ಜೊತೆಗೆ ಅವರ ಕೆಲಸವನ್ನು ಬಹಳ ಆಳವಾಗಿ ಅನುಸರಿಸಿದರು. 1950ರ ದಶಕದಲ್ಲಿ, ಅವರಿಗೆ ಅಮೆರಿಕದಲ್ಲಿ ಬೋಧಕರಾಗುವ ಅವಕಾಶ ಒದಗಿಬಂದಿತು. ಆದರೆ ಅವರು ಭಾರತದಲ್ಲಿ ಮತ್ತು ಭಾರತಕ್ಕಾಗಿ ಕೆಲಸ ಮಾಡಲು ಬಯಸಿದ್ದರಿಂದ ಅದನ್ನು ತಿರಸ್ಕರಿಸಿದರು.

ಸ್ವಾಮಿನಾಥನ್‌ ಅವರು ನಮ್ಮ ರಾಷ್ಟ್ರವನ್ನು ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದ ಪಥದತ್ತ ಮುನ್ನಡೆಸಿದ ಸವಾಲಿನ ಸಂದರ್ಭಗಳ ಬಗ್ಗೆ ನೀವೆಲ್ಲರೂ ಯೋಚಿಸಬೇಕೆಂದು ನಾನು ಬಯಸುತ್ತೇನೆ. ಸ್ವಾತಂತ್ರ್ಯದ ನಂತರದ ಮೊದಲ ಎರಡು ದಶಕಗಳಲ್ಲಿ, ಅಪಾರವಾದ ಸವಾಲುಗಳು ನಮ್ಮೆದುರಿಗಿದ್ದವು, ಅವುಗಳಲ್ಲಿ ಆಹಾರದ ಕೊರತೆಯೂ ಒಂದಾಗಿತ್ತು. 1960ರ ದಶಕದ ಆರಂಭದಲ್ಲಿ ಭಾರತವು ಕ್ಷಾಮದ ಕರಿಛಾಯೆಯೊಂದಿಗೆ ಹೋರಾಡುತ್ತಿತ್ತು. ಸರಿಯಾಗಿ ಇದೇ ಸಮಯದಲ್ಲೇ ಪ್ರೊ. ಸ್ವಾಮಿನಾಥನ್ ಅವರ ಅಚಲ ಬದ್ಧತೆ ಮತ್ತು ದೂರದೃಷ್ಟಿಯು ಕೃಷಿ ಸಮೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡಿತು. ಕೃಷಿ ಹಾಗೂ ಗೋಧಿ ತಳಿಯ ಅಭವೃದ್ಧಿಯಂತಹ ನಿರ್ದಿಷ್ಟ ಕ್ಷೇತ್ರಗಳಲ್ಲಿ ಸ್ವಾಮಿನಾಥನ್‌ ಅವರ ಮುಂಚೂಣಿ ಕೆಲಸವು ಗೋಧಿ ಉತ್ಪಾದನೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಯಿತು. ಇದರಿಂದಾಗಿ ಭಾರತವು ಆಹಾರ ಕೊರತೆಯ ದೇಶದ ಹಂತದಿಂದ ಸ್ವಾವಲಂಬಿ ರಾಷ್ಟ್ರವಾಗಿ ಪರಿವರ್ತನೆಯಾಯಿತು. ಈ ಅದ್ಭುತ ಸಾಧನೆಯು ಸ್ವಾಮಿನಾಥನ್‌ ಅವರಿಗೆ "ಭಾರತೀಯ ಹಸಿರು ಕ್ರಾಂತಿಯ ಪಿತಾಮಹ" ಎಂಬ ಬಿರುದನ್ನು ಗಳಿಸಿಕೊಟ್ಟಿತು.

ಭಾರತದಲ್ಲಿ ಅಂತರ್ಗತವಾಗಿದ್ದ "ನಾವು ಸಹ ಮಾಡಬಲ್ಲೆವು" ಎಂಬ ಮನೋಭಾವದ ಒಂದು ಮುನ್ನೋಟವನ್ನು ಹಸಿರು ಕ್ರಾಂತಿಯು ಒದಗಿಸಿತು - ನಮಗೆ ಶತಕೋಟಿ ಸವಾಲುಗಳಿದ್ದರೇನಂತೆ, ಆ ಸವಾಲುಗಳನ್ನು ಪರಿಹರಿಸಲು ನಾವೀನ್ಯತೆಯ ಜ್ವಾಲೆಯೊಂದಿಗೆ ಶತಕೋಟಿ ಮನಸ್ಸುಗಳೂ ಇಲ್ಲಿವೆ ಎಂಬ ಆಶಾಕಿರಣವನ್ನು ಹೊರ ಹೊಮ್ಮಿಸಿತು. ಹಸಿರು ಕ್ರಾಂತಿ ಪ್ರಾರಂಭವಾದ ಐದು ದಶಕಗಳ ನಂತರ, ಭಾರತೀಯ ಕೃಷಿಯು ಹೆಚ್ಚು ಆಧುನಿಕ ಮತ್ತು ಪ್ರಗತಿಪರವಾಗಿದೆ. ಆದರೆ, ಇದಕ್ಕೆ ಪ್ರೊ. ಸ್ವಾಮಿನಾಥನ್ ಅವರು ಹಾಕಿದ ಅಡಿಪಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಹಲವು ವರ್ಷಗಳಲ್ಲಿ, ಅವರು ಆಲೂಗಡ್ಡೆ ಬೆಳೆಗಳ ಮೇಲೆ ಪರಿಣಾಮ ಬೀರುವ ಪರಾವಲಂಬಿಗಳನ್ನು ಎದುರಿಸುವ ಕುರಿತು ಸಂಶೋಧನೆಯನ್ನು ಕೈಗೊಂಡರು. ಅವರ ಸಂಶೋಧನೆಯು ಆಲೂಗಡ್ಡೆ ಬೆಳೆಗಳಿಗೆ ಶೀತ ಹವಾಮಾನವನ್ನು ತಡೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಇಂದು, ಜಗತ್ತು ಸಿರಿಧಾನ್ಯಗಳು ಅಥವಾ ʻಶ್ರೀಅನ್ನʼ ಶಕ್ತಿಯುತ ಆಹಾರ (ಸೂಪರ್‌ ಫುಡ್‌) ಎಂದು ಮಾತನಾಡುತ್ತಿದೆ. ಆದರೆ ಪ್ರೊಫೆಸರ್ ಸ್ವಾಮಿನಾಥನ್ ಅವರು 1990ರ ದಶಕದಿಂದಲೇ ಸಿರಿಧಾನ್ಯಗಳ ಬಗ್ಗೆ ಚರ್ಚೆಯನ್ನು ಪ್ರೋತ್ಸಾಹಿಸಿದ್ದರು.

ಪ್ರೊ. ಸ್ವಾಮಿನಾಥನ್ ಅವರೊಂದಿಗಿನ ನನ್ನ ವೈಯಕ್ತಿಕ ಒಡನಾಟಗಳು ಬಹಳ ವ್ಯಾಪಕವಾಗಿವೆ. 2001ರಲ್ಲಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವು ಪ್ರಾರಂಭವಾದವು. ಆ ದಿನಗಳಲ್ಲಿ, ಗುಜರಾತ್ ತನ್ನ ಕೃಷಿ ಪರಾಕ್ರಮಕ್ಕೆ ಅಷ್ಟೊಂದು ಹೆಸರುವಾಸಿಯಾಗಿರಲಿಲ್ಲ. ಸತತ ಬರಗಾಲ, ಪ್ರಚಂಡ ಸೈಕ್ಲೋನ್ ಮತ್ತು ಭೂಕಂಪವು ರಾಜ್ಯದ ಬೆಳವಣಿಗೆಯ ಪಥದ ಮೇಲೆ ಪರಿಣಾಮ ಬೀರಿತ್ತು. ನಾವು ಪ್ರಾರಂಭಿಸಿದ ಅನೇಕ ಉಪಕ್ರಮಗಳಲ್ಲಿ, ಮಣ್ಣಿನ ಆರೋಗ್ಯ ಕಾರ್ಡ್ ಕೂಡ ಒಂದಾಗಿತ್ತು. ಇದು ಮಣ್ಣನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಗಳು ಉದ್ಭವಿಸಿದರೆ ಅವುಗಳನ್ನು ಪರಿಹರಿಸಲು ನಮಗೆ ಅನುವು ಮಾಡಿಕೊಟ್ಟಿತು. ಈ ಯೋಜನೆಯ ಹಿನ್ನೆಲೆಯಲ್ಲಿ ನಾನು ಪ್ರೊ. ಸ್ವಾಮಿನಾಥನ್ ಅವರನ್ನು ಭೇಟಿಯಾಗಿದ್ದೆ. ಅವರು ಯೋಜನೆಯನ್ನು ಶ್ಲಾಘಿಸಿದರು ಜೊತೆಗೆ, ಅದಕ್ಕಾಗಿ ತಮ್ಮ ಅಮೂಲ್ಯವಾದ ಸಲಹೆ-ಸೂಚನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಈ ಯೋಜನೆಯ ಬಗ್ಗೆ ಸಂದೇಹ ಹೊಂದಿದ್ದವರಿಗೆ ಮನವರಿಕೆ ಮಾಡಲು ಅವರ ಅನುಮೋದನೆಯೊಂದೇ ಸಾಕಾಗಿತ್ತು. ಇದು ಅಂತಿಮವಾಗಿ ಗುಜರಾತ್‌ನ ಕೃಷಿ ಯಶಸ್ಸಿಗೆ ವೇದಿಕೆಯನ್ನು ನಿರ್ಮಿಸಿತು.
ಮುಖ್ಯಮಂತ್ರಿಯಾಗಿ ನನ್ನ ಅಧಿಕಾರಾವಧಿಯಲ್ಲಿ ಮತ್ತು ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಲೂ ನಮ್ಮ ಒಡನಾಟ ಮುಂದುವರಿಯಿತು. ನಾನು ಅವರನ್ನು 2016ರಲ್ಲಿ ʻಅಂತರರಾಷ್ಟ್ರೀಯ ಕೃಷಿ-ಜೀವವೈವಿಧ್ಯ ಕಾಂಗ್ರೆಸ್‌ʼನಲ್ಲಿ ಭೇಟಿಯಾಗಿದ್ದೆ. ಅದರ ಮುಂದಿನ ವರ್ಷ 2017ರಲ್ಲಿ, ಅವರು ಬರೆದ ಎರಡು ಭಾಗಗಳ ಪುಸ್ತಕ ಸರಣಿಯನ್ನು ನಾನೇ ಲೋಕಾರ್ಪಣೆ ಮಾಡಿದ್ದೆ.

ರೈತರು ಜಗತ್ತನ್ನು ಒಟ್ಟಿಗೆ ಬೆಸೆದು ಹಿಡಿದಿರುವ ಬಂಧಕ ಶಕ್ತಿ ಎಂದು ʻಕುರಾಲ್ʼ ಕೃಷಿಕರನ್ನು ಬಣ್ಣಿಸುತ್ತದೆ. ಏಕೆಂದರೆ ಎಲ್ಲರನ್ನೂ ಪೋಷಿಸುವುದು ರೈತರೇ. ಪ್ರೊ. ಸ್ವಾಮಿನಾಥನ್ ಅವರು ಈ ತತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು. ಬಹಳಷ್ಟು ಜನರು ಅವರನ್ನು "ಕೃಷಿ ವೈಜ್ಞಾನಿಕ್" - ಕೃಷಿ ವಿಜ್ಞಾನಿ ಎಂದು ಕರೆಯುತ್ತಾರೆ. ಆದರೆ, ಅವರು ಅದಕ್ಕೂ ಮಿಗಿಲಾದವರಾಗಿದ್ದರು ಎಂದು ನಾನು ಸದಾ ನಂಬುತ್ತೇನೆ. ಅವರು ನಿಜವಾದ "ಕಿಸಾನ್ ವೈಜ್ಞಾನಿಕ್‌" - ರೈತರ ವಿಜ್ಞಾನಿ ಆಗಿದ್ದರು. ಅವರ ಹೃದಯದಲ್ಲಿ ಒಬ್ಬ ರೈತನಿದ್ದ. ಅವರ ಕಾರ್ಯ ಮತ್ತು ಕೃತಿಗಳ ಯಶಸ್ಸು ಕೇವಲ ಅವರ ಶೈಕ್ಷಣಿಕ ಉತ್ಕೃಷ್ಟತೆಗಷ್ಟೇ ಸೀಮಿತವಾಗಿಲ್ಲ; ಪ್ರಯೋಗಾಲಯಗಳ ಹೊರಗೆ, ಹೊಲ-ಗದ್ದೆಗಳಲ್ಲಿ ಅವುಗಳು ಬೀರಿದ ಪರಿಣಾಮದಲ್ಲಿ ಇದು ಅಡಗಿದೆ. ಸ್ವಾಮಿನಾಥನ್‌ ಅವರು ಕೈಗೊಂಡ ಕಾರ್ಯವು ವೈಜ್ಞಾನಿಕ ಜ್ಞಾನ ಮತ್ತು ಅದರ ಪ್ರಾಯೋಗಿಕ ಅನ್ವಯದ ನಡುವಿನ ಅಂತರವನ್ನು ಕಡಿಮೆ ಮಾಡಿತು. ಮಾನವ ಪ್ರಗತಿ ಮತ್ತು ಪರಿಸರ ಸುಸ್ಥಿರತೆಯ ನಡುವಿನ ಸೂಕ್ಷ್ಮ ಸಮತೋಲನವನ್ನು ಒತ್ತಿಹೇಳುವ ಮೂಲಕ ಅವರು ಸುಸ್ಥಿರ ಕೃಷಿಯನ್ನು ನಿರಂತರವಾಗಿ ಪ್ರತಿಪಾದಿಸಿದರು. ಸಣ್ಣ ರೈತರ ಜೀವನವನ್ನು ಸುಧಾರಿಸಲು ಮತ್ತು ಅಂತಹ ರೈತರು ಸಹ ನಾವಿನ್ಯತೆಯ ಫಲಗಳನ್ನು ಆನಂದಿಸುವುದನ್ನು ಖಾತರಿಪಡಿಸಲು ಪ್ರೊ. ಸ್ವಾಮಿನಾಥನ್ ನೀಡಿದ ವಿಶೇಷ ಮಹತ್ವವನ್ನು ನಾನು ಇಲ್ಲಿ ಒತ್ತಿ ಹೇಳಲೇಬೇಕು. ಮಹಿಳಾ ರೈತರ ಜೀವನವನ್ನು ಸುಧಾರಿಸುವ ಬಗ್ಗೆ ಅವರು ವಿಶೇಷವಾಗಿ ಉತ್ಸುಕರಾಗಿದ್ದರು.

ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರ ಬಗ್ಗೆ ಹೇಳಬೇಕಾದ ಮತ್ತೊಂದು ಗಮನಾರ್ಹವಾದ ವಿಷಯವಿದೆ - ಅವರು ನಾವೀನ್ಯತೆ ಮತ್ತು ಮಾರ್ಗದರ್ಶನದ ಪರಾಕಾಷ್ಠೆಯಾಗಿ ನಿಂತಿದ್ದಾರೆ. 1987ರಲ್ಲಿ ಅವರು ʻವಿಶ್ವ ಆಹಾರ ಪ್ರಶಸ್ತಿʼಗೆ ಭಾಜನರಾದಾಗ, ಈ ಪ್ರತಿಷ್ಠಿತ ಗೌರವದ ಮೊದಲ ಪುರಸ್ಕೃತರೆನಿಸಿದ ಅವರು ಬಹುಮಾನವಾಗಿ ಬಂದ ಹಣವನ್ನು ಲಾಭರಹಿತ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಬಳಸಿದರು. ಇಲ್ಲಿಯವರೆಗೆ, ಇದು ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ಕೆಲಸವನ್ನು ಕೈಗೊಂಡಿದೆ. ಸ್ವಾಮಿನಾಥನ್‌ ಅವರು ಅಸಂಖ್ಯಾತ ಮನಸ್ಸುಗಳನ್ನು ಪೋಷಿಸಿದ್ದಾರೆ, ಅವರಲ್ಲಿ ಕಲಿಕೆ ಮತ್ತು ನಾವೀನ್ಯತೆಯ ಉತ್ಸಾಹವನ್ನು ತುಂಬಿದ್ದಾರೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸ್ವಾಮಿನಾಥನ್‌ ಅವರ ಜೀವನವು ಜ್ಞಾನ, ಮಾರ್ಗದರ್ಶನ ಮತ್ತು ನಾವೀನ್ಯತೆಯ ಅನಂತ ಶಕ್ತಿಯನ್ನು ನಮಗೆ ನೆನಪು ಮಾಡುತ್ತದೆ. ಅವರು ವಿವಿಧ ಸಂಸ್ಥೆಗಳ ನಿರ್ಮಾತೃವೂ ಆಗಿದ್ದರು, ಅಗಾಧ ಸಂಶೋಧನೆ ನಡೆಯುವ ಅನೇಕ ಕೇಂದ್ರಗಳನ್ನು ಅವರು ಹೊಂದಿದ್ದರು. ಮನಿಲಾದ ʻಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆʼಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 2018ರಲ್ಲಿ ವಾರಣಾಸಿಯಲ್ಲಿ ʻಅಂತರರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆʼಯ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ತೆರೆಯಲಾಯಿತು.

ಡಾ. ಸ್ವಾಮಿನಾಥನ್ ಅವರಿಗೆ ಗೌರವ ಸಲ್ಲಿಸಲು ನಾನು ಮತ್ತೆ ʻಕುರಾಲ್ʼ ಅನ್ನು ಉಲ್ಲೇಖಿಸಲು ಬಯಸುತ್ತೇನೆ. "ಯೋಜನೆಯಲ್ಲಿ ದೃಢತೆಯನ್ನು ಹೊಂದಿರುವವರು, ತಾವು ಬಯಸಿದ ರೀತಿಯಲ್ಲಿ ತಾವು ಬಯಸಿದ್ದನ್ನು ಸಾಧಿಸುತ್ತಾರೆ," ಎಂಬ ಉಲ್ಲೇಖ ಅದರಲ್ಲಿದೆ. ಕೃಷಿಯನ್ನು ಬಲಪಡಿಸಲು ಮತ್ತು ರೈತರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ತಮ್ಮ ಜೀವನದ ಆರಂಭದಲ್ಲಿಯೇ ಸಂಕಲ್ಪ ತೊಟ್ಟಿದ್ದ ಒಬ್ಬ ಕಟ್ಟಾಳು ಅವರಾಗಿದ್ದರು. ಅಲ್ಲದೆ, ಅವರು ತಾವು ಅಂದುಕೊಂಡಿದ್ದನ್ನು ಅಸಾಧಾರಣ ರೀತಿಯಲ್ಲಿ, ನವೀನ ರೀತಿಯಲ್ಲಿ ಮತ್ತು ಭಾವೋತ್ಕರ್ಷದಿಂದ ಮಾಡಿದರು. ನಾವು ಕೃಷಿ ನಾವೀನ್ಯತೆ ಮತ್ತು ಸುಸ್ಥಿರತೆಯ ಹಾದಿಯಲ್ಲಿ ಸಾಗುತ್ತಿರುವ ಈ ಹೊತ್ತಿನಲ್ಲಿ ಡಾ. ಸ್ವಾಮಿನಾಥನ್ ಅವರ ಕೊಡುಗೆಗಳು ನಮಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತವೆ. ಅವರು ಪ್ರೀತಿಸುತ್ತಿದ್ದ ತತ್ವಗಳಿಗೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತಲೇ ಇರಬೇಕು, ರೈತರ ಹಿತಕ್ಕಾಗಿ ಹೋರಾಡಬೇಕು ಮತ್ತು ವೈಜ್ಞಾನಿಕ ಆವಿಷ್ಕಾರದ ಫಲಗಳು ನಮ್ಮ ಕೃಷಿ ವಿಸ್ತಾರದ ಬೇರುಗಳನ್ನು ತಲುಪುವಂತೆ ಖಾತರಿಪಡಿಸಬೇಕು. ಮುಂದಿನ ಪೀಳಿಗೆಗಾಗಿ ಬೆಳವಣಿಗೆ, ಸುಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಬೇಕು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India auto sales cross 24 lakh in July, exports rise 25% as industry enters festive season

Media Coverage

India auto sales cross 24 lakh in July, exports rise 25% as industry enters festive season
NM on the go

Nm on the go

Always be the first to hear from the PM. Get the App Now!
...
ಭಾರತದ ಏಕತೆ ಮತ್ತು ಪ್ರಗತಿಗೆ ಮೀಸಲಾದ ಜೀವನ
July 06, 2026

ಇಂದು, ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಅವರ ಜೀವನವು ಮಾ ಭಾರತಿಯ ಬಗೆಗಿನ ಧೈರ್ಯ ಮತ್ತು ಅಚಲ ಬದ್ಧತೆಗೆ ಎಂದೆಂದಿಗೂ ಮಾದರಿಯಾಗಿದೆ. ಆಧುನಿಕ ಭಾರತದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರಷ್ಟು ಆಳವಾಗಿ ಬುದ್ಧಿವಂತಿಕೆ, ಸಾರ್ವಜನಿಕ ಸೇವೆ ಮತ್ತು ನೈತಿಕ ದೃಢತೆಯ ಸಂಗಮವನ್ನು ಹೊಂದಿದ್ದ ನಾಯಕರು ಬಹಳ ಕಡಿಮೆ.

ಯುವ ಶ್ಯಾಮ ಪ್ರಸಾದ್ ರವರು ತಮಗೆ ಸುಲಭವಾಗಿ, ಸಂರಕ್ಷಿತ ಮತ್ತು ಸುಖಮಯ ಜೀವನವನ್ನು ನೀಡಬಲ್ಲಂತಹ ಪರಿಸರದಲ್ಲಿ ಜನಿಸಿದ್ದರು. ಅವರ ತಂದೆ ಸರ್ ಅಶುತೋಷ್ ಮುಖರ್ಜಿಯವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಆದರೆ, ವಿಧಿಯು ಅವರ ಮುಂದೆ ಸೌಲಭ್ಯಗಳ ಹಾದಿಯನ್ನು ಇರಿಸಿದ್ದರೂ, ಅವರ ಆತ್ಮಸಾಕ್ಷಿಯು ಅವರನ್ನು ತ್ಯಾಗ ಮತ್ತು ರಾಷ್ಟ್ರ ಸೇವೆಯ ಹಾದಿಯತ್ತ ಕೊಂಡೊಯ್ಯಿತು. ವಸಾಹತುಶಾಹಿ, ಕೋಮುವಾದ, ಮಾನವೀಯ ಸವಾಲುಗಳು ಹೀಗೆ ಆ ಕಾಲದ ಯಾವುದೇ ಪ್ರಕ್ಷುಬ್ಧತೆಯ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಅವರಿಗೆ ಸಾಧ್ಯವಿರಲಿಲ್ಲ. ಈ ಹಾದಿಯಲ್ಲಿ ಅವರು ತಮ್ಮ ಶಿಶುವಿನ ಮರಣ ಮತ್ತು ನಂತರ ಪತ್ನಿಯ ಅಗಲಿಕೆಯಂತಹ ಆಳವಾದ ವೈಯಕ್ತಿಕ ದುರಂತಗಳನ್ನು ಅನುಭವಿಸಿದರು. ಆದರೂ, ಈ ದುರಂತಗಳು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದವು ಮತ್ತು ಸೇವೆಯ ಬಗೆಗಿನ ಅವರ ಬದ್ಧತೆಯನ್ನು ಹೆಚ್ಚಿಸಿದವು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಸಾರ್ವಜನಿಕ ಜೀವನವನ್ನು ವ್ಯಾಖ್ಯಾನಿಸುವ ಒಂದು ಆದರ್ಶವಿದ್ದರೆ, ಅದು ಭಾರತದ ಅವಿಭಾಜ್ಯತೆ. ದೇಶ ವಿಭಜನೆಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ದೃಢವಾಗಿ ನಿಂತರು. ಕೆಲವು ವರ್ಷಗಳ ನಂತರ, ಅದೇ ದೃಢ ನಂಬಿಕೆ ಅವರನ್ನು ಜಮ್ಮು ಮತ್ತು ಕಾಶ್ಮೀರದತ್ತ ಸೆಳೆಯಿತು. ಸೆರೆವಾಸ ಅವರನ್ನು ನಿರುತ್ಸಾಹಗೊಳಿಸಲಿಲ್ಲ ಮತ್ತು ಏಕಾಂತತೆ ಅವರನ್ನು ಕುಗ್ಗಿಸಲಿಲ್ಲ. ತಾವು ಯಾರ ಹಿತಕ್ಕಾಗಿ ಹೋರಾಡಿದ್ದರೋ, ಅಂತಹ ಅಸಂಖ್ಯಾತ ಜನರಿಂದ ದೂರವಿದ್ದಾಗಲೇ ಬಂಧನದಲ್ಲಿ ಅವರ ಜೀವನವು ಅಕಾಲಿಕವಾಗಿ ಕೊನೆಗೊಂಡಿತು. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಅಂತಿಮ ತ್ಯಾಗವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಸ್ಮರಣೆಯ ಭಾಗವಾಗುವ ಕೆಲವು ಕ್ಷಣಗಳು ಬರುತ್ತವೆ. ಡಾ. ಮುಖರ್ಜಿಯವರ ಕೊನೆಯ ಪಯಣ ಅಂತಹ ಒಂದು ಕ್ಷಣವಾಗಿದೆ. ಆಚಾರ್ಯ ವಿನೋಬಾ ಭಾವೆಯವರು, "ಡಾ. ಮುಖರ್ಜಿಯವರು ತಮಗೆ ನಂಬಿಕೆಯಿದ್ದ ಉದ್ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿಕೊಂಡರು" ಎಂದು ಹೇಳಿದ್ದರು. ಹಲವು ವರ್ಷಗಳ ನಂತರ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35(ಎ) ವಿಧಿಗಳ ರದ್ದು ಅವರ ಹುತಾತ್ಮತೆಗೆ ನೀಡಿದ ಅತ್ಯಂತ ಸೂಕ್ತ ಗೌರವವಾಗಿದೆ.

ಡಾ. ಮುಖರ್ಜಿಯವರು ಭಾರತಕ್ಕೆ ಮತ್ತು ಭಾರತೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದರು. ಆ ಕಾಲದ ಸಾಂಪ್ರದಾಯಿಕ ಮನಸ್ಥಿತಿಯನ್ನು ವಿರೋಧಿಸುವ ಸಂಸ್ಥೆಗಳನ್ನು ನಿರ್ಮಿಸುವ ಮತ್ತು ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅವರು ಇದನ್ನು ಸಾಧಿಸಿದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಅತಿಕಿರಿಯ ಉಪಕುಲಪತಿಯಾದರು. ತಮ್ಮ ವಿಶಿಷ್ಟ ಶೈಲಿಯಲ್ಲಿ, ದೇಶಭಕ್ತಿಯುತ ಮತ್ತು ಭವಿಷ್ಯದ ದೃಷ್ಟಿಯುಳ್ಳ ಸಕಾರಾತ್ಮಕ ಬದಲಾವಣೆಗಳನ್ನು ಅವರು ತಂದರು. ಶಿಕ್ಷಣ ತಜ್ಞರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು, "ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗುಮಾಸ್ತರು ಮತ್ತು ಕಡಿಮೆ ಸಂಬಳ ಪಡೆಯುವ ಸಿಬ್ಬಂದಿಯನ್ನು ಸಿದ್ಧಪಡಿಸುವ ಕಾರ್ಖಾನೆಗಳೆಂದು ನೋಡುವುದು ತಪ್ಪು. ನಾವು ಪುರಸಭೆಗಳು, ಪ್ರಾಂತೀಯ ಮತ್ತು ಕೇಂದ್ರ ಶಾಸನಸಭೆಗಳಂತಹ ನಮ್ಮ ಸ್ವಯಂ-ಆಡಳಿತ ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಬಲ್ಲ ಹಾಗೂ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಂತಹ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಿರ್ವಹಿಸಬಲ್ಲ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು" ಎಂದು ಅವರು ಅದ್ಭುತವಾಗಿ ಹೇಳಿದ್ದರು.

ಅವರ ನೇತೃತ್ವದಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಗ್ರಂಥಾಲಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಕಲಾಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಮತ್ತು ಕೃಷಿಯಲ್ಲಿ ಕೋರ್ಸ್‌ಗಳನ್ನು ಸ್ಥಾಪಿಸುವಂತಹ ವಿಶಿಷ್ಟ ಪ್ರಯತ್ನಗಳನ್ನು ಕೈಗೊಂಡಿತು. ಕ್ರೀಡೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿ ಕಲ್ಯಾಣದಂತಹ ಕ್ಷೇತ್ರಗಳತ್ತ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಲು, ಅವರು ಜನವರಿ 24 ಅನ್ನು ವಿಶ್ವವಿದ್ಯಾನಿಲಯದ ಸ್ಥಾಪನಾ ದಿನವನ್ನಾಗಿ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ವಿಶ್ವವಿದ್ಯಾನಿಲಯಕ್ಕಾಗಿ ಗೀತೆ ರಚಿಸಲು ಅವರು ಸ್ವತಃ ಗುರುದೇವ ಟ್ಯಾಗೋರ್ ಅವರನ್ನೇ ಕೋರಿದ್ದರು.

ಈ ಮನೋಭಾವದ ಮತ್ತೊಂದು ಉದಾಹರಣೆಯನ್ನು ಅವರ ಜೀವನದ ನಂತರದ ಭಾಗದಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಲು ನಿರ್ಧರಿಸಿದಾಗ ಕಾಣಬಹುದು. ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಹೊಂದಿರುವಂತೆಯೇ ಭಾರತದ ಪ್ರಗತಿಗಾಗಿ ಧ್ವನಿ ಎತ್ತಲು ಪರ್ಯಾಯ ವೇದಿಕೆಯ ಅಗತ್ಯವಿದೆ ಎಂದು ಅವರು ಭಾವಿಸಿದರು. ಪಕ್ಷದ ಚಿಹ್ನೆಯು ಮಣ್ಣಿನ ದೀಪವಾಗಿದ್ದುದು ಬಹಳ ಅರ್ಥಪೂರ್ಣವಾಗಿತ್ತು. ಒಂದು ದೀಪವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ತನ್ನ ಸುತ್ತಲಿನ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಜನಸಂಘವು ಸಕ್ರಿಯವಾಗಿದ್ದ ವರ್ಷಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಡಿದ್ದು ಕೂಡ ಇದನ್ನೇ.

ಭಾರತದ ಕೈಗಾರಿಕಾ ಮತ್ತು ಪೂರೈಕೆ ಸಚಿವರಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಧಿಕಾರಾವಧಿಯು, ಅಭಿವೃದ್ಧಿಯ ಕುರಿತಾದ ಅವರ ಸಮಗ್ರ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದಿದ್ದ ಒಬ್ಬ ರಾಜನೀತಿಜ್ಞರನ್ನು ಅನಾವರಣಗೊಳಿಸುತ್ತದೆ. ಅವರು ಕೈಗಾರಿಕೆಯನ್ನು ನವತಂತ್ರದ ಭಾರತಕ್ಕೆ ಘನತೆ, ಅವಕಾಶ ಮತ್ತು ಆತ್ಮವಿಶ್ವಾಸವನ್ನು ಮರಳಿ ತರುವ ಸಾಧನವಾಗಿ ನೋಡಿದರು. ಅವರು ಸಂಪತ್ತಿನ ಸೃಷ್ಟಿ ಮತ್ತು ಮೌಲ್ಯವರ್ಧನೆಯನ್ನು ಗೌರವಿಸಿದರು. ದಾಮೋದರ ವ್ಯಾಲಿ ಕಾರ್ಪೊರೇಷನ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮತ್ತು ಬಲಿಷ್ಠ ಕೈಗಾರಿಕಾ ನೀತಿಯಂತಹ ಪ್ರವರ್ತಕ ಉಪಕ್ರಮಗಳ ಮೂಲಕ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯವನ್ನು ಹಾಕುವಾಗ, ಅವರು ಭಾರತದ ಸಾಂಪ್ರದಾಯಿಕ ಶಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಏಕಕಾಲದಲ್ಲಿ ನೋಡಿಕೊಂಡರು. ಕೈಮಗ್ಗ, ಕುಟೀರ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಜವಳಿ ಕಾರ್ಮಿಕರು ಅವರಲ್ಲಿ ಸಮಾನವಾದ ಬದ್ಧತೆಯುಳ್ಳ ಚಾಂಪಿಯನ್ ಅನ್ನು ಕಂಡುಕೊಂಡರು.

ಇಲ್ಲಿ, ನಾನು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸ್ವಾವಲಂಬನೆಯ ಸ್ಪಷ್ಟ ದೃಷ್ಟಿಯೊಂದಿಗೆ ಡಾ. ಮುಖರ್ಜಿಯವರು ಸ್ಥಾಪಿಸಲು ಶ್ರಮಿಸಿದ ಸಿಂಧ್ರಿ ಕಾರ್ಖಾನೆಯನ್ನು, ಹಲವು ದಶಕಗಳ ಕಾಲ ದೇಶವನ್ನು ಆಳಿದವರು ನಿರ್ಲಕ್ಷಿಸಿದ್ದರು. ನಮ್ಮ ಸರ್ಕಾರಕ್ಕೆ ಅದರ ಪುನರುಜ್ಜೀವನಕ್ಕೆ ಕೊಡುಗೆ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ.

ಭಾರತದ ನಾಗರಿಕತೆಯ ಪರಂಪರೆಯು ದೀರ್ಘಕಾಲದಿಂದಲೂ ಸಂವಾದ ಮತ್ತು ಚರ್ಚೆಗಳನ್ನು ಸಂಭ್ರಮಿಸಿದೆ. ಡಾ. ಮುಖರ್ಜಿಯವರು ಈ ಪ್ರಜಾಸಾಮಾಜಿಕ ಮನೋಭಾವವನ್ನು ಸಾಕಾರಗೊಳಿಸಿದ್ದರು. ದೇಶ ನಿರ್ಮಾಣದ ಕಾರ್ಯವು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿ, ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ, ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು ಮತ್ತು ರಾಷ್ಟ್ರಕ್ಕೆ ಅಗತ್ಯವೆಂದು ಅವರು ನಂಬಿದ್ದ ರಾಜಕೀಯ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

75 ವರ್ಷಗಳ ಹಿಂದೆ, ಪಂಡಿತ್ ನೆಹರು ಅವರು ಮೊದಲ ತಿದ್ದುಪಡಿಯನ್ನು ತಂದರು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಡಾ. ಮುಖರ್ಜಿಯವರು ಇದನ್ನು ತೀವ್ರವಾಗಿ ಟೀಕಿಸಿದವರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಏನು ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು. ಮತ್ತು ಅವರು ಹೇಳಿದ್ದು ನಿಜವಾಯಿತು. 75 ವರ್ಷಗಳ ಹಿಂದೆ ಮೊದಲ ತಿದ್ದುಪಡಿಯನ್ನು ತಂದವರು, 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 50 ವರ್ಷಗಳ ಹಿಂದೆ 42ನೇ ತಿದ್ದುಪಡಿ ಕಾಯಿದೆಯನ್ನು ತಂದರು, ಇದು ಮತ್ತೊಮ್ಮೆ ಉದಾರವಾದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲದ ಮೇಲೆ ದಾಳಿ ಮಾಡಿತು.

ಡಾ. ಮುಖರ್ಜಿಯವರು ತಮ್ಮ ಮಾನವೀಯ ಪ್ರಯತ್ನಗಳಿಗಾಗಿಯೂ ಜನಪ್ರಿಯರಾಗಿದ್ದರು. 1943 ರಲ್ಲಿ ಬಂಗಾಳದಲ್ಲಿ ಅತಿ ಭೀಕರ ಬರಗಾಲ ಉಂಟಾದಾಗ, ಡಾ. ಮುಖರ್ಜಿಯವರು ಸಂತ್ರಸ್ತರಿಗೆ ಸೇವೆ ಸಲ್ಲಿಸುವುದರಲ್ಲಿ ಮಗ್ನರಾದರು. ಜನರಿಗೆ ಆಹಾರ ಒದಗಿಸಲು ಹಲವಾರು ಕ್ಯಾಂಟೀನ್‌ಗಳು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯುವುದನ್ನು ಅವರು ಖಚಿತಪಡಿಸಿದರು. ಒಂದು ಕಡೆ, ಅವರು ತಮ್ಮ ಜನರ ಸಂಕಷ್ಟದಿಂದ ತೀವ್ರವಾಗಿ ನೊಂದಿದ್ದರೆ, ಇನ್ನೊಂದೆಡೆ ವಸಾಹತುಶಾಹಿ ಆಡಳಿತಗಾರರ ಸಂವೇದನಾಹೀನತೆಯು ಅವರನ್ನು ಅಸಹ್ಯಪಡುವಂತೆ ಮಾಡಿತ್ತು. ಅವರು 'ಪಂಚಶೇರ್ ಮನ್ವಾಂತರ್' (ಐವತ್ತರ ಕ್ಷಾಮ) ಎಂಬ ಪುಸ್ತಕವನ್ನೂ ಬರೆದರು, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. 1942 ರಲ್ಲಿ ಮಿಡ್ನಾಪುರದಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸಿದಾಗ, ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಅವರು ಮಾಡಿದ ಪ್ರಯತ್ನಗಳು ವ್ಯಾಪಕವಾಗಿ ಶ್ಲಾಘನೆಗೆ ಒಳಗಾದವು.

ಕೋಲ್ಕತ್ತಾದ ಕಾಲೇಜೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು "ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ; ಅದನ್ನು ಅರ್ಧಕ್ಕೆ ಬಿಡಬೇಡಿ ಅಥವಾ ಅಪೂರ್ಣವಾಗಿ ಬಿಡಬೇಡಿ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವವರೆಗೂ ಎಂದಿಗೂ ತೃಪ್ತರಾಗಬೇಡಿ." ಎಂದು ಅವರು ಯುವಕರಿಗೆ ಕರೆ ನೀಡಿದರು. ಭಾರತವು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಯುತ್ತಿರುವಾಗ, ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ಅವರು ಆಳವಾಗಿ ನಂಬಿದ್ದ ಬಲಿಷ್ಠ, ಸಂಘಟಿತ, ಆತ್ಮವಿಶ್ವಾಸವುಳ್ಳ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ನಿರ್ಮಿಸಲು ಪ್ರತಿದಿನ ಶ್ರಮಿಸುವುದು. ಮತ್ತು ಇಂದಿನ ಯುವಕರನ್ನು ನೋಡಿದಾಗ, ಅವರು ಸಂದರ್ಭಕ್ಕೆ ತಕ್ಕಂತೆ ಮುಂದೆ ಬಂದು, ನಿಖರವಾಗಿ ಅದನ್ನೇ ಮಾಡುತ್ತಾರೆ ಎಂಬ ದೃಢವಾದ ನಂಬಿಕೆ ನನಗಿದೆ.

- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ