ಭಾರತೀಯ ಬಾಹ್ಯಾಕಾಶ ನವೋದ್ಯಮವಾದ ʼಸ್ಕೈರೂಟ್ʼ ನಿರ್ಮಿಸಿರುವ ʼಇನ್ಫಿನಿಟಿ ಕ್ಯಾಂಪಸ್ʼ ಅನ್ನು ಪ್ರಧಾನಮಂತ್ರಿ ಅವರು ನವೆಂಬರ್ 27 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ʻಸ್ಕೈರೂಟ್ʼನ ಮೊದಲ ಕಕ್ಷೆಯ ರಾಕೆಟ್ ʻವಿಕ್ರಮ್ -1ʼ ಅನ್ನು ಅವರು ಅನಾವರಣಗೊಳಿಸಲಿದ್ದಾರೆ.
ಈ ಅತ್ಯಾಧುನಿಕ ಕ್ಯಾಂಪಸ್ ಬಹು ಉಡಾವಣಾ ವಾಹನಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ಸಂಯೋಜಿಸಲು ಮತ್ತು ಪರೀಕ್ಷಿಸಲು ಸುಮಾರು 200,000 ಚದರ ಅಡಿ ಕಾರ್ಯಸ್ಥಳವನ್ನು ಹೊಂದಿರುತ್ತದೆ, ಪ್ರತಿ ತಿಂಗಳು ಒಂದು ಕಕ್ಷೆಯ ರಾಕೆಟ್ ನಿರ್ಮಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ʻಸ್ಕೈರೂಟ್ʼ ಭಾರತದ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿಯಾಗಿದ್ದು, ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿʼಯ (ಐಐಟಿ) ಹಳೆಯ ವಿದ್ಯಾರ್ಥಿಗಳು ಹಾಗೂ ʻಇಸ್ರೋʼದ ಮಾಜಿ ವಿಜ್ಞಾನಿಗಳಾದ ಪವನ್ ಚಂದನಾ ಮತ್ತು ಭರತ್ ಢಾಕಾ ಇದರ ಸಂಸ್ಥಾಪಕರು. ನವೆಂಬರ್ 2022ರಲ್ಲಿ, ʻಸ್ಕೈರೂಟ್ʼ ತನ್ನ ಉಪ-ಕಕ್ಷೆಯ ರಾಕೆಟ್ ʻವಿಕ್ರಮ್-ಎಸ್ʼ ಅನ್ನು ಉಡಾವಣೆ ಮಾಡಿತು, ಆ ಮೂಲಕ ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಿದ ಮೊದಲ ಭಾರತೀಯ ಖಾಸಗಿ ಕಂಪನಿಯೆಂಬ ಹಿರಿಮೆಗೆ ಪಾತ್ರವಾಯಿತು.
ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಗಳ ತ್ವರಿತ ಬೆಳವಣಿಗೆಯನ್ನು ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ಕೈಗೊಂಡ ಕ್ರಾಂತಿಕಾರಿ ಸುಧಾರಣೆಗಳ ಯಶಸ್ಸಿಗೆ ಸಾಕ್ಷಿಯಾಗಿ ಗುರುತಿಸಬಹುದಾಗಿದೆ. ಈ ಕ್ರಮಗಳು ವಿಶ್ವಾಸಾರ್ಹ ಮತ್ತು ಸಮರ್ಥ ಜಾಗತಿಕ ಬಾಹ್ಯಾಕಾಶ ಶಕ್ತಿಯಾಗಿ ಭಾರತದ ನಾಯಕತ್ವವನ್ನು ಬಲಪಡಿಸುತ್ತವೆ.


