ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 7 ರಂದು ಬೆಳಿಗ್ಗೆ 9 ಗಂಟೆಗೆ ನವದೆಹಲಿಯ ಐಸಿಎಆರ್ ಪುಸಾದಲ್ಲಿ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
"ನಿತ್ಯಹಸಿರು ಕ್ರಾಂತಿ, ಜೈವಿಕ ಸಂತೋಷದ ಹಾದಿ" ಎಂಬ ಸಮ್ಮೇಳನದ ವಿಷಯವು ಸರ್ವರಿಗೂ ಆಹಾರವನ್ನು ಖಾತ್ರಿಪಡಿಸಿಕೊಳ್ಳಲು ಪ್ರೊ. ಸ್ವಾಮಿನಾಥನ್ ಅವರ ಜೀವನವೀಡಿ ಸಮರ್ಪಣೆ ಮಾಡಿದ್ದನ್ನು ಪ್ರತಿಬಿಂಬಿಸುತ್ತದೆ. ವಿಜ್ಞಾನಿಗಳು, ನೀತಿ ನಿರೂಪಕರು, ಅಭಿವೃದ್ಧಿ ವೃತ್ತಿಪರರು ಮತ್ತು ಇತರ ಪಾಲುದಾರರಿಗೆ 'ನಿತ್ಯಹಸಿರು ಕ್ರಾಂತಿ'ಯ ತತ್ವಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಕುರಿತು ಚರ್ಚಿಸಲು ಮತ್ತು ಸಮಾಲೋಚನೆ ನಡೆಸಲು ಸಮ್ಮೇಳನವು ಅವಕಾಶವನ್ನು ಒದಗಿಸುತ್ತದೆ. ಪ್ರಮುಖ ವಿಷಯಗಳಲ್ಲಿ ಜೀವವೈವಿಧ್ಯತೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ; ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಗಾಗಿ ಸುಸ್ಥಿರ ಕೃಷಿ; ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಮೂಲಕ ಹವಾಮಾನ ಸ್ಥಿತಿಸ್ಥಾಪಕತ್ವ ಬಲವರ್ಧನೆಗೊಳಿಸುವುದು; ಸುಸ್ಥಿರ ಮತ್ತು ಸಮಾನ ಜೀವನೋಪಾಯಕ್ಕಾಗಿ ಸೂಕ್ತ ತಂತ್ರಜ್ಞಾನಗಳ ಬಳಕೆ; ಮತ್ತು ಯುವಕರು, ಮಹಿಳೆಯರು ಮತ್ತು ಸಮಾಜದಲ್ಲಿ ಕಟ್ಟಕಡೆಯ ಅಂಚಿನಲ್ಲಿರುವ ಸಮುದಾಯಗಳನ್ನು ಅಭಿವೃದ್ಧಿಯ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಈ ಸಮಾವೇಶ ಒಳಗೊಂಡಿದೆ.
ಎಂಎ.ಸ್. ಸ್ವಾಮಿನಾಥನ್ ಅವರ ಪರಂಪರೆಯನ್ನು ಗೌರವಿಸಲು, ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ (ಎಂಎಸ್ ಎಸ್ ಆರ್ ಎಫ್) ಮತ್ತು ವಿಶ್ವ ವಿಜ್ಞಾನ ಅಕಾಡೆಮಿ (ಟಿಡಬ್ಲೂಎಎಸ್) ಆಹಾರ ಮತ್ತು ಶಾಂತಿಗಾಗಿ ಎಂ.ಎಸ್. ಸ್ವಾಮಿನಾಥನ್ ಪ್ರಶಸ್ತಿ ನೀಡಲು ಆರಂಭಿಸುತ್ತಿವೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಮೊದಲ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ. ವೈಜ್ಞಾನಿಕ ಸಂಶೋಧನೆ, ನೀತಿ ಅಭಿವೃದ್ಧಿ, ತಳಮಟ್ಟದಲ್ಲಿ ಎಲ್ಲರನ್ನೂ ತೊಡಗಿಸಿಕೊಳ್ಳುವುದು ಅಥವಾ ಸ್ಥಳೀಯ ಸಾಮರ್ಥ್ಯ ವೃದ್ಧಿಯ ಮೂಲಕ ದುರ್ಬಲ ಮತ್ತು ಸಮಾಜದ ಕಟ್ಟ ಕಡೆಯ ಅಂಚಿನಲ್ಲಿರುವ ಸಮುದಾಯಗಳಿಗೆ ಆಹಾರ ಭದ್ರತೆಯನ್ನು ಸುಧಾರಿಸಲು ಮತ್ತು ಹವಾಮಾನ ನ್ಯಾಯ, ಸಮಾನತೆ ಮತ್ತು ಶಾಂತಿಯನ್ನು ಮುನ್ನಡೆಸಲು ಅತ್ಯುತ್ತಮ ಕೊಡುಗೆ ನೀಡಿದ ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಕ್ತಿಗಳನ್ನು ಈ ಅಂತಾರಾಷ್ಟ್ರೀಯ ಪ್ರಶಸ್ತಿಗಾಗಿ ಗುರುತಿಸಲಾಗುವುದು.


