"ಭಾರತವು ಸದೃಢತೆ ಮತ್ತು ಪ್ರಗತಿಯ ಸಂಕೇತವಾಗಿ ಹೊರಹೊಮ್ಮಿದೆ"
"ಭಾರತದ ಬೆಳವಣಿಗೆಯ ಯಶೋಗಾಥೆಯು ನೀತಿ, ಉತ್ತಮ ಆಡಳಿತ ಮತ್ತು ನಾಗರಿಕರ ಕಲ್ಯಾಣಕ್ಕೆ ಸರ್ಕಾರದ ಉನ್ನತ ಆದ್ಯತೆಯನ್ನು ಆಧರಿಸಿದೆ"
"ಭಾರತವು ಬಲಗೊಳ್ಳುತ್ತಿರುವ ತನ್ನ ಆರ್ಥಿಕತೆ ಮತ್ತು ಕಳೆದ ದಶಕದ ಕ್ರಾಂತಿಕಾರಿ ಸುಧಾರಣೆಗಳ ಪರಿಣಾಮವಾಗಿ ಜಗತ್ತಿಗೆ ಭರವಸೆಯ ಕಿರಣವಾಗಿ ಹೊರಹೊಮ್ಮಿದೆ"
"ಅಂತರರಾಷ್ಟ್ರೀಯ ಹಣಕಾಸು ಕ್ಷೇತ್ರವನ್ನು ಮರುವ್ಯಾಖ್ಯಾನಿಸುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿ ʻಗಿಫ್ಟ್ ಸಿಟಿʼಯನ್ನು ಪರಿಕಲ್ಪಿಸಲಾಗಿದೆ"
"ನಾವು ʻಗಿಫ್ಟ್ ಸಿಟಿʼಯನ್ನು ಹೊಸ ಯುಗದ ಜಾಗತಿಕ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ"
"ಭಾರತದ 'ಗ್ಲೋಬಲ್ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್', ಹವಾಮಾನ ಶೃಂಗಸಭೆಯಲ್ಲಿ(ಸಿಒಪಿ 28) ಭಾರತ ಮುಂದಿಟ್ಟ ಭೂಗ್ರಹ ಸ್ನೇಹಿ ಉಪಕ್ರಮವಾಗಿದೆ"
"ಇಂದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ʻಫಿನ್‌ಟೆಕ್‌ʼ ಮಾರುಕಟ್ಟೆಗಳಲ್ಲಿ ಭಾರತವು ಒಂದಾಗಿದೆ"
ʻಗಿಫ್ಟ್ ಐಎಫ್ಎಸ್‌ಸಿʼಯ ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯವು ವ್ಯವಹಾರಗಳ ದಕ್ಷತೆ ಹೆಚ್ಚಿಸಲು ಅನುವು ಮಾಡಿಕೊಡುವ ವೇದಿಕೆಯನ್ನು ಒದಗಿಸುತ್ತದೆ
ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು 'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಫಿನ್‌ಟೆಕ್ʼ ಕುರಿತಾದ ಜಾಗತಿಕ ಚಿಂತನಾವೇದಿಕೆ - ʻಇನ್ಫಿನಿಟಿ ಫೋರಂʼನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದರು. ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರ (ಐಎಫ್ಎಸ್‌ಸಿಎ) ಮತ್ತು ʻಗಿಫ್ಟ್ ಸಿಟಿʼ ಜಂಟಿಯಾಗಿ ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು ಆಯೋಜಿಸಿವೆ. ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು  'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 2021ರ ಡಿಸೆಂಬರ್‌ನಲ್ಲಿ ʻಇನ್ಫಿನಿಟಿ ಫೋರಂʼನ ಮೊದಲ ಆವೃತ್ತಿಯ ಸಂದರ್ಭದಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತಿನ ಅರ್ಥವ್ಯವಸ್ಥೆ ಅನಿಶ್ಚಿತತೆಗೆ ಸಿಲುಕಿದ್ದನ್ನು ಸ್ಮರಿಸಿದರು. ಈ ಆತಂಕಕಾರಿ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಒತ್ತಿಹೇಳಿದ ಪ್ರಧಾನಿ, ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹೆಚ್ಚಿನ ಹಣದುಬ್ಬರ ಹಾಗೂ ಹೆಚ್ಚುತ್ತಿರುವ ಸಾಲದ ಮಟ್ಟಗಳ ಸವಾಲುಗಳನ್ನು ಉಲ್ಲೇಖಿಸಿದರು. ಇದರ ನಡುವೆಯೂ ಸದೃಢತೆ ಮತ್ತು ಪ್ರಗತಿಯ ಸಂಕೇತವಾಗಿ ಭಾರತದ ಹೊರಹೊಮ್ಮುತ್ತಿರುವುದನ್ನು ಒತ್ತಿ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ʻಗಿಫ್ಟ್ ಸಿಟಿʼಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಗುಜರಾತ್‌ನ ಹೆಮ್ಮೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಪ್ರಧಾನಿ ಶ್ಲಾಘಿಸಿದರು. 'ಗರ್ಬಾ'ವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಿದ್ದಕ್ಕಾಗಿ ಗುಜರಾತ್ ಜನರಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿದರು. "ಗುಜರಾತ್‌ನ ಯಶಸ್ಸು ಇಡೀ ರಾಷ್ಟ್ರದ ಯಶಸ್ಸು" ಎಂದು ಶ್ರೀ ಮೋದಿ ಅವರು ಹೇಳಿದರು.

 

ಭಾರತದ ಬೆಳವಣಿಗೆಯ ಯಶೋಗಾಥೆಯು ನೀತಿ, ಉತ್ತಮ ಆಡಳಿತ ಮತ್ತು ನಾಗರಿಕರ ಕಲ್ಯಾಣಕ್ಕೆ ಸರ್ಕಾರದ ಉನ್ನತ ಆದ್ಯತೆಯನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು. ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದ ಬೆಳವಣಿಗೆಯ ದರವು ಶೇಕಡಾ 7.7 ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು. ಸೆಪ್ಟೆಂಬರ್ 2023ರಲ್ಲಿ ʻಐಎಂಎಫ್ʼ ಉಲ್ಲೇಖಿಸಿದಂತೆ, 2023ರಲ್ಲಿ ಜಾಗತಿಕ ಬೆಳವಣಿಗೆಯ ದರಕ್ಕೆ ಭಾರತದ ಕೊಡುಗೆಯನ್ನು ಶೇಕಡಾ 16 ರಷ್ಟು ಎಂದು ಪ್ರಧಾನಿ ಎತ್ತಿ ತೋರಿಸಿದರು. "ಜಾಗತಿಕ ಸವಾಲುಗಳ ನಡುವೆ, ಭಾರತೀಯ ಆರ್ಥಿಕತೆಯ ಬಗ್ಗೆ ಹೆಚ್ಚಿನ ಭರವಸೆಗಳಿವೆ" ಎಂದು ಅವರು ವಿಶ್ವಬ್ಯಾಂಕ್ನ ಉಲ್ಲೇಖವನ್ನು ಪ್ರಸ್ತಾಪಿಸಿದರು. ಜಾಗತಿಕ ದಕ್ಷಿಣವನ್ನು ಮುನ್ನಡೆಸಲು ಭಾರತವು ಅತ್ಯಂತ ಮುಖ್ಯ ಎಂಬ ಆಸ್ಟ್ರೇಲಿಯಾದ ಪ್ರಧಾನಮಂತ್ರಿಯವರ ಹೇಳಿಕೆಗೆ ಶ್ರೀ ಮೋದಿ ಸಹಮತ ವ್ಯಕ್ತಪಡಿಸಿದರು. ಭಾರತದಲ್ಲಿ‌ ಸರಕಾರದ ಕಾರ್ಯಕಲಾಪಗಳಲ್ಲಿ ನಿಷ್ಕ್ರಿಯತೆ ಹಾಗೂ ವಿಳಂಬವನ್ನು ಕಡಿಮೆ ಮಾಡುವ ಬಗ್ಗೆ ʻವಿಶ್ವ ಆರ್ಥಿಕ ವೇದಿಕೆʼಯ ಅವಲೋಕನವನ್ನು ಪ್ರಧಾನಿ ಉಲ್ಲೇಖಿಸಿದರು. ಇದು ಉತ್ತಮ ಹೂಡಿಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು. ಭಾರತವು ವಿಶ್ವಕ್ಕೆ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿದೆ. ಬಲಗೊಳ್ಳುತ್ತಿರುವ ಭಾರತದ ಆರ್ಥಿಕತೆ ಮತ್ತು ಕಳೆದ 10 ವರ್ಷಗಳ ಪರಿವರ್ತನಾತ್ಮಕ ಸುಧಾರಣೆಗಳ ಫಲಿತಾಂಶ ಇದಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ವಿಶ್ವದ ಉಳಿದ ದೇಶಗಳು ಹಣಕಾಸಿನ ಮತ್ತು ವಿತ್ತೀಯ ಪರಿಹಾರದತ್ತ ಗಮನ ಹರಿಸಿರುವ ಸಮಯದಲ್ಲಿ ಭಾರತವು ದೀರ್ಘಕಾಲೀನ ಬೆಳವಣಿಗೆ ಮತ್ತು ಆರ್ಥಿಕ ಸಾಮರ್ಥ್ಯ ವಿಸ್ತರಣೆಯತ್ತ ಗಮನ ಹರಿಸಿದೆ ಎಂದು ಅವರು ಹೇಳಿದರು.

ಜಾಗತಿಕ ಆರ್ಥಿಕತೆಯೊಂದಿಗೆ ಏಕೀಕರಣವನ್ನು ಹೆಚ್ಚಿಸುವ ಗುರಿಯ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು ಇದಕ್ಕೆ ಹಲವು ಉದಾಹರಣೆಗಳನ್ನು ನೀಡಿದರು. ಹಲವು ಕ್ಷೇತ್ರಗಳಲ್ಲಿ ಹೊಂದಿಕೊಳ್ಳಬಲ್ಲ ʻಎಫ್‌ಡಿಐʼ ನೀತಿುಯ ಅನುಷ್ಠಾನ, ಅನುಸರಣೆ ಹೊರೆಯನ್ನು ಕಡಿಮೆ ಮಾಡಿರುವುದು ಮತ್ತು ಇಂದು 3 ʻಎಫ್‌ಟಿಎʼಗಳಿಗೆ ಸಹಿ ಹಾಕಿರುವುದನ್ನು ಉಲ್ಲೇಖಿಸಿದರು. ʻಗಿಫ್ಟ್ ಐಎಫ್ಎಸ್‌ಸಿಎʼ, ಭಾರತೀಯ ಮತ್ತು ಜಾಗತಿಕ ಹಣಕಾಸು ಮಾರುಕಟ್ಟೆಗಳನ್ನು ಸಂಯೋಜಿಸುವ ದೊಡ್ಡ ಸುಧಾರಣೆಯ ಭಾಗವಾಗಿದೆ ಎಂದು ಅವರು ಹೇಳಿದರು. "ಗಿಫ್ಟ್ ಸಿಟಿಯನ್ನು ಅಂತಾರಾಷ್ಟ್ರೀಯ ಹಣಕಾಸು ಕ್ಷೇತ್ರವನ್ನು ಮರುವ್ಯಾಖ್ಯಾನಿಸುವ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯಾಗಿ ರೂಪಿಸಲಾಗಿದೆ," ಎಂದು ಶ್ರೀ ಮೋದಿ ಹೇಳಿದರು. ಇದು ನಾವೀನ್ಯತೆ, ದಕ್ಷತೆ ಮತ್ತು ಜಾಗತಿಕ ಸಹಯೋಗದ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ಒತ್ತಿ ಹೇಳಿದರು. 2020ರಲ್ಲಿ ಏಕೀಕೃತ ನಿಯಂತ್ರಕ ಸಂಸ್ಥೆಯಾಗಿ ʻಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರʼವನ್ನು ಸ್ಥಾಪಿಸಿದ ಪ್ರಮುಖ ಹೆಗ್ಗುರುತನ್ನು ಅವರು ಗಮನಿಸಿದರು. ಆರ್ಥಿಕ ಅಸ್ಥಿರತೆಯ ಈ ಅವಧಿಯಲ್ಲಿ ಹೂಡಿಕೆಯ ಹೊಸ ಮಾರ್ಗಗಳನ್ನು ತೆರೆಯುವ 27 ನಿಯಮಗಳು ಮತ್ತು 10ಕ್ಕೂ ಹೆಚ್ಚು ನೀತಿಗಳನ್ನು ʻಐಎಫ್ಎಸ್‌ಸಿಎʼ ರಚಿಸಿದೆ ಎಂದು ಅವರು ಮಾಹಿತಿ ನೀಡಿದರು. ʻಇನ್ಫಿನಿಟಿ ಫೋರಂʼನ ಮೊದಲ ಆವೃತ್ತಿಯಲ್ಲಿ ಸ್ವೀಕರಿಸಿದ ಸಲಹೆಗಳನ್ನು ಜಾರಿಗೊಳಿಸುವ ಕಾರ್ಯ ಆರಂಭವಾಗಿದೆ ಎಂದು ಹೇಳಿದ ಪ್ರಧಾನಿ, ಇದರ ಭಾಗವಾಗಿ ಏಪ್ರಿಲ್ 2022ರಲ್ಲಿ ʻನಿಧಿ ನಿರ್ವಹಣಾ ಚಟುವಟಿಕೆಗಳನ್ನು ನಿಯಂತ್ರಿಸುವ ಸಮಗ್ರ ನೀತಿʼಯನ್ನು ʻಐಎಫ್ಎಸ್‌ಸಿಎʼ ರೂಪಿಸಿದ ಉದಾಹರಣೆ ನೀಡಿದರು. ಈ ಬಗ್ಗೆ ಹರ್ಷ ವ್ಯಕ್ತಪಡಿಸಿದರು. 80 ನಿಧಿ ನಿರ್ವಹಣಾ ಘಟಕಗಳು ಇಂದು ʻಐಎಫ್ಎಸ್‌ಸಿಎʼನಲ್ಲಿ ನೋಂದಾಯಿಸಿಕೊಂಡಿದ್ದು, ಅವು 24 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ನಿಧಿಯನ್ನು ಸ್ಥಾಪಿಸಿವೆ. 2 ಪ್ರಮುಖ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು 2024ರಲ್ಲಿ ʻಗಿಫ್ಟ್ ಐಎಫ್ಎಸ್‌ಸಿʼಯಲ್ಲಿ ತಮ್ಮ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮೋದನೆ ಪಡೆದಿವೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮೇ 2022ರಲ್ಲಿ ʻಐಎಫ್ಎಸ್‌ಸಿಎʼ ಬಿಡುಗಡೆ ಮಾಡಿದ ವಿಮಾನ ಗುತ್ತಿಗೆ ನೀತಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಈವರೆಗೆ ಇಂತಹ 26 ಘಟಕಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದರು.

 

ʻಐಎಫ್ಎಸ್‌ಸಿಎʼಯ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಗಿಫ್ಟ್ ಐಎಫ್ಎಸ್‌ಸಿಎʼಯನ್ನು ಸಾಂಪ್ರದಾಯಿಕ ಹಣಕಾಸು ಮತ್ತು ಉದ್ಯಮಗಳನ್ನು ಮೀರಿ ಮೇಲಕ್ಕೆ ಕೊಂಡೊಯ್ಯುವ ಸರ್ಕಾರದ ಪ್ರಯತ್ನಗಳನ್ನು ಪುನರುಚ್ಚರಿಸಿದರು. "ಗಿಫ್ಟ್ ಸಿಟಿಯನ್ನು ಹೊಸ ಯುಗದ ಜಾಗತಿಕ ಹಣಕಾಸು ಮತ್ತು ತಂತ್ರಜ್ಞಾನ ಸೇವೆಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲು ನಾವು ಬಯಸುತ್ತೇವೆ," ಎಂದು ಶ್ರೀ ಮೋದಿ ಹೇಳಿದರು. ʻಗಿಫ್ಟ್ ಸಿಟಿʼ ಒದಗಿಸುವ ಉತ್ಪನ್ನಗಳು ಮತ್ತು ಸೇವೆಗಳು ಜಗತ್ತು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಇದರ ಪಾಲುದಾರರು ದೊಡ್ಡ ಪಾತ್ರವನ್ನು ವಹಿಸುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.

ಹವಾಮಾನ ಬದಲಾವಣೆಯ ಬೃಹತ್ ಸವಾಲಿನ ಬಗ್ಗೆ ಗಮನ ಸೆಳೆದ ಪ್ರಧಾನಿ ಮೋದಿ, ಈ ವಿಚಾರದಲ್ಲಿ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾದ ಭಾರತದ ಕಾಳಜಿಯನ್ನು ಒತ್ತಿ ಹೇಳಿದರು. ಇತ್ತೀಚಿನ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ 28)  ಭಾರತದ ಬದ್ಧತೆಯ ಬಗ್ಗೆ ಮಾಹಿತಿ ನೀಡಿದ ಅವರು, ಭಾರತ ಮತ್ತು ವಿಶ್ವದ ಜಾಗತಿಕ ಗುರಿಗಳನ್ನು ಸಾಧಿಸಲು ಕಡಿಮೆ ಹೊರೆಯ ಹಣಕಾಸು ಲಭ್ಯತೆ ಸಾಕಷ್ಟು ಇರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.  ಜಾಗತಿಕ ಬೆಳವಣಿಗೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ ಹಣಕಾಸಿನ ಅಗತ್ಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಅವರು ಪುನರುಚ್ಚರಿಸಿದರು. ಇದು ಭಾರತದ ʻಜಿ-20ʼ ಅಧ್ಯಕ್ಷತೆಯ ಅವಧಿಯಲ್ಲಿ ಆದ್ಯತೆಯ ಕ್ಷೇತ್ರಗಳಲ್ಲಿ ಒಂದಾಗಿತ್ತು ಎಂದರು. ಇದು ಹಸಿರು, ಹೆಚ್ಚು ಸ್ಥಿತಿಸ್ಥಾಪಕ ಮತ್ತು ಹೆಚ್ಚು ಅಂತರ್ಗತ ಸಮಾಜಗಳು ಹಾಗೂ ಆರ್ಥಿಕತೆಗಳತ್ತ ಪರಿವರ್ತನೆಯನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಹೇಳಿದರು. ಕೆಲವು ಅಂದಾಜಿನ ಪ್ರಕಾರ, 2070ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸಲು ಭಾರತಕ್ಕೆ ಕನಿಷ್ಠ 10 ಟ್ರಿಲಿಯನ್ ಡಾಲರ್ ಅಗತ್ಯವಿದೆ. ಇದಕ್ಕಾಗಿ ಮಾಡಬೇಕಾದ ಹೂಡಿಕೆಯ ಒಂದಷ್ಟು ಮೊತ್ತವನ್ನು ಜಾಗತಿಕ ಮೂಲಗಳ ಮೂಲಕ ಒದಗಿಸಬೇಕಾಗುತ್ತದೆ ಎಂದು ಪ್ರಧಾನಿ ಹೇಳಿದರು. ʻಐಎಫ್ಎಸ್‌ಸಿಎʼಯನ್ನು ಸುಸ್ಥಿರ ಹಣಕಾಸು ಜಾಗತಿಕ ಕೇಂದ್ರವನ್ನಾಗಿ ಮಾಡಲು ಅವರು ಒತ್ತಿ ಹೇಳಿದರು. "ಭಾರತವನ್ನು ಕಡಿಮೆ ಇಂಗಾಲ ಹೊರಸೂಸುವ ಆರ್ಥಿಕತೆಯನ್ನಾಗಿ ಮಾಡಲು ಅಗತ್ಯವಾದ ಹಸಿರು ಬಂಡವಾಳ ಹರಿವಿಗೆ ʻಗಿಫ್ಟ್ ಐಎಫ್ಎಸ್‌ಸಿʼ ಪರಿಣಾಮಕಾರಿ ಹಾದಿಯಾಗಿದೆ. ಹಸಿರು ಬಾಂಡ್‌ಗಳು, ಸುಸ್ಥಿರ ಬಾಂಡ್‌ಗಳು ಮತ್ತು ಸುಸ್ಥಿರತೆ ಆಧರಿತ ಬಾಂಡ್‌ಗಳಂತಹ ಹಣಕಾಸು ಉತ್ಪನ್ನಗಳ ಅಭಿವೃದ್ಧಿಯು ಈ ನಿಟ್ಟಿನಲ್ಲಿ ಇಡೀ ವಿಶ್ವದ ಹಾದಿಯನ್ನು ಸುಲಭಗೊಳಿಸುತ್ತದೆ," ಎಂದು ಅವರು ಹೇಳಿದರು. ಜಾಗತಕ ಹವಾಮಾನ ಶೃಂಗಸಭೆಯಲ್ಲಿ (ಸಿಒಪಿ 28) ಭೂಗ್ರಹ ಸ್ನೇಹಿ ಉಪಕ್ರಮವಾಗಿ ಭಾರತವು ಮುಂದಿಟ್ಟ 'ಗ್ಲೋಬಲ್ ಗ್ರೀನ್ ಕ್ರೆಡಿಟ್ ಇನಿಶಿಯೇಟಿವ್' ಬಗ್ಗೆ ಅವರು ಮಾಹಿತಿ ನೀಡಿದರು. ಹಸಿರು ಸಾಲಕ್ಕಾಗಿ ಮಾರುಕಟ್ಟೆ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಮುಂದಿಡುವಂತೆ ಶ್ರೀ ಮೋದಿ ಅವರು ಉದ್ಯಮದ ಮುಖಂಡರನ್ನು ಒತ್ತಾಯಿಸಿದರು.

"ಭಾರತವು ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ʻಫಿನ್‌ಟೆಕ್ʼ ಮಾರುಕಟ್ಟೆಗಳಲ್ಲಿ ಒಂದಾಗಿದೆ" ಎಂದು ಪ್ರಧಾನಮಂತ್ರಿಯವರು ಹೇಳಿದರು. ಇದೇ ವೇಳೆ, ʻಫಿನ್‌ಟೆಕ್‌ʼ ಕ್ಷೇತ್ರದಲ್ಲಿ ಭಾರತದ ಶಕ್ತಿಯು ʻಗಿಫ್ಟ್ ಐಎಫ್ಎಸ್‌ಸಿʼಯ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗಿದೆ ಮತ್ತು ಇದರ ಪರಿಣಾಮವಾಗಿ, ಇದು ಫಿನ್-ಟೆಕ್‌ನ ಉದಯೋನ್ಮುಖ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿದೆ ಎಂದರು. ʻಐಎಫ್ಎಸ್‌ಸಿಎʼ ಸಾಧನೆಗಳನ್ನು ಪಟ್ಟಿ ಮಾಡಿದ ಪ್ರಧಾನಿ, 2022ರಲ್ಲಿ ʻಫಿನ್‌ಟೆಕ್‌ಗಾಗಿ ಪ್ರಗತಿಪರ ನಿಯಂತ್ರಣ ನೀತಿʼ ಬಿಡುಗಡೆ ಮಾಡಿದ್ದನ್ನು ಪ್ರಸ್ತಾಪಿಸಿದರು. ಇದೇ ವೇಳೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಭಾರತೀಯ ಮತ್ತು ವಿದೇಶಿ ಫಿನ್‌ಟೆಕ್‌ಗಳಿಗೆ ಅನುದಾನ ಒದಗಿಸುವ ʻಐಎಫ್ಎಸ್‌ಸಿಎʼಯ ʻಫಿನ್‌ಟೆಕ್‌ ಪ್ರೋತ್ಸಾಹಕ ಯೋಜನೆʼಯನ್ನೂ ಪ್ರಧಾನಿ ಪಟ್ಟಿ ಮಾಡಿದರು. ಜಾಗತಿಕ ಫಿನ್‌ಟೆಕ್ ಜಗತ್ತಿಗೆ ಹೆಬ್ಬಾಗಿಲಾಗುವ ಮತ್ತು ವಿಶ್ವಕ್ಕೆ ʻಫಿನ್‌ಟೆಕ್ʼ ಪ್ರಯೋಗಾಲಯವಾಗುವ ಸಾಮರ್ಥ್ಯವನ್ನು ʻಗಿಫ್ಟ್ ಸಿಟಿʼ ಹೊಂದಿದೆ ಎಂದು ಪ್ರಧಾನಿ ಶ್ಲಾಘಿಸಿದರು. ಹೂಡಿಕೆದಾರರು ಇದರ ಗರಿಷ್ಠ ಲಾಭವನ್ನು ಪಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

 

ʻಗಿಫ್ಟ್-ಐಎಫ್ಎಸ್‌ಸಿʼ ಜಾಗತಿಕ ಬಂಡವಾಳದ ಹರಿವಿಗೆ ಪ್ರಮುಖ ಹೆಬ್ಬಾಗಿಲಾಗಿ ಬದಲಾಗುತ್ತಿರುವ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಗುಜರಾತ್‌ನ ಐತಿಹಾಸಿಕ ನಗರ ಅಹಮದಾಬಾದ್ ಮತ್ತು ರಾಜಧಾನಿ ಗಾಂಧಿನಗರದ ನಡುವೆ ಇರುವ 'ತ್ರಿ-ನಗರ' ಪರಿಕಲ್ಪನೆಯನ್ನು ವಿವರಿಸಿದರು. "ಗಿಫ್ಟ್ ಐಎಫ್ಎಸ್‌ಸಿʼಯ ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯವು ವ್ಯವಹಾರಗಳಿಗೆ ದಕ್ಷತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುವ ವೇದಿಕೆಯನ್ನು ಒದಗಿಸುತ್ತದೆ," ಎಂದು ಅವರು ಹೇಳಿದರು. ಹಣಕಾಸು ಮತ್ತು ತಂತ್ರಜ್ಞಾನ ಜಗತ್ತಿನ ಪ್ರಕಾಶಮಾನವಾದ ಮನಸ್ಸುಗಳನ್ನು ಆಕರ್ಷಿಸುವ ಕಾಂತವಾಗಿ ʻಗಿಫ್ಟ್ ಐಎಫ್ಎಸ್‌ಸಿʼ ಹೊರಹೊಮ್ಮಿದೆ ಎಂದು ಪ್ರಧಾನಿ ಹೇಳಿದರು. 

ಇಂದು ʻಐಎಫ್ಎಸ್‌ಸಿʼ, 58 ಕಾರ್ಯಾಚರಣೆ ಘಟಕಗಳು ಮತ್ತು ʻಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್‌ʼ ಸೇರಿದಂತೆ 3 ವಿನಿಮಯ ಕೇಂದ್ರಗಳು, 9 ವಿದೇಶಿ ಬ್ಯಾಂಕುಗಳು ಸೇರಿದಂತೆ 25 ಬ್ಯಾಂಕುಗಳು, 29 ವಿಮಾ ಘಟಕಗಳು, 2 ವಿದೇಶಿ ವಿಶ್ವವಿದ್ಯಾಲಯಗಳು, ಸಲಹಾ ಸಂಸ್ಥೆಗಳು, ಕಾನೂನು ಸಂಸ್ಥೆಗಳು ಮತ್ತು ಸಿಎ ಸಂಸ್ಥೆಗಳು ಸೇರಿದಂತೆ 50ಕ್ಕೂ ಹೆಚ್ಚು ವೃತ್ತಿಪರ ಸೇವಾ ಪೂರೈಕೆದಾರರನ್ನು ಹೊಂದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಮುಂದಿನ ಕೆಲವು ವರ್ಷಗಳಲ್ಲಿ ʻಗಿಫ್ಟ್ ಸಿಟಿʼ ವಿಶ್ವದ ಅತ್ಯುತ್ತಮ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರಗಳಲ್ಲಿ ಒಂದಾಗಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

"ಭಾರತವು ಆಳವಾದ ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ವ್ಯಾಪಾರ-ವಾಣಿಜ್ಯದ ಐತಿಹಾಸಿಕ ಸಂಪ್ರದಾಯವನ್ನು ಹೊಂದಿರುವ ದೇಶ" ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತದಲ್ಲಿ ಪ್ರತಿಯೊಬ್ಬ ಹೂಡಿಕೆದಾರರು ಅಥವಾ ಕಂಪನಿಗೆ ವೈವಿಧ್ಯಮಯ ಅವಕಾಶಗಳು ಇರುವು ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ʻಗಿಫ್ಟ್ʼ ಬಗ್ಗೆ ಭಾರತದ ದೃಷ್ಟಿಕೋನವು ಭಾರತದ ಬೆಳವಣಿಗೆಯ ಕಥೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದರು. ಇದಕ್ಕೆ ಹಲವು ಉದಾಹರಣೆಗಳನ್ನು ಪ್ರಧಾನಿ ನೀಡಿದರು. ದೈನಂದಿನ ವಿಮಾನ ಪ್ರಯಾಣಿಕರ ಸಂಖ್ಯೆ 4 ಲಕ್ಷಕ್ಕೆ ಏರಿರುವುದು,  2014ರಲ್ಲಿ 400 ಇದ್ದ ಪ್ರಯಾಣಿಕರ ವಿಮಾನಗಳ ಸಂಖ್ಯೆ ಇಂದು 700ಕ್ಕೆ ಏರಿಕೆಯಾಗಿರುವುದು ಮತ್ತು ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದ್ವಿಗುಣಗೊಂಡಿರುವುದನ್ನು ಅವರು ಉಲ್ಲೇಖಿಸಿದರು. "ನಮ್ಮ ವಿಮಾನಯಾನ ಸಂಸ್ಥೆಗಳು ಮುಂಬರುವ ವರ್ಷಗಳಲ್ಲಿ ಸುಮಾರು 1000 ವಿಮಾನಗಳನ್ನು ಖರೀದಿಸಲಿವೆ," ಎಂದು ಮಾಹಿತಿ ನೀಡಿದ ಪ್ರಧಾನಿಯವರು, ವಿಮಾನಗಳ ನಿರ್ವಾಹಕ ಸಂಸ್ಥೆಗಳಿಗೆ ʻಗಿಫ್ಟ್ ಸಿಟಿʼ ಒದಗಿಸಿದ ವಿವಿಧ ಸೌಲಭ್ಯಗಳನ್ನು ಎತ್ತಿ ತೋರಿಸಿದರು. ʻಐಎಫ್ಎಸ್‌ಸಿಎʼಯ ಹಡಗು ಗುತ್ತಿಗೆ ನೀತಿ, ಐಟಿ ಪ್ರತಿಭೆಗಳ ದೊಡ್ಡ ಪಡೆ, ಡೇಟಾ ಸಂರಕ್ಷಣಾ ಕಾನೂನುಗಳು ಹಾಗೂ ಎಲ್ಲಾ ದೇಶಗಳು ಮತ್ತು ವ್ಯವಹಾರಗಳಿಗೆ ಡಿಜಿಟಲ್ ನಿರಂತರತೆಗೆ ಸುರಕ್ಷಿತ ಸೌಲಭ್ಯಗಳನ್ನು ಒದಗಿಸುವ ʻಗಿಫ್ಟ್‌ ಡೇಟಾ ರಾಯಭಾರʼ ಉಪಕ್ರಮವನ್ನು ಅವರು ಉಲ್ಲೇಖಿಸಿದರು. "ಭಾರತದ ಯುವ ಪ್ರತಿಭೆಗಳಿಗೆ ಧನ್ಯವಾದಗಳು, ನಾವು ಎಲ್ಲಾ ದೊಡ್ಡ ಕಂಪನಿಗಳ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ಆಧಾರವಾಗಿದ್ದೇವೆ," ಎಂದು ಪ್ರಧಾನಿ ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಮುಂದಿನ ಕೆಲವು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲಿದೆ ಎಂದು ಹೇಳಿದರು. ಈ ಪ್ರಯಾಣದಲ್ಲಿ ಬಂಡವಾಳದ ಹೊಸ ರೂಪಗಳು, ಡಿಜಿಟಲ್ ತಂತ್ರಜ್ಞಾನಗಳು ಮತ್ತು ಹೊಸ ಯುಗದ ಹಣಕಾಸು ಸೇವೆಗಳ ಪಾತ್ರವನ್ನು ಅವರು ಒತ್ತಿ ಹೇಳಿದರು. ʻಗಿಫ್ಟ್ ಸಿಟಿʼ ತನ್ನ ದಕ್ಷ ನಿಯಮಗಳು, ʻಪ್ಲಗ್-ಅಂಡ್-ಪ್ಲೇʼ ಮೂಲಸೌಕರ್ಯ, ಭಾರತದ ಬೃಹತ್‌ ಒಳನಾಡಿನ ಆರ್ಥಿಕತೆಗೆ ಪ್ರವೇಶ, ಕಡಿಮೆ ವೆಚ್ಚದಲ್ಲಿ ಕಾರ್ಯಾಚರಣೆಗಳ ಲಾಭ ಹಾಗೂ ಪ್ರತಿಭೆಯ ಅನುಕೂಲದೊಂದಿಗೆ ಸಾಟಿಯಿಲ್ಲದ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಅವರು ಹೇಳಿದರು. "ಜಾಗತಿಕ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ʻಗಿಫ್ಟ್ ಐಎಫ್ಎಸ್‌ಸಿ ಜೊತೆಗೆ ಒಟ್ಟಾಗಿ ಹೆಜ್ಜೆ ಹಾಕೋಣ. ʻವೈಬ್ರೆಂಟ್ ಗುಜರಾತ್ ಶೃಂಗಸಭೆʼಯೂ ಶೀಘ್ರದಲ್ಲೇ ನಡೆಯಲಿದೆ," ಎಂದು ಅವರು ಎಲ್ಲಾ ಹೂಡಿಕೆದಾರರನ್ನು ಆಹ್ವಾನಿಸಿದರು. "ವಿಶ್ವದ ಗಂಭೀರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ನಾವು ಒಟ್ಟಾಗಿ ನವೀನ ಆಲೋಚನೆಗಳನ್ನು ಅನ್ವೇಷಿಸೋಣ ಮತ್ತು ಅನುಸರಿಸೋಣ," ಎಂದು ಕರೆ ನೀಡುವ ಮೂಲಕ ಶ್ರೀ ಮೋದಿ ಅವರು ಮಾತು ಮುಕ್ತಾಯಗೊಳಿಸಿದರು.

ಹಿನ್ನೆಲೆ

ʻವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ-2024ʼರ ಪೂರ್ವಭಾವಿಯಾಗಿ ಭಾರತ ಸರ್ಕಾರದ ಆಶ್ರಯದಲ್ಲಿ ʻಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರಗಳ ಪ್ರಾಧಿಕಾರʼ(ಐಎಫ್ಎಸ್‌ಸಿಎ) ಮತ್ತು ʻಗಿಫ್ಟ್ ಸಿಟಿʼ ಜಂಟಿಯಾಗಿ ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು ಆಯೋಜಿಸಿವೆ. ಇದು ಪ್ರಪಂಚದಾದ್ಯಂತದ ಪ್ರಗತಿಪರ ಆಲೋಚನೆಗಳು, ಪ್ರಮುಖ ಸಮಸ್ಯೆಗಳು ಮತ್ತು ನವೀನ ತಂತ್ರಜ್ಞಾನಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಲು ಹಾಗೂ ಸಮಸ್ಯೆಗಳನ್ನು  ಅವಕಾಶಗಳಾಗಿ ಪರಿವರ್ತಿಸಲು ವೇದಿಕೆ ಒದಗಿಸುತ್ತದೆ.

ʻಇನ್ಫಿನಿಟಿ ಫೋರಂʼನ 2ನೇ ಆವೃತ್ತಿಯನ್ನು  'ಗಿಫ್ಟ್-ಐಎಫ್ಎಸ್‌ಸಿ: ಹೊಸ ಯುಗದ ಜಾಗತಿಕ ಹಣಕಾಸು ಸೇವಾ ಕೇಂದ್ರʼ ವಿಷಯಾಧಾರಿತವಾಗಿ ಏರ್ಪಡಿಸಲಾಗಿದೆ. ಇದರ ಭಾಗವಾಗಿ ಈ ಕೆಳಗಿನ ಮೂರು ಚರ್ಚಾಗೊಷ್ಠಿಗಳನ್ನು ಆಯೋಜಿಸಲಾಗಿದೆ: 
ಪೂರ್ಣ ಗೋಷ್ಠಿ: ʻಮೇಕಿಂಗ್ ಆಫ್ ಎ ನ್ಯೂ ಏಜ್ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸೆಂಟರ್ʼ ಹಸಿರು ಗೋಷ್ಠಿ: ಹಸಿರು ಉತ್ತೇಜನಕ್ಕಾಗಿ  ಪ್ರಯತ್ನ ಬೆಳ್ಳಿ ಗೋಷ್ಠಿ: ʻಗಿಫ್ಟ್ ಐಎಫ್ಎಸ್‌ಸಿʼಯಲ್ಲಿ ದೀರ್ಘಾಕಾಲೀನ ಹಣಕಾಸು ಕೇಂದ್ರ ಪ್ರತಿ ಗೋಷ್ಠಿಯು ಉದ್ಯಮದ ಹಿರಿಯ ನಾಯಕರಿಂದ ʻಇನ್ಫಿನಿಟಿ ಟಾಕ್ʼ ಹಾಗೂ ಭಾರತ ಮತ್ತು ಪ್ರಪಂಚದಾದ್ಯಂತದ ಹಣಕಾಸು ಕ್ಷೇತ್ರದ ಉದ್ಯಮ ತಜ್ಞರು ಮತ್ತು ವೃತ್ತಿಪರರ ಸಮಿತಿಯ ಚರ್ಚೆಯನ್ನು ಒಳಗೊಂಡಿರುತ್ತದೆ. ಪ್ರಾಯೋಗಿಕ ಒಳನೋಟಗಳು ಮತ್ತು ಕಾರ್ಯಗತಗೊಳಿಸಬಹುದಾದ ಪರಿಹಾರಗಳನ್ನು ಒದಗಿಸುತ್ತದೆ.

ಈ ವೇದಿಕೆಯು ಭಾರತ ಮಾತ್ರವಲ್ಲದೆ ಅಮೆರಿಕ, ಬ್ರಿಟನ್‌, ಸಿಂಗಾಪುರ, ದಕ್ಷಿಣ ಆಫ್ರಿಕಾ, ಯುಎಇ, ಆಸ್ಟ್ರೇಲಿಯಾ ಮತ್ತು ಜರ್ಮನಿ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರ ಆನ್‌ಲೈನ್‌ ಉಪಸ್ಥಿತಿಯನ್ನು ಒಳಗೊಂಡಿರುತ್ತದೆ. 300ಕ್ಕೂ ಅಧಿಕ ʻಸಿಎಕ್ಸ್ಒʼಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಈ ಕಾರ್ಯಕ್ರಮದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು ಸಹ ಭಾಗವಹಿಸಲಿದ್ದಾರೆ.

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India's export performance in several key product categories showing notable success

Media Coverage

India's export performance in several key product categories showing notable success
NM on the go

Nm on the go

Always be the first to hear from the PM. Get the App Now!
...
Prime Minister greets valiant personnel of the Indian Navy on the Navy Day
December 04, 2024

Greeting the valiant personnel of the Indian Navy on the Navy Day, the Prime Minister, Shri Narendra Modi hailed them for their commitment which ensures the safety, security and prosperity of our nation.

Shri Modi in a post on X wrote:

“On Navy Day, we salute the valiant personnel of the Indian Navy who protect our seas with unmatched courage and dedication. Their commitment ensures the safety, security and prosperity of our nation. We also take great pride in India’s rich maritime history.”