ಮೊದಲನೆಯದಾಗಿ, ಇಂದು ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸೈಪ್ರಸ್ ಅಧ್ಯಕ್ಷರಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಉದ್ಯಮ ವ್ಯವಹಾರ ನಾಯಕರೊಂದಿಗೆ ಇಷ್ಟು ದೊಡ್ಡ ದುಂಡುಮೇಜಿನ ಸಭೆ ಆಯೋಜಿಸಿದ್ದಕ್ಕಾಗಿ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನ ಬಗ್ಗೆ ಮತ್ತು ನಮ್ಮ ಪಾಲುದಾರಿಕೆಯ ಬಗ್ಗೆ ಅವರು ಹಂಚಿಕೊಂಡ ಸಕಾರಾತ್ಮಕ ಆಲೋಚನೆಗಳಿಗಾಗಿ ನಾನು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ.
ಸ್ನೇಹಿತರೆ,
23 ವರ್ಷಗಳ ನಂತರ ಭಾರತದ ಪ್ರಧಾನ ಮಂತ್ರಿಯೊಬ್ಬರು ಸೈಪ್ರಸ್‌ಗೆ ಭೇಟಿ ನೀಡಿದ್ದಾರೆ. ಮೊದಲ ಕಾರ್ಯಕ್ರಮವೆಂದರೆ ಉದ್ಯಮ ವ್ಯವಹಾರದ ದುಂಡುಮೇಜಿನ ಸಭೆ. ಇದು ಭಾರತ ಮತ್ತು ಸೈಪ್ರಸ್ ನಡುವಿನ ಸಂಬಂಧದಲ್ಲಿ ಆರ್ಥಿಕ ಪಾಲುದಾರಿಕೆ ಎಷ್ಟು ಮುಖ್ಯ ಎಂಬುದನ್ನು ಸೂಚಿಸುತ್ತದೆ. ನಾನು ನಿಮ್ಮ ಅಭಿಪ್ರಾಯಗಳನ್ನು ಬಹಳ ಎಚ್ಚರಿಕೆಯಿಂದ ಆಲಿಸಿದ್ದೇನೆ. ಭಾರತ-ಸೈಪ್ರಸ್ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ನಿಮ್ಮ ಬದ್ಧತೆಯನ್ನು ನಾನು ಅನುಭವಿಸಿದ್ದೇನೆ. ನಿಮ್ಮ ಆಲೋಚನೆಗಳಲ್ಲಿ, ನಾನು ಕೇವಲ ಸಾಮರ್ಥ್ಯವನ್ನು ಮಾತ್ರವಲ್ಲ, ದೃಢಸಂಕಲ್ಪವನ್ನೂ ಅನುಭವಿಸಿದ್ದೇನೆ. ನಮ್ಮ ಸಂಬಂಧಗಳು ಮತ್ತಷ್ಟು ಬೆಳೆಯಲು ಅಪಾರ ಅವಕಾಶಗಳಿವೆ ಎಂಬುದು ಸ್ಪಷ್ಟವಾಗಿದೆ.

ಸ್ನೇಹಿತರೆ,
ನಿಮ್ಮಲ್ಲಿ ಹಲವರು ಉಲ್ಲೇಖಿಸಿರುವಂತೆ ಸೈಪ್ರಸ್ ಬಹಳ ಹಿಂದಿನಿಂದಲೂ ನಮಗೆ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ. ಸೈಪ್ರಸ್‌ನಿಂದ ಭಾರತಕ್ಕೆ ಗಮನಾರ್ಹ ಹೂಡಿಕೆ ಹರಿದುಬಂದಿದೆ. ಹಲವಾರು ಭಾರತೀಯ ಕಂಪನಿಗಳು ಸೈಪ್ರಸ್‌ನಲ್ಲಿ ಹೂಡಿಕೆ ಮಾಡಿವೆ. ಒಂದು ರೀತಿಯಲ್ಲಿ, ಅನೇಕ ರಾಷ್ಟ್ರಗಳು ಸೈಪ್ರಸ್ ಅನ್ನು ಯುರೋಪಿನ ಪ್ರವೇಶ ದ್ವಾರವಾಗಿ ನೋಡುತ್ತವೆ. ಇಂದು, ದ್ವಿಪಕ್ಷೀಯ ವ್ಯಾಪಾರ ಸಂಬಂಧವು 150 ದಶಲಕ್ಷ ಡಾಲರ್‌ಗಳನ್ನು ತಲುಪಿದೆ. ಆದರೆ ನಮ್ಮ ಸಂಬಂಧದ ನಿಜವಾದ ಸಾಮರ್ಥ್ಯವು ಇದಕ್ಕಿಂತ ಹೆಚ್ಚಿನದಾಗಿದೆ. ನಿಮ್ಮಲ್ಲಿ ಹೆಚ್ಚಿನವರು ಭಾರತದೊಂದಿಗೆ ಸಂಪರ್ಕ ಹೊಂದಿದ್ದೀರಿ, ಕಳೆದ 11 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಯಶೋಗಾಥೆಯನ್ನು ನೋಡಿದ್ದೀರಿ. ಕಳೆದ ದಶಕದಲ್ಲಿ, ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ, ನಾವು ಮುಂದಿನ ದಿನಗಳಲ್ಲಿ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದ್ದೇವೆ. ಇಂದು ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಆರ್ಥಿಕತೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ.
ಸ್ನೇಹಿತರೆ,
ನಾವು ಪ್ರಮುಖ ತೆರಿಗೆ ಸುಧಾರಣೆಗಳನ್ನು ಕೈಗೊಂಡಿದ್ದೇವೆ ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ಜಿಎಸ್‌ಟಿಯೊಂದಿಗೆ, ಒಂದು ರಾಷ್ಟ್ರ, ಒಂದು ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಾರ್ಪೊರೇಟ್ ತೆರಿಗೆಯನ್ನು ತರ್ಕಬದ್ಧಗೊಳಿಸಲಾಗಿದೆ. ಸಾವಿರಾರು ಕಾನೂನುಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ. "ವ್ಯಾಪಾರವನ್ನು ಸುಲಭಗೊಳಿಸುವ" ಜತೆಗೆ, ನಾವು "ವ್ಯಾಪಾರ ಮಾಡುವ ವಿಶ್ವಾಸ"ವನ್ನು ಸಹ ಸಮಾನವಾಗಿ ನಿರ್ಮಿಸಿದ್ದೇವೆ. ಇಂದು ಭಾರತವು ಸ್ಪಷ್ಟ ನೀತಿ ಮತ್ತು ಸ್ಥಿರವಾದ ರಾಜಕೀಯ ವ್ಯವಸ್ಥೆಯವನ್ನು ಹೊಂದಿದೆ. 6 ದಶಕಗಳಲ್ಲಿ ಮೊದಲ ಬಾರಿಗೆ, ನಮ್ಮದೇ ಸರ್ಕಾರವು ಸತತ 3ನೇ ಅವಧಿಗೆ ಆಯ್ಕೆಯಾಗಿದೆ. ಭಾರತದ ಅಪಾರ ಜನಸಂಖ್ಯಾ ಲಾಭಾಂಶ ಮತ್ತು ಪ್ರತಿಭೆಯ ಬಗ್ಗೆಯೂ ನಿಮಗೆ ತಿಳಿದಿದೆ, ಅದು ನಿಮ್ಮ ಚರ್ಚೆಗಳಲ್ಲಿಯೂ ಬಂದಿತು. ಕಳೆದ 10 ವರ್ಷಗಳಲ್ಲಿ ಭಾರತವು ಡಿಜಿಟಲ್ ಕ್ರಾಂತಿ ಮಾಡಿದೆ. ಆರ್ಥಿಕ ಸೇರ್ಪಡೆ ಜಾಗತಿಕ ಮಾನದಂಡವಾಗಿದೆ. ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ಮೂಲಕ, ವಿಶ್ವದ ಡಿಜಿಟಲ್ ವಹಿವಾಟುಗಳಲ್ಲಿ 50% ಈಗ ಭಾರತದಲ್ಲೇ ನಡೆಯುತ್ತದೆ. ಫ್ರಾನ್ಸ್‌ನಂತಹ ದೇಶಗಳು ಈ ವೇದಿಕೆಗೆ ಸೇರಿಕೊಂಡಿವೆ ಮತ್ತು ಸೈಪ್ರಸ್ ಕೂಡ ಸೇರಲು ಚರ್ಚೆಗಳು ನಡೆಯುತ್ತಿವೆ, ನಾನು ಇದನ್ನು ಸ್ವಾಗತಿಸುತ್ತೇನೆ.

ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತವು ವಾರ್ಷಿಕವಾಗಿ 100 ಶತಕೋಟಿ ಡಾಲರ್ ಗೂ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ನಾವು ಉತ್ಪಾದನಾ(ತಯಾರಿಕಾ) ಮಿಷನ್ ಆರಂಭಿಸಿದ್ದೇವೆ. ಲಸಿಕೆಗಳು, ಜೆನೆರಿಕ್ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ತಯಾರಿಸುವಲ್ಲಿ ಭಾರತವು ವಿಶ್ವ ನಾಯಕರಲ್ಲಿ ಒಂದಾಗಿದೆ. ನಾವು ಸಮುದ್ರ ಮತ್ತು ಬಂದರು ಅಭಿವೃದ್ಧಿಯತ್ತಲೂ ಗಮನ ಹರಿಸುತ್ತಿದ್ದೇವೆ. ಹಡಗು ನಿರ್ಮಾಣ ಮತ್ತು ಹಡಗು ಒಡೆಯುವುದಕ್ಕೆ ಆದ್ಯತೆ ನೀಡಲಾಗುತ್ತಿದೆ, ಇದಕ್ಕಾಗಿ ಹೊಸ ನೀತಿಯನ್ನೇ ಪರಿಚಯಿಸಲಾಗುತ್ತಿದೆ. ನಾಗರಿಕ ವಿಮಾನಯಾನ ವಲಯವು ವೇಗವಾಗಿ ಬೆಳೆಯುತ್ತಿದೆ. ಭಾರತೀಯ ಕಂಪನಿಗಳು ಸಾವಿರಕ್ಕೂ ಹೆಚ್ಚು ವಿಮಾನಗಳಿಗೆ ಹೊಸ ಆದೇಶಗಳನ್ನು ನೀಡಿವೆ. ನಾವೀನ್ಯತೆ ಭಾರತದ ಆರ್ಥಿಕ ಬಲದ ಬಲಿಷ್ಠ ಆಧಾರಸ್ತಂಭವಾಗಿದೆ. ನಮ್ಮ 1,00,000ಕ್ಕೂ ಹೆಚ್ಚಿನ ಸ್ಟಾರ್ಟಪ್‌ಗಳು ಕೇವಲ ಕನಸುಗಳಾಗದೆ, ಅವು ಪರಿಹಾರಗಳನ್ನು ನೀಡುತ್ತಿವೆ. ಇವುಗಳಲ್ಲಿ 100 ಯುನಿಕಾರ್ನ್‌ಗಳಾಗಿವೆ. ಭಾರತವು ಆರ್ಥಿಕತೆಯನ್ನು ಪರಿಸರ ವಿಜ್ಞಾನದೊಂದಿಗೆ ಸಮತೋಲನಗೊಳಿಸುವಲ್ಲಿ ನಂಬಿಕೆ ಇಟ್ಟಿದೆ, ನಾವು ಈ ಹಾದಿಯಲ್ಲಿ ಮುನ್ನಡೆಯಲು ಬದ್ಧರಾಗಿದ್ದೇವೆ. ಸ್ವಚ್ಛ ಮತ್ತು ಹಸಿರು ಭವಿಷ್ಯವನ್ನು ನಿರ್ಮಿಸಲಾಗುತ್ತಿದೆ. 2030ರ ವೇಳೆಗೆ 500 ಗಿಗಾವ್ಯಾಟ್‌ಗಳ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯತ್ತ ನಾವು ವೇಗವಾಗಿ ಸಾಗುತ್ತಿದ್ದೇವೆ. ನಾವು ಹಸಿರು ಸಾಗಣೆಯ ಕೆಲಸವನ್ನು ವೇಗಗೊಳಿಸುತ್ತಿದ್ದೇವೆ, 2030ರ ವೇಳೆಗೆ ಭಾರತೀಯ ರೈಲ್ವೆಯನ್ನು 100% ಇಂಗಾಲ-ತಟಸ್ಥ(ಮುಕ್ತ)ಗೊಳಿಸುತ್ತಿದ್ದೇವೆ.
ನಮ್ಮ ಎಐ ಮಿಷನ್, ಕ್ವಾಂಟಮ್ ಮಿಷನ್, ಸೆಮಿಕಂಡಕ್ಟರ್ ಮಿಷನ್, ಕ್ರಿಟಿಕಲ್ ಮಿನರಲ್ಸ್ ಮಿಷನ್ ಮತ್ತು ನ್ಯೂಕ್ಲಿಯರ್ ಪವರ್ ಮಿಷನ್ ನಮ್ಮ ಬೆಳವಣಿಗೆಯ ಹೊಸ ಎಂಜಿನ್‌ಗಳಾಗುತ್ತಿವೆ. ಸೈಪ್ರಸ್ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ಭಾರತದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್(ಎನ್‌ಎಸ್‌ಇ) ನನ್ನ ತವರು ರಾಜ್ಯ ಗುಜರಾತ್‌ನಲ್ಲಿರುವ ಗಿಫ್ಟ್ ಸಿಟಿಯಲ್ಲಿ ಸಹಕರಿಸಲು ಒಪ್ಪಿಕೊಂಡಿವೆ ಎಂಬುದನ್ನು ತಿಳಿದು ನನಗೆ ಸಂತೋಷವಾಯಿತು. ಸೈಪ್ರಸ್ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭಾರತದಲ್ಲಿಯೂ ಸಹ, ನಾವು ಪ್ರವಾಸೋದ್ಯಮದ ಗಮ್ಯಸ್ಥಾನ ಅಭಿವೃದ್ಧಿ ಮತ್ತು ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ನಮ್ಮ ಪ್ರವಾಸ ನಿರ್ವಾಹಕರ ನಡುವಿನ ನಿಕಟ ಸಹಕಾರವು ಹಲವು ರೂಪಗಳನ್ನು ತೆಗೆದುಕೊಳ್ಳಬಹುದು. ಪರಸ್ಪರ ಸಹಕಾರಕ್ಕೆ ಅಪಾರ ಸಾಮರ್ಥ್ಯವಿರುವ ಅನೇಕ ಕ್ಷೇತ್ರಗಳಿವೆ.
ಸ್ನೇಹಿತರೆ,
ಕಳೆದ ತಿಂಗಳು ಭಾರತ ಮತ್ತು ಯುಕೆ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ದ ಒಪ್ಪಂದ ಮಾಡಿಕೊಂಡಿವೆ. ಈ ವರ್ಷದ ಅಂತ್ಯದ ವೇಳೆಗೆ ಭಾರತ-ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಾವು ಬದ್ಧರಾಗಿದ್ದೇವೆ. ಮಾತುಕತೆಗಳ ವೇಗ ಹೆಚ್ಚಾಗಿದೆ, ನೀವೆಲ್ಲರೂ ಅದರಿಂದ ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತೀರಿ. ಭಾರತ-ಸೈಪ್ರಸ್-ಗ್ರೀಸ್ ವ್ಯವಹಾರ ಮತ್ತು ಹೂಡಿಕೆ ಮಂಡಳಿಯ ಸ್ಥಾಪನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಬಹಳ ಒಳ್ಳೆಯ ಉಪಕ್ರಮವಾಗಿದ್ದು ಆರ್ಥಿಕ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಬಹುದು.
ಸ್ನೇಹಿತರೆ,
ನೀವೆಲ್ಲರೂ ಹಂಚಿಕೊಂಡಿರುವ ವಿಚಾರಗಳು ಮತ್ತು ಸಲಹೆಗಳನ್ನು ನನ್ನ ತಂಡವು ಗಮನಿಸಿದೆ. ನಾವು ಕ್ರಿಯಾಯೋಜನೆ ಅಭಿವೃದ್ಧಿಪಡಿಸುತ್ತೇವೆ ಮತ್ತು ಅವುಗಳನ್ನು ಅನುಸರಿಸುತ್ತೇವೆ. ಭಾರತಕ್ಕೆ ಭೇಟಿ ನೀಡುವಂತೆ ನಾನು ನಿಮ್ಮೆಲ್ಲರಿಗೂ ಆಹ್ವಾನವನ್ನೂ ನೀಡುತ್ತೇನೆ. ಕೊನೆಯಲ್ಲಿ, ಈ ಸಭೆಯಲ್ಲಿ ಭಾಗವಹಿಸಲು ಸಮಯ ನೀಡಿದ್ದಕ್ಕಾಗಿ ನಾನು ಮತ್ತೊಮ್ಮೆ ಅಧ್ಯಕ್ಷರಿಗೆ ಧನ್ಯವಾದ ಹೇಳುತ್ತೇನೆ. ಈ ದುಂಡುಮೇಜಿನ ಸಭೆಯನ್ನು ಇಷ್ಟು ಚೆನ್ನಾಗಿ ಸಮನ್ವಯದ ರೂಪದಲ್ಲಿ ಆಯೋಜಿಸಿದ್ದಕ್ಕಾಗಿ ಸೈಪ್ರಸ್ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಒಕ್ಕೂಟ(ಸಂಘಟನೆ)ಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲರಿಗೂ ತುಂಬು ಧನ್ಯವಾದಗಳು.