ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2017-18 ರಿಂದ 2019-20ರ ಅವಧಿಗಾಗಿ ಪೊಲೀಸ್ ಪಡೆಗಳ ಆಧುನೀಕರಣಕ್ಕೆ (ಎಂ.ಪಿ.ಎಫ್.) ತನ್ನ ಅನುಮೋದನೆ ನೀಡಿದೆ. ಮೂರು ವರ್ಷಗಳ ಅವಧಿಗಾಗಿ ಯೋಜನೆಗೆ 25,060 ಕೋಟಿ ರೂಪಾಯಿ ಹಣಕಾಸು ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಕೇಂದ್ರ ಸರ್ಕಾರದ ಪಾಲು 18,636 ಕೋಟಿ ರೂಪಾಯಿ ಮತ್ತು ರಾಜ್ಯದ ಪಾಲು 6,424 ಕೋಟಿ ರೂಪಾಯಿಗಳಾಗಿವೆ.
ಪ್ರಮುಖ ಲಕ್ಷಣಗಳು:
· ಆಂತರಿಕ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ, ಮಹಿಳಾ ಭದ್ರತೆ, ಆಧುನಿಕ ಶಸ್ತ್ರಾಸ್ತ್ರಗಳ ಲಭ್ಯತೆ, ಪೊಲೀಸ್ ಪಡೆಗಳ ಚಲನಶೀಲತೆ, ಸಾಗಣೆ ಬೆಂಬಲ, ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ಪಡೆಯುವುದು, ಪೊಲೀಸ್ ವೈರ್ ಲೆಸ್ ಮೇಲ್ದರ್ಜೆಗೇರಿಸುವುದು, ರಾಷ್ಟ್ರೀಯ ಉಪಗ್ರಹ ಜಾಲ, ಸಿಸಿಟಿಎನ್ಎಸ್ ಯೋಜನೆ, ಇ- ಕಾರಾಗೃಹ ಯೋಜನೆ ಇತ್ಯಾದಿಗೆ ಈ ಯೋಜನೆಯಡಿ ವಿಶೇಷ ಅವಕಾಶ ಕಲ್ಪಿಸಲಾಗಿದೆ.
· ಈ ಯೋಜನೆಯಡಿ, ಕೇಂದ್ರ ಬಜೆಟ್ ನಲ್ಲಿ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳು ಮತ್ತು ಎಡ ಪಂಥೀಯ ಉಗ್ರವಾದದಿಂದ ಬಾಧಿತವಾದ ರಾಜ್ಯಗಳ ಆಂತರಿಕ ಭದ್ರತೆ ಸಂಬಂಧಿತ ವೆಚ್ಚಗಳಿಗಾಗಿ 10,132 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ.
· ಎಡ ಪಂಥೀಯ ಉಗ್ರವಾದದಿಂದ ಅತಿಯಾಗಿ ಬಾಧಿತವಾದ 35 ಜಿಲ್ಲೆಗಳಿಗೆ ವಿಶೇಷ ಕೇಂದ್ರೀಯ ನೆರವು ಪರಿಚಯಿಸಲಾಗಿದ್ದು, ಇಲ್ಲಿನ ಅಭಿವೃದ್ಧಿ ಕೊರತೆಯ ಸಮಸ್ಯೆಯನ್ನು ನಿಭಾಯಿಸಲು 3,000 ಕೋಟಿ ರೂಪಾಯಿಗಳಷ್ಟು ಹಣವನ್ನು ಹಂಚಿಕೆ ಮಾಡಲಾಗಿದೆ.
· ಈಶಾನ್ಯ ರಾಜ್ಯಗಳಲ್ಲಿನ ಪೊಲೀಸ್ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು, ತರಬೇತಿ ಸಂಸ್ಥೆಗಳು, ತನಿಖಾ ಸೌಲಭ್ಯ ಇತ್ಯಾದಿಗಾಗಿ 100 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.
· ಈ ಯೋಜನೆಯ ಅನುಷ್ಠಾನವು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಹಾಗೂ ಎಡ ಪಂಥೀಯ ಉಗ್ರವಾದದಿಂದ ಬಾಧಿತವಾದ ರಾಜ್ಯಗಳಲ್ಲಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶಗಳಲ್ಲಿನ ಜೀವನಮಟ್ಟವನ್ನು ಸುಧಾರಿಸುವಲ್ಲಿ ವೇಗವರ್ಧನೆ ಮತ್ತು ಈ ಸವಾಲುಗಳನ್ನು ಎದುರಿಸಲು ಇದೇ ಕಾಲದಲ್ಲಿ ನೆರವಾಗುತ್ತದೆ.
· ಪೊಲೀಸ್ ಮೂಲಸೌಕರ್ಯ, ವಿಧಿ ವಿಜ್ಞಾನ ಪ್ರಯೋಗಾಲಯಗಳು, ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಹೊಸ ಉಪಕ್ರಮಗಳನ್ನು ಪರಿಚಯಿಸಲು ನೆರವು ಒದಗಿಸುತ್ತದೆ ಮತ್ತು ಅವರಲ್ಲಿ ಲಭ್ಯವಿರುವ ಸಾಧನಗಳನ್ನು ಅಪರಾಧ ನ್ಯಾಯ ವ್ಯವಸ್ಥೆಯೊಂದಿಗೆ ಇರುವ ಕಂದಕ ನಿವಾರಣೆಗೆ ಜೋಡಿಸಲಾಗುತ್ತದೆ. ಅಪರಾಧ ದಾಖಲೆಗಳ ರಾಷ್ಟ್ರೀಯ ದತ್ತಾಂಶ ರೂಪಾಸಿಲು ಪೊಲೀಸ್ ಠಾಣೆಗಳನ್ನು ಒಗ್ಗೂಡಿಸಲಾಗುತ್ತದೆ. ಇದು ಕಾರಾಗೃಹ, ವಿಧಿವಿಜ್ಞಾನ ಪ್ರಯೋಗಾಲಯಗಳು ಮತ್ತು ಕಾನೂನು ಕಚೇರಿಗಳಂತಹ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಇತರ ಸ್ತಂಭಗಳೊಂದಿಗೆ ಸಂಪರ್ಕಗೊಳ್ಳುತ್ತದೆ.
ಈ ಏಕ ಛತ್ರಿ ಯೋಜನೆಯು ಅತ್ಯಾಧುನಿಕ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಆಂಧ್ರಪ್ರದೇಶದ ಅಮರಾವತಿಯಲ್ಲಿ ಸ್ಥಾಪಿಸಲು ಮತ್ತು ಜೈಪುರದ ಭದ್ರತೆ, ಭಯೋತ್ಪಾದನೆ ನಿಗ್ರಹ ಮತ್ತು ಪ್ರಕ್ಷುಬ್ದತೆ ನಿಗ್ರಹ ಕುರಿತ ಸರ್ದಾರ್ ಪಟೇಲ್ ಜಾಗತಿಕ ಕೇಂದ್ರ ಹಾಗೂ ಗಾಂಧಿ ನಗರದ ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸಲು ಅವಕಾಶ ನೀಡುತ್ತದೆ.
ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಆಧುನೀಕರಣಕ್ಕೆ ಮತ್ತು ಅವುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪೊಲೀಸ್ ಪಡೆಗಳ ಆಧುನೀಕರಣ (ಎಂ.ಪಿ.ಎಫ್.) ಬಹು ದೂರ ಸಾಗಲು ಈ ಏಕಛತ್ರಿ ಯೋಜನೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


