Witnesses Operational Demonstrations by Indian Navy’s ships and special forces
“India salutes the dedication of our navy personnel”
“Sindhudurg Fort instills a feeling of pride in every citizen of India”
“Veer Chhatrapati Maharaj knew the importance of having a strong naval force”
“New epaulettes worn by Naval Officers will reflect Shivaji Maharaj’s heritage”
“We are committed to increasing the strength of our Nari Shakti in the armed forces”
“India has a glorious history of victories, bravery, knowledge, sciences, skills and our naval strength”
“Improving the lives of people in coastal areas is a priority”
“Konkan is a region of unprecedented possibilities”
“Heritage as well as development, this is our path to a developed India”

ಛತ್ರಪತಿ ವೀರ್ ಶಿವಾಜಿ ಮಹಾರಾಜ್ ಕಿ ಜೈ!

ಛತ್ರಪತಿ ವೀರ್ ಸಂಭಾಜಿ ಮಹಾರಾಜ್ ಕಿ ಜೈ!


ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ರಮೇಶ್ ಅವರೇ, ಮುಖ್ಯಮಂತ್ರಿ ಶ್ರೀ ಏಕನಾಥ್ ಅವರೇ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ರಾಜನಾಥ್ ಸಿಂಗ್ ಅವರೇ, ಶ್ರೀ ನಾರಾಯಣ್ ರಾಣೆ ಅವರೇ, ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರೇ, ಶ್ರೀ ಅಜಿತ್ ಪವಾರ್ ಅವರೇ, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರೇ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರೇ,  ನನ್ನ ನೌಕಾ ಪಡೆ ಸ್ನೇಹಿತರೇ ಮತ್ತು ನನ್ನ ಎಲ್ಲಾ ಕುಟುಂಬ ಸದಸ್ಯರೇ!

ಡಿಸೆಂಬರ್ 4 ರ ಈ ಐತಿಹಾಸಿಕ ದಿನ, ಸಿಂಧುದುರ್ಗದ ಈ ಐತಿಹಾಸಿಕ ಕೋಟೆ, ಮಾಲ್ವಣ್‌-ತಾರ್ಕರ್ಲಿಯ ಈ ಸುಂದರವಾದ ತೀರ, ಛತ್ರಪತಿ ವೀರ್ ಶಿವಾಜಿ ಮಹಾರಾಜರ ಸರ್ವವ್ಯಾಪಿ ವೈಭವ, ರಾಜ್‌ಕೋಟ್ ಕೋಟೆಯಲ್ಲಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯ ಅನಾವರಣ ಮತ್ತು ನಿಮ್ಮ ಯುದ್ಧದ ಕೂಗು ಪ್ರತಿಯೊಬ್ಬ ಭಾರತೀಯನಲ್ಲೂ ಅಪಾರ ಉತ್ಸಾಹವನ್ನು ತುಂಬುತ್ತಿದೆ. ಬಹುಶಃ ಈ ಮಾತನ್ನು ನಿಮಗಾಗಿಯೇ ಹೇಳಿದಂತಿದೆ:

चलो नई मिसाल हो, बढ़ो नया कमाल हो,

झुको नही, रुको नही, बढ़े चलो, बढ़े चलो ।

 (ಹೊಸ ಉದಾಹರಣೆಯನ್ನು ಇಟ್ಟುಕೊಂಡು ಮುನ್ನಡೆಯಿರಿ, ಅದ್ಭುತಗಳನ್ನು ಮಾಡುತ್ತಾ ಮುಂದುವರಿಯಿರಿ, ಬಾಗಬೇಡಿ, ನಿಲ್ಲಿಸಬೇಡಿ, ಮುಂದೆ ಸಾಗಿ, ಮುಂದೆ ಸಾಗಿ.)

ʻನೌಕಾಪಡೆ ದಿನʼದಂದು ಭಾರತೀಯ ನೌಕಾಪಡೆ ಕುಟುಂಬದ ಎಲ್ಲ ಸದಸ್ಯರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಈ ದಿನದಂದು, ತಾಯ್ನಾಡಿಗಾಗಿ ಸರ್ವೋಚ್ಚ ತ್ಯಾಗ ಮಾಡಿದ ವೀರರಿಗೆ ನಾವು ನಮಸ್ಕರಿಸುತ್ತೇವೆ.

ಸ್ನೇಹಿತರೇ ,

ಇಂದು, ನೌಕಾಪಡೆಯ ದಿನದಂದು ಸಿಂಧುದುರ್ಗದ ಈ ಯುದ್ಧಭೂಮಿಯಿಂದ, ದೇಶವಾಸಿಗಳನ್ನು ಅಭಿನಂದಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಸಿಂಧುದುರ್ಗದ ಐತಿಹಾಸಿಕ ಕೋಟೆಯನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆ ತುಂಬುತ್ತದೆ. ಯಾವುದೇ ದೇಶಕ್ಕೆ ನೌಕಾ ಶಕ್ತಿ ಎಷ್ಟು ಮುಖ್ಯ ಎಂದು ಛತ್ರಪತಿ ವೀರ್ ಶಿವಾಜಿ ಮಹಾರಾಜ್ ತಿಳಿದಿದ್ದರು. ʻಜಲ್‌ಮೇವ್‌ ಯಾಸ್ಯಾ, ಬಾಲ್‌ಮೇವ್ ತಾಸ್ಯಾ! – ಎಂಬುದು ಅವರ ಘೋಷಣೆಯಾಗಿತ್ತು. ಇದರರ್ಥ, "ಸಮುದ್ರವನ್ನು ನಿಯಂತ್ರಿಸುವವನು ಸರ್ವಶಕ್ತ." ಶಿವಾಜಿ ಪ್ರಬಲ ನೌಕಾಪಡೆಯನ್ನು ನಿರ್ಮಿಸಿದರು. ಅದು ಕನ್ಹೋಜಿ ಆಂಗ್ರೆ ಅವರಿರಲೀ, ಮಾಯಾಜಿ ನಾಯಕ್ ಭಟ್ಕರ್ ಅವರಿರಲೀ, ಹಿರೋಜಿ ಇಂದುಲ್ಕರ್ ಆಗಿರಲಿ, ಈ ಎಲ್ಲಾ ಅನೇಕ ಯೋಧರು ಇಂದಿಗೂ ನಮಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಇಂದು, ನೌಕಾಪಡೆಯ ದಿನದಂದು, ನಾನು ದೇಶದ ಅಂತಹ ಧೈರ್ಯಶಾಲಿ ಯೋಧರಿಗೆ ನಮಸ್ಕರಿಸುತ್ತೇನೆ.

ಸ್ನೇಹಿತರೇ,

ಛತ್ರಪತಿ ವೀರ್ ಶಿವಾಜಿ ಮಹಾರಾಜರಿಂದ ಸ್ಫೂರ್ತಿ ಪಡೆದು ಇಂದು ಭಾರತವು ಗುಲಾಮ ಮನಸ್ಥಿತಿಯನ್ನು ಬಿಟ್ಟು ಮುನ್ನಡೆಯುತ್ತಿದೆ. ಈಗ ಛತ್ರಪತಿ ವೀರ್ ಶಿವಾಜಿ ಮಹಾರಾಜರ ಪರಂಪರೆಯ ಒಂದು ನೋಟವನ್ನು ನಮ್ಮ ನೌಕಾ ಅಧಿಕಾರಿಗಳು ಧರಿಸುವ ಸಮವಸ್ತ್ರದ ʻತೋಳುಬಿರುದುʼ (ಎಪಾಲೆಟ್‌)ಗಳಲ್ಲಿಯೂ ಕಾಣಬಹುದು ಎಂಬ ವಿಚಾರ ನನಗೆ ಸಂತೋಷ ತಂದಿದೆ. ಹೊಸ ತೋಳುಬಿರುದು ಈಗ ನೌಕಾಪಡೆಯ ಚಿಹ್ನೆಯನ್ನು ಹೋಲುತ್ತದೆ.

ನೌಕಾಪಡೆಯ ಧ್ವಜವನ್ನು ಛತ್ರಪತಿ ವೀರ್ ಶಿವಾಜಿ ಮಹಾರಾಜರ ಪರಂಪರೆಯೊಂದಿಗೆ ಜೋಡಿಸುವ ಅವಕಾಶ ಕಳೆದ ವರ್ಷ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ. ಈಗ ನಾವೆಲ್ಲರೂ ಛತ್ರಪತಿ ವೀರ್ ಶಿವಾಜಿ ಮಹಾರಾಜರ ಪ್ರತಿಬಿಂಬವನ್ನು 'ತೋಳುಬಿರುದು'ನಲ್ಲಿಯೂ ನೋಡುತ್ತೇವೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಯ ಭಾವದೊಂದಿಗೆ, ಇಂದು ಮತ್ತೊಂದು ಘೋಷಣೆ ಮಾಡಲು ನನಗೆ ಗೌರವವೆನಿಸುತ್ತಿದೆ. ಭಾರತೀಯ ನೌಕಾಪಡೆಯು ಈಗ ಭಾರತೀಯ ಸಂಪ್ರದಾಯಗಳಿಗೆ ಅನುಗುಣವಾಗಿ ತನ್ನ ಶ್ರೇಣಿಗಳನ್ನು ಹೆಸರಿಸಲಿದೆ. ಸಶಸ್ತ್ರ ಪಡೆಗಳಲ್ಲಿ ನಮ್ಮ ಮಹಿಳೆಯರ ಬಲವನ್ನು ಹೆಚ್ಚಿಸಲು ನಾವು ಒತ್ತು ನೀಡುತ್ತಿದ್ದೇವೆ. ನೌಕಾಪಡೆ ಹಡಗಿನಲ್ಲಿ ದೇಶದ ಮೊದಲ ಮಹಿಳಾ ಕಮಾಂಡಿಂಗ್ ಅಧಿಕಾರಿಯನ್ನು ನೇಮಿಸಿದ್ದಕ್ಕಾಗಿ ನಾನು ನೌಕಾಪಡೆಯನ್ನು ಅಭಿನಂದಿಸಲು ಬಯಸುತ್ತೇನೆ.

 

ಸ್ನೇಹಿತರೇ,

ಇಂದಿನ ಭಾರತವು ತನ್ನದೇ ಆದ ದೊಡ್ಡ ಗುರಿಗಳನ್ನು ಇರಿಸಿಕೊಂಡಿದೆ ಮತ್ತು ಅವುಗಳನ್ನು ಸಾಧಿಸಲು ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ. ಈ ಗುರಿಗಳನ್ನು ಸಾಧಿಸಲು ಭಾರತಕ್ಕೆ ಸಾಕಷ್ಟು ಸಾಮರ್ಥ್ಯವಿದೆ. ಈ ಶಕ್ತಿಯು 140 ಕೋಟಿ ಭಾರತೀಯರ ನಂಬಿಕೆಯಿಂದ ಬಂದಂಥದ್ದಾಗಿದೆ. ಈ ಶಕ್ತಿಯು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ನಿನ್ನೆ ನೀವು ದೇಶದ 4 ರಾಜ್ಯಗಳಲ್ಲಿ ಈ ಶಕ್ತಿಯ ಒಂದು ನೋಟವನ್ನು ನೋಡಿದ್ದೀರಿ. ಜನರ ಸಂಕಲ್ಪಗಳು ಒಗ್ಗೂಡಿದಾಗ, ಜನರ ಭಾವನೆಗಳು ಒಗ್ಗೂಡಿದಾಗ, ಜನರ ಆಕಾಂಕ್ಷೆಗಳು ಒಟ್ಟಿಗೆ ಸೇರಿದಾಗ, ಹಲವಾರು ಸಕಾರಾತ್ಮಕ ಫಲಿತಾಂಶಗಳು ಹೊರಹೊಮ್ಮುತ್ತವೆ ಎಂಬುದನ್ನು ದೇಶವು ನೋಡಿದೆ.

ವಿವಿಧ ರಾಜ್ಯಗಳು ವಿಭಿನ್ನ ಆದ್ಯತೆಗಳನ್ನು ಹೊಂದಿವೆ; ಅವುಗಳ ಅವಶ್ಯಕತೆಗಳು ವಿಭಿನ್ನವಾಗಿವೆ. ಆದರೆ ಎಲ್ಲಾ ರಾಜ್ಯಗಳ ಜನರು ʻಮೊದಲು ರಾಷ್ಟ್ರʼ ಎಂಬ  ಮನೋಭಾವ ಹೊಂದಿದ್ದಾರೆ. ನಾವು ದೇಶಕ್ಕಾಗಿ ಇದ್ದೇವೆ; ದೇಶ ಪ್ರಗತಿ ಸಾಧಿಸಿದರೆ ನಾವೂ ಪ್ರಗತಿ ಹೊಂದುತ್ತೇವೆ ಎಂಬ ಮನೋಭಾವವನ್ನು ಪ್ರತಿಯೊಬ್ಬ ನಾಗರಿಕರೂ ಇಂದು ಹೊಂದಿದ್ದಾರೆ. ಇಂದು, ದೇಶವು ಇತಿಹಾಸದಿಂದ ಸ್ಫೂರ್ತಿ ಪಡೆಯುವಲ್ಲಿ ಮತ್ತು ಉಜ್ವಲ ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವಲ್ಲಿ ನಿರತವಾಗಿದೆ. ನಕಾರಾತ್ಮಕ ರಾಜಕೀಯವನ್ನು ಸೋಲಿಸುವ ಮೂಲಕ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಸಾಗಲು ಸಂಕಲ್ಪ ತೊಟ್ಟಿದ್ದಾರೆ. ಈ ಸಂಕಲ್ಪವು ನಮ್ಮನ್ನು ʻಅಭಿವೃದ್ಧಿ ಹೊಂದಿದ ಭಾರತʼದತ್ತ ಕೊಂಡೊಯ್ಯುತ್ತದೆ. ಈ ಸಂಕಲ್ಪವು ದೇಶದ ಹೆಮ್ಮೆ ಮತ್ತು ವೈಭವವನ್ನು ಮರಳಿ ತರುತ್ತದೆ. ಇಂತಹ ವೈಭವಕ್ಕೆ ಸದಾ ನಮ್ಮ ದೇಶವು ಅರ್ಹವಾಗಿದೆ.

ಸ್ನೇಹಿತರೇ,

ಭಾರತದ ಇತಿಹಾಸವು ಕೇವಲ ಒಂದು ಸಾವಿರ ವರ್ಷಗಳ ಗುಲಾಮಗಿರಿಯ ಇತಿಹಾಸವಲ್ಲ; ಇದು ಕೇವಲ ಸೋಲು ಮತ್ತು ಹತಾಶೆಯ ಇತಿಹಾಸವಲ್ಲ. ಭಾರತದ ಇತಿಹಾಸವು ವಿಜಯದ ಇತಿಹಾಸವಾಗಿದೆ. ಭಾರತದ ಇತಿಹಾಸವು ಶೌರ್ಯದ ಇತಿಹಾಸವಾಗಿದೆ. ಭಾರತದ ಇತಿಹಾಸವು ಜ್ಞಾನ ಮತ್ತು ವಿಜ್ಞಾನದ ಇತಿಹಾಸವಾಗಿದೆ. ಭಾರತದ ಇತಿಹಾಸವು ಕಲೆ ಮತ್ತು ಸೃಜನಶೀಲ ಕೌಶಲ್ಯಗಳ ಇತಿಹಾಸವಾಗಿದೆ. ಭಾರತದ ಇತಿಹಾಸವು ನಮ್ಮ ನೌಕಾ ಶಕ್ತಿಯ ಇತಿಹಾಸವಾಗಿದೆ. ನೂರಾರು ವರ್ಷಗಳ ಹಿಂದೆ, ಇಂದಿನಂತೆ ಯಾವುದೇ ತಂತ್ರಜ್ಞಾನ ಅಥವಾ ಸಂಪನ್ಮೂಲಗಳು ಲಭ್ಯವಿಲ್ಲದಿದ್ದಾಗ, ಆ ಸಮಯದಲ್ಲಿ ನಾವು ಸಮುದ್ರವನ್ನು ಮರಳಿ ಪಡೆಯುವ ಮೂಲಕ ಸಿಂಧುದುರ್ಗದಂತಹ ಅನೇಕ ಕೋಟೆಗಳನ್ನು ನಿರ್ಮಿಸಿದ್ದೇವೆ.

ಭಾರತದ ಕಡಲ ಸಾಮರ್ಥ್ಯವು ಸಾವಿರಾರು ವರ್ಷಗಳಷ್ಟು ಹಳೆಯದು. ಗುಜರಾತ್‌ನ ಲೋಥಾಲ್‌ನಲ್ಲಿ ಕಂಡುಬರುವ ಸಿಂಧೂ ಕಣಿವೆ ನಾಗರೀಕತೆಯ ಬಂದರು ಇಂದು ನಮ್ಮ ಶ್ರೇಷ್ಠ ಪರಂಪರೆಯಾಗಿದೆ. ಒಂದು ಕಾಲದಲ್ಲಿ, 80ಕ್ಕೂ ಹೆಚ್ಚು ದೇಶಗಳ ಹಡಗುಗಳು ಸೂರತ್ ಬಂದರಿನಲ್ಲಿ ಲಂಗರು ಹಾಕುತ್ತಿದ್ದವು. ಭಾರತದ ಈ ಕಡಲ ಶಕ್ತಿಯ ಆಧಾರದ ಮೇಲೆ, ಚೋಳ ಸಾಮ್ರಾಜ್ಯವು ಆಗ್ನೇಯ ಏಷ್ಯಾದ ಅನೇಕ ದೇಶಗಳಿಗೆ ತನ್ನ ವ್ಯಾಪಾರವನ್ನು ವಿಸ್ತರಿಸಿತು.
ಆದ್ದರಿಂದ, ವಿದೇಶಿ ಶಕ್ತಿಗಳು ಭಾರತದ ಮೇಲೆ ದಾಳಿ ಮಾಡಿದಾಗ, ಅವರು ಮೊದಲು ನಮ್ಮ ದೇಶದ ಈ ನಿರ್ದಿಷ್ಟ ಶಕ್ತಿಯನ್ನು ಗುರಿಯಾಗಿಸಿಕೊಂಡರು. ಭಾರತವು ದೋಣಿಗಳು ಮತ್ತು ಹಡಗುಗಳನ್ನು ತಯಾರಿಸಲು ಪ್ರಸಿದ್ಧವಾಗಿತ್ತು. ಈ ದಾಳಿಯು ಈ ಕಲೆ, ಈ ಕೌಶಲ್ಯ ಮತ್ತು ಎಲ್ಲವನ್ನೂ ಕೊನೆಗೊಳಿಸಿತ್ತು. ನಾವು ಸಮುದ್ರದ ಮೇಲಿನ ನಮ್ಮ ನಿಯಂತ್ರಣವನ್ನು ಕಳೆದುಕೊಂಡಾಗ, ನಾವು ನಮ್ಮ ಕಾರ್ಯತಂತ್ರ-ಆರ್ಥಿಕ ಶಕ್ತಿಯನ್ನು ಸಹ ಕಳೆದುಕೊಂಡೆವು.

ಆದ್ದರಿಂದ, ಇಂದು ಭಾರತವು ಅಭಿವೃದ್ಧಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ, ನಾವು ನಮ್ಮ ಗತ ವೈಭವವನ್ನು ಮರಳಿ ಪಡೆಯಬೇಕಾಗಿದೆ. ಅದಕ್ಕಾಗಿಯೇ ಇಂದು ನಮ್ಮ ಸರ್ಕಾರವೂ ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರದತ್ತ ಗಮನ ಹರಿಸಿ ಕೆಲಸ ಮಾಡುತ್ತಿದೆ. ಇಂದು ಭಾರತವು ʻನೀಲಿ ಆರ್ಥಿಕತೆʼಗೆ ಅಭೂತಪೂರ್ವ ಉತ್ತೇಜನ ನೀಡುತ್ತಿದೆ. ಇಂದು ಭಾರತವು 'ಸಾಗರಮಾಲಾ' ಅಡಿಯಲ್ಲಿ ಬಂದರು ಆಧಾರಿತ ಅಭಿವೃದ್ಧಿಯಲ್ಲಿ ತೊಡಗಿದೆ. ಇಂದು, 'ಕಡಲ ದೃಷ್ಟಿಕೋನ' ಅಡಿಯಲ್ಲಿ, ಭಾರತವು ತನ್ನ ಸಾಗರಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ವೇಗವಾಗಿ ಸಾಗುತ್ತಿದೆ. ವ್ಯಾಪಾರಿ ಹಡಗು ಸಾಗಣೆಯನ್ನು ಉತ್ತೇಜಿಸಲು ಸರ್ಕಾರ ಹೊಸ ನಿಯಮಗಳನ್ನು ರೂಪಿಸಿದೆ. ಸರ್ಕಾರದ ಪ್ರಯತ್ನಗಳಿಂದಾಗಿ, ಕಳೆದ 9 ವರ್ಷಗಳಲ್ಲಿ ಭಾರತದಲ್ಲಿ ನಾವಿಕರ ಸಂಖ್ಯೆಯೂ ಶೇಕಡಾ 140 ಕ್ಕಿಂತ ಹೆಚ್ಚಾಗಿದೆ.

 

ಸ್ನೇಹಿತರೇ,

ಇದು ʻಭಾರತʼದ ಇತಿಹಾಸದ ಮಹತ್ವದ ಅವಧಿಯಾಗಿದ್ದು, ಇದು ಕೇವಲ 5-10 ವರ್ಷಗಳಿಗೆ ಮಾತ್ರವಲ್ಲ, ಮುಂಬರುವ ಹಲವಾರು ಶತಮಾನಗಳಿಗೆ ಭವಿಷ್ಯವನ್ನು ಬರೆಯಲಿದೆ. 10 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಭಾರತವು ವಿಶ್ವದ 10ನೇ ಆರ್ಥಿಕ ಶಕ್ತಿಯಿಂದ 5ನೇ ಸ್ಥಾನಕ್ಕೆ ಏರಿದೆ. ಮತ್ತು ಈಗ ಭಾರತವು ಮೂರನೇ ಆರ್ಥಿಕ ಶಕ್ತಿಯಾಗುವತ್ತ ವೇಗವಾಗಿ ಸಾಗುತ್ತಿದೆ.

ಇಂದು ದೇಶವು ನಂಬಿಕೆ ಮತ್ತು ಆತ್ಮವಿಶ್ವಾಸದಿಂದ ತುಂಬಿದೆ. ಇಂದು ಜಗತ್ತು ಭಾರತದಲ್ಲಿ ಜಾಗತಿಕ ಒಬ್ಬ ಮಿತ್ರನ ಉದಯವನ್ನು ನೋಡುತ್ತಿದೆ. ಇಂದು, ಅದು ಬಾಹ್ಯಾಕಾಶವಾಗಿರಲಿ ಅಥವಾ ಸಮುದ್ರವಾಗಿರಲಿ, ಜಗತ್ತು ಎಲ್ಲೆಡೆ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಇಂದು ಇಡೀ ಜಗತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಬಗ್ಗೆ ಮಾತನಾಡುತ್ತಿದೆ. ಈ ಹಿಂದೆ ನಾವು ಕಳೆದುಕೊಂಡಿದ್ದ ʻಮಸಾಲೆ ಮಾರ್ಗʼ ಈಗ ಮತ್ತೆ ಭಾರತದ ಸಮೃದ್ಧಿಗೆ ಬಲವಾದ ಅಡಿಪಾಯವಾಗಲಿದೆ. ಇಂದು 'ಮೇಡ್ ಇನ್ ಇಂಡಿಯಾ' ವಿಶ್ವದಾದ್ಯಂತ ಚರ್ಚೆಯಾಗುತ್ತಿದೆ. ʻತೇಜಸ್ ವಿಮಾನʼ ಅಥವಾ ʻಕಿಸಾನ್ ಡ್ರೋನ್ʼ, ʻಯುಪಿಐʼ ವ್ಯವಸ್ಥೆ ಅಥವಾ ʻಚಂದ್ರಯಾನ-3ʼ… ಹೀಗೆ 'ಮೇಡ್ ಇನ್ ಇಂಡಿಯಾ' ಎಲ್ಲೆಡೆ ಮತ್ತು ಪ್ರತಿಯೊಂದು ವಲಯದಲ್ಲೂ ವ್ಯಾಪಿಸುತ್ತಿದೆ. ಇಂದು, ನಮ್ಮ ಸೈನ್ಯದ ಹೆಚ್ಚಿನ ಅಗತ್ಯಗಳನ್ನು 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರಗಳಿಂದ ಪೂರೈಸಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಸಾರಿಗೆ ವಿಮಾನಗಳನ್ನು ತಯಾರಿಸಲಾಗುತ್ತಿದೆ. ಕಳೆದ ವರ್ಷ, ನಾನು ಸ್ವದೇಶಿ ವಿಮಾನವಾಹಕ ನೌಕೆ ʻಐಎನ್ಎಸ್ ವಿಕ್ರಾಂತ್ʼ ಅನ್ನು ಕೊಚ್ಚಿಯಲ್ಲಿ ನೌಕಾಪಡೆ ಸೇವೆಗೆ ಸಮರ್ಪಿಸಿದೆ. ʻಐಎನ್ಎಸ್ ವಿಕ್ರಾಂತ್ʼ ಸಹ  'ಮೇಕ್ ಇನ್ ಇಂಡಿಯಾ' ಮತ್ತು ಆತ್ಮನಿರ್ಭರ ಭಾರತಕ್ಕೆ ಬಲವಾದ ಉದಾಹರಣೆಯಾಗಿದೆ. ಇಂದು ಭಾರತವು ಅಂತಹ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೆಲವೇ ದೇಶಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

ಇತ್ತೀಚಿನ ಹಲವು ವರ್ಷಗಳಲ್ಲಿ ನಾವು ಹಿಂದಿನ ಸರ್ಕಾರಗಳ ಮತ್ತೊಂದು ಹಳೆಯ ಚಿಂತನೆಯನ್ನು ಬದಲಾಯಿಸಿದ್ದೇವೆ. ಹಿಂದಿನ ಸರ್ಕಾರಗಳು ಗಡಿ ಪ್ರದೇಶಗಳು ಮತ್ತು ಸಮುದ್ರ ತೀರದ ಗ್ರಾಮಗಳನ್ನು ಕೊನೆಯ ಗ್ರಾಮಗಳು ಎಂದು ಪರಿಗಣಿಸಿದ್ದವು. ನಮ್ಮ ರಕ್ಷಣಾ ಸಚಿವರು ಸಹ ಅದನ್ನು ಉಲ್ಲೇಖಿಸಿದ್ದಾರೆ. ಈ ಚಿಂತನೆಯಿಂದಾಗಿ, ನಮ್ಮ ಕರಾವಳಿ ಪ್ರದೇಶಗಳು ಸಹ ಅಭಿವೃದ್ಧಿಯಿಂದ ವಂಚಿತವಾಗಿವೆ. ಮೂಲಭೂತ ಸೌಕರ್ಯಗಳ ಕೊರತೆ ಇತ್ತು. ಇಂದು, ಕರಾವಳಿಯಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬದ ಜೀವನವನ್ನು ಸುಧಾರಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ.

2019ರಲ್ಲಿ ಮೊದಲ ಬಾರಿಗೆ ಮೀನುಗಾರಿಕೆ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯವನ್ನು ರಚಿಸಿದ್ದು ನಮ್ಮ ಸರ್ಕಾರ. ಮೀನುಗಾರಿಕೆ ಕ್ಷೇತ್ರದಲ್ಲಿ ನಾವು ಸುಮಾರು 40 ಸಾವಿರ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದೇವೆ. ಇದರ ಪರಿಣಾಮವಾಗಿ, ಭಾರತದಲ್ಲಿ ಮೀನು ಉತ್ಪಾದನೆಯು 2014ರಿಂದ ಶೇಕಡಾ 80 ಕ್ಕಿಂತ ಹೆಚ್ಚಾಗಿದೆ. ಭಾರತದಿಂದ ಮೀನು ರಫ್ತು ಕೂಡ ಶೇಕಡಾ 110 ಕ್ಕಿಂತ ಹೆಚ್ಚಾಗಿದೆ. ಸರ್ಕಾರವು ತನ್ನ ಮೀನುಗಾರರಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ನಮ್ಮ ಸರ್ಕಾರವು ಮೀನುಗಾರರಿಗೆ ವಿಮಾ ರಕ್ಷಣೆಯನ್ನು 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ.

ದೇಶದಲ್ಲಿ ಮೊದಲ ಬಾರಿಗೆ ಮೀನುಗಾರರು ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳ ಪ್ರಯೋಜನವನ್ನು ಪಡೆದಿದ್ದಾರೆ. ಮೀನುಗಾರಿಕೆ ಕ್ಷೇತ್ರದಲ್ಲಿ ಮೌಲ್ಯ ಸರಪಳಿ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಇಂದು, ʻಸಾಗರಮಾಲಾʼ ಯೋಜನೆಯ ಮೂಲಕ, ಸಮುದ್ರ ತೀರದಾದ್ಯಂತ ಆಧುನಿಕ ಸಂಪರ್ಕಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ, ಇದರಿಂದ ಕರಾವಳಿ ಪ್ರದೇಶಗಳಲ್ಲಿ ಹೊಸ ಕೈಗಾರಿಕೆಗಳು ಮತ್ತು ಹೊಸ ವ್ಯವಹಾರಗಳು ಹುಟ್ಟಿಕೊಳ್ಳುತ್ತಿವೆ.

ಅದು ಮೀನು ಅಥವಾ ಇತರ ಯಾವುದೇ ಸಮುದ್ರಾಹಾರವಾಗಿರಲಿ, ಇದು ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಆದ್ದರಿಂದ, ನಾವು ಸಮುದ್ರಾಹಾರ ಸಂಸ್ಕರಣೆಗೆ ಸಂಬಂಧಿಸಿದ ಉದ್ಯಮಕ್ಕೆ ಒತ್ತು ನೀಡುತ್ತಿದ್ದೇವೆ, ಇದರಿಂದ ಮೀನುಗಾರರ ಆದಾಯವನ್ನು ಹೆಚ್ಚಿಸಬಹುದು. ಮೀನುಗಾರರು ತಮ್ಮ ದೋಣಿಗಳನ್ನು ಆಧುನೀಕರಿಸಲು ಸಹ ಸಹಾಯ ನೀಡಲಾಗುತ್ತಿದೆ, ಇದರಿಂದ ಅವರು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಬಹುದು.

ಸ್ನೇಹಿತರೇ,

ಕೊಂಕಣದ ಈ ಪ್ರದೇಶವು ಅದ್ಭುತ ಸಾಧ್ಯತೆಗಳ ಪ್ರದೇಶವಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಸಿಂಧುದುರ್ಗ, ರತ್ನಗಿರಿ, ಅಲಿಬಾಗ್, ಪರ್ಭಾನಿ ಮತ್ತು ಧಾರಾಶಿವ್‌ನಲ್ಲಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಚಿಪ್ಪಿ ವಿಮಾನ ನಿಲ್ದಾಣ ಈಗ ಕಾರ್ಯನಿರ್ವಹಿಸುತ್ತಿದೆ. ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್‌ಗೆ ಮಂಗಾಂವ್ ನೊಂದಿಗೆ ಸಂಪರ್ಕ ಕಲ್ಪಿಸಲಿದೆ.

ಇಲ್ಲಿನ ಗೋಡಂಬಿ ಬೆಳೆಗಾರರಿಗಾಗಿ ವಿಶೇಷ ಯೋಜನೆಗಳನ್ನು ಸಹ ರೂಪಿಸಲಾಗುತ್ತಿದೆ. ಸಮುದ್ರ ತೀರದಲ್ಲಿರುವ ವಸತಿ ಪ್ರದೇಶಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ, ʻಮ್ಯಾಂಗ್ರೋವ್ʼಗಳ ಅಡಿಯಲ್ಲಿ ಪ್ರದೇಶವನ್ನು ವಿಸ್ತರಿಸಲು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ʻಮಿಷ್ಠಿʼ(MISHTI) ಯೋಜನೆಯನ್ನು ರೂಪಿಸಿದೆ. ಇದರ ಅಡಿಯಲ್ಲಿ, ಮಾಲ್ವನ್, ಆಚಾರಾ-ರತ್ನಗಿರಿ, ದಿಯೋಗಢ-ವಿಜಯದುರ್ಗ ಸೇರಿದಂತೆ ಮಹಾರಾಷ್ಟ್ರದ ಅನೇಕ ಸ್ಥಳಗಳನ್ನು ಮ್ಯಾಂಗ್ರೋವ್ ನಿರ್ವಹಣೆಗಾಗಿ ಆಯ್ಕೆ ಮಾಡಲಾಗಿದೆ.

ಸ್ನೇಹಿತರೇ,

ಪರಂಪರೆ ಮತ್ತು ಅಭಿವೃದ್ಧಿ - ಇದು ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಮಾರ್ಗವಾಗಿದೆ. ಆದ್ದರಿಂದ, ಇಂದು ಈ ಪ್ರದೇಶದಲ್ಲಿಯೂ ನಮ್ಮ ಭವ್ಯ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಛತ್ರಪತಿ ವೀರ್ ಶಿವಾಜಿ ಮಹಾರಾಜರ ಕಾಲದಲ್ಲಿ ನಿರ್ಮಿಸಲಾದ ಕೋಟೆಗಳನ್ನು ಸಂರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಕೊಂಕಣ ಸೇರಿದಂತೆ ಇಡೀ ಮಹಾರಾಷ್ಟ್ರದಲ್ಲಿ ಈ ಪರಂಪರೆಗಳ ಸಂರಕ್ಷಣೆಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ನಮ್ಮ ಈ ಭವ್ಯ ಪರಂಪರೆಯನ್ನು ನೋಡಲು ದೇಶದಾದ್ಯಂತದ ಜನರು ಬರುವಂತೆ ಖಾತರಿಪಡಿಸುವುದು ನಮ್ಮ ಪ್ರಯತ್ನವಾಗಿದೆ. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸುತ್ತದೆ ಮತ್ತು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ.

 

ಸ್ನೇಹಿತರೇ,

ಇಲ್ಲಿಂದ ನಾವು ಈಗ ಅಭಿವೃದ್ಧಿ ಹೊಂದಿದ ಭಾರತದತ್ತ ಪ್ರಯಾಣಕ್ಕೆ ವೇಗ ನೀಡಬೇಕಾಗಿದೆ; ಆ ಅಭಿವೃದ್ಧಿ ಹೊಂದಿದ ಭಾರತವು, ಅಂದರೆ ನಮ್ಮ ದೇಶವು ಸುರಕ್ಷಿತ, ಸಮೃದ್ಧ ಮತ್ತು ಶಕ್ತಿಯುತವಾಗಿರುತ್ತದೆ. ಸ್ನೇಹಿತರೇ, ಸಾಮಾನ್ಯವಾಗಿ ಸೇನಾಪಡೆ ದಿನ, ವಾಯುಪಡೆ ದಿನ, ನೌಕಾಪಡೆ ದಿನ - ಈ ಸಂದರ್ಭಗಳನ್ನು ದೆಹಲಿಯಲ್ಲಿ ಆಚರಿಸಲಾಗುತ್ತಿತ್ತು. ದೆಹಲಿಯ ಸುತ್ತಮುತ್ತಲಿನ ಜನರು ಅದರ ಭಾಗವಾಗುತ್ತಿದ್ದರು ಮತ್ತು ಹೆಚ್ಚಿನ ಕಾರ್ಯಕ್ರಮಗಳು ಈ ಪಡೆಗಳ ಮುಖ್ಯಸ್ಥರ ಮನೆಗಳ ಹುಲ್ಲುಹಾಸಿನಲ್ಲಿ ನಡೆಯುತ್ತಿದ್ದವು. ನಾನು ಆ ಸಂಪ್ರದಾಯವನ್ನು ಬದಲಾಯಿಸಿದ್ದೇನೆ. ಅದು ಸೇನಾಪಡೆ ದಿನವಾಗಲಿ, ನೌಕಾಪಡೆ ದಿನವಾಗಲಿ ಅಥವಾ ವಾಯುಪಡೆಯ ದಿನವಾಗಲಿ, ಅದನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸುವುದನ್ನು ಖಾತರಿಪಡಿಸಲು ನಾನು ಪ್ರಯತ್ನಿಸಿದ್ದೇನೆ. ಇದರ ಭಾಗವಾಗಿ, ಈ ಬಾರಿಯ ನೌಕಾಪಡೆ ದಿನವನ್ನು ನೌಕಾಪಡೆಯ ಉಗಮ ಸ್ಥಾನವಾದ ಈ ಪವಿತ್ರ ಭೂಮಿಯಲ್ಲಿ ಆಚರಿಸಲಾಗುತ್ತಿದೆ.

ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಸಾವಿರಾರು ಜನರು ಇಲ್ಲಿಗೆ ಬರುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ನನಗೆ ತಿಳಿಸಲಾಯಿತು. ಈಗ ಈ ನೆಲದ ಕಡೆಗೆ ದೇಶದ ಜನರ ಆಕರ್ಷಣೆ ಹೆಚ್ಚಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಸಿಂಧು ಕೋಟೆಯ ಕಡೆಗೆ ತೀರ್ಥಯಾತ್ರೆಯ ಮನೋಭಾವವು ಮೂಡುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಯುದ್ಧ ಕ್ಷೇತ್ರದಲ್ಲಿ ಎಂತಹ ದೊಡ್ಡ ಕೊಡುಗೆ ನೀಡಿದ್ದಾರೆ. ಇಂದು ನಾವು ಹೆಮ್ಮೆಪಡುವ ನೌಕಾಪಡೆ ಮೂಲ ಛತ್ರಪತಿ ಶಿವಾಜಿ ಮಹಾರಾಜ್. ಎಲ್ಲಾ ದೇಶವಾಸಿಗಳು ಈ ಬಗ್ಗೆ ಹೆಮ್ಮೆ ಪಡುತ್ತಾರೆ.

ಆದ್ದರಿಂದ, ಈ ಕಾರ್ಯಕ್ರಮಕ್ಕೆ ಅಂತಹ ಸ್ಥಳವನ್ನು ಆಯ್ಕೆ ಮಾಡಿದ್ದಕ್ಕಾಗಿ ನೌಕಾಪಡೆಯ ನನ್ನ ಸ್ನೇಹಿತರು ಮತ್ತು ನಮ್ಮ ರಕ್ಷಣಾ ಸಚಿವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದು ಕಷ್ಟ ಎಂದು ನನಗೆ ತಿಳಿದಿದೆ. ಆದರೆ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವುದರಿಂದ ಮತ್ತು ವಿದೇಶಗಳಿಂದ ಅನೇಕ ಅತಿಥಿಗಳು ಇಂದು ಇಲ್ಲಿಗೆ ಬಂದಿರುವುದರಿಂದ ಈ ಸ್ಥಳವು ಪ್ರಯೋಜನ ಪಡೆಯುತ್ತದೆ. ನೌಕಾಪಡೆಯ ಪರಿಕಲ್ಪನೆಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಅನೇಕ ಶತಮಾನಗಳ ಹಿಂದೆ ಪ್ರಾರಂಭಿಸಿದ್ದರು ಎಂಬುದು ಸೇರಿದಂತೆ ಬಹಳಷ್ಟು ವಿಷಯಗಳು ಅವರಿಗೆ ಹೊಸದಾಗಿ, ಕೌತುಕಮಯವಾಗಿ ಕಾಣಬಹುದು.

ʻಜಿ-20ʼ ಶೃಂಗಸಭೆಯ ಸಮಯದಲ್ಲಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ತಾಯಿ ಎಂಬ ಅಂಶದ ಕಡೆಗೆ ವಿಶ್ವದ ಗಮನವನ್ನು ಸೆಳೆಯಲಾಗಿದೆ ಎಂದು ಇಂದು ನಾನು ದೃಢವಾಗಿ ನಂಬುತ್ತೇನೆ. ಅಂತೆಯೇ, ಭಾರತವು ನೌಕಾಪಡೆಯ ಈ ಪರಿಕಲ್ಪನೆಗೆ ಜನ್ಮ ನೀಡಿದೆ, ಅದಕ್ಕೆ ಶಕ್ತಿಯನ್ನು ನೀಡಿದೆ ಮತ್ತು ಇಂದು ಜಗತ್ತು ಅದನ್ನು ಒಪ್ಪಿಕೊಂಡಿದೆ. ಆದ್ದರಿಂದ, ಇಂದಿನ ಸಂದರ್ಭವು ವಿಶ್ವ ವೇದಿಕೆಯಲ್ಲಿ ಹೊಸ ಚಿಂತನೆಯನ್ನು ಸೃಷ್ಟಿಸಲಿದೆ.

ನೌಕಾಪಡೆ ದಿನದಂದು ಮತ್ತೊಮ್ಮೆ, ನಾನು ದೇಶದ ಎಲ್ಲಾ ಯೋಧರಿಗೆ, ಅವರ ಕುಟುಂಬಗಳಿಗೆ ಮತ್ತು ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ನೀವೆಲ್ಲರೂ ನಿಮ್ಮೆಲ್ಲಾ ಶಕ್ತಿಯನ್ನು ಬಳಸಿ ಒಮ್ಮೆ ಗಟ್ಟಿಯಾಗಿ ನನ್ನೊಂದಿಗೆ ಹೇಳಿ:-

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi becomes first world leader to cross 100 million Instagram followers

Media Coverage

PM Modi becomes first world leader to cross 100 million Instagram followers
NM on the go

Nm on the go

Always be the first to hear from the PM. Get the App Now!
...
Prime Minister Condoles the Passing of Shri Maroof Raza Ji
February 26, 2026

Prime Minister Narendra Modi has expressed grief over the passing of Shri Maroof Raza Ji, honoring his legacy in the fields of journalism.

The Prime Minister stated that Shri Maroof Raza Ji made a rich contribution to the world of journalism. He noted that Shri Raza enriched public discourse through his nuanced understanding of defence, national security, and strategic affairs.

Expressing his sorrow, the Prime Minister said he is pained by his passing and extended his condolences to his family and friends.
The Prime Minister shared on X:

“Shri Maroof Raza Ji made a rich contribution to the world of journalism. He enriched public discourse with his nuanced understanding of defence, national security as well as strategic affairs. Pained by his passing. Condolences to his family and friends”