" ಭಾರತದ ವೈಜ್ಞಾನಿಕ ಸಮುದಾಯವು ನಮ್ಮ ದೇಶಕ್ಕೆ ಅರ್ಹವಾದ ಸ್ಥಳವನ್ನು ಖಾತ್ರಿಪಡಿಸುತ್ತದೆ "
" 21 ನೇ ಶತಮಾನದ ಭಾರತದಲ್ಲಿ ದತ್ತಾಂಶ ಮತ್ತು ತಂತ್ರಜ್ಞಾನದ ಹೇರಳ ಲಭ್ಯತೆಯು ವಿಜ್ಞಾನಕ್ಕೆ ಸಹಾಯ ಮಾಡುತ್ತದೆ "
" ನಾವು ವಿಜ್ಞಾನದ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸಬೇಕು ಮಾತ್ರವಲ್ಲ, ಮಹಿಳೆಯರ ಕೊಡುಗೆಯಿಂದ ವಿಜ್ಞಾನವನ್ನು ಸಶಕ್ತಗೊಳಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ "
" ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ರಾಷ್ಟ್ರದಲ್ಲಿ ಮಹಿಳೆಯರು ಮತ್ತು ವಿಜ್ಞಾನ ಎರಡೂ ಪ್ರಗತಿ ಸಾಧಿಸುತ್ತಿವೆ ಎಂಬುದಕ್ಕೆ ಪುರಾವೆಯಾಗಿದೆ "
" ವಿಜ್ಞಾನದ ಪ್ರಯತ್ನಗಳು ಪ್ರಯೋಗಾಲಯದಿಂದ ಹೊರಬಂದು ಭೂಮಿಯನ್ನು ತಲುಪಿದಾಗ ಮಾತ್ರ ದೊಡ್ಡ ಸಾಧನೆಗಳಾಗಿ ಬದಲಾಗಬಹುದು ಮತ್ತು ಅವುಗಳ ಪರಿಣಾಮವು ಜಾಗತಿಕದಿಂದ ತಳಮಟ್ಟದವರೆಗೆ ತಲುಪಿದಾಗ, ಅದರ ವ್ಯಾಪ್ತಿಯು ನಿಯತಕಾಲಿಕದಿಂದ ಭೂಮಿ, ದೈನಂದಿನ ಜೀವನಕ್ಕೆ ಮತ್ತು ಸಂಶೋಧನೆಯಿಂದ ನಿಜ ಜೀವನಕ್ಕೆ ಬದಲಾವಣೆಯು ಗೋಚರಿಸಿದಾಗ ಮಾತ್ರ"
"ದೇಶವು ಭವಿಷ್ಯದ ಕ್ಷೇತ್ರಗಳಲ್ಲಿ ಉಪಕ್ರಮವನ್ನು ತೆಗೆದುಕೊಂಡರೆ ನಾವು ಉದ್ಯಮ 4.0 ಅನ್ನು ಮುನ್ನಡೆಸುವ ಸ್ಥಾನದಲ್ಲಿರುತ್ತೇವೆ,"

ನಮಸ್ಕಾರ!

'ಭಾರತೀಯ ವಿಜ್ಞಾನ ಕಾಂಗ್ರೆಸ್' ಆಯೋಜಿಸಿದ್ದಕ್ಕಾಗಿ ನಿಮಗೆಲ್ಲರಿಗೂ ಅಭಿನಂದನೆಗಳು. ಮುಂದಿನ 25 ವರ್ಷಗಳಲ್ಲಿ ಭಾರತ ಉತ್ತುಂಗಕ್ಕೇರುವಾಗ  ಭಾರತದ ವೈಜ್ಞಾನಿಕ ಶಕ್ತಿಯ ಪಾತ್ರ ಬಹಳ ಮಹತ್ವದ್ದಾಗಿದೆ. ದೇಶಕ್ಕೆ ಸೇವೆ ಸಲ್ಲಿಸುವ ಸಂಕಲ್ಪವನ್ನು ವಿಜ್ಞಾನದ ಉತ್ಸಾಹದೊಂದಿಗೆ ಸಂಯೋಜಿಸಿದಾಗ ಅಭೂತಪೂರ್ವ ಫಲಿತಾಂಶಗಳು ಅದನ್ನು ಅನುಸರಿಸಿ ಬರುತ್ತವೆ. ದೇಶದ ವೈಜ್ಞಾನಿಕ ಸಮುದಾಯವು 21 ನೇ ಶತಮಾನದಲ್ಲಿ ಭಾರತಕ್ಕೆ ಅರ್ಹವಾದ ಸ್ಥಾನವನ್ನು ಗಳಿಸಲು ಸಹಾಯ ಮಾಡುತ್ತದೆ ಎಂಬ ಬಗ್ಗೆ  ನನಗೆ ವಿಶ್ವಾಸವಿದೆ. ಈ ನಂಬಿಕೆಯ ಕಾರಣವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ವೀಕ್ಷಣೆ ಅಥವಾ ನಿಕಟ ನಿಗಾ  ವಿಜ್ಞಾನದ ಮೂಲ ಅಡಿಪಾಯ ಎಂದು ನಿಮಗೆಲ್ಲರಿಗೂ ತಿಳಿದಿದೆ. ವಿಜ್ಞಾನಿಗಳು ವೀಕ್ಷಣೆಯ ಮೂಲಕ ಮಾದರಿಗಳನ್ನು ಅನುಸರಿಸುತ್ತಾರೆ ಮತ್ತು ಆ ಮಾದರಿಗಳನ್ನು ವಿಶ್ಲೇಷಿಸಿದ ನಂತರ ಅವರು ತೀರ್ಮಾನಕ್ಕೆ ಬರುತ್ತಾರೆ.

ವಿಜ್ಞಾನಿಗಳಿಗೆ ಪ್ರತಿ ಹಂತದಲ್ಲೂ ದತ್ತಾಂಶವನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಬಹಳ ಮುಖ್ಯ. ಇಂದಿನ 21ನೇ ಶತಮಾನದ ಭಾರತದಲ್ಲಿ ನಮಗೆ ಎರಡು ವಿಷಯಗಳು ಹೇರಳವಾಗಿ ಲಭ್ಯವಾಗುತ್ತವೆ. ಮೊದಲನೆಯದ್ದು-ದತ್ತಾಂಶ  ಮತ್ತು ಎರಡನೇಯದ್ದು - ತಂತ್ರಜ್ಞಾನ. ಈ ಎರಡೂ ಅಂಶಗಳು ಭಾರತದ ವಿಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿವೆ.. ದತ್ತಾಂಶ ವಿಶ್ಲೇಷಣೆ  ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಇದು ಮಾಹಿತಿಯನ್ನು ಒಳನೋಟವಾಗಿ ಪರಿವರ್ತಿಸಲು  ಮತ್ತು ವಿಶ್ಲೇಷಣೆಯನ್ನು ಕ್ರಿಯಾಶೀಲ ಜ್ಞಾನವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಜ್ಞಾನವಾಗಲಿ ಅಥವಾ ಆಧುನಿಕ ತಂತ್ರಜ್ಞಾನವಾಗಲಿ ಇವೆರಡೂ ವೈಜ್ಞಾನಿಕ ಆವಿಷ್ಕಾರಕ್ಕೆ ಸಹಕಾರಿ. ಆದ್ದರಿಂದ, ನಮ್ಮ ವೈಜ್ಞಾನಿಕ ಪ್ರಕ್ರಿಯೆಯನ್ನು ಬಲಪಡಿಸಲು ನಾವು ವಿಭಿನ್ನ ತಂತ್ರಗಳ ಬಗ್ಗೆ  ಸಂಶೋಧನಾ ಅಥವಾ ತನಿಖಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ಸ್ನೇಹಿತರೇ,

ಇಂದಿನ ಭಾರತವು ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವುದರ ಫಲಿತಾಂಶಗಳನ್ನೂ ನಾವು ನೋಡುತ್ತಿದ್ದೇವೆ. ಭಾರತವು ವಿಜ್ಞಾನ ಕ್ಷೇತ್ರದಲ್ಲಿ ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗುತ್ತಿದೆ. 130 ದೇಶಗಳಲ್ಲಿ, ನಾವು 2015 ರವರೆಗೆ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್‌ನಲ್ಲಿ 81 ನೇ ಸ್ಥಾನದಲ್ಲಿದ್ದೆವು. ಆದರೆ 2022 ರಲ್ಲಿ ನಾವು 40 ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಇಂದು ಭಾರತವು ಪಿಎಚ್‌ಡಿಗಳ ವಿಷಯದಲ್ಲಿ ವಿಶ್ವದ ಮೊದಲ ಮೂರು ದೇಶಗಳಲ್ಲಿ ಒಂದಾಗಿದೆ. ಇಂದು ಭಾರತವು ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಯಲ್ಲಿ ವಿಶ್ವದ ಅಗ್ರ ಮೂರು ದೇಶಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

ಈ ಬಾರಿಯ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಶೀರ್ಷಿಕೆ ವಿಶ್ವದಲ್ಲೇ ಹೆಚ್ಚು ಚರ್ಚೆಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ವಿಶ್ವದ ಭವಿಷ್ಯ ಸುರಕ್ಷಿತವಾಗಿರುತ್ತದೆ. ನೀವು ಸುಸ್ಥಿರ ಅಭಿವೃದ್ಧಿಯ ವಿಷಯವನ್ನು ಮಹಿಳಾ ಸಬಲೀಕರಣದೊಂದಿಗೆ ಜೋಡಣೆ  ಮಾಡಿದ್ದೀರಿ. ಇವೆರಡೂ ಪ್ರಾಯೋಗಿಕವಾಗಿ ಪರಸ್ಪರ ಸಂಬಂಧ ಹೊಂದಿವೆ ಎಂದು ನಾನು ನಂಬುತ್ತೇನೆ. ಇಂದು ದೇಶವು ವಿಜ್ಞಾನದ ಮೂಲಕ ಮಾತ್ರವೇ ಮಹಿಳಾ ಸಬಲೀಕರಣದ ಬಗ್ಗೆ ಯೋಚಿಸುತ್ತಿರುವುದಲ್ಲ. ಅದಕ್ಕಿಂತ ಹೆಚ್ಚಾಗಿ, ಮಹಿಳೆಯರ ಸಹಭಾಗಿತ್ವದೊಂದಿಗೆ ವಿಜ್ಞಾನವನ್ನು ಸಬಲೀಕರಣಗೊಳಿಸಬೇಕು ಮತ್ತು ವಿಜ್ಞಾನ ಮತ್ತು ಸಂಶೋಧನೆಗೆ ಹೊಸ ವೇಗವನ್ನು ನೀಡಬೇಕು ಎಂಬುದು ನಮ್ಮ ಗುರಿಯಾಗಿದೆ. ಇತ್ತೀಚೆಗಷ್ಟೇ ಜಿ-20 ಗುಂಪಿನ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಭಾರತ ಪಡೆದುಕೊಂಡಿದೆ. G-20 ನ ಪ್ರಮುಖ ವಿಷಯಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯು ಪ್ರಮುಖ ಆದ್ಯತೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ, ಭಾರತವು ಆಡಳಿತದಿಂದ ಸಮಾಜ ಮತ್ತು ಆರ್ಥಿಕತೆಯವರೆಗೆ ಇಂತಹ ಅನೇಕ ಅಸಾಮಾನ್ಯ ವಿಷಯಗಳಲ್ಲಿ ಸಾಧನೆ ಮಾಡಿದೆ ಮತ್ತು ಅದನ್ನು ಇಂದು ಚರ್ಚಿಸಲಾಗುತ್ತಿದೆ. ಮುದ್ರಾ ಯೋಜನೆಯ ಮೂಲಕ ಸಣ್ಣ ಕೈಗಾರಿಕೆಗಳು ಮತ್ತು ವ್ಯವಹಾರಗಳಲ್ಲಿ ಭಾಗವಹಿಸುವಿಕೆ ಇರಲಿ ಅಥವಾ ನವೋದ್ಯಮ  ಜಗತ್ತಿನಲ್ಲಿ ನಾಯಕತ್ವ ಇರಲಿ , ಮಹಿಳೆಯರು ಭಾರತದಲ್ಲಿ ಎಲ್ಲೆಡೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ದ್ವಿಗುಣಗೊಂಡಿದೆ. ದೇಶದಲ್ಲಿ ಸಮಾಜ ಹಾಗೂ ವಿಜ್ಞಾನ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದಕ್ಕೆ ಮಹಿಳೆಯರ ಈ ಹೆಚ್ಚುತ್ತಿರುವ ಭಾಗವಹಿಸುವಿಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಯಾವುದೇ ವಿಜ್ಞಾನಿಗೆ ನಿಜವಾದ ಸವಾಲು ಎಂದರೆ ತನ್ನ ಜ್ಞಾನವನ್ನು ಜಗತ್ತಿಗೆ ಸಹಾಯ ಮಾಡುವ ಸಲಕರಣೆಗಳಾಗಿ ಪರಿವರ್ತಿಸುವುದು. ಒಬ್ಬ ವಿಜ್ಞಾನಿ ತನ್ನ ಪ್ರಯೋಗಗಳನ್ನು ನಡೆಸುವಾಗ, ಅವನ ಮನಸ್ಸನ್ನು ಸದಾ ಇದು  ಜನರ ಜೀವನವನ್ನು ಸುಧಾರಿಸುತ್ತದೆಯೇ ಅಥವಾ ಸಂಶೋಧನೆಯು ಪ್ರಪಂಚದ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ? ವೈಜ್ಞಾನಿಕ ಪ್ರಯತ್ನಗಳು ಪ್ರಯೋಗಾಲಯದಿಂದ ಹೊರಗೆ ಬಂದಾಗ  ಅವುಗಳ ಪ್ರಭಾವವು ಜಾಗತಿಕದಿಂದ ತಳಮಟ್ಟದವರೆಗೆ ಬಂದಾಗ , ನಿಯತಕಾಲಿಕಗಳಿಂದ ವಾಸ್ತವಕ್ಕೆ ವಿಸ್ತರಿಸಿದಾಗ ಮತ್ತು ಸಂಶೋಧನೆಯ ಆವಿಷ್ಕಾರಗಳು ನಿಜ ಜೀವನದಲ್ಲಿ ಪ್ರತಿಫಲಿಸಿದಾಗ ಮಾತ್ರ ಅವುಗಳು ದೊಡ್ಡ ಸಾಧನೆಗಳಾಗಿ ಬದಲಾಗುತ್ತವೆ.

ಸ್ನೇಹಿತರೇ,

ವಿಜ್ಞಾನದ ಮಹತ್ತರವಾದ ಸಾಧನೆಗಳು ಪ್ರಯೋಗಗಳಿಂದ ಹೊರಬಂದು ಜನರ ಅನುಭವಗಳಿಗೆ ಲಭಿಸಿದಾಗ ಆಗುವ ಪ್ರಗತಿಯು ಒಂದು ಪ್ರಮುಖ ಸಂದೇಶವನ್ನು ರವಾನಿಸುತ್ತದೆ. ಇದು ಯುವಜನರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ವಿಜ್ಞಾನದ ಮೂಲಕ ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಭಾವಿಸುತ್ತಾರೆ. ಅಂತಹ ಯುವಕರನ್ನು ಪ್ರೋತ್ಸಾಹಿಸಲು ಸಾಂಸ್ಥಿಕ ಚೌಕಟ್ಟು ಅಗತ್ಯವಿದೆ, ಇದರಿಂದ ಅವರ ಆಕಾಂಕ್ಷೆಗಳನ್ನು ವಿಸ್ತರಿಸಬಹುದು ಮತ್ತು ಅವರಿಗೆ ಹೊಸ ಅವಕಾಶಗಳನ್ನು ಒದಗಿಸಬಹುದು. ಇಲ್ಲಿರುವ ವಿಜ್ಞಾನಿಗಳು ಯುವ ಪ್ರತಿಭೆಗಳನ್ನು ಆಕರ್ಷಿಸುವ ಮತ್ತು ಪ್ರಗತಿಗೆ ಅವಕಾಶ ನೀಡುವ ಇಂತಹ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಬೇಕೆಂದು ನಾನು ಬಯಸುತ್ತೇನೆ. ಉದಾಹರಣೆಗೆ, ವೈಜ್ಞಾನಿಕ ಮನೋಭಾವದ ಮಕ್ಕಳನ್ನು ಗುರುತಿಸಲು ಪ್ರತಿಭಾನ್ವೇಷಣೆ ಮತ್ತು ಹ್ಯಾಕಥಾನ್ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಆಗ ಆ ಮಕ್ಕಳ ಗ್ರಹಿಕೆಯನ್ನು ಸರಿಯಾದ ಮಾರ್ಗಸೂಚಿಯ ಮೂಲಕ ಬೆಳೆಸಬಹುದು. ಈ ನಿಟ್ಟಿನಲ್ಲಿ ಹಿರಿಯ ವಿಜ್ಞಾನಿಗಳು ಅವರಿಗೆ ಸಹಾಯ ಮಾಡಬಹುದು. ಇಂದು ಭಾರತ ಕ್ರೀಡೆಯಲ್ಲಿ ಹೊಸ ಎತ್ತರಕ್ಕೆ ಏರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು  ದೇಶದಲ್ಲಿ ಸಾಂಸ್ಥಿಕ ಚೌಕಟ್ಟನ್ನು ಬಲಪಡಿಸಲಾಯಿತು. ಎರಡನೆಯದಾಗಿ, ಕ್ರೀಡೆಯಲ್ಲಿ 'ಗುರು-ಶಿಷ್ಯ' ಸಂಪ್ರದಾಯದ ಅಸ್ತಿತ್ವ ಮತ್ತು ಪ್ರಭಾವವನ್ನು ಅಭಿವೃದ್ಧಿಪಡಿಸಲಾಯಿತು, ಇದರಿಂದಾಗಿ ಹೊಸ ಪ್ರತಿಭೆಗಳನ್ನು ಗುರುತಿಸಲಾಯಿತು ಮತ್ತು ಅವರನ್ನು  ಪೋಷಿಸಲಾಗುತ್ತಿದೆ. ಗುರುಗಳು ತಮ್ಮ ಶಿಷ್ಯನ ಸಾಧನೆಯಲ್ಲಿ ಅವರ ಯಶಸ್ಸನ್ನು ನೋಡುತ್ತಾರೆ. ಈ ಸಂಪ್ರದಾಯವು ವಿಜ್ಞಾನ ಕ್ಷೇತ್ರದಲ್ಲಿ ಯಶಸ್ಸಿನ ಮಂತ್ರವೂ ಆಗಬಹುದು.

ಸ್ನೇಹಿತರೇ,

ಇಂದು, ನಾನು ನಿಮ್ಮ ಮುಂದೆ ಕೆಲವು ಸಮಸ್ಯೆಗಳನ್ನು ಇಡಲು ಬಯಸುತ್ತೇನೆ, ಇದು ಭಾರತದಲ್ಲಿ ವಿಜ್ಞಾನದ ದಿಕ್ಕನ್ನು ನಿರ್ಧರಿಸಲು ಸಹಾಯಕವಾಗುತ್ತದೆ. ನಮ್ಮ ವೈಜ್ಞಾನಿಕ ಸಮುದಾಯದ ಮೂಲ ಪ್ರೇರಣೆಯಲ್ಲಿ  ದೇಶದ ಅಗತ್ಯಗಳನ್ನು ಪೂರೈಸಲು ಭಾರತದಲ್ಲಿ ವಿಜ್ಞಾನದ ಬೆಳವಣಿಗೆಯಾಗಬೇಕು ಎಂಬುದು ಅಡಕವಾಗಿರಬೇಕು.. ಭಾರತದಲ್ಲಿ ವಿಜ್ಞಾನವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವಂತಿರಬೇಕು. ಇಂದು ವಿಶ್ವದ ಮಾನವ ಜನಸಂಖ್ಯೆಯ 17-18 ಪ್ರತಿಶತದಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ವೈಜ್ಞಾನಿಕ ಕಾರ್ಯಗಳು  ಭಾರತದ ಅಗತ್ಯಗಳನ್ನು ಪೂರೈಸುವಂತಿರಬೇಕು ಮತ್ತು ವಿಶ್ವದ ಮನುಕುಲದ 17-18 ಪ್ರತಿಶತದಷ್ಟು ಜನರಿಗೆ ವೇಗವನ್ನು ನೀಡುವಂತಾಗಬೇಕು. ಮತ್ತು ಅದರ ಪರಿಣಾಮವು ಇಡೀ ಮಾನವಕುಲದ ಮೇಲೆ ಆಗುತ್ತದೆ. ಆದ್ದರಿಂದ, ನಾವು ಇಡೀ ಮಾನವಕುಲಕ್ಕೆ ಮುಖ್ಯವಾದ ಅಂತಹ ವಿಷಯಗಳ ಮೇಲೆ ಕೆಲಸ ಮಾಡಬೇಕು. ಉದಾಹರಣೆಗೆ, ನಾವು ಶಕ್ತಿಯ, ಇಂಧನದ ಸಮಸ್ಯೆಯನ್ನು ತೆಗೆದುಕೊಂಡರೆ. ಭಾರತದ ಇಂಧನ ಅಗತ್ಯಗಳು ನಿರಂತರವಾಗಿ ಬೆಳೆಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಭಾರತದ ವೈಜ್ಞಾನಿಕ ಸಮುದಾಯವು ಇಂಧನ ಅಗತ್ಯಗಳಿಗೆ ಸಂಬಂಧಿಸಿದ ಆವಿಷ್ಕಾರಗಳನ್ನು ಮಾಡಿದರೆ, ಅದು ದೇಶಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಹೈಡ್ರೋಜನ್ ಇಂಧನ/ಶಕ್ತಿಯಲ್ಲಿನ ಅಪಾರ ಸಾಧ್ಯತೆಗಳಿಗಾಗಿ ದೇಶವು ರಾಷ್ಟ್ರೀಯ ಹೈಡ್ರೋಜನ್ ಮಿಷನ್‌ನಡಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಯಶಸ್ವಿಗೊಳಿಸಲು, ಎಲೆಕ್ಟ್ರೋಲೈಸರ್‌ಗಳಂತಹ ವಿವಿಧ ಅಗತ್ಯ ಘಟಕಾಂಶಗಳನ್ನು ದೇಶದಲ್ಲಿಯೇ ತಯಾರಿಸುವುದು ಅವಶ್ಯಕ. ಈ ದಿಕ್ಕಿನಲ್ಲಿ ಯಾವುದೇ ಹೊಸ ಆಯ್ಕೆಗಳಿಗೆ ಅವಕಾಶವಿದ್ದರೆ, ಆ ದಿಕ್ಕಿನಲ್ಲಿಯೂ ಸಂಶೋಧನೆ ನಡೆಸಬೇಕು. ಈ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ಯಮ ಒಟ್ಟಾಗಿ ಕೆಲಸ ಮಾಡಬೇಕು.

ಸ್ನೇಹಿತರೇ,

ಮನುಕುಲವು ಹೊಸ ರೋಗಗಳ ಬೆದರಿಕೆಯನ್ನು ಎದುರಿಸುತ್ತಿರುವ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ಪ್ರವಾಹ ಮತ್ತು ಭೂಕಂಪಗಳನ್ನು ನಿಭಾಯಿಸಲು ಮುಂಚಿತವಾಗಿ ಪರಿಹಾರಗಳನ್ನು  ಸಿದ್ಧಪಡಿಸಿದ ರೀತಿಯಲ್ಲಿಯೇ ಹೊಸ ಲಸಿಕೆಗಳನ್ನು ತಯಾರಿಸಲು ನಾವು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಬೇಕಾಗಿದೆ. ಅಂತೆಯೇ, ನಾವು ಸಮಗ್ರ ರೋಗ ಕಣ್ಗಾವಲು ಮೂಲಕ ಸಮಯಕ್ಕೆ ಸರಿಯಾಗಿ ರೋಗಗಳನ್ನು ಗುರುತಿಸಬೇಕು ಮತ್ತು ಅವುಗಳನ್ನು ಎದುರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಗುರಿಯನ್ನು ಸಾಧಿಸಲು ವಿವಿಧ ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನೀವೆಲ್ಲರೂ ನನ್ನ ಸ್ನೇಹಿತರು, ನಿಮಗೆ  ಲೈಫ್ ಅಂದರೆ ಪರಿಸರಕ್ಕಾಗಿ ಜೀವನಶೈಲಿಯ ಬಗ್ಗೆ ಚೆನ್ನಾಗಿ ತಿಳಿದಿದೆ. ನಮ್ಮ ವೈಜ್ಞಾನಿಕ ಸಮುದಾಯವು ಈ ದಿಕ್ಕಿನಲ್ಲಿ ಬಹಳ ದೊಡ್ಡ  ಸಹಾಯ ಮಾಡಲು ಸಾಧ್ಯವಿದೆ. 

ಸ್ನೇಹಿತರೇ,

ಭಾರತದ ಕರೆಯ ಮೇರೆಗೆ ವಿಶ್ವಸಂಸ್ಥೆಯು ಈ ವರ್ಷ ಅಂದರೆ 2023ನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯಗಳ  ವರ್ಷ ಎಂದು ಘೋಷಿಸಿದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ಭಾರತದ ಸಿರಿ ಧಾನ್ಯಗಳು ಮತ್ತು ಅವುಗಳ ಬಳಕೆಯನ್ನು ಸುಧಾರಿಸುವ ಕೆಲಸವನ್ನು ಮಾಡಬಹುದು. ಜೈವಿಕ ತಂತ್ರಜ್ಞಾನದ ಸಹಾಯದಿಂದ ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡಲು ವೈಜ್ಞಾನಿಕ ಸಮುದಾಯವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು.

ಸ್ನೇಹಿತರೇ,
ಇಂದು ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲೂ ವೈಜ್ಞಾನಿಕ ಸಂಶೋಧನೆಗೆ  ಅಪಾರ ಅವಕಾಶಗಳಿವೆ. ಮುನ್ಸಿಪಲ್ ತ್ಯಾಜ್ಯ, ಇಲೆಕ್ಟ್ರಾನಿಕ್ ತ್ಯಾಜ್ಯ, ಜೈವಿಕ-ವೈದ್ಯಕೀಯ ತ್ಯಾಜ್ಯ, ಕೃಷಿ ತ್ಯಾಜ್ಯಗಳು- ಇಂತಹ ಅವಕಾಶದ ಕ್ಷೇತ್ರಗಳಾಗಿವೆ, ಮತ್ತು ಅವುಗಳು ನಿರಂತರವಾಗಿ ವಿಸ್ತರಿಸುತ್ತಿವೆ. ಈ ಕಾರಣಕ್ಕಾಗಿಯೇ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ವೃತ್ತಾಕಾರದ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದೆ. ಈಗ ನಾವು ಮಿಷನ್ ಸರ್ಕ್ಯುಲರ್ ಎಕಾನಮಿಯನ್ನು (ವೃತ್ತಾಕಾರದ ಆರ್ಥಿಕತೆ ಮಿಷನ್ ) ಮತ್ತಷ್ಟು ಬಲಪಡಿಸಬೇಕಾಗಿದೆ. ಇದಕ್ಕಾಗಿ, ಲೋಹ ಮತ್ತು ಪ್ಲಾಸ್ಟಿಕ್ ಸ್ಕ್ರ್ಯಾಪ್ (ಗುಜರಿಗಳನ್ನು) ಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತಹ ಆವಿಷ್ಕಾರಗಳ ಮೇಲೆ ನಾವು ಕೆಲಸ ಮಾಡಬೇಕು. ಮಾಲಿನ್ಯವನ್ನು ತಹಬಂದಿಗೆ ತರಲು  ಮತ್ತು ಸ್ಕ್ರ್ಯಾಪ್ (ಗುಜರಿಯನ್ನು)  ಉಪಯುಕ್ತವಾಗಿಸುವ ನಿಟ್ಟಿನಲ್ಲಿ  ನಾವು ಏಕಕಾಲದಲ್ಲಿ ಕೆಲಸ ಮಾಡಬೇಕು.

ಸ್ನೇಹಿತರೇ 

ಇಂದು ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಎತ್ತರವನ್ನು ಏರುತ್ತಿದೆ. ಕಡಿಮೆ ವೆಚ್ಚದ ಉಪಗ್ರಹ ಉಡಾವಣಾ ವಾಹನಗಳಿಂದಾಗಿ ನಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ ಮತ್ತು ನಮ್ಮ ಸೇವೆಗಳನ್ನು ಬಳಸಲು ಜಗತ್ತು ಮುಂದೆ ಬರುತ್ತದೆ. ಖಾಸಗಿ ಕಂಪನಿಗಳು ಮತ್ತು ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) ಈ ಅವಕಾಶಗಳನ್ನು ಬಳಸಿಕೊಳ್ಳಬಹುದು. ಆರ್ & ಡಿ ಲ್ಯಾಬ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂಯೋಜಿಸಲ್ಪಡುವ  ಮೂಲಕ ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) ಮುನ್ನಡೆಯ ದಾರಿಯನ್ನು ಕಂಡುಕೊಳ್ಳಬಹುದು. ಅಂತೆಯೇ, ಕ್ವಾಂಟಮ್ ಕಂಪ್ಯೂಟಿಂಗ್ ಎಂಬಂತಹ    ಮತ್ತೊಂದು ಸಂಗತಿ ಇದೆ. ಇಂದು ಭಾರತವು ಕ್ವಾಂಟಮ್ ಗಡಿರೇಖೆಯಾಗಿ ವಿಶ್ವದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಕ್ವಾಂಟಮ್ ಕಂಪ್ಯೂಟರ್‌ಗಳು, ಕ್ವಾಂಟಮ್ ರಸಾಯನ ವಿಜ್ಞಾನ  (ಕೆಮಿಸ್ಟ್ರಿ) , ಕ್ವಾಂಟಮ್ ಸಂವಹನ, ಕ್ವಾಂಟಮ್ ಸೆನ್ಸರ್‌ಗಳು, ಕ್ವಾಂಟಮ್ ಕ್ರಿಪ್ಟೋಗ್ರಫಿ ಮತ್ತು ಹೊಸ ವಸ್ತುಗಳ ದಿಕ್ಕಿನಲ್ಲಿ ಭಾರತವು ವೇಗವಾಗಿ ಸಾಗುತ್ತಿದೆ. ನಮ್ಮ ಯುವ ಸಂಶೋಧಕರು ಮತ್ತು ವಿಜ್ಞಾನಿಗಳು ಕ್ವಾಂಟಮ್ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆಯಬೇಕು  ಮತ್ತು ಈ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂದು  ನಾನು ಬಯಸುತ್ತೇನೆ.

ಸ್ನೇಹಿತರೇ 

ಆರಂಭಿಕ ಉಪಕ್ರಮವನ್ನು ಕೈಗೊಳ್ಳುವವನು ವಿಜ್ಞಾನದಲ್ಲಿ ಮುಂದಾಳತ್ವವನ್ನು ವಹಿಸುತ್ತಾನೆ ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ, ನಾವು ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನಿಸುವುದು ಮಾತ್ರವಲ್ಲ, ಅದೇ ಸಮಯದಲ್ಲಿ ಎಲ್ಲಿಯೂ ಸಾಧ್ಯವಾಗದಿರುವ ಸಂಗತಿಗಳ ಬಗ್ಗೆ ಮತ್ತು ಭವಿಷ್ಯದ ಆಲೋಚನೆಗಳ ಬಗ್ಗೆ ಗಮನ ಹರಿಸಬೇಕು. ಇಂದು ಜಗತ್ತಿನಲ್ಲಿ ಎ.ಐ., ಎ.ಆರ್., ಮತ್ತು ವಿ.ಆರ್., ಕುರಿತು ಚರ್ಚೆ ನಡೆಯುತ್ತಿದೆ. ನಾವು ಈ ಸಮಸ್ಯೆಗಳನ್ನು ನಮ್ಮ ಆದ್ಯತೆಗಳಲ್ಲಿ ಸೇರಿಸಿಕೊಳ್ಳಬೇಕು. ಸೆಮಿಕಂಡಕ್ಟರ್ ಚಿಪ್‌ಗಳ ನಿಟ್ಟಿನಲ್ಲಿ  ದೇಶವು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಾಲಾನಂತರದಲ್ಲಿ, ಸೆಮಿಕಂಡಕ್ಟರ್ ಚಿಪ್‌ಗಳಲ್ಲಿ ಹೊಸ ಆವಿಷ್ಕಾರಗಳು ಬೇಕಾಗುತ್ತವೆ. ಈಗಿನಿಂದಲೇ ದೇಶದ ಸೆಮಿಕಂಡಕ್ಟರ್ ಭವಿಷ್ಯವನ್ನು ಸಿದ್ಧಗೊಳಿಸುವ ದಿಕ್ಕಿನಲ್ಲಿ ನಾವು ಏಕೆ ಯೋಚಿಸಬಾರದು? ಈ ಕ್ಷೇತ್ರಗಳಲ್ಲಿ ದೇಶವು ಆರಂಭಿಕ ಉಪಕ್ರಮಗಳನ್ನು ಕೈಗೊಂಡಾಗ ಮಾತ್ರ ನಾವು ಉದ್ಯಮ 4.0 ರ ನಾಯಕತ್ವವನ್ನು ವಹಿಸಿ ಮುನ್ನಡೆಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ ,

ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಈ ಅಧಿವೇಶನದಲ್ಲಿ ವಿವಿಧ ರಚನಾತ್ಮಕ ಅಂಶಗಳ ಕುರಿತು ಭವಿಷ್ಯದ ಸ್ಪಷ್ಟ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತದೆ  ಎಂಬ ಬಗ್ಗೆ  ನನಗೆ ಖಾತ್ರಿಯಿದೆ. ‘ಅಮೃತ ಕಾಲ’ದಲ್ಲಿ ಭಾರತವನ್ನು ಆಧುನಿಕ ವಿಜ್ಞಾನದ ಅತ್ಯಾಧುನಿಕ ಪ್ರಯೋಗಾಲಯವನ್ನಾಗಿ ಮಾಡಬೇಕು. ಈ ಹಾರೈಕೆಯೊಂದಿಗೆ, ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತು ಈ ಶೃಂಗಸಭೆಗೆ ನನ್ನ ಶುಭಾಶಯಗಳು. ನಮಸ್ಕಾರ!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
RuPay credit card UPI transactions double in first seven months of FY25

Media Coverage

RuPay credit card UPI transactions double in first seven months of FY25
NM on the go

Nm on the go

Always be the first to hear from the PM. Get the App Now!
...
Prime Minister greets valiant personnel of the Indian Navy on the Navy Day
December 04, 2024

Greeting the valiant personnel of the Indian Navy on the Navy Day, the Prime Minister, Shri Narendra Modi hailed them for their commitment which ensures the safety, security and prosperity of our nation.

Shri Modi in a post on X wrote:

“On Navy Day, we salute the valiant personnel of the Indian Navy who protect our seas with unmatched courage and dedication. Their commitment ensures the safety, security and prosperity of our nation. We also take great pride in India’s rich maritime history.”