ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ. ಆನಂದ್ ಬೋಸ್ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೆ, ಶಾಂತನು ಠಾಕೂರ್ ಜಿ, ರವನೀತ್ ಸಿಂಗ್ ಜಿ, ಸುಕಾಂತ ಮಜುಂದಾರ್ ಜಿ, ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಶುವೇಂದು ಅಧಿಕಾರಿ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಶೋಮಿಕ್ ಭಟ್ಟಾಚಾರ್ಯ ಜಿ, ಇಲ್ಲಿ ಉಪಸ್ಥಿತರಿರುವ ಎಲ್ಲಾ ಜನಪ್ರತಿನಿಧಿಗಳೆ, ಮಹಿಳೆಯರೆ ಮತ್ತು ಮಹನೀಯರೆ,
ಇಂದು ಮತ್ತೊಮ್ಮೆ ಪಶ್ಚಿಮ ಬಂಗಾಳದ ಅಭಿವೃದ್ಧಿ ವೇಗಗೊಳಿಸಲು ನನಗೆ ಅವಕಾಶ ಸಿಕ್ಕಿದೆ. ಇದೀಗ ನಾನು ನೊಪಾರದಿಂದ ಜೈ ಹಿಂದ್ ಬಿಮನ್ ಬಂದರ್ ವರೆಗಿನ ಕೋಲ್ಕತ್ತಾ ಮೆಟ್ರೋ ಸಂಚಾರ ಆನಂದಿಸಿ ಹಿಂತಿರುಗಿದ್ದೇನೆ. ಈ ಸಮಯದಲ್ಲಿ, ನನಗೆ ಬಹಳಷ್ಟು ಸ್ನೇಹಿತರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತು. ಕೋಲ್ಕತಾದ ಸಾರ್ವಜನಿಕ ಸಾರಿಗೆ ಈಗ ನಿಜವಾಗಿಯೂ ಆಧುನಿಕವಾಗುತ್ತಿದೆ ಎಂದು ಎಲ್ಲರೂ ಸಂತೋಷಪಡುತ್ತಿದ್ದಾರೆ. ಇಂದು, 6 ಪಥಗಳ ಎತ್ತರಿಸಿದ ಕೋನಾ ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಮೊತ್ತದ ಈ ಎಲ್ಲಾ ಯೋಜನೆಗಳಿಗಾಗಿ ಕೋಲ್ಕತಾ ಮತ್ತು ಇಡೀ ಪಶ್ಚಿಮ ಬಂಗಾಳದ ಜನರಿಗೆ ಅನೇಕ ಅಭಿನಂದನೆಗಳು.
ಸ್ನೇಹಿತರೇ,
ಕೋಲ್ಕತ್ತಾದಂತಹ ನಮ್ಮ ಮಹಾನಗರಗಳು ಭಾರತದ ಇತಿಹಾಸ ಮತ್ತು ನಮ್ಮ ಭವಿಷ್ಯದ ಶ್ರೀಮಂತ ಗುರುತಾಗಿವೆ. ಇಂದು, ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಸಾಗುತ್ತಿರುವಾಗ, ದಮ್ ದಮ್, ಕೋಲ್ಕತ್ತಾದಂತಹ ಈ ನಗರಗಳ ಪಾತ್ರ ಬಹಳ ದೊಡ್ಡದಾಗಿದೆ. ಆದ್ದರಿಂದ, ಇಂದಿನ ಕಾರ್ಯಕ್ರಮದ ಸಂದೇಶವು ಮೆಟ್ರೋ ಉದ್ಘಾಟನೆ ಮತ್ತು ಹೆದ್ದಾರಿಯ ಶಿಲಾನ್ಯಾಸಕ್ಕಿಂತ ದೊಡ್ಡದಾಗಿದೆ. ಈ ಘಟನೆಯು ಇಂದಿನ ಭಾರತವು ತನ್ನ ನಗರಗಳನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂದು, ಭಾರತೀಯ ನಗರಗಳಲ್ಲಿ ಹಸಿರು ಚಲನಶೀಲತೆಗಾಗಿ ಸತತ ಪ್ರಯತ್ನಗಳು ನಡೆಯುತ್ತಿವೆ, ವಿದ್ಯುತ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ, ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸಲು ಪ್ರಯತ್ನಗಳು ನಡೆಯುತ್ತಿವೆ, ನಗರದಿಂದ ಉತ್ಪತ್ತಿಯಾಗುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು, ಮೆಟ್ರೋ ಸೌಲಭ್ಯಗಳು ಹೆಚ್ಚುತ್ತಿವೆ, ಮೆಟ್ರೋ ಜಾಲ ವಿಸ್ತರಿಸುತ್ತಿದೆ. ಇಂದು ವಿಶ್ವದ 3ನೇ ಅತಿದೊಡ್ಡ ಮೆಟ್ರೋ ಜಾಲವು ಭಾರತದಲ್ಲಿದೆ ಎಂಬುದನ್ನು ಕೇಳಲು ಎಲ್ಲರೂ ಹೆಮ್ಮೆಪಡುತ್ತಾರೆ. 2014ರ ಮೊದಲು, ದೇಶದಲ್ಲಿ ಮೆಟ್ರೋ ಮಾರ್ಗವು ಕೇವಲ 250 ಕಿಲೋಮೀಟರ್‌ಗಳಷ್ಟಿತ್ತು. ಇಂದು ದೇಶದಲ್ಲಿ ಮೆಟ್ರೋ ಮಾರ್ಗವು ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾಗಿದೆ. ಕೋಲ್ಕತ್ತಾದಲ್ಲಿಯೂ ಮೆಟ್ರೋ ನಿರಂತರವಾಗಿ ವಿಸ್ತರಿಸಿದೆ. ಇಂದಿಗೂ ಸಹ, ಕೋಲ್ಕತ್ತಾದ ಮೆಟ್ರೋ ರೈಲು ಜಾಲಕ್ಕೆ ಸುಮಾರು 14 ಕಿಲೋಮೀಟರ್ ಹೊಸ ಮಾರ್ಗಗಳನ್ನು ಸೇರಿಸಲಾಗುತ್ತಿದೆ. ಕೋಲ್ಕತ್ತಾ ಮೆಟ್ರೋಗೆ 7 ಹೊಸ ನಿಲ್ದಾಣಗಳನ್ನು ಸೇರಿಸಲಾಗುತ್ತಿದೆ. ಈ ಎಲ್ಲಾ ಕೆಲಸಗಳು ಕೋಲ್ಕತ್ತಾ ಜನರ ಜೀವನ ಸುಗಮತೆ ಮತ್ತು ಪ್ರಯಾಣದ ಸುಗಮತೆಯನ್ನು ಹೆಚ್ಚಿಸಲಿವೆ.

ಸ್ನೇಹಿತರೆ,
21ನೇ ಶತಮಾನದ ಭಾರತಕ್ಕೆ 21ನೇ ಶತಮಾನದ ಸಾರಿಗೆ ವ್ಯವಸ್ಥೆ ಬೇಕು. ಅದಕ್ಕಾಗಿಯೇ ಇಂದು ನಾವು ದೇಶದಲ್ಲಿ ರೈಲಿನಿಂದ ರಸ್ತೆಗೆ, ಮೆಟ್ರೋದಿಂದ ವಿಮಾನ ನಿಲ್ದಾಣದವರೆಗೆ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ಅವುಗಳನ್ನು ಪರಸ್ಪರ ಸಂಪರ್ಕಿಸುತ್ತಿದ್ದೇವೆ. ಅಂದರೆ, ಒಂದು ನಗರದಿಂದ ಮತ್ತೊಂದು ನಗರಕ್ಕೆ ಜನರನ್ನು ಸಾಗಿಸುವ ಜತೆಗೆ, ಅವರ ಮನೆಗಳ ಬಳಿಗೆ ತಡೆರಹಿತ ಸಾರಿಗೆ ಒದಗಿಸುವುದು ನಮ್ಮ ಪ್ರಯತ್ನವಾಗಿದೆ. ಕೋಲ್ಕತ್ತಾದ ಬಹು-ಮಾದರಿ ಸಂಪರ್ಕದಲ್ಲಿಯೂ ನಾವು ಇದರ ಒಂದು ನೋಟವನ್ನು ನೋಡುತ್ತೇವೆ. ಇಂದಿನಂತೆ ದೇಶದ ಅತ್ಯಂತ ಜನದಟ್ಟಣೆ ರೈಲು ನಿಲ್ದಾಣಗಳಾದ ಹೌರಾ ಮತ್ತು ಸಿಯಾಲ್ಡಾಗಳು ಈಗ ಮೆಟ್ರೋದೊಂದಿಗೆ ಸಂಪರ್ಕ ಹೊಂದಿವೆ. ಇದರರ್ಥ ಮೊದಲು ಒಂದೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ನಿಲ್ದಾಣಗಳ ನಡುವಿನ ಪ್ರಯಾಣವು ಈಗ ಮೆಟ್ರೋ ಮೂಲಕ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ, ಹೌರಾ ನಿಲ್ದಾಣದ ಸುರಂಗ ಮಾರ್ಗವು ಬಹುಮಾದರಿ ಸಂಪರ್ಕವನ್ನು ಖಚಿತಪಡಿಸುತ್ತಿದೆ. ಇದಕ್ಕೂ ಮೊದಲು, ಪೂರ್ವ ರೈಲ್ವೆಯಿಂದ ಆಗ್ನೇಯ ರೈಲ್ವೆ ಹಿಡಿಯಲು ದೀರ್ಘ ಮಾರ್ಗವನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಸುರಂಗ ಮಾರ್ಗದ ನಿರ್ಮಾಣದ ನಂತರ, ಇಂಟರ್ ಚೇಂಜ್‌ಗೆ ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತದೆ. ಇಂದಿನಿಂದ, ಕೋಲ್ಕತ್ತಾ ವಿಮಾನ ನಿಲ್ದಾಣವನ್ನು ಸಹ ಮೆಟ್ರೋಗೆ ಸಂಪರ್ಕಿಸಲಾಗಿದೆ. ಇದರರ್ಥ ನಗರದ ದೂರದ ಭಾಗಗಳಿಂದ ವಿಮಾನ ನಿಲ್ದಾಣವನ್ನು ತಲುಪುವುದು ಈಗ ಸುಲಭವಾಗುತ್ತದೆ.

ಸ್ನೇಹಿತರೆ,
ಭಾರತ ಸರ್ಕಾರ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಇಂದು, ಪಶ್ಚಿಮ ಬಂಗಾಳವು 100% ರೈಲ್ವೆ ವಿದ್ಯುದೀಕರಣಗೊಂಡ ದೇಶದ ರಾಜ್ಯಗಳಿಗೆ ಸೇರಿದೆ. ಬಹಳ ದಿನಗಳಿಂದ, ಪುರುಲಿಯಾ ಮತ್ತು ಹೌರಾ ನಡುವೆ ಮೆಮು(MEMU) ಮತ್ತು ರೈಲಿನ ಬೇಡಿಕೆ ಇತ್ತು. ಭಾರತ ಸರ್ಕಾರವು ಸಾರ್ವಜನಿಕರ ಈ ಬೇಡಿಕೆಯನ್ನು ಸಹ ಈಡೇರಿಸಿದೆ. ಇಂದು, ಪಶ್ಚಿಮ ಬಂಗಾಳದ ವಿವಿಧ ಮಾರ್ಗಗಳಲ್ಲಿ 9 ವಂದೇ ಭಾರತ್ ರೈಲುಗಳು ಓಡುತ್ತಿವೆ, ಇದರ ಜತೆಗೆ, ನಿಮ್ಮೆಲ್ಲರಿಗಾಗಿ 2 ಅಮೃತ ಭಾರತ್ ರೈಲುಗಳು ಸಹ ಸಂಚರಿಸುತ್ತಿವೆ.
ಸ್ನೇಹಿತರೆ,
ಕಳೆದ 11 ವರ್ಷಗಳಲ್ಲಿ ಭಾರತ ಸರ್ಕಾರವು ಇಲ್ಲಿ ಅನೇಕ ಪ್ರಮುಖ ಹೆದ್ದಾರಿ ಯೋಜನೆಗಳನ್ನು ಪೂರ್ಣಗೊಳಿಸಿದೆ. ಹಲವು ಯೋಜನೆಗಳ ಕೆಲಸ ನಡೆಯುತ್ತಿದೆ. 6 ಪಥದ ಕೋನಾ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡಾಗ, ಅದು ಬಂದರು ಸಂಪರ್ಕವನ್ನು ಸಹ ಸುಧಾರಿಸುತ್ತದೆ. ಈ ಸಂಪರ್ಕವು ಈಗ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳಕ್ಕೆ ಉತ್ತಮ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕುತ್ತದೆ.

ಸ್ನೇಹಿತರೆ,
ಸ್ವಲ್ಪವೇ ಸಮಯದ ನಂತರ, ಸಮೀಪದಲ್ಲೇ ಸಾರ್ವಜನಿಕ ಸಭೆ ನಡೆಯಲಿದೆ, ಆ ಸಭೆಯಲ್ಲಿ, ಪಶ್ಚಿಮ ಬಂಗಾಳದ ಅಭಿವೃದ್ಧಿ ಮತ್ತು ಭವಿಷ್ಯದ ಕುರಿತು ನಿಮ್ಮೆಲ್ಲರೊಂದಿಗೆ ವಿವರವಾದ ಚರ್ಚೆ ನಡೆಯಲಿದೆ, ಮತ್ತು ಇನ್ನೂ ಹೆಚ್ಚಿನವುಗಳು ನಡೆಯಲಿವೆ, ಅಲ್ಲಿ ಅನೇಕ ಜನರು ಕಾಯುತ್ತಿದ್ದಾರೆ, ಹಾಗಾಗಿ ನಾನು ನನ್ನ ಭಾಷಣವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ. ನಿಮ್ಮೆಲ್ಲರಿಗೂ ಶುಭಾಶಯಗಳು! ಧನ್ಯವಾದಗಳು!


