ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ, ಬಂಗಾಳದ ಭಾಗವಹಿಸುವಿಕೆ ನಿರೀಕ್ಷಿತ ಮತ್ತು ಅವಶ್ಯಕವಾಗಿದೆ: ಪ್ರಧಾನಮಂತ್ರಿ
ಈ ಉದ್ದೇಶದೊಂದಿಗೆ, ಕೇಂದ್ರ ಸರ್ಕಾರವು ಇಲ್ಲಿ ಮೂಲಸೌಕರ್ಯ, ನಾವೀನ್ಯತೆ ಮತ್ತು ಹೂಡಿಕೆಗೆ ನಿರಂತರವಾಗಿ ಹೊಸ ಪ್ರಚೋದನೆ ನೀಡುತ್ತಿದೆ: ಪ್ರಧಾನಮಂತ್ರಿ
ಬಂಗಾಳದ ಅಭಿವೃದ್ಧಿ ಭಾರತದ ಭವಿಷ್ಯದ ಅಡಿಪಾಯ: ಪ್ರಧಾನಮಂತ್ರಿ
ಈ ನಗರ ಅನಿಲ ವಿತರಣಾ ಯೋಜನೆ ಕೇವಲ ಪೈಪ್ ಲೈನ್ ಯೋಜನೆಯಲ್ಲ, ಇದು ಸರ್ಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದಾಹರಣೆಯಾಗಿದೆ: ಪ್ರಧಾನಮಂತ್ರಿ
ಇಂಧನ ಅಗ್ಗದ, ಶುದ್ಧ ಮತ್ತು ಸುಲಭವಾಗಿ ಲಭ್ಯವಿರುವ ಭಾರತದತ್ತ ನಾವು ಸಾಗುತ್ತಿದ್ದೇವೆ: ಪ್ರಧಾನಮಂತ್ರಿ

ಕೇಂದ್ರ ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಸುಕಾಂತ ಮಜುಂದಾರ್ ಜೀ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಜೀ, ಅಲಿಪುರ್ದಾರ್ ನ ಜನಪ್ರಿಯ ಸಂಸದ ಸಹೋದರ ಮನೋಜ್ ಟಿಗ್ಗಾ ಜೀ, ಇತರ ಸಂಸದರು, ಶಾಸಕರು ಮತ್ತು ಬಂಗಾಳದ ನನ್ನೆಲ್ಲಾ ಸಹೋದರ ಸಹೋದರಿಯರೇ!

ಅಲಿಪುರ್ದಾರ್ ನ ಈ ಐತಿಹಾಸಿಕ ಭೂಮಿಯಿಂದ ಬಂಗಾಳದ ಸಮಸ್ತ ಜನರಿಗೂ ನನ್ನ ಪ್ರೀತಿಯ ನಮಸ್ಕಾರಗಳು!

ಅಲಿಪುರ್ದಾರ್ ನ ಈ ನೆಲ ಕೇವಲ ಗಡಿಗಳಿಂದ ಮಾತ್ರವಲ್ಲ, ಸಂಸ್ಕೃತಿಗಳಿಂದಲೂ ಬೆಸೆದುಕೊಂಡಿದೆ. ಒಂದೆಡೆ ಭೂತಾನ್ನ ಗಡಿಯಿದೆ, ಇನ್ನೊಂದೆಡೆ ಅಸ್ಸಾಂ ರಾಜ್ಯದ ಸ್ವಾಗತವಿದೆ. ಒಂದು ಕಡೆ ಜಲ್ಪೈಗುರಿಯ ನಯನ ಮನೋಹರ ದೃಶ್ಯವಿದ್ದರೆ, ಇನ್ನೊಂದೆಡೆ ಕೂಚ್ ಬೆಹಾರ್ ನ ಹೆಮ್ಮೆಯಿದೆ. ಇಂದು ಈ ಪುಣ್ಯ ಭೂಮಿಯಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುವ ಅವಕಾಶ ನನಗೆ ಲಭಿಸಿದೆ.

ಸ್ನೇಹಿತರೇ, 

ಇಂದು ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಮುನ್ನಡೆಯುತ್ತಿರುವಾಗ, ಬಂಗಾಳದ ಸಹಭಾಗಿತ್ವವು ಅತ್ಯಗತ್ಯ ಮತ್ತು ನಿರೀಕ್ಷಿತವಾಗಿದೆ. ಈ ಆಶಯದೊಂದಿಗೆ ಕೇಂದ್ರ ಸರ್ಕಾರವು ಇಲ್ಲಿನ ಮೂಲಸೌಕರ್ಯ, ಇನೋವೇಶನ್ ಮತ್ತು ಹೂಡಿಕೆಗೆ ನಿರಂತರವಾಗಿ ಹೊಸ ಉತ್ತೇಜನ ನೀಡುತ್ತಿದೆ. ಬಂಗಾಳದ ಅಭಿವೃದ್ಧಿಯು ಭಾರತದ ಭವಿಷ್ಯದ ಬುನಾದಿಯಾಗಿದೆ. ಮತ್ತು ಇಂದು ಆ ಬುನಾದಿಗೆ ಮತ್ತೊಂದು ಗಟ್ಟಿಯಾದ ಇಟ್ಟಿಗೆಯನ್ನು ಸೇರಿಸುವ ದಿನ. ಸ್ವಲ್ಪ ಸಮಯದ ಹಿಂದೆ, ನಾವು ಈ ವೇದಿಕೆಯಿಂದ ಅಲಿಪುರ್ದಾರ್ ಮತ್ತು ಕೂಚ್ ಬೆಹಾರ್ ನಲ್ಲಿ ನಗರ ಅನಿಲ ವಿತರಣಾ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಮೂಲಕ, 2.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್ಲೈನ್ ಮೂಲಕ ಶುದ್ಧ, ಸುರಕ್ಷಿತ ಮತ್ತು ಅಗ್ಗದ ಅನಿಲವನ್ನು ಪೂರೈಸಲಾಗುತ್ತದೆ. ಇದು ಅಡುಗೆಮನೆಗೆ ಸಿಲಿಂಡರ್ ಖರೀದಿಸುವ ಚಿಂತೆಯನ್ನು ನಿವಾರಿಸುವುದಲ್ಲದೆ, ಕುಟುಂಬಗಳಿಗೆ ಸುರಕ್ಷಿತ ಅನಿಲ ಪೂರೈಕೆಯನ್ನು ಖಚಿತಪಡಿಸುತ್ತದೆ. ಇದರೊಂದಿಗೆ, ಸಿ ಎನ್ ಜಿ ಕೇಂದ್ರಗಳ ನಿರ್ಮಾಣವು ಹಸಿರು ಇಂಧನದ ಸೌಲಭ್ಯಗಳನ್ನು ವಿಸ್ತರಿಸುತ್ತದೆ. ಇದು ಹಣ, ಸಮಯವನ್ನು ಉಳಿಸುತ್ತದೆ ಮತ್ತು ಪರಿಸರಕ್ಕೂ ನೆಮ್ಮದಿ ನೀಡುತ್ತದೆ. ಈ ಹೊಸ ಆರಂಭಕ್ಕಾಗಿ ನಾನು ಅಲಿಪುರ್ದುರ್ವಾರ್ ಮತ್ತು ಕೂಚ್ ಬೆಹಾರ್ನ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಗರ ಅನಿಲ ವಿತರಣೆಯ ಈ ಯೋಜನೆಯು ಕೇವಲ ಪೈಪ್ಲೈನ್ ಯೋಜನೆಯಲ್ಲ; ಇದು ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಒಂದು ಉತ್ತಮ ಉದಾಹರಣೆಯಾಗಿದೆ.

 

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ಭಾರತವು ಇಂಧನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಹಿಂದೆಂದೂ ಆಗಿರದಂತಹದ್ದು. ಇಂದು ನಮ್ಮ ದೇಶವು ಅನಿಲ ಆಧಾರಿತ ಆರ್ಥಿಕತೆಯೆಡೆಗೆ ಕ್ಷಿಪ್ರವಾಗಿ ಸಾಗುತ್ತಿದೆ. 2014 ರ ಮೊದಲು, ದೇಶದ ಕೇವಲ 66 ಜಿಲ್ಲೆಗಳಲ್ಲಿ ನಗರ ಅನಿಲ ಸೌಲಭ್ಯಗಳಿದ್ದವು. ಇಂದು, ನಗರ ಅನಿಲ ವಿತರಣಾ ಜಾಲವು 550 ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪಿದೆ. ಈ ಜಾಲವು ಈಗ ನಮ್ಮ ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳಿಗೂ ವಿಸ್ತರಿಸಿದೆ. ಲಕ್ಷಾಂತರ ಮನೆಗಳಿಗೆ ಪೈಪ್ಗಳ ಮೂಲಕ ಅನಿಲ ಸಂಪರ್ಕ ಲಭಿಸುತ್ತಿದೆ. ಸಾರ್ವಜನಿಕ ಸಾರಿಗೆಯೂ ಕೂಡ ಸಿಎನ್ಜಿಯಿಂದಾಗಿ ಬದಲಾವಣೆಯನ್ನು ಕಂಡಿದೆ. ಇದು ವಾಯು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದರರ್ಥ, ದೇಶದ ಜನರ ಆರೋಗ್ಯ ಸುಧಾರಿಸುತ್ತಿದೆ ಮತ್ತು ಅವರ ಆರ್ಥಿಕ ಹೊರೆಯೂ ಕಡಿಮೆಯಾಗುತ್ತಿದೆ.

ಸ್ನೇಹಿತರೇ,

ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಈ ಬದಲಾವಣೆಗೆ ಮತ್ತಷ್ಟು ವೇಗ ದೊರೆತಿದೆ. ನಮ್ಮ ಸರ್ಕಾರವು ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಿತು. ಈ ಯೋಜನೆಯು ಕೋಟ್ಯಂತರ ಬಡ ಸಹೋದರಿಯರ ಜೀವನವನ್ನು ಸುಲಭಗೊಳಿಸಿದೆ. ಇದು ಮಹಿಳೆಯರನ್ನು ಹೊಗೆಯಿಂದ ಮುಕ್ತಗೊಳಿಸಿದೆ, ಅವರ ಆರೋಗ್ಯವನ್ನು ಸುಧಾರಿಸಿದೆ ಮತ್ತು ಮುಖ್ಯವಾಗಿ, ಮನೆಯ ಅಡುಗೆಮನೆಯಲ್ಲಿ ಗೌರವದ ವಾತಾವರಣವನ್ನು ಸೃಷ್ಟಿಸಿದೆ. 2014 ರಲ್ಲಿ ನಮ್ಮ ದೇಶದಲ್ಲಿ 14 ಕೋಟಿಗಿಂತ ಕಡಿಮೆ ಎಲ್ ಪಿ ಜಿ ಸಂಪರ್ಕಗಳಿದ್ದವು. ಇಂದು ಈ ಸಂಖ್ಯೆ 31 ಕೋಟಿಗೂ ಹೆಚ್ಚಾಗಿದೆ. ಇದರರ್ಥ ಪ್ರತಿ ಮನೆಗೂ ಗ್ಯಾಸ್ ಒದಗಿಸುವ ಕನಸು ಈಗ ನನಸಾಗುತ್ತಿದೆ. ಇದಕ್ಕಾಗಿ, ನಮ್ಮ ಸರ್ಕಾರವು ದೇಶದ ಪ್ರತಿಯೊಂದು ಮೂಲೆಯಲ್ಲೂ ಗ್ಯಾಸ್ ವಿತರಣಾ ಜಾಲವನ್ನು ಬಲಪಡಿಸಿದೆ. ಆದ್ದರಿಂದ, ದೇಶಾದ್ಯಂತ ಎಲ್ ಪಿ ಜಿ ವಿತರಕರ ಸಂಖ್ಯೆಯೂ ದ್ವಿಗುಣಗೊಂಡಿದೆ. 2014 ರ ಮೊದಲು, ದೇಶದಲ್ಲಿ 14 ಸಾವಿರಕ್ಕಿಂತ ಕಡಿಮೆ ಎಲ್ ಪಿ ಜಿ ವಿತರಕರು ಇದ್ದರು. ಈಗ ಅವರ ಸಂಖ್ಯೆ 25 ಸಾವಿರಕ್ಕೂ ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ಗಳು ಈಗ ಪ್ರತಿಯೊಂದು ಗ್ರಾಮದಲ್ಲೂ ಸುಲಭವಾಗಿ ಲಭ್ಯವಿವೆ.

 

ಸ್ನೇಹಿತರೇ,

ನಿಮ್ಮೆಲ್ಲರಿಗೂ ಉರ್ಜಾ ಗಂಗಾ ಯೋಜನೆಯ ಪರಿಚಯವಿರಬಹುದು. ಈ ಯೋಜನೆಯು ಅನಿಲ ಆಧಾರಿತ ಆರ್ಥಿಕತೆಯ ಕಡೆಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೂರ್ವ ಭಾರತದ ರಾಜ್ಯಗಳಿಗೆ ಅನಿಲ ಪೈಪ್ಲೈನ್ ಗಳನ್ನು ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ. ಈಗ ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ಭಾರತದ ಅನೇಕ ರಾಜ್ಯಗಳಿಗೆ ಪೈಪ್ಗಳ ಮೂಲಕ ಅನಿಲ ತಲುಪುತ್ತಿದೆ. ಭಾರತ ಸರ್ಕಾರದ ಈ ಎಲ್ಲಾ ಪ್ರಯತ್ನಗಳು ನಗರ ಅಥವಾ ಗ್ರಾಮಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಪೈಪ್ಲೈನ್ ಗಳನ್ನು ಹಾಕುವುದು ಹಿಡಿದು ಅನಿಲ ಪೂರೈಕೆಯವರೆಗೆ ಪ್ರತಿಯೊಂದು ಹಂತದಲ್ಲೂ ಉದ್ಯೋಗ ಹೆಚ್ಚಾಗಿದೆ. ಅನಿಲ ಆಧಾರಿತ ಕೈಗಾರಿಕೆಗಳಿಗೂ ಇದರಿಂದ ಉತ್ತೇಜನ ಸಿಕ್ಕಿದೆ. ಈಗ ನಾವು ಕಡಿಮೆ ಬೆಲೆಯ, ಶುದ್ಧ ಮತ್ತು ಎಲ್ಲರಿಗೂ ಲಭ್ಯವಿರುವ ಇಂಧನವನ್ನು ಹೊಂದಿರುವ ಭಾರತದ ಕಡೆಗೆ ಸಾಗುತ್ತಿದ್ದೇವೆ.

 

ಸ್ನೇಹಿತರೇ,

ಪಶ್ಚಿಮ ಬಂಗಾಳವು ಭಾರತೀಯ ಸಂಸ್ಕೃತಿ, ಜ್ಞಾನ ಮತ್ತು ವಿಜ್ಞಾನದ ಪ್ರಮುಖ ಕೇಂದ್ರವಾಗಿದೆ. ಬಂಗಾಳದ ಅಭಿವೃದ್ಧಿಯಾಗದೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಲ್ಲಿ ಇಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದೆ. ಅದು ಪೂರ್ವ ಎಕ್ಸ್ಪ್ರೆಸ್ ವೇ ಆಗಿರಲಿ ಅಥವಾ ದುರ್ಗಾಪುರ ಎಕ್ಸ್ಪ್ರೆಸ್ ವೇ ಆಗಿರಲಿ, ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನ ಆಧುನೀಕರಣವಾಗಿರಲಿ ಅಥವಾ ಕೋಲ್ಕತ್ತಾ ಮೆಟ್ರೋದ ವಿಸ್ತರಣೆಯಾಗಿರಲಿ, ನ್ಯೂ ಜಲ್ಪೈಗುರಿ ನಿಲ್ದಾಣದ ಪುನಶ್ಚೇತನವಾಗಿರಲಿ ಅಥವಾ ಡೂವರ್ಸ್ ಮಾರ್ಗದಲ್ಲಿ ಹೊಸ ರೈಲುಗಳ ಕಾರ್ಯಾಚರಣೆಯಾಗಿರಲಿ, ಕೇಂದ್ರ ಸರ್ಕಾರವು ಬಂಗಾಳವನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಇಂದು ಪ್ರಾರಂಭವಾಗಿರುವ ಈ ಯೋಜನೆಯು ಕೇವಲ ಒಂದು ಪೈಪ್ ಲೈನ್ ಅಲ್ಲ; ಇದು ಪ್ರಗತಿಯ ಜೀವನಾಡಿ. ನಿಮ್ಮ ಜೀವನವನ್ನು ಸುಲಭಗೊಳಿಸುವುದು ಮತ್ತು ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುವುದು ನಮ್ಮ ಪ್ರಯತ್ನ. ನಮ್ಮ ಬಂಗಾಳವು ಅಭಿವೃದ್ಧಿಯ ಕಡೆಗೆ ತ್ವರಿತವಾಗಿ ಸಾಗಬೇಕೆಂಬ ಆಶಯದೊಂದಿಗೆ, ಮತ್ತೊಮ್ಮೆ, ಈ ಎಲ್ಲಾ ಸೌಲಭ್ಯಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈಗ 5 ನಿಮಿಷಗಳ ನಂತರ, ನಾನು ಇಲ್ಲಿಂದ ಒಂದು ತೆರೆದ ವೇದಿಕೆಗೆ ಹೋಗುತ್ತಿದ್ದೇನೆ. ನೀವು ನನ್ನಿಂದ ಬಹಳಷ್ಟು ವಿಷಯಗಳನ್ನು ಕೇಳಲು ಬಯಸುತ್ತೀರಿ, ಆ ವೇದಿಕೆಯು ಹೆಚ್ಚು ಸೂಕ್ತವಾಗಿದೆ, ಆದ್ದರಿಂದ ಉಳಿದ ವಿಷಯಗಳನ್ನು ನಾನು 5 ನಿಮಿಷಗಳ ನಂತರ ನಿಮಗೆ ಹೇಳುತ್ತೇನೆ. ಈ ಕಾರ್ಯಕ್ರಮದಲ್ಲಿ ಇಷ್ಟು ಸಾಕು, ನೀವು ಉತ್ಸಾಹ ಮತ್ತು ಹುಮ್ಮಸ್ಸಿನಿಂದ ಅಭಿವೃದ್ಧಿಯ ಈ ಪಯಣವನ್ನು ಮುಂದುವರಿಸಬೇಕು.

ಶುಭ ಹಾರೈಕೆಗಳು ಮತ್ತು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vande Bharat AC chair car fares much lower than those in China, Japan, France: Railway Minister Ashwini Vaishnaw

Media Coverage

Vande Bharat AC chair car fares much lower than those in China, Japan, France: Railway Minister Ashwini Vaishnaw
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಫೆಬ್ರವರಿ 2026
February 12, 2026

Sustainable, Strong, and Global: India's 2026 Surge Under PM Modi's Transformative Leadership