ಶೇರ್
 
Comments
“ಈ ವಿಮಾನ ನಿಲ್ದಾಣವು ಇಡೀ ಪ್ರದೇಶವನ್ನು ರಾಷ್ಟ್ರೀಯ ಗತಿಶಕ್ತಿ ಕ್ರಿಯಾ ಯೋಜನೆಯ ಪ್ರಬಲಶಕ್ತಿಯ ಸಂಕೇತವನ್ನಾಗಿ ಮಾಡಲಿದೆ”
ಪಶ್ಚಿಮ ಉತ್ತರಪ್ರದೇಶದ ಸಹಸ್ರಾರು ಜನರಿಗೆ ವಿಮಾನನಿಲ್ದಾಣ ಹೊಸ ಉದ್ಯೋಗವಕಾಶಗಳನ್ನು ಒದಗಿಸಲಿದೆ”
“ಡಬಲ್ ಎಂಜಿನ್ ಸರ್ಕಾರದ ಪ್ರಯತ್ನಗಳ ಪರಿಣಾಮ ಇಂದು ಉತ್ತರಪ್ರದೇಶ ಅತ್ಯಂತ ಹೆಚ್ಚು ಸಂಪರ್ಕಿತ ಪ್ರದೇಶವಾಗಲಿದೆ”
“ಮುಂಬರುವ ಮೂಲಸೌಕರ್ಯದಿಂದಾಗಿ ಖುರ್ಜಾ ಕರಕುಶಲಕರ್ಮಿಗಳು, ಮೀರತ್ ಕ್ರೀಡಾ ಉದ್ಯಮ, ಶಹರಾನ್ ಪುರ ಪೀಠೋಪಕರಣಗಳು, ಮೊರ್ದಾಬಾದ್ ನ ಹಿತ್ತಾಳೆ ಉದ್ಯಮ, ಆಗ್ರಾದ ಪಾದರಕ್ಷೆಗಳು ಮತ್ತು ಪೇಠಾ ಉದ್ಯಮಕ್ಕೆ ಭಾರಿ ಬೆಂಬಲ ಸಿಗಲಿದೆ”
“ಹಿಂದಿನ ಸರ್ಕಾರಗಳು ಸುಳ್ಳು ಕನಸುಗಳನ್ನು ತೋರಿಸಿದ್ದ ಉತ್ತರಪ್ರದೇಶದ ಇದೀಗ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಛಾಪು ಮೂಡಿಸುತ್ತಿದೆ”
“ಮೂಲಸೌಕರ್ಯ ನಮಗೆ ರಾಜನೀತಿ(ರಾಜಕಾರಣ)ಯ ಭಾಗವಲ್ಲ, ಆದರೆ ರಾಷ್ಟ್ರ(ರಾಷ್ಟ್ರೀಯ) ನೀತಿಯ ಭಾಗ”

ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಮತ್ತು ಕರ್ಮಯೋಗಿ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಜಿ, ನಮ್ಮ ಚೈತನ್ಯಶಾಲಿ ಹಳೆಯ ಸಹೋದ್ಯೋಗಿ ಮತ್ತು ಉಪಮುಖ್ಯಮಂತ್ರಿ ಶ್ರೀ ಕೇಶವಪ್ರಸಾದ್ ಮೌರ್ಯ ಜಿ, ನನ್ನ ಸಂಪುಟ ಸಹೋದ್ಯೋಗಿಗಳಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಜಿ, ಜನರಲ್ ವಿ.ಕೆ. ಸಿಂಗ್ ಜಿ, ಸಜೀವ್ ಬಲ್ಯಾನ್ ಜಿ, ಎಸ್.ಪಿ. ಸಿಂಗ್ ಬಘೇಲ್ ಜಿ ಮತ್ತು ಬಿ ಎಲ್ ವರ್ಮ ಜಿ, ಉತ್ತರ ಪ್ರದೇಶ ಸರ್ಕಾರದ ಸಚಿವರಾದ ಶ್ರೀ ಲಕ್ಷ್ಮಿನಾರಾಯಣ್ ಚೌಧರಿ ಜಿ, ಶ್ರೀ ಜೈಪ್ರತಾಪ್ ಸಿಂಗ್ ಜಿ, ಶ್ರೀಕಾಂತ್ ಶರ್ಮಾ ಜಿ, ಭುಪೇಂದ್ರ ಚೌಧರಿ ಜಿ, ಶ್ರೀ ನಂದಗೋಪಾಲ್ ಗುಪ್ತ ಜಿ, ಅನಿಲ್ ಶರ್ಮಾ ಜಿ, ಧರಂಸಿಂಗ್ ಸೈನಿ ಜಿ, ಅಶೋಕ್ ಕಠಾರಿಯಾ ಜಿ ಮತ್ತು ಶ್ರೀ ಜಿ.ಎಸ್. ಧರ್ಮೇಶ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿಗಳಾದ ಡಾ. ಮಹೇಶ್ ಶರ್ಮಾ ಜಿ, ಸುರೇಂದ್ರ ಸಿಂಗ್ ನಗರ್ ಜಿ, ಶ್ರೀ ಭೋಲಾ ಸಿಂಗ್ ಜಿ, ಸ್ಥಳೀಯ ಶಾಸಕ  ಶ್ರೀ ಧೀರೇಂದ್ರ ಸಿಂಗ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲಾ ಜನಪ್ರತಿನಿಧಿಗಳು ಹಾಗೂ ನಮ್ಮೆಲ್ಲರನ್ನು ಆಶೀರ್ವದಿಸಲು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರ, ಸಹೋದರಿಯರೆ.....

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಶಂಕುಸ್ಥಾಪನೆ ನೆರವೇರಿಸುವ ಈ ಸುಸಂದರ್ಭದಲ್ಲಿ ನಿಮ್ಮೆಲ್ಲರಿಗೂ, ದೇಶದ ಮಹಾಜನತೆಗೆ ಮತ್ತು ಉತ್ತರ ಪ್ರದೇಶದ ಸಹೋದರ ಸಹೋದರಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ದೌಜಿ ಜಾತ್ರೆ ಅಥವಾ ಉತ್ಸವಕ್ಕೆ ಹೆಸರುವಾಸಿಯಾಗಿರುವ ಜೇವರ್ ಹೆಸರು ಇಂದು ಅಂತಾರಾಷ್ಟ್ರೀಯ ಭೂಪಟದಲ್ಲಿ ದಾಖಲಾಯಿತು. ದೆಹಲಿ-ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ಲಕ್ಷಾಂತರ ಜನರು ಈ ವಿಮಾನ ನಿಲ್ದಾಣದಿಂದ ಅಪಾರ ಪ್ರಯೋಜನ ಪಡೆಯಲಿದ್ದಾರೆ. ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದಕ್ಕೆ ನಾನು ನಿಮ್ಮೆಲ್ಲರನ್ನು, ಇಡೀ ದೇಶದ ಜನತೆಯನ್ನು ಮನಪೂರ್ವಕವಾಗಿ  ಅಭಿನಂದಿಸುತ್ತೇನೆ.

ಸ್ನೇಹಿತರೆ,

21ನೇ ಶತಮಾನದ ನವ ಭಾರತವು ಆಧುನಿಕ ಸುಸಜ್ಜಿತ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿದೆ. ಉತ್ತಮ ರಸ್ತೆಗಳು, ರೈಲು ಮಾರ್ಗಗಳು ಮತ್ತು ವಿಮಾನ ನಿಲ್ದಾಣಗಳು ಕೇವಲ ಮೂಲಸೌಕರ್ಯ ಯೋಜನೆಗಳಾಗಿರದೆ, ಅವು ಆ ಪ್ರದೇಶ ಮತ್ತು ಜನರ ಜೀವನವನ್ನೇ ಸಂಪೂರ್ಣ ಪರಿವರ್ತಿಸುತ್ತಿವೆ. ಪ್ರತಿಯೊಬ್ಬರೂ ಸಹ ಬಡವನೇ ಇರಲಿ, ಮಧ್ಯಮ ವರ್ಗವೇ ಇರಲಿ, ರೈತರು, ವರ್ತಕರು, ಕಾರ್ಮಿಕರು ಅಥವಾ ಉದ್ಯಮಶೀಲರು ಸೇರಿ ನಾನಾ ವರ್ಗಗಳ ಜನರು ಇವುಗಳ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಸಂಪರ್ಕದ ದೃಷ್ಟಿಯಿಂದ ನೋಡಿದರೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮಾದರಿ ಏರ್ ಪೋರ್ಟ್ ಆಗಲಿದೆ. ಇಲ್ಲಿಂದ ನೇರವಾಗಿ ಟ್ಯಾಕ್ಸಿ, ಮೆಟ್ರೋ ಮತ್ತು ರೈಲಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ, ನೀವು ನೇರವಾಗಿ ಯಮುನಾ ಎಕ್ಸ್‌ಪ್ರೆಸ್‌ವೇ ಅಥವಾ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಗೆ ಹೋಗಬಹುದು. ನೀವು ಉತ್ತರ ಪ್ರದೇಶ, ದೆಹಲಿ ಅಥವಾ ಹರಿಯಾಣ ಸೇರಿದಂತೆ ಎಲ್ಲಿಯಾದರೂ ಹೋಗಬೇಕಾದರೆ, ಅಲ್ಪ ಸಮಯದಲ್ಲಿ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ತಲುಪಬಹುದು. ಈಗ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕೂಡ ಸದ್ಯದಲ್ಲೇ ಸಿದ್ಧವಾಗಲಿದೆ. ಇದರಿಂದ ಅನೇಕ ನಗರಗಳನ್ನು ತಲುಪಲು ಸುಲಭವಾಗುತ್ತದೆ. ಇದಲ್ಲದೆ, ಇಲ್ಲಿಂದ ಸಮರ್ಪಿತ ಸರಕು ಸಾಗಣೆ ಕಾರಿಡಾರ್‌ಗೆ ನೇರ ಸಂಪರ್ಕ ಸಿಗಲಿದೆ. ಒಂದು ರೀತಿಯಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಯ ಪ್ರವೇಶ ದ್ವಾರ ಆಗಲಿದೆ. ಅಲ್ಲದೆ, ಇಡೀ ಪ್ರದೇಶವು ರಾಷ್ಟ್ರೀಯ ಗತಿಶಕ್ತಿ ಸಮಗ್ರ ಯೋಜನೆಯ ಪ್ರಬಲ ಪ್ರತಿಫಲನವಾಗಲಿದೆ.

ಸ್ನೇಹಿತರೆ,

ದೇಶದ ವಾಯುಯಾನ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವಾಗ ಮತ್ತು ಭಾರತೀಯ ಕಂಪನಿಗಳು ನೂರಾರು ಹೊಸ ವಿಮಾನಗಳನ್ನು ಖರೀದಿಸುತ್ತಿರುವ ಈ ಕಾಲಘಟ್ಟದಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದು ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ವಿಮಾನ ನಿಲ್ದಾಣವು ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆಯ ದೇಶದ ಅತಿದೊಡ್ಡ ಕೇಂದ್ರವಾಗಿ ತಲೆಎತ್ತಲಿದೆ. 40 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, ನಿರ್ವಹಣೆ, ದುರಸ್ತಿ ಮತ್ತು ವೈಮಾನಿಕ ತಾಂತ್ರಿಕ ಪರೀಕ್ಷಾ ಸೌಲಭ್ಯ(ಎಂಆರ್ ಒ) ಸೇವೆ ಇಲ್ಲಿ ಆರಂಭವಾಗಿ ದೇಶ ಮತ್ತು ವಿದೇಶಗಳ ಸಾವಿರಾರು ವಿಮಾನಗಳಿಗೆ ಸೇವೆ ಒದಗಿಸಲಿದೆ, ಜತೆಗೆ ಸಾವಿರಾರು ಯುವಕರಿಗೆ ಉದ್ಯೋಗ ನೀಡಲಿದೆ.

ನೀವೆ ಊಹಿಸಿಕೊಳ್ಳಿ, ಇಂದಿಗೂ ನಾವು ನಮ್ಮ ಶೇಕಡ 85ರಷ್ಟು ವಿಮಾನಗಳನ್ನು ಎಂಆರ್ ಒ ಸೇವೆಗಳಿಗಾಗಿ ವಿದೇಶಕ್ಕೆ ಕಳುಹಿಸುತ್ತಿದ್ದೇವೆ. ಈ ಸೇವೆಗೆ ಪ್ರತಿ ವರ್ಷ 15,000 ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಆದರೆ ನೋಯ್ಡಾ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಿರ್ಮಾಣ ಯೋಜನೆಗೆ 30,000 ಕೋಟಿ ರೂ. ತಗುಲುತ್ತಿದೆ. ಪ್ರತಿ ವರ್ಷ ಸುಮಾರು 15,000 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಹಣವು ವಿಮಾನಗಳ ದುರಸ್ತಿಗಾಗಿ ಹೊರರಾಷ್ಟ್ರಗಳಿಗೆ ಹೋಗುತ್ತಿದೆ. ಹಾಗಾಗಿ, ಹಣ ಪೋಲಾಗುವುದನ್ನು ತಡೆಯಲು,  ಪರಿಸ್ಥಿತಿಯನ್ನು ಬದಲಾಯಿಸಲು ಈ ವಿಮಾನ ನಿಲ್ದಾಣ ಸಹಾಯ ಮಾಡಲಿದೆ.

ಸಹೋದರ, ಸಹೋದರಿಯರೆ,

ಇದೇ ಮೊದಲ ಬಾರಿಗೆ, ಈ ವಿಮಾನ ನಿಲ್ದಾಣದ ಮೂಲಕ ದೇಶದಲ್ಲಿ ಏಕೀಕೃತ ಬಹುಮಾದರಿ ಸರಕು ಸಾಗಣೆಯ ಸಂಪರ್ಕ ಜಾಲ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಇದು ಇಡೀ ಈ ಪ್ರದೇಶದ ಅಭಿವೃದ್ಧಿಗೆ ಹೊಸ ಚೈತನ್ಯ ನೀಡಲಿದೆ. ಸಮುದ್ರದ ಆಸುಪಾಸಿನ ರಾಜ್ಯಗಳಿಗೆ ಬಂದರುಗಳು ಪ್ರಮುಖ ಆಸ್ತಿ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲು ಇದು ತುಂಬಾ ಉಪಯುಕ್ತ. ಆದರೆ ಉತ್ತರ ಪ್ರದೇಶದಂತಹ ಭೂ-ಪ್ರದೇಶದ ರಾಜ್ಯಗಳಿಗೆ ವಿಮಾನ ನಿಲ್ದಾಣಗಳು ಬಂದರಿನಷ್ಟೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಅಲಿಘರ್, ಮಥುರಾ, ಮೀರತ್, ಆಗ್ರಾ, ಬಿಜ್ನೋರ್, ಮೊರಾದಾಬಾದ್ ಮತ್ತು ಬರೇಲಿಯಂತಹ ನಗರಗಳಲ್ಲಿ ಅನೇಕ ಕೈಗಾರಿಕಾ ಪ್ರದೇಶಗಳಿವೆ. ಸೇವಾ ವಲಯದ ಉದ್ಯಮಗಳ ಬಹುದೊಡ್ಡ ಪರಿಸರ ವ್ಯವಸ್ಥೆಯೇ ಇಲ್ಲಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗವು ಕೃಷಿ ವಲಯದಲ್ಲಿ ಗಮನಾರ್ಹ ಪಾಲು ಹೊಂದಿದೆ. ವಿಮಾನ ನಿಲ್ದಾಣ ಸ್ಥಾಪನೆಯಿಂದ ಈ ಪ್ರದೇಶಗಳ ಕೃಷಿ ಉತ್ಪಾದನಾ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಲಿದೆ. ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ರಫ್ತುದಾರರನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ  ನೇರ ಸಂಪರ್ಕ ಒದಗಿಸುತ್ತದೆ. ಇನ್ನುಮುಂದೆ ರೈತರು, ವಿಶೇಷವಾಗಿ ಸಣ್ಣ ರೈತರು ಹಣ್ಣುಗಳು, ತರಕಾರಿಗಳು ಮತ್ತು ಮೀನುಗಳಂತಹ ಬೇಗನೇ ಕೊಳೆಯುವ ಉತ್ಪನ್ನಗಳನ್ನು ತ್ವರಿತವಾಗಿ ರಫ್ತು ಮಾಡಲು ಸಾಧ್ಯವಾಗುತ್ತದೆ. ಖುರ್ಜಾದ ಕಲಾವಿದರು, ಮೀರತ್‌ನ ಕ್ರೀಡಾ ಉದ್ಯಮಗಳು, ಸಹರಾನ್‌ಪುರದ ಪೀಠೋಪಕರಣ ತಯಾರಕರು, ಮೊರಾದಾಬಾದ್‌ನ ಹಿತ್ತಾಳೆ ಉದ್ಯಮ, ಆಗ್ರಾದಲ್ಲಿ ಪಾದರಕ್ಷೆಗಳು ಮತ್ತು 'ಪೇಠ' ಸಿಹಿ ತಯಾರಿಕೆಯಲ್ಲಿ  ತೊಡಗಿಸಿಕೊಂಡಿರುವವರು ಉತ್ತರ ಪ್ರದೇಶದ ಪಶ್ಚಿಮ ಭಾಗದ ಅನೇಕ ಎಂಎಸ್‌ಎಂಇಗಳು ವಿದೇಶಿ ಮಾರುಕಟ್ಟೆಗಳನ್ನು ಪ್ರವೇಶಿಸಲು ಇನ್ನಷ್ಟು ಸುಲಭವಾಗಲಿದೆ.

ಸ್ನೇಹಿತರೆ,

ಯಾವುದೇ ಪ್ರದೇಶದಲ್ಲಿ ವಿಮಾನ ನಿಲ್ದಾಣಗಳು ಬದಲಾವಣೆಯ ಚಕ್ರವನ್ನು ತರುತ್ತವೆ, ಅಲ್ಲದೆ ಅವು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ವಿಮಾನ ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ವಿಮಾನ ನಿಲ್ದಾಣವನ್ನು ಸುಗಮವಾಗಿ ನಡೆಸಲು ಸಾವಿರಾರು ಜನರ ಅಗತ್ಯವಿದೆ. ಈ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಉತ್ತರ ಪ್ರದೇಶಕ್ಕೆ ಸಮೀಪ ಇರುವುದರಿಂದ, ದೆಹಲಿಯಲ್ಲಿ ವಿಮಾನ ನಿಲ್ದಾಣವಿದೆ ಹಾಗಾಗಿ, ಉತ್ತರ ಪ್ರದೇಶದ ವಿವಿಧ ಭಾಗಗಳಿಗೆ ವಿಮಾನ ನಿಲ್ದಾಣ ಬೇಕಿಲ್ಲ ಎಂಬ ಭಾವನೆ ಇತ್ತು. ನಾವು ಆ ಗ್ರಹಿಕೆಯನ್ನು ಬದಲಾಯಿಸಿದ್ದೇವೆ. ಎಲ್ಲೆಡೆ ಜನರ ಅನುಕೂಲಕ್ಕಾಗಿ ಏರ್ ಪೋರ್ಟ್ ಸ್ಥಾಪಿಸುತ್ತಿದ್ದೇವೆ. ನಾವು ಪ್ರಯಾಣಿಕರ ಸೇವೆಗಳಿಗಾಗಿ ಹಿಂಡನ್ ವಿಮಾನ ನಿಲ್ದಾಣವನ್ನು ಕಾರ್ಯಗತಗೊಳಿಸಿದ್ದೇವೆ. ಅದೇ ರೀತಿ ಹರಿಯಾಣದ ಹಿಸಾರ್‌ನಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದೆ.

ಸಹೋದರ, ಸಹೋದರಿಯರೆ,

ವಾಯು ಸಂಪರ್ಕವು ವಿಸ್ತರಿಸಿದಾಗ, ಸಹಜವಾಗಿ ಪ್ರವಾಸೋದ್ಯಮವೂ ಅಭಿವೃದ್ಧಿಗೊಳ್ಳುತ್ತದೆ. ಮಾತಾ ವೈಷ್ಣೋದೇವಿ ಮತ್ತು ಕೇದಾರನಾಥ ಯಾತ್ರೆಗೆ ಹೆಲಿಕಾಪ್ಟರ್ ಸೇವೆಗಳನ್ನು ಪರಿಚಯಿಸಿದ ನಂತರ ಭಕ್ತರ ಸಂಖ್ಯೆಯಲ್ಲಿ ನಿರಂತರ ಹೆಚ್ಚಳವಾಗುವುದನ್ನು ನಾವೆಲ್ಲರೂ ನೋಡಿದ್ದೇವೆ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ಮತ್ತು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಅದೇ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ.

ಸ್ನೇಹಿತರೆ,

ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳ ನಂತರ ಉತ್ತರ ಪ್ರದೇಶ ರಾಜ್ಯವು ಏನನ್ನು ಪಡೆಯಬೇಕು ಎಂದು ಬಯಸುತ್ತಿತ್ತೋ ಇದೀಗ ಅವುಗಳನ್ನು ಪಡೆಯಲಾರಂಭಿಸಿದೆ. ಜೋಡಿ ಇಂಜಿನ್ ಸರ್ಕಾರಗಳ ನಿರಂತರ ಪ್ರಯತ್ನದಿಂದಾಗಿ ಇಂದು ಉತ್ತರ ಪ್ರದೇಶವು ದೇಶದ ಅತ್ಯಂತ ಸಂಪರ್ಕಿತ ಪ್ರದೇಶವಾಗಿ ಬದಲಾಗುತ್ತಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆಗಳ ಕಾಮಗಾರಿಗಳು ನಡೆಯುತ್ತಿವೆ. ಅದು ಕ್ಷಿಪ್ರ ರೈಲು ಕಾರಿಡಾರ್ ಇರಬಹುದು, ಎಕ್ಸ್‌ಪ್ರೆಸ್‌ವೇ, ಮೆಟ್ರೋ ಸಂಪರ್ಕ ಅಥವಾ ಪೂರ್ವ ಮತ್ತು ಪಶ್ಚಿಮ ಸಮುದ್ರಗಳೊಂದಿಗೆ ರಾಜ್ಯವನ್ನು ಸಂಪರ್ಕಿಸುವ ಸಮರ್ಪಿತ ಸರಕು ಸಾಗಣೆ ಕಾರಿಡಾರ್ ಆಗಿರಬಹುದು, ಇವು ಆಧುನಿಕ ಉತ್ತರ ಪ್ರದೇಶದ ಹೊಸ ಗುರುತುಗಳಾಗಿವೆ. ಉತ್ತರ ಪ್ರದೇಶವು ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ನಂತರವೂ ದೂಷಣೆಗೆ ಒಳಗಾಗಿತ್ತು. ಬಡತನ, ಜಾತಿ ಆಧರಿತ ರಾಜಕೀಯ, ಸಾವಿರಾರು ಕೋಟಿ ರೂಪಾಯಿ ಹಗರಣಗಳು, ಹದಗೆಟ್ಟ ರಸ್ತೆಗಳು, ಕೈಗಾರಿಕೆಗಳ ಕೊರತೆ, ಸ್ಥಗಿತಗೊಂಡಿರುವ ಅಭಿವೃದ್ಧಿ ಯೋಜನೆಗಳು, ಅಪರಾಧಿಗಳು, ಮಾಫಿಯಾ ಗ್ಯಾಂಗ್‌ಗಳು ಮತ್ತು ಅವಕಾಶವಾದಿ ರಾಜಕೀಯ ಮೈತ್ರಿಗಳು ಇತ್ಯಾದಿಗಳೇ ತಾಂಡವವಾಡುತ್ತಿದ್ದವು. ಉತ್ತರ ಪ್ರದೇಶದ ಸಮರ್ಥ ನಾಗರಿಕರು ಯಾವಾಗಲೂ ನಮ್ಮ ರಾಜ್ಯಕ್ಕೆ ಎಂದಾದರೂ ಸಕಾರಾತ್ಮಕ ವರ್ಚಸ್ಸು ಬರುತ್ತದಾ ಎಂದು ಪ್ರಶ್ನಿಸುತ್ತಿದ್ದರು. ಅಷ್ಟರಮಟ್ಟಿಗೆ ಈ ರಾಜ್ಯ ಹಿಂದುಳಿದಿತ್ತು.

ಸಹೋದರ ಸಹೋದರಿಯರೆ,

ಹಿಂದಿನ ಸರ್ಕಾರಗಳು ಉತ್ತರ ಪ್ರದೇಶವನ್ನು ಕಗ್ಗತ್ತಲೆಯಲ್ಲಿಟ್ಟಿದ್ದವು. ಆದರೆ ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದೆ. ಇಂದು ಯುಪಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಮತ್ತು ಶಿಕ್ಷಣ ಸಂಸ್ಥೆಗಳು ನಿರ್ಮಾಣವಾಗುತ್ತಿವೆ. ಯುಪಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳು, ರೈಲು ಸಂಪರ್ಕ ಯೋಜನೆಗಳು ನಡೆಯುತ್ತಿದ್ದು, ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಯ ಗಮ್ಯ ತಾಣವಾಗುತ್ತಿದೆ. ಅದಕ್ಕಾಗಿಯೇ ಇಂದು ದೇಶ ಮತ್ತು ಜಾಗತಿಕ ಹೂಡಿಕೆದಾರರು ಉತ್ತರ ಪ್ರದೇಶ ಎಂದರೆ ಅತ್ಯುತ್ತಮ ಸೌಲಭ್ಯಗಳು ಮತ್ತು ಸ್ಥಿರ ಹೂಡಿಕೆಯ ಸುಂದರ ತಾಣ ಎಂದು ವರ್ಣಿಸುತ್ತಿದ್ದಾರೆ. ಯುಪಿಯ ಅಂತಾರಾಷ್ಟ್ರೀಯ ವಿಮಾನ ಸಂಪರ್ಕವು ಅಂತಾರಾಷ್ಟ್ರೀಯ ಗುರುತಿಗೆ ಹೊಸ ಆಯಾಮಗಳನ್ನು ನೀಡುತ್ತಿದೆ. ಮುಂದಿನ 2-3 ವರ್ಷಗಳಲ್ಲಿ ಈ ವಿಮಾನ ನಿಲ್ದಾಣವು ಕಾರ್ಯ ನಿರ್ವಹಿಸಲು ಪ್ರಾರಂಭಿಸಿದಾಗ ಉತ್ತರ ಪ್ರದೇಶವು  5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯವಾಗಲಿದೆ.

ಸ್ನೇಹಿತರೆ,

ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿದ್ದ ಹಿಂದಿನ ಸರ್ಕಾರಗಳು ಪಶ್ಚಿಮ ಉತ್ತರ ಪ್ರದೇಶದ ಅಭಿವೃದ್ಧಿಯನ್ನು ಹೇಗೆ ನಿರ್ಲಕ್ಷಿಸಿವೆ ಎಂಬುದಕ್ಕೆ ಜೇವರ್ ವಿಮಾನ ನಿಲ್ದಾಣವೇ ಉದಾಹರಣೆಯಾಗಿದೆ. ಯುಪಿಯಲ್ಲಿದ್ದ ಬಿಜೆಪಿ ಸರ್ಕಾರ 2 ದಶಕಗಳ ಹಿಂದೆಯೇ ಈ ಯೋಜನೆಯ ಕನಸು ಕಂಡಿತ್ತು. ಆದರೆ ಈ ವಿಮಾನ ನಿಲ್ದಾಣವು ಹಲವು ವರ್ಷಗಳ ಕಾಲ ಕೇಂದ್ರದಲ್ಲಿದ್ದ ಮತ್ತು ರಾಜ್ಯದಲ್ಲಿದ್ದ ಹಿಂದಿನ ಸರ್ಕಾರಗಳ ಕಿತ್ತಾಟದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಈ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಬೇಕು ಎಂದು ಹಿಂದಿನ ರಾಜ್ಯ ಸರ್ಕಾರವು ಅಂದಿನ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ ಈಗ ಜೋಡಿ ಇಂಜಿನ್ ಸರ್ಕಾರದ ಪ್ರಯತ್ನದ ಫಲವಾಗಿ, ಇಂದು ನಾವು ಅದೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ.

ಸ್ನೇಹಿತರೆ,

ಇಂದು ನಾನು ನಿಮಗೆ ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ಮೋದಿ-ಯೋಗಿ ಬಯಸಿದ್ದರೆ,  2017ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣವೇ ವಿಮಾನ ನಿಲ್ದಾಣ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ, ಛಾಯಾಚಿತ್ರಗಳನ್ನು ಕ್ಲಿಕ್ಕಿಸಿ ಪತ್ರಿಕಾ ಪ್ರಕಟಣೆ ಹೊರಡಿಸಬಹುದಿತ್ತು. ಹಾಗೆ ಮಾಡಿದ್ದರೆ, ಜನರು ತಪ್ಪಾಗಿ ಗ್ರಹಿಸುತ್ತಿರಲಿಲ್ಲ. ಹಿಂದಿನ ಸರ್ಕಾರಗಳು ಮಾಡಿದ್ದು ಅದನ್ನೇ. ತಮ್ಮ ರಾಜಕೀಯ ಲಾಭಕ್ಕಾಗಿ ತರಾತುರಿಯಲ್ಲಿ ಮೂಲಸೌಕರ್ಯ ಯೋಜನೆಗಳ ಘೋಷಣೆಗಳನ್ನು ಮಾಡುತ್ತಿದ್ದರು. ದಾಖಲೆ ಪತ್ರಗಳ ಮೇಲೆ ಯೋಜನೆಗಳು ಸಿದ್ಧವಾಗುತ್ತಿದ್ದವು. ಆದರೆ ಅವು ಕಾರ್ಯರೂಪಕ್ಕೆ ಬರಲೇ ಇಲ್ಲ. ಯೋಜನೆಗಳಿಗೆ ಹೇಗೆ ಚಾಲನೆ ನೀಡಬೇಕು, ಹಣವನ್ನು ಎಲ್ಲಿಂದ ಹೊಂದಿಸಬೇಕು ಎಂಬ ಬಗ್ಗೆ ಚಿಂತಿಸಲೇ ಇಲ್ಲ. ಇದರ ಪರಿಣಾಮವಾಗಿ, ಯೋಜನೆಗಳು ದಶಕಗಳವರೆಗೆ ಸ್ಥಗಿತಗೊಂಡವು. ಅವರು ಘೋಷಣೆ ಮಾಡಿದ ಯೋಜನೆಗಳ ವೆಚ್ಚ ಅನೇಕ ಪಟ್ಟು ಹೆಚ್ಚಾಗುತ್ತದೆ, ಕಾಮಗಾರಿ ವಿಳಂಬಕ್ಕೆ ಇತರರನ್ನು ದೂಷಿಸುವ ಕಸರತ್ತು ನಡೆಯುತ್ತಲೇ ಬಂತು. ಆದರೆ ನಾವು ಹಾಗೆ ಮಾಡುತ್ತಿಲ್ಲ. ಏಕೆಂದರೆ ಮೂಲಸೌಕರ್ಯಗಳು ನಮಗೆ ರಾಜಕೀಯದ ಭಾಗವಲ್ಲ. ಆದರೆ ಅವು ರಾಷ್ಟ್ರೀಯ ನೀತಿಯ ಭಾಗವಾಗಿವೆ. ಭಾರತದ ಉಜ್ವಲ ಭವಿಷ್ಯ ನಮ್ಮ ಜವಾಬ್ದಾರಿಯಾಗಿದೆ. ಯೋಜನೆಗಳು ಸಿಲುಕಿಕೊಳ್ಳದಂತೆ, ಸ್ಥಗಿತವಾಗದಂತೆ ಮತ್ತು ಗುರಿಯಿಂದ ದೂರ ಹೋಗದಂತೆ ನಾವು ಖಚಿತಪಡಿಸುತ್ತಿದ್ದೇವೆ. ಮೂಲಸೌಕರ್ಯ ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ವಿಳಂಬ ಮಾಡಿದರೆ ದಂಡ ವಿಧಿಸುತ್ತಿದ್ದೇವೆ.

ಸ್ನೇಹಿತರೆ,

ಹಿಂದಿನ ಸರ್ಕಾರಗಳ ಅವಧಿಯಲ್ಲಿ ರೈತರ ಜಮೀನು ಸ್ವಾಧೀನ  ಅವ್ಯವಹಾರವೇ ಯೋಜನೆಗಳ ವಿಳಂಬಕ್ಕೆ ಬಹುದೊಡ್ಡ ಅಡ್ಡಿಯಾಗಿತ್ತು. ಇಲ್ಲಿಯೂ ಸಹ ಹಿಂದಿನ ಸರ್ಕಾರಗಳು ರೈತರಿಂದ ಇಂತಹ ಅನೇಕ ಯೋಜನೆಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದವು. ಆದರೆ ಪರಿಹಾರ ನೀಡಿಕೆ ಸಮಸ್ಯೆಗಳಿಂದಾಗಿ ಯೋಜನೆಗಳು ಹಾಳಾದವು. ಆದರೆ ಸ್ವಾಧೀನ ಪಡಿಸಿಕೊಂಡ ರೈತರ ಭೂಮಿ ವರ್ಷಗಳ ಕಾಲದಿಂದಲೂ ಖಾಲಿ ಉಳಿದಿದೆ. ಹಾಗಾಗಿ, ನಾವು ರೈತರ ಹಿತದೃಷ್ಟಿಯಿಂದ, ಯೋಜನೆಯ ಹಿತದೃಷ್ಟಿಯಿಂದ ಮತ್ತು ದೇಶದ ಹಿತದೃಷ್ಟಿಯಿಂದ ಈ ಅಡೆತಡೆಗಳನ್ನು ನಿವಾರಿಸಿದ್ದೇವೆ. ಸರ್ಕಾರದ ಆಡಳಿತವು ಇದೀಗ ರೈತರಿಂದ ಸಮಯಕ್ಕೆ ಸರಿಯಾಗಿ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವುದನ್ನು ಖಚಿತಪಡಿಸುತ್ತಿದೆ. ಇದರ ಫಲವಾಗಿ ನಾವಿಂದು 30,000 ಕೋಟಿ ರೂಪಾಯಿ ಬೃಹತ್ ಮೊತ್ತದ ಈ ಯೋಜನೆಗೆ ಶಂಕುಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.

ಸ್ನೇಹಿತರೆ,

ಇಂದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗುಣಮಟ್ಟದ ಮೂಲಸೌಕರ್ಯ ಮತ್ತು ಅತ್ಯುತ್ತಮ ಸೌಲಭ್ಯಗಳನ್ನು ಖಾತ್ರಿಪಡಿಸಲಾಗುತ್ತಿದೆ. ಉಡಾನ್ ಯೋಜನೆಯಿಂದಾಗಿ ದೇಶದ ಸಾಮಾನ್ಯ ನಾಗರಿಕನ ವಿಮಾನ ಪ್ರಯಾಣದ ಕನಸು ಇಂದು ನನಸಾಗುತ್ತಿದೆ. ತನ್ನ ಮನೆಯ ಸಮೀಪವಿರುವ ವಿಮಾನ ನಿಲ್ದಾಣದಿಂದ ಮೊದಲ ಬಾರಿಗೆ ತನ್ನ ಹೆತ್ತವರೊಂದಿಗೆ ಪ್ರಯಾಣಿಸಿದ್ದೇನೆ ಎಂದು ಯಾರಾದರೂ ಸಂತೋಷದಿಂದ ಹೇಳಿದಾಗ ಮತ್ತು ಅವರು ತಮ್ಮ ಫೋಟೊ ಹಂಚಿಕೊಂಡಾಗ ನಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತಿವೆ ಎಂಬ ಸಂತೃಪ್ತಿ ಸಿಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಉತ್ತರ ಪ್ರದೇಶದ 8 ವಿಮಾನ ನಿಲ್ದಾಣಗಳಿಂದ ವಿಮಾನಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ. ಜತೆಗೆ, ದೇಶದ ವಿವಿಧೆಡೆ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ.

ಸಹೋದರ ಸಹೋದರಿಯರೆ,

ನಮ್ಮ ದೇಶದ ಕೆಲವು ರಾಜಕೀಯ ಪಕ್ಷಗಳು ಯಾವಾಗಲೂ ತಮ್ಮ ಸ್ವಹಿತಾಸಕ್ತಿಯನ್ನು ಪ್ರಧಾನವಾಗಿ ಇಟ್ಟುಕೊಂಡಿವೆ. ಅಭಿವೃದ್ಧಿ ಎಂದರೆ ಅವರ ಗ್ರಹಿಕೆಯು ಸ್ವಾರ್ಥ ಮತ್ತು ಅವರ ಕುಟುಂಬಗಳು ವಾಸಿಸುವ ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ನಾವು ದೇಶ ಮೊದಲು ಮನೋಭಾವವನ್ನು ಅನುಸರಿಸುತ್ತಿದ್ದೇವೆ. ಸಬ್ಕಾಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ನಮ್ಮ ನಿತ್ಯದ ಮಂತ್ರವಾಗಿದೆ. ಕೆಲವು ರಾಜಕೀಯ ಪಕ್ಷಗಳು ಕಳೆದ ಕೆಲವು ವಾರಗಳಲ್ಲಿ ಮಾಡುತ್ತಿರುವ ರಾಜಕೀಯವನ್ನು ಉತ್ತರ ಪ್ರದೇಶ ಮತ್ತು ದೇಶದ ಜನತೆ ಗಮನಿಸಿದ್ದಾರೆ. ಆದರೆ ಭಾರತವು ಅಭಿವೃದ್ಧಿಯ ಪಥದಿಂದ ದೂರ ಸರಿದಿಲ್ಲ. ಕೆಲವೇ ದಿನಗಳ ಹಿಂದೆ, ಭಾರತವು 100 ಕೋಟಿ ಲಸಿಕೆ ಡೋಸ್‌ಗಳನ್ನು ನೀಡುವ ಕಠಿಣ ಮೈಲಿಗಲ್ಲನ್ನು ದಾಟಿದೆ. ಈ ತಿಂಗಳ ಆರಂಭದಲ್ಲಿ ಭಾರತವು, 2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಗುರಿ ಘೋಷಿಸಿತು. ಕೆಲವು ದಿನಗಳ ಹಿಂದೆಯಷ್ಟೇ ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ  ಉದ್ಘಾಟಿಸಲಾಯಿತು. ಉತ್ತರ ಪ್ರದೇಶದಲ್ಲಿ 9 ವೈದ್ಯಕೀಯ ಕಾಲೇಜುಗಳನ್ನು ಏಕಕಾಲದಲ್ಲಿ ಪ್ರಾರಂಭಿಸುವ ಮೂಲಕ ದೇಶದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲಾಗಿದೆ. ಕಳೆದ ವಾರವಷ್ಟೇ, ಮಹೋಬಾದಲ್ಲಿ ಹೊಸ ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳನ್ನು ಉದ್ಘಾಟಿಸಲಾಯಿತು. ಆದರೆ ರಕ್ಷಣಾ ಕಾರಿಡಾರ್‌ ಕಾರ್ಯವು ಝಾನ್ಸಿಯಲ್ಲಿ ವೇಗ ಪಡೆದುಕೊಂಡಿತು. ಜತೆಗೆ, ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಮಾರ್ಗವನ್ನು ಜನರಿಗೆ ಸಮರ್ಪಿಸಲಾಗಿದೆ. ಮಧ್ಯಪ್ರದೇಶದಲ್ಲಿ ಅತ್ಯಂತ ಭವ್ಯವಾದ ಆಧುನಿಕ ರೈಲು ನಿಲ್ದಾಣವನ್ನು ಉದ್ಘಾಟಿಸಲಾಯಿತು. ಈ ತಿಂಗಳಲ್ಲೇ ಮಹಾರಾಷ್ಟ್ರದ ಪಂಢರಾಪುರದಲ್ಲಿ ನೂರಾರು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆದಿದೆ. ಇಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಕೆಲವು ರಾಜಕೀಯ ಪಕ್ಷಗಳ ಸ್ವಾರ್ಥ ನಮ್ಮ ದೇಶಭಕ್ತಿ ಮತ್ತು ದೇಶಸೇವೆಯ ಮುಂದೆ ನಿಲ್ಲಲು ಸಾಧ್ಯವೇ ಇಲ್ಲ.

ಸ್ನೇಹಿತರೆ,

21 ನೇ ಶತಮಾನದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇಂದು, ಅನೇಕ ಆಧುನಿಕ ಯೋಜನೆಗಳ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ವೇಗ ಮತ್ತು ಪ್ರಗತಿಯು ಸಮರ್ಥ ಮತ್ತು ಬಲಿಷ್ಠ ಭಾರತದ ಭರವಸೆಯಾಗಿದೆ. ಈ ಪ್ರಗತಿ, ಅನುಕೂಲತೆ ಮತ್ತು ಸರಾಗತೆ ಸಾಮಾನ್ಯ ಭಾರತೀಯನ ಏಳಿಗೆಯನ್ನು ಖಚಿತಪಡಿಸುತ್ತದೆ. ನಿಮ್ಮ ಆಶೀರ್ವಾದ ಮತ್ತು ಜೋಡಿ ಎಂಜಿನ್ ಸರ್ಕಾರದ ಬದ್ಧತೆಯೊಂದಿಗೆ ಉತ್ತರ ಪ್ರದೇಶವು ಈ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಒಟ್ಟಾಗಿ ಮುನ್ನಡೆಯುತ್ತೇವೆ ಎಂಬ ನಂಬಿಕೆಯೊಂದಿಗೆ, ಮತ್ತೊಮ್ಮೆ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ನನ್ನೊಂದಿಗೆ ನೀವೂ ಹೇಳಿ:

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಎಲ್ಲರಿಗೂ ಧನ್ಯವಾದಗಳು!

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Minister of Railways, Communications and Electronics & IT Ashwini Vaishnaw writes: Technology at your service

Media Coverage

Minister of Railways, Communications and Electronics & IT Ashwini Vaishnaw writes: Technology at your service
...

Nm on the go

Always be the first to hear from the PM. Get the App Now!
...
PM condoles demise of noted actor and former MP Shri Innocent Vareed Thekkethala
March 27, 2023
ಶೇರ್
 
Comments

The Prime Minister, Shri Narendra Modi has expressed deep grief over the demise of noted actor and former MP Shri Innocent Vareed Thekkethala.

In a tweet, the Prime Minister said;

“Pained by the passing away of noted actor and former MP Shri Innocent Vareed Thekkethala. He will be remembered for enthralling audiences and filling people’s lives with humour. Condolences to his family and admirers. May his soul rest in peace: PM @narendramodi”