ಘನತೆವೆತ್ತರೇ,

ದಕ್ಷಿಣದ ಜಾಗತಿಕ ನಾಯಕರೇ, ನಮಸ್ಕಾರ! ಈ ಶೃಂಗಸಭೆಯಲ್ಲಿ ನಿಮ್ಮನ್ನು ಸ್ವಾಗತಿಸಲು ನನಗೆ ಬಹಳ ಸಂತೋಷವಾಗುತ್ತಿದೆ. ಪ್ರಪಂಚದ ವಿವಿಧ ಭಾಗಗಳಿಂದ ನಮ್ಮೊಂದಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೊಸ ವರ್ಷವು ಉದಯಿಸುತ್ತಿದ್ದಂತೆ ನಾವು ಭೇಟಿಯಾಗುತ್ತಿದ್ದೇವೆ. ಇದು ಹೊಸ ಭರವಸೆಗಳು ಮತ್ತು ಹೊಸ ಶಕ್ತಿಯನ್ನು ತರುತ್ತದೆ. 1.3 ಶತಕೋಟಿ ಭಾರತೀಯರ ಪರವಾಗಿ, ನಿಮ್ಮೆಲ್ಲರಿಗೂ ಮತ್ತು ನಿಮ್ಮ ದೇಶದವರಿಗೂ 2023ರ ಸಂತೋಷಕರ ಹಾಗೂ ಸಂತೃಪ್ತಿ, ಸಮೃದ್ದಿಗಾಗಿ ನಾನು ಶುಭಾಶಯಗಳನ್ನು ಕೋರುತ್ತೇನೆ.

ಯುದ್ಧ, ಸಂಘರ್ಷ, ಭಯೋತ್ಪಾದನೆ ಮತ್ತು ಭೌಗೋಳಿಕ-ರಾಜಕೀಯ ಉದ್ವಿಗ್ನತೆ; ಆಹಾರ, ರಸಗೊಬ್ಬರ ಮತ್ತು ಇಂಧನ ಬೆಲೆ ಏರಿಕೆ; ಹವಾಮಾನ-ಬದಲಾವಣೆ ಚಾಲಿತ ನೈಸರ್ಗಿಕ ವಿಪತ್ತುಗಳು, ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಶಾಶ್ವತ ಆರ್ಥಿಕ ಪರಿಣಾಮಗಳನ್ನು ಕಂಡ ಮತ್ತೊಂದು ಕಠಿಣ ವರ್ಷದ ಪುಟವನ್ನು ನಾವು ತಿರುಗಿಸಿದ್ದೇವೆ. ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿದೆ. ಈ ಅಸ್ಥಿರತೆಯ ಸ್ಥಿತಿಯು ಎಷ್ಟು ಕಾಲ ಉಳಿಯುತ್ತದೆ ಎಂದು ಊಹಿಸುವುದು ಕಷ್ಟ.

ಘನತೆವೆತ್ತರೇ,

ನಾವು ಅಂದರೆ, ಜಾಗತಿಕ ದಕ್ಷಿಣ ದೇಶಗಳು, ಭವಿಷ್ಯದಲ್ಲಿ ಅತಿದೊಡ್ಡ ಪಾಲನ್ನು ಹೊಂದಿದ್ದೇವೆ. ಮನುಕುಲದ ಮುಕ್ಕಾಲು ಭಾಗ ನಮ್ಮ ದೇಶಗಳಲ್ಲಿ ವಾಸಿಸುತ್ತಾರೆ. ನಾವು ಸಹ ಸಮಾನವಾದ ಧ್ವನಿಯನ್ನು ಹೊಂದಿರಬೇಕು. ಆದ್ದರಿಂದ, ಎಂಟು ದಶಕಗಳಷ್ಟು ಹಳೆಯದಾದ ಜಾಗತಿಕ ಆಡಳಿತದ ಮಾದರಿ ನಿಧಾನವಾಗಿ ಬದಲಾಗುತ್ತಿದ್ದಂತೆ, ನಾವು ಉದಯೋನ್ಮುಖ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸಬೇಕು.

ಘನತೆವೆತ್ತರೇ,

ಹೆಚ್ಚಿನ ಜಾಗತಿಕ ಸವಾಲುಗಳನ್ನು ಗ್ಲೋಬಲ್ ಸೌತ್ ಸೃಷ್ಟಿಸಿಲ್ಲ. ಆದರೆ ಅವು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಕೋವಿಡ್ ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಪರಿಹಾರಗಳ ಹುಡುಕಾಟವು ನಮ್ಮ ಪಾತ್ರ ಅಥವಾ ಧ್ವನಿಗೆ ಕಾರಣವಾಗುವುದಿಲ್ಲ.

ಘನತೆವೆತ್ತರೇ,   

ಭಾರತವು ಸದಾ ತನ್ನ ಅಭಿವೃದ್ಧಿಯ ಅನುಭವವನ್ನು ಜಾಗತಿಕ ದಕ್ಷಿಣದ ನಮ್ಮ ಸಹೋದರರೊಂದಿಗೆ ಹಂಚಿಕೊಂಡಿದೆ. ನಮ್ಮ ಅಭಿವೃದ್ಧಿ ಪಾಲುದಾರಿಕೆಗಳು ಎಲ್ಲಾ ಭೌಗೋಳಿಕ ಪ್ರದೇಶಗಳು ಮತ್ತು ವೈವಿಧ್ಯಮಯ ವಲಯಗಳನ್ನು ಒಳಗೊಂಡಿವೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ನಾವು 100 ಕ್ಕೂ ಹೆಚ್ಚು ದೇಶಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸಿದ್ದೇವೆ. ನಮ್ಮ ಸಾಮಾನ್ಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚಿನ ಪಾಲುದಾರಿಕೆಯಲ್ಲಿ ಭಾರತವು ಸದಾ ನೆರವು ನೀಡುತ್ತಿದೆ. 

ಘನತೆವೆತ್ತರೇ,

ಭಾರತವು ಈ ವರ್ಷ ತನ್ನ ಜಿ-20ರ ಅಧ್ಯಕ್ಷತೆಯನ್ನು ಪ್ರಾರಂಭಿಸುತ್ತಿದ್ದಂತೆ, ಜಾಗತಿಕ ದಕ್ಷಿಣದ ಧ್ವನಿಯನ್ನು ಹೆಚ್ಚಿಸಿ, ಹಬ್ಬಿಸುವುದು ನಮ್ಮ ಗುರಿಯಾಗಿರುವುದು ಸ್ವಾಭಾವಿಕವಾಗಿದೆ. ನಮ್ಮ ಜಿ-20ರ ಅಧ್ಯಕ್ಷ ಸ್ಥಾನಕ್ಕೆ ನಾವು "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಧ್ಯೇಯವಾಕ್ಯವನ್ನು ಆರಿಸಿಕೊಂಡಿದ್ದೇವೆ. ಇದು ನಮ್ಮ ನಾಗರಿಕ ನೀತಿಗಳಿಗೆ ಅನುಗುಣವಾಗಿದೆ. 'ಏಕತೆ'ಯನ್ನು ಸಾಧಿಸುವ ಮಾರ್ಗವು ಮಾನವ-ಕೇಂದ್ರಿತ ಅಭಿವೃದ್ಧಿಯ ಮೂಲಕ ಎಂದು ನಾವು ನಂಬುತ್ತೇವೆ. ಜಾಗತಿಕ ದಕ್ಷಿಣದ ಜನರನ್ನು ಇನ್ನು ಮುಂದೆ ಅಭಿವೃದ್ಧಿಯ ಫಲಗಳಿಂದ ಹೊರಗಿಡಬಾರದು. ನಾವು ಒಟ್ಟಾಗಿ ಜಾಗತಿಕ ರಾಜಕೀಯ ಮತ್ತು ಆರ್ಥಿಕ ಆಡಳಿತವನ್ನು ಮರುವಿನ್ಯಾಸಗೊಳಿಸಲು ಪ್ರಯತ್ನಿಸಬೇಕು. ಇದರಿಂದ ಅಸಮಾನತೆಯನ್ನು ತೊಡೆದುಹಾಕಿ, ಅವಕಾಶಗಳನ್ನು ವಿಸ್ತರಿಸಬಹುದು, ಬೆಳವಣಿಗೆಯನ್ನು ಬೆಂಬಲಿಸಬಹುದು ಮತ್ತು ಪ್ರಗತಿ ಮತ್ತು ಸಮೃದ್ಧಿಯನ್ನು ಹರಡಬಹುದು.

ಘನತೆವೆತ್ತರೇ,

ಜಗತ್ತನ್ನು ಮತ್ತೆ ಚೈತನ್ಯಗೊಳಿಸಲು, ನಾವು ಒಟ್ಟಾಗಿ 'ಪ್ರತಿಕ್ರಿಯಿಸಿ, ಗುರುತಿಸಿ, ಗೌರವಿಸಿ ಮತ್ತು ಸುಧಾರಿಸಿ' ಎಂಬ ಜಾಗತಿಕ ಕಾರ್ಯಸೂಚಿಗೆ ಕರೆ ನೀಡಬೇಕು: ಅಂತರ್ಗತ ಮತ್ತು ಸಮತೋಲಿತ ಅಂತರರಾಷ್ಟ್ರೀಯ ಕಾರ್ಯಸೂಚಿಯನ್ನು ರೂಪಿಸುವ ಮೂಲಕ ಜಾಗತಿಕ ದಕ್ಷಿಣದ ಆದ್ಯತೆಗಳಿಗೆ ಪ್ರತಿಕ್ರಿಯಿಸಿ. 'ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು' ಎಂಬ ತತ್ವವು ಎಲ್ಲಾ ಜಾಗತಿಕ ಸವಾಲುಗಳಿಗೆ ಅನ್ವಯಿಸುತ್ತದೆ ಎಂಬುದನ್ನು ಗುರುತಿಸಿ. ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ, ಕಾನೂನಿನ ಆಳ್ವಿಕೆ ಮತ್ತು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳ ಶಾಂತಿಯುತ ಪರಿಹಾರವನ್ನು ಗೌರವಿಸಿ. ಹಾಗೂ ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೆಚ್ಚು ಪ್ರಸ್ತುತವಾಗಿಸಲು ಅವುಗಳನ್ನು ಸುಧಾರಿಸಿ.

ಘನತೆವೆತ್ತರೇ,  

ಅಭಿವೃದ್ಧಿಶೀಲ ಜಗತ್ತು ಎದುರಿಸುತ್ತಿರುವ ಸವಾಲುಗಳ ಹೊರತಾಗಿಯೂ, ನಮ್ಮ ಸಮಯ ಸಮೀಪಿಸುತ್ತಿದೆ ಎಂದು ನಾನು ಆಶಾವಾದಿಯಾಗಿದ್ದೇನೆ. ನಮ್ಮ ಸಮಾಜಗಳು ಮತ್ತು ಆರ್ಥಿಕತೆಗಳನ್ನು ಪರಿವರ್ತಿಸಬಲ್ಲ ಸರಳ, ಸ್ಕೇಲಬಲ್ ಮತ್ತು ಸುಸ್ಥಿರ ಪರಿಹಾರಗಳನ್ನು ಗುರುತಿಸುವುದು ಇಂದಿನ ಅಗತ್ಯವಾಗಿದೆ. ಈ ವಿಧಾನದಿಂದ, ನಾವು ಬಡತನ, ಸಾರ್ವತ್ರಿಕ ಆರೋಗ್ಯ ರಕ್ಷಣೆ ಅಥವಾ ಮಾನವ ಸಾಮರ್ಥ್ಯಗಳನ್ನು ನಿರ್ಮಿಸುವ ಕಠಿಣ ಸವಾಲುಗಳನ್ನು ಜಯಿಸುತ್ತೇವೆ. ಕಳೆದ ಶತಮಾನದಲ್ಲಿ, ವಿದೇಶಿ ಆಡಳಿತದ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಪರಸ್ಪರರನ್ನು ಬೆಂಬಲಿಸಿದ್ದೇವೆ. ನಮ್ಮ ನಾಗರಿಕ ಕಲ್ಯಾಣವನ್ನು ಖಾತ್ರಿಪಡಿಸುವ ಹೊಸ ವಿಶ್ವ ವ್ಯವಸ್ಥೆಯನ್ನು ರಚಿಸಲು ನಾವು ಈ ಶತಮಾನದಲ್ಲಿ ಅದನ್ನು ಮತ್ತೆ ಮಾಡಬಹುದು. ಭಾರತದ ಮಟ್ಟಿಗೆ ಹೇಳುವುದಾದರೆ, ನಿಮ್ಮ ಧ್ವನಿ ಭಾರತದ ಧ್ವನಿಯಾಗಿದೆ. ನಿಮ್ಮ ಆದ್ಯತೆಗಳು ಭಾರತದ ಆದ್ಯತೆಗಳಾಗಿವೆ. ಮುಂದಿನ ಎರಡು ದಿನಗಳಲ್ಲಿ, ಈ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು 8 ಆದ್ಯತೆಯ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಲಿದೆ. ಜಾಗತಿಕ ದಕ್ಷಿಣವು ಒಟ್ಟಾಗಿ ಹೊಸ ಮತ್ತು ಸೃಜನಶೀಲ ಆಲೋಚನೆಗಳನ್ನು ಹುಟ್ಟುಹಾಕಬಹುದು ಎಂದು ನನಗೆ ವಿಶ್ವಾಸವಿದೆ. ಜಿ-20 ಮತ್ತು ಇತರ ವೇದಿಕೆಗಳಲ್ಲಿ ಈ ವಿಚಾರಗಳು ನಮ್ಮ ಧ್ವನಿಯ ಆಧಾರವನ್ನು ರೂಪಿಸಿವೆ. ಭಾರತದಲ್ಲಿ, ನಮ್ಮಲ್ಲಿ ಒಂದು ಪ್ರಾರ್ಥನೆ ಇದೆ - 'ಆನೋ ಭದ್ರಾ ಕೃತವೋ ಯಂತು ವಿಶ್ವತಃ' ಇದರರ್ಥ, ಉದಾತ್ತ ಆಲೋಚನೆಗಳು ಬ್ರಹ್ಮಾಂಡದ ಎಲ್ಲಾ ದಿಕ್ಕುಗಳಿಂದ ನಮಗೆ ಬರಲಿ. ಈ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯು ನಮ್ಮ ಸಾಮೂಹಿಕ ಭವಿಷ್ಯಕ್ಕಾಗಿ ಉದಾತ್ತ ಆಲೋಚನೆಗಳನ್ನು ಪಡೆಯುವ ಸಾಮೂಹಿಕ ಪ್ರಯತ್ನವಾಗಿದೆ.

ಘನತೆವೆತ್ತರೇ,  

ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ನಾನು ಸದಾ ಸ್ವಾಗತಿಸುತ್ತೇನೆ. ನಿಮ್ಮ ಭಾಗವಹಿಸುವಿಕೆಗೆ ನಾನು ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ. ಧನ್ಯವಾದಗಳು.  

ಧನ್ಯವಾದ್.

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Inspiration For Millions': PM Modi Gifts Putin Russian Edition Of Bhagavad Gita

Media Coverage

'Inspiration For Millions': PM Modi Gifts Putin Russian Edition Of Bhagavad Gita
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಗೆ ನಿಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಿ
December 05, 2025

ಪ್ರಧಾನಿ ನರೇಂದ್ರ ಮೋದಿ ಭಾನುವಾರ, ಡಿಸೆಂಬರ್ 28 ರಂದು ತನ್ನ 'ಮನ್ ಕಿ ಬಾತ್' ಅನ್ನು ಹಂಚಿಕೊಳ್ಳಲಿದ್ದಾರೆ. ನೀವು ನವೀನ ಸಲಹೆಗಳನ್ನು ಮತ್ತು ಒಳನೋಟಗಳನ್ನು ಹೊಂದಿದ್ದರೆ, ಅದನ್ನು ನೇರವಾಗಿ ಪ್ರಧಾನಮಂತ್ರಿಯವರೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ. ಕೆಲವು ಸಲಹೆಗಳನ್ನು ಅವರ ಭಾಷಣದಲ್ಲಿ ಪ್ರಧಾನಿ ಉಲ್ಲೇಖಿಸುತ್ತಾರೆ.

ಕೆಳಗಿನ ಕಾಮೆಂಟ್ಗಳ ವಿಭಾಗದಲ್ಲಿ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳಿ.