ಹೂಡಿಕೆದಾರರು ಮತ್ತು ಠೇವಣಿದಾರರಿಬ್ಬರಿಗೂ ಪಾರದರ್ಶಕತೆ ಮತ್ತು ವಿಶ್ವಾಸದ ಖಾತ್ರಿ ಪಡಿಸುವುದು ನಮ್ಮ ಉನ್ನತ ಆದ್ಯತೆಯಾಗಿದೆ
ದೇಶವನ್ನು ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ
ಹಣ ಪೂರಣದ ತರುವಾಯ, ದೇಶ ತ್ವರಿತವಾಗಿ ಆರ್ಥಿಕ ಸಬಲೀಕರಣದತ್ತ ಸಾಗುತ್ತಿದೆ: ಪ್ರಧಾನಮಂತ್ರಿ

ಹಣಕಾಸು ವಲಯಕ್ಕೆ ಸಂಬಂಧಿಸಿದ ಎಲ್ಲ ಸಹೋದ್ಯೋಗಿಗಳಿಗೆ ನಮಸ್ಕಾರಗಳು. ಈ ವರ್ಷದ ಬಜೆಟ್ ನಲ್ಲಿ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಈ ಬಜೆಟ್ ನಲ್ಲಿ ಹಣಕಾಸು ವಲಯಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಚಾರಗಳಲ್ಲಿಯೂ ಅದರಲ್ಲಿಯೂ ವಿಶೇಷವಾಗಿ ಬ್ಯಾಂಕಿಂಗ್, ಬ್ಯಾಂಕಿಂಗೇತರ ಅಥವಾ ವಿಮಾ ವಲಯಗಳ ಬಲವರ್ಧನೆಗೆ ನೀಲನಕ್ಷೆಯನ್ನು ಪ್ರಸ್ತುತಪಡಿಸಲಾಗಿದೆ. ಅಲ್ಲದೆ ನಾವು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸದೃಢಗೊಳಿಸಲು ಮತ್ತು ಖಾಸಗಿ ವಲಯದ ಸಹಭಾಗಿತ್ವವನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರಸ್ತಾಪಿಸಿದ್ದೇವೆ. ಬಜೆಟ್ ನಂತರ ಈ ಸಮಾಲೋಚನೆ ಅತ್ಯಂತ ಮುಖ್ಯವಾಗಿದೆ. ಕಾರಣ ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ ಈ ಎಲ್ಲ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ನೀವು ಸರ್ಕಾರದ ಆದ್ಯತೆಗಳು ಮತ್ತು ಬದ್ಧತೆಗಳ ಬಗ್ಗೆ ತಿಳಿದುಕೊಂಡಿರಬೇಕಿದೆ ಮತ್ತು ಅದಕ್ಕೂ ಮುಖ್ಯವಾಗಿ ಸರ್ಕಾರ ಕೂಡ ನಿಮ್ಮ ಸಲಹೆಗಳು ಮತ್ತು ಆತಂಕಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. 21ನೇ ಶತಮಾನದಲ್ಲಿ ದೇಶವನ್ನು ಮುಂದೆ ಅತ್ಯಂತ ವೇಗವಾಗಿ ಮುಂದೆ ಕೊಂಡೊಯ್ಯಲು ನಿಮ್ಮ ಕೊಡುಗೆ ಅತ್ಯಗತ್ಯ ಹಾಗು ಇಂದಿನ ಸಂವಾದ ಕೂಡ ಪ್ರಸಕ್ತ ಜಾಗತಿಕ ಸನ್ನಿವೇಶದ ಲಾಭವನ್ನು ಪಡೆಯಲು ಅಷ್ಟೇ ಪ್ರಮುಖವಾದುದಾಗಿದೆ.

ಮಿತ್ರರೇ,

ದೇಶದ ಹಣಕಾಸು ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುನ್ನೋಟ ಅತ್ಯಂತ ಸ್ಪಷ್ಟವಾಗಿದೆ. ಆದರೆ ಮತ್ತು ಎಂದರೆ ಎಂಬ ಪದಗಳಿಗೆ ಜಾಗವಿಲ್ಲ. ನಮ್ಮ ಅಗ್ರ ಆದ್ಯತೆ ಹೂಡಿಕೆದಾರರು ಮತ್ತು ಠೇವಣಿದಾರರಿಬ್ಬರೂ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯ ಅನುಭವ ಪಡೆಯಬೇಕು ಎಂಬುದು. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಒಂದು ವಿಷಯದ ಮೇಲೆ ನಡೆಯುತ್ತಿದೆ. ಅದೆಂದರೆ ವಿಶ್ವಾಸ – ವಿಶ್ವಾಸ ತಮ್ಮ ಗಳಿಕೆಯ ಮೇಲಿನ ಭದ್ರತೆ, ಹೂಡಿಕೆಗಳ ಮೇಲಿನ ವಿಶ್ವಾಸ ಮತ್ತು ದೇಶದ ಅಭಿವೃದ್ಧಿ ಬಗೆಗಿನ ವಿಶ್ವಾಸವಾಗಿದೆ. ಬ್ಯಾಂಕಿಂಗ್ ಮತ್ತು ಬ್ಯಾಂಕಿಂಗೇತರ ವಲಯಗಳಲ್ಲಿ ಈ ಹಿಂದಿನ ಪದ್ಧತಿಗಳು ಮತ್ತು ವ್ಯವಸ್ಥೆಗಳಲ್ಲಿ ಸ್ವಾಭಾವಿಕವಾಗಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಆ ಬದಲಾವಣೆಗಳು ನಮಗೂ ಕೂಡ ಕಡ್ಡಾಯವಾಗಿವೆ. ದೇಶದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯ ಕಳೆದ ಹತ್ತು-ಹನ್ನೆರಡು ವರ್ಷಗಳಿಂದೀಚೆಗೆ ಹೇಗೆ ಬದಲಾವಣೆಯಾಗಿವೆ ಹಾಗೂ ಅವುಗಳ ಸಾಲ ನೀಡಿಕೆ ವ್ಯವಸ್ಥೆ ಎಷ್ಟು ತೀವ್ರತೆ ಪಡೆದಿದೆ ಎಂಬುದನ್ನು ನೀವೆಲ್ಲಾ ತಿಳಿದಿದ್ದೀರಿ. ಪಾರದರ್ಶಕವಲ್ಲದ ಸಾಲ ಸಂಸ್ಕೃತಿಯಿಂದ ದೇಶವನ್ನು ಮುಕ್ತಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂದು ಲೆಕ್ಕವನ್ನು ಮರೆ ಮಾಚುವುದು ಅಥವಾ ನೆಲಹಾಸಿನ ಕೆಳಗೆ ಹಾಕುವಂತಿಲ್ಲ, ಪ್ರತಿದಿನವೂ ಎನ್ ಪಿ ಎ ವರದಿ ಸಲ್ಲಿಸುವುದರಿಂದ ತಪ್ಪಿಸಿಕೊಳ್ಳಲಾಗದು.

 

ಮಿತ್ರರೇ,

ವ್ಯಾಪಾರ ವಹಿವಾಟಿನಲ್ಲಿ ಏರಿಳಿಕೆ ಇದ್ದೇ ಇರುತ್ತದೆ ಎಂಬುದನ್ನು ಸರ್ಕಾರವೂ ಕೂಡ ಚೆನ್ನಾಗಿ ಅರಿತುಕೊಂಡಿದೆ. ಪ್ರತಿಯೊಬ್ಬ ವಾಣಿಜ್ಯೋದ್ಯಮಿ ಕೂಡ ಲಾಭಗಳಿಸಲು ಸಾಧ್ಯವಿಲ್ಲ ಮತ್ತು ನಿರೀಕ್ಷಿಸಿದಷ್ಟು ಫಲಿತಾಂಶಗಳಿಸುವುದು ಅಸಾಧ್ಯ ಎಂಬುದನ್ನು ಸರ್ಕಾರವೂ ಕೂಡ ಒಪ್ಪುತ್ತದೆ. ಕೆಲವೊಮ್ಮೆ ತಮ್ಮ ಪುತ್ರ ಅಥವಾ ಕುಟುಂಬದ ಇತರೆ ಸದಸ್ಯರು ನಿರೀಕ್ಷಿಸಿದಷ್ಟು ಗಳಿಸಲಿಲ್ಲ ಎಂಬುದನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ತಮ್ಮ ಪುತ್ರ ಯಶಸ್ವಿಯಾಗುವುದನ್ನು ಯಾರು ತಾನೇ ಬಯಸುವುದಿಲ್ಲ ಹೇಳಿ. ಆದರೆ ಕೆಲವೊಮ್ಮೆ ಅದು ಘಟಿಸುವುದಿಲ್ಲ. ಆದ್ದರಿಂದ ಸರ್ಕಾರ ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ಕನಿಷ್ಠ ನಮ್ಮ ಸರ್ಕಾರ ಪ್ರತಿಯೊಂದು ವ್ಯಾವಹಾರಿಕ ನಿರ್ಣಯದಲ್ಲೂ ಸ್ವಾರ್ಥವಿರುತ್ತದೆ ಅಥವಾ ಕೆಟ್ಟ ಉದ್ದೇಶವಿರುತ್ತದೆ ಎಂಬುದನ್ನು ಊಹಿಸಿಕೊಳ್ಳುವುದಿಲ್ಲ. ಆದ್ದರಿಂದ ಸೂಕ್ತ ನಿಟ್ಟಿನಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಸರ್ಕಾರ ಬದ್ಧತೆ ಹಾಗೂ ಹೊಣೆಗಾರಿಕೆ ಹೊಂದಿದ್ದು, ನಾವು ಅದನ್ನು ಮಾಡುತ್ತಿದ್ದೇವೆ ಮತ್ತು ನಾವು ಅದನ್ನೇ ಮುಂದುವರಿಸುತ್ತೇವೆ. ನಾನು ಹಣಕಾಸು ವಲಯದ ಎಲ್ಲ ಜನರಿಗೆ ಹೇಳ ಬಯಸುವುದೇನೆಂದರೆ ನಾನು ಒಳ್ಳೆಯ ಉದ್ದೇಶದಿಂದ ನೀವು ಏನೆಲ್ಲಾ ಮಾಡುತ್ತೀರೋ ಅವುಗಳಿಗೆ ಸದಾ ನಿಮ್ಮ ಜೊತೆ ಇರುತ್ತೇನೆ, ಇದು ನನ್ನ ಮಾತು. ದಿವಾಳಿ ಮತ್ತು ದಿವಾಳಿಸಂಹಿತೆಯಂತಹ ಕಾರ್ಯತಂತ್ರಗಳಿಂದಾಗಿ ಹೂಡಿಕೆದಾರರು ಮತ್ತು ಸಾಲಗಾರರಲ್ಲಿ ಇಂದು ನಂಬಿಕೆ ಬಂದಿದೆ.

ಮಿತ್ರರೇ,

ಸಾಮಾನ್ಯ ಕುಟುಂಬದ ಗಳಿಕೆಯ ಭದ್ರತೆ, ಸರ್ಕಾರದ ಪ್ರಯೋಜನಗಳನ್ನು ಬಡವರಿಗೆ ಅತ್ಯಂತ ಪರಿಣಾಮಕಾರಿಯಾಗಿ ಯಾವುದೇ ಸೋರಿಕೆ ಇಲ್ಲದೆ ತಲುಪಿಸುವುದು, ದೇಶದ ಅಭಿವೃದ್ಧಿಗೆ ಮೂಲಸೌಕರ್ಯ ಹೂಡಿಕೆಗೆ ಉತ್ತೇಜನ ನೀಡುವುದು ಇವೆಲ್ಲಾ ಸರ್ಕಾರದ ಆದ್ಯತೆಗಳಾಗಿವೆ. ಈ ವಲಯದಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಮಾಡಿರುವ ಸುಧಾರಣೆಗಳು ಈ ಗುರಿಗಳನ್ನು ಪ್ರತಿಬಿಂಬಿಸುತ್ತದೆ. ಅದು ವಿಶ್ವದ ಅತಿದೊಡ್ಡ ಹಣಕಾಸು ಸೇರ್ಪಡೆ ಯೋಜನೆಯಾಗಿರಬಹುದು, ಬೃಹತ್ ಡಿಜಿಟಲ್ ಸೇರ್ಪಡೆಯಾಗಿರಬಹುದು, ಭಾರೀ ನೇರ ನಗದು ವರ್ಗಾವಣೆ ವ್ಯವಸ್ಥೆಯಾಗಿರಬಹುದು ಅಥವಾ ಸಣ್ಣ ಬ್ಯಾಂಕುಗಳ ವಿಲೀನ, ಈ ಎಲ್ಲ ಕ್ರಮಗಳು ಭಾರತದ ಅರ್ಥ ವ್ಯವಸ್ಥೆಯನ್ನು ಉತ್ಕೃಷ್ಟ ಮತ್ತು ಕ್ರಿಯಾಶೀಲವಾಗಿ ಬಲವರ್ಧನೆಗೊಳಿಸುವ ಉದ್ದೇಶ ಹೊಂದಿದೆ. ಈ ವರ್ಷದ ಬಜೆಟ್ ನಲ್ಲೂ ಸಹ ನಾವು ಅದೇ ದೂರದೃಷ್ಟಿಯನ್ನು ಮುಂದುವರಿಸಿಕೊಂಡು ಹೋಗುವುದನ್ನು ನೀವು ಕಾಣಬಹುದು.

ಮಿತ್ರರೇ,

ಈ ವರ್ಷ ನಾವು ಹೊಸ ಸಾರ್ವಜನಿಕ ವಲಯ ನೀತಿಯನ್ನು ಘೋಷಿಸಿದ್ದೇವೆ. ಈ ನೀತಿ ಕೂಡ ಹಣಕಾಸು ವಲಯವನ್ನು ಒಳಗೊಂಡಿವೆ. ನಮ್ಮ ಆರ್ಥಿಕತೆಯಲ್ಲಿ ಬ್ಯಾಂಕಿಂಗ್ ಮತ್ತು ವಿಮಾ ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಈ ಅವಕಾಶಗಳ ಹಿನ್ನೆಲೆಯಲ್ಲಿ ಈ ಬಜೆಟ್ ನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಅವುಗಳಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ವಿಮಾ ವಲಯದಲ್ಲಿ ಎಫ್ ಡಿ ಐ ಮಿತಿ ಶೇ.74ಕ್ಕೆ ಹೆಚ್ಚಳ ಅಥವಾ ಎಲ್ಐಸಿಯ ಐಪಿಒಗೆ ಚಾಲನೆ ಸೇರಿವೆ.

ಮಿತ್ರರೇ,

ಸಾಧ್ಯವಾದಷ್ಟು ನಾವು ಖಾಸಗಿ ಉದ್ಯಮಗಳನ್ನು ಉತ್ತೇಜಿಸಲು ನಿರಂತರ ಕ್ರಮಗಳನ್ನು ಕೈಗೊಂಡಿದ್ದೇವೆ. ಇದೇ ವೇಳೆ ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲಿ ಪರಿಣಾಮಕಾರಿ ಸಾರ್ವಜನಿಕ ವಲಯದ ಪಾಲುದಾರಿಕೆ ಕೂಡ ದೇಶಕ್ಕೆ ತುಂಬಾ ಅತ್ಯಗತ್ಯವಾಗಿ ಬೇಕಾಗಿದೆ. ಬಡವರು ಮತ್ತು ದುರ್ಬಲ ವರ್ಗದವರ ರಕ್ಷಣೆ ಅತ್ಯಂತ ಅಗತ್ಯವಾಗಿದೆ. ಸಾರ್ವಜನಿಕ ವಲಯದ ಬಲವರ್ಧನೆಗೆ ಬಂಡವಾಳ ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಬ್ಯಾಂಕುಗಳ ಎನ್ ಪಿ ಎ ಬಗ್ಗೆ ನಿಗಾವಹಿಸಲು ಹೊಸ ಎ ಆರ್ ಸಿ ವ್ಯವಸ್ಥೆಯನ್ನೂ ಸಹ ಸೃಷ್ಟಿಸಲಾಗುತ್ತಿದೆ. ಈ ಎ ಆರ್ ಸಿ ಸಾಲಗಳ ಮೇಲೆ ನಿರ್ದಿಷ್ಟ ರೀತಿಯಲ್ಲಿ ನಿಗಾವಹಿಸುವುದನ್ನು ಮುಂದುವರಿಸುತ್ತದೆ. ಇದರಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ಬಲವರ್ಧನೆಯಾಗುವುದೇ ಅಲ್ಲದೆ ಅವುಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಾಗಲಿದೆ.

ಮಿತ್ರರೇ,

ಅಂತೆಯೇ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೆಲವು ಕೈಗಾರಿಕಾ ಯೋಜನೆಗಳಿಗಾಗಿ ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು ಸೃಷ್ಟಿಸಲಾಗುವುದು. ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗೆ ದೀರ್ಘಕಾಲದ ಆರ್ಥಿಕ ನೆರವಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಹೆಚ್ಚುವರಿಯಾಗಿ ಸಾವರಿನ್ ವೆಲ್ತ್ ನಿಧಿ, ಪಿಂಚಣಿ ನಿಧಿ ಮತ್ತು ವಿಮಾ ಕಂಪನಿಗಳನ್ನು ಉತ್ತೇಜಿಸಲಾಗುತ್ತಿದ್ದು, ಅವುಗಳಿಂದ ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಕಾರ್ಪೊರೇಟ್ ಷೇರು ಮಾರುಕಟ್ಟೆಗೆ ದೀರ್ಘಾವಧಿಯ ಬಾಂಡ್ ಗಳ ವಿತರಣೆಗೆ ಅವಕಾಶ ಮಾಡಿಕೊಡಲು ಹೊಸ ಬ್ಯಾಕ್ ಸ್ಟಾಪ್ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಮಿತ್ರರೇ,

ಆತ್ಮನಿರ್ಭರ ಭಾರತ ಭಾವನೆಯನ್ನೂ ಸಹ ಖಚಿತವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ದೊಡ್ಡ ಕೈಗಾರಿಕೆಗಳು ಮತ್ತು ದೊಡ್ಡ ನಗರಗಳಿಂದ ಮಾತ್ರ ಆತ್ಮನಿರ್ಭರ ಭಾರತ ಸಾಧನೆ ಅಸಾಧ್ಯ. ಗ್ರಾಮಗಳು ಮತ್ತು ಸಣ್ಣ ಪಟ್ಟಣಗಳ, ಸಣ್ಣ ಉದ್ಯಮಿಗಳ ಕೊಡುಗೆ ಮತ್ತು ಸಾಮಾನ್ಯ ಜನರ ಕಠಿಣ ಪರಿಶ್ರಮ ಕೂಡ ಆತ್ಮನಿರ್ಭರ ಭಾರತ ಮಿಷನ್ ಸಾಧನೆಗೆ ಅತ್ಯಂತ ಪ್ರಮುಖವಾಗಿ ಬೇಕಾಗಿದೆ. ಆತ್ಮನಿರ್ಭರ ಭಾರತ ಕನಸನ್ನು ರೈತರ ಮೂಲಕ ನನಸಾಗಿಸಲಾಗುವುದು ಮತ್ತು ಕೃಷಿ ಉತ್ಪನ್ನ ಘಟಕಗಳನ್ನು ಸುಧಾರಿಸಲಾಗುವುದು. ಆತ್ಮನಿರ್ಭರ ಭಾರತವನ್ನು ನಮ್ಮ ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಂದ ಸೃಷ್ಟಿಸಲಾಗುವುದು. ನಮ್ಮ ಆತ್ಮನಿರ್ಭರ ಭಾರತದ ಪ್ರಮುಖ ಹೆಗ್ಗುರುತೆಂದರೆ ನಮ್ಮ ನವೋದ್ಯಮಗಳು ಮತ್ತು ಎಂಎಸ್ಎಂಇಗಳು, ಆದ್ದರಿಂದ ಕೊರೊನಾ ಸಮಯದಲ್ಲಿ ಎಂಎಸ್ಎಂಇಗಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಾಯಿತು. ಸುಮಾರು 90 ಲಕ್ಷ ಉದ್ದಿಮೆಗಳಿಗೆ ಈ ಯೋಜನೆಗಳ ಲಾಭ ದೊರೆತಿದೆ ಮತ್ತು ಅವುಗಳು 2.4 ಟ್ರಿಲಿಯನ್ ರೂ. ಸಾಲವನ್ನು ಪಡೆದಿವೆ. ಈ ಎಂಎಸ್ಎಂಇಗಳು ಮತ್ತು ನವೋದ್ಯಮಗಳಿಗೆ ಸಾಲದ ಹರಿವಿನ ವಿಸ್ತರಣೆ ಮತ್ತು ಬೆಂಬಲದ ಪ್ರಾಮುಖ್ಯವನ್ನು ನೀವು ಕೂಡ ಅರ್ಥ ಮಾಡಿಕೊಂಡಿದ್ದೀರಿ. ಸರ್ಕಾರ ಕೃಷಿ, ಕಲ್ಲಿದ್ದಲು ಮತ್ತು ಬಾಹ್ಯಾಕಾಶ ಸೇರಿದಂತೆ ಹಲವು ವಲಯಗಳಲ್ಲಿ ಸುಧಾರಣೆಗಳ ಮೂಲಕ ಮುಕ್ತಗೊಳಿಸಿದೆ. ಈಗ ಗ್ರಾಮಗಳು ಮತ್ತು ಸಣ್ಣ ನಗರಗಳಲ್ಲಿನ ಆಶೋತ್ತರಗಳನ್ನು ಗುರುತಿಸುವುದು ಹಣಕಾಸು ವಲಯದ ಹೊಣೆಗಾರಿಕೆಯಾಗಿದೆ ಮತ್ತು ಆ ಮೂಲಕ ಆತ್ಮನಿರ್ಭರ ಭಾರತ ಬಲವರ್ಧನೆಗೊಳಿಸಬೇಕಾಗಿದೆ.

ಮಿತ್ರರೇ,

ನಮ್ಮ ಆರ್ಥಿಕತೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಸಾಲದ ಹರಿವು ಕೂಡ ಅಷ್ಟೇ ಪ್ರಮುಖವಾದುದು. ಹೊಸ ವಲಯಗಳಿಗೆ ಮತ್ತು ಹೊಸ ಉದ್ದಿಮೆಗಳಿಗೆ ಹೇಗೆ ಸಾಲ ಲಭ್ಯವಾಗುತ್ತದೆ ಎಂಬುದನ್ನು ನೀವು ನೋಡಬೇಕಿದೆ. ನೀವು ಹೊಸ ಮತ್ತು ಸುಧಾರಿತ ಹಣಕಾಸು ಉತ್ಪನ್ನಗಳನ್ನು ಹೊಸ ನವೋದ್ಯಮಗಳು ಮತ್ತು ಹಣಕಾಸು-ತಂತ್ರಜ್ಞಾನ ಸಂಸ್ಥೆಗಳು( ಫಿನ್-ಟೆಕ್ ) ಗಳಿಗೆ ನೀಡಬೇಕಿದೆ. ಇಂದು ಫಿನ್-ಟೆಕ್ ನವೋದ್ಯಮಗಳು ಅತ್ಯಂತ ಶ್ರೇಷ್ಠ ಕೆಲಸವನ್ನು ಮಾಡುತ್ತಿವೆ ಎಂಬುದನ್ನು ನೀವೆಲ್ಲಾ ಚೆನ್ನಾಗಿ ತಿಳಿದಿದ್ದೀರಿ ಮತ್ತು ಆ ವಲಯದಲ್ಲಿರುವ ಪ್ರತಿಯೊಂದು ಸಂಭವನೀಯತೆನ್ನು ಗುರುತಿಸಿ. ನಮ್ಮ ಫಿನ್-ಟೆಕ್ ಗಳು ಕೊರೊನಾದ ಸಂಕಷ್ಟದ ಸಮಯದಲ್ಲಿ ಅಂತಿಮಗೊಂಡ ನವೋದ್ಯಮ ಒಪ್ಪಂದಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪಾಲನ್ನು ಹೊಂದಿವೆ. ಆ ತೀವ್ರಗೊಂಡಿರುವ ಚಟುವಟಿಕೆಗಳು ಈ ವರ್ಷವೂ ಸಹ ಮುಂದುವರಿಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಹಾಗಾಗಿ ನೀವು ಹೊಸ ಸಾಧ್ಯತೆಗಳನ್ನು ಅನ್ವೇಷಿಸಬೇಕು. ಅಂತೆಯೇ ನಮ್ಮ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿಸುವಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಸಹ ಪರಿಗಣಿಸಬೇಕು. ಈ ವಲಯವನ್ನು ನೀವು ಆಳವಾಗಿ ಅರ್ಥಮಾಡಿಕೊಂಡಿರುವುದರಿಂದ ವೆಬಿನಾರ್ ನಿಂದ ಉತ್ತಮ ಸಲಹೆಗಳು ಮತ್ತು ಪರಿಹಾರಗಳು ಲಭಿಸಲಿವೆ ಮತ್ತು ನಾನು ಇಂದು ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ಎಂದು ಹೇಳಲು ಬಯಸುತ್ತೇನೆ. ಇಂದಿನ ಈ ಸಂವಾದದ ವೇಳೆ ಹೊರಹೊಮ್ಮುವ ಸಲಹೆಗಳು ಆತ್ಮನಿರ್ಭರ ಭಾರತ ಸಾಧನೆಗೆ ಮತ್ತು ಸಾರ್ವಜನಿಕ ಕಲ್ಯಾಣ ಚಟುವಟಿಕೆಗಳಿಗೆ ಅತ್ಯಂತ ಉಪಯುಕ್ತವಾಗುತ್ತವೆ. ವಿಶ್ವಾಸವನ್ನು ವೃದ್ಧಿಸುತ್ತವೆ ಎಂದು ನಾನು ಬಲವಾಗಿ ನಂಬಿದ್ದೇನೆ.

ಮಿತ್ರರೇ,

ಕಳೆದ ಕೆಲವು ವರ್ಷಗಳಿಂದೀಚೆಗೆ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಹೊಸ ಆಯಾಮಗಳ ಸೃಷ್ಟಿ ಹಣಕಾಸು ಸೇರ್ಪಡೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿವೆ. ಇಂದು ದೇಶದ 130 ಕೋಟಿ ಜನರು ಆಧಾರ್ ಕಾರ್ಡ್ ಗಳನ್ನು ಹೊಂದಿದ್ದಾರೆ; 41 ಕೋಟಿಗೂ ಅಧಿಕ ದೇಶವಾಸಿಗಳು ಜನ್ ಧನ್ ಖಾತೆಯನ್ನು ಹೊಂದಿದ್ದಾರೆ. ಜನ್ ಧನ್ ಖಾತೆ ಹೊಂದಿರುವ ಶೇ.55ರಷ್ಟು ಮಹಿಳೆಯರಿದ್ದಾರೆ ಮತ್ತು ಆ ಖಾತೆಗಳಲ್ಲಿ 1.5 ಲಕ್ಷ ಕೋಟಿ ರೂ. ಠೇವಣಿ ಇದೆ. ಕೊರೊನಾದ ಸಮಯದಲ್ಲೂ ಸಹ ಈ ಜನ್ ಧನ್ ಖಾತೆಗಳ ಮೂಲಕ ಲಕ್ಷಾಂತರ ಸಹೋದರಿಯರಿಗೆ ನೇರವಾಗಿ ಸಹಾಯ ಮಾಡಲು ಸಾಧ್ಯವಾಯಿತು. ಇಂದು ಯುಪಿಐನಿಂದ ಪ್ರತಿ ತಿಂಗಳು ಸುಮಾರು 4 ಲಕ್ಷ ಕೋಟಿ ರೂ. ಸರಾಸರಿ ವಹಿವಾಟು ನಡೆಯುತ್ತಿದೆ ಮತ್ತು ರುಪೆ ಕಾರ್ಡ್ ಗಳ ಸಂಖ್ಯೆ 60 ಕೋಟಿ ತಲುಪಿದೆ. ಆಧಾರ್ ಮತ್ತು ಸ್ಥಳದಲ್ಲೇ ದೃಢೀಕರಣದ ಮೂಲಕ ದೂರದ ಗುಡ್ಡಗಾಡು ಪ್ರದೇಶಗಳಲ್ಲೂ ಸಹ ಹಣಕಾಸು ಸೇವೆಗಳು ಲಭ್ಯವಾಗುತ್ತಿವೆ. ಭಾರತೀಯ ಅಂಚೆ ಬ್ಯಾಂಕ್ ಜಾಲ ವಿಸ್ತರಣೆಯಾಗಿದೆ ಮತ್ತು ಲಕ್ಷಾಂತರ ಸಾಮಾನ್ಯ ಸೇವಾ ಕೇಂದ್ರಗಳೂ ಸಹ ಸೇವೆ ನೀಡುತ್ತಿವೆ. ಇಂದು ದೇಶದಲ್ಲಿ 2 ಲಕ್ಷಕ್ಕೂ ಅಧಿಕ ಬ್ಯಾಂಕ್ ಮಿತ್ರರು ಆಧಾರ್ ಆಧರಿತ ಪಾವತಿ ವ್ಯವಸ್ಥೆ(ಎಇಪಿಎಸ್) ಸಾಧನದ ನೆರವಿನಿಂದ ಗ್ರಾಮಗಳಲ್ಲಿ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತಿದ್ದಾರೆ. 1.25 ಲಕ್ಷಕ್ಕೂ ಅಧಿಕ ಅಂಚೆ ಕಚೇರಿಗಳು ಈ ನಿಟ್ಟಿನಲ್ಲಿ ಸಹಾಯ ಮಾಡುತ್ತಿವೆ. ನಿಮಗೆ ಆಶ್ಚರ್ಯವಾಗಬಹುದು. ಈ ಬ್ಯಾಂಕ್ ಮಿತ್ರರು ಎಇಪಿಎಸ್ ಸಾಧನದ ಮೂಲಕ ಕಳೆದ ವರ್ಷ ಏಪ್ರಿಲ್ ನಿಂದ ಜೂನ್ ವರೆಗೆ 53,000 ಕೋಟಿ ರೂ. ವಹಿವಾಟಿನ ಮೂಲಕ ಗ್ರಾಮೀಣ ಜನರಿಗೆ ನೆರವಾಗಿದ್ದಾರೆ. ಈ ಚಟುವಟಿಕೆ ಕೊರೊನಾದ ಅವಧಿಯಲ್ಲಿ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದಾಗ ನಡೆದಿದೆ ಎಂಬುದನ್ನು ನೀವು ನೆನಪಿಸಿಕೊಳ್ಳಿ.

ಮಿತ್ರರೇ,

ದೇಶದ ಪ್ರತಿಯೊಂದು ವಿಭಾಗದಲ್ಲೂ ಒಂದಲ್ಲಾ ಒಂದು ರೀತಿ ಹಣಕಾಸು ಸೇವಾ ವಲಯಗಳು ಸೇರ್ಪಡೆಯಾಗಿವೆ ಎಂಬುದಕ್ಕೆ ಭಾರತ ಹೆಮ್ಮೆ ಪಡುವಂತಾಗಿದೆ. ದಶಕಗಳ ಆರ್ಥಿಕ ಹೊರಗಿಡುವಿಕೆಯಿಂದ ಹೊರಗುಳಿದಿದ್ದ ಭಾರತ ಇದೀಗ ಸದೃಢಗೊಳ್ಳುತ್ತಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರ ಹಣಕಾಸು ವಲಯದಲ್ಲಿ ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ಬಡವರು, ರೈತರು, ಜಾನುವಾರು ಸಾಕಾಣಿಕೆ ರೈತರು, ಮೀನುಗಾರರು ಅಥವಾ ಸಣ್ಣಪುಟ್ಟ ಅಂಗಡಿಗಳ ಮಾಲಿಕರು ಸೇರಿದಂತೆ ಎಲ್ಲರಿಗೂ ಸಾಲ ಪಡೆಯುವುದು ಸುಲಭವಾಗಿದೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಮುದ್ರಾ ಯೋಜನೆಯ ಮೂಲಕ ಸಣ್ಣ ಉದ್ದಿಮೆದಾರರಿಗೆ ಸುಮಾರು 15 ಲಕ್ಷ ಕೋಟಿ ರೂ.ಗಳ ಸಾಲಗಳು ಲಭ್ಯವಾಗಿವೆ. ಇದರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಶೇ.50ಕ್ಕೂ ಅಧಿಕ ದಲಿತರು, ಶೋಷಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗದ ಉದ್ದಿಮೆದಾರರು ಸೇರಿದ್ದಾರೆ. ಪಿಎಂ ಕಿಸಾನ್ ಯೋಜನೆ ಅಡಿ ಸುಮಾರು 11 ಕೋಟಿಗೂ ಅಧಿಕ ರೈತ ಕುಟುಂಬಗಳ ಖಾತೆಗೆ 1,15,000 ಕೋಟಿ ರೂ.ಗೂ ಅಧಿಕ ಹಣವನ್ನು ಠೇವಣಿ ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ನಮ್ಮ ಬೀದಿ ಬದಿ ವ್ಯಾಪಾರಿಗಳಿಗಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ವಲಯವನ್ನು ಇದೇ ಮೊದಲ ಬಾರಿಗೆ ದೇಶದ ಹಣಕಾಸು ವಲಯಕ್ಕೆ ಸೇರ್ಪಡೆ ಮಾಡಲಾಗಿದೆ. ಈವರೆಗೆ ಸುಮಾರು 15 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10,000 ರೂ. ಸಾಲವನ್ನು ನೀಡಲಾಗಿದೆ. ಇದು ಕೇವಲ ಒಂದು ಬಾರಿಯ ಸೇರ್ಪಡೆಯಲ್ಲ. ಅವರ ಸಾಲದ ಇತಿಹಾಸ ಭವಿಷ್ಯದಲ್ಲಿ ಹೆಚ್ಚಿನ ಸಾಲಗಳನ್ನು ಪಡೆಯಲು ನೆರವಾಗಲಿದೆ. ಅಂತೆಯೇ ವ್ಯಾಪಾರ ಮತ್ತು ಪಿಎಸ್ಬಿ ಸಾಲಗಳಿಗೆ ಡಿಜಿಟಲ್ ವಿಧಾನದ ಮೂಲಕ ಎಂಎಸ್ಎಂಇಗಳಿಗೂ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಒದಗಿಸಲಾಗುತ್ತಿದೆ. ರೈತರಿಗೆ ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದೆ ಹಾಗೂ ಅವರನ್ನು ಅಸಾಂಸ್ಥಿಕ ವಲಯದ ಸಾಲದ ವಿಷ ವರ್ತುಲದಿಂದ ಹೊರ ತರಲಾಗುತ್ತಿದೆ.

ಮಿತ್ರರೇ,

ನಮ್ಮ ಸಮಾಜದಲ್ಲಿನ ಈ ವರ್ಗದವರಿಗೆ ನೆರವಾಗಲು ಇದೀಗ ಖಾಸಗಿ ವಲಯ ಕೂಡ ವಿನೂತನ ಹಣಕಾಸು ಉತ್ಪನ್ನಗಳನ್ನು ಪರಿಚಯಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ. ನಮ್ಮ ಸ್ವಸಹಾಯ ಗುಂಪುಗಳು, ಉತ್ಪಾದನೆಯಿಂದ ಹಿಡಿದು ಸೇವೆಗಳವರೆಗೂ ಪ್ರತಿಯೊಂದು ವಲಯದಲ್ಲೂ ಭಾರೀ ಸಾಮರ್ಥ್ಯವನ್ನು ಹೊಂದಿವೆ. ಈ ಗುಂಪುಗಳ ಸಾಲದ ಶಿಸ್ತು ಅತ್ಯುತ್ತಮವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಈ ಗುಂಪುಗಳ ಮೂಲಕ ಖಾಸಗಿ ವಲಯ ಕೂಡ ಗ್ರಾಮೀಣ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಯ ಸಂಭವನೀಯ ಅವಕಾಶಗಳ ಬಗ್ಗೆ ಪರಿಶೀಲಿಸಬಹುದು. ಇದು ಕೇವಲ ಕಲ್ಯಾಣದ ವಿಚಾರವಲ್ಲ, ಅತ್ಯುತ್ತಮ ವಾಣಿಜ್ಯ ಮಾದರಿಯನ್ನು ಸಾಬೀತುಪಡಿಸುವ ವಿಚಾರವಾಗಿದೆ.

ಮಿತ್ರರೇ,

ದೇಶಗಳು ಇದೀಗ ಅತ್ಯಂತ ವೇಗವಾಗಿ ಹಣಕಾಸು ಸಬಲೀಕರಣ ಮತ್ತು ಹಣಕಾಸು ಸೇರ್ಪಡೆಯತ್ತ ಮುನ್ನಡೆಯುತ್ತಿವೆ. ಭಾರತದ ಫಿನ್-ಟೆಕ್ ಮಾರುಕಟ್ಟೆ ಮುಂದಿನ ಐದು ವರ್ಷಗಳಲ್ಲಿ ಸುಮಾರು ಆರು ಟ್ರಿಲಿಯನ್ ತಲುಪಲಿದೆ ಎಂದು ಅಂದಾಜಿಸಿದೆ. ಫಿನ್ ಟೆಕ್ ವಲಯದ ಸಂಭವನೀಯ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಐ ಎಫ್ ಎಸ್ ಸಿ ಗಿಫ್ಟ್ ಸಿಟಿಯನ್ನು ವಿಶ್ವ ದರ್ಜೆಯ ಆರ್ಥಿಕ ತಾಣವನ್ನಾಗಿ ನಿರ್ಮಿಸಲಾಗುತ್ತಿದೆ. ಭಾರತದಲ್ಲಿ ಅತ್ಯಾಧುನಿಕ ಮೂಲಸೌಕರ್ಯವನ್ನು ನಿರ್ಮಾಣ ಮಾಡುವುದು ಕೇವಲ ನಮ್ಮ ಆಶಯ ಮಾತ್ರವಲ್ಲ. ಅದು ಸ್ವಾವಲಂಬಿ ಭಾರತಕ್ಕೆ ಅತ್ಯಂತ ಅತ್ಯಗತ್ಯ. ಆದ್ದರಿಂದ ಈ ವಲಯದಲ್ಲಿ ಮೂಲಸೌಕರ್ಯಕ್ಕೆ ಹಲವು ದಿಟ್ಟ ಗುರಿಗಳನ್ನು ನಿಗದಿಪಡಿಸಲಾಗಿದೆ. ಆ ಗುರಿಗಳನ್ನು ತಲುಪಲು ಹೂಡಿಕೆ ಅತ್ಯವಶ್ಯಕ. ಆ ಉದ್ದೇಶಕ್ಕಾಗಿ ಬಂಡವಾಳ ಹೂಡಿಕೆಯನ್ನು ತರಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗುವುದು. ಇಡೀ ಹಣಕಾಸು ವಲಯದ ಸಕ್ರಿಯ ಬೆಂಬಲದಿಂದ ಮಾತ್ರ ಈ ಗುರಿಗಳನ್ನು ಸಾಧಿಸಲು ಸಾಧ್ಯ.

ಮಿತ್ರರೇ,

ನಮ್ಮ ಹಣಕಾಸು ವ್ಯವಸ್ಥೆಯ ಬಲವರ್ಧನೆಗಾಗಿ ಬ್ಯಾಂಕಿಂಗ್ ವಲಯದ ಸಬಲೀಕರಣಕ್ಕೆ ಸರ್ಕಾರ ಕೂಡ ಬದ್ಧವಾಗಿದೆ. ಈವರೆಗೆ ಕೈಗೊಂಡಿರುವ ಎಲ್ಲಾ ಬ್ಯಾಂಕಿಂಗ್ ಸುಧಾರಣೆಗಳು ಮುಂದೆಯೂ ಸಹ ಮುಂದುವರಿಯಲಿದೆ. ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳ ಅನುಷ್ಠಾನಕ್ಕೆ ಮತ್ತು ಸುಧಾರಣೆಗಳ ಕುರಿತಂತೆ ನೀವು ಅರ್ಥಪೂರ್ಣ ಸಲಹೆಗಳನ್ನು ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ. ದೇಶ ಮತ್ತು ವಿದೇಶಗಳಲ್ಲಿನ ಈ ವಲಯದ ತಜ್ಞರು ಈ ವಿಷಯದ ಕುರಿತು ಮಾರ್ಗದರ್ಶನ ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ. ನಮ್ಮ ಸರ್ಕಾರಕ್ಕೆ ನಿಮ್ಮ ಪ್ರತಿಯೊಂದು ಸಲಹೆಗಳೂ ಕೂಡ ಅತ್ಯಮೂಲ್ಯವಾಗಿವೆ. ನೀವು ಯಾವುದೇ ಹಿಂಜರಿಕೆ ಇಲ್ಲದೆ ಹೇಗೆ ಮುಂದುವರಿಯಬೇಕು ಎಂಬ ನೀಲನಕ್ಷೆಯನ್ನು ದಯವಿಟ್ಟು ನೀಡಿ ಮತ್ತು ನಾವು ಒಟ್ಟಾಗಿ ಹೇಗೆ ಮುಂದುವರಿಯಬೇಕು ಎಂಬುದನ್ನು ತಿಳಿಸಿರಿ. ಯಾವುದಾದರೂ ತೊಂದರೆಗಳು ಎದುರಾದರೆ ಅವುಗಳಿಂದ ಹೇಗೆ ಹೊರಬರಬೇಕು, ಈ ದೇಶವನ್ನು ಹೊಣೆಗಾರಿಕೆಯೊಂದಿಗೆ ಮುನ್ನಡೆಸಲು ನೀವು ಹೇಗೆ ಪಾಲುದಾರರಾಗುತ್ತೀರಿ ಎಂಬುದನ್ನು ತಿಳಿಸಿ. ಸೂಕ್ತ ನೀಲನಕ್ಷೆ, ಗುರಿ ಮತ್ತು ಇತಿಮಿತಿಯೊಳಗೆ ಗರಿಷ್ಠ ಪ್ರಯೋಜನಗಳನ್ನು ಪಡೆಯುವ ಕುರಿತು ನಾವು ನಿಮ್ಮೊಂದಿಗೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಬಯಸಿದ್ದೇವೆ. ನಿಮ್ಮ ಸಮಯ ಅಮೂಲ್ಯವಾದುದು ಎಂಬುದು ನನಗೆ ಅರಿವಿದೆ. ಆದರೆ ನಿಮ್ಮ ಸಲಹೆಗಳು ಮತ್ತು ಸಂಕಲ್ಪವೂ ಕೂಡ ಇನ್ನೂ ಹೆಚ್ಚು ಮೌಲ್ಯಯುತವಾದವು.

ತುಂಬಾ ತುಂಬಾ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India attracts $70 billion investment in AI infra, AI Mission 2.0 in 5-6 months: Ashwini Vaishnaw

Media Coverage

India attracts $70 billion investment in AI infra, AI Mission 2.0 in 5-6 months: Ashwini Vaishnaw
NM on the go

Nm on the go

Always be the first to hear from the PM. Get the App Now!
...
Prime Minister welcomes new Ramsar sites at Patna Bird Sanctuary and Chhari-Dhand
January 31, 2026

The Prime Minister, Shri Narendra Modi has welcomed addition of the Patna Bird Sanctuary in Etah (Uttar Pradesh) and Chhari-Dhand in Kutch (Gujarat) as Ramsar sites. Congratulating the local population and all those passionate about wetland conservation, Shri Modi stated that these recognitions reaffirm our commitment to preserving biodiversity and protecting vital ecosystems.

Responding to a post by Union Minister, Shri Bhupender Yadav, Prime Minister posted on X:

"Delighted that the Patna Bird Sanctuary in Etah (Uttar Pradesh) and Chhari-Dhand in Kutch (Gujarat) are Ramsar sites. Congratulations to the local population there as well as all those passionate about wetland conservation. These recognitions reaffirm our commitment to preserving biodiversity and protecting vital ecosystems. May these wetlands continue to thrive as safe habitats for countless migratory and native species."