ಒಡಿಶಾ ನೂರಾರು ವರ್ಷಗಳಿಂದ ಭಾರತೀಯ ನಾಗರಿಕತೆ, ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿದೆ: ಪ್ರಧಾನಮಂತ್ರಿ
ಇಂದು ಅಭಿವೃದ್ಧಿ ಮತ್ತು ಪರಂಪರೆಯ ಮಂತ್ರವು ಭಾರತದ ಪ್ರಗತಿಗೆ ಆಧಾರವಾದಾಗ, ಒಡಿಶಾದ ಪಾತ್ರ ಇನ್ನೂ ದೊಡ್ಡದಾಗಿದೆ: ಪ್ರಧಾನಮಂತ್ರಿ
ಕಳೆದ ವರ್ಷಗಳಲ್ಲಿ, ಬುಡಕಟ್ಟು ಸಮಾಜವನ್ನು ಹಿಂಸಾಚಾರದಿಂದ ಹೊರತರಲು ಮತ್ತು ಅದನ್ನು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಇಡಲು ನಾವು ಕೆಲಸ ಮಾಡಿದ್ದೇವೆ: ಪ್ರಧಾನಮಂತ್ರಿ
21ನೇ ಶತಮಾನದ ಭಾರತದ ಅಭಿವೃದ್ಧಿ ಪೂರ್ವ ಭಾರತದಿಂದ ವೇಗವನ್ನು ಪಡೆಯುತ್ತದೆ: ಪ್ರಧಾನಮಂತ್ರಿ

ಜೈ ಜಗನ್ನಾಥ!

ಜೈ ಜಗನ್ನಾಥ!

ಜೈ ಬಾಬಾ ಲಿಂಗರಾಜ್!

ಒಡಿಶಾದ ನನ್ನ ಪ್ರೀತಿಯ ಜನರಿಗೆ ಶುಭಾಶಯಗಳು ಮತ್ತು ಜೋಹರ್!

ಒಡಿಶಾದ ರಾಜ್ಯಪಾಲರಾದ ಶ್ರೀ ಹರಿಬಾಬು ಜಿ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಝಿ ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಜುವಾಲ್ ಓರಂ ಜಿ, ಶ್ರೀ ಧರ್ಮೇಂದ್ರ ಪ್ರಧಾನ್ ಜಿ ಮತ್ತು ಶ್ರೀ ಅಶ್ವಿನಿ ವೈಷ್ಣವ್ ಜಿ, ಒಡಿಶಾದ ಉಪ ಮುಖ್ಯಮಂತ್ರಿಗಳಾದ ಶ್ರೀ ಕನಕ್ ವರ್ಧನ್ ಸಿಂಗ್ ದೇವ್ ಜಿ ಮತ್ತು ಶ್ರೀಮತಿ ಪ್ರವತಿ ಪರಿದಾ ಜಿ, ರಾಜ್ಯ ಸರ್ಕಾರದ ಸಚಿವರೆ, ಸಂಸತ್ ಸದಸ್ಯರೆ,  ವಿಧಾನಸಭಾ ಸದಸ್ಯರೆ ಮತ್ತು ಒಡಿಶಾದ ನನ್ನ ಎಲ್ಲಾ ಸಹೋದರ ಸಹೋದರಿಯರೆ!

ಇಂದು ಅಂದರೆ ಜೂನ್ 20 ನಮಗೆಲ್ಲರಿಗೂ ಬಹಳ ವಿಶೇಷವಾದ ದಿನ. ಇಂದು ಒಡಿಶಾದ ಮೊದಲ ಬಿಜೆಪಿ ಸರ್ಕಾರವು ಯಶಸ್ವಿಯಾಗಿ 1 ವರ್ಷ ಪೂರೈಸಿದೆ. ಈ ವಾರ್ಷಿಕೋತ್ಸವವು ಕೇವಲ ಸರ್ಕಾರದ ವಾರ್ಷಿಕೋತ್ಸವವಲ್ಲ, ಇದು ಉತ್ತಮ ಆಡಳಿತ ಸ್ಥಾಪಿಸಿದ ವಾರ್ಷಿಕೋತ್ಸವ. ಈ ಒಂದು ವರ್ಷವನ್ನು ಸಾರ್ವಜನಿಕ ಸೇವೆ ಮತ್ತು ಸಾರ್ವಜನಿಕ ನಂಬಿಕೆಗೆ ಸಮರ್ಪಿಸಲಾಗಿದೆ. ಒಡಿಶಾದಲ್ಲಿ ಕೋಟ್ಯಂತರ ಮತದಾರರ ನಂಬಿಕೆಗೆ ತಕ್ಕಂತೆ ಬದುಕುವ ಪ್ರಾಮಾಣಿಕ ಪ್ರಯತ್ನಗಳ ಗಮನಾರ್ಹ ವರ್ಷವಾಗಿದೆ. ಒಡಿಶಾದ ಜನರಿಗೆ ಮತ್ತು ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಶ್ರೀ ಮೋಹನ್ ಮಾಂಝಿ ಜಿ ಮತ್ತು ಅವರ ಇಡೀ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನೀವೆಲ್ಲರೂ ಶ್ಲಾಘನೀಯ ಕೆಲಸ ಮಾಡಿದ್ದೀರಿ ಮತ್ತು ಒಡಿಶಾದ ಅಭಿವೃದ್ಧಿಗೆ ಹೊಸ ಆವೇಗ ನೀಡಿದ್ದೀರಿ.

 

ಸ್ನೇಹಿತರೆ,

ಒಡಿಶಾ ಕೇವಲ ಒಂದು ರಾಜ್ಯವಾಗದೆ, ಒಡಿಶಾ ಭಾರತದ ಪರಂಪರೆಯಲ್ಲಿ ಒಂದು ದೈವಿಕ ನಕ್ಷತ್ರವಾಗಿದೆ. ನೂರಾರು ವರ್ಷಗಳಿಂದ, ಒಡಿಶಾ ಭಾರತೀಯ ನಾಗರಿಕತೆ ಮತ್ತು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ಅದಕ್ಕಾಗಿಯೇ ಇಂದು, 'ವಿಕಾಸ್' (ಅಭಿವೃದ್ಧಿ) ಮತ್ತು 'ವಿರಾಸತ್'(ಪರಂಪರೆ) ಮಂತ್ರವು ಭಾರತದ ಪ್ರಗತಿಯ ಅಡಿಪಾಯವಾಗಿ ಮಾರ್ಪಟ್ಟಾಗ, ಒಡಿಶಾದ ಪಾತ್ರ ಇನ್ನೂ ಹೆಚ್ಚಾಗಿದೆ. ಕಳೆದ ವರ್ಷದಲ್ಲಿ, ಒಡಿಶಾ 'ವಿಕಾಸ್ ಭಿ, ವಿರಾಸತ್ ಭಿ' - ಅಭಿವೃದ್ಧಿ ಮತ್ತು ಪರಂಪರೆ ಎರಡೂ - ಎಂಬ ಈ ಮಂತ್ರವನ್ನು ನಿಜವಾಗಿಯೂ ಸ್ವೀಕರಿಸಿದೆ ಮತ್ತು ಈ ಮಂತ್ರದ ಮೇಲೆ ವೇಗವಾಗಿ ಮುಂದುವರೆದಿದೆ.

ಒಡಿಶಾದ ಬಿಜೆಪಿ ಸರ್ಕಾರವು 1 ವರ್ಷ ಪೂರ್ಣಗೊಳಿಸುತ್ತಿದ್ದಂತೆ, ನೀವೆಲ್ಲರೂ ಜಗನ್ನಾಥನ ರಥಯಾತ್ರೆಯ ಸಿದ್ಧತೆಗಳಲ್ಲಿ ಮುಳುಗಿರುವುದು ಆಹ್ಲಾದಕರ ಕಾಕತಾಳೀಯ ಸಂದರ್ಭವಾಗಿದೆ. ಮಹಾಪ್ರಭು ನಮಗೆ ದೇವತೆ ಮಾತ್ರವಲ್ಲ, ಅವರು ನಮ್ಮ ಸ್ಫೂರ್ತಿಯ ಸೆಲೆಯೂ ಹೌದು. ಅವರ ಆಶೀರ್ವಾದದಿಂದ ಶ್ರೀ ಮಂದಿರಕ್ಕೆ ಸಂಬಂಧಿಸಿದ ವಿಷಯಗಳು ಸಹ ಪರಿಹರಿಸಲ್ಪಟ್ಟಿವೆ. ಲಕ್ಷಾಂತರ ಭಕ್ತರ ಆಶಯಗಳನ್ನು ಗೌರವಿಸಿದ್ದಕ್ಕಾಗಿ ಮೋಹನ್ ಜಿ ಮತ್ತು ಅವರ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಸರ್ಕಾರ ರಚನೆಯಾದ ತಕ್ಷಣ, ಶ್ರೀ ಮಂದಿರದ 4 ದ್ವಾರಗಳನ್ನು ತೆರೆಯಲಾಯಿತು, ಶ್ರೀ ಮಂದಿರದ ರತ್ನ ಭಂಡಾರ(ನಿಧಿ ಭಂಡಾರ)ವನ್ನು ಸಹ ತೆರೆಯಲಾಗಿದೆ. ನಾನೀಗ ಸ್ಪಷ್ಟಪಡಿಸುತ್ತೇನೆ - ಇದು ರಾಜಕೀಯ ಲಾಭ ಅಥವಾ ಗೆಲುವಿನ ವಿಷಯವಲ್ಲ. ಇದು ಕೋಟ್ಯಂತರ ಭಕ್ತರ ಆಳವಾದ ನಂಬಿಕೆಯನ್ನು ಗೌರವಿಸುವ ಕೆಲಸವಾಗಿದೆ.

ಸ್ನೇಹಿತರೆ,

ಕೇವಲ 2 ದಿನಗಳ ಹಿಂದೆ, ನಾನು ಜಿ-7 ಶೃಂಗಸಭೆಗಾಗಿ ಕೆನಡಾದಲ್ಲಿದ್ದೆ, ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿ, "ನೀವು ಈಗಾಗಲೇ ಕೆನಡಾದಲ್ಲಿರುವುದರಿಂದ, ವಾಷಿಂಗ್ಟನ್‌ಗೆ ಏಕೆ ಬರಬಾರದು? ನಾವು ಭೋಜನ ಸವಿಯುತ್ತಾ ಮಾತನಾಡೋಣ" ಎಂದು ಅವರು ಆತ್ಮೀಯ ಆಹ್ವಾನ ನೀಡಿದರು. ನಾನು ಅಮೆರಿಕ ಅಧ್ಯಕ್ಷರಿಗೆ ಧನ್ಯವಾದ ಹೇಳಿದೆ, "ಆಹ್ವಾನಕ್ಕೆ ಧನ್ಯವಾದ ಹೇಳುತ್ತಾ, ನಾನು ಮಹಾಪ್ರಭುಗಳ ಭೂಮಿಗೆ ಹೋಗಲೇಬೇಕು" ಹಾಗಾಗಿ, ನಾನು ಅವರ ಆಹ್ವಾನವನ್ನು ಗೌರವದಿಂದ ತಿರಸ್ಕರಿಸಿದೆ, ನಿಮ್ಮ ಪ್ರೀತಿ, ಮಹಾಪ್ರಭುಗಳ ಮೇಲಿನ ಭಕ್ತಿಯೊಂದಿಗೆ, ನನ್ನನ್ನು ಈ ಪವಿತ್ರ ಭೂಮಿಗೆ ಕರೆತಂದಿದೆ.

 

ಸಹೋದರ ಸಹೋದರಿಯರೆ,

ಸ್ವಾತಂತ್ರ್ಯದ ನಂತರ ದಶಕಗಳವರೆಗೆ, ದೇಶವು ಕಾಂಗ್ರೆಸ್ ಮಾದರಿಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಮಾದರಿಯು ಉತ್ತಮ ಆಡಳಿತವನ್ನು ನೀಡಲಿಲ್ಲ, ಜನರ ಜೀವನವನ್ನು ಸುಲಭಗೊಳಿಸಲಿಲ್ಲ. ಅಭಿವೃದ್ಧಿ ಯೋಜನೆಗಳನ್ನು ವಿಳಂಬ ಮಾಡುವುದು, ಸ್ಥಗಿತಗೊಳಿಸುವುದು ಮತ್ತು ಹಳಿ ತಪ್ಪಿಸುವುದು - ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ವಿಶಿಷ್ಟ ಲಕ್ಷಣವಾಯಿತು. ಕಳೆದ ಕೆಲವು ವರ್ಷಗಳಿಂದ, ದೇಶವು ಬಿಜೆಪಿಯ ಅಭಿವೃದ್ಧಿ ಮಾದರಿಯನ್ನು ವ್ಯಾಪಕವಾಗಿ ಅನುಭವಿಸುತ್ತಿದೆ. ಕಳೆದ ದಶಕದಲ್ಲಿ, ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿದ ಹಲವಾರು ರಾಜ್ಯಗಳಿವೆ. ಈ ರಾಜ್ಯಗಳಲ್ಲಿ, ಇದು ಕೇವಲ ಸರ್ಕಾರ ಬದಲಾವಣೆಯಾಗಿರಲಿಲ್ಲ - ಇದು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯ ಹೊಸ ಯುಗದ ಆರಂಭವನ್ನು ಗುರುತಿಸಿತು. ಪೂರ್ವ ಭಾರತದ ಉದಾಹರಣೆಗಳೊಂದಿಗೆ ಇದನ್ನು ವಿವರಿಸುತ್ತೇನೆ. ಅಸ್ಸಾಂ ಪ್ರಕರಣವನ್ನು ತೆಗೆದುಕೊಳ್ಳಿ. ಕೇವಲ ಒಂದು ದಶಕದ ಹಿಂದೆ, ಅಸ್ಸಾಂನಲ್ಲಿ ಪರಿಸ್ಥಿತಿ ಭೀಕರವಾಗಿತ್ತು - ಅಸ್ಥಿರತೆ, ಪ್ರತ್ಯೇಕತಾವಾದ ಮತ್ತು ಹಿಂಸಾಚಾರ ಅತಿರೇಕವಾಗಿತ್ತು. ಆದರೆ ಇಂದು ಅಸ್ಸಾಂ ಅಭಿವೃದ್ಧಿಯ ಹೊಸ ಹಾದಿಯಲ್ಲಿ ಮುನ್ನಡೆಯುತ್ತಿದೆ. ದಶಕಗಳ ಕಾಲದ ದಂಗೆಕೋರ ಚಟುವಟಿಕೆಗಳು ಕೊನೆಗೊಂಡಿವೆ. ಅನೇಕ ರಂಗಗಳಲ್ಲಿ ಅಸ್ಸಾಂ ಈಗ ದೇಶದ ಇತರ ರಾಜ್ಯಗಳಿಗಿಂತ ಉತ್ತಮ ಬೆಳವಣಿಗೆ ಕಾಣುತ್ತಿದೆ. ಅದೇ ರೀತಿ, ನಾನು ಇನ್ನೊಂದು ರಾಜ್ಯದ ಬಗ್ಗೆ ಮಾತನಾಡಲು ಬಯಸುತ್ತೇನೆ, ಅಂದರೆ ತ್ರಿಪುರ. ದಶಕಗಳ ಎಡಪಂಥೀಯ ಆಳ್ವಿಕೆಯ ನಂತರ, ಜನರು ಬಿಜೆಪಿಗೆ ಮೊದಲ ಬಾರಿಗೆ ಅವಕಾಶ ನೀಡಿದರು. ಅಭಿವೃದ್ಧಿಯ ವಿಷಯದಲ್ಲಿ ತ್ರಿಪುರವೂ ಬಹಳ ಹಿಂದುಳಿದಿತ್ತು. ಮೂಲಸೌಕರ್ಯ ಭೀಕರ ಸ್ಥಿತಿಯಲ್ಲಿತ್ತು, ಜನರ ಧ್ವನಿಯನ್ನು ಸರ್ಕಾರಿ ಯಂತ್ರಗಳು ಕೇಳಿಸಿಕೊಳ್ಳುತ್ತಿರಲಿಲ್ಲ, ಎಲ್ಲರೂ ಹಿಂಸೆ ಮತ್ತು ಭ್ರಷ್ಟಾಚಾರದಿಂದ ತೊಂದರೆಗೀಡಾಗಿದ್ದರು. ಆದರೆ ಬಿಜೆಪಿಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಾಗಿನಿಂದ, ತ್ರಿಪುರಾ ಈಗ ಶಾಂತಿ ಮತ್ತು ಪ್ರಗತಿಯ ಸಂಕೇತವಾಗುತ್ತಿದೆ.

ಸ್ನೇಹಿತರೆ,

ನಮ್ಮ ಒಡಿಶಾ ಕೂಡ ದಶಕಗಳಿಂದ ಅನೇಕ ಸಮಸ್ಯೆಗಳಿಂದ ಬಳಲುತ್ತಿತ್ತು. ಬಡವರು, ರೈತರು - ಅವರಿಗೆ ತಮ್ಮ ನ್ಯಾಯಯುತ ಪಾಲು ಸಿಗಲಿಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರಗಳು ಹೆಚ್ಚಾಗಿದ್ದವು. ಒಡಿಶಾದ ಮೂಲಸೌಕರ್ಯ ಕೆಟ್ಟ ಸ್ಥಿತಿಯಲ್ಲಿತ್ತು. ಒಡಿಶಾದ ಹಲವಾರು ಪ್ರದೇಶಗಳು ಅಭಿವೃದ್ಧಿಯ ಓಟದಲ್ಲಿ ನಿರಂತರವಾಗಿ ಹಿಂದುಳಿದಿದ್ದವು. ಈ ಸವಾಲುಗಳು ಒಡಿಶಾದ ದುರದೃಷ್ಟಕರ ವಾಸ್ತವದ ಭಾಗವಾಗಿದ್ದವು. ಈ ಸವಾಲುಗಳನ್ನು ನಿವಾರಿಸಲು ಬಿಜೆಪಿ ಸರ್ಕಾರ ಕಳೆದ 1 ವರ್ಷದಲ್ಲಿ ಪೂರ್ಣ ಶಕ್ತಿ ಮತ್ತು ಬದ್ಧತೆಯೊಂದಿಗೆ ಕೆಲಸ ಮಾಡಿದೆ.

 

ಸ್ನೇಹಿತರೆ,

ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಬಲ್-ಎಂಜಿನ್ ಅಭಿವೃದ್ಧಿ ಮಾದರಿಯು ಅದರ ಪ್ರಯೋಜನಗಳನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಇಂದಿಗೂ ಸಾವಿರಾರು ಕೋಟಿ ರೂಪಾಯಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯು ಈ ಡಬಲ್ ಎಂಜಿನ್‌ನ ಗುರುತು ಹೊಂದಿದೆ. ಡಬಲ್ ಎಂಜಿನ್ ಒಡಿಶಾದ ಜನರಿಗೆ ಡಬಲ್ ಪ್ರಯೋಜನಗಳನ್ನು ನೀಡಿದೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ನಿಮಗೆ ತಿಳಿದಿರುವಂತೆ, ಒಡಿಶಾದ ಲಕ್ಷಾಂತರ ಬಡ ಕುಟುಂಬಗಳು ದೀರ್ಘ ಕಾಲದವರೆಗೆ ಆಯುಷ್ಮಾನ್ ಭಾರತ್ ಯೋಜನೆಯಿಂದ ಹೊರಗುಳಿದಿದ್ದವು. ಇಂದು ಆಯುಷ್ಮಾನ್ ಭಾರತ್ ಜನ ಆರೋಗ್ಯ ಯೋಜನೆ ಮತ್ತು ಗೋಪಬಂಧು ಜನ ಆರೋಗ್ಯ ಯೋಜನೆ ಎರಡೂ ಒಟ್ಟಿಗೆ ನಡೆಯುತ್ತಿವೆ. ಇದರ ಪರಿಣಾಮವಾಗಿ, ಒಡಿಶಾದಲ್ಲಿ ಸುಮಾರು 3 ಕೋಟಿ ಜನರಿಗೆ ಈಗ ಉಚಿತ ವೈದ್ಯಕೀಯ ಚಿಕಿತ್ಸೆಯ ಭರವಸೆ ನೀಡಲಾಗಿದೆ. ಒಡಿಶಾದೊಳಗಿನ ಆಸ್ಪತ್ರೆಗಳಲ್ಲಿ ಮಾತ್ರವಲ್ಲ - ಒಡಿಶಾದ ಯಾರಾದರೂ ಬೇರೆ ರಾಜ್ಯದಲ್ಲಿ ಕೆಲಸಕ್ಕೆ ಹೋದರೂ ಸಹ, ಈಗ ಅವರಿಗೆ ಅಲ್ಲಿಯೂ ಸಹ ಅಗತ್ಯವಿದ್ದಾಗ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿದೆ. ನಾನು ಗಮನಿಸಿದ ಒಂದು ವಿಷಯ ಹಂಚಿಕೊಳ್ಳುತ್ತೇನೆ. ನಾನು ಗುಜರಾತ್‌ನಲ್ಲಿ ಜನಿಸಿದೆ, ಸೂರತ್‌ನಲ್ಲಿ ನೀವು ಕೆಲವೇ ಹೆಜ್ಜೆಗಳನ್ನು ನಡೆದರೆ ನೀವು ಒಡಿಶಾದ ಯಾರನ್ನಾದರೂ ಭೇಟಿಯಾಗುತ್ತೀರಿ - ಅಲ್ಲಿ ಅನೇಕ ಒಡಿಶಾ ಜನರು ವಾಸಿಸುತ್ತಿದ್ದಾರೆ. ಈಗ ಸೂರತ್‌ನಲ್ಲಿ ವಾಸಿಸುವ ಒಡಿಶಾ ಸಹೋದರ ಸಹೋದರಿಯರು ಸಹ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಇಲ್ಲಿಯವರೆಗೆ, ಒಡಿಶಾದ 2 ಲಕ್ಷ ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ, ಅವರಲ್ಲಿ ಅನೇಕರು ದೇಶಾದ್ಯಂತ ಒಂದು ಡಜನ್‌ಗಿಂತಲೂ ಹೆಚ್ಚು ರಾಜ್ಯಗಳಲ್ಲಿ ಉಚಿತ ವೈದ್ಯಕೀಯ ಆರೈಕೆ ಪಡೆದಿದ್ದಾರೆ. ಒಂದು ವರ್ಷದ ಹಿಂದೆ ಅಂತಹ ಸೌಲಭ್ಯವು ಅನೇಕ ಜನರಿಗೆ ಊಹಿಸಲೂ ಸಾಧ್ಯವಿಲ್ಲ. ಈ ಡಬಲ್-ಎಂಜಿನ್ ಮಾದರಿಗೆ ಧನ್ಯವಾದಗಳು, ನಾವು ನಿರೀಕ್ಷೆಗಿಂತ ಹೆಚ್ಚಿನದನ್ನು ಸಾಧಿಸಿದ್ದೇವೆ. ಒಂದು ಸುವರ್ಣ ಅವಕಾಶ, ಇದನ್ನು ಇನ್ನಷ್ಟು ವಿಶೇಷವಾಗಿಸಿದೆ.

ಒಡಿಶಾದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ 23 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿದ್ದಾರೆ. ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯ ಮೂಲಕ ಅವರು ಈಗ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಅಂದರೆ ನಮ್ಮ ಸರ್ಕಾರವು ಸಾಮಾನ್ಯ ಕುಟುಂಬಗಳ ದೊಡ್ಡ ಚಿಂತೆಗಳಲ್ಲಿ ಒಂದನ್ನು ಪರಿಹರಿಸಿದೆ. ಅದೇ ರೀತಿ, ಈ ಹಿಂದೆ, ಒಡಿಶಾದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪೂರ್ಣ ಪ್ರಯೋಜನಗಳನ್ನು ಪಡೆಯುತ್ತಿರಲಿಲ್ಲ. ಈಗ ಒಡಿಶಾದ ರೈತರು ಕೇಂದ್ರ ಮತ್ತು ರಾಜ್ಯ ಯೋಜನೆಗಳಿಂದ 2 ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ನಾವು ನೀಡಿದ ಖಾತರಿಯು ಲಕ್ಷಾಂತರ ಭತ್ತ ಬೆಳೆಗಾರರಿಗೆ ಪ್ರಯೋಜನ ನೀಡಿದೆ.

 

ಸ್ನೇಹಿತರೆ,

ಹಿಂದೆ ಒಡಿಶಾಗೆ ಪೂರ್ಣ ಪ್ರಯೋಜನಗಳು ಎಂದಿಗೂ ತಲುಪದ ಅನೇಕ ಕೇಂದ್ರ ಸರ್ಕಾರದ ಯೋಜನೆಗಳಿದ್ದವು. ಆದರೆ ಈಗ, ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಚುನಾವಣೆಯ ಸಮಯದಲ್ಲಿ ನಾವು ತಾಯಂದಿರು ಮತ್ತು ಸಹೋದರಿಯರು, ರೈತರು ಮತ್ತು ಯುವಕರಿಗೆ ನೀಡಿದ ಭರವಸೆಗಳು - ಆ ಭರವಸೆಗಳನ್ನು ತ್ವರಿತವಾಗಿ ನೆಲದ ಮೇಲೆ ಜಾರಿಗೆ ತರಲಾಗುತ್ತಿದೆ.

ಸ್ನೇಹಿತರೆ,

ನಮ್ಮ ಸರ್ಕಾರದ ದೊಡ್ಡ ಸಾಧನೆಗಳಲ್ಲಿ ಒಂದು ಹಿಂದುಳಿದವರ ಸಬಲೀಕರಣ. ಒಡಿಶಾದಲ್ಲಿ ಜನಸಂಖ್ಯೆಯ ಹೆಚ್ಚಿನ ಭಾಗವು ನಮ್ಮ ಬುಡಕಟ್ಟು ಸಮುದಾಯಗಳಿಗೆ ಸೇರಿದೆ. ದುರದೃಷ್ಟವಶಾತ್, ಈ ಸಮುದಾಯಗಳನ್ನು ಹಿಂದೆ ನಿರಂತರವಾಗಿ ನಿರ್ಲಕ್ಷಿಸಲಾಗಿದೆ. ಅವರು ಬಡತನ ಮತ್ತು ಕೊರತೆಗಳಿಂದ ಬಳಲುತ್ತಿದ್ದರು.  ದಶಕಗಳಿಂದ ದೇಶವನ್ನು ಆಳಿದ ಪಕ್ಷವು ಬುಡಕಟ್ಟು ಜನಸಂಖ್ಯೆಯನ್ನು ಕೇವಲ ರಾಜಕೀಯ ಲಾಭಕ್ಕಾಗಿ ಸಾಧನವಾಗಿ ಬಳಸಿಕೊಂಡಿತು. ಈ ಜನರು ಬುಡಕಟ್ಟು ಸಮುದಾಯಗಳಿಗೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಬದಲಾಗಿ, ಅವರು ದೇಶದ ವಿಶಾಲ ಪ್ರದೇಶಗಳನ್ನು ನಕ್ಸಲಿಸಂ, ಹಿಂಸೆ ಮತ್ತು ದಬ್ಬಾಳಿಕೆಯ ಬೆಂಕಿಗೆ ತಳ್ಳಿದರು.

 

ಸ್ನೇಹಿತರೆ,

2014ರ ಮೊದಲು ಪರಿಸ್ಥಿತಿ ಹೇಗಿತ್ತು ಎಂದರೆ ದೇಶದಲ್ಲಿ 125ಕ್ಕೂ ಹೆಚ್ಚು ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳು ನಕ್ಸಲ್ ಹಿಂಸಾಚಾರದ ಹಿಡಿತದಲ್ಲಿದ್ದವು. ಬುಡಕಟ್ಟು ಪ್ರದೇಶಗಳನ್ನು "ರೆಡ್ ಕಾರಿಡಾರ್" ಎಂಬ ಹಣೆಪಟ್ಟಿಯಡಿ ಕಳಂಕಿತಗೊಳಿಸಲಾಯಿತು. ಈ ಜಿಲ್ಲೆಗಳಲ್ಲಿ ಹೆಚ್ಚಿನವುಗಳನ್ನು "ಹಿಂದುಳಿದಿವೆ" ಎಂದು ಸರಳವಾಗಿ ಘೋಷಿಸಿದ ಸರ್ಕಾರಗಳು ಅವುಗಳನ್ನು ಅಭಿವೃದ್ಧಿ ಮಾಡದೆ ಕೈತೊಳೆದುಕೊಂಡವು.

ಸಹೋದರ ಸಹೋದರಿಯರೆ,

ಇತ್ತೀಚಿನ ವರ್ಷಗಳಲ್ಲಿ, ಬುಡಕಟ್ಟು ಸಮುದಾಯಗಳನ್ನು ಹಿಂಸಾಚಾರದ ವಾತಾವರಣದಿಂದ ಹೊರತಂದು ಅಭಿವೃದ್ಧಿಯ ಹೊಸ ಹಾದಿಯಲ್ಲಿ ಇರಿಸಲು ನಾವು ಕೆಲಸ ಮಾಡಿದ್ದೇವೆ. ಬಿಜೆಪಿ ಸರ್ಕಾರವು ಒಂದೆಡೆ ಹಿಂಸಾಚಾರ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಮತ್ತೊಂದೆಡೆ, ಬುಡಕಟ್ಟು ಪ್ರದೇಶಗಳಿಗೆ ಅಭಿವೃದ್ಧಿಯ ಅಲೆಯನ್ನು ತಂದಿದೆ. ಇದರ ಪರಿಣಾಮವಾಗಿ, ನಕ್ಸಲ್ ಹಿಂಸಾಚಾರ ಇಂದು ಇಡೀ ದೇಶದಲ್ಲಿ 20ಕ್ಕಿಂತ ಕಡಿಮೆ ಜಿಲ್ಲೆಗಳಿಗೆ ಕುಗ್ಗಿದೆ. ಶೀಘ್ರದಲ್ಲೇ ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ಹಿಂಸಾಚಾರದಿಂದ ಸಂಪೂರ್ಣ ಮುಕ್ತರಾಗುತ್ತಾರೆ. ದೇಶದಿಂದ ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡಲಾಗುತ್ತದೆ - ಇದು ಮೋದಿಯವರ ಭರವಸೆಯಾಗಿದೆ.

 

ಸ್ನೇಹಿತರೆ,

ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಕನಸುಗಳನ್ನು ನನಸಾಗಿಸುವುದು, ಅವರಿಗೆ ಹೊಸ ಅವಕಾಶಗಳನ್ನು ಒದಗಿಸುವುದು ಮತ್ತು ಅವರ ಜೀವನದ ಕಷ್ಟಗಳನ್ನು ಕಡಿಮೆ ಮಾಡುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಾಗಿವೆ. ಅದಕ್ಕಾಗಿಯೇ, ಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ 2 ಪ್ರಮುಖ ರಾಷ್ಟ್ರೀಯ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಈ 2 ಯೋಜನೆಗಳಿಗೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗುತ್ತಿದೆ. ಮೊದಲ ಯೋಜನೆ 'ಧರ್ತಿ ಆಬಾ ಜನಜಾತಿಯಾ ಗ್ರಾಮ ಉತ್ಕರ್ಷ್ ಅಭಿಯಾನ', ಇದಕ್ಕೆ ಬಿರ್ಸಾ ಮುಂಡಾ ಜಿ ಹೆಸರಿಡಲಾಗಿದೆ. ಈ ಉಪಕ್ರಮದಡಿ, ದೇಶಾದ್ಯಂತ 60,000ಕ್ಕೂ ಹೆಚ್ಚು ಬುಡಕಟ್ಟು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಒಡಿಶಾದಲ್ಲಿಯೂ ಸಹ, ಬುಡಕಟ್ಟು ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ, ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ವಿದ್ಯುತ್ ಮತ್ತು ಶುದ್ಧ ನೀರಿನ ಪ್ರವೇಶ ಒದಗಿಸಲಾಗುತ್ತಿದೆ. ಒಡಿಶಾದ 11 ಜಿಲ್ಲೆಗಳಲ್ಲಿ, 40 ವಸತಿ ಶಾಲೆಗಳನ್ನು ಸಹ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಈ ಪ್ರಯತ್ನದಲ್ಲಿ ನೂರಾರು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ.

ಸ್ನೇಹಿತರೆ,

2ನೇ ಯೋಜನೆ ಪ್ರಧಾನ ಮಂತ್ರಿ-ಜನ್ಮನ್ ಯೋಜನೆ. ಈ ಯೋಜನೆಗೆ ಸ್ಫೂರ್ತಿ ಒಡಿಶಾ ಭೂಮಿಯಿಂದ ಬಂದಿದೆ. ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ, ಒಡಿಶಾದ ಸ್ವಂತ ಪುತ್ರಿ, ಗೌರವಾನ್ವಿತ ದ್ರೌಪದಿ ಮುರ್ಮು ಜಿ ಅವರು ಈ ಉಪಕ್ರಮ ರೂಪಿಸಲು ನಮಗೆ ಮಾರ್ಗದರ್ಶನ ನೀಡಿದ್ದಾರೆ. ಈ ಯೋಜನೆಯಡಿ, ಅತ್ಯಂತ ನಿರ್ಲಕ್ಷಿತ ಅಥವಾ ಸಂಕಷ್ಟದಲ್ಲಿರುವ ಬುಡಕಟ್ಟು ಸಮುದಾಯಗಳನ್ನು ಉನ್ನತೀಕರಿಸಲು ಪ್ರಯತ್ನಗಳು ನಡೆಯುತ್ತಿವೆ. ಅನೇಕ ಸಣ್ಣ ಬುಡಕಟ್ಟು ಹಳ್ಳಿಗಳಲ್ಲಿ, ನೂರಾರು ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ.

 

ಸ್ನೇಹಿತರೆ,

ಒಡಿಶಾದಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಾರರು ವಾಸಿಸುತ್ತಿದ್ದಾರೆ. ಅವರಿಗೂ ಮೊದಲ ಬಾರಿಗೆ, ಪ್ರಮುಖ ರಾಷ್ಟ್ರವ್ಯಾಪಿ ಯೋಜನೆ - ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಪ್ರಾರಂಭಿಸಲಾಗಿದೆ. ಮೊದಲ ಬಾರಿಗೆ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳಿಗೆ ಪ್ರವೇಶ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು 25,000 ಕೋಟಿ ರೂಪಾಯಿಗಳ ವಿಶೇಷ ನಿಧಿ ರೂಪಿಸಲು ಸಿದ್ಧತೆ ನಡೆಸುತ್ತಿದೆ. ಇದು ಒಡಿಶಾದ ನಮ್ಮ ಕರಾವಳಿ ಸಮುದಾಯಗಳಿಗೆ ಮತ್ತು ನಮ್ಮ ಯುವಕರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

21ನೇ ಶತಮಾನದ ಭಾರತದ ಅಭಿವೃದ್ಧಿಯು ಪೂರ್ವ ಭಾರತದಿಂದ ವೇ ಪಡೆಯಲಿದೆ. ಇದು "ಪೂರ್ವೋದಯ" ಯುಗ - ಪೂರ್ವದ ಉದಯ. ಈ ಮನೋಭಾವದಿಂದ ನಾವು ಒಡಿಶಾ ಮತ್ತು ದೇಶದ ಸಂಪೂರ್ಣ ಪೂರ್ವ ಪ್ರದೇಶದ ಅಭಿವೃದ್ಧಿಗೆ ಸಮರ್ಪಿತರಾಗಿದ್ದೇವೆ. 1 ವರ್ಷದ ಹಿಂದೆ ಒಡಿಶಾದಲ್ಲಿ ಬಿಜೆಪಿ ಸರ್ಕಾರದ ರಚನೆಯು ಈ ಧ್ಯೇಯವನ್ನು ಮತ್ತಷ್ಟು ವೇಗಗೊಳಿಸಿದೆ. ಪರದೀಪ್‌ನಿಂದ ಜಾರ್ಸುಗುಡಾದವರೆಗೆ ಕೈಗಾರಿಕಾ ವಲಯಗಳು ವಿಸ್ತರಿಸುತ್ತಿವೆ. ಇದು ಒಡಿಶಾದ ಖನಿಜ ಮತ್ತು ಬಂದರು ನೇತೃತ್ವದ ಆರ್ಥಿಕತೆಯನ್ನು ಬಲಪಡಿಸುತ್ತಿದೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಸ್ತೆ, ರೈಲು ಮತ್ತು ವಾಯು ಸಂಪರ್ಕದಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಪರದೀಪ್‌ನಲ್ಲಿ ಮೆಗಾ ಡ್ಯುಯಲ್-ಫೀಡ್ ಕ್ರ್ಯಾಕರ್ ಮತ್ತು ಡೌನ್‌ಸ್ಟ್ರೀಮ್ ಘಟಕಗಳ ಸ್ಥಾಪನೆಯಾಗಿರಲಿ, ಚಂಡಿಖೋಲ್‌ನಲ್ಲಿ ಕಚ್ಚಾ ತೈಲ ಸಂಗ್ರಹಣಾ ಸೌಲಭ್ಯವಾಗಲಿ ಅಥವಾ ಗೋಪಾಲ್‌ಪುರದಲ್ಲಿ ಎಲ್‌ಎನ್‌ಜಿ ಟರ್ಮಿನಲ್ ನಿರ್ಮಾಣವಾಗಲಿ - ಈ ಎಲ್ಲಾ ಹಂತಗಳು ಒಡಿಶಾವನ್ನು ಪ್ರಮುಖ ಕೈಗಾರಿಕಾ ರಾಜ್ಯವಾಗಿ ಸ್ಥಾಪಿಸಲು ಕೆಲಸ ಮಾಡುತ್ತಿವೆ. ಪೆಟ್ರೋಲಿಯಂ, ಪೆಟ್ರೋಕೆಮಿಕಲ್ಸ್, ಜವಳಿ ಮತ್ತು ಪ್ಲಾಸ್ಟಿಕ್‌ಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಇಲ್ಲಿ ಪ್ರಮುಖ ಉತ್ತೇಜನ ಪಡೆಯುತ್ತವೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ಗಳ ವ್ಯಾಪಕ ಜಾಲವನ್ನು ಸೃಷ್ಟಿಸುತ್ತದೆ, ಯುವಕರಿಗೆ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳನ್ನು ತರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಒಡಿಶಾದಲ್ಲಿ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಲಯವು ಸುಮಾರು 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಕಂಡಿದೆ. ಒಡಿಶಾ ಭಾರತದ ಪೆಟ್ರೋಕೆಮಿಕಲ್ ಕೇಂದ್ರವಾಗುವತ್ತ ವೇಗವಾಗಿ ಮುನ್ನಡೆಯುತ್ತಿದೆ.

ಸ್ನೇಹಿತರೆ,

ದೊಡ್ಡ ಗುರಿಗಳನ್ನು ಸಾಧಿಸಲು, ನಾವು ಬಹಳ ಮುಂದೆ ನೋಡಬೇಕು - ನಮಗೆ ದೂರದೃಷ್ಟಿ ಇರಬೇಕು. ಇಲ್ಲಿನ ನಮ್ಮ ಬಿಜೆಪಿ ಸರ್ಕಾರವು ಕೇವಲ 1 ವರ್ಷದ ಸಾಧನೆಗಳನ್ನು ಆಚರಿಸಲು ಅಥವಾ 5 ವರ್ಷಗಳ ಮುಂದೆ ಯೋಚಿಸಲು ಸೀಮಿತವಾಗಿಲ್ಲ. ಮುಂಬರುವ ದಶಕಗಳಲ್ಲಿ ಒಡಿಶಾದ ಅಭಿವೃದ್ಧಿಗಾಗಿ ದೀರ್ಘಾವಧಿಯ ಮಾರ್ಗಸೂಚಿಯಲ್ಲಿ ಅದು ಕೆಲಸ ಮಾಡುತ್ತಿದೆ. ರಾಜ್ಯವು ತನ್ನ ಸಂಸ್ಥಾಪನೆಯ 100 ವರ್ಷಗಳನ್ನು ಆಚರಿಸುವ 2036ಕ್ಕೆ ಒಡಿಶಾ ಸರ್ಕಾರವು ವಿಶೇಷ ಯೋಜನೆ ಸಿದ್ಧಪಡಿಸಿದೆ. ಒಡಿಶಾದ ಬಿಜೆಪಿ ಸರ್ಕಾರವು ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವ 2047ಕ್ಕೆ ಒಂದು ದೃಷ್ಟಿಕೋನ ಹೊಂದಿದೆ. ನಾನು ಒಡಿಶಾ ವಿಷನ್ 2036 ಅನ್ನು ಪರಿಶೀಲಿಸುತ್ತಿದ್ದೆ, ಅದು ಕೆಲವು ಮಹತ್ವಾಕಾಂಕ್ಷೆಯ ಗುರಿಗಳನ್ನು ಒಳಗೊಂಡಿದೆ. ಒಡಿಶಾದ ಯುವಕರ ಪ್ರತಿಭೆ ಮತ್ತು ಕಠಿಣ ಪರಿಶ್ರಮದಿಂದ, ನೀವು ಪ್ರತಿಯೊಂದು ಗುರಿ ಸಾಧಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಒಟ್ಟಾಗಿ, ನಾವು ಒಡಿಶಾವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ. ಈ ಭರವಸೆಯೊಂದಿಗೆ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಮತ್ತೊಮ್ಮೆ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು! ಜೋಹರ್!

ಜೈ ಜಗನ್ನಾಥ್!

ಜೈ ಜಗನ್ನಾಥ್!

ಜೈ ಜಗನ್ನಾಥ್!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
For India, AI is 'All Inclusive' , mustbe human-centric: PM Modi

Media Coverage

For India, AI is 'All Inclusive' , mustbe human-centric: PM Modi
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of knowledge, wisdom and foresight
June 19, 2026

The Prime Minister, Shri Narendra Modi has said that virtues such as knowledge, wisdom and foresight are the foundation of success in life. He noted that a person enriched with these qualities is able to overcome even the most difficult challenges and emerge victorious.

The Prime Minister shared a Sanskrit Subhashitam-

“शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।

कालानुरोधः प्रतिभानवत्त्वमेते गुणाः कामदुघाः क्रियासु ॥”

The Subhashitam conveys that authentic knowledge of the subject, natural prudence, fearless self-confidence, powerful speech refined through practice, foresight to recognize the demands of the time and ever-new wisdom, these six qualities prove to be like 'kamadhenu' in every endeavor of a human being, which helps in achieving every goal.

The Prime Minister wrote on X;

“ज्ञान, विवेक और दूरदर्शिता जैसे सद्गुण जीवन में सफलता का प्रमुख आधार हैं। इनसे समृद्ध व्यक्ति कठिन से कठिन चुनौतियों में भी विजयी होता है।

शास्त्रे प्रतिष्ठा सहजश्च बोधः प्रागल्भ्यमभ्यस्तगुणा च वाणी ।

कालानुरोधः प्रतिभानवत्त्वमेते गुणाः कामदुघाः क्रियासु ॥”