"ಭಾರತವನ್ನು ಅಭಿವೃದ್ಧಿ ಮಾಡಲು, ಅದರ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಅಷ್ಟೇ ಮುಖ್ಯ"
"ಕಳೆದ ಎಂಟು ವರ್ಷಗಳಲ್ಲಿ ದೇಶದ ಪ್ರಮುಖ ಆದ್ಯತೆಗಳಲ್ಲಿ ಸಮಗ್ರ ಆರೋಗ್ಯ ರಕ್ಷಣೆಯನ್ನು ಸೇರಿಸಲಾಗಿದೆ"
"ಕಳೆದ 8 ವರ್ಷಗಳಲ್ಲಿ, ದೇಶದಲ್ಲಿ 200 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ"
"ಪ್ರಗತಿಶೀಲ ಸಮಾಜವಾಗಿ, ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಆಲೋಚನೆಯಲ್ಲಿ ಬದಲಾವಣೆ ಮತ್ತು ಮುಕ್ತತೆಯನ್ನು ತರುವುದು ಸಹ ನಮ್ಮ ಜವಾಬ್ದಾರಿಯಾಗಿದೆ"
"ಮೇಡ್ ಇನ್ ಇಂಡಿಯಾ 5 ಜಿ ಸೇವೆಗಳು ದೂರ ಪ್ರದೇಶದ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲಿವೆ"

ಪಂಜಾಬ್ ರಾಜ್ಯಪಾಲ ಶ್ರೀ ಬನ್ವಾರಿ ಲಾಲ್ ಪುರೋಹಿತ್ ಜೀ, ಮುಖ್ಯಮಂತ್ರಿ ಶ್ರೀ ಭಗವಂತ್ ಮಾನ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜೀ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಮನೀಶ್ ತಿವಾರಿ ಜೀ, ಎಲ್ಲಾ ವೈದ್ಯರು, ಸಂಶೋಧಕರು, ಅರೆವೈದ್ಯಕೀಯ ಸಿಬ್ಬಂದಿ, ಇತರ ಉದ್ಯೋಗಿಗಳು ಮತ್ತು ಪಂಜಾಬ್ ನ ಮೂಲೆ ಮೂಲೆಗಳಿಂದ ಬಂದಿರುವ ನನ್ನ ಪ್ರೀತಿಯ ಸಹೋದರಿಯರು ಮತ್ತು ಸಹೋದರರೇ!

ದೇಶವು ಸ್ವಾತಂತ್ರ್ಯದ 'ಅಮೃತ ಕಾಲ'ದಲ್ಲಿ ಹೊಸ ನಿರ್ಣಯಗಳನ್ನು ಕೈಗೊಂಡು ಸಾಧಿಸುವತ್ತ ಸಾಗುತ್ತಿದೆ. ಇಂದಿನ ಕಾರ್ಯಕ್ರಮವು ದೇಶದ ಆರೋಗ್ಯ ಸೇವೆಗಳ ಸುಧಾರಣೆಯ ಪ್ರತಿಬಿಂಬವಾಗಿದೆ. ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಜನರಿಗೆ ಪ್ರಯೋಜನಕಾರಿಯಾಗಲಿದೆ. ಇಂದು ನಾನು ಮತ್ತೊಂದು ಕಾರಣಕ್ಕಾಗಿ ಈ ಭೂಮಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಪಂಜಾಬ್ ಸ್ವಾತಂತ್ರ್ಯ ಹೋರಾಟಗಾರರ, ಕ್ರಾಂತಿಕಾರಿಗಳ ಮತ್ತು ದೇಶಭಕ್ತಿಯ ಪವಿತ್ರ ಭೂಮಿಯಾಗಿದೆ. 'ಹರ್ ಘರ್ ತಿರಂಗಾ' ಅಭಿಯಾನದ ಸಮಯದಲ್ಲಿಯೂ ಪಂಜಾಬ್ ಈ ಸಂಪ್ರದಾಯವನ್ನು ಬಹಳ ಉಲ್ಲಾಸದಿಂದ ಉಳಿಸಿಕೊಂಡು ಪಾಲಿಸಿದೆ. ಇಂದು, 'ಹರ್ ಘರ್ ತಿರಂಗಾ' ಅಭಿಯಾನವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ನಾನು ಪಂಜಾಬ್ ಜನತೆಗೆ, ವಿಶೇಷವಾಗಿ ಪಂಜಾಬಿನ ಯುವಜನತೆಗೆ  ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಕೆಲವು ದಿನಗಳ ಹಿಂದೆ, ನಾವೆಲ್ಲರೂ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ಭಾರತವನ್ನಾಗಿ ಮಾಡಲು ಕೆಂಪು ಕೋಟೆಯಿಂದ ಪ್ರತಿಜ್ಞೆ ತೆಗೆದುಕೊಂಡಿದ್ದೇವೆ. ಭಾರತವನ್ನು ಅಭಿವೃದ್ಧಿಗೊಳಿಸಲು, ಅದರ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವುದು ಅಷ್ಟೇ ಮುಖ್ಯವಾಗಿದೆ. ಭಾರತದ ಜನರು ಚಿಕಿತ್ಸೆಗಾಗಿ ಆಧುನಿಕ ಆಸ್ಪತ್ರೆಗಳು ಮತ್ತು ಸೌಲಭ್ಯಗಳನ್ನು ಪಡೆದಾಗ, ಅವರು ಬೇಗನೆ ಗುಣಮುಖರಾಗುತ್ತಾರೆ, ಅವರ ಶಕ್ತಿ ಸರಿಯಾದ ದಿಕ್ಕಿನಲ್ಲಿ ವ್ಯಯವಾಗುತ್ತದೆ ಮತ್ತು ಅವರ ಉತ್ಪಾದಕತೆ ಹೆಚ್ಚುತ್ತದೆ. ಇಂದು ದೇಶವು ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೂಪದಲ್ಲಿ ಆಧುನಿಕ ಆಸ್ಪತ್ರೆಯನ್ನು ಪಡೆದಿದೆ. ಈ ಆಧುನಿಕ ಸೌಲಭ್ಯವನ್ನು ಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರದ ಟಾಟಾ ಮೆಮೋರಿಯಲ್ ಸೆಂಟರ್ ಪ್ರಮುಖ ಪಾತ್ರ ವಹಿಸಿದೆ. ಈ ಕೇಂದ್ರವು ದೇಶ ಮತ್ತು ವಿದೇಶಗಳಲ್ಲಿ ತನ್ನ ಸೇವೆಗಳನ್ನು ಒದಗಿಸುವ ಮೂಲಕ ಕ್ಯಾನ್ಸರ್ ರೋಗಿಗಳ ಜೀವವನ್ನು ಉಳಿಸುತ್ತಿದೆ. ದೇಶದಲ್ಲಿ ಆಧುನಿಕ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಸೃಷ್ಟಿಸುವಲ್ಲಿ ಭಾರತ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತಿದೆ. ಟಾಟಾ ಮೆಮೋರಿಯಲ್ ಸೆಂಟರ್ ಈಗ ಪ್ರತಿ ವರ್ಷ 1.5 ಲಕ್ಷ ಹೊಸ ರೋಗಿಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯವನ್ನು ಹೊಂದಿದೆ ಎಂದು ನನಗೆ ತಿಳಿಸಲಾಗಿದೆ. ಇದು ಕ್ಯಾನ್ಸರ್ ರೋಗಿಗಳಿಗೆ ಬಹಳ ದೊಡ್ಡ ಸಮಾಧಾನ ತರುವ ಸಂಗತಿಯಾಗಿದೆ. ಹಿಮಾಚಲದ ದೂರದ ಪ್ರದೇಶಗಳಿಂದ ಜನರು ಕ್ಯಾನ್ಸರ್ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಚಂಡೀಗಢದ ಪಿಜಿಐಗೆ ಬರುತ್ತಿದ್ದರು ಎಂಬುದು ನನಗೆ ನೆನಪಿನಲ್ಲಿದೆ. ಪಿಜಿಐನಲ್ಲಿ ಭಾರಿ ಜನಸಂದಣಿಯಿಂದಾಗಿ, ರೋಗಿ ಮತ್ತು ಅವರ ಕುಟುಂಬ ಸದಸ್ಯರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಈಗ ಹಿಮಾಚಲ ಪ್ರದೇಶದ ಬಿಲಾಸ್ಪುರದಲ್ಲಿ ಏಮ್ಸ್  (ಎ.ಐ.ಐ.ಎಂ.ಎಸ್.) ನ್ನು ಸ್ಥಾಪಿಸಲಾಗಿದೆ ಮತ್ತು ಕ್ಯಾನ್ಸರ್ ಚಿಕಿತ್ಸೆಗಾಗಿ ಇಷ್ಟು ದೊಡ್ಡ ಸೌಲಭ್ಯವನ್ನು ನಿರ್ಮಾಣ ಮಾಡಲಾಗಿದೆ. ಬಿಲಾಸ್ಪುರವನ್ನು ಹತ್ತಿರ ಎಂದು ಭಾವಿಸುವವರು  ಅಲ್ಲಿಗೆ ಹೋಗುತ್ತಾರೆ ಮತ್ತು ಮೊಹಾಲಿಗೆ ಹತ್ತಿರದಲ್ಲಿರುವವರು ಇಲ್ಲಿಗೆ ಬರುತ್ತಾರೆ.

ಸ್ನೇಹಿತರೇ,

ಕಡುಬಡವರನ್ನು ನೋಡಿಕೊಳ್ಳುವ ಇಂತಹ ಆರೋಗ್ಯ ರಕ್ಷಣೆಯ ವ್ಯವಸ್ಥೆಯನ್ನು ದೇಶವು ಬಹಳ ಹಿಂದಿನಿಂದಲೂ ಬಯಸುತ್ತಿತ್ತು. ಬಡವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ರೋಗಗಳಿಂದ ಬಡವರನ್ನು ರಕ್ಷಿಸುವ ಮತ್ತು ಅವರು ಅನಾರೋಗ್ಯಕ್ಕೆ ಒಳಗಾದರೆ ಅವರಿಗೆ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುವ ಆರೋಗ್ಯ ವ್ಯವಸ್ಥೆ ಅವಶ್ಯವಿತ್ತು. ಉತ್ತಮ ಆರೋಗ್ಯ ವ್ಯವಸ್ಥೆ ಎಂದರೆ ಕೇವಲ ನಾಲ್ಕು ಗೋಡೆಗಳನ್ನು ನಿರ್ಮಿಸುವುದು ಎಂದರ್ಥವಲ್ಲ. ಯಾವುದೇ ದೇಶದ ಆರೋಗ್ಯ ವ್ಯವಸ್ಥೆಯು ಎಲ್ಲಾ ರೀತಿಯಲ್ಲೂ ಪರಿಹಾರಗಳನ್ನು ಒದಗಿಸಿದಾಗ ಮತ್ತು ಹಂತ ಹಂತವಾಗಿ ಅದನ್ನು ಬೆಂಬಲಿಸಿದಾಗ ಮಾತ್ರ ಅದು ಬಲಗೊಳ್ಳುತ್ತದೆ. ಆದ್ದರಿಂದ, ಕಳೆದ ಎಂಟು ವರ್ಷಗಳಲ್ಲಿ ಸಮಗ್ರ ಆರೋಗ್ಯ ರಕ್ಷಣೆಯನ್ನು ದೇಶದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿಸಲಾಗಿದೆ. ಕಳೆದ 7-8 ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ  ಕೆಲಸದ ಪ್ರಮಾಣವು ಕಳೆದ 70 ವರ್ಷಗಳಲ್ಲಿ ನಡೆದಿಲ್ಲ. ಇಂದು, ಕಡುಬಡವರ ಆರೋಗ್ಯಕ್ಕಾಗಿ ಒಂದಲ್ಲ, ಎರಡಲ್ಲ, ಆರು ರಂಗಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಮೂಲಕ ದೇಶದ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲಾಗುತ್ತಿದೆ ಮತ್ತು ಬಲಪಡಿಸಲಾಗುತ್ತಿದೆ. ರೋಗವನ್ನು ಪ್ರತಿಬಂಧಿಸುವ, ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವುದು ಮೊದಲ ರಂಗವಾದರೆ. ಹಳ್ಳಿಗಳಲ್ಲಿ ಸಣ್ಣ ಮತ್ತು ಆಧುನಿಕ ಆಸ್ಪತ್ರೆಗಳನ್ನು ತೆರೆಯುವುದು ಎರಡನೇ ಕೋನವಾಗಿದೆ. ನಗರಗಳಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಸಂಶೋಧನೆಯ ದೊಡ್ಡ ಸಂಸ್ಥೆಗಳನ್ನು ತೆರೆಯುವುದು. ದೇಶಾದ್ಯಂತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಮೂರನೆಯ ಮತ್ತು ನಾಲ್ಕನೇ ರಂಗವಾಗಿದೆ. ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ಮತ್ತು ಸಲಕರಣೆಗಳನ್ನು ಒದಗಿಸುವುದು ಐದನೇ ರಂಗವಾಗಿದೆ. ಮತ್ತು ತಂತ್ರಜ್ಞಾನವನ್ನು ಬಳಸುವ ಮೂಲಕ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಧಾರಿಸುವುದು ಆರನೇ ಹಂತವಾಗಿದೆ. ಕೇಂದ್ರ ಸರ್ಕಾರವು ಇಂದು ಈ ಆರು ರಂಗಗಳಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುವ ಮೂಲಕ ದಾಖಲೆಯ ಹೂಡಿಕೆ ಮಾಡುತ್ತಿದೆ.

ಸ್ನೇಹಿತರೇ,

ರೋಗ ಬಾರದಂತೆ  ತಡೆಗಟ್ಟುವುದು ಅತ್ಯುತ್ತಮ ಚಿಕಿತ್ಸೆ ಎಂದು ನಮಗೆ ಯಾವಾಗಲೂ ಹೇಳಲಾಗುತ್ತದೆ. ಈ ಆಲೋಚನೆಯೊಂದಿಗೆ, ದೇಶದಲ್ಲಿ ರೋಗ ಬಾರದಂತೆ ತಡೆಗಟ್ಟುವಂತಹ  ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಜಲ ಜೀವನ್ ಮಿಷನ್ ನಿಂದಾಗಿ ನೀರಿನಿಂದ ಹರಡುವ ರೋಗಗಳಲ್ಲಿ ಭಾರಿ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು. ಅಂದರೆ, ನಾವು ರೋಗ ಬಾರದಂತೆ ನೋಡಿಕೊಂಡಾಗ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ, ರೋಗಗಳು ಕಡಿಮೆಯಾಗುತ್ತವೆ. ಹಿಂದಿನ ಸರ್ಕಾರಗಳು ಈ ವಿಧಾನದಲ್ಲಿ, ಧೋರಣೆಯಲ್ಲಿ  ಕೆಲಸ ಮಾಡಲಿಲ್ಲ. ಆದರೆ ಇಂದು ನಮ್ಮ ಸರ್ಕಾರವು ಅನೇಕ ಅಭಿಯಾನಗಳನ್ನು ನಡೆಸುವ ಮೂಲಕ ಮತ್ತು ಜನತೆಯಲ್ಲಿ ಜನಜಾಗೃತಿಯನ್ನು ಮೂಡಿಸುವ ಮೂಲಕ ಮತ್ತು ಅನಾರೋಗ್ಯಕ್ಕೆ ಒಳಗಾಗದಂತೆ ಅವರನ್ನು ರಕ್ಷಿಸುವ ಮೂಲಕ ಜನರಿಗೆ ತಿಳುವಳಿಕೆ  ನೀಡುತ್ತಿದೆ. ಯೋಗ ಮತ್ತು ಆಯುಷ್ ಬಗ್ಗೆ ದೇಶದಲ್ಲಿ ಅಭೂತಪೂರ್ವ ಜಾಗೃತಿ ಮೂಡಿದೆ. ವಿಶ್ವದಲ್ಲಿ ಯೋಗದ ಆಕರ್ಷಣೆ ಹೆಚ್ಚಾಗಿದೆ. ಫಿಟ್ ಇಂಡಿಯಾ ಅಭಿಯಾನವು ದೇಶದ ಯುವಜನರಲ್ಲಿ ಜನಪ್ರಿಯವಾಗುತ್ತಿದೆ. ಸ್ವಚ್ಛ ಭಾರತ ಅಭಿಯಾನವು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡಿದೆ. ಪೋಷಣ್ ಅಭಿಯಾನ್ ಮತ್ತು ಜಲ ಜೀವನ್ ಮಿಷನ್ ಅಪೌಷ್ಟಿಕತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತಿವೆ. ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ಮೂಲಕ, ನಾವು ಅವರನ್ನು ಹೊಗೆಯಿಂದ ಹರಡುವ ರೋಗಗಳು ಮತ್ತು ಕ್ಯಾನ್ಸರ್ ನಂತಹ ಅಪಾಯಗಳಿಂದ ರಕ್ಷಿಸಿದ್ದೇವೆ.

ಸ್ನೇಹಿತರೇ,

ನಮ್ಮ ಹಳ್ಳಿಗಳಲ್ಲಿ ಪರೀಕ್ಷೆಗೆ ಉತ್ತಮ ಆಸ್ಪತ್ರೆಗಳು ಮತ್ತು ಹೆಚ್ಚಿನ ಸೌಲಭ್ಯಗಳಿದ್ದರೆ, ಶೀಘ್ರದಲ್ಲೇ ರೋಗಗಳನ್ನು ಪತ್ತೆ ಮಾಡುವುದು ಸಾಧ್ಯವಾಗುತ್ತದೆ. ನಮ್ಮ ಸರ್ಕಾರವು ಈ ಇನ್ನೊಂದು ರಂಗದಲ್ಲೂ ದೇಶಾದ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರವು ಹಳ್ಳಿಗಳನ್ನು ಆಧುನಿಕ ಆರೋಗ್ಯ ಸೌಲಭ್ಯಗಳೊಂದಿಗೆ ಸಂಪರ್ಕಿಸಲು 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸುಮಾರು 1.25 ಲಕ್ಷ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಇದು ನನಗೆ ಸಂತೋಷದ ಸಂಗತಿಯಾಗಿದೆ. ಪಂಜಾಬ್ ನಲ್ಲಿ ಈಗಾಗಲೇ ಸುಮಾರು 3,000 ಆರೋಗ್ಯ ಮತ್ತು ಸ್ವಾಸ್ಥ್ಯ(ಯೋಗಕ್ಷೇಮ)  ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ, ದೇಶಾದ್ಯಂತದ ಈ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಸುಮಾರು 22 ಕೋಟಿ ಜನರನ್ನು ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿ ಪರೀಕ್ಷಿಸಲಾಗಿದೆ, ಅದರಲ್ಲಿ ಸುಮಾರು 60 ಲಕ್ಷ ತಪಾಸಣೆಗಳನ್ನು ಪಂಜಾಬಿನಲ್ಲಿಯೇ ಮಾಡಲಾಗಿದೆ. ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಪತ್ತೆಯಾದರೆ ಗಂಭೀರ ಸಮಸ್ಯೆಗಳಿಂದ ಎಲ್ಲಾ ಸ್ನೇಹಿತರನ್ನು ಉಳಿಸಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಒಮ್ಮೆ ರೋಗವನ್ನು ಪತ್ತೆಹಚ್ಚಿದ ನಂತರ, ಗಂಭೀರ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಗಳ ಅಗತ್ಯವಿದೆ. ಈ ಚಿಂತನೆಯೊಂದಿಗೆ, ಕೇಂದ್ರ ಸರ್ಕಾರವು ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಆಯುಷ್ಮಾನ್ ಭಾರತ್  ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ, ಜಿಲ್ಲಾ ಮಟ್ಟದಲ್ಲಿ ಆಧುನಿಕ ಆರೋಗ್ಯ ಸೌಲಭ್ಯಗಳನ್ನು ಸೃಷ್ಟಿಸಲು 64,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಒಂದು ಸಮಯದಲ್ಲಿ, ದೇಶದಲ್ಲಿ ಕೇವಲ 7 ಏಮ್ಸ್ ಗಳು ಮಾತ್ರ ಇದ್ದವು. ಇಂದು ಈ ಸಂಖ್ಯೆಯೂ 21 ಕ್ಕೆ ಏರಿದೆ. ಏಮ್ಸ್ ಪಂಜಾಬ್ ನ ಬಟಿಂಡಾದಲ್ಲಿ ಅತ್ಯುತ್ತಮ ಸೇವೆಗಳನ್ನು ಒದಗಿಸುತ್ತಿದೆ. ನಾನು ಕ್ಯಾನ್ಸರ್ ಆಸ್ಪತ್ರೆಗಳ ಬಗ್ಗೆ ಮಾತ್ರ ಮಾತನಾಡುವುದಾದರೆ ದೇಶದ ಮೂಲೆ ಮೂಲೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಆಧುನಿಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪಂಜಾಬಿನಲ್ಲಿ ಇದು ಅಂತಹ ದೊಡ್ಡ ಕೇಂದ್ರವಾಗಿದೆ. ಹರಿಯಾಣದ ಝಜ್ಜರ್ ನಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯನ್ನು ಸಹ ಸ್ಥಾಪಿಸಲಾಗಿದೆ. ನಾವು ಪೂರ್ವ ಭಾರತದ ಕಡೆಗೆ ಹೋದರೆ, ವಾರಣಾಸಿ ಈಗ ಕ್ಯಾನ್ಸರ್ ಚಿಕಿತ್ಸೆಯ ಕೇಂದ್ರವಾಗುತ್ತಿದೆ. ಕೋಲ್ಕತಾದ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನ  ಎರಡನೇ ಕ್ಯಾಂಪಸ್  ಕೂಡಾ  ಕೆಲಸವನ್ನು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ, ಅಸ್ಸಾಂನ ದಿಬ್ರುಗಢದಿಂದ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳನ್ನು ಏಕಕಾಲದಲ್ಲಿ ಉದ್ಘಾಟಿಸುವ ಅವಕಾಶ ನನಗೆ ಸಿಕ್ಕಿತ್ತು. ನಮ್ಮ ಸರ್ಕಾರವು ದೇಶಾದ್ಯಂತ ಸುಮಾರು 40 ವಿಶೇಷ ಕ್ಯಾನ್ಸರ್ ಚಿಕಿತ್ಸಾ  ಸಂಸ್ಥೆಗಳಿಗೆ ಅನುಮೋದನೆ ನೀಡಿದೆ, ಅವುಗಳಲ್ಲಿ ಅನೇಕ ಆಸ್ಪತ್ರೆಗಳು ಈಗಾಗಲೇ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿವೆ.

ಸ್ನೇಹಿತರೇ,

ಆಸ್ಪತ್ರೆಯನ್ನು ನಿರ್ಮಿಸುವುದು ಎಷ್ಟು ಮುಖ್ಯವೋ, ಸಾಕಷ್ಟು ಸಂಖ್ಯೆಯ ಉತ್ತಮ ವೈದ್ಯರು ಮತ್ತು ಇತರ ಅರೆವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುವುದು ಅಷ್ಟೇ ಮುಖ್ಯ. ದೇಶದಲ್ಲಿ ಈ ನಿಟ್ಟಿನಲ್ಲಿ ಆಂದೋಲನದೋಪಾದಿಯಲ್ಲಿ  ಕೆಲಸ ಮಾಡಲಾಗುತ್ತಿದೆ. 2014 ಕ್ಕಿಂತ ಮೊದಲು ದೇಶದಲ್ಲಿ 400 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳು ಇದ್ದವು. ಅಂದರೆ, 70 ವರ್ಷಗಳಲ್ಲಿ 400 ಕ್ಕಿಂತ ಕಡಿಮೆ ವೈದ್ಯಕೀಯ ಕಾಲೇಜುಗಳು. ಅದೇ ಸಮಯದಲ್ಲಿ, ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 200 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ವೈದ್ಯಕೀಯ ಕಾಲೇಜುಗಳ ವಿಸ್ತರಣೆ ಎಂದರೆ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಾಗಿದೆ ಎಂದರ್ಥ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವಕಾಶಗಳು ಹೆಚ್ಚಾಗಿವೆ. ಮತ್ತು ದೇಶದ ಆರೋಗ್ಯವನ್ನು ನೋಡಿಕೊಳ್ಳುವ ಆರೋಗ್ಯ ವೃತ್ತಿಪರರ ಸಂಖ್ಯೆ ಹೆಚ್ಚಾಗಿದೆ. ಅಂದರೆ, ಆರೋಗ್ಯ ಕ್ಷೇತ್ರದಲ್ಲಿ ಅನೇಕ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸಲಾಗುತ್ತಿದೆ. ನಮ್ಮ ಸರ್ಕಾರವು ಐದು ಲಕ್ಷಕ್ಕೂ ಹೆಚ್ಚು ಆಯುಷ್ ವೈದ್ಯರನ್ನು ಅಲೋಪಥಿ ವೈದ್ಯರೆಂದು ಮಾನ್ಯ ಮಾಡಿದೆ. ಇದರಿಂದ ಭಾರತದಲ್ಲಿ ವೈದ್ಯರು ಮತ್ತು ರೋಗಿಗಳ ಅನುಪಾತದಲ್ಲಿ  ಸುಧಾರಣೆಯಾಗಿದೆ.

ಸ್ನೇಹಿತರೇ,

ಇಲ್ಲಿ ಕುಳಿತವರೆಲ್ಲರೂ ಸಾಮಾನ್ಯ ಕುಟುಂಬಗಳಿಂದ ಬಂದವರು. ರೋಗಗಳ  ಸಂದರ್ಭದಲ್ಲಿ ಬಡವರು ತಮ್ಮ ಮನೆ ಅಥವಾ ಭೂಮಿಯನ್ನು ಮಾರಾಟ ಮಾಡುವಂತಹ ಸ್ಥಿತಿ ಉಂಟಾಗುತ್ತದೆ ಎಂಬುದರ ಅನುಭವ  ನಮಗೆಲ್ಲರಿಗೂ ಇದೆ. ಆದ್ದರಿಂದ, ನಮ್ಮ ಸರ್ಕಾರವು ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳು ಮತ್ತು ಚಿಕಿತ್ಸೆಯನ್ನು ಒದಗಿಸಲು ಸಮಾನ ಒತ್ತು ನೀಡಿದೆ. ಆಯುಷ್ಮಾನ್ ಭಾರತ್ ಬಡವರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಿದೆ. ಇದರ ಅಡಿಯಲ್ಲಿ, ಇಲ್ಲಿಯವರೆಗೆ 3.5 ಕೋಟಿ ರೋಗಿಗಳು ತಮ್ಮ ಚಿಕಿತ್ಸೆಯನ್ನು ಪಡೆದಿದ್ದಾರೆ ಮತ್ತು ಅವರು ಇದಕ್ಕಾಗಿ ಒಂದು ರೂಪಾಯಿಯನ್ನು ಖರ್ಚು ಮಾಡಬೇಕಾಗಿರಲಿಲ್ಲ. ಮತ್ತು ಇವರಲ್ಲಿ  ಅನೇಕ ಕ್ಯಾನ್ಸರ್ ರೋಗಿಗಳೂ ಸೇರಿದ್ದಾರೆ. ಆಯುಷ್ಮಾನ್ ಭಾರತ್ ಸೌಲಭ್ಯ ಇಲ್ಲದಿದ್ದರೆ, ಬಡವರು ತಮ್ಮ ಜೇಬಿನಿಂದ 40,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ನಿಮ್ಮಂತಹ ಕುಟುಂಬಗಳಿಗೆ 40,000 ಕೋಟಿ ರೂ.ಗಳ ಉಳಿತಾಯವಾಗಿದೆ. ಇಷ್ಟೇ ಅಲ್ಲ, ಪಂಜಾಬ್ ಸೇರಿದಂತೆ ದೇಶಾದ್ಯಂತ ಜನೌಷಧಿ ಕೇಂದ್ರಗಳ ಜಾಲವಿದೆ, ಅಲ್ಲಿ ಕ್ಯಾನ್ಸರ್ ಔಷಧಿಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿವೆ. ಈ ಹಿಂದೆ ಬಹಳ ದುಬಾರಿಯಾಗಿದ್ದ 500 ಕ್ಕೂ ಹೆಚ್ಚು ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಸುಮಾರು 90 ಪ್ರತಿಶತದಷ್ಟು ಕಡಿಮೆ ಮಾಡಲಾಗಿದೆ. ಅಂದರೆ, ಈ ಮೊದಲು 100 ರೂಪಾಯಿಗಳ ಬೆಲೆ ಬಾಳುತ್ತಿದ್ದ ಔಷಧಿಯನ್ನು ಈಗ ಜನೌಷಧಿ ಕೇಂದ್ರದಲ್ಲಿ 10 ರೂ.ಗಳಿಗೆ ಒದಗಿಸಲಾಗಿದೆ. ರೋಗಿಗಳು ಪ್ರತಿ ವರ್ಷ ಸರಾಸರಿ 1,000 ಕೋಟಿ ರೂ.ಗಳನ್ನು ಉಳಿತಾಯ ಮಾಡುತ್ತಿದ್ದಾರೆ. ದೇಶಾದ್ಯಂತ ಸುಮಾರು 9,000 ಜನೌಷಧಿ ಕೇಂದ್ರಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಸಮಸ್ಯೆಗಳನ್ನು ನಿವಾರಿಸಲು  ಕೈಗೆಟುಕುವ ದರದಲ್ಲಿ ಔಷಧಿಗಳು ದೊರೆಯುತ್ತಿವೆ.

ಸಹೋದರರೇ ಮತ್ತು  ಸಹೋದರಿಯರೇ,

ಆಧುನಿಕ ತಂತ್ರಜ್ಞಾನವು ಸರ್ಕಾರದ ಸಮಗ್ರ ಆರೋಗ್ಯ ಅಭಿಯಾನಕ್ಕೆ ಹೊಸ ಆಯಾಮವನ್ನು ತಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್  ಪ್ರತಿಯೊಬ್ಬ ರೋಗಿಯು ಸಮಯಕ್ಕೆ ಸರಿಯಾಗಿ ಮತ್ತು ಕನಿಷ್ಠ ಪ್ರಯತ್ನದೊಂದಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಪಡೆಯುವುದನ್ನು ಖಾತ್ರಿಪಡಿಸುತ್ತಿದೆ.  ಟೆಲಿಮೆಡಿಸಿನ್ ಮತ್ತು ಟೆಲಿಕನ್ಸಲ್ಟೇಶನ್ ಸೌಲಭ್ಯಗಳಿಂದಾಗಿ, ಇಂದು ದೂರದ ಹಳ್ಳಿಯಲ್ಲಿ ವಾಸಿಸುವ ವ್ಯಕ್ತಿಯು ಕೂಡ ನಗರಗಳ ವೈದ್ಯರಿಂದ ಆರಂಭಿಕ ಸಮಾಲೋಚನೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಕೋಟ್ಯಂತರ ಜನರು ಸಂಜೀವಿನಿ ಅಪ್ಲಿಕೇಶನ್ನಿನ  ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈಗ ಮೇಡ್ ಇನ್ ಇಂಡಿಯಾ 5ಜಿ ಸೇವೆಗಳನ್ನು ದೇಶದಲ್ಲಿ ಪ್ರಾರಂಭಿಸಲಾಗುತ್ತಿದೆ. ಇದು ದೂರ ಪ್ರದೇಶದ  ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಇದರೊಂದಿಗೆ, ಹಳ್ಳಿಗಳ ಬಡ ಕುಟುಂಬಗಳ ರೋಗಿಗಳು ಆಗಾಗ್ಗೆ ಪ್ರಮುಖ ಆಸ್ಪತ್ರೆಗಳಿಗೆ ಭೇಟಿ ನೀಡುವ ಅನಿವಾರ್ಯತೆಯೂ  ಕಡಿಮೆಯಾಗಲಿದೆ.

ಸ್ನೇಹಿತರೇ,

ದೇಶದಲ್ಲಿ ಕ್ಯಾನ್ಸರ್ ನಿಂದ ಮುಕ್ತರಾದ ಪ್ರತಿಯೊಬ್ಬರಿಗೂ  ಮತ್ತು ಅವರ ಕುಟುಂಬಕ್ಕೆ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ನಿಮ್ಮ ನೋವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಆದರೆ ಕ್ಯಾನ್ಸರ್ ವಿರುದ್ಧ ಹೋರಾಡುವ ಅವಶ್ಯಕತೆಯಿದೆ ಮತ್ತು ಅದಕ್ಕೆ ಹೆದರಬಾರದು. ಅದರ ಚಿಕಿತ್ಸೆ ಸಾಧ್ಯವಿದೆ. ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಗೆದ್ದ ನಂತರ ಇಂದು ಸಂತೋಷದಿಂದ ಜೀವನ ನಡೆಸುತ್ತಿರುವಂತಹ ಅನೇಕ ಜನರನ್ನು ನಾನು ಬಲ್ಲೆ. ಈ ಹೋರಾಟದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಕ್ಯಾನ್ಸರ್ ನಿಂದ ಉಂಟಾಗುವ ಖಿನ್ನತೆಯ ವಿರುದ್ಧ ಹೋರಾಡಲು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ನಾವು ಸಹಾಯ ಮಾಡಬೇಕು ಎಂದು ಈ ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಸಹೋದ್ಯೋಗಿಗಳಿಗೆ ನಾನು ವಿಶೇಷ ವಿನಂತಿಯನ್ನು ಮಾಡಲು ಬಯಸುತ್ತೇನೆ. ಪ್ರಗತಿಶೀಲ ಸಮಾಜವಾಗಿ, ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಆಲೋಚನೆಯಲ್ಲಿ ಬದಲಾವಣೆ ಮತ್ತು ಮುಕ್ತತೆಯನ್ನು ತರುವುದು ನಮ್ಮ ಜವಾಬ್ದಾರಿಯಾಗಿದೆ. ಆಗ ಮಾತ್ರ ಈ ಸಮಸ್ಯೆಗೆ ಸರಿಯಾದ ಪರಿಹಾರ ಸಿಗುತ್ತದೆ. ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜಿಸುವಾಗ ಖಂಡಿತವಾಗಿಯೂ ಈ ಸಮಸ್ಯೆಯ ಬಗ್ಗೆ ಗಮನ ಹರಿಸುವಂತೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನನ್ನ ಸಹೋದ್ಯೋಗಿಗಳನ್ನು ನಾನು ವಿನಂತಿಸುತ್ತೇನೆ. 'ಸಬ್ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಮೂಲಕ, ನಾವು ಕ್ಯಾನ್ಸರ್ ವಿರುದ್ಧದ ದೇಶದ ಹೋರಾಟವನ್ನು ಬಲಪಡಿಸುತ್ತೇವೆ. ಈ ನಂಬಿಕೆಯೊಂದಿಗೆ, ಪಂಜಾಬ್ ಮತ್ತು ಹಿಮಾಚಲದ ಜನರಿಗೆ ಪ್ರಯೋಜನವಾಗುವ ಈ ಬೃಹತ್ ಉಡುಗೊರೆಯನ್ನು ಸಮರ್ಪಿಸಲು ನನಗೆ ತೃಪ್ತಿ ಇದೆ ಮತ್ತು ಹೆಮ್ಮೆಯ ಭಾವನೆಯೂ  ಇದೆ. ನಿಮಗೆಲ್ಲರಿಗೂ ಶುಭಾಶಯಗಳು ಮತ್ತು ನಿಮಗೆ ತುಂಬಾ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM SVANidhi: How India’s street vendors are being brought into the formal economy

Media Coverage

PM SVANidhi: How India’s street vendors are being brought into the formal economy
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam highlighting the virtues of firm resolve, self-control, and wisdom
June 02, 2026

Prime Minister Shri Narendra Modi today shared a Sanskrit Subhashitam, observing that firm resolve and self-control are the powers that make even the most difficult paths easy. Shri Modi highlighted that today, our youth are continuously engaged in nation-building with this very resolve.

The Prime Minister posted on X:

"दृढ़ निश्चय और आत्म-संयम वह शक्ति है, जो कठिन से कठिन राह को भी आसान बना देती है। आज हमारे युवा साथी इसी संकल्प के साथ राष्ट्र निर्माण में निरंतर जुटे हुए हैं।

निश्चित्य यः प्रक्रमते
नान्तर्वसति कर्मणः।

अबन्ध्यकालो वश्यात्मा
स वै पण्डित उच्यते॥"

A person who begins a task after careful deliberation and with firm resolve, who never leaves it unfinished, who uses time wisely and who maintains complete control over their senses, such a person alone is truly wise.