ಶೇರ್
 
Comments
ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಖಾಸಗಿ ವಲಯದ ಕೊಡುಗೆಯ ಅಗತ್ಯವನ್ನು ಒತ್ತಿ ಹೇಳಿದರು
 ಸಣ್ಣ ರೈತರ ಸಬಲೀಕರಣವು ಸರಕಾರದ ದೂರದೃಷ್ಟಿಯ ಕೇಂದ್ರಬಿಂದುವಾಗಿದೆ: ಪ್ರಧಾನಿ
ಸಂಸ್ಕರಿತ ಆಹಾರಕ್ಕಾಗಿ ನಾವು ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಜಾಗತಿಕ ವಲಯಕ್ಕೆ ವಿಸ್ತರಿಸಬೇಕಿದೆ: ಪ್ರಧಾನಿ

ನಮಸ್ಕಾರ!

ಈ ವರ್ಷದ ಬಜೆಟ್ ರೂಪಿಸುವಲ್ಲಿ ನಿಮ್ಮ ಸಲಹೆಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿವೆ. ಮತ್ತು ನಾವು ನಿಮ್ಮ ಸಲಹೆಗಳನ್ನು ಮತ್ತು ಚಿಂತನೆಗಳನ್ನು ಅಳವಡಿಸಿಕೊಳ್ಳಲು ಮಾಡಿರುವ ಪ್ರಯತ್ನಗಳನ್ನು ನೀವು ಈಗಾಗಲೇ ಗಮನಿಸಿರಬಹುದು, ಇಂದಿನ ಚರ್ಚೆಯ ಉದ್ದೇಶ ಕೃಷಿ ಸುಧಾರಣೆಗಳನ್ನು ಮುಂದುವರಿಸಿಕೊಂಡು ಹೋಗುವುದು ಹೇಗೆ ಮತ್ತು ಬಜೆಟಿನಲ್ಲಿ ಮಾಡಲಾಗಿರುವ ಪ್ರಸ್ತಾವಗಳನ್ನು ತ್ವರಿತವಾಗಿ ಜಾರಿಗೆ.ತರುವುದು ಹೇಗೆ ಎಂಬುದಾಗಿದೆ. ಜೊತೆಗೆ ಅವುಗಳು ಪ್ರತಿಯೊಬ್ಬರನ್ನೂ ಒಳಗೊಂಡಂತೆ, ನಿರ್ದಿಷ್ಟ ಕಾಲಮಿತಿಯ ಚೌಕಟ್ಟಿನೊಳಗೆ ಕೊನೆಯ ಹಂತದವರೆಗೂ ತಲುಪುವಂತೆ ಖಾತ್ರಿ ಪಡಿಸುವುದು ಹೇಗೆ ಎಂಬುದೂ ಇದರಲ್ಲಿ ಸೇರಿದೆ. ಇಂದಿನ ಸಮಾಲೋಚನೆಯ, ಚರ್ಚೆಯ ಪ್ರಮುಖ ಭಾಗ ಅಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ಕೇಂದ್ರ-ರಾಜ್ಯ ಸಮನ್ವಯಕ್ಕೆ ಬಹಳ ಸಮರ್ಪಕವಾದ ಉದಾಹರಣೆ ಮೂಡಿ ಬರಬೇಕು ಎಂಬುದಾಗಿದೆ.

ಕೃಷಿ, ಹೈನುಗಾರಿಕೆ, ಮೀನುಗಾರಿಕೆ ವಲಯಗಳ ತಜ್ಞರು ಈ ವೆಬಿನಾರಿನಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಸಾರ್ವಜನಿಕ, ಖಾಸಗಿ ಹಾಗು ಸಹಕಾರಿ ವಲಯದ ಸಹೋದ್ಯೋಗಿಗಳೂ ಇದ್ದಾರೆ. ನಿಮ್ಮ ಅಭಿಪ್ರಾಯಗಳು ಇಂದು ನಮಗೆ ಬಹಳ ಪ್ರಯೋಜನಕಾರಿಯಾಗಲಿವೆ. ಈ ವೆಬಿನಾರ್ ದೇಶದ ಗ್ರಾಮೀಣ ಆರ್ಥಿಕತೆಗೆ ಹಣಕಾಸು ಒದಗಿಸುವ ಬ್ಯಾಂಕುಗಳ ಪ್ರತಿನಿಧಿಗಳನ್ನೂ ಒಳಗೊಂಡಿದೆ.

ನೀವೆಲ್ಲರೂ ಆತ್ಮ ನಿರ್ಭರ ಭಾರತಕ್ಕೆ ಅವಶ್ಯವಾಗಿರುವ ಸ್ವಾವಲಂಬೀ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗೀದಾರರು. ನಾನು ಕೆಲ ಸಮಯದ ಹಿಂದೆ ಸಂಸತ್ತಿನಲ್ಲಿ ಸರಕಾರವು ದೇಶದ ಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು  ವರ್ಷಗಳಿಂದ ಹೇಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂಬುದನ್ನು ವಿವರಿಸಿದ್ದೇನೆ. ಈ ಸಣ್ಣ ರೈತರ ಸಂಖ್ಯೆ ಸುಮಾರು 12 ಕೋಟಿಯಷ್ಟಿದೆ ಮತ್ತು ಅವರ ಸಶಕ್ತೀಕರಣವು ಭಾರತೀಯ ಕೃಷಿ ವಲಯವನ್ನು ಅನೇಕ ಕಷ್ಟ ಪರಂಪರೆಗಳಿಂದ ಮುಕ್ತ ಮಾಡಲಿದೆ. ಅಷ್ಟು ಮಾತ್ರವಲ್ಲ,  ಸಣ್ಣ ರೈತರು ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಚಾಲಕ ಶಕ್ತಿಯಾಗಲಿದ್ದಾರೆ.

ಇದನ್ನೆಲ್ಲ ವಿವರಿಸುವುದಕ್ಕೆ ಮೊದಲು ನಾನು ಕೃಷಿಗೆ ಸಂಬಂಧಿಸಿದ ಕೆಲವು ಮುಖ್ಯಾಂಶಗಳನ್ನು ಪುನರುಚ್ಚರಿಸಲು ಆಶಿಸುತ್ತೇನೆ. ನನಗೆ ಗೊತ್ತಿದೆ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿದೆ ಎಂಬುದು. ಸರಕಾರವು ಕೃಷಿ ಮುಂಗಡ ಗುರಿಯನ್ನು ಈ ಬಾರಿ 16.50 ಲಕ್ಷ ಕೋ.ರೂ.ಗಳಿಗೆ ಹೆಚ್ಚಿಸಿದೆ. ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕಾ ವಲಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಗ್ರಾಮೀಣ ಮೂಲಸೌಕರ್ಯ ನಿಧಿಯನ್ನು 40,000 ಕೋ.ರೂ.ಗಳಿಗೆ ಹೆಚ್ಚಿಸಲಾಗಿದೆ. ಕಿರು ನೀರಾವರಿ ನಿಧಿಯನ್ನು ದುಪ್ಪಟ್ಟು ಮಾಡಲಾಗಿದೆ. ಹಸಿರು ಕ್ರಾಂತಿ  ಕಾರ್ಯಾಚರಣೆಯನ್ನು ಈಗ ಬೇಗ ಹಾಳಾಗುವ 22 ಉತ್ಪಾದನೆಗಳಿಗೆ ವಿಸ್ತರಿಸಲಾಗಿದೆ. ದೇಶದ 1000 ಕ್ಕೂ ಅಧಿಕ ಮಂಡಿಗಳನ್ನು ಇ-ನಾಮ್ ಜೊತೆ ಜೋಡಿಸಲು ನಿರ್ಧರಿಸಲಾಗಿದೆ. ಈ ಎಲ್ಲಾ ನಿರ್ಧಾರಗಳು ಸರಕಾರದ ಯೋಚನೆ, ಉದ್ದೇಶ ಮತ್ತು ಮುಂಗಾಣ್ಕೆಯನ್ನು ಪ್ರತಿನಿಧಿಸುತ್ತವೆ. ಮತ್ತು ಈ ಎಲ್ಲಾ ನಿರ್ಧಾರಗಳು ನಿಮ್ಮೆಲ್ಲರೊಡನೆ ಈ ಮೊದಲು ಮಾಡಲಾದ ಚರ್ಚೆಯ ಫಲವಾಗಿ ಮೂಡಿಬಂದಿವೆ. ಅವುಗಳನ್ನು ನಾವು ಜಾರಿಗೆ ತರುತ್ತಿದ್ದೇವೆ. ಕೃಷಿ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿರುವ ನಡುವೆಯೇ ಭಾರತಕ್ಕೆ 21 ನೇ ಶತಮಾನದಲ್ಲಿ ಕೊಯಿಲೋತ್ತರ ಕ್ರಾಂತಿ ಅಥವಾ ಆಹಾರ ಸಂಸ್ಕರಣಾ ಕ್ರಾಂತಿ ಮತ್ತು ಮೌಲ್ಯವರ್ಧನೆ ಅವಶ್ಯವಾಗಿದೆ. ಇದನ್ನೆಲ್ಲ ಎರಡು –ಮೂರು ದಶಕಗಳ ಹಿಂದೆಯೇ ಮಾಡಿದ್ದಿದ್ದರೆ ದೇಶಕ್ಕೆ ಒಳಿತಾಗುತ್ತಿತ್ತು. ಈಗ ನಾವು ಕಳೆದು ಹೋದ ಸಮಯಕ್ಕೆ ಪರಿಹಾರ ಹುಡುಕಬೇಕಾಗಿದೆ ಮತ್ತು ಅದರಿಂದಾಗಿ ನಾವು ಬರಲಿರುವ ದಿನಗಳಲ್ಲಿ ನಮ್ಮ ತಯಾರಿಗಳನ್ನು ತ್ವರಿತಗೊಳಿಸಿ ಅದರ ವೇಗವನ್ನು ಹೆಚ್ಚಿಸಬೇಕಾಗಿದೆ.

ಸ್ನೇಹಿತರೇ,

ನಾವು ನಮ್ಮ ಹೈನು ಕ್ಷೇತ್ರದತ್ತ ನೋಡಿದರೆ, ಅದು ಬಲಿಷ್ಟವಾಗಿದೆ, ಯಾಕೆಂದರೆ ಅದು ಹಲವು ದಶಕಗಳಿಂದ ಸಂಸ್ಕರಣೆಯನ್ನು ವಿಸ್ತರಿಸುತ್ತಲೇ ಬಂದಿದೆ. ಇಂದು ನಾವು ಕೃಷಿ ಕ್ಷೇತ್ರದಲ್ಲಿ ಸಂಸ್ಕರಣೆಯತ್ತ ಹೆಚ್ಚು ಗಮನ ಕೊಡಬೇಕಾಗಿದೆ, ಪ್ರತೀ ಆಹಾರ ಧಾನ್ಯ, ತರಕಾರಿಗಳು, ಹಣ್ಣುಗಳು, ಮೀನುಗಾರಿಕೆ ಇತ್ಯಾದಿಗಳಲ್ಲಿ ಸಂಸ್ಕರಣೆ ಹೆಚ್ಚಬೇಕಾಗಿದೆ. ಸಂಸ್ಕರಣೆಯನ್ನು ಸುಧಾರಿಸಲು ರೈತರಿಗೆ ಅವರ ಗ್ರಾಮಗಳ ಬಳಿಯಲ್ಲಿ ಆಧುನಿಕ ದಾಸ್ತಾನು ಸೌಲಭ್ಯಗಳು ದೊರೆಯಬೇಕಾದ ಅಗತ್ಯವಿದೆ. ನಾವು ಕೃಷಿ ಕ್ಷೇತ್ರದಿಂದ ಸಂಸ್ಕರಣಾ ಕ್ಷೇತ್ರವನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಕೃಷಿಕರ ಉತ್ಪನ್ನ ಸಂಘಟನೆಗಳು ಸಂಸ್ಕರಣಾ ಘಟಕಗಳನ್ನು ಹೊಂದಬೇಕಾಗಿದೆ. ಮತ್ತು ನಮಗೆಲ್ಲಾ ಗೊತ್ತಿದೆ, ದೇಶದ ರೈತರು ಮತ್ತು ದೇಶದ ಸಾರ್ವಜನಿಕ-ಖಾಸಗಿ-ಸಹಕಾರಿ ವಲಯವು ಆಹಾರ ಸಂಸ್ಕರಣಾ ಕ್ರಾಂತಿಯಲ್ಲಿ ಸರಿಯಾದ ದಿಕ್ಕಿನಲ್ಲಿ ಮತ್ತು ಪೂರ್ಣ ಶಕ್ತಿಯೊಂದಿಗೆ ಮುಂದೆ ಬರಬೇಕಾಗಿದೆ. 

ಸ್ನೇಹಿತರೇ,

ದೇಶದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಹೆಚ್ಚು ಆಯ್ಕೆಗಳಿರಬೇಕಾದ ಕಾಲ ಸನ್ನಿಹಿತವಾಗಿದೆ. ಕೃಷಿಕರನ್ನು ಕಚ್ಚಾ ಉತ್ಪನ್ನಗಳಿಗೆ ಸೀಮಿತಗೊಳಿಸಲಾಗಿರುವುದರಿಂದ ಮತ್ತು ಬರೇ ಉತ್ಪನ್ನಕ್ಕಷ್ಟೇ ಸೀಮಿತ ಮಾಡಿರುವುದರಿಂದ ಆಗಿರುವ ಹಾನಿಯನ್ನು ದೇಶವೀಗ ಸಾಕ್ಷೀಕರಿಸುತ್ತಿದೆ. ನಾವು ದೇಶದ ಕೃಷಿ ಕ್ಷೇತ್ರವನ್ನು ವಿಸ್ತರಣೆ ಮಾಡಬೇಕಾಗಿದೆ ಮತ್ತು ಜಾಗತಿಕ ಮಾರುಕಟ್ಟೆಗೆ ಸಂಸ್ಕರಿತ ಆಹಾರ ವಲಯವನ್ನು ಕೊಂಡೊಯ್ಯಬೇಕಾಗಿದೆ. ನಾವು ಗ್ರಾಮಗಳು, ಹಳ್ಳಿಗಳಲ್ಲಿ ಕೃಷಿ ಸಂಬಂಧಿ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ಗ್ರಾಮಗಳ ಬಳಿಯಲ್ಲಿಯೇ ಕೃಷಿ ಕೈಗಾರಿಕಾ ಗುಚ್ಛಗಳ ಸಂಖ್ಯೆಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ. ಸಾವಯವ ಮತ್ತು ರಫ್ತು ಗುಚ್ಛಗಳು ಬಹಳ ದೊಡ್ಡ ಪಾತ್ರವನ್ನು ಈ ನಿಟ್ಟಿನಲ್ಲಿ ವಹಿಸಬಲ್ಲವು. ಗ್ರಾಮಗಳ ಕೃಷಿ ಆಧಾರಿತ ಉತ್ಪನ್ನಗಳು ನಗರಗಳಿಗೆ ಬರುವಂತೆ ಮತ್ತು ನಗರಗಳ ಕೈಗಾರಿಕಾ ಉತ್ಪನ್ನಗಳು ಗ್ರಾಮಗಳಿಗೆ ಬರುವಂತೆ ಮಾಡುವ ನಿಟ್ಟಿನಲ್ಲಿ ನಾವು ಮುಂದೆ ಸಾಗಬೇಕಾಗಿದೆ. ದೇಶದಲ್ಲಿ ಲಕ್ಷಾಂತರ ಕಿರು ಆಹಾರ ಸಂಸ್ಕರಣಾ  ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದು ಬಹಳ ಮುಖ್ಯ ಮತ್ತು ಕಾಲ ಕೂಡಾ ಇವುಗಳು ವಿಸ್ತರಿಸಲ್ಪಡಬೇಕಾದ ಮತ್ತು ಬಲಪಡಿಸಬೇಕಾದ ಅಗತ್ಯವನ್ನು ಹೇಳುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪಾದನೆ ಯೋಜನೆ ನಮ್ಮ ಉತ್ಪಾದನೆಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಹೇಗೆ ಸ್ಥಾನ ಪಡೆಯುವಂತೆ ಮಾಡಬಲ್ಲದು ಎಂಬ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕಾಗಿದೆ.

ಸ್ನೇಹಿತರೇ,

ಬರೇ ಕೃಷಿ ಅಲ್ಲ. ನಾವು ಮೀನುಗಾರಿಕಾ ಕ್ಷೇತ್ರದಲ್ಲಿಯೂ ಕೂಡಾ ಸಂಸ್ಕರಣೆಗೆ ವ್ಯಾಪಕ ಅವಕಾಶವನ್ನು ಹೊಂದಿದ್ದೇವೆ. ನಾವು ಈಗಾಗಲೇ ವಿಶ್ವದ ಅತಿ ದೊಡ್ಡ ಮೀನು ಉತ್ಪಾದಕ ಮತ್ತು ರಫ್ತುಗಾರರಾಗಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಂಸ್ಕರಿತ ಮೀನು ಮಾರುಕಟ್ಟೆಯಲ್ಲಿ ನಮ್ಮ ಹಾಜರಾತಿ ಬಹಳ ಸೀಮಿತ ಮಟ್ಟದಲ್ಲಿದೆ. ಭಾರತದ ಮೀನು ಪೂರ್ವ ಏಶ್ಯಾದ ಮೂಲಕ  ಸಂಸ್ಕರಿತಗೊಂಡು ವಿದೇಶೀ ಮಾರುಕಟ್ಟೆಯನ್ನು ತಲುಪುತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ.

ಸ್ನೇಹಿತರೇ, ಅವಶ್ಯ ಸುಧಾರಣೆಗಳೊಂದಿಗೆ, ಸರಕಾರವು ಉದ್ಯಮವು ಪಡೆದುಕೊಳ್ಳಬಹುದಾದ ಸುಮಾರು 11,000 ಕೋ.ರೂ.ಗಳ ಉತ್ಪಾದನಾ ಆಧಾರಿತ ಪ್ರೋತ್ಸಾಹಧನದ ಬಗ್ಗೆಯೂ ಯೋಜನೆ ರೂಪಿಸಿದೆ. ತಿನ್ನಲು ಸಿದ್ದವಾಗಿರುವ , ಅಡುಗೆ ಮಾಡಲು ಸಿದ್ಧವಾಗಿರುವ ತರಕಾರಿಗಳು, ಸಮುದ್ರ ಖಾದ್ಯಗಳು, ಮೊಝಾರೆಲ್ಲಾ ಚೀಸ್, ಮತ್ತು ಇಂತಹ ಹಲವು ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಇಂತಹ ಉತ್ಪನ್ನಗಳಿಗೆ ಕೋವಿಡ್ ಬಳಿಕ ದೇಶದಲ್ಲಿ ಮತ್ತು ವಿದೇಶಗಳಲ್ಲಿ ಬೇಡಿಕೆ ಎಷ್ಟೊಂದು ಹೆಚ್ಚಾಗಿದೆ ಎಂಬುದು ನನಗಿಂತ ಜಾಸ್ತಿ ನಿಮಗೆ ಗೊತ್ತಿದೆ.

ಸ್ನೇಹಿತರೇ,

ಹಸಿರು ಕ್ರಾಂತಿ ಯೋಜನೆ ಅಡಿಯಲ್ಲಿ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಕಿಸಾನ್ ರೈಲಿನ ಮೂಲಕ ಸಾಗಿಸುವುದಾದಲ್ಲಿ 50% ಸಹಾಯಧನವನ್ನು ಸಾಗಾಟ ವೆಚ್ಚದಲ್ಲಿ ನೀಡಲಾಗುತ್ತಿದೆ.ಕಿಸಾನ್ ರೈಲು ಇಂದು ದೇಶದಲ್ಲಿಯ ಅತ್ಯಂತ ಪ್ರಬಲ ಶೀತಲ ದಾಸ್ತಾನಿನ ಜಾಲಮಾಧ್ಯಮವಾಗಿ ಮೂಡಿ ಬಂದಿದೆ. ಕಿಸಾನ್ ರೈಲು ಸಣ್ಣ ರೈತರನ್ನು ಮತ್ತು ಮೀನುಗಾರರನ್ನು ಬೃಹತ್ ಮಾರುಕಟ್ಟೆಗಳು ಹಾಗು ಹೆಚ್ಚಿನ ಬೇಡಿಕೆಯ ಮಾರುಕಟ್ಟೆಗಳ ಜೊತೆ ಬೆಸೆಯುವಲ್ಲಿ ಯಶಸ್ವಿಯಾಗಿವೆ. ಕಳೆದ ಆರು ತಿಂಗಳಲ್ಲಿ ಸುಮಾರು 275 ಕಿಸಾನ್ ರೈಲುಗಳು ಓಡಾಟ ಮಾಡಿವೆ ಮತ್ತು ಸುಮಾರು ಒಂದು ಲಕ್ಷ ಮೆಟ್ರಿಕ್ ಟನ್ ನಷ್ಟು ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಸಾಗಾಟ ಮಾಡಿವೆ. ಇದು ಸಣ್ಣ ರೈತರಿಗೆ ಮತ್ತು ಬಳಕೆದಾರರಿಗೆ  ಬಹಳ ದೊಡ್ಡ ಮಾಧ್ಯಮವಾಗಿ ಮೂಡಿ ಬಂದಿರುವುದು ಮಾತ್ರವಲ್ಲ ಕೈಗಾರಿಕೋದ್ಯಮಕ್ಕೂ ಇದರಿಂದ ಲಾಭವಾಗಿದೆ.

ಸ್ನೇಹಿತರೇ, ದೇಶಾದ್ಯಂತ ಜಿಲ್ಲೆಗಳಲ್ಲಿ ಉತ್ಪಾದನೆಯಾಗುತ್ತಿರುವ ಹಣ್ಣುಗಳು ಮತ್ತು ತರಕಾರಿಗಳ ಸಂಸ್ಕರಣೆಗೆ ಗುಚ್ಛಗಳನ್ನು ನಿರ್ಮಾಣ ಮಾಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಅದೇ ರೀತಿ ಆತ್ಮನಿರ್ಭರ ಭಾರತ ಆಂದೋಲನ ಅಡಿಯಲ್ಲಿ, ಮಿಲಿಯಾಂತರ ಸಣ್ಣ ಆಹಾರ ಮತ್ತು ಸಂಸ್ಕರಣಾ ಘಟಕಗಳಿಗೆ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮ ಮೇಲ್ದರ್ಜೆಗೆ ಏರಿಸುವಿಕೆ ಯೋಜನೆಯಲ್ಲಿ ಬೆಂಬಲ ನೀಡಲಾಗುತ್ತಿದೆ. ಈ ಘಟಕಗಳ ಸ್ಥಾಪನೆಗೆ ಅವಶ್ಯವಾದ ಮೂಲಸೌಕರ್ಯ ಒದಗಣೆಯಲ್ಲಿ ನಿಮ್ಮ ಪಾತ್ರ ಮತ್ತು ಸಹಭಾಗಿತ್ವ ಬಹಳ ಮುಖ್ಯವಾದುದಾಗಿದೆ.

ಸ್ನೇಹಿತರೇ,

ಆಹಾರ ಸಂಸ್ಕರಣೆಯ ಜೊತೆಯಲ್ಲಿ ನಾವು ಗಮನ ನೀಡಬೇಕಾದ ಇನ್ನೊಂದು ಸಂಗತಿ ಎಂದರೆ ಆಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಸಣ್ಣ ರೈತರು ಪಡೆದುಕೊಳ್ಳುವಂತೆ ಮಾಡುವುದು ಹೇಗೆ ಎಂಬುದು. ಸಣ್ಣ ರೈತರು ಟ್ರ್ಯಾಕ್ಟರುಗಳನ್ನು ಖರೀದಿಸಲಾರರು. ಇತರ ಯಂತ್ರಗಳನ್ನು ಕೊಳ್ಳಲಾರರು. ಸಾಂಸ್ಥಿಕ, ಕಡಿಮೆ ಬೆಲೆಯ ಮತ್ತು ಸಮರ್ಪಕವಾದ ಪರ್ಯಾಯವೊಂದನ್ನು ರೈತರಿಗೆ ಒದಗಿಸಿ ಟ್ರ್ಯಾಕ್ಟರುಗಳನ್ನು ಮತ್ತು ಇತರ ಯಂತ್ರಗಳನ್ನು ಹಂಚಿಕೊಳ್ಳುವಂತೆ ಮಾಡಬಹುದೇ?. ವಿಮಾನ ಯಾನ ಸಂಸ್ಥೆಗಳು ವಿಮಾನಗಳನ್ನು ಗಂಟೆಗಳ ಆಧಾರದಲ್ಲಿ ಬಾಡಿಗೆಗೆ ಪಡೆದುಕೊಳ್ಳುವಂತೆ, ಅಂತಹ ವ್ಯವಸ್ಥೆಗಳನ್ನು ದೇಶದ ರೈತರಿಗೂ ವಿಸ್ತರಿಸಬಹುದಲ್ಲವೇ.

ಕೊರೊನಾ ಅವಧಿಯಲ್ಲಿ ರೈತರ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಿಸಲು ಟ್ರಕ್ ಅಗ್ರಿಗೇಟರುಗಳನ್ನು  ಕೂಡಾ ಸ್ವಲ್ಪ ಮಟ್ಟಿಗೆ ಬಳಸಲಾಗಿತ್ತು. ಮತ್ತು ಜನ ಕೂಡಾ ಇದನ್ನು ಇಷ್ಟಪಟ್ಟಿದ್ದರು. ಇದನ್ನು ನಾವು ಕೃಷಿ ಭೂಮಿಯಿಂದ ಮಂಡಿಗಳಿಗೆ ಅಥವಾ ಕಾರ್ಖಾನೆಗಳಿಗೆ ಅಥವಾ ಕಿಸಾನ್ ರೈಲಿಗೆ ಹೇಗೆ ವಿಸ್ತರಣೆ ಮಾಡಬಹುದು ಎಂಬ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ. ಕೃಷಿಯ ಇನ್ನೊಂದು ಮುಖ್ಯ ಅಂಶ ಎಂದರೆ ಮಣ್ಣಿನ ಪರೀಕ್ಷೆ. ಕಳೆದ ಕೆಲವು ವರ್ಷಗಳಲ್ಲಿ, ಕೋಟ್ಯಾಂತರ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ಗಳನ್ನು ಕೇಂದ್ರ ಸರಕಾರ ನೀಡಿದೆ. ಈಗ ನಾವು ಈ ಮಣ್ಣಿನ ಆರೋಗ್ಯ ಕಾರ್ಡುಗಳ ಸೌಲಭ್ಯವನ್ನು ನಗರಗಳಿಂದ ಹಳ್ಳಿಗಳಿಗೆ  ವಿಸ್ತರಿಸಬೇಕಾಗಿದೆ. ನಾವು ಮಣ್ಣು ಪರೀಕ್ಷಾ ಜಾಲವನ್ನು ರಕ್ತ ಪರೀಕ್ಷಾ ಪ್ರಯೋಗಾಲಯಗಳ ಜಾಲ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕಾಗಿದೆ. ಖಾಸಗಿ ಕಂಪೆನಿಗಳು ಇದರಲ್ಲಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಬಹುದಾಗಿದೆ. ಮತ್ತು ಒಮ್ಮೆ ಮಣ್ಣು ಪರೀಕ್ಷಾ ಜಾಲ ಅಭಿವೃದ್ಧಿಯಾದರೆ ಮತ್ತು ರೈತರು ಅದನ್ನು ಬಳಕೆ ಮಾಡಿದರೆ, ಆಲ್ಲಿ ರೈತರಿಗೆ ಅವರ ಕೃಷಿ ಭೂಮಿಯ ಆರೋಗ್ಯಕ್ಕೆ ಸಂಬಂಧಿಸಿ ಜಾಗೃತಿ ಉಂಟಾಗುತ್ತದೆ. ಮತ್ತು ಅವರ ನಿರ್ಧಾರಗಳಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗುತ್ತವೆ. ದೇಶದ ರೈತರು ಮಣ್ಣಿನ ಆರೋಗ್ಯದ ಬಗ್ಗೆ ತಿಳಿದುಕೊಂಡಷ್ಟು ಅವರ ಕೃಷ್ಯುತ್ಪನ್ನ ಉತ್ತಮಗೊಳ್ಳುತ್ತದೆ.

ಸ್ನೇಹಿತರೇ,

ಸಾರ್ವಜನಿಕ ವಲಯವು ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಕಾಣಿಕೆ ನೀಡುತ್ತಿದೆ. ಖಾಸಗಿ ವಲಯ ಕೂಡಾ ಅದರ ಸಹಭಾಗಿತ್ವವನ್ನು ಹೆಚ್ಚಿಸಲು ಇದು ಸಕಾಲ. ಸಂಶೋಧನೆ ಮತ್ತು ಅಭಿವೃದ್ಧಿ ವಿಷಯ ಬಂದಾಗ, ನಾನು ಬೆಳೆಗೆ ಸಂಬಂಧಿಸಿದ ಇಡೀ ವೈಜ್ಞಾನಿಕ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡುತ್ತೇನೆಯೇ ಹೊರತು ಬರೇ ಬೀಜಗಳಿಗೆ ಸಂಬಂಧಿಸಿದಂತೆ ಮಾತ್ರ ಸೀಮಿತವಾಗಿ ಅಲ್ಲ. ಅಲ್ಲಿ ಸಮಗ್ರ ದೋರಣೆ ಇರಬೇಕಾಗುತ್ತದೆ. ಪೂರ್ಣ ವೃತದ ಕಲ್ಪನೆ ಬೇಕಾಗುತ್ತದೆ. ನಾವೀಗ ರೈತರಿಗೆ ಬರೇ ಗೋಧಿ ಮತ್ತು ಅಕ್ಕಿ ಬೆಳೆಯುವುದು ಮಾತ್ರವಲ್ಲ ಇತರ ಬೆಳೆಗಳ ಆಯ್ಕೆಗೂ ಅವಕಾಶ ಒದಗಿಸಬೇಕಾಗುತ್ತದೆ. ನಾವು ಸಾವಯವ ಆಹಾರದಿಂದ ಹಿಡಿದು ಸಲಾಡ್ ಸಂಬಂಧಿತ ತರಕಾರಿಗಳವರೆಗೆ ಹಲವಾರು ಬೆಳೆಗಳ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬಹುದು. ಅದೇ ರೀತಿ ಸಿರಿ ಧಾನ್ಯಗಳಿಗೂ ನಾವು ಹೊಸ ಮಾರುಕಟ್ಟೆಗಳನ್ನು ಹುಡುಕುವಂತೆ ನಾನು ಸಲಹೆ ಮಾಡುತ್ತೇನೆ. ಭಾರತದಲ್ಲಿ ಭೂಮಿಯು ..ಕಾಳುಗಳಿಗೆ ಬಹಳ ಉಪಯುಕ್ತವಾಗಿದೆ. ಇದಕ್ಕೆ ಬಹಳ ಕಡಿಮೆ ನೀರು ಸಾಕು ಮತ್ತು ಅದು ಉತ್ತಮ ಇಳುವರಿ ಕೊಡುತ್ತದೆ. ಬೇಳೆ ಕಾಳುಗಳಿಗೆ ಜಗತ್ತಿನಲ್ಲಿ ಈಗಾಗಲೇ ಭಾರೀ ಬೇಡಿಕೆ ಇದೆ. ಅದೂ ಕೊರೊನಾ ಬಳಿಕ ಇನ್ನೂ ಹೆಚ್ಚಾಗಿದೆ. ಅದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಬಹಳ ಜನಪ್ರಿಯವಾಗಿದೆ. ಈ ನಿಟ್ಟಿನಲ್ಲಿ ರೈತರನ್ನು ಉತ್ತೇಜಿಸುವುದು ಆಹಾರ ಉದ್ಯಮದಲ್ಲಿರುವ ಸಹೋದ್ಯೋಗಿಗಳ ಬಹಳ ದೊಡ್ಡ ಜವಾಬ್ದಾರಿಯಾಗಿದೆ.

ಸ್ನೇಹಿತರೇ,

ಸಮುದ್ರ ಕಳೆ ಮತ್ತು ಜೇನು ಪೆಟ್ಟಿಗೆಯ ಮೇಣ ನಮ್ಮ ದೇಶದಲ್ಲಿ ಜನಪ್ರಿಯವಾಗುತ್ತಿದೆ. ಮತ್ತು ರೈತರು ಕೂಡಾ ಜೇನು ಸಾಕಾಣಿಕೆಯತ್ತ ಮನಸ್ಸು ಮಾಡಿದ್ದಾರೆ. ಸಮುದ್ರ ಕಳೆಗಳಿಗೆ, ಜೇನು, ಮತ್ತು ಜೇನು ಮೇಣಕ್ಕೆ  ಮಾರುಕಟ್ಟೆಯನ್ನು ಹುಡುಕುವುದು ಈ ಹೊತ್ತಿನ ಅವಶ್ಯಕತೆಯಾಗಿದೆ. ದೇಶದಲ್ಲಿ ಸಮುದ್ರ ಕಳೆ ಕೃಷಿಗೆ ವ್ಯಾಪಕವಾದ ಅವಕಾಶ ಇದೆ, ಯಾಕೆಂದರೆ ನಾವು ಬಹಳ ಉದ್ದದ ಕಡಲ ಕಿನಾರೆಯನ್ನು ಹೊಂದಿದ್ದೇವೆ. ಸಮುದ್ರ ಕಳೆ ಕೃಷಿಯು ನಮ್ಮ ಮೀನುಗಾರರಿಗೆ ಗಮನೀಯ ಪ್ರಮಾಣದಲ್ಲಿ ಆದಾಯವನ್ನು ತರಬಲ್ಲದು. ನಾವು ಜೇನು ಕೃಷಿಯಲ್ಲಿ ಉತ್ತಮವಾದ ಸಾಧನೆಯನ್ನು ಮಾಡುತ್ತಿದ್ದರೂ, ಜೇನು ಮೇಣದಲ್ಲಿ ನಮ್ಮ ಪಾಲುದಾರಿಕೆಯನ್ನು ಹೆಚ್ಚಿಸಬೇಕಾಗಿದೆ. ಇಂದಿನ ಚರ್ಚೆಗಳು ಈ ನಿಟ್ಟಿನಲ್ಲಿ ಹೇಗೆ ಗರಿಷ್ಠ ಕೊಡುಗೆಯನ್ನು ನೀಡಬಹುದು ಎಂಬ ಬಗ್ಗೆ ನಿಮಗೆ ಸಹಕಾರಿಯಾಗಬಲ್ಲವು.

ಖಾಸಗಿ ವಲಯದ ಪಾಲುದಾರಿಕೆಯಲ್ಲಿ ಹೆಚ್ಚಳದಿಂದಾಗಿ ರೈತರ ಆತ್ಮ ವಿಶ್ವಾಸವೂ ಹೆಚ್ಚುತ್ತದೆ. ನಮ್ಮ ದೇಶದಲ್ಲಿ ಗುತ್ತಿಗೆ ಕೃಷಿಯು ಒಂದಲ್ಲ ಒಂದು ರೀತಿಯಲ್ಲಿ ಚಾಲ್ತಿಯಲ್ಲಿತ್ತು. ನಮ್ಮ ಪ್ರಯತ್ನಗಳು ಗುತ್ತಿಗೆ ಕೃಷಿಯನ್ನು ವ್ಯಾಪಾರೋದ್ಯಮ ಮಾಡುವುದಕ್ಕೆ ಮಾತ್ರ ಸೀಮಿತವಾಗಿರಬೇಕಿಲ್ಲ, ಆದರೆ ಆ ಭೂಮಿಗೆ ಸಂಬಂಧಿಸಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸುವಂತಹದಾಗಿರಬೇಕು. ನಾವು ರೈತರಿಗೆ ತಂತ್ರಜ್ಞಾನ ಒದಗಿಸಬೇಕು ಮತ್ತು ಕೃಷಿಗೆ ಯೋಗ್ಯವಾದ ಬೀಜಗಳನ್ನು ಒದಗಿಸುವಂತಹದಾಗಿರಬೇಕು ಹಾಗು ಅವುಗಳು ಹೆಚ್ಚು ಪ್ರಮಾಣದ ಪೋಷಕಾಂಶಗಳನ್ನು ಹೊಂದಿದವಾಗಿರಬೇಕು.

ಸ್ನೇಹಿತರೇ,

ದೇಶದಲ್ಲಿ ನೀರಾವರಿಯಿಂದ ಹಿಡಿದು ಬಿತ್ತನೆಯವರೆಗೆ, ಕೊಯಿಲು ಮಾಡುವಿಕೆ, ಆದಾಯ ಮತ್ತು ಕೃಷಿಯಲ್ಲಿ ತಂತ್ರಜ್ಞಾನದವರೆಗೆ  ಸಂಪೂರ್ಣ ಪರಿಹಾರಗಳನ್ನು ಹುಡುಕುವ ನಿಟ್ಟಿನಲ್ಲಿ ನಾವು ದೃಢ ಪ್ರಯತ್ನಗಳನ್ನು ಮಾಡಬೇಕು. ನಾವು ಯುವಕರಿಗೆ ಉತ್ತೇಜನ ನೀಡಬೇಕು ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ನವೋದ್ಯಮಗಳಿಗೂ ಉತ್ತೇಜನ ನೀಡಬೇಕು. ಹಲವಾರು ನವೋದ್ಯಮಗಳು ಹಣ್ಣುಗಳ ಮತ್ತು ತರಕಾರಿಗಳನ್ನು ಕೊರೊನಾ ಅವಧಿಯಲ್ಲಿ ಹೇಗೆ ಜನರ ಮನೆಗಳಿಗೆ ಸಾಗಿಸಿದವು ಎಂಬುದನ್ನು ನಾವು ನೋಡಿದ್ದೇವೆ. ಮತ್ತು ಬಹುತೇಕ ನವೋದ್ಯಮಗಳನ್ನು ದೇಶದ ಯುವ ಜನತೆ ಆರಂಬಿಸಿದ್ದಾರೆ ಎಂಬುದೇ ಸಂತೋಷದ ಸಂಗತಿ. ನಾವು ಅವರನ್ನು ಪ್ರೋತ್ಸಾಹಿಸಬೇಕು. ಇದು ನಿಮ್ಮ ಸಕ್ರಿಯ ಪಾಲುದಾರಿಕೆ ಇಲ್ಲದಿದ್ದರೆ ಸಾಧ್ಯವಾಗದು. ರೈತರಿಗೆ ಸಾಲ, ಬೀಜಗಳು, ಗೊಬ್ಬರ ಮತ್ತು ಮಾರುಕಟ್ಟೆಗಳು ಪ್ರಾಥಮಿಕ ಅಗತ್ಯಗಳು. ಇವು ರೈತರಿಗೆ ಸಕಾಲದಲ್ಲಿ ಲಭಿಸಬೇಕು.

ವರ್ಷಗಳಿಂದ, ನಾವು ಕಿಸಾನ್ ಕ್ರೆಡಿಟ್ ಕಾರ್ಡ್ ಗಳ ವ್ಯಾಪ್ತಿಯನ್ನು ಸಣ್ಣ ರೈತರಿಗೆ, ಪಶುಪಾಲಕರಿಗೆ, ಮತ್ತು ಮೀನುಗಾರರಿಗೆ ವಿಸ್ತರಿಸಿದ್ದೇವೆ. ನಾವು 1.80 ಕೋಟಿಗೂ ಅಧಿಕ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ರೈತರಿಗೆ ಕಳೆದ ಒಂದು ವರ್ಷದಲ್ಲಿ ವಿತರಿಸಿದ್ದೇವೆ. ಮುಂಗಡದ ಮೊತ್ತವನ್ನು 6-7 ವರ್ಷಗಳ ಹಿಂದೆ ಇದ್ದ ಮೊತ್ತಕ್ಕೆ ಹೋಲಿಸಿದರೆ ಅದನ್ನು ದುಪ್ಪಟ್ಟು ಮಾಡಲಾಗಿದೆ. ಈ ಮುಂಗಡವು ರೈತರಿಗೆ ಸಕಾಲದಲ್ಲಿ ಲಭಿಸುತ್ತಿದೆ ಎಂಬುದು ಬಹಳ ಮುಖ್ಯವಾದ ಸಂಗತಿ. ಅದೇ ರೀತಿ ಗ್ರಾಮೀಣ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವಲ್ಲಿ ನಿಮ್ಮ ಪಾತ್ರವೂ ಬಹಳ ಪ್ರಮುಖವಾದುದಾಗಿದೆ. ರೂಪಾಯಿ 1 ಲಕ್ಷ ಕೋಟಿಯ ಮೂಲಸೌಕರ್ಯ ನಿಧಿ  ಅನುಷ್ಠಾನನ ಕೂಡಾ ಪ್ರೇರಣಾದಾಯಕವಾಗಿದೆ. ಈ ಕ್ರಮವು ಖರೀದಿಯಿಂದ ಹಿಡಿದು ದಾಸ್ತಾನಿನವರೆಗೆ ಇಡೀಯ ಸರಪಳಿಯನ್ನು ಆಧುನೀಕರಿಸುವುದಕ್ಕೆ ಉತ್ತೇಜನ ನೀಡುತ್ತದೆ. ಈ ಬಜೆಟ್ಟಿನಲ್ಲಿ ಈ ನಿಧಿಯ ಪ್ರಯೋಜನಗಳನ್ನು ದೇಶಾದ್ಯಂತ ಎ.ಪಿ.ಎಂ.ಸಿ.ಗಳಿಗೂ ನೀಡಲು ನಿರ್ಧರಿಸಲಾಗಿದೆ. ದೇಶದಲ್ಲಿ ಸ್ಥಾಪಿಸಲಾಗುತ್ತಿರುವ 10,000 ಎಫ್.ಪಿ.ಒ.ಗಳು ಬಲಿಷ್ಟವಾದ ಸಹಕಾರಿ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡುವಲ್ಲಿ ಸಹಾಯ ಮಾಡಲಿವೆ.

ಸ್ನೇಹಿತರೇ,

ಈ ದೃಢ ಪ್ರಯತ್ನಗಳನ್ನು ನಾವು ಹೇಗೆ ಮಾಡಬೇಕು ಮತ್ತು ಅನುಸರಿಸಿಕೊಂಡು ಹೋಗಬೇಕು ಎಂಬ ನಿಟ್ಟಿನಲ್ಲಿ ನಿಮ್ಮ ಸಲಹೆಗಳು ನಮಗೆ ಬಹಳ ಮುಖ್ಯ. ನೀವು ಈ ಕ್ಷೇತ್ರದಲ್ಲಿ ಮುಂಗಾಣ್ಕೆ ಮತ್ತು ಅನುಭವವನ್ನು ಹೊಂದಿದ್ದೀರಿ. ನಾವು ದೇಶದ ಕೃಷಿ ವಲಯದಲ್ಲಿ ಧೋರಣೆ, ಮುಂಗಾಣ್ಕೆ, ಮತ್ತು ಸರಕಾರದ ಆಡಳಿತ ಹಾಗು ನಿಮ್ಮ ಶಕ್ತಿಯ ಮೂಲಕ ಬದಲಾವಣೆಗಳನ್ನು ತರಬೇಕು. ಈ ಮಾತುಕತೆ, ಚರ್ಚೆಯಲ್ಲಿ ಭಾರತದ ಕೃಷಿ ವಲಯಕ್ಕೆ ಹಾಗು ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿ ನೀವು ನೀಡುವ ಸಲಹೆಗಳು ಮತ್ತು ಚಿಂತನೆಗಳು ಸರಕಾರಕ್ಕೆ ಬಹಳಷ್ಟು ಸಹಾಯ ಮಾಡಲಿವೆ.

ನಿಮ್ಮ ಯೋಜನೆಗಳು, ನೀವು ಮತ್ತು ಸರಕಾರ ಒಗ್ಗೂಡಿ ಹೇಗೆ ಕೆಲಸ ಮಾಡಬಹುದು ಎಂಬುದನ್ನೆಲ್ಲ ಮುಕ್ತ ಮನಸ್ಸಿನಿಂದ ಚರ್ಚೆ ಮಾಡಿ ಮತ್ತು ನಿಮ್ಮ ಸಲಹೆಗಳನ್ನು ಕೊಡಿರಿ. ಹೌದು..ನಿಮಗೆ ಬಜೆಟಿಗೆ ಸಂಬಂಧಿಸಿ ಕೆಲವು ಕಳವಳಗಳಿರಬಹುದು. ಆದರೆ ಇದು ಕೊನೆಯ ಬಜೆಟ್ ಅಲ್ಲ. ಇನ್ನಷ್ಟು ಬಜೆಟ್ ಗಳು ಬರಲಿಕ್ಕಿವೆ. ನೀವು ನಮಗೆ ಸೇವೆ ಸಲ್ಲಿಸುವ ಅವಕಾಶವನ್ನು ಒದಗಿಸಿದ್ದೀರಿ. ಮತ್ತು ನಾವದನ್ನು ಮಾಡುತ್ತೇವೆ. ಇಂದಿನ ಚರ್ಚೆ ಈ ಬಜೆಟನ್ನು ತ್ವರಿತವಾಗಿ ಹೆಚ್ಚು ಹೆಚ್ಚು ಜನರಿಗೆ ಪ್ರಯೋಜನಕಾರಿಯಾಗುವಂತೆ ಹೇಗೆ  ಜಾರಿಗೆ ತರಬಹುದು ಎಂಬ ಬಗ್ಗೆ ಗಮನ ನೀಡಲಿ. ನಿಮ್ಮ ಮುಕ್ತ ಮನಸ್ಸಿನ ಚರ್ಚೆ ನಮ್ಮ ರೈತರಿಗೆ, ಕೃಷಿ ವಲಯಕ್ಕೆ, ನೀಲಿ ಆರ್ಥಿಕತೆಗೆ ಹಾಗು ಶ್ವೇತ ಕ್ರಾಂತಿಗೆ ಬಹಳ ಶಕ್ತಿಯನ್ನು ತಂದುಕೊಡುತ್ತದೆ. ಮತ್ತೊಮ್ಮೆ, ನಾನು ನಿಮಗೆ ನನ್ನ ಕೃತಜ್ಞತೆಗಳನ್ನು ಸೂಚಿಸುತ್ತೇನೆ.

ಧನ್ಯವಾದಗಳು

ಘೋಷಣೆಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

ಭಾರತದ ಒಲಿಂಪಿಯನ್‌ಗಳಿಗೆ ಸ್ಫೂರ್ತಿ ನೀಡಿ! #Cheers4India
Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
India's core sector output in June grows 8.9% year-on-year: Govt

Media Coverage

India's core sector output in June grows 8.9% year-on-year: Govt
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 31 ಜುಲೈ 2021
July 31, 2021
ಶೇರ್
 
Comments

PM Modi inspires IPS probationers at Sardar Vallabhbhai Patel National Police Academy today

Citizens praise Modi Govt’s resolve to deliver Maximum Governance