ಸುಮಾರು 71,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಬಿಹಾರದಲ್ಲಿ ರಾಷ್ಟ್ರೀಯ ಮಖಾನಾ ಮಂಡಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ
ಪ್ರಾದೇಶಿಕ ಸಂಪರ್ಕ ಮತ್ತಷ್ಟು ಹೆಚ್ಚಿಸಲು ಪ್ರಧಾನಮಂತ್ರಿ ಅವರಿಂದ ಬಿಹಾರದ ಪುರ್ನಿಯಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡ ಉದ್ಘಾಟನೆ
ಪ್ರಧಾನಮಂತ್ರಿ ಅವರಿಂದ ಪುರ್ನಿಯಾದಲ್ಲಿ ಸುಮಾರು 36,000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ಮಿಜೋರಾಂನ ಐಜ್ವಾಲ್‌ನಲ್ಲಿ 9,000 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಮಿಜೋರಾಂ ಅನ್ನು ಭಾರತೀಯ ರೈಲು ಜಾಲಕ್ಕೆ ಬೆಸೆಯುವ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರಿಂದ ಮಣಿಪುರದಲ್ಲಿ 8,500 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ
ಅಸ್ಸಾಂನ ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರಿಂದ ಅಸ್ಸಾಂನಲ್ಲಿ 18,350 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಕೋಲ್ಕತ್ತಾದಲ್ಲಿ 16ನೇ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ-2025 ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ಸೆಪ್ಟಂಬರ್ 13ರಿಂದ 15ರವರೆಗೆ ಮಿಜೋರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ. 

ಸೆಪ್ಟೆಂಬರ್ 13 ರಂದು ಪ್ರಧಾನಮಂತ್ರಿ ಮಿಜೋರಾಂಗೆ ಭೇಟಿ ನೀಡಲಿದ್ದಾರೆ ಮತ್ತು ಬೆಳಿಗ್ಗೆ 10 ಗಂಟೆ ಸುಮಾರಿಗೆ ಐಜ್ವಾಲ್‌ನಲ್ಲಿ 9000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ಅವರು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆನಂತರ ಪ್ರಧಾನಮಂತ್ರಿ ಅವರು ಮಧ್ಯಾಹ್ನ 12:30ರ ಸುಮಾರಿಗೆ ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಚುರಚಾಂದ್‌ಪುರದಲ್ಲಿ 7,300 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಮಧ್ಯಾಹ್ನ 2:30ರ ಸುಮಾರಿಗೆ ಇಂಫಾಲ್‌ನಲ್ಲಿ 1,200 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡುವರು.

ನಂತರ ಪ್ರಧಾನಮಂತ್ರಿ ಅವರು ಸಂಜೆ 5 ಗಂಟೆ ಸುಮಾರಿಗೆ ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಧಾನಮಂತ್ರಿ ಸೆಪ್ಟೆಂಬರ್ 14 ರಂದು ಅಸ್ಸಾಂನಲ್ಲಿ 18,530 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಪ್ರಮುಖ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ದರ್ರಾಂಗ್‌ನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆನಂತರ ಮಧ್ಯಾಹ್ನ 1:45ರ ಸುಮಾರಿಗೆ ಗೋಲಾಘಾಟ್‌ನಲ್ಲಿರುವ ಅಸ್ಸಾಂ ಬಯೋ-ಎಥೆನಾಲ್ ಪ್ರೈವೇಟ್ ಲಿಮಿಟೆಡ್, ನುಮಲಿಗಢ ಸಂಸ್ಕರಣಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಗೋಲಾಘಾಟ್‌ನಲ್ಲಿ ಪಾಲಿಪ್ರೊಪಿಲೀನ್ ಘಟಕಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸುವರು. 

ಪ್ರಧಾನಮಂತ್ರಿ ಅವರು ಸೆಪ್ಟೆಂಬರ್ 15 ರಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಬೆಳಿಗ್ಗೆ 9:30ರ ಸುಮಾರಿಗೆ ಕೋಲ್ಕತ್ತಾದಲ್ಲಿ 16 ನೇ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ-2025 ಅನ್ನು ಉದ್ಘಾಟಿಸಲಿದ್ದಾರೆ.

ಆನಂತರ ಪ್ರಧಾನಮಂತ್ರಿ ಅವರು ಮಧ್ಯಾಹ್ನ 2:45ರ ವೇಳೆಗೆ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಪುರ್ನಿಯಾ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ಅವರು ಪುರ್ನಿಯಾದಲ್ಲಿ ಸುಮಾರು 36,000 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ ಮತ್ತು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅವರು ಬಿಹಾರದಲ್ಲಿ ರಾಷ್ಟ್ರೀಯ ಮಖಾನಾ ಮಂಡಳಿಯನ್ನೂ ಸಹ ಉದ್ಘಾಟಿಸಲಿದ್ದಾರೆ.

ಮಿಜೋರಂನಲ್ಲಿ ಪ್ರಧಾನಮಂತ್ರಿ 

ಪ್ರಧಾನಮಂತ್ರಿ ಅವರು ಐಜ್ವಾಲ್‌ನಲ್ಲಿ 9000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ರೈಲ್ವೆ, ರಸ್ತೆ ಮಾರ್ಗಗಳು, ಇಂಧನ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಬೇಡಿಕೆಗಳನ್ನು ಪೂರೈಸಲಿವೆ.

ವಿಶ್ವದರ್ಜೆಯ ಮೂಲಸೌಕರ್ಯ ವೃದ್ಧಿ ಮತ್ತು ಕೊನೆಯ ಮೈಲು ಸಂಪರ್ಕ ಕಲ್ಪಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ಸುಮಾರು 8,070 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದಲ್ಲಿ  ಅಭಿವೃದ್ಧಿಪಡಿಸಿರುವ ಬೈರಾಬಿ-ಸೈರಾಂಗ್ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದು ಮಿಜೋರಾಂ ರಾಜಧಾನಿಯನ್ನು ಭಾರತೀಯ ರೈಲ್ವೆ ಜಾಲಕ್ಕೆ ಮೊದಲ ಬಾರಿಗೆ ಸಂಪರ್ಕಿಸುತ್ತದೆ. ಸವಾಲಿನ ಗುಡ್ಡಗಾಡು ಪ್ರದೇಶದಲ್ಲಿ ನಿರ್ಮಿಸಿರುವ ಈ ರೈಲು ಮಾರ್ಗ ಯೋಜನೆಯು ಸಂಕೀರ್ಣ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ ನಿರ್ಮಿಸಲಾದ 45 ಸುರಂಗಗಳನ್ನು ಹೊಂದಿದೆ. ಅಲ್ಲದೆ, ಹೆಚ್ಚುವರಿಯಾಗಿ ಇದು 55 ಪ್ರಮುಖ ಸೇತುವೆಗಳು ಮತ್ತು 88 ಸಣ್ಣ ಸೇತುವೆಗಳನ್ನೂ ಸಹ ಒಳಗೊಂಡಿದೆ. ಮಿಜೋರಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ನೇರ ರೈಲು ಸಂಪರ್ಕವು ಈ ಪ್ರದೇಶದ ಜನರಿಗೆ ಸುರಕ್ಷಿತ, ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಪ್ರಯಾಣ ಆಯ್ಕೆಗಳನ್ನು ಒದಗಿಸುತ್ತದೆ. ಇದು ಆಹಾರ ಧಾನ್ಯಗಳು, ರಸಗೊಬ್ಬರಗಳು ಮತ್ತು ಇತರ ಅಗತ್ಯ ಸರಕುಗಳನ್ನು ಸಕಾಲಿಕ ಮತ್ತು ವಿಶ್ವಾಸಾರ್ಹ ಪೂರೈಕೆಯನ್ನು ಖಾತ್ರಿಪಡಿಸುತ್ತದೆ. ಈ ಮಾರ್ಗದಿಂದ ಒಟ್ಟಾರೆ  ದಕ್ಷ ಸಾರಿಗೆ ವ್ಯವಸ್ಥೆ ಮತ್ತು ಪ್ರಾದೇಶಿಕ ಸಂಪರ್ಕವನ್ನು ವೃದ್ಧಿಸುತ್ತದೆ.

ಇದೇ ವೇಳೆ ಪ್ರಧಾನಮಂತ್ರಿ ಅವರು ಮೂರು ಹೊಸ ಎಕ್ಸ್‌ಪ್ರೆಸ್ ರೈಲುಗಳಾದ ಸೈರಂಗ್ (ಐಜ್ವಾಲ್)-ದೆಹಲಿ (ಆನಂದ್ ವಿಹಾರ್ ಟರ್ಮಿನಲ್) ರಾಜಧಾನಿ ಎಕ್ಸ್‌ಪ್ರೆಸ್, ಸೈರಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮತ್ತು ಸೈರಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಐಜ್ವಾಲ್ ಈಗ ರಾಜಧಾನಿ ಎಕ್ಸ್‌ಪ್ರೆಸ್ ಮೂಲಕ ದೆಹಲಿಯೊಂದಿಗೆ ನೇರ ಸಂಪರ್ಕ ಹೊಂದಲಿಲಿದೆ. ಸೈರಂಗ್-ಗುವಾಹಟಿ ಎಕ್ಸ್‌ಪ್ರೆಸ್ ಮಿಜೋರಾಂ ಮತ್ತು ಅಸ್ಸಾಂ ನಡುವಿನ ಸಂಚಾರಕ್ಕೆ ಅನುಕೂಲವಾಗಲಿದೆ. ಸೈರಂಗ್-ಕೋಲ್ಕತ್ತಾ ಎಕ್ಸ್‌ಪ್ರೆಸ್ ಮಿಜೋರಾಂ ರೈಲು ಕೋಲ್ಕತ್ತಾಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಈ ವೇಗದ ಸಂಪರ್ಕವು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಮತ್ತು ಮಾರುಕಟ್ಟೆಗಳ ಲಭ್ಯತೆಯನ್ನು ಸುಧಾರಿಸುತ್ತದೆ. ಜತೆಗೆ ಇದರಿಂದ ಪ್ರದೇಶದಾದ್ಯಂತ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳು ಬಲವರ್ಧನೆಗೊಳ್ಳಲಿದೆ. ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಗಣನೀಯವಾಗಿ ವೃದ್ಧಿಸುತ್ತದೆ.

ರಸ್ತೆ ಮೂಲಸೌಕರ್ಯ ವೃದ್ದಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಮಂತ್ರಿ ಅವರು ಹಲವು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದರಲ್ಲಿ ಐಜ್ವಾಲ್ ಬೈಪಾಸ್ ರಸ್ತೆ, ಥೆನ್ಜಾಲ್-ಸಿಯಾಲ್ಸುಕ್ ರಸ್ತೆ ಮತ್ತು ಖಾನಕಾವ್ನ್-ರೊಂಗುರಾ ರಸ್ತೆ ಕೂಡ ಸೇರಿವೆ.

ಪ್ರಧಾನಮಂತ್ರಿಗಳ ಈಶಾನ್ಯ ಪ್ರದೇಶ ಅಭಿವೃದ್ಧಿ ಉಪಕ್ರಮ (ಪಿಎಂ-ಡಿವೈನ್) ಯೋಜನೆಯಡಿಯಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 45 ಕಿ.ಮೀ. ಐಜ್ವಾಲ್ ಬೈಪಾಸ್ ರಸ್ತೆ, ಐಜ್ವಾಲ್ ನಗರದ ದಟ್ಟಣೆ ತಗ್ಗಿಸುವುದು, ಲುಂಗ್ಲೈ, ಸಿಯಾಹಾ, ಲಾಂಗ್ಟ್ಲೈ, ಲೆಂಗ್ಪುಯಿ ವಿಮಾನ ನಿಲ್ದಾಣ ಮತ್ತು ಸೈರಂಗ್ ರೈಲು ನಿಲ್ದಾಣ ಸೇರಿದಂತೆ ಇತರ ಸ್ಥಳಗಳಿಗೆ ಸಂಪರ್ಕ ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ದಕ್ಷಿಣ ಜಿಲ್ಲೆಗಳಿಂದ ಐಜ್ವಾಲ್‌ಗೆ ಪ್ರಯಾಣದ ಸಮಯವನ್ನು ಸುಮಾರು 1.5 ಗಂಟೆಗಳಷ್ಟು ತಗ್ಗಿಸತ್ತದೆ ಮತ್ತು ಇದು ಈ ಪ್ರದೇಶದ ಜನರಿಗೆ ಗಮನಾರ್ಹ ಪ್ರಯೋಜನ ಒದಗಿಸುತ್ತದೆ. ಈಶಾನ್ಯ ವಿಶೇಷ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಥೆನ್ಜಾಲ್-ಸಿಯಾಲ್ಸುಕ್ ರಸ್ತೆಯು ಅನೇಕ ತೋಟಗಾರಿಕೆ ರೈತರು, ಡ್ರ್ಯಾಗನ್ ಹಣ್ಣು ಬೆಳೆಗಾರರು, ಭತ್ತದ ಬೆಳೆಗಾರರು ಮತ್ತು ಶುಂಠಿ ಸಂಸ್ಕರಣಾಗಾರಗಳಿಗೆ ಪ್ರಯೋಜನ ಒದಗಿಸುತ್ತದೆ ಮತ್ತು ಐಜ್ವಾಲ್-ಥೆನ್ಜಾಲ್-ಲುಂಗ್ಲೈ ಹೆದ್ದಾರಿಯೊಂದಿಗೆ ಸಂಪರ್ಕವನ್ನು ಬಲಪಡಿಸುತ್ತದೆ. ಸೆರ್ಚಿಪ್ ಜಿಲ್ಲೆಯ ಎನ್ ಇಎಸ್ ಐಡಿಎಸ್ (ರಸ್ತೆಗಳು) ಅಡಿಯಲ್ಲಿ ಬರುವ ಖಾಂಕಾವ್ನ್-ರೊಂಗುರಾ ರಸ್ತೆಯು ಮಾರುಕಟ್ಟೆಗಳಿಗೆ ಉತ್ತಮ ರಸ್ತೆಯ ಲಭ್ಯತೆಯನ್ನು ಒದಗಿಸುತ್ತದೆ ಮತ್ತು ವಿವಿಧ ತೋಟಗಾರಿಕೆ ರೈತರು ಮತ್ತು ಪ್ರದೇಶದ ಇತರ ಜನರಿಗೆ ಪ್ರಯೋಜನ ಒದಗಿಸುತ್ತದೆ, ಜೊತೆಗೆ ಶುಂಠಿ ಸಂಸ್ಕರಣಾ ಘಟಕಗಳನ್ನು ಬೆಂಬಲಿಸುತ್ತದೆ.

ಅಲ್ಲದೆ, ಪ್ರಧಾನಮಂತ್ರಿ ಲಾಂಗ್ಟ್ಲೈ-ಸಿಯಾಹಾ ರಸ್ತೆಯಲ್ಲಿರುವ ಚಿಮ್ಟುಯಿಪುಯಿ ನದಿಗೆ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಎಲ್ಲಾ ಋತುಮಾನದಲ್ಲೂ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ತಗ್ಗಿಸುತ್ತದೆ. ಈ ಸೇತುವೆಯು ಕಲಾದನ್ ಮಲ್ಟಿಮೋಡಲ್ ಟ್ರಾನ್ಸಿಟ್ ಚೌಕಟ್ಟಿನ ಅಡಿಯಲ್ಲಿ ಗಡಿಯಾಚೆಗಿನ ವಾಣಿಜ್ಯ ಚಟುವಟಿಕೆಗಳನ್ನೂ ಸಹ ಬೆಂಬಲಿಸುತ್ತದೆ.

ಪ್ರಧಾನಮಂತ್ರಿ ಅವರು ಕ್ರೀಡಾ ಅಭಿವೃದ್ಧಿಗಾಗಿ ಖೇಲೋ ಇಂಡಿಯಾ ಬಹುಪಯೋಗಿ ಒಳಾಂಗಣ ಸಭಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ತುಯಿಕುವಾಲ್‌ನಲ್ಲಿರುವ ಸಭಾಂಗಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಮಿಜೋರಾಂನ ಯುವಕರಿಗೆ ಅನುಕೂಲ ನೀಡುವ ಜತೆಗೆ ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ಸೇರಿದಂತೆ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ. 

ಈ ಪ್ರದೇಶದಲ್ಲಿ ಇಂಧನ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ ಐಜ್ವಾಲ್‌ನ ಮುಲ್ಖಾಂಗ್‌ನಲ್ಲಿ 30 ಟಿಎಂಟಿಪಿಎ (ವರ್ಷಕ್ಕೆ ಸಾವಿರ ಮೆಟ್ರಿಕ್ ಟನ್) ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಮಿಜೋರಾಂ ಮತ್ತು ನೆರೆಯ ರಾಜ್ಯಗಳಲ್ಲಿ ಎಲ್‌ಪಿಜಿಯ ಸ್ಥಿರ ಮತ್ತು ವಿಶ್ವಾಸಾರ್ಹ ಪೂರೈಕೆ ಖಾತ್ರಿಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ, ಇದು ಶುದ್ಧ ಅಡುಗೆ ಇಂಧನ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ ಮತ್ತು ಇದು ಸ್ಥಳೀಯ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತದೆ.

ಪ್ರಧಾನಮಂತ್ರಿ ಅವರು, ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ್ (ಪಿಎಂಜೆವಿಕೆ) ಯೋಜನೆಯಡಿಯಲ್ಲಿ ಕವರ್ತಾದಲ್ಲಿ ವಸತಿ ಶಾಲೆಯನ್ನು ಉದ್ಘಾಟಿಸಲಿದ್ದಾರೆ. ಮಾಮಿತ್ ಮಹತ್ವಾಕಾಂಕ್ಷೆಯ ಜಿಲ್ಲೆಯ ಈ ಶಾಲೆಯು ಆಧುನಿಕ ತರಗತಿ ಕೊಠಡಿಗಳು, ಹಾಸ್ಟೆಲ್‌ಗಳು ಮತ್ತು ಕೃತಕ ಫುಟ್‌ಬಾಲ್ ಟರ್ಫ್ ಸೇರಿ ಹಲವು ಕ್ರೀಡಾ ಸೌಲಭ್ಯಗಳನ್ನು ಒದಗಿಸುತ್ತದೆ. ಇದು 10,000 ಕ್ಕೂ ಅಧಿಕ ಮಕ್ಕಳು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡಲಿದ್ದು, ದೀರ್ಘಕಾಲೀನ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಭದ್ರಬುನಾದಿ ಹಾಕಲಿದೆ.

ಸರ್ವರಿಗೂ ಗುಣಮಟ್ಟದ ಶಿಕ್ಷಣದ ದೂರದೃಷ್ಟಿಯನ್ನು ಮುಂದುವರೆಸುವ ಕ್ರಮವಾಗಿ ಪ್ರಧಾನಮಂತ್ರಿ ತ್ಲಾಂಗ್ನುವಾಮ್‌ನಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಉದ್ಘಾಟಿಸಲಿದ್ದಾರೆ. ಶಾಲೆಯು ದಾಖಲಾತಿಯನ್ನು ಸುಧಾರಿಸುತ್ತದೆ, ಶಾಲೆ ತೊರೆಯುವವರ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಬುಡಕಟ್ಟು ಯುವಕರಿಗೆ ಸಮಗ್ರ ಶಿಕ್ಷಣದ ಅವಕಾಶಗಳನ್ನು ಒದಗಿಸುತ್ತದೆ.

ಮಣಿಪುರದಲ್ಲಿ ಪ್ರಧಾನಮಂತ್ರಿ 

ಮಣಿಪುರದ ಎಲ್ಲರನ್ನೂ ಒಳಗೊಂಡ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ಚುರಾಚಂದ್‌ಪುರದಲ್ಲಿ 7,300 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಮಣಿಪುರ ನಗರದ ರಸ್ತೆಗಳು, ಒಳಚರಂಡಿ ಮತ್ತು ಆಸ್ತಿ ನಿರ್ವಹಣಾ ಸುಧಾರಣಾ ಯೋಜನೆಯ 3,600 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ ಯೋಜನೆಗಳು; ಮಣಿಪುರ ಇನ್ಫೋಟೆಕ್ ಅಭಿವೃದ್ಧಿ (ಎಂಐಎನ್ ಡಿ) ಯೋಜನೆ, 9 ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ ಸೇರಿ ಹಲವು ಅಭಿವೃದ್ಧಿ ಯೋಜನೆಗಳು ಸೇರಿವೆ.

ಪ್ರಧಾನಮಂತ್ರಿ ಅವರು, ಇಂಫಾಲ್‌ನಲ್ಲಿ 1,200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಅವುಗಳಲ್ಲಿ ಮಂತ್ರಿಪುಖ್ರಿಯಲ್ಲಿ ನಾಗರಿಕ ಸಚಿವಾಲಯ; ಮಂತ್ರಿಪುಖ್ರಿಯಲ್ಲಿ ಐಟಿ ಎಸ್‌ಇಝಡ್ ಕಟ್ಟಡ ಮತ್ತು ಹೊಸ ಪೊಲೀಸ್ ಪ್ರಧಾನ ಕಚೇರಿ; ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಮಣಿಪುರ ಭವನಗಳು; ಮತ್ತು 4 ಜಿಲ್ಲೆಗಳಲ್ಲಿ ವಿಶಿಷ್ಟವಾದ ಎಲ್ಲಾ ಮಹಿಳಾ ಮಾರುಕಟ್ಟೆಯಾದ ಇಮಾ ಮಾರುಕಟ್ಟೆಗಳ ಉದ್ಘಾನೆಯೂ ಸೇರಿದೆ.

ಅಸ್ಸಾಂನಲ್ಲಿ ಪ್ರಧಾನಮಂತ್ರಿ 

ಇದೇ ಸೆಪ್ಟೆಂಬರ್ 13 ರಂದು ಪ್ರಧಾನ ಮಂತ್ರಿ ಅವರು ಗುವಾಹಟಿಯಲ್ಲಿ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಆಚರಣೆಯು ಅಸ್ಸಾಮೀ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪ್ರತಿಮ ಕೊಡುಗೆ ನೀಡಿದ ಡಾ. ಹಜಾರಿಕಾ ಅವರ ಜೀವನ ಮತ್ತು ಪರಂಪರೆಯನ್ನು ಗೌರವ ಉದ್ದೇಶವನ್ನು ಹೊಂದಿದೆ. 

ಸೆಪ್ಟೆಂಬರ್ 14 ರಂದು ಪ್ರಧಾನಮಂತ್ರಿ ಅಸ್ಸಾಂನಲ್ಲಿ 18,530 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಪ್ರಮುಖ ಮೂಲಸೌಕರ್ಯ ಮತ್ತು ಕೈಗಾರಿಕಾ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ದರ್ರಾಂಗ್‌ನಲ್ಲಿ ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ದರ್ರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮತ್ತು ಜಿಎನ್‌ಎಂ ಶಾಲೆ ಮತ್ತು ಬಿಎಸ್ಸಿ ನರ್ಸಿಂಗ್ ಕಾಲೇಜು ಸೇರಿವೆ. ಇದು ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಬಲಪಡಿಸುತ್ತದೆ; ನಗರ ಸಂಚಾರ ಸಂಪರ್ಕ ವೃದ್ಧಿಸುವ ಜತೆಗೆ ದಟ್ಟಣೆಯನ್ನು ತಗ್ಗಿಸುವ ಮತ್ತು ರಾಜಧಾನಿ ನಗರದಲ್ಲಿ ಮತ್ತು ಸುತ್ತಮುತ್ತಲಿನ ಸಂಪರ್ಕವನ್ನು ಸುಧಾರಿಸುವ ಗುವಾಹಟಿ ರಿಂಗ್ ರಸ್ತೆ ಯೋಜನೆ; ಮತ್ತು ಬ್ರಹ್ಮಪುತ್ರ ನದಿಯ ಮೇಲೆ ಕುರುವಾ-ನರೇಂಗಿ ಸೇತುವೆ ಸಂಪರ್ಕವನ್ನು ಸುಧಾರಿಸುವ ಮತ್ತು ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಯೋಜನೆಗಳು ಸೇರಿವೆ.

ಅಲ್ಲದೆ, ಪ್ರಧಾನಮಂತ್ರಿ ಅವರು ಗೋಲಾಘಾಟ್‌ನ ನುಮಲಿಗಢದಲ್ಲಿ, ನುಮಲಿಗಢ ಸಂಸ್ಕರಣಾಗಾರ ಲಿಮಿಟೆಡ್ (ಎನ್ ಆರ್ ಎಲ್ ) ನಲ್ಲಿ ಅಸ್ಸಾಂ ಬಯೋಇಥೆನಾಲ್ ಸ್ಥಾವರವನ್ನು ಉದ್ಘಾಟಿಸಲಿದ್ದಾರೆ, ಇದು ಶುದ್ಧ ಇಂಧನವನ್ನು ಉತ್ತೇಜಿಸುವ ಮತ್ತು ಬಳಸಿದರೆ ಬರಿದಾಗುವ ಇಂಧನಗಳ ಮೇಲಿನ ಅವಲಂಬನೆ ತಗ್ಗಿಸುವ ಗುರಿ ಹೊಂದಿದೆ.

ಅಸ್ಸಾಂನ ಪೆಟ್ರೋಕೆಮಿಕಲ್ ವಲಯಕ್ಕೆ ಗಮನಾರ್ಹ ಮೌಲ್ಯವನ್ನು ಸೇರ್ಪಡೆ ಮಾಡಲಿರುವ ನುಮಲಿಗಢ ಸಂಸ್ಕರಣಾಗಾರ ಲಿಮಿಟೆಡ್ (ಎನ್ ಆರ್ ಎಲ್)ನಲ್ಲಿ ಪಾಲಿಪ್ರೊಪಿಲೀನ್ ಸ್ಥಾವರಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಈ ಪ್ರದೇಶದ ಒಟ್ಟಾರೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ 

ಸದೃಢ, ಸುರಕ್ಷಿತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ತಮ್ಮ ಬದ್ಧತೆಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ಸೆಪ್ಟೆಂಬರ್ 15 ರಂದು ಕೋಲ್ಕತ್ತಾದಲ್ಲಿ 16 ನೇ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ -2025 ಅನ್ನು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಇದು ಸಶಸ್ತ್ರ ಪಡೆಗಳ ಉನ್ನತ ಮಟ್ಟದ ಚಿಂಥನ-ಮಂಥನಕ್ಕೆ ವೇದಿಕೆಯಾಗಿದ್ದು,  ದೇಶದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವವನ್ನು ಒಗೂಡಿಸುತ್ತದೆ. ಇದು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಭಾರತದ ಮಿಲಿಟರಿ ಸನ್ನದ್ಧತೆಯ ಜತೆಗೆ ಭವಿಷ್ಯದ ಅಭಿವೃದ್ಧಿಗೆ ಅಡಿಪಾಯ ಹಾಕಲು ನೆರವಾಗುತ್ತದೆ.

ಎರಡು ವರ್ಷಗಳಿಗೊಮ್ಮೆ ನಡೆಯುವ 16 ನೇ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನವು ಸೆಪ್ಟೆಂಬರ್ 15 ರಿಂದ 17 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ವರ್ಷದ ಸಮ್ಮೇಳನದ ವಿಷಯ 'ಸುಧಾರಣೆಗಳ ವರ್ಷ - ಭವಿಷ್ಯಕ್ಕಾಗಿ ಪರಿವರ್ತನೆ' ಎಂಬುದಾಗಿದೆ. 

ಬಿಹಾರದಲ್ಲಿ ಪ್ರಧಾನಮಂತ್ರಿ 

ಪ್ರಧಾನಮಂತ್ರಿ ಅವರು ಬಿಹಾರದಲ್ಲಿ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ಉದ್ಘಾಟಿಸಲಿದ್ದಾರೆ. ಈ ಮಂಡಳಿಯು ಉತ್ಪಾದನೆ ಮತ್ತು ಹೊಸ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ, ಕಟಾವಿನ ನಂತರದ ನಿರ್ವಹಣೆಯನ್ನು ಬಲಪಡಿಸುತ್ತದದೆ, ಮೌಲ್ಯವರ್ಧನೆ ಮತ್ತು ಸಂಸ್ಕರಣೆಯನ್ನು ಉತ್ತೇಜಿಸುತ್ತದೆ ಮತ್ತು ಮಖಾನಾದಲ್ಲಿ ಮಾರುಕಟ್ಟೆ, ರಫ್ತು ಮತ್ತು ಬ್ರಾಂಡ್ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ. ಇದರಿಂದಾಗಿ ಬಿಹಾರ ಮತ್ತು ದೇಶದ ಮಖಾನಾ ರೈತರಿಗೆ ಸಾಕಷ್ಟು ಪ್ರಯೋಜನವಾಗಲಿದೆ. 

ದೇಶದ ಒಟ್ಟು ಮಖಾನಾ ಉತ್ಪಾದನೆಯ ಸರಿಸುಮಾರು ಶೇ.90 ರಷ್ಟು ಬಿಹಾರದಲ್ಲಿದೆ. ಮಧುಬನಿ, ದರ್ಭಂಗಾ, ಸೀತಾಮರ್ಹಿ, ಸಹರ್ಸಾ, ಕತಿಹಾರ್, ಪುರ್ನಿಯಾ, ಸುಪೌಲ್, ಕಿಶನ್‌ಗಂಜ್ ಮತ್ತು ಅರಾರಿಯಾದಂತಹ ಪ್ರಮುಖ ಜಿಲ್ಲೆಗಳು ಪ್ರಾಥಮಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಏಕೆಂದರೆ ಅವುಗಳು ಅನುಕೂಲಕರ ಹವಾಮಾನ ಪರಿಸ್ಥಿತಿಗಳು ಮತ್ತು ಮಖಾನಾದ ಉತ್ತಮ ಗುಣಮಟ್ಟಕ್ಕೆ ಕೊಡುಗೆ ನೀಡುವ ಫಲವತ್ತಾದ ಮಣ್ಣನ್ನು ಹೊಂದಿವೆ. ಬಿಹಾರದಲ್ಲಿ ಮಖಾನಾ ಮಂಡಳಿಯ ಸ್ಥಾಪನೆಯು ರಾಜ್ಯ ಮತ್ತು ದೇಶದಲ್ಲಿ ಮಖಾನಾ ಉತ್ಪಾದನೆಗೆ ಪ್ರಮುಖ ಉತ್ತೇಜನ ನೀಡುತ್ತದೆ ಮತ್ತು ಈ ಕ್ಷೇತ್ರದಲ್ಲಿ ಜಾಗತಿಕ ನಕ್ಷೆಯಲ್ಲಿ ಬಿಹಾರದ ಇರುವುವಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ. 

ಪ್ರಧಾನಮಂತ್ರಿ ಅವರು ಪುರ್ನಿಯಾ ವಿಮಾನ ನಿಲ್ದಾಣದ ಹೊಸ ನಾಗರಿಕ ಎನ್‌ಕ್ಲೇವ್‌ನಲ್ಲಿ ಮಧ್ಯಂತರ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಿದ್ದು, ಇದು ಈ ಪ್ರದೇಶದಲ್ಲಿ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯವನ್ನು ವೃದ್ಧಿಸುತ್ತದದೆ. 

ಅಲ್ಲದೆ, ಪ್ರಧಾನಮಂತ್ರಿ ಅವರು ಪುರ್ನಿಯಾದಲ್ಲಿ ಸುಮಾರು 36,000 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ಭಾಗಲ್ಪುರದ ಪಿರ್‌ ಪೈಂಟಿಯಲ್ಲಿ 3x800 ಮೆಗಾವ್ಯಾಟ್ ಉಷ್ಣ ವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು 25,000 ಕೋಟಿ ರೂ. ಮೌಲ್ಯದ ಬಿಹಾರದ ಅತಿದೊಡ್ಡ ಖಾಸಗಿ ವಲಯದ ಹೂಡಿಕೆಯಾಗಲಿದೆ. ಇದನ್ನು ಅಲ್ಟ್ರಾ-ಸೂಪರ್ ಕ್ರಿಟಿಕಲ್, ಕಡಿಮೆ ಇಂಗಾಲ ಹೊರಸೂಸುವಿಕೆ ತಂತ್ರಜ್ಞಾನದ ಮೇಲೆ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ನಿರ್ದಿಷ್ಠ ಪ್ರಮಾಣದ ವಿದ್ಯುತ್ ಅನ್ನು ಒದಗಿಸುತ್ತದೆ ಮತ್ತು ಬಿಹಾರದ ಇಂಧನ ಭದ್ರತೆಯನ್ನು ಬಲವರ್ಧನೆಗೊಳಿಸುತ್ತದೆ. 

ಪ್ರಧಾನಮಂತ್ರಿ 2680 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಕೋಸಿ-ಮೆಚಿ ಇಂಟ್ರಾ-ಸ್ಟೇಟ್ ನದಿ ಸಂಪರ್ಕ ಯೋಜನೆಯ 1ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೂಳು ತೆಗೆಯುವುದು, ಹಾನಿಗೊಳಗಾದ ಕಟ್ಟಡಗಳ ಪುನರ್ ನಿರ್ಮಾಣ ಮತ್ತು ಜಲಾನಯನ ಪ್ರದೇಶದ ನವೀಕರಣ ಸೇರಿ ಕಾಲುವೆಯನ್ನು ಮೇಲ್ದರ್ಜೆಗೇರಿಸುವತ್ತ ಗಮನಹರಿಸಲಾಗುವುದು. ಜೊತೆಗೆ ಅದರ ನೀರಿನ ಹೊರಬಿಡುವ (ಡಿಸಾರ್ಜ್)ಸಾಮರ್ಥ್ಯವನ್ನು 15,000 ರಿಂದ 20,000 ಕ್ಯೂಸೆಕ್‌ಗಳಿಗೆ ಹೆಚ್ಚಿಸಲಾಗುವುದು. ಇದು ಈಶಾನ್ಯ ಬಿಹಾರದ ಹಲವು ಜಿಲ್ಲೆಗಳಿಗೆ ನೀರಾವರಿ ವಿಸ್ತರಣೆ, ಪ್ರವಾಹ ನಿಯಂತ್ರಣ ಮತ್ತು ಕೃಷಿ ಸ್ಥಿತಿಸ್ಥಾಪಕತ್ವದಿಂದ ಪ್ರಯೋಜನವನ್ನು ನೀಡುತ್ತದೆ.

ರೈಲು ಸಂಪರ್ಕವನ್ನು ಸುಧಾರಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿ ಬಿಹಾರದಲ್ಲಿ ರೈಲು ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೇರವೇರಿಸಲಿದ್ದಾರೆ ಮತ್ತು ಹಲವು ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಪ್ರಧಾನಮಂತ್ರಿ ಅವರು 2,170 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬಿಕ್ರಮಶಿಲಾ - ಕಟಾರಿಯಾ ನಡುವಿನ ರೈಲು ಮಾರ್ಗಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಗಂಗಾ ನದಿಗೆ ಅಡ್ಡಲಾಗಿ ನೇರ ರೈಲು ಸಂಪರ್ಕವನ್ನು ಒದಗಿಸುತ್ತದೆ ಹಾಗೂ ಇದು ಈ ಪ್ರದೇಶದ ಜನರಿಗೆ ಗಮನಾರ್ಹ ಪ್ರಯೋಜನಗಳನ್ನು ಒದಗಿಸುತ್ತದೆ. 

ಪ್ರಧಾನಮಂತ್ರಿ ವರು 4,410 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅರಾರಿಯಾ - ಗಲ್ಗಲಿಯಾ (ಠಾಕೂರ್ಗಂಜ್) ನಡುವಿನ ಹೊಸ ರೈಲು ಮಾರ್ಗವನ್ನು ಉದ್ಘಾಟಿಸಲಿದ್ದಾರೆ.

ಅರಾರಿಯಾ ಮತ್ತು ಕಿಶನ್‌ಗಂಜ್ ಜಿಲ್ಲೆಗಳ ನಡುವೆ ನೇರ ರೈಲು ಸಂಪರ್ಕವನ್ನು ಸ್ಥಾಪಿಸುವ ಮೂಲಕ ಈಶಾನ್ಯ ಬಿಹಾರದಾದ್ಯಂತ ಸಂಪರ್ಕ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸುವ ಅರಾರಿಯಾ - ಗಲ್ಗಲಿಯಾ (ಠಾಕೂರ್‌ಗಂಜ್) ವಿಭಾಗದಲ್ಲಿ ರೈಲಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಲಿದ್ದಾರೆ. ಅರಾರಿಯಾ, ಪೂರ್ಣಿಯಾ, ಮಾಧೇಪುರ, ಸಹರ್ಸಾ, ಖಗಾರಿಯಾ, ಬೇಗುಸರಾಯ್, ಸಮಸ್ತಿಪುರ, ಮುಜಫರ್‌ಪುರ, ವೈಶಾಲಿ ಮತ್ತು ಪಾಟ್ನಾ ಜಿಲ್ಲೆಗಳಿಗೆ ನೇರ ಪ್ರಯೋಜನವನ್ನು ನೀಡುವ ಜೋಗ್ಬಾನಿ ಮತ್ತು ದಾನಾಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಅವರು ಹಸಿರು ನಿಶಾನೆ ತೋರುವರು.ಜತೆಗೆ ಸಹರ್ಸಾ ಮತ್ತು ಛೆಹರ್ತಾ (ಅಮೃತಸರ) ಮತ್ತು ಜೋಗ್ಬಾನಿ ಮತ್ತು ಈರೋಡ್ ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಅವರು ಹಸಿರು ನಿಶಾನೆ ತೋರಲಿದ್ದಾರೆ. ಈ ರೈಲುಗಳು ಆಧುನಿಕ ಒಳಾಂಗಣ, ಸುಧಾರಿತ ಸೌಲಭ್ಯಗಳು ಮತ್ತು ವೇಗದ ಪ್ರಯಾಣ ಸಾಮರ್ಥ್ಯಗಳನ್ನು ಒದಗಿಸುವುದರ ಜತೆಗೆ ಆ ಪ್ರದೇಶಗಳಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಏಕೀಕರಣ ಚಟುವಟಿಕೆಗಳನ್ನು ವೃದ್ಧಿಸುತ್ತವೆ. 

ಪ್ರಧಾನಮಂತ್ರಿ ಅವರು ಪುರ್ನಿಯಾದಲ್ಲಿ ಲಿಂಗ ವಿಂಗಡಣೆ ಮಾಡಿದ ವೀರ್ಯ (Sex Sorted Semen Facility ) ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಇದು ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಅತ್ಯಾಧುನಿಕ ವೀರ್ಯ ಕೇಂದ್ರವಾಗಿದ್ದು ವಾರ್ಷಿಕವಾಗಿ 5 ಲಕ್ಷ ಲಿಂಗ ವಿಂಗಡಣೆ ಮಾಡಿದ ವೀರ್ಯವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಸೌಲಭ್ಯವನ್ನು ಸ್ಥಾಪಿಲಾಗಿದ್ದು, ಅಕ್ಟೋಬರ್ 2024ರಲ್ಲಿ ಆರಂಭಿಸಲಾದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬಳಸಲಾಗಿದೆ. ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ದೂರದೃಷ್ಟಿಗೆ ಅನುಗುಣವಾಗಿದೆ. ಹೆಣ್ಣು ಕರುಗಳು ಜನಿಸುವ ಹೆಚ್ಚಿನ ಸಾಧ್ಯತೆಗಳನ್ನು ಒಳಗೊಳ್ಳುವ ಮೂಲಕ ತಂತ್ರಜ್ಞಾನವು ಸಣ್ಣ, ಅತಿ ಸಣ್ಣ ರೈತರು ಮತ್ತು ಭೂಹೀನ ಕಾರ್ಮಿಕರು ಹೆಚ್ಚಿನ ಬದಲಿ ಆಕಳುಗಳನ್ನು ಪಡೆಯಲು, ಆರ್ಥಿಕ ಒತ್ತಡ ತಗ್ಗಿಸಲು ಮತ್ತು ಸುಧಾರಿತ ಡೈರಿ ಉತ್ಪಾದಕತೆಯ ಮೂಲಕ ಆದಾಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಪಿಎಂಎವೈ (ಆರ್) ಅಡಿಯಲ್ಲಿ 35,000 ಗ್ರಾಮೀಣ ಫಲಾನುಭವಿಗಳಿಗೆ ಮತ್ತು ಪಿಎಂಎವೈ (ಯು) ಅಡಿಯಲ್ಲಿ 5,920 ನಗರ ಫಲಾನುಭವಿಗಳಿಗೆ ನಡೆಯುವ ಗೃಹ ಪ್ರವೇಶ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಮತ್ತು ಕೆಲವು ಫಲಾನುಭವಿಗಳಿಗೆ ಸ್ವತಃ ತಾವೇ ಕೀಲಿ ಕೈಗಳನ್ನು ಹಸ್ತಾಂತರಿಸಲಿದ್ದಾರೆ. 

ಅಲ್ಲದೆ, ಪ್ರಧಾನಮಂತ್ರಿ ಅವರು ಬಿಹಾರದಲ್ಲಿ ಡಿಎವೈ-ಎನ್ ಆರ್ ಎಲ್ ಎಂ ಅಡಿಯಲ್ಲಿ ಕ್ಲಸ್ಟರ್ ಮಟ್ಟದ ಒಕ್ಕೂಟಗಳಿಗೆ ಸುಮಾರು 500 ಕೋಟಿ ರೂ.ಗಳ ಸಮುದಾಯ ಹೂಡಿಕೆ ನಿಧಿ ವಿತರಿಸಲಿದ್ದಾರೆ ಮತ್ತು ಕೆಲವು ಸಿಎಲ್ ಎಫ್ ಅಧ್ಯಕ್ಷರಿಗೆ ಚೆಕ್‌ಗಳನ್ನು ಹಸ್ತಾಂತರ ಮಾಡಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Operation Sagar Bandhu: India provides assistance to restore road connectivity in cyclone-hit Sri Lanka

Media Coverage

Operation Sagar Bandhu: India provides assistance to restore road connectivity in cyclone-hit Sri Lanka
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 5 ಡಿಸೆಂಬರ್ 2025
December 05, 2025

Unbreakable Bonds, Unstoppable Growth: PM Modi's Diplomacy Delivers Jobs, Rails, and Russian Billions