ಲೋಕಮಾತಾ ದೇವಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 31ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅವರು ಬೆಳಗ್ಗೆ 11:15ರ ಸುಮಾರಿಗೆ ಭೋಪಾಲ್ ನಲ್ಲಿ ಲೋಕಮಾತಾ ದೇವಿ ಅಹಲ್ಯಾಬಾಯಿ ಮಹಿಳಾ ಸಶಕ್ತಿಕರಣ ಮಹಾಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭೋಪಾಲ್ ನಲ್ಲಿ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಲೋಕಮಾತಾ ದೇವಿ ಅಹಲ್ಯಾಬಾಯಿ ಅವರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ವಿಶೇಷ ನಾಣ್ಯವನ್ನು ಸಹ ಬಿಡುಗಡೆ ಮಾಡಲಿದ್ದಾರೆ. ರೂ. 300ರ ನಾಣ್ಯವು ಅಹಲ್ಯಾಬಾಯಿ ಹೋಳ್ಕರ್ ಅವರ ಚಿತ್ರವನ್ನು ಹೊಂದಿರುತ್ತದೆ. ಬುಡಕಟ್ಟು, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳಲ್ಲಿ ಅನುಪಮ ಕೊಡುಗೆ ನೀಡಿದ ಮಹಿಳಾ ಕಲಾವಿದೆಗೆ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ಅವರು ಈ ವೇಳೆ ಪ್ರದಾನ ಮಾಡಲಿದ್ದಾರೆ.
ಕೊನೆಯ ಹಂತದವರೆಗೂ ವಾಯು ಸಂಪರ್ಕಕ್ಕೆ ಪ್ರಮುಖ ಉತ್ತೇಜಕ ಕ್ರಮವಾಗಿ, ಪ್ರಧಾನಿಯವರು ದಾಟಿಯಾ ಮತ್ತು ಸತ್ನಾ ವಿಮಾನ ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ. ಇದರಿಂದ ವಿಂಧ್ಯ ಪ್ರದೇಶದಲ್ಲಿ ಕೈಗಾರಿಕೆ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಹೊಸ ಅವಕಾಶಗಳು ತೆರೆಯಲಿವೆ.
ನಗರಗಳಲ್ಲಿ ಪ್ರಯಾಣ ಮೂಲಸೌಕರ್ಯವನ್ನು ಸುಧಾರಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿಗಳು ಇಂದೋರ್ ಮೆಟ್ರೋದ ಹಳದಿ ಮಾರ್ಗದ ಸೂಪರ್ ಆದ್ಯತಾ ಕಾರಿಡಾರ್ ನಲ್ಲಿ ಪ್ರಯಾಣಿಕರ ಸೇವೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಒದಗಿಸುವುದರ ಜೊತೆಗೆ ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.
480 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 1,271 ಅಟಲ್ ಗ್ರಾಮ ಸುಶಾಸನ ಭವನಗಳ ನಿರ್ಮಾಣಕ್ಕಾಗಿ ಪ್ರಧಾನಿಯವರು ಮೊದಲ ಕಂತನ್ನು ವರ್ಗಾಯಿಸಲಿದ್ದಾರೆ. ಈ ಕಟ್ಟಡಗಳು ಗ್ರಾಮ ಪಂಚಾಯತ್ ಗಳಿಗೆ ಶಾಶ್ವತ ಮೂಲಸೌಕರ್ಯವನ್ನು ಒದಗಿಸುತ್ತವೆ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು, ಸಭೆಗಳನ್ನು ನಡೆಸಲು ಮತ್ತು ದಾಖಲೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.


