ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 17 ರಂದು ಮುಂಬೈಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿ ಮಾಡಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಭಾರತ ಆಯೋಜಿಸಿರುವ ಕೃತಕ ಬುದ್ಧಿಮತ್ತೆ (AI) ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರು 2026ರ ಫೆಬ್ರವರಿ 17 ರಿಂದ 19ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಮತ್ತು ಮುಂಬೈನಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ದ್ವಿಪಕ್ಷೀಯ ಶೃಂಗಸಭೆ ನಡೆಸಲಿದ್ದಾರೆ. ಇದು ಅಧ್ಯಕ್ಷರಾದ ಮ್ಯಾಕ್ರನ್ ಅವರ ಭಾರತದ ನಾಲ್ಕನೇ ಭೇಟಿ ಮತ್ತು ಮುಂಬೈಗೆ ಮೊದಲ ಭೇಟಿಯಾಗಿದೆ.
ಫೆಬ್ರವರಿ 17 ರಂದು ಮಧ್ಯಾಹ್ನ ಸುಮಾರು 3:15ಕ್ಕೆ ಉಭಯ ನಾಯಕರು ಮುಂಬೈನ ಲೋಕ ಭವನದಲ್ಲಿ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಈ ಮಾತುಕತೆ ಸಂದರ್ಭದಲ್ಲಿ ಅವರು, ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಅವರ ಚರ್ಚೆಗಳು ಕಾರ್ಯತಾಂತ್ರಿಕ ಪಾಲುದಾರಿಕೆಯನ್ನು ಬಲವರ್ಧನೆಗೊಳಿಸುವ ಮತ್ತು ಅದನ್ನು ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಿಗೆ ಮತ್ತಷ್ಟು ವಿಸ್ತರಿಸುವತ್ತ ಗಮನಹರಿಸುತ್ತವೆ. ಪ್ರಧಾನಮಂತ್ರಿ ಮೋದಿ ಮತ್ತು ಅಧ್ಯಕ್ಷರಾದ ಮ್ಯಾಕ್ರನ್ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ.
ಸಂಜೆ ಸುಮಾರು 5:15ರ ವೇಳೆಗೆ ಉಭಯ ನಾಯಕರು ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026 ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಎರಡೂ ದೇಶಗಳ ವಾಣಿಜ್ಯ ನಾಯಕರು, ನವೋದ್ಯಮಗಳು, ಸಂಶೋಧಕರು ಮತ್ತು ಇತರ ನಾವೀನ್ಯಕಾರರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.


