ಏಕ್ತಾ ಕಾ ಮಹಾಕುಂಭ್ - ಹೊಸ ಯುಗದ ಉದಯ

Published By : Admin | February 27, 2025 | 09:00 IST

- ಶ್ರೀ ನರೇಂದ್ರ ಮೋದಿ,
- ಗೌರವಾನ್ವಿತ ಪ್ರಧಾನಮಂತ್ರಿ

ಪವಿತ್ರ ನಗರಿ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಯಶಸ್ವಿಯಾಗಿ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಪೂರ್ಣಗೊಂಡಿದೆ. ಒಂದು ರಾಷ್ಟ್ರದ ಪ್ರಜ್ಞೆ ಜಾಗೃತವಾದಾಗ, ಶತಮಾನಗಳಷ್ಟು ಹಳೆಯದಾದ ಅಧೀನತೆಯ ಮನಸ್ಥಿತಿಯ ಸಂಕೋಲೆಗಳಿಂದ ಮುಕ್ತವಾದಾಗ, ಅದು ನವೀಕೃತ ಶಕ್ತಿಯ ತಾಜಾ ಗಾಳಿಯಲ್ಲಿ ಮುಕ್ತವಾಗಿ ಉಸಿರಾಡುತ್ತದೆ. ಇದರ ಫಲಿತಾಂಶವನ್ನು ಜನವರಿ 13ರಿಂದ ಪ್ರಯಾಗ್‌ರಾಜ್‌ನಲ್ಲಿ ನಡೆದ ಏಕ್ತಾ ಕಾ ಮಹಾಕುಂಭ(ಏಕತೆಯ ಮಹಾಕುಂಭ)ದಲ್ಲಿ ವೀಕ್ಷಿಸಲಾಯಿತು.

2024 ಜನವರಿ 22ರಂದು, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ, ನಾನು ದೇವಭಕ್ತಿ ಮತ್ತು ದೇಶಭಕ್ತಿಯ ಬಗ್ಗೆ ಮಾತನಾಡಿದೆ - ದೈವಿಕ ಮತ್ತು ರಾಷ್ಟ್ರದ ಮೇಲಿನ ಭಕ್ತಿ. ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದ ಸಮಯದಲ್ಲಿ, ದೇವರು ಮತ್ತು ದೇವತೆಗಳು, ಸಂತರು, ಮಹಿಳೆಯರು, ಮಕ್ಕಳು, ಯುವಕರು, ಹಿರಿಯ ನಾಗರಿಕರು ಮತ್ತು ಜೀವನದ ಎಲ್ಲಾ ಹಂತಗಳ ಜನರು ಒಟ್ಟಿಗೆ ಬಂದರು. ಅಲ್ಲಿ ನಾವು ರಾಷ್ಟ್ರದ ಜಾಗೃತ ಪ್ರಜ್ಞೆಯನ್ನು ಕಂಡೆವು. ಇದು ಏಕತಾ ಕಾ ಮಹಾಕುಂಭ, ಅಲ್ಲಿ 140 ಕೋಟಿ ಭಾರತೀಯರ ಭಾವನೆಗಳು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ, ಈ ಪವಿತ್ರ ಸಂದರ್ಭಕ್ಕಾಗಿ ಒಟ್ಟುಗೂಡಿದವು.


ಪ್ರಯಾಗರಾಜ್‌ನ ಈ ಪವಿತ್ರ ಪ್ರದೇಶದಲ್ಲಿ ಶೃಂಗವರ್‌ಪುರವಿದೆ, ಇದು ಏಕತೆ, ಸಾಮರಸ್ಯ ಮತ್ತು ಪ್ರೀತಿಯ ಪವಿತ್ರ ಭೂಮಿಯಾಗಿದೆ, ಅಲ್ಲಿ ಪ್ರಭು ಶ್ರೀರಾಮ ಮತ್ತು ನಿಷಾದರಾಜ್ ಭೇಟಿಯಾಗಿದ್ದರು. ಅವರ ಸಭೆಯು ಭಕ್ತಿ ಮತ್ತು ಸದ್ಭಾವನೆಯ ಸಂಗಮವನ್ನು ಸಂಕೇತಿಸುತ್ತದೆ. ಇಂದಿಗೂ, ಪ್ರಯಾಗರಾಜ್ ನಮಗೆ ಅದೇ ಮನೋಭಾವದಿಂದ ಸ್ಫೂರ್ತಿ ನೀಡುತ್ತದೆ.

45 ದಿನಗಳ ಕಾಲ, ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಜನರು ಸಂಗಮಕ್ಕೆ ಹೋಗುವುದನ್ನು ನಾನು ನೋಡಿದೆ. ಸಂಗಮದಲ್ಲಿ ಭಾವನೆಗಳ ಅಲೆ ಏರುತ್ತಲೇ ಇತ್ತು. ಪ್ರತಿಯೊಬ್ಬ ಭಕ್ತರೂ ಒಂದೇ ಉದ್ದೇಶದಿಂದ ಬಂದರು - ಅದು ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದಾಗಿತ್ತು. ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮವು ಪ್ರತಿಯೊಬ್ಬ ಯಾತ್ರಿಕರನ್ನು ಉತ್ಸಾಹ, ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಿತು.

ಪ್ರಯಾಗರಾಜ್‌ನಲ್ಲಿ ನಡೆಯುವ ಈ ಮಹಾಕುಂಭವು ಆಧುನಿಕ ನಿರ್ವಹಣಾ ವೃತ್ತಿಪರರು, ಯೋಜನೆ ಮತ್ತು ನೀತಿ ತಜ್ಞರಿಗೆ ಅಧ್ಯಯನದ ವಿಷಯವಾಗಿದೆ. ಜಗತ್ತಿನಲ್ಲಿ ಎಲ್ಲಿಯೂ ಈ ಪ್ರಮಾಣದ ಯಾವುದೇ ಸಮಾನಾಂತರ ಅಥವಾ ಉದಾಹರಣೆ ಇಲ್ಲ.

ನದಿಗಳ ಸಂಗಮದ ದಡದಲ್ಲಿರುವ ಪ್ರಯಾಗರಾಜ್‌ನಲ್ಲಿ ಕೋಟ್ಯಂತರ ಜನರು ಹೇಗೆ ಒಟ್ಟುಗೂಡಿದರು ಎಂಬುದನ್ನು ಜಗತ್ತು ಆಶ್ಚರ್ಯದಿಂದ ನೋಡಿತು. ಈ ಜನರಿಗೆ ಯಾವುದೇ ಔಪಚಾರಿಕ ಆಹ್ವಾನಗಳು ಇರಲಿಲ್ಲ, ಯಾವಾಗ ಹೋಗಬೇಕೆಂಬುದರ ಬಗ್ಗೆ ಯಾವುದೇ ಪೂರ್ವ ಸಂವಹನವಿರಲಿಲ್ಲ. ಆದರೂ ಕೋಟ್ಯಂತರ ಜನರು ತಮ್ಮದೇ ಆದ ಇಚ್ಛೆಯಿಂದ ಮಹಾಕುಂಭಕ್ಕೆ ಹೊರಟರು ಮತ್ತು ಪವಿತ್ರ ನೀರಿನಲ್ಲಿ ಪುಣ್ಯಸ್ನಾನ ಮಾಡಿ ಆನಂದ ಅನುಭವಿಸಿದರು.

ಪವಿತ್ರ ಸ್ನಾನದ ನಂತರ ಅಪಾರ ಸಂತೋಷ ಮತ್ತು ತೃಪ್ತಿ ಹೊರಸೂಸಿದ ಆ ಮುಖಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಮಹಿಳೆಯರು, ಹಿರಿಯರು, ನಮ್ಮ ದಿವ್ಯಾಂಗ ಸಹೋದರ ಸಹೋದರಿಯರು - ಎಲ್ಲರೂ ಸಂಗಮ ತಲುಪಲು ಒಂದು ಮಾರ್ಗ ಕಂಡುಕೊಂಡರು.

ಭಾರತದ ಯುವಕರ ಅಗಾಧ ಭಾಗವಹಿಸಿದ್ದನ್ನು ನೋಡುವುದೇ ನನಗೆ ವಿಶೇಷವಾಗಿ ಹೃದಯಸ್ಪರ್ಶಿಯಾಗಿತ್ತು. ಮಹಾಕುಂಭದಲ್ಲಿ ಯುವ ಪೀಳಿಗೆಯ ಉಪಸ್ಥಿತಿಯು ಭಾರತದ ಯುವಕರು ನಮ್ಮ ಭವ್ಯ ಸಂಸ್ಕೃತಿ ಮತ್ತು ಪರಂಪರೆಯ ಜ್ಯೋತಿ ಹೊತ್ತವರಾಗಿರುತ್ತಾರೆ ಎಂಬ ಆಳವಾದ ಸಂದೇಶವನ್ನು ರವಾನಿಸುತ್ತದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದಾರೆ.

ಈ ಮಹಾಕುಂಭಕ್ಕೆ ಪ್ರಯಾಗ್‌ರಾಜ್‌ಗೆ ಆಗಮಿಸಿದ ಜನರ ಸಂಖ್ಯೆ ನಿಸ್ಸಂದೇಹವಾಗಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಆದರೆ ಭೌತಿಕವಾಗಿ ಹಾಜರಿದ್ದವರನ್ನು ಮೀರಿ, ಪ್ರಯಾಗ್‌ರಾಜ್‌ಗೆ ತಲುಪಲು ಸಾಧ್ಯವಾಗದ ಕೋಟ್ಯಂತರ ಜನರು ಈ ಸಂದರ್ಭದೊಂದಿಗೆ ಭಾವನಾತ್ಮಕವಾಗಿಯೂ ಆಳವಾದ ಸಂಪರ್ಕ ಹೊಂದಿದ್ದರು. ಯಾತ್ರಿಕರು ತಂದ ಪವಿತ್ರ ನೀರು ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಆನಂದದ ಮೂಲವಾಯಿತು. ಮಹಾಕುಂಭದಿಂದ ಹಿಂದಿರುಗಿದ ಅನೇಕರನ್ನು ಅವರ ಹಳ್ಳಿಗಳಲ್ಲಿ ಗೌರವದಿಂದ ಸ್ವೀಕರಿಸಲಾಯಿತು, ಸಮಾಜವು ಸಹ ಗೌರವಿಸಿತು.

ಕಳೆದ ಕೆಲವು ವಾರಗಳಲ್ಲಿ ನಡೆದದ್ದು ಅಭೂತಪೂರ್ವ ಮತ್ತು ಮುಂಬರುವ ಶತಮಾನಗಳಿಗೆ ಭದ್ರ ಅಡಿಪಾಯ ಹಾಕಿದೆ.

ಯಾರೂ ಊಹಿಸಿದ್ದಕ್ಕಿಂತ ಹೆಚ್ಚಿನ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸಿದರು. ಕುಂಭಮೇಳದ ಹಿಂದಿನ ಅನುಭವಗಳ ಆಧಾರದ ಮೇಲೆ ಆಡಳಿತವು ಹಾಜರಾತಿಯನ್ನು ಅಂದಾಜು ಮಾಡಿತ್ತು.

ಈ ಏಕ್ತಾ ಕಾ ಮಹಾಕುಂಭದಲ್ಲಿ ಅಮೆರಿಕದ ಜನಸಂಖ್ಯೆಯ ಸುಮಾರು 2 ಪಟ್ಟು ಜನರು ಭಾಗವಹಿಸಿದ್ದರು.

ಆಧ್ಯಾತ್ಮಿಕ ವಿದ್ವಾಂಸರು ಕೋಟ್ಯಂತರ ಭಾರತೀಯರ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ವಿಶ್ಲೇಷಿಸಿದರೆ, ತನ್ನ ಪರಂಪರೆಯ ಬಗ್ಗೆ ಹೆಮ್ಮೆಪಡುವ ಭಾರತವು ಈಗ ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ಕಂಡುಕೊಂಡರು. ಇದು ಹೊಸ ಭಾರತದ ಭವಿಷ್ಯವನ್ನು ಬರೆಯುವ ಹೊಸ ಯುಗದ ಉದಯ ಎಂದು ನಾನು ನಂಬುತ್ತೇನೆ.

ಸಾವಿರಾರು ವರ್ಷಗಳಿಂದ, ಮಹಾಕುಂಭವು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಬಲಪಡಿಸಿದೆ. ಪ್ರತಿ ಪೂರ್ಣಕುಂಭದಲ್ಲೂ ಸಂತರು, ವಿದ್ವಾಂಸರು ಮತ್ತು ಚಿಂತಕರು ತಮ್ಮ ಕಾಲದಲ್ಲಿ ಸಮಾಜದ ಸ್ಥಿತಿಗತಿ ಕುರಿತು ಚರ್ಚಿಸಲು ಸಭೆ ಸೇರುತ್ತಿದ್ದರು. ಅವರ ಪ್ರತಿಬಿಂಬಗಳು ರಾಷ್ಟ್ರ ಮತ್ತು ಸಮಾಜಕ್ಕೆ ಹೊಸ ದಿಕ್ಕು ತೋರಿದ್ದವು. ಪ್ರತಿ 6 ವರ್ಷಗಳಿಗೊಮ್ಮೆ, ಅರ್ಧಕುಂಭದ ಸಮಯದಲ್ಲಿ, ಈ ವಿಚಾರಗಳನ್ನು ಪರಿಶೀಲಿಸಲಾಗುತ್ತಿತ್ತು. 144 ವರ್ಷಗಳ ಕಾಲ ನಡೆದ 12 ಪೂರ್ಣಕುಂಭ ಕಾರ್ಯಕ್ರಮಗಳ ನಂತರ, ಬಳಕೆಯಲ್ಲಿಲ್ಲದ ಸಂಪ್ರದಾಯಗಳನ್ನು ಕೈಬಿಡಲಾಯಿತು, ಹೊಸ ವಿಚಾರಗಳನ್ನು ಸ್ವೀಕರಿಸಲಾಯಿತು ಮತ್ತು ಹೊಸ ಸಂಪ್ರದಾಯಗಳನ್ನು ಸೃಷ್ಟಿಸಲಾಯಿತು.

144 ವರ್ಷಗಳ ನಂತರ, ಈ ಮಹಾಕುಂಭದಲ್ಲಿ, ನಮ್ಮ ಸಂತರು ಮತ್ತೊಮ್ಮೆ ಭಾರತದ ಅಭಿವೃದ್ಧಿ ಪ್ರಯಾಣಕ್ಕಾಗಿ ನಮಗೆ ಹೊಸ ಸಂದೇಶ ನೀಡಿದ್ದಾರೆ. ಆ ಸಂದೇಶ ಅಭಿವೃದ್ಧಿ ಹೊಂದಿದ ಭಾರತ – ವಿಕಿಸಿತ ಭಾರತ.

ಈ ಏಕ್ತಾ ಕಾ ಮಹಾಕುಂಭದಲ್ಲಿ, ಪ್ರತಿಯೊಬ್ಬ ಯಾತ್ರಿಕರು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಯುವಕರಾಗಿರಲಿ ಅಥವಾ ವೃದ್ಧರಾಗಿರಲಿ, ಹಳ್ಳಿಗಳಿಂದ ಅಥವಾ ನಗರಗಳಿಂದ, ಭಾರತದಿಂದ ಅಥವಾ ವಿದೇಶಗಳಿಂದ, ಪೂರ್ವ ಅಥವಾ ಪಶ್ಚಿಮದಿಂದ, ಉತ್ತರ ಅಥವಾ ದಕ್ಷಿಣದಿಂದ, ಜಾತಿ, ಧರ್ಮ ಮತ್ತು ಸಿದ್ಧಾಂತ ಲೆಕ್ಕಿಸದೆ ಒಟ್ಟುಗೂಡಿದರು. ಇದು ಕೋಟ್ಯಂತರ ಜನರಲ್ಲಿ ವಿಶ್ವಾಸ ತುಂಬಿದ ಏಕ ಭಾರತ - ಶ್ರೇಷ್ಠ ಭಾರತ ದೃಷ್ಟಿಕೋನದ ಸಾಕಾರವಾಗಿತ್ತು. ಈಗ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಧ್ಯೇಯಕ್ಕಾಗಿ ನಾವು ಒಂದೇ ಉತ್ಸಾಹದಲ್ಲಿ ಒಟ್ಟಿಗೆ ಸೇರಬೇಕು.

ಚಿಕ್ಕ ಹುಡುಗನಾಗಿದ್ದಾಗ, ಶ್ರೀಕೃಷ್ಣನು ತನ್ನ ತಾಯಿ ಯಶೋಧೆಗೆ ತನ್ನ ಬಾಯಿಯೊಳಗಿನ ಇಡೀ ಬ್ರಹ್ಮಾಂಡದ ಚಿತ್ರವನ್ನು ಬಹಿರಂಗಪಡಿಸಿದ ಘಟನೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದೇ ರೀತಿ, ಈ ಮಹಾಕುಂಭದಲ್ಲಿ, ಭಾರತದ ಜನರು ಮತ್ತು ಇಡೀ ವಿಶ್ವದ ಜನರು ಭಾರತದ ಸಾಮೂಹಿಕ ಶಕ್ತಿಯ ಬೃಹತ್ ಸಾಮರ್ಥ್ಯ ಕಂಡಿದ್ದಾರೆ. ನಾವು ಈಗ ಈ ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮನ್ನು ಅರ್ಪಿಸಿಕೊಳ್ಳಬೇಕು.

ಈ ಹಿಂದೆ, ಭಕ್ತಿ ಚಳವಳಿಯ ಸಂತರು ಭಾರತದಾದ್ಯಂತ ನಮ್ಮ ಸಾಮೂಹಿಕ ಸಂಕಲ್ಪದ ಬಲವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಸ್ವಾಮಿ ವಿವೇಕಾನಂದರಿಂದ ಶ್ರೀ ಅರಬಿಂದೋವರೆಗೆ, ಪ್ರತಿಯೊಬ್ಬ ಮಹಾನ್ ಚಿಂತಕರೂ ನಮ್ಮ ಸಾಮೂಹಿಕ ಸಂಕಲ್ಪದ ಶಕ್ತಿಯನ್ನು ನಮಗೆ ನೆನಪಿಸಿದರು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರು ಸಹ ಇದನ್ನೇ ಅನುಭವಿಸಿದರು. ಸ್ವಾತಂತ್ರ್ಯಾ ನಂತರ, ಈ ಸಾಮೂಹಿಕ ಶಕ್ತಿಯನ್ನು ಸರಿಯಾಗಿ ಗುರುತಿಸಿ ಎಲ್ಲರ ಕಲ್ಯಾಣವನ್ನು ಹೆಚ್ಚಿಸುವಲ್ಲಿ ಬಳಸಿದ್ದರೆ, ಅದು ಹೊಸದಾಗಿ ಸ್ವತಂತ್ರ ರಾಷ್ಟ್ರಕ್ಕೆ ಒಂದು ದೊಡ್ಡ ಶಕ್ತಿಯಾಗುತ್ತಿತ್ತು. ದುರದೃಷ್ಟವಶಾತ್, ಇದನ್ನು ಮೊದಲೇ ಮಾಡಲಾಗಿಲ್ಲ. ಆದರೆ ಈಗ, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಜನರ ಈ ಸಾಮೂಹಿಕ ಶಕ್ತಿ ಹೇಗೆ ಒಟ್ಟಿಗೆ ಬರುತ್ತಿದೆ ಎಂಬುದನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ.

ವೇದಗಳಿಂದ ವಿವೇಕಾನಂದರವರೆಗೆ, ಪ್ರಾಚೀನ ಗ್ರಂಥಗಳಿಂದ ಆಧುನಿಕ ಉಪಗ್ರಹಗಳವರೆಗೆ, ಭಾರತದ ಶ್ರೇಷ್ಠ ಸಂಪ್ರದಾಯಗಳು ಈ ರಾಷ್ಟ್ರವನ್ನು ರೂಪಿಸಿವೆ. ಒಬ್ಬ ನಾಗರಿಕನಾಗಿ, ನಮ್ಮ ಪೂರ್ವಜರು ಮತ್ತು ಸಂತರ ನೆನಪುಗಳಿಂದ ನಾವು ಹೊಸ ಸ್ಫೂರ್ತಿ ಪಡೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಈ ಏಕ್ತಾ ಕಾ ಮಹಾಕುಂಭವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ನಮಗೆ ಸಹಾಯ ಮಾಡಲಿ. ಏಕತೆಯನ್ನು ನಮ್ಮ ಮಾರ್ಗದರ್ಶಿ ತತ್ವವನ್ನಾಗಿ ಮಾಡಿಕೊಳ್ಳೋಣ. ರಾಷ್ಟ್ರ ಸೇವೆಯೇ ದೈವಿಕ ಸೇವೆ ಎಂಬ ತಿಳಿವಳಿಕೆಯೊಂದಿಗೆ ನಾವು ಕೆಲಸ ಮಾಡೋಣ.

ಕಾಶಿಯಲ್ಲಿ ನನ್ನ ಚುನಾವಣಾ ಪ್ರಚಾರ ಸಮಯದಲ್ಲಿ, "ಗಂಗಾ ಮಾತೆ ನನ್ನನ್ನು ಕರೆದಿದ್ದಾಳೆ" ಎಂದು ನಾನು ಹೇಳಿದ್ದೆ. ಇದು ಕೇವಲ ಭಾವನೆಯಲ್ಲ, ನಮ್ಮ ಪವಿತ್ರ ನದಿಗಳ ಸ್ವಚ್ಛತೆಯ ಕಡೆಗೆ ಜವಾಬ್ದಾರಿಯ ಕರೆಯೂ ಆಗಿತ್ತು. ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮದಲ್ಲಿ ನಿಂತಾಗ, ನನ್ನ ಸಂಕಲ್ಪ ಇನ್ನಷ್ಟು ಬಲವಾಯಿತು. ನಮ್ಮ ನದಿಗಳ ಸ್ವಚ್ಛತೆಯು ನಮ್ಮ ಸ್ವಂತ ಜೀವನಕ್ಕೆ ಆಳವಾಗಿ ಸಂಬಂಧಿಸಿದೆ. ನಮ್ಮ ನದಿಗಳು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ಅವುಗಳನ್ನು ಜೀವ ನೀಡುವ ತಾಯಂದಿರಾಗಿ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ಮಹಾಕುಂಭವು ನಮ್ಮ ನದಿಗಳ ಸ್ವಚ್ಛತೆಯ ಕಡೆಗೆ ಕೆಲಸ ಮಾಡುವುದನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡಿದೆ.

ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸುವುದು ಸುಲಭದ ಕೆಲಸವಲ್ಲ ಎಂದು ನನಗೆ ತಿಳಿದಿದೆ. ನಮ್ಮ ಭಕ್ತಿಯಲ್ಲಿ ಯಾವುದೇ ನ್ಯೂನತೆಗಳಿದ್ದರೆ ನಮ್ಮನ್ನು ಕ್ಷಮಿಸುವಂತೆ ನಾನು ಗಂಗಾ ಮಾತೆ, ಯಮುನಾ ಮಾತೆ ಮತ್ತು ಸರಸ್ವತಿ ಮಾತೆಯಲ್ಲಿ ಪ್ರಾರ್ಥಿಸುತ್ತೇನೆ. ಜನತಾ ಜನಾರ್ದನರನ್ನು ನಾನು ದೈವತ್ವದ ಸಾಕಾರವಾಗಿ ನೋಡುತ್ತೇನೆ. ಅವರಿಗೆ ಸೇವೆ ಸಲ್ಲಿಸುವ ನಮ್ಮ ಪ್ರಯತ್ನಗಳಲ್ಲಿ ಯಾವುದೇ ನ್ಯೂನತೆಗಳಿದ್ದರೆ, ನಾನು ಜನರ ಕ್ಷಮೆ ಕೋರುತ್ತೇನೆ.

ಮಹಾಕುಂಭಕ್ಕೆ ಕೋಟ್ಯಂತರ ಜನರು ಭಕ್ತಿಯಿಂದ ಬಂದರು. ಅವರಿಗೆ ಸೇವೆ ಸಲ್ಲಿಸುವುದು ಕೂಡ ಅದೇ ರೀತಿಯ ಭಕ್ತಿಯಿಂದ ನಿರ್ವಹಿಸಲಾದ ಜವಾಬ್ದಾರಿಯಾಗಿತ್ತು. ಉತ್ತರ ಪ್ರದೇಶದ ಸಂಸತ್ ಸದಸ್ಯನಾಗಿ, ಯೋಗಿ ಜಿ ಅವರ ನೇತೃತ್ವದಲ್ಲಿ ಆಡಳಿತ ಮತ್ತು ಜನರು ಒಟ್ಟಾಗಿ ಈ ಏಕ್ತಾ ಕಾ ಮಹಾಕುಂಭವನ್ನು ಯಶಸ್ವಿಗೊಳಿಸಿದರು ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ, ಏಕ್ತಾ ಕಾ ಮಹಾಕುಂಭದಲ್ಲಿ ಆಡಳಿತಗಾರರಾಗದೆ, ಬದಲಾಗಿ, ಎಲ್ಲರೂ ಶ್ರದ್ಧಾಭರಿತ ಸೇವಕರಾಗಿದ್ದರು. ನೈರ್ಮಲ್ಯ ಕಾರ್ಮಿಕರು, ಪೊಲೀಸರು, ದೋಣಿ ಚಾಲಕರು, ಚಾಲಕರು, ಆಹಾರ ಪೂರೈಸುವ ಸ್ವಯಂಸೇವಕರು - ಎಲ್ಲರೂ ದಣಿವರಿಯದೆ ಕೆಲಸ ಮಾಡಿದರು. ಅನೇಕ ಅನನುಕೂಲತೆಗಳನ್ನು ಎದುರಿಸುತ್ತಿದ್ದರೂ ಪ್ರಯಾಗರಾಜ್ ಜನರು ಯಾತ್ರಿಕರನ್ನು ಮುಕ್ತ ಹೃದಯದಿಂದ ಸ್ವಾಗತಿಸಿದ ರೀತಿ ವಿಶೇಷವಾಗಿ ಸ್ಫೂರ್ತಿದಾಯಕವಾಗಿತ್ತು. ಅವರಿಗೆ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

ನಮ್ಮ ದೇಶದ ಉಜ್ವಲ ಭವಿಷ್ಯದ ಬಗ್ಗೆ ನನಗೆ ಯಾವಾಗಲೂ ಅಚಲ ವಿಶ್ವಾಸವಿದೆ. ಈ ಮಹಾಕುಂಭ ವೀಕ್ಷಿಸುವುದು ನನ್ನ ನಂಬಿಕೆಯನ್ನು ಹಲವು ಪಟ್ಟು ಬಲಪಡಿಸಿದೆ.

140 ಕೋಟಿ ಭಾರತೀಯರು ಏಕ್ತಾ ಕಾ ಮಹಾಕುಂಭವನ್ನು ಜಾಗತಿಕ ಸಂದರ್ಭವನ್ನಾಗಿ ಪರಿವರ್ತಿಸಿದ ರೀತಿ ನಿಜವಾಗಿಯೂ ಅದ್ಭುತವಾಗಿತ್ತು. ನಮ್ಮ ಜನರ ಸಮರ್ಪಣೆ, ಭಕ್ತಿ ಮತ್ತು ಪ್ರಯತ್ನಗಳಿಂದ ಪ್ರೇರಿತನಾಗಿ, 12 ಜ್ಯೋತಿರ್ಲಿಂಗಗಳಲ್ಲಿ

ಮೊದಲನೆಯದಾದ ಶ್ರೀ ಸೋಮನಾಥನನ್ನು ಶೀಘ್ರದಲ್ಲೇ ಭೇಟಿ ಮಾಡಿ, ಈ ಸಾಮೂಹಿಕ ರಾಷ್ಟ್ರೀಯ ಪ್ರಯತ್ನಗಳ ಫಲವನ್ನು ಅವರಿಗೆ ಅರ್ಪಿಸುತ್ತೇನೆ, ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ.

ಮಹಾಕುಂಭದ ಭೌತಿಕ ರೂಪವು ಮಹಾಶಿವರಾತ್ರಿಯಂದು ಯಶಸ್ವಿಯಾಗಿ ಪರಾಕಾಷ್ಠೆ ತಲುಪಿರಬಹುದು, ಆದರೆ ಗಂಗೆಯ ಶಾಶ್ವತ ಹರಿವಿನಂತೆಯೇ, ಮಹಾಕುಂಭವು ಜಾಗೃತಗೊಳಿಸಿದ ಆಧ್ಯಾತ್ಮಿಕ ಶಕ್ತಿ, ರಾಷ್ಟ್ರೀಯ ಪ್ರಜ್ಞೆ ಮತ್ತು ಏಕತೆ ಮುಂದಿನ ಪೀಳಿಗೆಗಾಗಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's fertiliser exports rise 52% in three years from FY24 to FY26

Media Coverage

India's fertiliser exports rise 52% in three years from FY24 to FY26
NM on the go

Nm on the go

Always be the first to hear from the PM. Get the App Now!
...
ಭಾರತದ ಏಕತೆ ಮತ್ತು ಪ್ರಗತಿಗೆ ಮೀಸಲಾದ ಜೀವನ
July 06, 2026

ಇಂದು, ಜುಲೈ 6, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ವಿಶೇಷ ದಿನವಾಗಿದೆ. ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಅವರ ಜೀವನವು ಮಾ ಭಾರತಿಯ ಬಗೆಗಿನ ಧೈರ್ಯ ಮತ್ತು ಅಚಲ ಬದ್ಧತೆಗೆ ಎಂದೆಂದಿಗೂ ಮಾದರಿಯಾಗಿದೆ. ಆಧುನಿಕ ಭಾರತದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರಷ್ಟು ಆಳವಾಗಿ ಬುದ್ಧಿವಂತಿಕೆ, ಸಾರ್ವಜನಿಕ ಸೇವೆ ಮತ್ತು ನೈತಿಕ ದೃಢತೆಯ ಸಂಗಮವನ್ನು ಹೊಂದಿದ್ದ ನಾಯಕರು ಬಹಳ ಕಡಿಮೆ.

ಯುವ ಶ್ಯಾಮ ಪ್ರಸಾದ್ ರವರು ತಮಗೆ ಸುಲಭವಾಗಿ, ಸಂರಕ್ಷಿತ ಮತ್ತು ಸುಖಮಯ ಜೀವನವನ್ನು ನೀಡಬಲ್ಲಂತಹ ಪರಿಸರದಲ್ಲಿ ಜನಿಸಿದ್ದರು. ಅವರ ತಂದೆ ಸರ್ ಅಶುತೋಷ್ ಮುಖರ್ಜಿಯವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು ಮತ್ತು ಬುದ್ಧಿಜೀವಿಗಳಲ್ಲಿ ಒಬ್ಬರಾಗಿದ್ದರು. ಆದರೆ, ವಿಧಿಯು ಅವರ ಮುಂದೆ ಸೌಲಭ್ಯಗಳ ಹಾದಿಯನ್ನು ಇರಿಸಿದ್ದರೂ, ಅವರ ಆತ್ಮಸಾಕ್ಷಿಯು ಅವರನ್ನು ತ್ಯಾಗ ಮತ್ತು ರಾಷ್ಟ್ರ ಸೇವೆಯ ಹಾದಿಯತ್ತ ಕೊಂಡೊಯ್ಯಿತು. ವಸಾಹತುಶಾಹಿ, ಕೋಮುವಾದ, ಮಾನವೀಯ ಸವಾಲುಗಳು ಹೀಗೆ ಆ ಕಾಲದ ಯಾವುದೇ ಪ್ರಕ್ಷುಬ್ಧತೆಯ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಅವರಿಗೆ ಸಾಧ್ಯವಿರಲಿಲ್ಲ. ಈ ಹಾದಿಯಲ್ಲಿ ಅವರು ತಮ್ಮ ಶಿಶುವಿನ ಮರಣ ಮತ್ತು ನಂತರ ಪತ್ನಿಯ ಅಗಲಿಕೆಯಂತಹ ಆಳವಾದ ವೈಯಕ್ತಿಕ ದುರಂತಗಳನ್ನು ಅನುಭವಿಸಿದರು. ಆದರೂ, ಈ ದುರಂತಗಳು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದವು ಮತ್ತು ಸೇವೆಯ ಬಗೆಗಿನ ಅವರ ಬದ್ಧತೆಯನ್ನು ಹೆಚ್ಚಿಸಿದವು.

ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಸಾರ್ವಜನಿಕ ಜೀವನವನ್ನು ವ್ಯಾಖ್ಯಾನಿಸುವ ಒಂದು ಆದರ್ಶವಿದ್ದರೆ, ಅದು ಭಾರತದ ಅವಿಭಾಜ್ಯತೆ. ದೇಶ ವಿಭಜನೆಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ದೃಢವಾಗಿ ನಿಂತರು. ಕೆಲವು ವರ್ಷಗಳ ನಂತರ, ಅದೇ ದೃಢ ನಂಬಿಕೆ ಅವರನ್ನು ಜಮ್ಮು ಮತ್ತು ಕಾಶ್ಮೀರದತ್ತ ಸೆಳೆಯಿತು. ಸೆರೆವಾಸ ಅವರನ್ನು ನಿರುತ್ಸಾಹಗೊಳಿಸಲಿಲ್ಲ ಮತ್ತು ಏಕಾಂತತೆ ಅವರನ್ನು ಕುಗ್ಗಿಸಲಿಲ್ಲ. ತಾವು ಯಾರ ಹಿತಕ್ಕಾಗಿ ಹೋರಾಡಿದ್ದರೋ, ಅಂತಹ ಅಸಂಖ್ಯಾತ ಜನರಿಂದ ದೂರವಿದ್ದಾಗಲೇ ಬಂಧನದಲ್ಲಿ ಅವರ ಜೀವನವು ಅಕಾಲಿಕವಾಗಿ ಕೊನೆಗೊಂಡಿತು. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಅಂತಿಮ ತ್ಯಾಗವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಸ್ಮರಣೆಯ ಭಾಗವಾಗುವ ಕೆಲವು ಕ್ಷಣಗಳು ಬರುತ್ತವೆ. ಡಾ. ಮುಖರ್ಜಿಯವರ ಕೊನೆಯ ಪಯಣ ಅಂತಹ ಒಂದು ಕ್ಷಣವಾಗಿದೆ. ಆಚಾರ್ಯ ವಿನೋಬಾ ಭಾವೆಯವರು, "ಡಾ. ಮುಖರ್ಜಿಯವರು ತಮಗೆ ನಂಬಿಕೆಯಿದ್ದ ಉದ್ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿಕೊಂಡರು" ಎಂದು ಹೇಳಿದ್ದರು. ಹಲವು ವರ್ಷಗಳ ನಂತರ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35(ಎ) ವಿಧಿಗಳ ರದ್ದು ಅವರ ಹುತಾತ್ಮತೆಗೆ ನೀಡಿದ ಅತ್ಯಂತ ಸೂಕ್ತ ಗೌರವವಾಗಿದೆ.

ಡಾ. ಮುಖರ್ಜಿಯವರು ಭಾರತಕ್ಕೆ ಮತ್ತು ಭಾರತೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದರು. ಆ ಕಾಲದ ಸಾಂಪ್ರದಾಯಿಕ ಮನಸ್ಥಿತಿಯನ್ನು ವಿರೋಧಿಸುವ ಸಂಸ್ಥೆಗಳನ್ನು ನಿರ್ಮಿಸುವ ಮತ್ತು ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅವರು ಇದನ್ನು ಸಾಧಿಸಿದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಅತಿಕಿರಿಯ ಉಪಕುಲಪತಿಯಾದರು. ತಮ್ಮ ವಿಶಿಷ್ಟ ಶೈಲಿಯಲ್ಲಿ, ದೇಶಭಕ್ತಿಯುತ ಮತ್ತು ಭವಿಷ್ಯದ ದೃಷ್ಟಿಯುಳ್ಳ ಸಕಾರಾತ್ಮಕ ಬದಲಾವಣೆಗಳನ್ನು ಅವರು ತಂದರು. ಶಿಕ್ಷಣ ತಜ್ಞರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು, "ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗುಮಾಸ್ತರು ಮತ್ತು ಕಡಿಮೆ ಸಂಬಳ ಪಡೆಯುವ ಸಿಬ್ಬಂದಿಯನ್ನು ಸಿದ್ಧಪಡಿಸುವ ಕಾರ್ಖಾನೆಗಳೆಂದು ನೋಡುವುದು ತಪ್ಪು. ನಾವು ಪುರಸಭೆಗಳು, ಪ್ರಾಂತೀಯ ಮತ್ತು ಕೇಂದ್ರ ಶಾಸನಸಭೆಗಳಂತಹ ನಮ್ಮ ಸ್ವಯಂ-ಆಡಳಿತ ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಬಲ್ಲ ಹಾಗೂ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಂತಹ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಿರ್ವಹಿಸಬಲ್ಲ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು" ಎಂದು ಅವರು ಅದ್ಭುತವಾಗಿ ಹೇಳಿದ್ದರು.

ಅವರ ನೇತೃತ್ವದಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಗ್ರಂಥಾಲಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಕಲಾಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಮತ್ತು ಕೃಷಿಯಲ್ಲಿ ಕೋರ್ಸ್‌ಗಳನ್ನು ಸ್ಥಾಪಿಸುವಂತಹ ವಿಶಿಷ್ಟ ಪ್ರಯತ್ನಗಳನ್ನು ಕೈಗೊಂಡಿತು. ಕ್ರೀಡೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿ ಕಲ್ಯಾಣದಂತಹ ಕ್ಷೇತ್ರಗಳತ್ತ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಲು, ಅವರು ಜನವರಿ 24 ಅನ್ನು ವಿಶ್ವವಿದ್ಯಾನಿಲಯದ ಸ್ಥಾಪನಾ ದಿನವನ್ನಾಗಿ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ವಿಶ್ವವಿದ್ಯಾನಿಲಯಕ್ಕಾಗಿ ಗೀತೆ ರಚಿಸಲು ಅವರು ಸ್ವತಃ ಗುರುದೇವ ಟ್ಯಾಗೋರ್ ಅವರನ್ನೇ ಕೋರಿದ್ದರು.

ಈ ಮನೋಭಾವದ ಮತ್ತೊಂದು ಉದಾಹರಣೆಯನ್ನು ಅವರ ಜೀವನದ ನಂತರದ ಭಾಗದಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಲು ನಿರ್ಧರಿಸಿದಾಗ ಕಾಣಬಹುದು. ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಹೊಂದಿರುವಂತೆಯೇ ಭಾರತದ ಪ್ರಗತಿಗಾಗಿ ಧ್ವನಿ ಎತ್ತಲು ಪರ್ಯಾಯ ವೇದಿಕೆಯ ಅಗತ್ಯವಿದೆ ಎಂದು ಅವರು ಭಾವಿಸಿದರು. ಪಕ್ಷದ ಚಿಹ್ನೆಯು ಮಣ್ಣಿನ ದೀಪವಾಗಿದ್ದುದು ಬಹಳ ಅರ್ಥಪೂರ್ಣವಾಗಿತ್ತು. ಒಂದು ದೀಪವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ತನ್ನ ಸುತ್ತಲಿನ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಜನಸಂಘವು ಸಕ್ರಿಯವಾಗಿದ್ದ ವರ್ಷಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಡಿದ್ದು ಕೂಡ ಇದನ್ನೇ.

ಭಾರತದ ಕೈಗಾರಿಕಾ ಮತ್ತು ಪೂರೈಕೆ ಸಚಿವರಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಧಿಕಾರಾವಧಿಯು, ಅಭಿವೃದ್ಧಿಯ ಕುರಿತಾದ ಅವರ ಸಮಗ್ರ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದಿದ್ದ ಒಬ್ಬ ರಾಜನೀತಿಜ್ಞರನ್ನು ಅನಾವರಣಗೊಳಿಸುತ್ತದೆ. ಅವರು ಕೈಗಾರಿಕೆಯನ್ನು ನವತಂತ್ರದ ಭಾರತಕ್ಕೆ ಘನತೆ, ಅವಕಾಶ ಮತ್ತು ಆತ್ಮವಿಶ್ವಾಸವನ್ನು ಮರಳಿ ತರುವ ಸಾಧನವಾಗಿ ನೋಡಿದರು. ಅವರು ಸಂಪತ್ತಿನ ಸೃಷ್ಟಿ ಮತ್ತು ಮೌಲ್ಯವರ್ಧನೆಯನ್ನು ಗೌರವಿಸಿದರು. ದಾಮೋದರ ವ್ಯಾಲಿ ಕಾರ್ಪೊರೇಷನ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮತ್ತು ಬಲಿಷ್ಠ ಕೈಗಾರಿಕಾ ನೀತಿಯಂತಹ ಪ್ರವರ್ತಕ ಉಪಕ್ರಮಗಳ ಮೂಲಕ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯವನ್ನು ಹಾಕುವಾಗ, ಅವರು ಭಾರತದ ಸಾಂಪ್ರದಾಯಿಕ ಶಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಏಕಕಾಲದಲ್ಲಿ ನೋಡಿಕೊಂಡರು. ಕೈಮಗ್ಗ, ಕುಟೀರ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಜವಳಿ ಕಾರ್ಮಿಕರು ಅವರಲ್ಲಿ ಸಮಾನವಾದ ಬದ್ಧತೆಯುಳ್ಳ ಚಾಂಪಿಯನ್ ಅನ್ನು ಕಂಡುಕೊಂಡರು.

ಇಲ್ಲಿ, ನಾನು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸ್ವಾವಲಂಬನೆಯ ಸ್ಪಷ್ಟ ದೃಷ್ಟಿಯೊಂದಿಗೆ ಡಾ. ಮುಖರ್ಜಿಯವರು ಸ್ಥಾಪಿಸಲು ಶ್ರಮಿಸಿದ ಸಿಂಧ್ರಿ ಕಾರ್ಖಾನೆಯನ್ನು, ಹಲವು ದಶಕಗಳ ಕಾಲ ದೇಶವನ್ನು ಆಳಿದವರು ನಿರ್ಲಕ್ಷಿಸಿದ್ದರು. ನಮ್ಮ ಸರ್ಕಾರಕ್ಕೆ ಅದರ ಪುನರುಜ್ಜೀವನಕ್ಕೆ ಕೊಡುಗೆ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿದೆ.

ಭಾರತದ ನಾಗರಿಕತೆಯ ಪರಂಪರೆಯು ದೀರ್ಘಕಾಲದಿಂದಲೂ ಸಂವಾದ ಮತ್ತು ಚರ್ಚೆಗಳನ್ನು ಸಂಭ್ರಮಿಸಿದೆ. ಡಾ. ಮುಖರ್ಜಿಯವರು ಈ ಪ್ರಜಾಸಾಮಾಜಿಕ ಮನೋಭಾವವನ್ನು ಸಾಕಾರಗೊಳಿಸಿದ್ದರು. ದೇಶ ನಿರ್ಮಾಣದ ಕಾರ್ಯವು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿ, ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ, ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು ಮತ್ತು ರಾಷ್ಟ್ರಕ್ಕೆ ಅಗತ್ಯವೆಂದು ಅವರು ನಂಬಿದ್ದ ರಾಜಕೀಯ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.

75 ವರ್ಷಗಳ ಹಿಂದೆ, ಪಂಡಿತ್ ನೆಹರು ಅವರು ಮೊದಲ ತಿದ್ದುಪಡಿಯನ್ನು ತಂದರು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಡಾ. ಮುಖರ್ಜಿಯವರು ಇದನ್ನು ತೀವ್ರವಾಗಿ ಟೀಕಿಸಿದವರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಏನು ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು. ಮತ್ತು ಅವರು ಹೇಳಿದ್ದು ನಿಜವಾಯಿತು. 75 ವರ್ಷಗಳ ಹಿಂದೆ ಮೊದಲ ತಿದ್ದುಪಡಿಯನ್ನು ತಂದವರು, 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 50 ವರ್ಷಗಳ ಹಿಂದೆ 42ನೇ ತಿದ್ದುಪಡಿ ಕಾಯಿದೆಯನ್ನು ತಂದರು, ಇದು ಮತ್ತೊಮ್ಮೆ ಉದಾರವಾದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲದ ಮೇಲೆ ದಾಳಿ ಮಾಡಿತು.

ಡಾ. ಮುಖರ್ಜಿಯವರು ತಮ್ಮ ಮಾನವೀಯ ಪ್ರಯತ್ನಗಳಿಗಾಗಿಯೂ ಜನಪ್ರಿಯರಾಗಿದ್ದರು. 1943 ರಲ್ಲಿ ಬಂಗಾಳದಲ್ಲಿ ಅತಿ ಭೀಕರ ಬರಗಾಲ ಉಂಟಾದಾಗ, ಡಾ. ಮುಖರ್ಜಿಯವರು ಸಂತ್ರಸ್ತರಿಗೆ ಸೇವೆ ಸಲ್ಲಿಸುವುದರಲ್ಲಿ ಮಗ್ನರಾದರು. ಜನರಿಗೆ ಆಹಾರ ಒದಗಿಸಲು ಹಲವಾರು ಕ್ಯಾಂಟೀನ್‌ಗಳು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯುವುದನ್ನು ಅವರು ಖಚಿತಪಡಿಸಿದರು. ಒಂದು ಕಡೆ, ಅವರು ತಮ್ಮ ಜನರ ಸಂಕಷ್ಟದಿಂದ ತೀವ್ರವಾಗಿ ನೊಂದಿದ್ದರೆ, ಇನ್ನೊಂದೆಡೆ ವಸಾಹತುಶಾಹಿ ಆಡಳಿತಗಾರರ ಸಂವೇದನಾಹೀನತೆಯು ಅವರನ್ನು ಅಸಹ್ಯಪಡುವಂತೆ ಮಾಡಿತ್ತು. ಅವರು 'ಪಂಚಶೇರ್ ಮನ್ವಾಂತರ್' (ಐವತ್ತರ ಕ್ಷಾಮ) ಎಂಬ ಪುಸ್ತಕವನ್ನೂ ಬರೆದರು, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. 1942 ರಲ್ಲಿ ಮಿಡ್ನಾಪುರದಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸಿದಾಗ, ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಅವರು ಮಾಡಿದ ಪ್ರಯತ್ನಗಳು ವ್ಯಾಪಕವಾಗಿ ಶ್ಲಾಘನೆಗೆ ಒಳಗಾದವು.

ಕೋಲ್ಕತ್ತಾದ ಕಾಲೇಜೊಂದರಲ್ಲಿ ಮಾತನಾಡುತ್ತಾ, ಡಾ. ಮುಖರ್ಜಿಯವರು "ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ; ಅದನ್ನು ಅರ್ಧಕ್ಕೆ ಬಿಡಬೇಡಿ ಅಥವಾ ಅಪೂರ್ಣವಾಗಿ ಬಿಡಬೇಡಿ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವವರೆಗೂ ಎಂದಿಗೂ ತೃಪ್ತರಾಗಬೇಡಿ." ಎಂದು ಅವರು ಯುವಕರಿಗೆ ಕರೆ ನೀಡಿದರು. ಭಾರತವು 'ವಿಕಸಿತ ಭಾರತ'ದ ಗುರಿಯತ್ತ ಮುನ್ನಡೆಯುತ್ತಿರುವಾಗ, ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ಅವರು ಆಳವಾಗಿ ನಂಬಿದ್ದ ಬಲಿಷ್ಠ, ಸಂಘಟಿತ, ಆತ್ಮವಿಶ್ವಾಸವುಳ್ಳ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ನಿರ್ಮಿಸಲು ಪ್ರತಿದಿನ ಶ್ರಮಿಸುವುದು. ಮತ್ತು ಇಂದಿನ ಯುವಕರನ್ನು ನೋಡಿದಾಗ, ಅವರು ಸಂದರ್ಭಕ್ಕೆ ತಕ್ಕಂತೆ ಮುಂದೆ ಬಂದು, ನಿಖರವಾಗಿ ಅದನ್ನೇ ಮಾಡುತ್ತಾರೆ ಎಂಬ ದೃಢವಾದ ನಂಬಿಕೆ ನನಗಿದೆ.

- ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ