ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ರಫ್ತು ವೇಗವಾಗಿ ಹೆಚ್ಚುತ್ತಿದೆ ಮತ್ತು ಭಾರತದ ವೇಗಕ್ಕೆ ಕಡಿವಾಣ ಇಲ್ಲ ಎಂದು ಜಗತ್ತು ಹೇಳುತ್ತಿದೆ ಎಂದರು. ವಿಶ್ವ ರೇಟಿಂಗ್ ಏಜೆನ್ಸಿಗಳು ಭಾರತವನ್ನು ಶ್ಲಾಘಿಸುತ್ತಿವೆ ಮತ್ತು ಕರೋನಾ ನಂತರದ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಭಾರತೀಯರ ಸಾಮರ್ಥ್ಯವನ್ನು ಗುರುತಿಸಲಾಗುತ್ತಿದೆ ಎಂದು ಅವರು ಹೇಳಿದರು. ಜಾಗತಿಕ ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡ ಸಮಯದಲ್ಲಿ, ಮಾನವ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ಮಾತ್ರ ಪರಿಹಾರಗಳನ್ನು ಕಂಡುಹಿಡಿಯಬಹುದು ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ ಎಂದೂ ಅವರು ಹೇಳಿದರು. ಇಂದು ಭಾರತವು ಜಾಗತಿಕ ದಕ್ಷಿಣದ ಧ್ವನಿಯಾಗಿದೆ ಮತ್ತು ಭಾರತೀಯ ಆರ್ಥಿಕತೆಯು ಈಗ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿದೆ, ಮತ್ತು ಅದಕ್ಕೆ ಸ್ಥಿರತೆಯನ್ನು ತರುತ್ತಿದೆ ಎಂದು ಪ್ರಧಾನ ಮಂತ್ರಿ ನುಡಿದರು.
ನವೋದ್ಯಮಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತದ ಯುವಜನರು ದೇಶವನ್ನು ವಿಶ್ವದ ಅಗ್ರ ಮೂರು ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿಸಿದ್ದಾರೆ ಎಂದರು. ವಿಶ್ವದ ಯುವಜನರು ಈ ಬೆಳವಣಿಗೆಯಿಂದ ಆಶ್ಚರ್ಯಚಕಿತರಾಗಿದ್ದಾರೆ, ಭಾರತದ ಯುವಜನರ ಸಾಮರ್ಥ್ಯವನ್ನು ನೋಡಿ ಅಚ್ಚರಿಗೊಂಡಿದ್ದಾರೆ ಎಂದು ಅವರು ಹೇಳಿದರು. ಇಂದಿನ ಜಗತ್ತು ತಂತ್ರಜ್ಞಾನ ಚಾಲಿತವಾಗಿದೆ ಮತ್ತು ತಂತ್ರಜ್ಞಾನದಲ್ಲಿ ಭಾರತ ಹೊಂದಿರುವ ಪ್ರತಿಭೆಯನ್ನು ಗಮನಿಸಿದರೆ, ನಾವು ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ. ಅತ್ಯಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಿಶ್ವ ನಾಯಕರು ಡಿಜಿಟಲ್ ಇಂಡಿಯಾದ ಯಶಸ್ಸನ್ನು ಗುರುತಿಸಿದ್ದಾರೆ ಮತ್ತು ಈ ಉಪಕ್ರಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಿದ್ದಾರೆ ಎಂದೂ ಪ್ರಧಾನಿ ಹೇಳಿದರು