ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂದು ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು. ಪ್ರಧಾನಮಂತ್ರಿಯವರು ಕೊಯಮತ್ತೂರಿನ ಪವಿತ್ರ ನೆಲದಲ್ಲಿ ಮರುಧಮಲೈ ಮುರುಗನ್ ದೇವರಿಗೆ ನಮಸ್ಕಾರ ಸಲ್ಲಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಕೊಯಮತ್ತೂರು ಸಂಸ್ಕೃತಿ, ಸಹಾನುಭೂತಿ ಮತ್ತು ಸೃಜನಶೀಲತೆಯ ಭೂಮಿ ಎಂದು ಅವರು ಬಣ್ಣಿಸಿದರು ಮತ್ತು ಅದು ದಕ್ಷಿಣ ಭಾರತದ ಉದ್ಯಮಶೀಲ ಶಕ್ತಿಯ ಕೇಂದ್ರವಾಗಿದೆ ಎಂದು ಹೇಳಿದರು. ನಗರದ ಜವಳಿ ವಲಯವು ರಾಷ್ಟ್ರೀಯ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೊಯಮತ್ತೂರಿನ ಮಾಜಿ ಸಂಸದರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಈಗ ಉಪರಾಷ್ಟ್ರಪತಿಯಾಗಿ ದೇಶಕ್ಕೆ ಮಾರ್ಗದರ್ಶನ ನೀಡುತ್ತಿರುವುದರಿಂದ ಕೊಯಮತ್ತೂರು ಈಗ ಮತ್ತಷ್ಟು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ನೈಸರ್ಗಿಕ ಕೃಷಿ ತಮ್ಮ ಹೃದಯಕ್ಕೆ ತುಂಬಾ ಹತ್ತಿರವಾದದ್ದು ಎಂದು ಶ್ರೀ ಮೋದಿ ಹೇಳಿದರು ಮತ್ತು ದಕ್ಷಿಣ ಭಾರತದ ನೈಸರ್ಗಿಕ ಕೃಷಿ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ತಮಿಳುನಾಡಿನ ಎಲ್ಲಾ ರೈತ ಸಹೋದರ ಸಹೋದರಿಯರಿಗೆ ಅವರು ಶುಭಾಶಯಗಳನ್ನು ಕೋರಿದರು. ಕಾರ್ಯಕ್ರಮದಲ್ಲಿ ರೈತರು, ಕೃಷಿ ವಿಜ್ಞಾನಿಗಳು, ಉದ್ಯಮ ಪಾಲುದಾರರು, ನವೋದ್ಯಮಗಳು ಮತ್ತು ನಾವೀನ್ಯಕಾರರು ನೆರೆದಿದ್ದನ್ನು ಅವರು ಶ್ಲಾಘಿಸಿದರು ಮತ್ತು ಭಾಗವಹಿಸಿದ ಎಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಮುಂಬರುವ ವರ್ಷಗಳಲ್ಲಿ ಭಾರತದ ಕೃಷಿಯಲ್ಲಿ ಪ್ರಮುಖ ಬದಲಾವಣೆಗಳನ್ನು ತಾವು ನಿರೀಕ್ಷಿಸುವುದಾಗಿ ಪ್ರಧಾನಮಂತ್ರಿ ಹೇಳಿದರು. "ಭಾರತವು ನೈಸರ್ಗಿಕ ಕೃಷಿಗೆ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ" ಎಂದು ಶ್ರೀ ಮೋದಿ ಹೇಳಿದರು. ದೇಶದ ಜೀವವೈವಿಧ್ಯವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಯುವಜನರು ಈಗ ಕೃಷಿಯನ್ನು ಆಧುನಿಕ, ಸಮಗ್ರ ಅವಕಾಶವಾಗಿ ನೋಡುತ್ತಿದ್ದಾರೆ. ಈ ಬದಲಾವಣೆಯು ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಕಳೆದ ಹನ್ನೊಂದು ವರ್ಷಗಳಲ್ಲಿ ಕೃಷಿ ವಲಯದಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಭಾರತದ ಕೃಷಿ ರಫ್ತು ಬಹುತೇಕ ದುಪ್ಪಟ್ಟಾಗಿದೆ ಮತ್ತು ಕೃಷಿಯನ್ನು ಆಧುನೀಕರಿಸುವಲ್ಲಿ ರೈತರಿಗೆ ಸಹಾಯ ಮಾಡಲು ಸರ್ಕಾರ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ತೆರೆದಿದೆ ಎಂದು ಹೇಳಿದರು. ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯ ಮೂಲಕವೇ ಈ ವರ್ಷ ರೈತರು ₹10 ಲಕ್ಷ ಕೋಟಿಗೂ ಹೆಚ್ಚು ನೆರವನ್ನು ಪಡೆದಿದ್ದಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಏಳು ವರ್ಷಗಳ ಹಿಂದೆ ಜಾನುವಾರು ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಕೆಸಿಸಿ ಪ್ರಯೋಜನಗಳನ್ನು ವಿಸ್ತರಿಸಿದಾಗಿನಿಂದ, ಈ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಸಹ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು. ಜೈವಿಕ ಗೊಬ್ಬರಗಳ ಮೇಲಿನ ಜಿ ಎಸ್ ಟಿ ಕಡಿತವು ರೈತರಿಗೆ ಮತ್ತಷ್ಟು ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು.
ಕೆಲವೇ ಕ್ಷಣಗಳ ಹಿಂದೆ, ಇದೇ ವೇದಿಕೆಯಿಂದ, ಪ್ರಧಾನಮಂತ್ರಿ-ಕಿಸಾನ್ ಸಮ್ಮಾನ್ ನಿಧಿಯ 21ನೇ ಕಂತು ಬಿಡುಗಡೆಯಾಗಿದ್ದು, ದೇಶಾದ್ಯಂತದ ರೈತರಿಗೆ ₹18,000 ಕೋಟಿ ವರ್ಗಾಯಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ತಮಿಳುನಾಡಿನ ಲಕ್ಷಾಂತರ ರೈತರ ಖಾತೆಗಳಿಗೂ ಹಣ ತಲುಪಿದೆ ಎಂದು ಅವರು ಮಾಹಿತಿ ನೀಡಿದರು. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ಸಣ್ಣ ರೈತರ ಬ್ಯಾಂಕ್ ಖಾತೆಗಳಿಗೆ ₹4 ಲಕ್ಷ ಕೋಟಿ ನೇರವಾಗಿ ವರ್ಗಾವಣೆ ಮಾಡಲಾಗಿದ್ದು, ಅವರು ವಿವಿಧ ಕೃಷಿ ಅಗತ್ಯಗಳನ್ನು ಪೂರೈಸಲು ಅನುವು ಮಾಡಿಕೊಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಉಪಕ್ರಮದಿಂದ ಪ್ರಯೋಜನ ಪಡೆದ ಕೋಟ್ಯಂತರ ರೈತರಿಗೆ ಅವರು ಶುಭ ಹಾರೈಸಿದರು.

ನೈಸರ್ಗಿಕ ಬೇಸಾಯದ ವಿಸ್ತರಣೆಯು 21ನೇ ಶತಮಾನದ ಕೃಷಿಯ ಅಗತ್ಯವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯು ಜಮೀನುಗಳು ಮತ್ತು ವಿವಿಧ ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ರಾಸಾಯನಿಕಗಳ ಬಳಕೆಯಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಅತಿಯಾದ ಬಳಕೆಯು ಮಣ್ಣಿನ ಫಲವತ್ತತೆಯನ್ನು ಕಡಿಮೆ ಮಾಡುತ್ತಿದೆ, ಮಣ್ಣಿನ ತೇವಾಂಶದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ವರ್ಷದಿಂದ ವರ್ಷಕ್ಕೆ ಕೃಷಿ ವೆಚ್ಚವನ್ನು ಹೆಚ್ಚಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಬೆಳೆ ವೈವಿಧ್ಯೀಕರಣ ಮತ್ತು ನೈಸರ್ಗಿಕ ಕೃಷಿಯಲ್ಲಿ ಇದಕ್ಕೆ ಪರಿಹಾರವಿದೆ ಎಂದು ಅವರು ಒತ್ತಿ ಹೇಳಿದರು.
ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಬೆಳೆಗಳ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು, ದೇಶವು ನೈಸರ್ಗಿಕ ಕೃಷಿಯ ಹಾದಿಯನ್ನು ಹಿಡಿಯಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದು ಒಂದು ದೃಷ್ಟಿಕೋನ ಮತ್ತು ಅವಶ್ಯಕತೆ ಎರಡೂ ಆಗಿದೆ ಎಂದು ಅವರು ಹೇಳಿದರು. ಆಗ ಮಾತ್ರ ಭವಿಷ್ಯದ ಪೀಳಿಗೆಗೆ ನಮ್ಮ ಜೀವವೈವಿಧ್ಯತೆಯನ್ನು ಸಂರಕ್ಷಿಸಬಹುದು. ನೈಸರ್ಗಿಕ ಕೃಷಿಯು ಹವಾಮಾನ ಬದಲಾವಣೆ ಮತ್ತು ಹವಾಮಾನ ಏರಿಳಿತಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುತ್ತದೆ, ನಮ್ಮ ಮಣ್ಣನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಹಾನಿಕಾರಕ ರಾಸಾಯನಿಕಗಳಿಂದ ಜನರನ್ನು ರಕ್ಷಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಮಹತ್ವದ ಧ್ಯೇಯವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಇಂದಿನ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ಭಾರತ ಸರ್ಕಾರವು ರೈತರನ್ನು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಸಕ್ರಿಯವಾಗಿ ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್ ಅನ್ನು ಪ್ರಾರಂಭಿಸಿತು, ಇದು ಈಗಾಗಲೇ ಲಕ್ಷಾಂತರ ರೈತರನ್ನು ತೊಡಗಿಸಿಕೊಂಡಿದೆ ಎಂದು ವಿವರಿಸಿದರು. ಈ ಉಪಕ್ರಮದ ಸಕಾರಾತ್ಮಕ ಪರಿಣಾಮವು ದಕ್ಷಿಣ ಭಾರತದಾದ್ಯಂತ ವಿಶೇಷವಾಗಿ ಗೋಚರಿಸುತ್ತಿದೆ. ತಮಿಳುನಾಡು ರಾಜ್ಯವೊಂದರಲ್ಲೇ ಸುಮಾರು 35,000 ಹೆಕ್ಟೇರ್ ಭೂಮಿಯಲ್ಲಿ ಈಗ ಸಾವಯವ ಮತ್ತು ನೈಸರ್ಗಿಕ ಕೃಷಿ ನಡೆಯುತ್ತಿದೆ ಎಂದು ಅವರು ಹೇಳಿದರು.

"ನೈಸರ್ಗಿಕ ಕೃಷಿಯು ಭಾರತದ ದೇಶೀಯ ಪರಿಕಲ್ಪನೆಯಾಗಿದೆ - ಇದು ಬೇರೆಡೆಯಿಂದ ಆಮದು ಮಾಡಿಕೊಂಡಿರುವುದಲ್ಲ – ನಮ್ಮ ಪರಂಪರೆಯಿಂದ ಬಂದಿದೆ ಮತ್ತು ಪರಿಸರ ಸ್ನೇಹಿಯಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ದಕ್ಷಿಣ ಭಾರತದ ರೈತರು ಪಂಚಗವ್ಯ, ಜೀವಾಮೃತ, ಬೀಜಾಮೃತ ಮತ್ತು ಹಸಿಗೊಬ್ಬರದಂತಹ ಸಾಂಪ್ರದಾಯಿಕ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ಈ ಪದ್ಧತಿಗಳು ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ, ಬೆಳೆಗಳನ್ನು ರಾಸಾಯನಿಕ ಮುಕ್ತವಾಗಿಡುತ್ತವೆ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತವೆ ಎಂದು ಅವರು ಹೇಳಿದರು.
ಶ್ರೀ ಅನ್ನ (ಸಿರಿಧಾನ್ಯ) ಕೃಷಿಯನ್ನು ನೈಸರ್ಗಿಕ ಕೃಷಿಯೊಂದಿಗೆ ಸಂಯೋಜಿಸುವುದು ಭೂಮಿ ತಾಯಿಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ತಮಿಳುನಾಡಿನಲ್ಲಿ ಮುರುಗನ್ ದೇವರಿಗೆ ಜೇನುತುಪ್ಪ ಮತ್ತು ಶ್ರೀ ಅನ್ನದಿಂದ ತಯಾರಿಸಿದ ತೇನಮ್ ತಿನೈ ಮಾವುಮ್ ಎಂಬ ಖಾದ್ಯವನ್ನು ಅರ್ಪಿಸಲಾಗುತ್ತದೆ. ತಮಿಳುನಾಡಿನಲ್ಲಿ ಕಂಬು ಮತ್ತು ಸಾಮೆ, ಕೇರಳ ಮತ್ತು ಕರ್ನಾಟಕದಲ್ಲಿ ರಾಗಿ, ತೆಲುಗು ಮಾತನಾಡುವ ರಾಜ್ಯಗಳಲ್ಲಿ ಸಜ್ಜೆ ಮತ್ತು ಜೊನ್ನಾ ಮುಂತಾದ ಸಿರಿಧಾನ್ಯಗಳು ತಲೆಮಾರುಗಳಿಂದ ಸಾಂಪ್ರದಾಯಿಕ ಆಹಾರದ ಭಾಗವಾಗಿವೆ ಎಂದು ಅವರು ಹೇಳಿದರು.
ಈ ಸೂಪರ್ಫುಡ್ ಅನ್ನು ಜಾಗತಿಕ ಮಾರುಕಟ್ಟೆಗಳಿಗೆ ತಲುಪಿಸಲು ಸರ್ಕಾರ ಬದ್ಧವಾಗಿದೆ ಮತ್ತು ನೈಸರ್ಗಿಕ ಮತ್ತು ರಾಸಾಯನಿಕ ಮುಕ್ತ ಕೃಷಿಯು ಅದರ ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂತಹ ಪ್ರಯತ್ನಗಳನ್ನು ಶೃಂಗಸಭೆಯಲ್ಲಿ ಚರ್ಚಿಸಬೇಕು ಎಂದು ಅವರು ಹೇಳಿದರು.
ಏಕಬೆಳೆ ಪದ್ಧತಿಯ ಬದಲು ಬಹುಬೆಳೆ ಪದ್ಧತಿಯನ್ನು ಉತ್ತೇಜಿಸುವ ತಮ್ಮ ನಿರಂತರ ಮನವಿಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ, ದಕ್ಷಿಣ ಭಾರತದ ಹಲವು ಪ್ರದೇಶಗಳು ಈ ನಿಟ್ಟಿನಲ್ಲಿ ಸ್ಫೂರ್ತಿಯ ಮೂಲಗಳಾಗಿವೆ ಎಂದು ಹೇಳಿದರು. ಕೇರಳ ಮತ್ತು ಕರ್ನಾಟಕದ ಗುಡ್ಡಗಾಡು ಪ್ರದೇಶಗಳಲ್ಲಿ ಬಹುಹಂತದ ಕೃಷಿಯ ಉದಾಹರಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಅವರು ಹೇಳಿದರು. ಒಂದೇ ಹೊಲದಲ್ಲಿ ತೆಂಗು, ಅಡಿಕೆ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತದೆ, ಅವುಗಳ ಕೆಳಗೆ ಮಸಾಲೆ ಮತ್ತು ಕರಿಮೆಣಸನ್ನು ಬೆಳೆಯಲಾಗುತ್ತದೆ ಎಂದು ಶ್ರೀ ಮೋದಿ ಹೇಳಿದರು. ಸಣ್ಣ ಜಮೀನುಗಳಲ್ಲಿ ಇಂತಹ ಸಮಗ್ರ ಕೃಷಿಯು ನೈಸರ್ಗಿಕ ಕೃಷಿಯ ಮೂಲ ತತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಮಾದರಿಯ ಕೃಷಿಯನ್ನು ಭಾರತದಾದ್ಯಂತ ಉತ್ತೇಜಿಸಬೇಕು ಎಂದು ಪ್ರಧಾನಿ ಹೇಳಿದರು. ದೇಶದ ವಿವಿಧ ಪ್ರದೇಶಗಳಲ್ಲಿ ಈ ಪದ್ಧತಿಗಳನ್ನು ಹೇಗೆ ಕಾರ್ಯಗತಗೊಳಿಸಬಹುದು ಎಂಬುದನ್ನು ಪರಿಗಣಿಸುವಂತೆ ಅವರು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ದಕ್ಷಿಣ ಭಾರತವು ಕೃಷಿಯ ಒಂದು ಜ್ವಲಂತ ವಿಶ್ವವಿದ್ಯಾಲಯವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರದೇಶವು ವಿಶ್ವದ ಅತ್ಯಂತ ಹಳೆಯ ಕಾರ್ಯನಿರತ ಅಣೆಕಟ್ಟುಗಳಿಗೆ ನೆಲೆಯಾಗಿದೆ ಮತ್ತು ಕಾಳಿಂಗರಾಯನ್ ಕಾಲುವೆಯನ್ನು 13ನೇ ಶತಮಾನದಲ್ಲಿ ಇಲ್ಲಿ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರದೇಶದ ದೇವಾಲಯದ ಕೊಳಗಳು ವಿಕೇಂದ್ರೀಕೃತ ಜಲ ಸಂರಕ್ಷಣಾ ವ್ಯವಸ್ಥೆಗಳ ಮಾದರಿಗಳಾಗಿವೆ ಎಂದು ಅವರು ಎತ್ತಿ ತೋರಿಸಿದರು. ಸಾವಿರಾರು ವರ್ಷಗಳ ಹಿಂದೆಯೇ ಕೃಷಿಗಾಗಿ ನದಿ ನೀರನ್ನು ನಿಯಂತ್ರಿಸುವ ಮೂಲಕ ಈ ಭೂಮಿ ವೈಜ್ಞಾನಿಕ ಜಲ ಎಂಜಿನಿಯರಿಂಗ್ ಗೆ ನಾಂದಿ ಹಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶ ಮತ್ತು ಪ್ರಪಂಚಕ್ಕೆ ನೈಸರ್ಗಿಕ ಕೃಷಿಯಲ್ಲಿ ನಾಯಕತ್ವವು ಈ ಪ್ರದೇಶದಿಂದಲೇ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಭವಿಷ್ಯದ ಕೃಷಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಾಮೂಹಿಕ ಪ್ರಯತ್ನಗಳು ಅಗತ್ಯವೆಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ರೈತರು "ಒಂದು ಎಕರೆ, ಒಂದು ಋತು" ನೈಸರ್ಗಿಕ ಕೃಷಿಯನ್ನು ಕೈಗೆತ್ತಿಕೊಂಡು ಅದರ ಫಲಿತಾಂಶಗಳ ಆಧಾರದ ಮೇಲೆ ಮುಂದುವರಿಯಬೇಕೆಂದು ಒತ್ತಾಯಿಸಿದರು. ನೈಸರ್ಗಿಕ ಕೃಷಿಯನ್ನು ಕೃಷಿ ಪಠ್ಯಕ್ರಮದ ಅವಿಭಾಜ್ಯ ಅಂಗವನ್ನಾಗಿ ಮಾಡುವಂತೆ ಅವರು ವಿಜ್ಞಾನಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಮನವಿ ಮಾಡಿದರು ಮತ್ತು ರೈತರ ಜಮೀನುಗಳನ್ನು ಜೀವಂತ ಪ್ರಯೋಗಾಲಯಗಳಾಗಿ ಬಳಸುವಂತೆ ಪ್ರೋತ್ಸಾಹಿಸಿದರು. "ನೈಸರ್ಗಿಕ ಕೃಷಿಯನ್ನು ಸಂಪೂರ್ಣವಾಗಿ ವಿಜ್ಞಾನ ಬೆಂಬಲಿತ ಆಂದೋಲನವನ್ನಾಗಿ ಮಾಡುವುದು ನಮ್ಮ ಗುರಿಯಾಗಿರಬೇಕು" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಈ ಅಭಿಯಾನದಲ್ಲಿ ರಾಜ್ಯ ಸರ್ಕಾರಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಎಫ್ ಪಿ ಒ) ಪ್ರಮುಖ ಪಾತ್ರವನ್ನು ಶ್ರೀ ಮೋದಿ ಒತ್ತಿ ಹೇಳಿದರು. ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ 10,000 ಎಫ್ ಪಿ ಒ ಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಅವುಗಳ ಬೆಂಬಲದೊಂದಿಗೆ, ಸಣ್ಣ ರೈತ ಗುಂಪುಗಳನ್ನು ರಚಿಸಬಹುದು, ಸ್ವಚ್ಛಗೊಳಿಸುವಿಕೆ, ಪ್ಯಾಕೇಜಿಂಗ್ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಹೊಂದಬಹುದು ಮತ್ತು ಇ-ನ್ಯಾಮ್ ನಂತಹ ಆನ್‌ಲೈನ್ ಮಾರುಕಟ್ಟೆಗಳಿಗೆ ನೇರವಾಗಿ ಸಂಪರ್ಕ ಸಾಧಿಸಬಹುದು. ಸಾಂಪ್ರದಾಯಿಕ ಜ್ಞಾನ, ವೈಜ್ಞಾನಿಕ ಶಕ್ತಿ ಮತ್ತು ಸರ್ಕಾರದ ಬೆಂಬಲ ಒಟ್ಟಿಗೆ ಸೇರಿದಾಗ, ರೈತರು ಅಭಿವೃದ್ಧಿ ಹೊಂದುತ್ತಾರೆ ಮತ್ತು ಭೂಮಿ ತಾಯಿ ಆರೋಗ್ಯವಾಗಿರುತ್ತಾಳೆ ಎಂದು ಅವರು ಹೇಳಿದರು.

ಈ ಶೃಂಗಸಭೆಯು ದೇಶದಲ್ಲಿ ನೈಸರ್ಗಿಕ ಕೃಷಿಗೆ ಹೊಸ ದಿಕ್ಕನ್ನು ನೀಡುತ್ತದೆ, ಈ ವೇದಿಕೆಯಿಂದ ಹೊಸ ಆಲೋಚನೆಗಳು ಮತ್ತು ಪರಿಹಾರಗಳು ಹೊರಹೊಮ್ಮುಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿಯವರು ತಮ್ಮ ಮಾತು ಮುಗಿಸಿದರು.
ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ, ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
2025ರ ನವೆಂಬರ್ 19 ರಿಂದ 21 ರವರೆಗೆ ನಡೆಯಲಿರುವ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ತಮಿಳುನಾಡು ನೈಸರ್ಗಿಕ ಕೃಷಿ ಪಾಲುದಾರರ ವೇದಿಕೆ ಆಯೋಜಿಸುತ್ತಿದೆ. ಈ ಶೃಂಗಸಭೆಯು ಸುಸ್ಥಿರ, ಪರಿಸರ ಸ್ನೇಹಿ ಮತ್ತು ರಾಸಾಯನಿಕ ಮುಕ್ತ ಕೃಷಿ ಪದ್ಧತಿಗಳನ್ನು ಉತ್ತೇಜಿಸುವುದು ಮತ್ತು ಭಾರತದ ಕೃಷಿ ಭವಿಷ್ಯಕ್ಕಾಗಿ ಕಾರ್ಯಸಾಧ್ಯ, ಹವಾಮಾನ ಸ್ನೇಹಿ ಮತ್ತು ಆರ್ಥಿಕವಾಗಿ ಸುಸ್ಥಿರ ಮಾದರಿಯಾಗಿ ನೈಸರ್ಗಿಕ ಮತ್ತು ಪುನರುತ್ಪಾದಕ ಕೃಷಿಯತ್ತ ಬದಲಾವಣೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿದೆ.

ಈ ಶೃಂಗಸಭೆಯು ರೈತ-ಉತ್ಪಾದಕ ಸಂಸ್ಥೆಗಳು ಮತ್ತು ಗ್ರಾಮೀಣ ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಜೊತೆಗೆ ಸಾವಯವ ಸಾಮಗ್ರಿಗಳು, ಕೃಷಿ ಸಂಸ್ಕರಣೆ, ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮತ್ತು ದೇಶೀಯ ತಂತ್ರಜ್ಞಾನಗಳಲ್ಲಿ ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ. ತಮಿಳುನಾಡು, ಪುದುಚೇರಿ, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದ 50,000ಕ್ಕೂ ಹೆಚ್ಚು ರೈತರು, ನೈಸರ್ಗಿಕ ಕೃಷಿ ವೃತ್ತಿಪರರು, ವಿಜ್ಞಾನಿಗಳು, ಸಾವಯವ ಸಾಮಗ್ರಿ ಪೂರೈಕೆದಾರರು, ಮಾರಾಟಗಾರರು ಮತ್ತು ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Click here to read full text speech
India is on the path to becoming the global hub of natural farming. pic.twitter.com/7rsJEXtojO
— PMO India (@PMOIndia) November 19, 2025
The youth of India are increasingly recognising agriculture as a modern and scalable opportunity.
— PMO India (@PMOIndia) November 19, 2025
This will greatly empower the rural economy. pic.twitter.com/kv4NGRmYrr
Natural farming is India’s own indigenous idea. It is rooted in our traditions and suited to our environment. pic.twitter.com/BV3gEHVE7n
— PMO India (@PMOIndia) November 19, 2025
One Acre, One Season...
— PMO India (@PMOIndia) November 19, 2025
PM @narendramodi’s request to farmers to practice natural farming on one acre of land for one season. pic.twitter.com/mOqgeaKxiI
Our goal must be to make natural farming a fully science-backed movement. pic.twitter.com/rKypedTdqP
— PMO India (@PMOIndia) November 19, 2025


