ಇಂದು ಪ್ರಾರಂಭಿಸಲಾದ ಅಭಿವೃದ್ಧಿ ಕಾರ್ಯಗಳು ಮೂಲಸೌಕರ್ಯವನ್ನು ಬಲಪಡಿಸುತ್ತವೆ ಮತ್ತು ಆಂಧ್ರ ಪ್ರದೇಶದ ಬೆಳವಣಿಗೆಯನ್ನು ವೇಗಗೊಳಿಸುತ್ತವೆ: ಪ್ರಧಾನಮಂತ್ರಿ
ಅಮರಾವತಿಯು ಸಂಪ್ರದಾಯ ಮತ್ತು ಪ್ರಗತಿಗೆ ಪರಸ್ಪರ ಪೂರಕವಾಗಿರುವ ಭೂಮಿಯಾಗಿದೆ: ಪ್ರಧಾನಮಂತ್ರಿ
ಎನ್‌ಟಿಆರ್ ಅವರು ಅಭಿವೃದ್ಧಿ ಹೊಂದಿದ ಆಂಧ್ರ ಪ್ರದೇಶದ ಕಲ್ಪನೆ ಹೊಂದಿದ್ದರು, ಆದರೆ ನಾವು ಒಟ್ಟಾಗಿ, ಅಮರಾವತಿ ಮತ್ತು ಆಂಧ್ರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಆಗಿ ಮಾಡಬೇಕು: ಪ್ರಧಾನಮಂತ್ರಿ
ಮೂಲಸೌಕರ್ಯವನ್ನು ತ್ವರಿತವಾಗಿ ಆಧುನೀಕರಿಸುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಈಗ ಸೇರಿದೆ: ಪ್ರಧಾನಮಂತ್ರಿ
ವಿಕಸಿತ ಭಾರತವನ್ನು 4 ಆಧಾರಸ್ತಂಭಗಳ ಮೇಲೆ ಕಟ್ಟಲಾಗುವುದು. ಅವರೆಂದರೆ - ಬಡವರು, ರೈತರು, ಯುವಕರು ಮತ್ತು ಮಹಿಳಾ ಶಕ್ತಿ: ಪ್ರಧಾನಮಂತ್ರಿ
ನಾಗಯಲಂಕಾದಲ್ಲಿ ನಿರ್ಮಿಸಲಾಗುವ ನವದುರ್ಗಾ ಪರೀಕ್ಷಾ ಶ್ರೇಣಿಯು ದುರ್ಗಾ ಮಾತೆಯಂತೆ ದೇಶದ ರಕ್ಷಣಾ ಶಕ್ತಿಯನ್ನು ಬಲಪಡಿಸುತ್ತದೆ, ಇದಕ್ಕಾಗಿ ದೇಶದ ವಿಜ್ಞಾನಿಗಳು ಮತ್ತು ಆಂಧ್ರ ಪ್ರದೇಶದ ಜನರನ್ನು ನಾನು ಅಭಿನಂದಿಸುತ್ತೇನೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದ ಅಮರಾವತಿಯಲ್ಲಿ 58,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು. ಪವಿತ್ರ ಭೂಮಿ ಅಮರಾವತಿಯಲ್ಲಿ ನಿಂತಾಗ, ಕೇವಲ ಒಂದು ನಗರವಾಗಿ ನೋಡುವುದಲ್ಲ, ಅದರ ಬದಲಾಗಿ ಒಂದು ಕನಸು ನನಸಾಗುವುದನ್ನು - ಹೊಸ ಅಮರಾವತಿ, ಹೊಸ ಆಂಧ್ರ - ನೋಡುತ್ತಿದ್ದೇನೆ ಎಂದು ಪ್ರಧಾನ ಮಂತ್ರಿ ತಿಳಿಸಿದರು. "ಅಮರಾವತಿ ಸಂಪ್ರದಾಯ ಮತ್ತು ಪ್ರಗತಿಗೆ ಪರಸ್ಪರ ಕೈಜೋಡಿಸುವ ಪವಿತ್ರ ಭೂಮಿಯಾಗಿದ್ದು, ಅದು ಬೌದ್ಧ ಪರಂಪರೆಯ ಶಾಂತಿ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಶಕ್ತಿ ಎರಡನ್ನೂ ಅಳವಡಿಸಿಕೊಳ್ಳುತ್ತದೆ" ಎಂದು ಪ್ರಧಾನಿ ಹೇಳಿದರು. ಇಂದು ಬಹು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ, ಈ ಯೋಜನೆಗಳು ಕೇವಲ ಕಾಂಕ್ರೀಟ್ ರಚನೆಗಳಾಗಿರದೆ,  ಆಂಧ್ರಪ್ರದೇಶ ಜನತೆಯ ಆಕಾಂಕ್ಷೆಗಳು ಮತ್ತು ಅಭಿವೃದ್ಧಿಗಾಗಿ ಭಾರತ ಹೊಂದಿರುವ ದೃಷ್ಟಿಕೋನದ ಭದ್ರ ಬುನಾದಿಯಾಗಿದೆ ಎಂದರು. ಆಂಧ್ರ ಪ್ರದೇಶ ಜನರಿಗೆ ಶುಭಾಶಯಗಳನ್ನು ಸಲ್ಲಿಸಿ, ಭಗವಾನ್ ವೀರಭದ್ರ, ಭಗವಾನ್ ಅಮರಲಿಂಗೇಶ್ವರ ಮತ್ತು ತಿರುಪತಿ ಬಾಲಾಜಿ ಅವರಿಗೆ ಪ್ರಧಾನಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ಅವರು ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಮತ್ತು ಉಪಮುಖ್ಯಮಂತ್ರಿ ಶ್ರೀ ಪವನ್ ಕಲ್ಯಾಣ್ ಅವರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಒಂದು ಕಾಲದಲ್ಲಿ ಇಂದ್ರಲೋಕದ ರಾಜಧಾನಿಯನ್ನು ಅಮರಾವತಿ ಎಂದು ಕರೆಯಲಾಗುತ್ತಿತ್ತು, ಆದರೀಗ ಅಮರಾವತಿ ಆಂಧ್ರಪ್ರದೇಶದ ರಾಜಧಾನಿಯಾಗಿದೆ. ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ 'ಸುವರ್ಣ ಆಂಧ್ರ'ದ ಸೃಷ್ಟಿಗೆ ಸಕಾರಾತ್ಮಕ ಸಂಕೇತವಾಗಿದೆ. ಇದು ಭಾರತದ ಅಭಿವೃದ್ಧಿಯ ಹಾದಿಯನ್ನು ಬಲಪಡಿಸುತ್ತದೆ. ಅಮರಾವತಿ 'ಸುವರ್ಣ ಆಂಧ್ರ'ದ ದೃಷ್ಟಿಕೋನವನ್ನು ಚೈತನ್ಯಗೊಳಿಸುತ್ತದೆ, ಅದನ್ನು ಪ್ರಗತಿ ಮತ್ತು ಪರಿವರ್ತನೆಯ ಕೇಂದ್ರವನ್ನಾಗಿ ಮಾಡುತ್ತದೆ. "ಅಮರಾವತಿ ಕೇವಲ ಒಂದು ನಗರವಲ್ಲ, ಅದೊಂದು ದೈತ್ಯ ಶಕ್ತಿ, ಆಂಧ್ರ ಪ್ರದೇಶವನ್ನು ಆಧುನಿಕ ರಾಜ್ಯವಾಗಿ ಪರಿವರ್ತಿಸುವ ಶಕ್ತಿ ಮತ್ತು ಆಂಧ್ರ ಪ್ರದೇಶವನ್ನು ಮುಂದುವರಿದ ರಾಜ್ಯವಾಗಿ ಪರಿವರ್ತಿಸುವ ಶಕ್ತಿಯಾಗಿದೆ" ಎಂದು ಶ್ರೀ ಮೋದಿ ಅವರು ತೆಲುಗಿನಲ್ಲಿ ಹೇಳಿದರು.

 

ಅಮರಾವತಿಯನ್ನು ಆಂಧ್ರ ಪ್ರದೇಶದ ಯುವಕರ ಕನಸುಗಳು ನನಸಾಗುವ ನಗರವಾಗಲಿದೆ. ಮುಂಬರುವ ವರ್ಷಗಳಲ್ಲಿ, ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಹಸಿರು ಇಂಧನ, ಸ್ವಚ್ಛ ಕೈಗಾರಿಕೆ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ನಗರವಾಗಿ ಹೊರಹೊಮ್ಮಲಿದೆ. ಈ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಭವಿಷ್ಯದ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಕಲ್ಪಿಸಿಕೊಂಡು ಅದನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಶ್ರೀ ಚಂದ್ರಬಾಬು ನಾಯ್ಡು ಅವರ ಕುಶಾಗ್ರಮತಿ ಶ್ಲಾಘನೀಯ. 2015ರಲ್ಲಿ, ಪ್ರಜಾ(ಪ್ರಜೆಗಳ) ರಾಜಧಾನಿಗೆ ಶಂಕುಸ್ಥಾಪನೆ ನೆರವೇರಿಸುವ ಸೌಭಾಗ್ಯ ತಮಗೆ ಸಿಕ್ಕಿತು. ಅನೇಕ ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಅಮರಾವತಿಯ ಅಭಿವೃದ್ಧಿಗೆ ಸಮಗ್ರ ಬೆಂಬಲ ನೀಡಿದೆ, ಮೂಲಭೂತವಾಗಿ ಅಗತ್ಯವಿರುವ ಮೂಲಸೌಕರ್ಯಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಶ್ರೀ ನಾಯ್ಡು ಅವರ ನಾಯಕತ್ವದಲ್ಲಿ, ಹೊಸ ರಾಜ್ಯ ಸರ್ಕಾರವು ಅಭಿವೃದ್ಧಿ ಪ್ರಯತ್ನಗಳನ್ನು ವೇಗಗೊಳಿಸಿದೆ. ಹೈಕೋರ್ಟ್, ವಿಧಾನಸಭೆ, ಸಚಿವಾಲಯ ಮತ್ತು ರಾಜಭವನ ಸೇರಿದಂತೆ ಪ್ರಮುಖ ಸಂಸ್ಥೆಗಳ ನಿರ್ಮಾಣಕ್ಕೆ ಇದೀಗ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

 

"ಎನ್‌ಟಿಆರ್ ಗಾರು ಅಭಿವೃದ್ಧಿ ಹೊಂದಿದ ಆಂಧ್ರ ಪ್ರದೇಶದ ಕಲ್ಪನೆ ಹೊಂದಿದ್ದರು. ಅಮರಾವತಿ ಮತ್ತು ಆಂಧ್ರ ಪ್ರದೇಶವನ್ನು ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸಲು ಸಾಮೂಹಿಕ ಪ್ರಯತ್ನಗಳನ್ನು ಮಾಡಲಾಗುವುದು, ಎನ್‌ಟಿಆರ್ ಗಾರು ಅವರ ಕನಸು ನನಸಾಗಿಸುವ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇದು ನಮ್ಮ ಜವಾಬ್ದಾರಿ ಮತ್ತು ನಾವು ಒಟ್ಟಾಗಿ ಸಾಧಿಸಬೇಕಾದ ಕೆಲಸ ಎಂದು ತೆಲುಗು ಭಾಷೆಯಲ್ಲಿ ಹೇಳಿದರು.

ಕಳೆದ 10 ವರ್ಷಗಳಲ್ಲಿ, ಭಾರತವು ಭೌತಿಕ, ಡಿಜಿಟಲ್ ಮತ್ತು ಸಾಮಾಜಿಕ ಮೂಲಸೌಕರ್ಯದ ಮೇಲೆ ವ್ಯಾಪಕವಾಗಿ ಗಮನ ಹರಿಸಿದೆ. ಭಾರತವು ಈಗ ವಿಶ್ವದಲ್ಲೇ ಅತ್ಯಂತ ವೇಗವಾಗಿ ಮೂಲಸೌಕರ್ಯಗಳನ್ನು ಆಧುನೀಕರಿಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ, ಆಂಧ್ರ ಪ್ರದೇಶವು ಈ ಪ್ರಗತಿಯಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತಿದೆ. ಆಂಧ್ರ ಪ್ರದೇಶಕ್ಕೆ ಸಾವಿರಾರು ಕೋಟಿ ರೂ. ಮೌಲ್ಯದ ರಸ್ತೆ ಮತ್ತು ರೈಲು ಯೋಜನೆಗಳನ್ನು ಹಂಚಿಕೆ ಮಾಡಲಾಗಿದೆ, ಇದು ಅದರ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. "ಆಂಧ್ರ ಪ್ರದೇಶವು ಸಂಪರ್ಕದ ಹೊಸ ಯುಗಕ್ಕೆ ಸಾಕ್ಷಿಯಾಗುತ್ತಿದೆ, ಇದು ಜಿಲ್ಲೆಯಿಂದ ಜಿಲ್ಲೆಗೆ ಸಂಪರ್ಕ ಹೆಚ್ಚಿಸುತ್ತದೆ ಮತ್ತು ನೆರೆಯ ರಾಜ್ಯಗಳೊಂದಿಗೂ ಸಂಪರ್ಕವನ್ನು ಸುಧಾರಿಸುತ್ತದೆ". ರೈತರು ಬೃಹತ್ ಮಾರುಕಟ್ಟೆಗಳನ್ನು ಪ್ರವೇಶಿಸುವುದು ಸುಲಭವಾಗುತ್ತದೆ, ಕೈಗಾರಿಕೆಗಳು ಸುಧಾರಿತ ಸರಕು ಸಾಗಣೆ ದಕ್ಷತೆಯಿಂದ ಪ್ರಯೋಜನ ಪಡೆಯುತ್ತವೆ. ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆ ವಲಯಗಳು ಸಹ ವೇಗವಾಗಿ ಅಭಿವೃದ್ಧಿ ಹೊಂದಲಿವೆ. ಇದು ಪ್ರಮುಖ ಧಾರ್ಮಿಕ ತಾಣಗಳನ್ನು ಹೆಚ್ಚು ಪ್ರವೇಶಿಸುವಂತೆ ಮಾಡುತ್ತದೆ. ರೇಣಿಗುಂಟ-ನಾಯ್ಡುಪೇಟ ಹೆದ್ದಾರಿಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಇದು ತಿರುಪತಿಯ ಬಾಲಾಜಿ ದೇಗುಲಕ್ಕೆ ಪ್ರವೇಶವನ್ನು ಗಮನಾರ್ಹವಾಗಿ ಸುಗಮಗೊಳಿಸುತ್ತದೆ, ಭಕ್ತರಿಗೆ ಕಡಿಮೆ ಸಮಯದಲ್ಲಿ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

 

ವೇಗವಾಗಿ ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ರೈಲ್ವೆ ಜಾಲಗಳಿಗೆ ಅಪಾರ ಪ್ರಾಮುಖ್ಯತೆ ನೀಡಿವೆ. ಕಳೆದ ದಶಕವು ಭಾರತೀಯ ರೈಲ್ವೆಗೆ ಪರಿವರ್ತನೆಯ ಅವಧಿಯಾಗಿದೆ, ಭಾರತ ಸರ್ಕಾರ ಆಂಧ್ರ ಪ್ರದೇಶದಲ್ಲಿ ರೈಲ್ವೆ ಅಭಿವೃದ್ಧಿಗೆ ದಾಖಲೆಯ ಹಣ ಮಂಜೂರು ಮಾಡಿದೆ. 2009 ಮತ್ತು 2014ರ ನಡುವೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಒಟ್ಟು ರೈಲ್ವೆ ಬಜೆಟ್ 900 ಕೋಟಿ ರೂ.ಗಿಂತ ಕಡಿಮೆಯಿತ್ತು, ಆದರೆ ಇಂದು, ಆಂಧ್ರ ಪ್ರದೇಶವೊಂದೇ 9,000 ಕೋಟಿ ರೂ.ಗಿಂತ ಹೆಚ್ಚಿನ ರೈಲ್ವೆ ಬಜೆಟ್ ಹೊಂದಿದೆ, ಇದು 10 ಪಟ್ಟು ಹೆಚ್ಚಾಗಿದೆ. "ಹೆಚ್ಚಿನ ರೈಲ್ವೆ ಬಜೆಟ್‌ನೊಂದಿಗೆ, ಆಂಧ್ರ ಪ್ರದೇಶವು 100% ರೈಲ್ವೆ ವಿದ್ಯುದೀಕರಣ ಸಾಧಿಸಿದೆ". ಆಂಧ್ರ ಪ್ರದೇಶದ ಮೂಲಕ ಹಾದುಹೋಗುವ ಅಮೃತ್ ಭಾರತ್ ರೈಲಿನೊಂದಿಗೆ ರಾಜ್ಯವು ಈಗ 8 ಜೋಡಿ ಆಧುನಿಕ ವಂದೇ ಭಾರತ್ ರೈಲುಗಳನ್ನು ನಿರ್ವಹಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ರಾಜ್ಯಾದ್ಯಂತ 750ಕ್ಕೂ ಹೆಚ್ಚು ರೈಲು ಮೇಲ್ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ, ಆಂಧ್ರಪ್ರದೇಶದ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಅಮೃತ್ ಭಾರತ ನಿಲ್ದಾಣ ಯೋಜನೆಯಡಿ, ಆಧುನೀಕರಿಸಲಾಗುತ್ತಿದ್ದು, ಪ್ರಯಾಣಿಕರಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ಖಚಿತಪಡಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಮೂಲಸೌಕರ್ಯ ಅಭಿವೃದ್ಧಿಯ ಗುಣಾತ್ಮಕ ಪರಿಣಾಮಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಉತ್ಪಾದನಾ ವಲಯದ ಮೇಲೆ ಅದರ ನೇರ ಪರಿಣಾಮ ಬೀರಿದೆ. ಸಿಮೆಂಟ್, ಉಕ್ಕು ಮತ್ತು ಸಾರಿಗೆ ಸೇವೆಗಳಂತಹ ಕಚ್ಚಾ ವಸ್ತುಗಳು ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳಿಂದ ಗಮನಾರ್ಹವಾಗಿ ಪ್ರಯೋಜನ ಪಡೆಯುತ್ತವೆ, ಇದು ಬಹು ಕೈಗಾರಿಕೆಗಳನ್ನು ಬಲಪಡಿಸುತ್ತದೆ. ಮೂಲಸೌಕರ್ಯ ಅಭಿವೃದ್ಧಿಯು ಭಾರತದ ಯುವಜನರಿಗೆ ನೇರ ಪ್ರಯೋಜನ ನೀಡುತ್ತದೆ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆಂಧ್ರಪ್ರದೇಶದ ಸಾವಿರಾರು ಯುವಜನರು ಈ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳ ಮೂಲಕ ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.

 

"ಅಭಿವೃದ್ಧಿ ಹೊಂದಿದ ಭಾರತದ ಬುನಾದಿಯು 4 ಪ್ರಮುಖ ಆಧಾರಸ್ತಂಭಗಳಾದ ಬಡವರು, ರೈತರು, ಯುವಕರು ಮತ್ತು ಮಹಿಳಾ ಸಬಲೀಕರಣದ ಮೇಲೆ ನಿಂತಿದೆ" ಎಂದು ಪ್ರಧಾನ ಮಂತ್ರಿ ಅವರು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದರು. ಈ ಆಧಾಸ್ತಂಭಗಳು ತಮ್ಮ ಸರ್ಕಾರದ ನೀತಿಗಳ ಕೇಂದ್ರಬಿಂದುವಾಗಿವೆ. ರೈತರ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಲು ಭಾರತ ಸರ್ಕಾರವು ಕಳೆದ 10 ವರ್ಷಗಳಲ್ಲಿ ಕೈಗೆಟುಕುವ ಬೆಲೆಗೆ ರಸಗೊಬ್ಬರಗಳನ್ನು ಒದಗಿಸಲು ಸುಮಾರು 12 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಸಾವಿರಾರು ಹೊಸ ಮತ್ತು ಮುಂದುವರಿದ ಬಿತ್ತನೆ ಬೀಜ ಪ್ರಭೇದಗಳನ್ನು ರೈತರಿಗೆ ವಿತರಿಸಲಾಗಿದೆ, ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುತ್ತ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಆಂಧ್ರಪ್ರದೇಶ ರೈತರು 5,500 ಕೋಟಿ ರೂ. ಮೌಲ್ಯದ ಕ್ಲೇಮುಗಳ ಇತ್ಯರ್ಥ ಪಡೆದಿದ್ದಾರೆ. ಹೆಚ್ಚುವರಿಯಾಗಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ, 17,500 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಆಂಧ್ರಪ್ರದೇಶದ ಲಕ್ಷಾಂತರ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗಿದೆ, ಇದು ಅವರ ಜೀವನೋಪಾಯಕ್ಕೆ ಆರ್ಥಿಕ ಬೆಂಬಲ ಒದಗಿಸುತ್ತಿದೆ ಎಂದು ಅವರು ಹೇಳಿದರು.

ಭಾರತವು ದೇಶಾದ್ಯಂತ ನೀರಾವರಿ ಯೋಜನೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ, ಪ್ರತಿ ಜಮೀನಿಗೆ ನೀರು ಹರಿಯುವುದನ್ನು ಖಚಿತಪಡಿಸಲು ನದಿ ಜೋಡಣೆ ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಹೊಸ ರಾಜ್ಯ ಸರ್ಕಾರದ ರಚನೆಯೊಂದಿಗೆ ಪೋಲವರಂ ಯೋಜನೆಯು ಹೊಸ ವೇಗ ಪಡೆದುಕೊಂಡಿದೆ. ಈ ಯೋಜನೆಯಿಂದ ಆಂಧ್ರಪ್ರದೇಶದ ಲಕ್ಷಾಂತರ ಜನರು ತಮ್ಮ ಜೀವನ ಪರಿವರ್ತನೆ ಆಗುವುದನ್ನು ನೋಡುತ್ತಾರೆ. ಪೋಲವರಂ ಯೋಜನೆಯನ್ನು ವೇಗವಾಗಿ ಪೂರ್ಣಗೊಳಿಸಲು ತಮ್ಮ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಅವರು ಪುನರುಚ್ಚರಿಸಿದರು.

 

ಅನೇಕ ದಶಕಗಳಲ್ಲಿ ಭಾರತವನ್ನು ಬಾಹ್ಯಾಕಾಶ ಕ್ಷೇತ್ರದ ಶಕ್ತಿಯಾಗಿ ಸ್ಥಾಪಿಸುವಲ್ಲಿ ಆಂಧ್ರಪ್ರದೇಶ ಪ್ರಮುಖ ಪಾತ್ರ ವಹಿಸಿದೆ. ಶ್ರೀಹರಿಕೋಟಾದಿಂದ ಪ್ರಾರಂಭಿಸಲಾದ ಪ್ರತಿಯೊಂದು ಕಾರ್ಯಾಚರಣೆಯು ಲಕ್ಷಾಂತರ ಭಾರತೀಯರನ್ನು ಹೆಮ್ಮೆಯಿಂದ ತುಂಬಿದೆ, ಇದು ದೇಶದ ಯುವಕರನ್ನು ಬಾಹ್ಯಾಕಾಶ ಪರಿಶೋಧನೆಯತ್ತ ಪ್ರೇರೇಪಿಸುತ್ತಿದೆ. ಭಾರತದ ರಕ್ಷಣಾ ವಲಯದಲ್ಲಿ ಒಂದು ಪ್ರಮುಖ ಬೆಳವಣಿಗೆಯನ್ನು ಘೋಷಿಸಿದ ಪ್ರಧಾನಿ, ಹೊಸ ರಕ್ಷಣಾ ಸಂಸ್ಥೆಯನ್ನು ಸ್ಥಾಪಿಸಲಾಗಿದೆ, ಡಿಆರ್‌ಡಿಒದ ಹೊಸ ಕ್ಷಿಪಣಿ ಪರೀಕ್ಷಾ ಶ್ರೇಣಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ನಾಗಯಲಂಕಾದಲ್ಲಿರುವ ನವದುರ್ಗ ಪರೀಕ್ಷಾ ಶ್ರೇಣಿಯು ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಶಕ್ತಿ ಗುಣಕವಾಗಿ ಕಾರ್ಯ ನಿರ್ವಹಿಸುತ್ತದೆ, ಇದು ದುರ್ಗಾ ಮಾತೆಯ ದೈವಿಕ ಶಕ್ತಿಯಿಂದ ಬಲ ಪಡೆಯುತ್ತದೆ. ಈ ಮಹತ್ವದ ಸಾಧನೆಗಾಗಿ ಪ್ರಧಾನಿ ಅವರು, ರಾಷ್ಟ್ರದ ವಿಜ್ಞಾನಿಗಳು ಮತ್ತು ಆಂಧ್ರಪ್ರದೇಶದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

"ಭಾರತದ ಶಕ್ತಿ ಕೇವಲ ಶಸ್ತ್ರಾಸ್ತ್ರಗಳಲ್ಲಿ ಅಡಗಿಲ್ಲ, ಅದು ಏಕತೆಯಲ್ಲಿ ಅಡಗಿದೆ", ದೇಶಾದ್ಯಂತ ನಗರಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕತಾ ಮಾಲ್‌ಗಳ ಮೂಲಕ ಈ ಏಕತಾ ಮನೋಭಾವ ಮತ್ತಷ್ಟು ಬಲಗೊಂಡಿದೆ. ವಿಶಾಖಪಟ್ಟಣಂ ಶೀಘ್ರದಲ್ಲೇ ತನ್ನದೇ ಆದ ಏಕತಾ ಮಾಲ್ ಹೊಂದಲಿದೆ ಎಂದು ಪ್ರಧಾನಿ ಘೋಷಿಸಿದರು, ಅಲ್ಲಿ ಭಾರತದಾದ್ಯಂತದ ಕುಶಲಕರ್ಮಿಗಳು ಮತ್ತು ಕರಕುಶಲಗಾರರು ತಮ್ಮ ಉತ್ಪನ್ನಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲಿದ್ದಾರೆ. ಈ ಮಾಲ್‌ಗಳು ಜನರನ್ನು ಭಾರತದ ಶ್ರೀಮಂತ ವೈವಿಧ್ಯತೆಯೊಂದಿಗೆ ಸಂಪರ್ಕಿಸುತ್ತವೆ, ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತವೆ ಮತ್ತು "ಏಕ್ ಭಾರತ್, ಶ್ರೇಷ್ಠ ಭಾರತ್" ದೃಷ್ಟಿಕೋನ ಬಲಪಡಿಸುತ್ತವೆ ಎಂದು ಅವರು ಹೇಳಿದರು.

 

ಈ ವರ್ಷದ 10ನೇ ಆವೃತ್ತಿಯ ಅಂತಾರಾಷ್ಟ್ರೀಯ ಯೋಗ ದಿನ(ಜೂನ್ 21)ವನ್ನು ಆಂಧ್ರಪ್ರದೇಶದಲ್ಲಿ ಆಚರಿಸಲಾಗುವುದು, ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ಪ್ರಧಾನಿ ಘೋಷಿಸಿದರು. ಮುಂದಿನ 50 ದಿನಗಳಲ್ಲಿ ಯೋಗದ ಕುರಿತು ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ವಿಶ್ವ ದಾಖಲೆ ಸ್ಥಾಪಿಸಬೇಕು ಎಂದು ಅವರು ಜನರನ್ನು ಒತ್ತಾಯಿಸಿದರು. ಆಂಧ್ರಪ್ರದೇಶದಲ್ಲಿ ಕನಸುಗಾರರು ಅಥವಾ ಸಾಧಕರಿಗೆ ಕೊರತೆಯಿಲ್ಲ. ರಾಜ್ಯವು ಸರಿಯಾದ ಹಾದಿಯಲ್ಲಿದೆ ಮತ್ತು ಬೆಳವಣಿಗೆಗೆ ಸರಿಯಾದ ವೇಗ ಪಡೆದುಕೊಂಡಿದೆ. ಆಂಧ್ರಪ್ರದೇಶದ ಪ್ರಗತಿ ವೇಗಗೊಳಿಸಲು ಜನರು ನಿರಂತರ ವೇಗ ನೀಡಬೇಕು. ಇದಕ್ಕೆ ನಾನು ಅಚಲ ಬೆಂಬಲ ನೀಡುತ್ತೇನೆ,  ಅವರೊಂದಿಗೆ ನಾನು ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇನೆ ಎಂಬ ಭರವಸೆ ಮೂಲಕ ಪ್ರಧಾನಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಸೈಯದ್ ಅಬ್ದುಲ್ ನಜೀರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಂಪುಟ ಸಚಿವರು ಮತ್ತು ಇತರೆ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶಾದ್ಯಂತ ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಪರ್ಕ ಖಚಿತಪಡಿಸುವ ಬದ್ಧತೆಗೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ಆಂಧ್ರಪ್ರದೇಶದಲ್ಲಿ 7 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ವಿಭಾಗಗಳ ವಿಸ್ತರಣೆ, ರಸ್ತೆ ಮೇಲ್ಸೇತುವೆ ಮತ್ತು ಸಬ್‌ವೇ ನಿರ್ಮಾಣ ಸೇರಿವೆ. ಈ ಯೋಜನೆಗಳು ರಸ್ತೆ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ತಿರುಪತಿ, ಶ್ರೀಕಾಳಹಸ್ತಿ, ಮಲಕೊಂಡ ಮತ್ತು ಉದಯಗಿರಿ ಕೋಟೆಯಂತಹ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.

ಸಂಪರ್ಕ ಮತ್ತು ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಿರುವ ರೈಲ್ವೆ ಯೋಜನೆಗಳನ್ನು ಪ್ರಧಾನ ಮಂತ್ರಿ ರಾಷ್ಟ್ರಕ್ಕೆ ಸಮರ್ಪಿಸಿದರು. ಬುಗ್ಗನಪಲ್ಲಿ ಸಿಮೆಂಟ್ ನಗರ ಮತ್ತು ಪಣ್ಯಂ ನಿಲ್ದಾಣಗಳ ನಡುವಿನ ಜೋಡಿ ರೈಲು ಮಾರ್ಗಗಳ ನಿರ್ಮಾಣ, ರಾಯಲಸೀಮಾ ಮತ್ತು ಅಮರಾವತಿ ನಡುವಿನ ಸಂಪರ್ಕ ಹೆಚ್ಚಿಸುವುದು ಮತ್ತು ನ್ಯೂ ವೆಸ್ಟ್ ಬ್ಲಾಕ್ ಹಟ್ ಕ್ಯಾಬಿನ್ ಮತ್ತು ವಿಜಯವಾಡ ನಿಲ್ದಾಣಗಳ ನಡುವೆ 3ನೇ ರೈಲು ಮಾರ್ಗ ನಿರ್ಮಿಸುವ ಯೋಜನೆಗಳು ಇವಾಗಿವೆ.

6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಮತ್ತು ಒಂದು ರೈಲ್ವೆ ಯೋಜನೆಗೆ ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವಿವಿಧ ವಿಭಾಗಗಳ ವಿಸ್ತರಣೆ, ಎತ್ತರಿಸಿದ ಕಾರಿಡಾರ್ ನಿರ್ಮಾಣ, ಅರ್ಧ ಕ್ಲೋವರ್ ಲೀಫ್ ಮತ್ತು ರಸ್ತೆ ಓವರ್ ಬ್ರಿಡ್ಜ್ ನಿರ್ಮಾಣ ಸೇರಿವೆ. ಈ ಯೋಜನೆಗಳು ಸಂಪರ್ಕ, ಅಂತರಾಜ್ಯ ಪ್ರಯಾಣವನ್ನು ಸುಧಾರಿಸುತ್ತದೆ, ದಟ್ಟಣೆ ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಸರಕು ಸಾಗಣೆಯ ದಕ್ಷತೆ ಸುಧಾರಿಸುತ್ತದೆ. ಗುಂತಕಲ್ ಪಶ್ಚಿಮ ಮತ್ತು ಮಲ್ಲಪ್ಪ ಗೇಟ್ ನಿಲ್ದಾಣಗಳ ನಡುವೆ ರೈಲ್ ಓವರ್ ರೈಲ್ ನಿರ್ಮಾಣವು ಸರಕು ರೈಲುಗಳನ್ನು ಬೈಪಾಸ್ ಮಾಡುವುದು ಮತ್ತು ಗುಂತಕಲ್ ಜಂಕ್ಷನ್‌ನಲ್ಲಿ ದಟ್ಟಣೆ ಕಡಿಮೆ ಮಾಡುವ ಗುರಿ ಹೊಂದಿದೆ.

 

ವಿಧಾನಸಭೆ, ಹೈಕೋರ್ಟ್, ಸಚಿವಾಲಯ, ಇತರೆ ಆಡಳಿತಾತ್ಮಕ ಕಟ್ಟಡಗಳು ಮತ್ತು 5,200ಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ ಕಟ್ಟಡಗಳು ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇವುಗಳ ಒಟ್ಟು ಮೌಲ್ಯ 11,240 ಕೋಟಿ ರೂ.ಗಿಂತ ಹೆಚ್ಚು. ಇದರಲ್ಲಿ 17,400 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಭೂಗತ ಉಪಯುಕ್ತತೆಗಳು ಮತ್ತು ಸುಧಾರಿತ ಪ್ರವಾಹ ನಿರ್ವಹಣಾ ವ್ಯವಸ್ಥೆಗಳೊಂದಿಗೆ 320 ಕಿ.ಮೀ. ವಿಶ್ವ ದರ್ಜೆಯ ಸಾರಿಗೆ ಜಾಲ ಒಳಗೊಂಡಿರುವ ಬೃಹತ್(ಟ್ರಂಕ್) ಮೂಲಸೌಕರ್ಯ ಮತ್ತು ಪ್ರವಾಹ ತಗ್ಗಿಸುವ ಯೋಜನೆಗಳು ಸೇರಿವೆ. ಲ್ಯಾಂಡ್ ಪೂಲಿಂಗ್ ಯೋಜನೆಯ ಮೂಲಸೌಕರ್ಯ ಯೋಜನೆಗಳು ರಾಜಧಾನಿ ಅಮರಾವತಿಯಾದ್ಯಂತ ಕೇಂದ್ರ ಭಾಗಗಳು, ಸೈಕಲ್ ಟ್ರ್ಯಾಕ್‌ಗಳು ಮತ್ತು ಸಂಯೋಜಿತ ಉಪಯುಕ್ತತೆಗಳನ್ನು ಹೊಂದಿರುವ 1,281 ಕಿ.ಮೀ. ರಸ್ತೆಗಳನ್ನು ಒಳಗೊಂಡಿದ್ದು, ಇವು ಒಟ್ಟು 20,400 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ್ದಾಗಿದೆ.

 

ಆಂಧ್ರಪ್ರದೇಶದ ನಾಗಯಲಂಕಾದಲ್ಲಿ ಸುಮಾರು 1,460 ಕೋಟಿ ರೂ. ಮೌಲ್ಯದ ಕ್ಷಿಪಣಿ ಪರೀಕ್ಷಾ ಶ್ರೇಣಿಗೆ ಪ್ರಧಾನಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಇದು ದೇಶದ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸುವ ಉಡಾವಣಾ ಕೇಂದ್ರ, ತಾಂತ್ರಿಕ ಉಪಕರಣ ಸೌಲಭ್ಯಗಳು, ಸ್ಥಳೀಯ ರಾಡಾರ್‌ಗಳು, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.

ವಿಶಾಖಪಟ್ಟಣಂನ ಮಧುರವಾಡದಲ್ಲಿ ಪ್ರಧಾನ ಮಂತ್ರಿ ಅವರು ಪಿಎಂ ಏಕ್ತಾ ಮಾಲ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವುದು, ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಬೆಂಬಲಿಸುವುದು, ಒಂದು ಜಿಲ್ಲೆ ಒಂದು ಉತ್ಪನ್ನವನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಗ್ರಾಮೀಣ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವುದು ಮತ್ತು ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆ ಉಪಸ್ಥಿತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಕಲ್ಪಿಸಲಾಗಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PLI 2.0: India bets big on making more of the smartphone at home

Media Coverage

PLI 2.0: India bets big on making more of the smartphone at home
NM on the go

Nm on the go

Always be the first to hear from the PM. Get the App Now!
...
Prime Minister greets people of Goa on Goa Statehood Day
May 30, 2026

The Prime Minister, Shri Narendra Modi, today extended his greetings to the people of Goa on the occasion of Goa Statehood Day.

The Prime Minister said that Goa is widely known for its vibrant culture, rich heritage, natural beauty and warm-hearted people.

The Prime Minister noted that the occasion is an opportunity to remember with gratitude all those who worked tirelessly for the progress and identity of Goa.

The Prime Minister expressed hope that Goa will continue to prosper and play an important role in building a Viksit Bharat.

Shri Modi also prayed for the good health and prosperity of every Goan.

The Prime Minister wrote on X;

“Greetings to the people of Goa on the special occasion of Goa Statehood Day. Goa’s vibrant culture, rich heritage, natural beauty and warm-hearted people are widely known. This day is also an opportunity to remember with gratitude all those who worked tirelessly for its progress and identity. May Goa continue to prosper and play an important role in building a Viksit Bharat. Praying for the good health and prosperity of every Goan.”