ʻಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಕ್ಕೆ ಚಾಲನೆ
ದಿಯೋಘರ್‌ನ ʻಏಮ್ಸ್ʼನಲ್ಲಿ 10,000ನೇ ಜನೌಷಧ ಕೇಂದ್ರ ಲೋಕಾರ್ಪಣೆ
ದೇಶದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಚಾಲನೆ
"ಸರ್ಕಾರಿ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಮತ್ತು ಪ್ರಯೋಜನಗಳನ್ನು ದೇಶಾದ್ಯಂತದ ನಾಗರಿಕರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಹೊಂದಿದೆ"
ʻಮೋದಿ ಕಿ ಗ್ಯಾರಂಟಿʼ ವಾಹನವು ಇಲ್ಲಿಯವರೆಗೆ 12,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಲುಪಿದೆ, ಅಲ್ಲಿ ಸುಮಾರು 30 ಲಕ್ಷ ನಾಗರಿಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ
"ವಿಕಸಿತ ಭಾರತ ಸಂಕಲ್ಪ ಯಾತ್ರೆಯು(ವಿಬಿಎಸ್‌ವೈ) ಸರ್ಕಾರದ ಒಂದು ಉಪಕ್ರಮದ ಹಂತದಿಂದ ಜನಾಂದೋಲನವಾಗಿ ರೂಪಾಂತರಗೊಂಡಿದೆ"
" ಇಲ್ಲಿಯವರೆಗೆ ಸರ್ಕಾರಿ ಪ್ರಯೋಜನಗಳಿಂದ ಹೊರಗುಳಿದವರಿಗೆ ಸರ್ಕಾರದ ಯೋಜನೆಗಳು ಮತ್ತು ಸೇವೆಗಳನ್ನು ವಿಸ್ತರಿಸುವ ಗುರಿಯನ್ನು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಹೊಂದಿದೆ"
"ಇತರ ಮೇಲಿನ ನಿರೀಕ್ಷೆ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿ ಮೋದಿಯವರ ಗ್ಯಾರಂಟಿ ಪ್ರಾರಂಭವಾಗುತ್ತದೆ"
ಜಾರ್ಖಂಡ್‌ನ ದಿಯೋಘರ್, ಒಡಿಶಾದ ರಾಯ್ ಗರ್ಹಾ, ಆಂಧ್ರಪ್ರದೇಶದ ಪ್ರಕಾಶಂ, ಅರುಣಾಚಲ ಪ್ರದೇಶದ ನಾಮ್ಸಾಯಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾದ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ʻಪ್ರಧಾನಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಕ್ಕೂ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದಿಯೋಘರ್‌ನ ʻಏಮ್ಸ್ʼ ಆಸ್ಪತ್ರೆಯಲ್ಲಿ ದೇಶದ 10,000ನೇ ಜನೌಷಧ ಕೇಂದ್ರವನ್ನು ಉದ್ಘಾಟಿಸಿದರು. ಇದಲ್ಲದೆ, ದೇಶದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಶ್ರೀ ಮೋದಿ ಚಾಲನೆ ನೀಡಿದರು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುವುದು ಮತ್ತು ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸುವುದು ಈ ಎರಡೂ ಉಪಕ್ರಮಗಳನ್ನು ಪ್ರಧಾನಿ ಈ ವರ್ಷದ ಆರಂಭದಲ್ಲಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಘೋಷಿಸಿದರು. ಈ ಕಾರ್ಯಕ್ರಮವು ಈ ಭರವಸೆಗಳ ಈಡೇರಿಕೆಯನ್ನು ಸೂಚಿಸುತ್ತದೆ. ಜಾರ್ಖಂಡ್‌ನ ದಿಯೋಘರ್, ಒಡಿಶಾದ ರಾಯ್ ಗರ್ಹಾ, ಆಂಧ್ರಪ್ರದೇಶದ ಪ್ರಕಾಶಂ, ಅರುಣಾಚಲ ಪ್ರದೇಶದ ನಾಮ್ಸಾಯಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾದ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ನಡೆಸಿದರು.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು (ವಿಬಿಎಸ್‌ವೈ) ಇಂದು 15 ದಿನಗಳನ್ನು ಪೂರೈಸುತ್ತಿದೆ ಮತ್ತು ಈಗ ವೇಗ ಪಡೆದುಕೊಂಡಿದೆ ಎಂದರು. 'ವಿಕಾಸ ರಥ' ಎಂದು ಹೆಸರಿಸಲಾಗಿದ್ದ ʻವಿಬಿಎಸ್‌ವೈʼ ವ್ಯಾನ್‌ಗಳ ಹೆಸರನ್ನು 'ಮೋದಿ ಕಿ ಗ್ಯಾರಂಟಿ ವೆಹಿಕಲ್' ಎಂದು ಮರುನಾಮಕರಣ ಕಾರಣವಾದ ಜನರ ಪ್ರೀತಿ ಮತ್ತು ಭಾಗವಹಿಸುವಿಕೆಯ ಬಗ್ಗೆ ಪ್ರಧಾನಿ ಗಮನ ಸೆಳೆದರು. ಸರ್ಕಾರದ ಮೇಲಿನ ನಂಬಿಕೆಗಾಗಿ ನಾಗರಿಕರಿಗೆ ಅವರು ಧನ್ಯವಾದ ಅರ್ಪಿಸಿದರು. ʻವಿಬಿಎಸ್‌ವೈʼ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಜನರ ಉತ್ಸಾಹ, ಉತ್ಸಾಹ ಮತ್ತು ಸಂಕಲ್ಪವನ್ನು ಶ್ಲಾಘಿಸಿದರು. 'ಮೋದಿ ಕಿ ಗ್ಯಾರಂಟಿ ವಾಹನ' ಇದುವರೆಗೆ 12,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳನ್ನು ತಲುಪಿದೆ, ಅಲ್ಲಿ ಸುಮಾರು 30 ಲಕ್ಷ ನಾಗರಿಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ʻವಿಬಿಎಸ್‌ವೈʼನಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. "ಪ್ರತಿ ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿಯ ನೈಜ ಅರ್ಥವನ್ನು ಅರಿತುಕೊಳ್ಳುತ್ತಾರೆ," ಎಂದು ಹೇಳಿದ ಪ್ರಧಾನಮಂತ್ರಿಯವರು, ʻವಿಕಸತಿ ಭಾರತ ಸಂಕಲ್ಪ ಯಾತ್ರೆʼಯು ಒಂದು ಸರ್ಕಾರಿ ಉಪಕ್ರಮದ ಮಟ್ಟದಿಂದ ಒಂದು ಜನಾಂದೋಲನವಾಗಿ ರೂಪಾಂತರಗೊಂಡಿದೆ ಎಂದು ಬಣ್ಣಿಸಿದರು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೊಸ ಮತ್ತು ಹಳೆಯ ಫಲಾನುಭವಿಗಳು ಹಾಗೂ ʻವಿಬಿಎಸ್‌ವೈʼನಲ್ಲಿ ತೊಡಗಿರುವವರ ಡಿಜಿಟಲ್ ಚಟುವಟಿಕೆಗಳ ಹೆಚ್ಚಳದ ಬಗ್ಗೆ ಪ್ರಧಾನಿ ಗಮನ ಸೆಳೆದರು. ಅಂತಹ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ʻನಮೋʼ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಶ್ರೀ ಮೋದಿ ಅವರು ಸೂಚಿಸಿದರು. "ಯುವಕರು ʻವಿಬಿಎಸ್‌ವೈʼ ರಾಯಭಾರಿಗಳಾಗಿದ್ದಾರೆ" ಎಂದು ಅವರು ಹೇಳಿದರು. 'ಮೋದಿ ಕಿ ಗ್ಯಾರಂಟಿ ವಾಹನ'ವನ್ನು ಸ್ವಾಗತಿಸಲು ಅನೇಕ ಸ್ಥಳಗಳಲ್ಲಿ ಅಭಿಯಾನಗಳನ್ನು ಕೈಗೊಂಡಿರುವುದರಿಂದ ಗ್ರಾಮಗಳ ಸ್ವಚ್ಛತೆಯ ಮೇಲೆ ʻವಿಬಿಎಸ್‌ವೈʼ ಬೀರಿರುವ  ಪ್ರಭಾವದ ಬಗ್ಗೆ ಅವರು ಗಮನ ಸೆಳೆದರು. "ಭಾರತವು ಈಗ ಯಾರಿಂದಲೂ ತಡೆಯಲಾಗದ ಮತ್ತು ದಣಿವರಿಯದ ಸ್ಥಿತಿಯಲ್ಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿರ್ಧಾರವನ್ನು ಭಾರತದ ಜನರು ತೆಗೆದುಕೊಂಡಿದ್ದಾರೆ," ಎಂದು ಅವರು ಹೇಳಿದರು. ಇತ್ತೀಚೆಗೆ ಮುಕ್ತಾಯಗೊಂಡ ಹಬ್ಬದ ಋತುವಿನಲ್ಲಿ 'ವೋಕಲ್ ಫಾರ್ ಲೋಕಲ್'ಗೆ ಒತ್ತು ನೀಡಿದ ಬಗ್ಗೆಯೂ ಅವರು ಮಾತನಾಡಿದರು.

ʻವಿಬಿಎಸ್‌ವೈʼ ರಥಗಳನ್ನು ಯಶಸ್ವಿಯಾಗಿ ಜನರು ಸ್ವಾಗತಿಸಲು ಸರ್ಕಾರ ಮತ್ತು ಅದರ ಪ್ರಯತ್ನಗಳ ಮೇಲಿನ ನಂಬಿಕೆಯೇ ಕಾರಣ ಎಂದು ಪ್ರಧಾನಿ ಶ್ಲಾಘಿಸಿದರು. ಸರ್ಕಾರವು ನಾಗರಿಕರ ಮೂಲಭೂತ ಅಗತ್ಯಗಳನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮನೆಗಳು, ಶೌಚಾಲಯಗಳು, ವಿದ್ಯುತ್, ಅನಿಲ ಸಂಪರ್ಕಗಳು, ವಿಮೆ ಅಥವಾ ಬ್ಯಾಂಕ್ ಖಾತೆಗಳಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಸಮಯವನ್ನು ಪ್ರಧಾನಿ ಪ್ರಸ್ತಾಪಿಸಿದರು. ಲಂಚದಂತಹ ಭ್ರಷ್ಟಾಚಾರದ ಅಭ್ಯಾಸಗಳು ವ್ಯಾಪಕವಾಗಿದ್ದನ್ನು ಎತ್ತಿ ತೋರಿಸಿದರು. ತುಷ್ಟೀಕರಣ ಮತ್ತು ವೋಟ್‌ಬ್ಯಾಂಕ್ ರಾಜಕೀಯವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಆ ಸಮಯದಲ್ಲಿ ಸರ್ಕಾರದ ಮೇಲೆ ನಾಗರಿಕರ ವಿಶ್ವಾಸದ ಕೊರತೆಯಿತ್ತು ಎಂದು ಹೇಳಿದರು. ಪ್ರಸ್ತುತ ಸರ್ಕಾರವು ಕೆಟ್ಟ ಆಡಳಿತವನ್ನು ಉತ್ತಮ ಆಡಳಿತವಾಗಿ ಪರಿವರ್ತಿಸಿದೆ ಮತ್ತು ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ ಎಂದು ಅವರು ಒತ್ತಿಹೇಳಿದರು. "ಸರ್ಕಾರವು ನಾಗರಿಕರ ಅಗತ್ಯಗಳನ್ನು ಗುರುತಿಸಬೇಕು ಮತ್ತು ಅವರಿಗೆ ಅವರ ಹಕ್ಕುಗಳನ್ನು ನೀಡಬೇಕು. ಇದು ಸ್ವಾಭಾವಿಕ ನ್ಯಾಯ, ಇದು ಸಾಮಾಜಿಕ ನ್ಯಾಯ", ಎಂದು ಪ್ರಧಾನಿ ಉದ್ಗರಿಸಿದರು. ಈ ವಿಧಾನದಿಂದಾಗಿ, ಹೊಸ ಆಕಾಂಕ್ಷೆ ಹುಟ್ಟಿಕೊಂಡಿದೆ ಮತ್ತು ಕೋಟ್ಯಂತರ ನಾಗರಿಕರಲ್ಲಿ ನಿರ್ಲಕ್ಷ್ಯದ ಭಾವನೆ ಕೊನೆಗೊಂಡಿದೆ ಎಂದು ಪ್ರಧಾನಿ ಹೇಳಿದರು. "ಇತರರರ ಮೇಲಿನ ನಿರೀಕ್ಷೆ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿ ಮೋದಿಯವರ ಭರವಸೆ ಪ್ರಾರಂಭವಾಗುತ್ತದೆ," ಎಂದು ಶ್ರೀ ಮೋದಿ ಹೇಳಿದರು.

 

"ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ಮೋದಿ ಅಥವಾ ಮತ್ತಾವುದೇ ಸರ್ಕಾರವನ್ನು ಅಭಿವೃದ್ಧಿಪಡಿಸುವ ಸಂಕಲ್ಪವಲ್ಲ. ಇದು ಎಲ್ಲರನ್ನೂ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಸಂಕಲ್ಪವಾಗಿದೆ," ಎಂದು ಪ್ರಧಾನಿ ಒತ್ತಿ ಹೇಳಿದರು. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ಸರ್ಕಾರದ ಯೋಜನೆಗಳು ಮತ್ತು ಪ್ರಯೋಜನಗಳನ್ನು ಹಿಂದುಳಿದವರಿಗೆ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಇತ್ತೀಚೆಗಿನ ಬೆಳವಣಿಗೆಗಳನ್ನು ʻನಮೋʼ ಆ್ಯಪ್‌ನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಹೇಳಿದ ಪ್ರಧಾನಿ, ಡ್ರೋನ್ ಪ್ರದರ್ಶನಗಳು, ಆರೋಗ್ಯ ತಪಾಸಣಾ ಶಿಬಿರಗಳು ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕುಡಗೋಲು ಕೋಶ ರಕ್ತಹೀನತೆ ಪತ್ತೆಗೆ ತಪಾಸಣಾ ಶಿಬಿರಗಳ ಬಗ್ಗೆ ಒತ್ತಿ ಹೇಳಿದರು. ʻವಿಬಿಎಸ್‌ವೈʼ ಆಗಮನದೊಂದಿಗೆ ಅನೇಕ ಪಂಚಾಯಿತಿಗಳು ಈಗಾಗಲೇ ಪರಿಪೂರ್ಣತೆಯನ್ನು ಸಾಧಿಸಿವೆ ಮತ್ತು ಹಿಂದುಳಿದವರಿಗೆ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ʻಉಜ್ವಲʼ ಮತ್ತು ʻಆಯುಷ್ಮಾನ್ ಕಾರ್ಡ್ʼಗಳಂತಹ ಅನೇಕ ಯೋಜನೆಗಳಿಗೆ ಫಲಾನುಭವಿಗಳನ್ನು ತಕ್ಷಣವೇ ಸಂಪರ್ಕಿಸಲಾಗುತ್ತಿದೆ ಮತ್ತು ಮೊದಲ ಹಂತದಲ್ಲಿ 40,000ಕ್ಕೂ ಹೆಚ್ಚು ಫಲಾನುಭವಿಗಳಿಗೆ ʻಉಜ್ವಲʼ ಅನಿಲ ಸಂಪರ್ಕಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ʻಮೈ ಭಾರತ್ʼ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುವಂತೆ ಮತ್ತು ʻಮೈ ಭಾರತ್ʼ ಅಭಿಯಾನಕ್ಕೆ ಸೇರಿಕೊಳ್ಳುವಂತೆ ಅವರು ಯುವಕರನ್ನು ಒತ್ತಾಯಿಸಿದರು.

ʻವಿಬಿಎಸ್‌ವೈʼ ಪ್ರಾರಂಭದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು, ಇದು - ಭಾರತದ ನಾರಿ ಶಕ್ತಿ, ಯುವ ಶಕ್ತಿ, ಭಾರತದ ರೈತರು ಮತ್ತು ಬಡ ಕುಟುಂಬಗಳು ಎಂಬ 'ವಿಕಸಿತ ಭಾರತ'ದ 4 ಅಮೃತ ಸ್ತಂಭಗಳನ್ನು ಆಧರಿಸಿದೆ ಎಂದು ಒತ್ತಿಹೇಳಿದರು. ಈ ನಾಲ್ಕು ವರ್ಗಗಳ ಪ್ರಗತಿಯು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುತ್ತದೆ ಎಂದರು. ಜನರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ಬಡ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲು ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿ, ಮಹಿಳೆಯರ ಸಮಸ್ಯೆಗಳನ್ನು ನಿಭಾಯಿಸುವ ಮೂಲಕ ಭಾರತದ ಮಹಿಳೆಯರ ಸಬಲೀಕರಣ ಹಾಗೂ ಭಾರತದ ರೈತರ ಆದಾಯ ಮತ್ತು ಸಾಮರ್ಥ್ಯಗಳ ಸುಧಾರಣೆಗೆ ಸರ್ಕಾರ ಶ್ರಮಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. "ಬಡವರು, ಮಹಿಳೆಯರು, ರೈತರು ಮತ್ತು ಯುವಕರ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

 

ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಮತ್ತು ಬಡ ಕುಟುಂಬಗಳಿಗೆ ಅಗ್ಗದ ಬೆಲೆಯಲ್ಲಿ ಔಷಧಗಳನ್ನು ಒದಗಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಇತರ ಎರಡು ಬೆಳವಣಿಗೆಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ʻಪಿಎಂ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಗಳ ಪ್ರಾರಂಭದ ಬಗ್ಗೆ ಮಾತನಾಡಿದ ಪ್ರಧಾನಿ, ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮಾಡಿದ ʻಡ್ರೋನ್ ದೀದಿʼ ಘೋಷಣೆಯನ್ನು ಸ್ಮರಿಸಿದರು. ಮುಂಬರುವ ಸಮಯದಲ್ಲಿ ಡ್ರೋನ್ ಪೈಲಟ್‌ಗಳಿಗೆ ತರಬೇತಿಯೊಂದಿಗೆ 15,000 ಸ್ವಸಹಾಯ ಗುಂಪುಗಳಿಗೆ ಡ್ರೋನ್‌ಗಳು ಲಭ್ಯವಾಗಲಿವೆ ಎಂದು ಮಾಹಿತಿ ನೀಡಿದರು. ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಡೆಯುತ್ತಿರುವ ಅಭಿಯಾನವನ್ನು ʻಡ್ರೋನ್ ದೀದಿʼ ಉಪಕ್ರಮ ಬಲಪಡಿಸುತ್ತದೆ ಮತ್ತು ಹೆಚ್ಚುವರಿ ಆದಾಯದ ಸಾಧನಗಳನ್ನು ಒದಗಿಸುತ್ತದೆ ಎಂದು ಅವರು ಒತ್ತಿಹೇಳಿದರು. ಇದರೊಂದಿಗೆ, ದೇಶದ ರೈತರು ಡ್ರೋನ್‌ಗಳಂತಹ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪಡೆಯಲು ಸಾಧ್ಯವಾಗುತ್ತದೆ. ಇದು ಸಮಯ ಉಳಿತಾಯದ ಜತೆಗೆ, ಔಷಧ ಮತ್ತು ರಸಗೊಬ್ಬರಗಳ ಮೇಲೆ ಜನರು ಮಾಡುವ ಖರ್ಚನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

10,000ನೇ ಜನೌಷಧಿ ಕೇಂದ್ರದ ಉದ್ಘಾಟನೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ಇದು ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಗ್ಗದ ದರದಲ್ಲಿ ಔಷಧಗಳನ್ನು ಮಾರುವ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು. "ಜನೌಷಧ ಕೇಂದ್ರಗಳನ್ನು ಈಗ 'ಮೋದಿಯ ಔಷಧ ಅಂಗಡಿ' ಎಂದು ಕರೆಯಲಾಗುತ್ತಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ನಾಗರಿಕರ ಪ್ರೀತಿಗೆ ಧನ್ಯವಾದ ಅರ್ಪಿಸಿದರು. ಇಂತಹ ಕೇಂದ್ರಗಳಲ್ಲಿ ಸುಮಾರು 2000 ಬಗೆಯ ಔಷಧಗಳನ್ನು ಶೇ.80ರಿಂದ 90ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000ಕ್ಕೆ ವಿಸ್ತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಕ್ಕಾಗಿ ಅವರು ನಾಗರಿಕರನ್ನು, ವಿಶೇಷವಾಗಿ ದೇಶದ ಮಹಿಳೆಯರನ್ನು ಅಭಿನಂದಿಸಿದರು. ʻಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆʼಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. "ಮೋದಿಯವರ ಗ್ಯಾರಂಟಿ ಎಂದರೆ ಈಡೇರಿಕೆಯ ಗ್ಯಾರಂಟಿ," ಎಂದು ಅವರು ಹೇಳಿದರು.

ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಈ ಇಡೀ ಅಭಿಯಾನವನ್ನು ಪ್ರಾರಂಭಿಸುವಲ್ಲಿ ಇಡೀ ಸರ್ಕಾರಿ ಯಂತ್ರ ಮತ್ತು ಸರ್ಕಾರಿ ನೌಕರರ ಮಹತ್ವವನ್ನು ಒತ್ತಿ ಹೇಳಿದರು. ಕೆಲವು ವರ್ಷಗಳ ಹಿಂದೆ ʻಗ್ರಾಮ ಸ್ವರಾಜ್ʼ ಅಭಿಯಾನದ ಯಶಸ್ಸನ್ನು ಸ್ಮರಿಸಿದ ಅವರು, ಈ ಅಭಿಯಾನವನ್ನು ದೇಶದ ಸುಮಾರು 60 ಸಾವಿರ ಹಳ್ಳಿಗಳಲ್ಲಿ ಎರಡು ಹಂತಗಳಲ್ಲಿ ನಡೆಸಲಾಗಿದ್ದು, ಏಳು ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಮಾಹಿತಿ ನೀಡಿದರು. ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಸಾವಿರಾರು ಗ್ರಾಮಗಳನ್ನು ಸಹ ಇದರಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು. ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಈ ಅಭಿಯಾನದಲ್ಲಿ ಭಾಗಿಯಾಗಿರುವ ಸರ್ಕಾರಿ ಪ್ರತಿನಿಧಿಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. "ಸಂಪೂರ್ಣ ಪ್ರಾಮಾಣಿಕತೆಯಿಂದ ದೃಢವಾಗಿ ನಿಲ್ಲಿರಿ, ಪ್ರತಿ ಹಳ್ಳಿಯನ್ನು ತಲುಪುತ್ತಲೇ ಇರಿ. ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ʻಎಲ್ಲರ ಪ್ರಯತ್ನʼದಿಂದ ಮಾತ್ರ ಪೂರ್ಣಗೊಳಿಸಲು ಸಾಧ್ಯ,", ಎಂದು ಹೇಳುವ ಮೂಲಕ ಶ್ರೀ ಮೋದಿ ಅವರು ಮಾತು ಮುಗಿಸಿದರು.

ದೇಶದ ಅನೇಕ ಸ್ಥಳಗಳಿಂದ ಫಲಾನುಭವಿಗಳು ಮತ್ತು ಇತರೆ ಮಧ್ಯಸ್ಥಗಾರರು ಕಾರ್ಯಕ್ರಮದಲ್ಲಿ ವರ್ಚ್ಯುಯಲ್‌ ಆಗಿ ಪಾಲ್ಗೊಂಡರು. ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಸಹ ವರ್ಚ್ಯುಯಲ್‌ ಆಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಸರ್ಕಾರದ ಪ್ರಮುಖ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಉದ್ದೇಶದಿಂದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತಿದೆ. ಯೋಜನೆಗಳ ಪ್ರಯೋಜನಗಳು ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಕಾಲಮಿತಿಯೊಳಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.

ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ಪ್ರಧಾನಮಂತ್ರಿಯವರು ʻಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರʼಕ್ಕೆ ಚಾಲನೆ ನೀಡಿದರು. ಇದು ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್ಎಚ್‌ಜಿ) ಡ್ರೋನ್‌ಗಳನ್ನು ಒದಗಿಸುತ್ತದೆ, ಇದರಿಂದ ಅವರು ಜೀವನೋಪಾಯದ ಸಹಾಯಕ್ಕಾಗಿ ಈ ತಂತ್ರಜ್ಞಾನವನ್ನು ಬಳಸಬಹುದು. ಮುಂದಿನ ಮೂರು ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 15,000 ಡ್ರೋನ್‌ಗಳನ್ನು ಒದಗಿಸಲಾಗುವುದು. ಮಹಿಳೆಯರಿಗೆ ಡ್ರೋನ್‌ಗಳನ್ನು ಹಾರಿಸಲು ಮತ್ತು ಬಳಸಲು ಅಗತ್ಯ ತರಬೇತಿ ನೀಡಲಾಗುವುದು. ಈ ಉಪಕ್ರಮವು ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ.

ಆರೋಗ್ಯ ರಕ್ಷಣೆಯನ್ನು ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಆರೋಗ್ಯಕರ ಭಾರತದ ಪ್ರಧಾನಿಯವರ ಪ್ರಧಾನ ಆಶಯವಾಗಿದೆ.. ಕೈಗೆಟುಕುವ ಬೆಲೆಯಲ್ಲಿ ಔಷಧಗಳು ಲಭ್ಯವಾಗುವಂತೆ ಮಾಡಲು ʻಜನೌಷಧ ಕೇಂದ್ರʼ ಸ್ಥಾಪನೆಯು ಈ ನಿಟ್ಟಿನಲ್ಲಿ ಪ್ರಮುಖ ಉಪಕ್ರಮಗಳಲ್ಲಿ ಒಂದಾಗಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದಿಯೋಘರ್‌ನ ʻಏಮ್ಸ್ʼ ಆಸ್ಪತ್ರೆಯಲ್ಲಿ ದೇಶದ 10,000ನೇ ಜನೌಷಧ ಕೇಂದ್ರವನ್ನು ಲೋಕಾರ್ಪಣೆ ಸಮರ್ಪಿಸಿದರು. ಇದಲ್ಲದೆ, ದೇಶದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು 10,000 ದಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಿದರು.

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
India on track to become $10 trillion economy, set for 3rd largest slot: WEF President Borge Brende

Media Coverage

India on track to become $10 trillion economy, set for 3rd largest slot: WEF President Borge Brende
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಫೆಬ್ರವರಿ 2024
February 22, 2024

Appreciation for Bharat’s Social, Economic, and Developmental Triumphs with PM Modi’s Leadership