ಅಸ್ಸಾಂನ ಕ್ಯಾನ್ಸರ್ ಆಸ್ಪತ್ರೆಗಳು ಈಶಾನ್ಯ ಮತ್ತು ದಕ್ಷಿಣ ಏಷ್ಯಾದಲ್ಲಿ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ
ಆರೋಗ್ಯದ ನಿಟ್ಟಿನಲ್ಲಿ ಏಳು ಆಧಾರಸ್ತಂಭಗಳಾಗಿ 'ಸ್ವಾಸ್ಥ್ಯ ಕೆ ಸಪ್ತರ್ಷಿಸಿ' ಬಗ್ಗೆ ವಿಸ್ತೃತವಾಗಿ ವಿವರಿಸಿದ ಪ್ರಧಾನಿ
"ಇಡೀ ದೇಶದ ನಾಗರಿಕರು ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಕೇಂದ್ರ ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತಾಗಬೇಕು, ಅದಕ್ಕೆ ಯಾವುದೇ ನಿರ್ಬಂಧ ಇರಬಾರದು ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಇದು ಒಂದು ರಾಷ್ಟ್ರ, ಒಂದು ಆರೋಗ್ಯದ ಆಶಯವಾಗಿದೆ" ಎಂದು ಹೇಳಿದರು.
"ಚಹಾ ತೋಟಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕುಟುಂಬಗಳಿಗೆ ಉತ್ತಮ ಜೀವನವನ್ನು ನೀಡಲು ಕೇಂದ್ರ ಮತ್ತು ಅಸ್ಸಾಂ ಸರಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ."

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಬ್ರುಗಢದಲ್ಲಿ ನಡೆದ ಸಮಾರಂಭದಲ್ಲಿ ಅಸ್ಸಾಂನ ಆರು ಕ್ಯಾನ್ಸರ್ ಆಸ್ಪತ್ರೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಕ್ಯಾನ್ಸರ್ ಆಸ್ಪತ್ರೆಗಳನ್ನು ದಿಬ್ರುಗಢ, ಕೋಕ್ರಜಾರ್, ಬಾರ್ಪೇಟಾ, ದರ್ರಾಂಗ್, ತೇಜ್‌ಪುರ್‌, ಲಖಿಂಪುರ್ ಮತ್ತು ಜೋರ್ಹತ್‌ನಲ್ಲಿ ನಿರ್ಮಿಸಲಾಗಿದೆ. ದಿನದ ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಮಂತ್ರಿಯವರು ದಿಬ್ರುಗಢದ ಹೊಸ ಆಸ್ಪತ್ರೆಯ ಆವರಣಕ್ಕೆ ಭೇಟಿ ನೀಡಿ ಲೋಕಾರ್ಪಣೆ ನೆರವೇರಿಸಿದರು. ಯೋಜನೆಯ 2ನೇ ಹಂತದಲ್ಲಿ ನಿರ್ಮಾಣವಾಗಲಿರುವ ಧುಬ್ರಿ, ನಲ್ಬರಿ, ಗೋಲ್ಪಾರಾ, ನಾಗೌನ್, ಶಿವಸಾಗರ್, ತಿನ್ಸುಕಿಯಾ ಮತ್ತು ಗೋಲಾಘಾಟ್‌ಗಳಲ್ಲಿನ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಅಸ್ಸಾಂ ರಾಜ್ಯಪಾಲ ಶ್ರೀ ಜಗದೀಶ್ ಮುಖಿ, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, ಶ್ರೀ ರಾಮೇಶ್ವರ್ ತೇಲಿ, ಮಾಜಿ ಸಿಜೆಐ ಮತ್ತು ರಾಜ್ಯಸಭಾ ಸದಸ್ಯ ಶ್ರೀ ರಂಜನ್ ಗೊಗೊಯ್ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಶ್ರೀ ರತನ್ ಟಾಟಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಹಾಲಿ ಋತುವಿನ ಸಂಭ್ರಮೋತ್ಸಾಹದ ಬಗ್ಗೆ ಮೊದಲಿಗೆ ಗಮನ ಸೆಳೆದರು ಮತ್ತು ಅಸ್ಸಾಂನ ಮಹಾನ್ ಪುತ್ರರು ಮತ್ತು ಪುತ್ರಿಯರಿಗೆ ಗೌರವ ನಮನ ಸಲ್ಲಿಸಿದರು. ಇಂದು ಲೋಕಾರ್ಪಣೆಗೊಂಡ ಮತ್ತು ಶಂಕುಸ್ಥಾಪನೆ ನೆರವೇರಿಸಲಾದ ಅಸ್ಸಾಂನ ಕ್ಯಾನ್ಸರ್ ಆಸ್ಪತ್ರೆಗಳು ಈಶಾನ್ಯ ಹಾಗೂ ದಕ್ಷಿಣ ಏಷ್ಯಾದಲ್ಲಿ ಆರೋಗ್ಯ ಸಾಮರ್ಥ್ಯವನ್ನು ಹೆಚ್ಚಿಸಲಿವೆ ಎಂದು ಪ್ರಧಾನಿ ಹೇಳಿದರು. ಅಸ್ಸಾಂನಲ್ಲಿ ಮಾತ್ರವಲ್ಲದೆ ಈಶಾನ್ಯದಲ್ಲಿಯೂ ಕ್ಯಾನ್ಸರ್ ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಒಪ್ಪಿಕೊಂಡ ಪ್ರಧಾನಮಂತ್ರಿಯವರು, "ನಮ್ಮ ಕಡುಬಡವರು, ಮಧ್ಯಮ ವರ್ಗದ ಕುಟುಂಬಗಳು ಇದರಿಂದ ಹೆಚ್ಚು ಬಾಧಿತವಾಗಿವೆ" ಎಂದು ಹೇಳಿದರು. ಕ್ಯಾನ್ಸರ್ ಚಿಕಿತ್ಸೆಗಾಗಿ, ಕೆಲವು ವರ್ಷಗಳ ಹಿಂದಿನವರೆಗೆ, ಇಲ್ಲಿನ ರೋಗಿಗಳು ದೊಡ್ಡ ನಗರಗಳಿಗೆ ಹೋಗಬೇಕಾಗಿತ್ತು, ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆಗೆ ಕಾರಣವಾಗುತ್ತಿತ್ತು. ಅಸ್ಸಾಂನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಯನ್ನು ಪರಿಹರಿಸಲು ಅನೇಕ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಶ್ರೀ ಶರ್ಮಾ ಮತ್ತು ಕೇಂದ್ರ ಸಚಿವ ಶ್ರೀ ಸೋನೊವಾಲ್ ಮತ್ತು ಟಾಟಾ ಟ್ರಸ್ಟ್ ಸಂಸ್ಥೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.  ಈ ವರ್ಷದ ಬಜೆಟ್‌ನಲ್ಲಿ 1500 ಕೋಟಿ ರೂಪಾಯಿಗಳ ʻಈಶಾನ್ಯಕ್ಕಾಗಿ ಪ್ರಧಾನಮಂತ್ರಿಗಳ ಅಭಿವೃದ್ಧಿ ಉಪಕ್ರಮʼ (PM-DeVINE) ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಲ್ಲೂ ಕ್ಯಾನ್ಸರ್ ಚಿಕಿತ್ಸೆಯೇ ಕೇಂದ್ರಬಿಂದುವಾಗಿದೆ. ಜೊತೆಗೆ ಗುವಾಹಟಿಯಲ್ಲೂ ಒಂದು ಚಿಕಿತ್ಸಾ ಕೇಂದ್ರವನ್ನು ಪ್ರಸ್ತಾಪಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
 
ಆರೋಗ್ಯ ಕ್ಷೇತ್ರದ ಬಗ್ಗೆ ಸರ್ಕಾರದ ದೃಷ್ಟಿಕೋನವನ್ನು ವಿವರಿಸಿದ ಪ್ರಧಾನಮಂತ್ರಿಯವರು, 'ಸ್ವಾಸ್ಥ್ಯ ಕೆ ಸಪ್ತರ್ಷಿಸಿ' ಬಗ್ಗೆ ಮಾತನಾಡಿದರು. ರೋಗವೇ ಉದ್ಭವಿಸಿದಂತೆ ನೋಡಿಕೊಳ್ಳುವುದು ಸರಕಾರದ ಪ್ರಯತ್ನವಾಗಿದೆ. "ಅದಕ್ಕಾಗಿಯೇ ನಮ್ಮ ಸರಕಾರವು ʻರೋಗತಡೆ ಆರೋಗ್ಯ ಸೇವೆʼಗೆ (ಪ್ರಿವೆಂಟಿವ್ ಹೆಲ್ತ್‌ ಕೇರ್‌ಗೆ) ಹೆಚ್ಚಿನ ಒತ್ತು ನೀಡಿದೆ. ಈ ಕಾರಣಕ್ಕಾಗಿ ಯೋಗ, ಫಿಟ್ನೆಸ್ ಸಂಬಂಧಿತ ಕಾರ್ಯಕ್ರಮಗಳು ನಡೆಯುತ್ತಿವೆ", ಎಂದು ಅವರು ಹೇಳಿದರು. ಎರಡನೆಯದಾಗಿ, ರೋಗವು ಉಂಟಾದರೆ, ಅದನ್ನು ಆರಂಭಿಕ ಹಂತದಲ್ಲೇ  ತಿಳಿದುಕೊಳ್ಳಬೇಕು. ಇದಕ್ಕಾಗಿ ದೇಶಾದ್ಯಂತ ಲಕ್ಷಾಂತರ ಹೊಸ ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಸರಕಾರದ ಗಮನ ಹರಿಸುತ್ತಿರುವ ಮೂರನೇ ಮುಖ್ಯ ವಿಷಯವೆಂದರೆ, ಜನರು ತಮ್ಮ ಮನೆಗಳ ಬಳಿಯೇ ಉತ್ತಮ ಪ್ರಾಥಮಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರಬೇಕು. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸುಧಾರಿಸಲಾಗುತ್ತಿದೆ. ನಾಲ್ಕನೇ ಪ್ರಯತ್ನವೆಂದರೆ ಬಡವರು ಅತ್ಯುತ್ತಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯುವಂತಾಗಬೇಕು. ಇದಕ್ಕಾಗಿ, ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳ ಅಡಿಯಲ್ಲಿ, ಭಾರತ ಸರ್ಕಾರವು 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ. ಉತ್ತಮ ಚಿಕಿತ್ಸೆಗಾಗಿ ದೊಡ್ಡ ನಗರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ನಮ್ಮ ಐದನೇ ಪ್ರಯತ್ನವಾಗಿದೆ.  ಇದಕ್ಕಾಗಿ, ನಮ್ಮ ಸರಕಾರವು ಆರೋಗ್ಯ ಮೂಲಸೌಕರ್ಯಗಳ ಮೇಲೆ ಅಭೂತಪೂರ್ವ ಹೂಡಿಕೆಗಳನ್ನು ಮಾಡುತ್ತಿದೆ. "2014ಕ್ಕಿಂತ ಮೊದಲು ದೇಶದಲ್ಲಿ ಕೇವಲ 7 ʻಏಮ್ಸ್‌ʼ ಗಳಿದ್ದವು. ಈ ಪೈಕಿ, ದೆಹಲಿಯಲ್ಲಿ ಒಂದನ್ನು ಹೊರತುಪಡಿಸಿ, ಬೇರೆಲ್ಲೂ ಎಂಬಿಬಿಎಸ್ ಕೋರ್ಸ್ ಅಥವಾ ಒಪಿಡಿ ಇರಲಿಲ್ಲ, ಅವುಗಳಲ್ಲಿ ಕೆಲವು ಅಪೂರ್ಣವಾಗಿದ್ದವು. ನಾವು ಇವೆಲ್ಲವನ್ನೂ ಸರಿಪಡಿಸಿದ್ದೇವೆ ಮತ್ತು ದೇಶದಲ್ಲಿ 16 ಹೊಸ `ಏಮ್ಸ್’ಗಳನ್ನು ಘೋಷಿಸಿದ್ದೇವೆ. ಅವುಗಳಲ್ಲಿ ಗುವಾಹಟಿ ಏಮ್ಸ್ ಸಹ ಒಂದಾಗಿದೆ. ಸರಕಾರದ ದೂರದೃಷ್ಟಿಯ ಆರನೇ ಅಂಶದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ನಮ್ಮ ಸರಕಾರವು ವೈದ್ಯರ ಸಂಖ್ಯೆಯಲ್ಲಿನ ಕೊರತೆಯನ್ನು ಪರಿಹರಿಸುತ್ತಿದೆ. ಕಳೆದ ಏಳು ವರ್ಷಗಳಲ್ಲಿ, ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿಗೆ 70 ಸಾವಿರಕ್ಕೂ ಹೆಚ್ಚು ಹೊಸ ಸೀಟುಗಳನ್ನು ಸೇರಿಸಲಾಗಿದೆ. ನಮ್ಮ ಸರಕಾರ 5 ಲಕ್ಷಕ್ಕೂ ಹೆಚ್ಚು ಆಯುಷ್ ವೈದ್ಯರನ್ನು ಅಲೋಪಥಿಕ್ ವೈದ್ಯರಿಗೆ ಸರಿಸಮನಾಗಿ ನೋಡಿಕೊಳ್ಳುತ್ತಿದೆ. ಸರ್ಕಾರದ ಏಳನೇ ಗಮನವೆಂದರೆ ಅದು  ಆರೋಗ್ಯ ಸೇವೆಗಳ ಡಿಜಿಟಲೀಕರಣ. ಚಿಕಿತ್ಸೆಗಾಗಿ ಉದ್ದನೆಯ ಸರತಿ ಸಾಲುಗಳನ್ನು ತೊಡೆದುಹಾಕುವುದು, ಚಿಕಿತ್ಸೆಯ ಹೆಸರಿನಲ್ಲಿ ಸಮಸ್ಯೆಗಳನ್ನು ತೊಡೆದುಹಾಕುವುದು ಸರಕಾರದ ಪ್ರಯತ್ನವಾಗಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಶ್ರೀ ಮೋದಿ ಹೇಳಿದರು. "ಇಡೀ ದೇಶದ ನಾಗರಿಕರು ದೇಶದಲ್ಲಿ ಯಾವುದೇ ಮೂಲೆಯಿಂದಲೂ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಂತಾಗಬೇಕು. ಅದಕ್ಕೆ ಯಾವುದೇ ನಿರ್ಬಂಧ ಇರಬಾರದು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇದು ʻಒಂದು ರಾಷ್ಟ್ರ, ಒಂದು ಆರೋಗ್ಯʼದ ಆಶಯವಾಗಿದೆ. ಈ ಆಶಯವೇ 100 ವರ್ಷಗಳಲ್ಲೇ ಅತಿದೊಡ್ಡ ಸಾಂಕ್ರಾಮಿಕದ ಸಮಯದಲ್ಲೂ ದೇಶಕ್ಕೆ ಶಕ್ತಿಯನ್ನು ನೀಡಿತು, ಸವಾಲನ್ನು ಎದುರಿಸಲು ಶಕ್ತಿಯನ್ನು ನೀಡಿತು,” ಎಂದು ಅವರು ಹೇಳಿದರು.
 
ಕ್ಯಾನ್ಸರ್ ಚಿಕಿತ್ಸೆಗೆ ವಿಪರೀತ ವೆಚ್ಚವಾಗುವ ಹಿನ್ನೆಲೆಯಲ್ಲಿ, ಇದು ಜನರ ಮನಸ್ಸಿನಲ್ಲಿ ಚಿಕಿತ್ಸೆ ಪಡೆಯಲು ಒಂದು ದೊಡ್ಡ ತಡೆಗೋಡೆಯಾಗಿದೆ ಎಂದು ಪ್ರಧಾನಿ ಹೇಳಿದರು. ವಿಶೇಷವಾಗಿ, ಮಹಿಳೆಯರು ಕುಟುಂಬವನ್ನು ಸಾಲ ಮತ್ತು ಬಡತನಕ್ಕೆ ತಳ್ಳುವ ಸಾಧ್ಯೆತ ಹಿನ್ನೆಲೆಯಲ್ಲಿ ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದರು. ಸರ್ಕಾರವು ಅನೇಕ ಔಷಧಗಳ ವೆಚ್ಚವನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡುವ ಮೂಲಕ ಕ್ಯಾನ್ಸರ್ ಔಷಧಗಳನ್ನು ಕೈಗೆಟುಕುವಂತೆ ಮಾಡುತ್ತಿದೆ, ಕನಿಷ್ಠ 1000 ಕೋಟಿ ರೂ.ಗಳನ್ನು ರೋಗಿಗಳಿಗೆ ಉಳಿತಾಯ ಮಾಡುತ್ತಿದೆ. ಜನೌಷಧ ಕೇಂದ್ರಗಳಲ್ಲಿ ಈಗ 900ಕ್ಕೂ ಹೆಚ್ಚು ಔಷಧಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ʻಆಯುಷ್ಮಾನ್ ಭಾರತ್ʼ ಯೋಜನೆಯಡಿಯ ಅನೇಕ ಫಲಾನುಭವಿಗಳಲ್ಲಿ ಕ್ಯಾನ್ಸರ್ ರೋಗಿಗಳೂ ಸೇರಿದ್ದಾರೆ.
 
ʻಆಯುಷ್ಮಾನ್ ಭಾರತ್ʼ ಮತ್ತು ʻವೆಲ್‌ನೆಸ್ ಕೇಂದ್ರಗಳುʼ ಕ್ಯಾನ್ಸರ್ ಪ್ರಕರಣಗಳ  ಶೀಘ್ರ ಪತ್ತೆಯನ್ನು ಖಾತರಿಪಡಿಸುತ್ತವೆ ಎಂದು ಪ್ರಧಾನಿ ಹೇಳಿದರು. ಅಸ್ಸಾಂ ಮತ್ತು ದೇಶದ ಇತರ ಭಾಗಗಳಲ್ಲಿನ ವೆಲ್‌ನೆಸ್‌ ಕೇಂದ್ರಗಳಲ್ಲಿ 15 ಕೋಟಿಗೂ ಹೆಚ್ಚು ಜನರು ಕ್ಯಾನ್ಸರ್ ತಪಾಸಣೆಗೆ ಒಳಗಾಗಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಿದ್ದಕ್ಕಾಗಿ ಅಸ್ಸಾಂ ಸರಕಾರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಮುಖ್ಯಮಂತ್ರಿ ಮತ್ತು ಅವರ ತಂಡವು ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ನಿರ್ಮಾಣದ ರಾಷ್ಟ್ರೀಯ ಸಂಕಲ್ಪವನ್ನು ಕಾರ್ಯಗತಗೊಳಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಆಮ್ಲಜನಕದಿಂದ ಹಿಡಿದು ವೆಂಟಿಲೇಟರ್‌ಗಳವರೆಗೆ ಎಲ್ಲಾ ಸೌಲಭ್ಯಗಳನ್ನು ಖಾತರಿಪಡಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು. ಮಕ್ಕಳಿಗೆ ಲಸಿಕೆ ನೀಡಲು ಮತ್ತು ವಯಸ್ಕರಿಗೆ ಮುಂಜಾಗ್ರತಾ ಡೋಸ್‌ಗಳನ್ನು ನೀಡಲು ಅನುಮೋದಿಸುವ ಮೂಲಕ ಸರಕಾರವು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಶ್ರೀ ಮೋದಿ ಅವರು ಮನವಿ ಮಾಡಿದರು.
 
ಚಹಾ ತೋಟಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕುಟುಂಬಗಳಿಗೆ ಉತ್ತಮ ಜೀವನವನ್ನು ನೀಡಲು ಕೇಂದ್ರ ಮತ್ತು ಅಸ್ಸಾಂ ಸರಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ಉಚಿತ ಪಡಿತರದಿಂದ ಹಿಡಿದು ʻಮನೆ ಮನೆಗೆ ಜಲʼ ಯೋಜನೆ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳವರೆಗೆ, ಅಸ್ಸಾಂ ಸರಕಾರವು ಚಹಾ ತೋಟಗಳಲ್ಲಿನ ಕುಟುಂಬಗಳನ್ನು ತ್ವರಿತವಾಗಿ ತಲುಪುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
 
ಪ್ರಧಾನಮಂತ್ರಿಯವರು ಜನರ ಕಲ್ಯಾಣ ಕುರಿತ ಬದಲಾದ ಪರಿಕಲ್ಪನೆಯ ಬಗ್ಗೆ ಗಮನ ಸೆಳೆದರು. ಇಂದು, ಸಾರ್ವಜನಿಕ ಕಲ್ಯಾಣದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಈ ಮೊದಲು, ಸಾರ್ವಜನಿಕ ಕಲ್ಯಾಣವೆಂದರೆ ಅದು ಕೇವಲ ಕೆಲವು ಸಬ್ಸಿಡಿಗಳಿಗೆ ಮಾತ್ರ ಸೀಮಿತವಾಗಿರುವುದು ಕಂಡು ಬರುತ್ತಿತ್ತು. ಮೂಲಸೌಕರ್ಯ, ಸಂಪರ್ಕ ಯೋಜನೆಗಳನ್ನು ಜನರ ಕಲ್ಯಾಣದೊಂದಿಗೆ ನಂಟು  ಮಾಡುತ್ತಿರಲಿಲ್ಲ. ಆದರೆ, ಸಂಪರ್ಕದ ಅನುಪಸ್ಥಿತಿಯಲ್ಲಿ, ಸಾರ್ವಜನಿಕ ಸೇವೆಗಳ ವಿತರಣೆಯು ತುಂಬಾ ಕಷ್ಟಕರವಾಗಿತ್ತು. ಈಗ ದೇಶವು ಕಳೆದ ಶತಮಾನದ ಪರಿಕಲ್ಪನೆಗಳನ್ನು ಬಿಟ್ಟು ಮುಂದೆ ಸಾಗುತ್ತಿದೆ. ಅಸ್ಸಾಂನಲ್ಲಿ, ರಸ್ತೆ, ರೈಲು ಮತ್ತು ವಾಯು ಜಾಲ ವಿಸ್ತರಣೆಯು ಗೋಚರಿಸುತ್ತಿದೆ. ಇದು ಬಡವರು, ಯುವಕರು, ಮಹಿಳೆಯರು, ಮಕ್ಕಳು, ಅವಕಾಶ ವಂಚಿತರು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ʼ ಎಂಬ ಆಶಯದೊಂದಿಗೆ ನಾವು ಅಸ್ಸಾಂ ಮತ್ತು ದೇಶದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇವೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಅವರು ಮಾತು ಮುಕ್ತಾಯಗೊಳಿಸಿದರು.
 
ಅಸ್ಸಾಂ ಸರಕಾರ ಮತ್ತು ʻಟಾಟಾ ಟ್ರಸ್ಟ್‌ʼನ ಜಂಟಿ ಉದ್ಯಮವಾದ ʻಅಸ್ಸಾಂ ಕ್ಯಾನ್ಸರ್ ಕೇರ್ ಫೌಂಡೇಶನ್ʼ, ರಾಜ್ಯದಾದ್ಯಂತ ಹರಡಿರುವ 17 ಕ್ಯಾನ್ಸರ್ ಆರೈಕೆ ಆಸ್ಪತ್ರೆಗಳ ಮೂಲಕ ದಕ್ಷಿಣ ಏಷ್ಯಾದಲ್ಲಿ ಅತಿದೊಡ್ಡ ಕೈಗೆಟುಕುವ ಕ್ಯಾನ್ಸರ್ ಆರೈಕೆ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಯೋಜನೆಯ ಮೊದಲ ಹಂತದ ಅಡಿಯಲ್ಲಿ, 10 ಆಸ್ಪತ್ರೆಗಳ ಪೈಕಿ, ಏಳು ಆಸ್ಪತ್ರೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಮೂರು ಆಸ್ಪತ್ರೆಗಳು ವಿವಿಧ ಹಂತದ ನಿರ್ಮಾಣ ಸ್ಥಿತಿಯಲ್ಲಿವೆ. ಯೋಜನೆಯ ಎರಡನೇ ಹಂತವು ಇನ್ನೂ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.

 

 

 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
A decade of India’s transformative sanitation mission

Media Coverage

A decade of India’s transformative sanitation mission
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 3 ನವೆಂಬರ್ 2024
November 03, 2024

PM Modi's Vision for Viksit Bharat Takes Centre Stage as the Nation Continues its Upward Trajectory