ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ (NTEP) ಕುರಿತಾದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನಮಂತ್ರಿಯವರು 2024ರಲ್ಲಿ ಕ್ಷಯ ರೋಗಿಗಳ (ಟಿಬಿ) ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿ, ಯಶಸ್ವಿ ಕಾರ್ಯತಂತ್ರಗಳನ್ನು ರಾಷ್ಟ್ರವ್ಯಾಪಿ ಹೆಚ್ಚಿಸಲು ಕರೆ ನೀಡಿದರು ಮತ್ತು ಭಾರತದಿಂದ ಟಿಬಿ ನಿರ್ಮೂಲನೆ ಮಾಡುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿಯವರು ಇತ್ತೀಚೆಗೆ ಸಂಪನ್ನಗೊಂಡ 100 ದಿನಗಳ ಟಿಬಿ ಮುಕ್ತ ಭಾರತ ಅಭಿಯಾನದ ಪ್ರಗತಿಯನ್ನು ಪರಾಮರ್ಶಿಸಿದರು. ಹೆಚ್ಚು ಗಮನಹರಿಸಬೇಕಾದ ಜಿಲ್ಲೆಗಳಲ್ಲಿ ನಡೆಸಲಾದ ಈ ಅಭಿಯಾನದಲ್ಲಿ, 12.97 ಕೋಟಿ ಅಶಕ್ತ ವ್ಯಕ್ತಿಗಳ ತಪಾಸಣೆ ಕೈಗೊಳ್ಳಲಾಯಿತು. ಇದರ ಫಲವಾಗಿ, 7.19 ಲಕ್ಷ ಟಿಬಿ ಪ್ರಕರಣಗಳು ಪತ್ತೆಯಾದವು; ಈ ಪೈಕಿ 2.85 ಲಕ್ಷ ಪ್ರಕರಣಗಳು ಯಾವುದೇ ರೋಗಲಕ್ಷಣಗಳನ್ನು ಹೊಂದಿರಲಿಲ್ಲ. ಅಭಿಯಾನದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಹೊಸ ನಿ-ಕ್ಷಯ್ ಮಿತ್ರರು ಈ ಮಹತ್ತರ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಇದು ಜನ ಭಾಗಿದಾರಿಕೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಟಿಬಿ ನಿರ್ಮೂಲನೆಗಾಗಿ ಸಮಗ್ರ ಸರ್ಕಾರ ಮತ್ತು ಸಮಗ್ರ ಸಮಾಜದ ಸಹಭಾಗಿತ್ವದ ವಿಧಾನವನ್ನು ರಾಷ್ಟ್ರವ್ಯಾಪಿ ತ್ವರಿತವಾಗಿ ವಿಸ್ತರಿಸಲು ಸಾಧ್ಯವಿದೆ ಎಂಬುದನ್ನು ಇದು ನಿರೂಪಿಸಿದೆ.
ಪ್ರಧಾನಮಂತ್ರಿಯವರು ಕ್ಷಯ ರೋಗಿಗಳ (ಟಿಬಿ) ಪ್ರವೃತ್ತಿಯನ್ನು ನಗರ ಅಥವಾ ಗ್ರಾಮೀಣ ಪ್ರದೇಶಗಳ ಆಧಾರದ ಮೇಲೆ ಮತ್ತು ಅವರ ಉದ್ಯೋಗಗಳ ಆಧಾರದ ಮೇಲೆ ವಿಶ್ಲೇಷಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇದು ಆರಂಭಿಕ ಪರೀಕ್ಷೆ ಮತ್ತು ಚಿಕಿತ್ಸೆಯ ಅಗತ್ಯವಿರುವ ಗುಂಪುಗಳನ್ನು, ವಿಶೇಷವಾಗಿ ನಿರ್ಮಾಣ, ಗಣಿಗಾರಿಕೆ, ಜವಳಿ ಗಿರಣಿಗಳು ಮತ್ತು ಇದೇ ರೀತಿಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರನ್ನು ಗುರುತಿಸಲು ಸಹಾಯ ಮಾಡುತ್ತದೆ. ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನ ಸುಧಾರಿಸಿದಂತೆ, ನಿ-ಕ್ಷಯ್ ಮಿತ್ರರು (ಟಿಬಿ ರೋಗಿಗಳ ಬೆಂಬಲಿಗರು) ಟಿಬಿ ರೋಗಿಗಳೊಂದಿಗೆ ಸಂಪರ್ಕ ಸಾಧಿಸಲು ತಂತ್ರಜ್ಞಾನವನ್ನು ಬಳಸಲು ಪ್ರೋತ್ಸಾಹಿಸಬೇಕು. ಸಂವಾದಾತ್ಮಕ ಮತ್ತು ಬಳಸಲು ಸುಲಭವಾದ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳು ರೋಗ ಮತ್ತು ಅದರ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳಲು ಅವರು ಸಹಾಯ ಮಾಡಬಹುದು.
ಪ್ರಧಾನಮಂತ್ರಿಯವರು, ನಿಯಮಿತ ಚಿಕಿತ್ಸೆಯಿಂದಾಗಿ ಟಿಬಿ ಈಗ ಗುಣಪಡಿಸಬಹುದಾದ್ದರಿಂದ, ಸಾರ್ವಜನಿಕರಲ್ಲಿ ಭಯ ಕಡಿಮೆಯಾಗಬೇಕು ಮತ್ತು ಅರಿವು ಹೆಚ್ಚಾಗಬೇಕು ಎಂದು ಹೇಳಿದರು.
ಟಿಬಿ ನಿರ್ಮೂಲನೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಮೂಲಕ ಸ್ವಚ್ಛತೆಯ ಮಹತ್ವವನ್ನು ಪ್ರಧಾನಮಂತ್ರಿಯವರು ಎತ್ತಿ ಹಿಡಿದರು. ಪ್ರತಿಯೊಬ್ಬ ರೋಗಿಯು ಸರಿಯಾದ ಚಿಕಿತ್ಸೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವೈಯಕ್ತಿಕವಾಗಿ ಅವರನ್ನು ತಲುಪುವ ಪ್ರಯತ್ನಗಳನ್ನು ಮಾಡುವಂತೆ ಅವರು ಆಗ್ರಹಿಸಿದರು.
ಸಭೆಯ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು WHO ಗ್ಲೋಬಲ್ ಟಿಬಿ ವರದಿ 2024ರ ಪ್ರೋತ್ಸಾಹದಾಯಕ ಸಂಶೋಧನೆಗಳನ್ನು ಉಲ್ಲೇಖಿಸಿದರು. ಈ ವರದಿಯ ಪ್ರಕಾರ, 2015 ಮತ್ತು 2023 ರ ನಡುವೆ ಟಿಬಿ ಸಂಭವದಲ್ಲಿ (ಲಕ್ಷ ಜನಸಂಖ್ಯೆಗೆ 237 ರಿಂದ 195 ಕ್ಕೆ) 18% ರಷ್ಟು ಇಳಿಕೆಯಾಗಿದೆ, ಇದು ಜಾಗತಿಕ ವೇಗಕ್ಕಿಂತ ಎರಡು ಪಟ್ಟು ಹೆಚ್ಚು. ಅಲ್ಲದೆ, ಟಿಬಿ ಮರಣ ಪ್ರಮಾಣದಲ್ಲಿ 21% ರಷ್ಟು ಕುಸಿತ ಕಂಡಿದೆ (ಲಕ್ಷ ಜನಸಂಖ್ಯೆಗೆ 28 ರಿಂದ 22 ಕ್ಕೆ) ಮತ್ತು 85% ರಷ್ಟು ಚಿಕಿತ್ಸಾ ವ್ಯಾಪ್ತಿ ಸಾಧಿಸಲಾಗಿದೆ. ಇದು ಕಾರ್ಯಕ್ರಮದ ವ್ಯಾಪ್ತಿ ಮತ್ತು ಪರಿಣಾಮಕಾರಿತ್ವ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಸಭೆಯಲ್ಲಿ, ಪ್ರಧಾನಮಂತ್ರಿಯವರು ಕ್ಷಯ ರೋಗ (ಟಿಬಿ) ನಿರ್ಮೂಲನೆಗೆ ಸಂಬಂಧಿಸಿದ ಪ್ರಮುಖ ಮೂಲಸೌಕರ್ಯಗಳ ಬಲವರ್ಧನೆಯನ್ನು ಪರಾಮರ್ಶಿಸಿದರು. ಟಿಬಿ ರೋಗ ಪತ್ತೆಗಾಗಿರುವ ಜಾಲವನ್ನು ವಿಸ್ತರಿಸಲಾಗಿದ್ದು, ಪ್ರಸ್ತುತ 8,540 NAAT (ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಶನ್ ಟೆಸ್ಟಿಂಗ್) ಪ್ರಯೋಗಾಲಯಗಳು ಮತ್ತು ಮತ್ತು 87 ಕಲ್ಚರ್ ಮತ್ತು ಡ್ರಗ್ ಸೆನ್ಸಿಟಿಬಿಲಿಟಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ, 26,700 ಕ್ಕೂ ಅಧಿಕ ಎಕ್ಸ್-ರೇ ಘಟಕಗಳು ಲಭ್ಯವಿದ್ದು, ಇವುಗಳಲ್ಲಿ 500 ಕೃತಕ ಬುದ್ಧಿಮತ್ತೆ (AI) ಆಧಾರಿತ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಸಾಧನಗಳು ಸೇರಿವೆ ಮತ್ತು ಇನ್ನೂ 1,000 ಸಾಧನಗಳು ಅಳವಡಿಕೆಯ ಹಂತದಲ್ಲಿವೆ. ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಉಚಿತ ತಪಾಸಣೆ, ರೋಗ ನಿರ್ಣಯ, ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರದ ಬೆಂಬಲ ಸೇರಿದಂತೆ ಟಿಬಿಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ವಿಕೇಂದ್ರೀಕರಿಸಿರುವ ಕುರಿತು ಸಹ ಈ ಸಂದರ್ಭದಲ್ಲಿ ಪ್ರಮುಖವಾಗಿ ತಿಳಿಸಲಾಯಿತು.
ಹಲವಾರು ನೂತನ ಉಪಕ್ರಮಗಳನ್ನು ಪರಿಚಯಿಸಿರುವ ಕುರಿತು ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ: ಟಿಬಿ ಸ್ಕ್ರೀನಿಂಗ್ ಗಾಗಿ ಕೃತಕ ಬುದ್ಧಿಮತ್ತೆ (AI) ಸಹಾಯದ ಹ್ಯಾಂಡ್ ಹೆಲ್ಡ್ ಎಕ್ಸ್-ರೇ ಸಾಧನಗಳ ಬಳಕೆ; ಔಷಧ ನಿರೋಧಕ ಟಿಬಿಗೆ ಅಲ್ಪಾವಧಿಯ ಚಿಕಿತ್ಸಾ ವಿಧಾನ; ಹೊಸ ಸ್ಥಳೀಯ ಆಣ್ವಿಕ ರೋಗ ಪತ್ತೆ ತಂತ್ರಜ್ಞಾನಗಳು; ಹಾಗೂ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮಗಳು. ಗಣಿಗಳು, ಚಹಾ ತೋಟಗಳು, ನಿರ್ಮಾಣ ಸ್ಥಳಗಳು, ನಗರ ಕೊಳೆಗೇರಿಗಳು ಮುಂತಾದ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಟಿಬಿ ತಪಾಸಣೆ ಮತ್ತು ಆರಂಭಿಕ ರೋಗ ಪತ್ತೆಗೂ ವಿಶೇಷ ಗಮನ ನೀಡಲಾಗಿದೆ. ಪೌಷ್ಟಿಕಾಂಶದ ನೆರವು ಕಾರ್ಯಕ್ರಮಗಳ ಭಾಗವಾಗಿ, ನಿ-ಕ್ಷಯ್ ಪೋಷಣಾ ಯೋಜನೆಯಡಿ 2018 ರಿಂದ ಇಲ್ಲಿಯವರೆಗೆ 1.28 ಕೋಟಿ ಟಿಬಿ ರೋಗಿಗಳಿಗೆ ನೇರ ನಗದು ವರ್ಗಾವಣೆ (DBT) ಮಾಡಲಾಗಿದೆ ಮತ್ತು 2024 ರಲ್ಲಿ ನೀಡಲಾಗುತ್ತಿರುವ ಮಾಸಿಕ ಪ್ರೋತ್ಸಾಹ ಧನವನ್ನು ₹1,000 ಕ್ಕೆ ಏರಿಸಲಾಗಿದೆ. ನಿ-ಕ್ಷಯ್ ಮಿತ್ರ ಕಾರ್ಯಕ್ರಮದಡಿಯಲ್ಲಿ, 2.55 ಲಕ್ಷ ನಿ-ಕ್ಷಯ್ ಮಿತ್ರರಿಂದ 29.4 ಲಕ್ಷ ಆಹಾರ ಕಿಟ್ ಗಳು ವಿತರಣೆಯಾಗಿವೆ.
ಈ ಸಭೆಯಲ್ಲಿ, ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳಾದ ಡಾ. ಪಿ. ಕೆ. ಮಿಶ್ರಾ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ-2 ಶ್ರೀ ಶಕ್ತಿಕಾಂತ ದಾಸ್, ಪ್ರಧಾನಮಂತ್ರಿಯವರ ಸಲಹೆಗಾರರಾದ ಶ್ರೀ ಅಮಿತ್ ಖರೆ, ಆರೋಗ್ಯ ಕಾರ್ಯದರ್ಶಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Chaired a meeting on India’s mission to eliminate TB. Driven by active public participation, the movement has gained significant momentum over the last few years. Our Government remains committed to working closely with all stakeholders to realise the vision of a TB-free India. pic.twitter.com/axi2cJJOhV
— Narendra Modi (@narendramodi) May 13, 2025


