ಹೂಡಿಕೆ ಮತ್ತು ವ್ಯಾಪಾರಕ್ಕೆ ವಿಫುಲ ಅವಕಾಶವಿರುವ ಅಭಿವೃದ್ಧಿಶೀಲ ಕೇಂದ್ರವಾಗಿ ರಾಜ್ಯವು ತನ್ನ ಅಗಾಧ ಸಾಮರ್ಥ್ಯವನ್ನು ಈ ಕಾರ್ಯಕ್ರಮವು ಪ್ರದರ್ಶಿಸುತ್ತಿದೆ: ಪ್ರಧಾನಮಂತ್ರಿ
ದೇಶದ ಅಭಿವೃದ್ಧಿಯಲ್ಲಿ ಪೂರ್ವ ಭಾರತವು ಬೆಳವಣಿಗೆಯ ಎಂಜಿನ್ ಆಗಿದ್ದು, ಅದರಲ್ಲಿ ಒಡಿಶಾ ಪ್ರಮುಖ ಪಾತ್ರ ವಹಿಸುತ್ತದೆ: ಪ್ರಧಾನಮಂತ್ರಿ
ಭಾರತವು ಇಂದು ಕೋಟ್ಯಂತರ ಜನರ ಅಪೇಕ್ಷೆಪಡುತ್ತಿರುವ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ: ಪ್ರಧಾನಮಂತ್ರಿ
ಹೊಸ ಭಾರತದ ಆಶಾವಾದ ಹಾಗೂ ಸ್ವಂತಿಕೆಯನ್ನು ಸಾಂಕೇತಿಸುವ ಮೂಲಕ ಒಡಿಶಾ ಅತ್ಯುತ್ತಮವಾದ ರೀತಿಯಲ್ಲಿ ಪ್ರತಿನಿಧಿಸುತ್ತಿದೆ, ಹಾಗೆಯೇ ಒಡಿಶಾ ನಾಡಿನಲ್ಲಿರುವ ಅವಕಾಶಗಳು ಹಾಗೂ ಇಲ್ಲಿನ ಜನರು ಯಾವಾಗಲೂ ಉತ್ತಮ ಪ್ರದರ್ಶನ ನೀಡುವ ಉತ್ಸಾಹವನ್ನು ತೋರುತ್ತಲೇ ಬಂದಿದ್ದಾರೆ: ಪ್ರಧಾನಮಂತ್ರಿ
ಭಾರತವು ಹಸಿರು ಭವಿಷ್ಯ ಮತ್ತು ಹಸಿರು ತಂತ್ರಜ್ಞಾನದತ್ತ ಗಮನ ಕೇಂದ್ರೀಕರಿಸುತ್ತಿದೆ: ಪ್ರಧಾನಮಂತ್ರಿ
21ನೇ ಶತಮಾನದ ಭಾರತಕ್ಕೆ ಮೂಲಸೌಕರ್ಯ ಹಾಗೂ ಬಹು ಮಾದರಿಯ ಸಂಪರ್ಕವನ್ನು ಜೋಡಿಸುವ ಯುಗವೆನ್ನಬಹುದು- ಪ್ರಧಾನಮಂತ್ರಿ
ಯುವ ಪ್ರತಿಭೆಗಳ ದೊಡ್ಡ ಸಮೂಹ ಮತ್ತು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿರುವುದು ಭಾರತವು ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಹೊರಹೊಮ್ಮುವ ಉತ್ತಮ ಸಾಧ್ಯತೆಗಳನ್ನು ಒಳಗೊಂಡಿದೆ: ಪ್ರಧಾನಮಂತ್ರಿ
ಒಡಿಶಾ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಒಡಿಶಾದ ಭುವನೇಶ್ವರದಲ್ಲಿ "ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಸಮಾವೇಶ- 2025" ಹಾಗೂ ಮೇಕ್ ಇನ್ ಒಡಿಶಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, "2025ರ ಜನವರಿ ತಿಂಗಳಲ್ಲೇ ಒಡಿಶಾಗೆ ಇದು ತಮ್ಮ ಎರಡನೇ ಭೇಟಿಯಾಗಿದೆʼʼ ಎಂದು ಹೇಳುವ ಮೂಲಕ ʼಪ್ರವಾಸಿ ಭಾರತೀಯ ದಿವಸ್ 2025ʼ ಕಾರ್ಯಕ್ರಮವನ್ನು ಉದ್ಘಾಟಿಸಲು ತಾವು ಇದೇ ತಿಂಗಳು ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು. ಇದು ಒಡಿಶಾದಲ್ಲಿ ಈವರೆಗಿನ ಅತಿದೊಡ್ಡ ವ್ಯಾಪಾರ ಶೃಂಗಸಭೆಯಾಗಿದೆ ಎಂದು ಬಣ್ಣಿಸಿದ ಶ್ರೀ ಮೋದಿ ಅವರು, ಮೇಕ್ ಇನ್ ಒಡಿಶಾ ಸಮಾವೇಶ- 2025ರಲ್ಲಿ ಸುಮಾರು 5-6 ಪಟ್ಟು ಹೆಚ್ಚು ಹೂಡಿಕೆದಾರರು ಭಾಗವಹಿಸಿದ್ದಾರೆ ಎಂದು ಹೇಳಿದರು. ಹಾಗೆಯೇ ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಅವರು ಒಡಿಶಾ ಜನತೆ ಹಾಗೂ ಸರ್ಕಾರವನ್ನು ಅಭಿನಂದಿಸಿದರು.

"ಪೂರ್ವ ಭಾರತವು ದೇಶದ ಅಭಿವೃದ್ಧಿಯಲ್ಲಿ ಬೆಳವಣಿಗೆಯ ಎಂಜಿನ್ ಆಗಿದೆ ಮತ್ತು ಒಡಿಶಾ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಪ್ರಧಾನ ಮಂತ್ರಿಗಳು ಸಂತಸದಿಂದ ನುಡಿದರು. ಜಾಗತಿಕ ಬೆಳವಣಿಗೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದಾಗಲೂ ಅದರಲ್ಲಿ ಪೂರ್ವ ಭಾರತದ ಕೊಡುಗೆಗಳು ಗಮನಾರ್ಹವಾಗಿವೆ ಎಂದು ಐತಿಹಾಸಿಕ ದತ್ತಾಂಶಗಳಿಂದ ಸಾಬೀತಾಗುತ್ತದೆ ಎಂದು ಅವರು ಹೇಳಿದರು. ಪೂರ್ವ ಭಾರತದಲ್ಲಿ ಬೃಹತ್ ಕೈಗಾರಿಕಾ ಕೇಂದ್ರಗಳು, ಬಂದರುಗಳು, ವ್ಯಾಪಾರ ಕೇಂದ್ರಗಳಿರುವುದು ಮಾತ್ರವಲ್ಲದೆ, ಅದರಲ್ಲಿ ಒಡಿಶಾದ ಭಾಗವಹಿಸುವಿಕೆಯು ಗಮನಾರ್ಹವಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. "ಒಡಿಶಾ ರಾಜ್ಯವು ಆಗ್ನೇಯ ಏಷ್ಯಾದ ವ್ಯಾಪಾರದಲ್ಲಿ ಪ್ರಮುಖ ಕೇಂದ್ರವಾಗಿತ್ತು ಮತ್ತು ಬಂದರುಗಳು ಭಾರತಕ್ಕೆ ಪ್ರವೇಶ ದ್ವಾರಗಳಾಗಿದ್ದವು" ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಒಡಿಶಾದಲ್ಲಿ ಇಂದಿಗೂ ಬಾಲಿ ಯಾತ್ರೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು. ಇಂಡೋನೇಷ್ಯಾದ ಅಧ್ಯಕ್ಷರ ಇತ್ತೀಚಿನ ಭಾರತ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಗಳು, ತಮ್ಮ ಡಿಎನ್‌ಎಯಲ್ಲಿ ಒಡಿಶಾದ ಕುರುಹುಗಳು ಬಹುಶಃ ಇವೆ ಎಂಬುದಾಗಿ ಆ ಅಧ್ಯಕ್ಷರ ಮಾತುಗಳನ್ನು ಸ್ಮರಿಸಿದರು.

 

ಒಡಿಶಾ ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕಿಸುವ ಪರಂಪರೆಯನ್ನು ಸಂಭ್ರಮಿಸುತ್ತದೆ ಎಂದು ಹೇಳಿದ ಪ್ರಧಾನ ಮಂತ್ರಿಗಳು, 21ನೇ ಶತಮಾನದಲ್ಲಿ ಒಡಿಶಾ ಈಗ ಅದ್ಭುತ ಪರಂಪರೆಯ ಪುನರುತ್ಥಾನವನ್ನು ಆರಂಭಿಸಿದೆ ಎಂದು ಅವರು ಹೇಳಿದರು. ಸಿಂಗಾಪುರದ ಅಧ್ಯಕ್ಷರು ಇತ್ತೀಚೆಗೆ ಒಡಿಶಾಗೆ ಭೇಟಿ ನೀಡಿದ್ದು ಹಾಗೂ ಸಿಂಗಾಪುರವು ಒಡಿಶಾದೊಂದಿಗಿನ ತನ್ನ ಸಂಬಂಧದ ಬಗ್ಗೆ ಬಹಳ ಉತ್ಸಾಹದಿಂದಿರುವ ಕುರಿತೂ ಪ್ರಧಾನ ಮಂತ್ರಿಗಳು ಪ್ರಸ್ತಾಪಿಸಿದರು. ಆಸಿಯಾನ್ ರಾಷ್ಟ್ರಗಳು ಒಡಿಶಾದೊಂದಿಗೆ ವ್ಯಾಪಾರ ಮತ್ತು ಸಾಂಪ್ರದಾಯಿಕ ಸಂಪರ್ಕಗಳನ್ನು ಬಲಪಡಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿವೆ ಎಂದು ಅವರು ಒತ್ತಿ ಹೇಳಿದರು. ಸ್ವಾತಂತ್ರ್ಯದ ನಂತರ ಈ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಹಲವು ಅವಕಾಶಗಳು ತೆರೆದುಕೊಳ್ಳುತ್ತಿವೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಒಡಿಶಾದ ಅಭಿವೃದ್ಧಿ ಪ್ರಯಾಣದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಕಾಲಘಟ್ಟವಾಗಿದೆ ಎಂದು ಅವರು ಎಲ್ಲಾ ಹೂಡಿಕೆದಾರರಿಗೆ ಹೂಡಿಕೆ‌ ಮಾಡುವಂತೆ ಕರೆ ನೀಡಿದರು ಮತ್ತು ಅವರ ಹೂಡಿಕೆಯು ಯಶಸ್ಸಿನ ಹೊಸ ಎತ್ತರಕ್ಕೆ ಬೆಳೆಯಲಿದೆ  ಎಂಬುದಾಗಿ ಭರವಸೆ ನೀಡಿದರು.

"ಭಾರತವು ಕೋಟ್ಯಂತರ ಜನರ ಆಕಾಂಕ್ಷೆಗಳಿಂದ ನಡೆಸಲ್ಪಡುವ ಅಭಿವೃದ್ಧಿಯ ಹಾದಿಯಲ್ಲಿದೆ" ಎಂದ ಶ್ರೀ ಮೋದಿ ಅವರು ಎಐ (AI) ಎಂದರೆ ಕೃತಕ ಬುದ್ಧಿಮತ್ತೆ ಮತ್ತು ಭಾರತದ ಆಕಾಂಕ್ಷೆ (ಆಸ್ಪಿರೇಷನಲ್‌ ಇಂಡಿಯಾ) ಎರಡನ್ನೂ ಪ್ರತಿನಿಧಿಸುತ್ತದೆ. ಇದು ದೇಶದ ಶಕ್ತಿಯಾಗಿದೆ. ಜನರ ಅಗತ್ಯಗಳನ್ನು ಪೂರೈಸಿದಾಗ ಆಕಾಂಕ್ಷೆಗಳು ಬೆಳೆಯುತ್ತವೆ ಮತ್ತು ಕಳೆದ ದಶಕವು ಕೋಟ್ಯಂತರ ಜನರನ್ನು ಸಬಲೀಕರಣಗೊಳಿಸುವ ಮೂಲಕ ರಾಷ್ಟ್ರಕ್ಕೆ ಉಪಯುಕ್ತವಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು. ಒಡಿಶಾ ಈ ಆಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ಅತ್ಯುತ್ತಮ ರಾಜ್ಯವಾಗಿರುವ ಒಡಿಶಾ ನವ ಭಾರತದ ಆಶಾವಾದ ಮತ್ತು ಸ್ವಂತಿಕೆಯನ್ನು ಸಾಂಕೇತಿಸುತ್ತದೆ. ಒಡಿಶಾ ವಿಫುಲ ಅವಕಾಶಗಳನ್ನು ಹೊಂದಿರುವ ಜತೆಗೆ ಇಲ್ಲಿನ ಜನತೆ ಯಾವಾಗಲೂ ಅತ್ಯುತ್ತಮ ಪ್ರದರ್ಶನ ನೀಡುವ ಉತ್ಸಾಹವನ್ನು ತೋರುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು. ಗುಜರಾತ್‌ನಲ್ಲಿ ಒಡಿಶಾದ ಜನರ ಕೌಶಲ್ಯ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯನ್ನು ವೈಯಕ್ತಿಕವಾಗಿ ಕಂಡಿರುವ ಅನುಭವವನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು, ಒಡಿಶಾ ಹೊಸ ಅವಕಾಶಗಳ ತಾಣವಾಗಿ ಹೊರಹೊಮ್ಮುವುದರೊಂದಿಗೆ ರಾಜ್ಯವು ಶೀಘ್ರದಲ್ಲೇ ಅಭಿವೃದ್ಧಿಯ ಅಭೂತಪೂರ್ವ ಎತ್ತರವನ್ನು ತಲುಪುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಒಡಿಶಾದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವಲ್ಲಿ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಂಝಿ ಮತ್ತು ಅವರ ತಂಡವು ಮಾಡಿದ ಪ್ರಯತ್ನಗಳು ಶ್ಲಾಘನೀಯ. ಆಹಾರ ಸಂಸ್ಕರಣೆ, ಪೆಟ್ರೋ ಕೆಮಿಕಲ್ಸ್, ಬಂದರು ಆಧಾರಿತ ಅಭಿವೃದ್ಧಿ, ಮೀನುಗಾರಿಕೆ, ಐಟಿ, ಶಿಕ್ಷಣ ತಂತ್ರಜ್ಞಾನ, ಜವಳಿ, ಪ್ರವಾಸೋದ್ಯಮ, ಗಣಿಗಾರಿಕೆ ಮತ್ತು ಹಸಿರು ಇಂಧನ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ಒಡಿಶಾ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದ್ದು ಗಮನಾರ್ಹ.

 

ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ಭಾರತ ವೇಗವಾಗಿ ಮುನ್ನಡೆಯುತ್ತಿದೆ ಎಂದು ಪ್ರತಿಪಾದಿಸಿದ ಪ್ರಧಾನ ಮಂತ್ರಿಗಳು, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮೈಲಿಗಲ್ಲು ದೂರವಿಲ್ಲ ಎಂದು ಹೇಳಿದರು. ಕಳೆದ ದಶಕದಲ್ಲಿ ಉತ್ಪಾದನಾ ವಲಯದಲ್ಲಿ ಭಾರತದ ಬಲ ವೃದ್ಧಿಯೂ ಬೆಳವಣಿಗೆಯನ್ನು ಸಾಕ್ಷೀಕರಿಸುವಂತಿದೆ ಎಂದು ಅವರು ಹೇಳಿದರು. ಭಾರತದ ಆರ್ಥಿಕತೆಯ ವಿಸ್ತರಣೆಯು ಎರಡು ಪ್ರಮುಖ ಆಧಾರ ಸ್ತಂಭಗಳಾದ ಹೊಸ ಅನ್ವೇಷಕ ಸೇವಾ ವಲಯ ಮತ್ತು ಗುಣಮಟ್ಟದ ಉತ್ಪನ್ನಗಳ ಮೇಲೆ ನಿಂತಿದೆ ಎಂದು ಹೇಳಿದರು. ದೇಶದ ತ್ವರಿತ ಪ್ರಗತಿಯು ಕಚ್ಚಾ ವಸ್ತುಗಳ ರಫ್ತಿನ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಹಾಗಾಗಿ ಇಡೀ ಪೂರಕ ವ್ಯವಸ್ಥೆಯನ್ನು ಹೊಸ ದೃಷ್ಟಿಕೋನದಿಂದ ಪರಿವರ್ತಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಈಗ ಖನಿಜಗಳನ್ನು ಹೊರತೆಗೆಯುವ ಮತ್ತು ಉತ್ಪನ್ನಗಳ ಉತ್ಪಾದನೆ ಮತ್ತು ಮೌಲ್ಯವರ್ಧನೆಗಾಗಿ ವಿದೇಶಗಳಿಗೆ ಕಳುಹಿಸುವ ಪ್ರವೃತ್ತಿಯನ್ನು ಬದಲಾಯಿಸುತ್ತಿದೆ ಎಂದು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. ಹಾಗೆಯೇ, ಇತರ ದೇಶಗಳಲ್ಲಿ ಕಡಲ ಆಹಾರದ ಸಂಸ್ಕರಣೆಗಾಗಿ  ರಫ್ತು ಮಾಡುವ ಪ್ರವೃತ್ತಿಯನ್ನು ಸಹ ಬದಲಾಯಿಸಲಾಗುತ್ತಿದೆ ಎಂದು ಅವರು ಹೇಳಿದರು. ಒಡಿಶಾದಲ್ಲಿರುವ ಸಂಪನ್ಮೂಲಗಳಿಗೆ ಪೂರಕವಾಗಿ  ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾಗುವಂತೆ ಮಾಡುವ ನಿಟ್ಟಿನಲ್ಲಿ  ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು "ಉತ್ಕರ್ಷ್ ಒಡಿಶಾ ಸಮ್ಮೇಳನ- 2025ʼ ಒಂದು ಮಾರ್ಗವಾಗಿದೆ ಎಂದು ಅವರು ಹೇಳಿದರು.

ಜಗತ್ತು ಸುಸ್ಥಿರ ಜೀವನಶೈಲಿಯತ್ತ ಹೆಚ್ಚು ಗಮನ ಹರಿಸುವ ಜತೆಗೆ ಹಸಿರು ಭವಿಷ್ಯದತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿ ಶ್ರೀ ಮೋದಿ ಅವರು, ಹಸಿರು ವಲಯ ಸಂಬಂಧಿ ಉದ್ಯೋಗಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ ಎಂದು ಗಮನ ಸೆಳೆದರು. ಕಾಲದ ಬೇಡಿಕೆಗಳು ಮತ್ತು ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಇಂಧನ ಸುರಕ್ಷತೆಗೆ ಶಕ್ತಿ ತುಂಬುವ ಸೌರ ಶಕ್ತಿ, ಪವನ ಶಕ್ತಿ, ಜಲ ವಿದ್ಯುತ್‌ ಮತ್ತು ಹಸಿರು ಹೈಡ್ರೋಜನ್ ಸೇರಿದಂತೆ ಹಸಿರು ತಂತ್ರಜ್ಞಾನ ಮತ್ತು ಹಸಿರು ಭವಿಷ್ಯದ ಮೇಲೆ ಭಾರತ ಗಮನ ಹರಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು. ಆ ನಿಟ್ಟಿನಲ್ಲಿ ಒಡಿಶಾ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಎಂದು ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, ದೇಶವು ರಾಷ್ಟ್ರೀಯ ಮಟ್ಟದ ಹಸಿರು ಹೈಡ್ರೋಜನ್ ಮತ್ತು ಸೌರಶಕ್ತಿ ಮಿಷನ್‌ಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು. 

 

ಹಸಿರು ಶಕ್ತಿಯ ಜೊತೆಗೆ, ಒಡಿಶಾದಲ್ಲಿ ಪೆಟ್ರೋ ಮತ್ತು ಪೆಟ್ರೋಕೆಮಿಕಲ್ ವಲಯವನ್ನು ವಿಸ್ತರಿಸಲು ಉಪಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಗಮನಕ್ಕೆ ತಂದರು. ಪಾರಾದೀಪ್ ಮತ್ತು ಗೋಪಾಲಪುರದಲ್ಲಿ ಕಾಯ್ದಿರಿಸಲಾದ ಕೈಗಾರಿಕಾ ಪಾರ್ಕ್‌ಗಳು ಮತ್ತು ಹೂಡಿಕೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ವಲಯದಲ್ಲಿ ಗಮನಾರ್ಹ ಹೂಡಿಕೆ ಸಾಮರ್ಥ್ಯವನ್ನು ಸೂಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ರಾಜ್ಯದ ವಿವಿಧ ಪ್ರದೇಶಗಳ ಸಾಮರ್ಥ್ಯವನ್ನು ಪರಿಗಣಿಸಿ ತ್ವರಿತ ನಿರ್ಧಾರಗಳನ್ನು ಕೈಗೊಂಡಿದ್ದು ಹಾಗೂ ಹೊಸ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಒಡಿಶಾ ಸರ್ಕಾರವನ್ನು ಅಭಿನಂದಿಸಲಾಗುವುದು ಎಂದು ಶ್ರೀ ಮೋದಿ ಹೇಳಿದರು.

"21ನೇ ಶತಮಾನವು ಭಾರತಕ್ಕೆ ಮೂಲಸೌಕರ್ಯ ಮತ್ತು ಬಹು-ಮಾದರಿ ಸಂಪರ್ಕವನ್ನು ಜೋಡಿಸುವ ಯುಗವಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಭಾರತದಲ್ಲಿ ವಿಶೇಷ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವ ಪ್ರಮಾಣ ಮತ್ತು ವೇಗವು ದೇಶವನ್ನು ಅತ್ಯುತ್ತಮ ಹೂಡಿಕೆ ತಾಣವನ್ನಾಗಿ ಮಾಡುತ್ತಿದೆ ಎಂಬುದಾಗಿಯೂ ಪ್ರತಿಪಾದಿಸಿದರು. ನಿರ್ದಿಷ್ಟ ಸರಕು ಕಾರಿಡಾರ್‌ಗಳು ಪೂರ್ವ ಮತ್ತು ಪಶ್ಚಿಮ ಕರಾವಳಿಗಳನ್ನು ಜೋಡಿಸುವ ಜತೆಗೆ ಸಂಪರ್ಕವಿಲ್ಲದಂತಿದ್ದ ಪ್ರದೇಶಗಳಿಗೆ ತ್ವರಿತ- ಸುಗಮ ಪ್ರವೇಶವನ್ನು ಒದಗಿಸುತ್ತಿವೆ ಎಂದು ಅವರು ಹೇಳಿದರು. ʼಪ್ಲಗ್-ಅಂಡ್-ಪ್ಲೇʼ ಸೌಲಭ್ಯವನ್ಜು ಹೊಂದಿರುವ ಡಜನ್‌ಗಟ್ಟಲೇ ಕೈಗಾರಿಕಾ ನಗರಗಳನ್ನು ದೇಶಾದ್ಯಂತ ನಿರ್ಮಿಸಲಾಗುತ್ತಿದೆ. ಒಡಿಶಾದಲ್ಲಿಯೂ ಇದೇ ರೀತಿಯ ಅವಕಾಶಗಳನ್ನು ಹೆಚ್ಚಿಸಲಾಗುತ್ತಿದೆ ಮತ್ತು ರಾಜ್ಯದಲ್ಲಿ ರೈಲ್ವೆ ಮತ್ತು ಹೆದ್ದಾರಿ ಸಂಪರ್ಕ ಜಾಲಗಳಿಗೆ ಸಂಬಂಧಿಸಿದ ಸಾವಿರಾರು ಕೋಟಿ ರೂ. ಮೌಲ್ಯದ ಯೋಜನೆಗಳು ಪ್ರಗತಿಯಲ್ಲಿವೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಒಡಿಶಾದಲ್ಲಿನ ಕೈಗಾರಿಕೆಗಳಿಗೆ ಸಾಗಣೆ (ಲಾಜಿಸ್ಟಿಕ್‌) ವೆಚ್ಚ ತಗ್ಗಿಸಲು ಸರ್ಕಾರವು ಕೈಗಾರಿಕಾ ಕ್ಲಸ್ಟರ್‌ಗಳನ್ನು ಬಂದರುಗಳೊಂದಿಗೆ ಸಂಪರ್ಕಿಸುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಬಂದರುಗಳ ವಿಸ್ತರಣೆ ಮತ್ತು ಹೊಸ ಬಂದರುಗಳ ನಿರ್ಮಾಣ ಕಾರ್ಯ ಜತೆ ಜತೆಗೆ ನಡೆದಿದೆ ಎಂದು ಅವರು ಹೇಳಿದರು. ನೀಲಿ ಆರ್ಥಿಕತೆಯ ವಿಷಯದಲ್ಲಿ ಒಡಿಶಾ ದೇಶದ ಉನ್ನತ ರಾಜ್ಯಗಳಲ್ಲಿ ಒಂದಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜಾಗತಿಕ ಪೂರೈಕೆ ಸರಪಳಿಯ ಸವಾಲುಗಳನ್ನು ಎಲ್ಲರೂ ಗುರುತಿಸಬೇಕು ಎಂದು ಹೇಳಿದ ಪ್ರಧಾನ ಮಂತ್ರಿಗಳು, ಭಾರತವು ವಿಘಟಿತ ಹಾಗೂ ಆಮದು ಆಧಾರಿತ ಪೂರೈಕೆ ಸರಪಳಿಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳಿದರು. ಬದಲಿಗೆ, ಜಾಗತಿಕ ಏರಿಳಿತಗಳ ಪರಿಣಾಮವನ್ನು ತಗ್ಗಿಸಲು ಭಾರತದೊಳಗೆ ಸದೃಢವಾದ ಪೂರೈಕೆ ಮತ್ತು ಮೌಲ್ಯ ಸರಪಳಿಯನ್ನು ನಿರ್ಮಿಸಬೇಕು ಎಂದು ಅವರು ಹೇಳಿದರು. ಈ ಜವಾಬ್ದಾರಿ ಸರ್ಕಾರ ಮತ್ತು ಉದ್ಯಮ ಎರಡರ ಮೇಲಿದೆ ಎಂಬುದಾಗಿಯೂ ಒತ್ತಿ ಹೇಳಿದರು. ಕೈಗಾರಿಕೆಗಳ ಬೆಳವಣಿಗೆಗೆ ಸಂಶೋಧನೆ ಮತ್ತು ನಾವೀನ್ಯತೆಗಳ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಎಂಎಸ್‌ಎಂಇಗಳು ಮತ್ತು ಯುವ ನವೋದ್ಯಮಗಳನ್ನು ಬೆಂಬಲಿಸುವಂತೆ ಕೈಗಾರಿಕೆಗಳಿಗೆ ಕರೆ ನೀಡಿದರು. ಸರ್ಕಾರವು ವಿಶೇಷ ನಿಧಿ ಮತ್ತು ಇಂಟರ್ನ್‌ಶಿಪ್ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ಹೊಸ ಪ್ಯಾಕೇಜ್‌ನೊಂದಿಗೆ ದೇಶದಲ್ಲಿ ಒಂದು ಅತ್ಯುಧುನಿಕ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತಿದೆ ಎಂದು ಅವರು ಹೇಳಿದರು. ಸರ್ಕಾರದೊಂದಿಗೆ ಸಕ್ರಿಯವಾಗಿ ಭಾಗವಹಿಸಲು ಮತ್ತು ಸಹಕರಿಸಲು ಕೈಗಾರಿಕೆಗಳನ್ನು ಮುಂದಾಗಬೇಕು. ಸಮರ್ಥ ಸಂಶೋಧನಾ ಪರಿಸರ ವ್ಯವಸ್ಥೆ ಮತ್ತು ಕೌಶಲ್ಯಪೂರ್ಣ ಯುವ ಕಾರ್ಯಪಡೆಯು ಉದ್ಯಮಕ್ಕೆ ನೇರವಾಗಿ ಪ್ರಯೋಜನ ನೀಡುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ ಅರು, ಒಡಿಶಾ ರಾಜ್ಯದ ಆಕಾಂಕ್ಷೆಗಳಿಗೆ ಅನುಗುಣವಾಗಿ ಆಧುನಿಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉದ್ಯಮ ಪಾಲುದಾರರು ಮತ್ತು ಒಡಿಶಾ ಸರ್ಕಾರ ಒಟ್ಟಾಗಿ ಕೆಲಸ ಮಾಡುವಂತೆ ಎಂದು ಕರೆ ನೀಡಿದರು. ಇದು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಹಾಗೆಯೇ ಒಡಿಶಾದಲ್ಲೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆ ಮೂಲಕ ಇದು ರಾಜ್ಯದ ಸಮೃದ್ಧಿ, ಶಕ್ತಿ ಮತ್ತು ಪ್ರಗತಿಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಪ್ರಪಂಚದಾದ್ಯಂತ ಜನರು ಭಾರತದ ಬಗ್ಗೆ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಉತ್ಸುಕರಾಗಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಸಾವಿರಾರು ವರ್ಷಗಳ ಪರಂಪರೆ ಮತ್ತು ಇತಿಹಾಸವನ್ನು ಹೊಂದಿರುವ ಒಡಿಶಾ ಭಾರತವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮ ತಾಣವಾಗಿದೆ ಎಂದು ಅವರು ಹೆಮ್ಮೆಯಿಂದ ನುಡಿದರು. ರಾಜ್ಯವು ನಂಬಿಕೆ, ಆಧ್ಯಾತ್ಮಿಕತೆ, ಅರಣ್ಯಗಳು, ಪರ್ವತಗಳು ಮತ್ತು ಸಮುದ್ರದ ವಿಶಿಷ್ಟ ಮಿಶ್ರಣವನ್ನು ಒಂದೇ ಸ್ಥಳದಲ್ಲಿ ಕಾಣಬಹುದಾಗಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ಒಡಿಶಾವನ್ನು ಅಭಿವೃದ್ಧಿ ಮತ್ತು ಪರಂಪರೆಯ ಮಾದರಿ ಎಂದು ಬಣ್ಣಿಸಿದರು. ಹಾಗೆಯೇ ಜಿ-20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಡಿಶಾದಲ್ಲಿ ನೆರವೇರಿಸಲಾಗಿತ್ತು ಮತ್ತು ಕೊನಾರ್ಕ್ ಸೂರ್ಯ ದೇವಾಲಯದ ಚಕ್ರವನ್ನು ಮುಖ್ಯ ಕಾರ್ಯಕ್ರಮದ ಭಾಗವಾಗಿ ರೂಪಿಸಲಾಗಿತ್ತು ಎಂದು ಸ್ಮರಿಸಿದರು. 500 ಕಿಲೋ ಮೀಟರ್ ಉದ್ದದ ಕಡಲ ತೀರ, ಶೇ.33%ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಮತ್ತು ಪರಿಸರ ಪ್ರವಾಸೋದ್ಯಮ ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಕೊನೆಯಿಲ್ಲದ ಸಾಧ್ಯತೆಗಳನ್ನು ಹೊಂದಿರುವ ಒಡಿಶಾದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅನ್ವೇಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. "ವೆಡ್‌ ಇನ್‌ ಇಂಡಿಯಾ" ಮತ್ತು "ಹೀಲ್‌ ಇನ್‌ ಇಂಡಿಯಾ" ಎಂಬುದರ ಅಂಶಗಳ ಮೇಲೆ ಭಾರತ ಗಮನ ಕೇಂದ್ರೀಕರಿಸಿದ್ದು, ಒಡಿಶಾದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರವು ಈ ಉಪಕ್ರಮಗಳಿಗೆ ಬಹಳ ಬೆಂಬಲ ನೀಡುತ್ತಿದೆ ಎಂದು ಪ್ರಧಾನ ಮಂತ್ರಿಗಳು ಗಮನ ಸೆಳೆದರು.

ಸಮ್ಮೇಳನ ಪ್ರವಾಸೋದ್ಯಮ ವಲಯದಲ್ಲೂ ಭಾರತವು ಅಗಾಧ ಸಾಮರ್ಥ್ಯ ಹೊಂದಿದೆ ಎಂದು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ದೆಹಲಿಯ ಭಾರತ್ ಮಂಟಪ ಮತ್ತು ಯಶೋಭೂಮಿಯಂತಹ ಸ್ಥಳಗಳು ಈ ವಲಯಕ್ಕೆ ಪ್ರಮುಖ ಕೇಂದ್ರಗಳಾಗುತ್ತಿವೆ ಎಂದು ಹೇಳಿದರು. "ಸಂಗೀತ ಆರ್ಥಿಕತೆ" (ಕನ್‌ಸರ್ಟ್‌ ಎಕಾನಮಿ)ಯಂತಹ ಉದಯೋನ್ಮುಖ ವಲಯದ ಬಗ್ಗೆಯೂ ಅವರು ಉಲ್ಲೇಖಿಸಿದರು. ಸಂಗೀತ, ನೃತ್ಯ ಮತ್ತು ಕಥೆ ಹೇಳುವಿಕೆಯ ಶ್ರೀಮಂತ ಪರಂಪರೆ ಮತ್ತು ಯುವ ಸಂಗೀತ ಕಛೇರಿಗಳಿಗೆ ಹೋಗುವವರ ದೊಡ್ಡ ಸಮೂಹವನ್ನು ಹೊಂದಿರುವ ಭಾರತವು ಸಂಗೀತ ಕಛೇರಿಯ ಆರ್ಥಿಕತೆ ವಲಯದಲ್ಲೂ ಸಾಕಷ್ಟು ಸಾಧ್ಯತೆಗಳನ್ನು ಹೊಂದಿದೆ ಎಂದು ಅವರು ಗಮನ ಸೆಳೆದರು. ಕಳೆದ ದಶಕದಲ್ಲಿ, ನೇರ ಸಂಗೀತೋತ್ಸವ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಅವರು ಹೇಳಿದರು. ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ "ಕೋಲ್ಡ್‌ ಪ್ಲೇ" ಸಂಗೀತ ಕಛೇರಿಗಳು ಭಾರತದಲ್ಲಿ ನೇರ ಸಂಗೀತ ಕಛೇರಿಗಳಿಗೆ (ಲೈವ್‌ ಕನ್ಸರ್ಟ್)‌ ಅವಕಾಶವಿದೆ ಎಂಬುದಕ್ಕೆ ಸಾಕ್ಷಿಯಾಗಿವೆ ಎಂದು ಶ್ರೀ ಮೋದಿ ಅವರು ಒತ್ತಿ ಹೇಳಿದರು, ಜಾಗತಿಕ ಮಟ್ಟದ ಪ್ರತಿಷ್ಠಿತ ಕಲಾವಿದರು ಭಾರತದತ್ತ ಆಕರ್ಷಿತರಾಗಿದ್ದಾರೆ ಮತ್ತು ಸಂಗೀತೋತ್ಸವ ಆರ್ಥಿಕತೆಯು ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಸಂಗೀತ ಕಛೇರಿ ಆರ್ಥಿಕತೆಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಕೌಶಲ್ಯಗಳ ಮೇಲೆ ಗಮನಹರಿಸುವಂತೆ ಅವರು ರಾಜ್ಯಗಳು ಮತ್ತು ಖಾಸಗಿ ವಲಯಕ್ಕೆ ಕರೆ ನೀಡಿದರು. ಅದರಲ್ಲಿ ಈವೆಂಟ್ ಮ್ಯಾನೇಜ್‌ಮೆಂಟ್‌, ಕಲಾವಿದರ ಬೆಳವಣಿಗೆ,  ಭದ್ರತೆ ಮತ್ತು ಹೊಸ ಅವಕಾಶಗಳು ಹೊರಹೊಮ್ಮುತ್ತಿರುವ ಇತರ ವ್ಯವಸ್ಥೆಗಳು ಸೇರಿವೆ ಎಂದು ವಿವರಿಸಿದರು.

 

 

ಮುಂದಿನ ತಿಂಗಳು ಭಾರತವು ಮೊದಲ ಬಾರಿಗೆ ವಿಶ್ವ ಶ್ರವಣ- ದೃಶ್ಯ ಮರ್ತು ಮನರಂಜನಾ ಸಮ್ಮೇಳನವನ್ನು (ಡಬ್ಲ್ಯೂಎವಿಇಎಸ್‌- WAVES) ಆಯೋಜಿಸಲಿದೆ ಎಂದು ಶ್ರೀ ಮೋದಿ ಘೋಷಿಸಿದರು. ಈ ಮಹತ್ವದ ಕಾರ್ಯಕ್ರಮವು ಭಾರತದ ಸೃಜನಶೀಲತೆ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಂತಹ ಕಾರ್ಯಕ್ರಮಗಳು ಆದಾಯವನ್ನು ಉತ್ಪಾದಿಸುವ ಜತೆಗೆ ಭಾರತ ಹಾಗೂ ಸಂಗೀತದ ಬಗೆಗಿನ  ಗ್ರಹಿಕೆಗಳನ್ನು ರೂಪಿಸುತ್ತವೆ ಹಾಗೂ ಆರ್ಥಿಕತೆಯ ಬೆಳವಣಿಗೆಗೂ ಕೊಡುಗೆ ನೀಡುತ್ತವೆ. ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಒಡಿಶಾ ಅಪಾರವಾದ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

"ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಒಡಿಶಾ ಮಹತ್ವದ ಪಾತ್ರ ವಹಿಸುತ್ತದೆ" ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ಒಡಿಶಾದ ಜನರು ಸಮೃದ್ಧ ರಾಜ್ಯವನ್ನು ನಿರ್ಮಿಸಲು ದೃಢಸಂಕಲ್ಪ ಮಾಡಿದ್ದಾರೆ ಮತ್ತು ಈ ಗುರಿಯನ್ನು ಸಾಧಿಸಲು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯ ಸಹಕಾರ, ಪ್ರೋತಾಹವನ್ನು ನೀಡುತ್ತಿದೆ ಎಂದು ಅವರು ಸಂತಸದಿಂದ ಹೇಳಿದರು. ಒಡಿಶಾ ರಾಜ್ಯದ ಮೇಲಿನ ತಮ್ಮ ಆಕರ್ಷಣೆ, ಒಲವಿನ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಪ್ರಧಾನ ಮಂತ್ರಿಯಾಗಿರುವ ಅವಧಿಯಲ್ಲಿ ಈವರೆಗೆ ರಾಜ್ಯಕ್ಕೆ ಸುಮಾರು 30 ಬಾರಿ ಭೇಟಿ ನೀಡಿರುವುದು ಮಾತ್ರವಲ್ಲದೆ, ರಾಜ್ಯದ ಬಹುಪಾಲು ಜಿಲ್ಲೆಗಳಿಗೆ ಭೇಟಿ ನೀಡಿದ್ದು,. ಒಡಿಶಾದ ಸಾಮರ್ಥ್ಯ ಮತ್ತು ಇಲ್ಲಿನ ಜನರ ಮೇಲಿನ ನನಗೆ ಅಗಾಧ ವಿಶ್ವಾಸವಿದೆ ಎಂದು ಪ್ರೀತಿಯಿಂದ ಹೇಳಿದರು.

ತಮ್ಮ ಭಾಷಣ ಮುಕ್ತಾಯಗೊಳಿಸುವ ಮುನ್ನ ಎಲ್ಲಾ ಪಾಲುದಾರರ ಹೂಡಿಕೆಗಳು, ಅವರ ವ್ಯವಹಾರಗಳು ಮತ್ತು ಒಡಿಶಾದ ಪ್ರಗತಿಯನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬುದಾಗಿ ಆಶಾಭಾವನೆ ವ್ಯಕ್ತಪಡಿಸುತ್ತಾ ಸಮಾವೇಶದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರಿ ಭಾಷಣಕ್ಕೆ ವಿರಾಮ ಹೇಳಿದರು.

ಒಡಿಶಾದ ರಾಜ್ಯಪಾಲ ಡಾ. ಹರಿ ಬಾಬು ಕಂಭಂಪತಿ, ಒಡಿಶಾದ ಮುಖ್ಯಮಂತ್ರಿ ಶ್ರೀ ಮೋಹನ್ ಚರಣ್ ಮಾಂಝಿ, ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀ ಅಶ್ವಿನಿ ವೈಷ್ಣವ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

"ಉತ್ಕರ್ಷ್ ಒಡಿಶಾ - ಮೇಕ್ ಇನ್ ಒಡಿಶಾ ಸಮಾವೇಶ- 2025" ಒಂದು ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಶೃಂಗಸಭೆಯಾಗಿದ್ದು, ಇದನ್ನು ಒಡಿಶಾ ಸರ್ಕಾರ ಆಯೋಜಿಸುತ್ತಿದೆ. ಇದು ರಾಜ್ಯವನ್ನು ಪೂರ್ವೋದಯ ದೃಷ್ಟಿಕೋನದ ಆಧಾರಸ್ತಂಭವಾಗಿ ಮತ್ತು ಭಾರತದಲ್ಲಿ ಪ್ರಮುಖ ಹೂಡಿಕೆ ತಾಣ ಮತ್ತು ಕೈಗಾರಿಕಾ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿದೆ.

ಪ್ರಧಾನ ಮಂತ್ರಿಗಳು ಮೇಕ್ ಇನ್ ಒಡಿಶಾ ಪ್ರದರ್ಶನ ಮೇಳವನ್ನು ಉದ್ಘಾಟಿಸಿದರು. ಇದು ಒಡಿಶಾದಲ್ಲಿನ ಕೈಗಾರಿಕಾ ಸ್ನೇಹಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯದ ಸಾಧನೆಗಳನ್ನು ಎತ್ತಿ ತೋರಿಸುತ್ತದೆ. ಎರಡು ದಿನಗಳ ಸಮಾವೇಶವು ಜನವರಿ 28ರಿಂದ 29ರವರೆಗೆ ನಡೆಯಲಿದೆ. ಇದು ಉದ್ಯಮದ ನಾಯಕರು, ಹೂಡಿಕೆದಾರರು ಮತ್ತು ನೀತಿ ನಿರೂಪಕರು ಒಡಿಶಾ ಆದ್ಯತೆಯ ಹೂಡಿಕೆ ತಾಣವಾಗಿ ನೀಡುವ ಅವಕಾಶಗಳನ್ನು ಒಟ್ಟುಗೂಡಿಸಲು ಮತ್ತು ಚರ್ಚಿಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಸಮಾವೇಶವು ಸಿಇಒಗಳು ಮತ್ತು ನಾಯಕರ ದುಂಡುಮೇಜಿನ ಸಭೆಗಳು, ವಲಯವಾರು ಸಮಾಲೋಚನಾ ಸಭೆಗಳು, ಬಿ2ಬಿ ಸಭೆಗಳು ಮತ್ತು ನೀತಿ ನಿರೂಪಣೆ ಕುರಿತಂತೆಯೂ ಚರ್ಚೆ- ಸಂವಾದಕೆಕ ವೇದಿಕೆ ಕಲ್ಪಿಸಿದೆ. ಜಗತ್ತಿನಾದ್ಯಂತ ಹೂಡಿಕೆದಾರರೊಂದಿಗೆ ನಿರ್ದಿಷ್ಟ ಸಮಾಲೋಚನೆಗೆ ವೇದಿಕೆಯಾಗುವುದನ್ನು ಖಾತರಿಪಡಿಸುತ್ತದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi pens heartfelt letter to BJP's new Thiruvananthapuram mayor; says

Media Coverage

PM Modi pens heartfelt letter to BJP's new Thiruvananthapuram mayor; says "UDF-LDF fixed match will end soon"
NM on the go

Nm on the go

Always be the first to hear from the PM. Get the App Now!
...
Prime Minister Lauds Ahmedabad Flower Show as a Celebration of Creativity, Sustainability, and Community Spirit
January 02, 2026

Prime Minister Shri Narendra Modi commended the Ahmedabad Flower Show for its remarkable role in bringing together creativity, sustainability, and community participation. The event beautifully showcases the city’s vibrant spirit and enduring love for nature.

Highlighting the significance of the show, the Prime Minister noted how it has grown in scale and imagination over the years, becoming a symbol of Ahmedabad’s cultural richness and environmental consciousness.

Responding to post by Chief Minister of Gujarat on X, Shri Modi said:

“The Ahmedabad Flower Show brings together creativity, sustainability and community participation, while beautifully showcasing the city’s vibrant spirit and love for nature. It is also commendable how this flower show has grown in scale and imagination over the years.”

“अहमदाबाद का फ्लावर शो हर किसी का मन मोह लेने वाला है! यह क्रिएटिविटी के साथ-साथ जन भागीदारी का अद्भुत उदाहरण है। इससे शहर की जीवंत भावना के साथ ही प्रकृति से उसका लगाव भी खूबसूरती से प्रदर्शित हो रहा है। यहां यह देखना भी उत्साह से भर देता है कि कैसे इस फ्लावर शो की भव्यता और कल्पनाशीलता हर साल निरंतर बढ़ती जा रही है। इस फ्लावर शो की कुछ आकर्षक तस्वीरें…”