ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೈಪ್ರಸ್ ಅಧ್ಯಕ್ಷ ಘನತೆವೆತ್ತ ನಿಕೋಸ್ ಕ್ರಿಸ್ಟೋಡೌಲಿಡೆಸ್ ಅವರೊಂದಿಗೆ ಇಂದು ಲಿಮಾಸೋಲ್ ನಲ್ಲಿ ಸೈಪ್ರಸ್ ಮತ್ತು ಭಾರತದ ವಾಣಿಜ್ಯ ನಾಯಕರೊಂದಿಗೆ ದುಂಡುಮೇಜಿನ ಸಂವಾದ ನಡೆಸಿದರು. ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳು, ಉತ್ಪಾದನೆ, ರಕ್ಷಣೆ, ಲಾಜಿಸ್ಟಿಕ್ಸ್, ಕಡಲ, ಹಡಗು, ತಂತ್ರಜ್ಞಾನ, ನಾವೀನ್ಯತೆ, ಡಿಜಿಟಲ್ ತಂತ್ರಜ್ಞಾನಗಳು, ಎಐ, ಐಟಿ ಸೇವೆಗಳು, ಪ್ರವಾಸೋದ್ಯಮ ಮತ್ತು ಚಲನಶೀಲತೆಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಭಾಗವಹಿಸಿದರು.

ಕಳೆದ 11 ವರ್ಷಗಳಲ್ಲಿ ಭಾರತದ ತ್ವರಿತ ಆರ್ಥಿಕ ಪರಿವರ್ತನೆಯನ್ನು ಬಿಂಬಿಸಿದ ಪ್ರಧಾನಮಂತ್ರಿ ಅವರು, ಮುಂದಿನ ಪೀಳಿಗೆಯ ಸುಧಾರಣೆಗಳು, ನೀತಿ ಮುನ್ಸೂಚನೆ, ಸ್ಥಿರ ರಾಜಕೀಯ ಮತ್ತು ಸುಗಮ ವ್ಯಾಪಾರದಿಂದ ಪ್ರೇರಿತವಾಗಿರುವ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಎಂದರು. ನಾವೀನ್ಯತೆ, ಡಿಜಿಟಲ್ ಕ್ರಾಂತಿ, ನವೋದ್ಯಮ ಮತ್ತು ಭವಿಷ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದನ್ನು ಒತ್ತಿ ಹೇಳಿದ ಅವರು, ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾದ ಭಾರತವು ಕೆಲವೇ ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಉತ್ತಮ ಸ್ಥಾನದಲ್ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತದ ನಾಗರಿಕ ವಿಮಾನಯಾನ, ಬಂದರು, ಹಡಗು ನಿರ್ಮಾಣ, ಡಿಜಿಟಲ್ ಪಾವತಿ ಮತ್ತು ಹಸಿರು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸ್ಥಿರ ಬೆಳವಣಿಗೆಯು ಸೈಪ್ರಸ್ ನ ಕಂಪನಿಗಳಿಗೆ ಭಾರತದೊಂದಿಗೆ ಪಾಲುದಾರರಾಗಲು ಅಸಂಖ್ಯಾತ ಅವಕಾಶಗಳನ್ನು ತೆರೆದಿದೆ ಎಂದು ಅವರು ಗಮನಿಸಿದರು. ಅವರು ಭಾರತದ ನುರಿತ ಪ್ರತಿಭೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ಸಾಮರ್ಥ್ಯವನ್ನು ಒತ್ತಿ ಹೇಳಿದರು ಮತ್ತು ಉತ್ಪಾದನೆ, ಎಐ, ಕ್ವಾಂಟಮ್, ಅರೆವಾಹಕ ಮತ್ತು ಅತ್ಯಾವಶ್ಯಕ ಖನಿಜಗಳು ಭಾರತದ ಬೆಳವಣಿಗೆಯ ಕಥೆಗೆ ಕೊಡುಗೆ ನೀಡುವ ಹೊಸ ಮತ್ತು ಉದಯೋನ್ಮುಖ ಕ್ಷೇತ್ರಗಳಾಗಿವೆ ಎಂದು ಬಿಂಬಿಸಿದರು.

ಸೈಪ್ರಸ್ ಭಾರತಕ್ಕೆ, ವಿಶೇಷವಾಗಿ ವಿದೇಶಿ ನೇರ ಹೂಡಿಕೆ ವಲಯದಲ್ಲಿ ಮಹತ್ವದ ಆರ್ಥಿಕ ಪಾಲುದಾರನಾಗಿದೆ ಎಂದು ಪ್ರಧಾನಿ ಹೇಳಿದರು ಮತ್ತು ಭಾರತೀಯ ಆರ್ಥಿಕತೆಗೆ ಹೊಸ ಹೂಡಿಕೆಗಳಿಗಾಗಿ ಸೈಪ್ರಸ್ ನಲ್ಲಿ ತೀವ್ರ ಆಸಕ್ತಿಯನ್ನು ಸ್ವಾಗತಿಸಿದರು. ಹಣಕಾಸು ಸೇವಾ ವಲಯದಲ್ಲಿ ವ್ಯಾಪಾರ ತೊಡಗಿಸಿಕೊಳ್ಳುವಿಕೆಯ ಸಾಮರ್ಥ್ಯವನ್ನು ಒತ್ತಿ ಹೇಳಿದ ಇಬ್ಬರೂ ನಾಯಕರು, ಗುಜರಾತ್ ನ ಎನ್ ಎಸ್ ಇ ಅಂತಾರಾಷ್ಟ್ರೀಯ ವಿನಿಮಯ ಗಿಫ್ಟ್ ಸಿಟಿ ಮತ್ತು ಸೈಪ್ರಸ್ ಸ್ಟಾಕ್ ಎಕ್ಸ್ ಚೇಂಜ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು. ಎನ್ಐಪಿಎಲ್ (ಎನ್ ಪಿ ಸಿ ಐ ಇಂಟರ್ ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್) ಮತ್ತು ಯುರೋಬ್ಯಾಂಕ್ ಸೈಪ್ರಸ್ ಎರಡೂ ದೇಶಗಳ ನಡುವೆ ಗಡಿಯಾಚೆಗಿನ ಪಾವತಿಗಳಿಗಾಗಿ ಯುಪಿಐ ಪರಿಚಯಿಸುವ ಬಗ್ಗೆ ತಿಳುವಳಿಕೆಗೆ ಬಂದವು, ಇದು ಪ್ರವಾಸಿಗರು ಮತ್ತು ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಹಡಗು, ಲಾಜಿಸ್ಟಿಕ್ಸ್, ನವೀಕರಿಸಬಹುದಾದ ಇಂಧನ, ನಾಗರಿಕ ವಿಮಾನಯಾನ ಮತ್ತು ಡಿಜಿಟಲ್ ಸೇವೆಗಳಂತಹ ಕ್ಷೇತ್ರಗಳಲ್ಲಿ ತ್ರಿಪಕ್ಷೀಯ ಸಹಕಾರವನ್ನು ಉತ್ತೇಜಿಸುವ ಭಾರತ-ಗ್ರೀಸ್-ಸೈಪ್ರಸ್ (ಐಜಿಸಿ) ವ್ಯಾಪಾರ ಮತ್ತು ಹೂಡಿಕೆ ಮಂಡಳಿಯ ಆರಂಭವನ್ನು ಪ್ರಧಾನಿ ಸ್ವಾಗತಿಸಿದರು. ಅನೇಕ ಭಾರತೀಯ ಕಂಪನಿಗಳು ಸೈಪ್ರಸ್ ಅನ್ನು ಯುರೋಪಿನ ಹೆಬ್ಬಾಗಿಲಾಗಿ ಮತ್ತು ಐಟಿ ಸೇವೆಗಳು, ಹಣಕಾಸು ನಿರ್ವಹಣೆ ಮತ್ತು ಪ್ರವಾಸೋದ್ಯಮದ ಕೇಂದ್ರವಾಗಿ ನೋಡುತ್ತವೆ ಎಂಬ ಅಂಶವನ್ನು ಪ್ರಧಾನಿ ಸ್ವಾಗತಿಸಿದರು.

ಮುಂದಿನ ವರ್ಷ ಇಯು (ಐರೋಪ್ಯ ಒಕ್ಕೂಟ) ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸೈಪ್ರಸ್ ಸಿದ್ಧತೆ ನಡೆಸುತ್ತಿರುವಾಗ, ಉಭಯ ನಾಯಕರು ಭಾರತ-ಇಯು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಈ ವರ್ಷದ ಅಂತ್ಯದ ವೇಳೆಗೆ ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಬಗ್ಗೆ ಅವರು ಆಶಾವಾದವನ್ನು ವ್ಯಕ್ತಪಡಿಸಿದರು, ಇದು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಹಕಾರಕ್ಕೆ ಪ್ರಮುಖ ಉತ್ತೇಜನ ನೀಡುತ್ತದೆ. ವ್ಯಾಪಾರ ದುಂಡು ಮೇಜಿನ ಸಭೆಯು ಪ್ರಾಯೋಗಿಕ ಸಲಹೆಗಳನ್ನು ನೀಡಿದೆ, ಇದು ರಚನಾತ್ಮಕ ಆರ್ಥಿಕ ಮಾರ್ಗಸೂಚಿಗೆ ಆಧಾರವನ್ನು ರೂಪಿಸುತ್ತದೆ, ವ್ಯಾಪಾರ, ನಾವೀನ್ಯತೆ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ದೀರ್ಘಕಾಲೀನ ಸಹಯೋಗವನ್ನು ಖಚಿತಪಡಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ಹಂಚಿಕೆಯ ಆಕಾಂಕ್ಷೆಗಳು ಮತ್ತು ಭವಿಷ್ಯದ ಕೇಂದ್ರಿತ ವಿಧಾನದೊಂದಿಗೆ ಭಾರತ ಮತ್ತು ಸೈಪ್ರಸ್ ಕ್ರಿಯಾತ್ಮಕ ಮತ್ತು ಪರಸ್ಪರ ಪ್ರಯೋಜನಕಾರಿ ಆರ್ಥಿಕ ಸಹಕಾರದ ಹೊಸ ಯುಗಕ್ಕೆ ಸಜ್ಜಾಗಿವೆ.
ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Boosting business linkages!
— Narendra Modi (@narendramodi) June 15, 2025
President Nikos Christodoulides and I interacted with leading CEOs in order to add vigour to commercial linkages between India and Cyprus. Sectors like innovation, energy, technology and more offer immense potential. I also talked about India’s… pic.twitter.com/hVcbloCMyP
Ενίσχυση των επιχειρηματικών δεσμών!
— Narendra Modi (@narendramodi) June 15, 2025
Ο Πρόεδρος Νίκος Χριστοδουλίδης και εγώ συναντηθήκαμε με κορυφαίους Διευθύνοντες Συμβούλους, με στόχο την ενίσχυση των εμπορικών δεσμών μεταξύ Ινδίας και Κύπρου. Τομείς όπως η καινοτομία, η ενέργεια, η τεχνολογία και άλλοι προσφέρουν… pic.twitter.com/GtrI1J40tm