ಭಾರತ ಪ್ರಜಾಪ್ರಭುತ್ವದ ತಾಯಿ: ಪ್ರಧಾನಮಂತ್ರಿ
ನಮ್ಮ ಸಂವಿಧಾನವು ಭಾರತದ ಏಕತೆಯ ಅಡಿಪಾಯವಾಗಿದೆ: ಪ್ರಧಾನಮಂತ್ರಿ
2014ರಲ್ಲಿ ಎನ್.ಡಿ.ಎಗೆ ಸರ್ಕಾರ ರಚಿಸುವ ಅವಕಾಶ ಸಿಕ್ಕಾಗ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಬಲಪಡಿಸಲಾಯಿತು: ಪ್ರಧಾನಮಂತ್ರಿ
ಬಡವರನ್ನು ಅವರ ಕಷ್ಟಗಳಿಂದ ಮುಕ್ತಗೊಳಿಸುವುದು ನಮ್ಮ ದೊಡ್ಡ ಧ್ಯೇಯ ಮತ್ತು ಸಂಕಲ್ಪ: ಪ್ರಧಾನಮಂತ್ರಿ
ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಅನುಸರಿಸಿದರೆ, ವಿಕಸಿತ ಭಾರತವನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಸಂವಿಧಾನವನ್ನು ಅಂಗೀಕರಿಸಿದ 75ನೇ ವಾರ್ಷಿಕೋತ್ಸವದ ವಿಶೇಷ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದರು. ಸದನವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿ ಅವರು, ನಾವು ಈ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುತ್ತಿರುವುದು ಭಾರತದ ಎಲ್ಲಾ ನಾಗರಿಕರಿಗೆ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸುವ ಜಗತ್ತಿನಾದ್ಯಂತ ಇರುವ ಎಲ್ಲಾ ಜನರಿಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಹೇಳಿದರು. ನಮ್ಮ ಸಂವಿಧಾನದ 75 ವರ್ಷಗಳ ಈ ಗಮನಾರ್ಹ ಮತ್ತು ಮಹತ್ವದ ಪ್ರಯಾಣದಲ್ಲಿ ನಮ್ಮ ಸಂವಿಧಾನದ ರಚನೆಕಾರರ ದೂರದೃಷ್ಟಿ, ಚಿಂತನೆ ಮತ್ತು ಪ್ರಯತ್ನಗಳಿಗೆ ಧನ್ಯವಾದ ಹೇಳಿದ ಅವರು, 75 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ನಂತರ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸುವ ಸಮಯ ಬಂದಿದೆ ಎಂದು ಹೇಳಿದರು. ಸಂಸತ್ತಿನ ಸದಸ್ಯರು ಕೂಡ ಈ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿಯವರು, ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಿದರು ಮತ್ತು ಅಭಿನಂದಿಸಿದರು.

75 ವರ್ಷಗಳ ಸಾಧನೆಯನ್ನು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಸ್ವಾತಂತ್ರ್ಯದ ನಂತರ ಮತ್ತು ಆ ಬಳಿಕದ  ಸವಾಲುಗಳನ್ನು ಜಯಿಸಿ,  ಎಲ್ಲಾ ಊಹನಾತ್ಮಕ  ಸಾಧ್ಯತೆಗಳನ್ನು ಮೀರಿ ನಮ್ಮೆಲ್ಲರನ್ನೂ ಸಂವಿಧಾನವು ಇಲ್ಲಿಗೆ ತರಲು ಶಕ್ತವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಈ ಮಹಾನ್ ಸಾಧನೆಗಾಗಿ ಅವರು ಸಂವಿಧಾನ ರಚನೆಕಾರರಿಗೆ ಮತ್ತು ಕೋಟ್ಯಂತರ ನಾಗರಿಕರಿಗೆ ಕೃತಜ್ಞತೆ ಸಲ್ಲಿಸಿದರು. ಸಂವಿಧಾನದ ರಚನೆಕಾರರು ರೂಪಿಸಿದ ಸಂವಿಧಾನದ ಮೌಲ್ಯಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಬದುಕುವಲ್ಲಿ ಭಾರತದ ನಾಗರಿಕರು ಪ್ರತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು. ಆದ್ದರಿಂದ ಎಲ್ಲ ಪುರಸ್ಕಾರಗಳಿಗೆ ನಿಜವಾದ ಅರ್ಹರು ನಾಗರಿಕರೇ ಎಂದು ಅವರು ಹೇಳಿದರು.

ಭಾರತವು 1947ರಲ್ಲಿ ಹುಟ್ಟಿದೆ ಅಥವಾ ಸಂವಿಧಾನವು 1950 ರಿಂದ ಜಾರಿಗೆ ಬರಲಿದೆ ಎಂಬ ದೃಷ್ಟಿಕೋನವನ್ನು ಸಂವಿಧಾನ ತಯಾರಕರು ಎಂದಿಗೂ ಬೆಂಬಲಿಸಿರಲಿಲ್ಲ, ಬದಲಿಗೆ ಅವರು ಭಾರತದ ಶ್ರೇಷ್ಠ ಸಂಪ್ರದಾಯ ಮತ್ತು ಪರಂಪರೆ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಹೊಂದಿದ್ದರು ಮತ್ತು ಹೆಮ್ಮೆಯನ್ನೂ ಹೊಂದಿದ್ದರು ಎಂದು ಶ್ರೀ ಮೋದಿ ಹೇಳಿದರು. ಭಾರತದ ಪ್ರಜಾಪ್ರಭುತ್ವ ಮತ್ತು ಗಣರಾಜ್ಯದ ಗತಕಾಲವು ಸದಾ ಗಮನಾರ್ಹವಾಗಿದೆ ಮತ್ತು ಜಗತ್ತಿಗೆ ಸ್ಫೂರ್ತಿಯಾಗಿದೆ ಹಾಗು ಆದ್ದರಿಂದ ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ನಾವು ಕೇವಲ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ ಮಾತ್ರವಲ್ಲ ಆದರೆ ಪ್ರಜಾಪ್ರಭುತ್ವದ ಸೃಷ್ಟಿಕರ್ತರು ಎಂದು ಒತ್ತಿ ಹೇಳಿದರು.

ಸಾಂವಿಧಾನಿಕ ಚರ್ಚೆಗಳಿಂದ ರಾಜರ್ಷಿ ಪುರುಷೋತ್ತಮ ದಾಸ್ ಟಂಡನ್ ಅವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, "ಶತಮಾನಗಳ ನಂತರ, ಇಂತಹ ಘಟನಾತ್ಮಕ ಸಭೆಯನ್ನು ಕರೆಯಲಾಗಿದೆ, ಇದು ನಮ್ಮ ಮಹಾನ್ ಭೂತಕಾಲ ಮತ್ತು ನಾವು ಸ್ವತಂತ್ರರಾಗಿದ್ದ ಹಿಂದಿನ ಸಮಯಗಳನ್ನು ನೆನಪಿಸುತ್ತದೆ ಮತ್ತು ಬುದ್ಧಿಜೀವಿಗಳು ಸಭೆಗಳಲ್ಲಿ ಅರ್ಥಪೂರ್ಣ ವಿಷಯಗಳನ್ನು ಸಭೆಗಳಲ್ಲಿ ಚರ್ಚಿಸುತ್ತಿದ್ದರು" ಎಂದು ಹೇಳಿದರು. ನಂತರ ಅವರು ಡಾ. ಎಸ್. ರಾಧಾಕೃಷ್ಣನ್ ಅವರನ್ನು ಉಲ್ಲೇಖಿಸಿ "ಗಣರಾಜ್ಯ ವ್ಯವಸ್ಥೆಯು ಈ ಮಹಾನ್ ರಾಷ್ಟ್ರಕ್ಕೆ ಹೊಸ ಕಲ್ಪನೆಯಲ್ಲ ಏಕೆಂದರೆ ನಮ್ಮ ಇತಿಹಾಸದ ಆರಂಭದಿಂದಲೂ ನಾವು ಈ ವ್ಯವಸ್ಥೆಯನ್ನು ಹೊಂದಿದ್ದೇವೆ" ಎಂದು ಹೇಳಿದರು. ನಂತರ ಅವರು ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ, "ಭಾರತಕ್ಕೆ ಪ್ರಜಾಪ್ರಭುತ್ವದ ಬಗ್ಗೆ ತಿಳಿದಿಲ್ಲ ಎಂದಲ್ಲ, ಭಾರತದಲ್ಲಿ ಅನೇಕ ಗಣರಾಜ್ಯಗಳು ಇದ್ದ ಸಮಯವಿತ್ತು" ಎಂದೂ ಹೇಳಿದರು.

ಸಂವಿಧಾನ ರಚನೆಯ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಅದನ್ನು ಮತ್ತಷ್ಟು ಸಬಲೀಕರಣಗೊಳಿಸಿದ್ದನ್ನೂ ಕೊಂಡಾಡಿದರು. ಸಂವಿಧಾನ ರಚನಾ ಸಭೆಯಲ್ಲಿ ಹದಿನೈದು ಗೌರವಾನ್ವಿತ ಮತ್ತು ಸಕ್ರಿಯ ಸದಸ್ಯರಿದ್ದರು ಮತ್ತು ಅವರು ತಮ್ಮ ಮೂಲ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಚಿಂತನೆಗಳನ್ನು ನೀಡುವ ಮೂಲಕ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ವಿಭಿನ್ನ ಹಿನ್ನೆಲೆಯಿಂದ ಬಂದವರು ಎಂಬುದನ್ನು ಸ್ಮರಿಸಿದ ಶ್ರೀ ಮೋದಿ, ಮಹಿಳಾ ಸದಸ್ಯರು ನೀಡಿದ ಚಿಂತನಶೀಲ ಸಲಹೆಗಳು ಸಂವಿಧಾನದ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಒತ್ತಿ ಹೇಳಿದರು. ಸ್ವಾತಂತ್ರ್ಯದ ಸಮಯದಿಂದ ಮಹಿಳೆಯರಿಗೆ ಮತದಾನದ ಹಕ್ಕುಗಳನ್ನು ನೀಡಲಾಗಿರುವುದಕ್ಕೆ  ಪ್ರಧಾನಮಂತ್ರಿ ಅವರು ಹೆಮ್ಮೆ ವ್ಯಕ್ತಪಡಿಸಿದರು, ಅದಕ್ಕಾಗಿ ದಶಕಗಳನ್ನು ತೆಗೆದುಕೊಂಡ ವಿಶ್ವದ ಇತರ ದೇಶಗಳ ಜೊತೆ ಭಾರತವನ್ನು ಹೋಲಿಸಿದ ಅವರು ಅದೇ ಉತ್ಸಾಹದಿಂದ, ಭಾರತವು ಜಿ-20 ಶೃಂಗಸಭೆಯ ಅಧ್ಯಕ್ಷತೆಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರಪಂಚದ ಮುಂದೆ ಮಂಡಿಸಿದೆ ಎಂದು ಹೇಳಿದರು. ಎಲ್ಲಾ ಸಂಸದರು ನಾರಿಶಕ್ತಿ ವಂದನ್ ಅಧಿನಿಯಮ್ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿರುವುದನ್ನು ಶ್ರೀ ಮೋದಿ ಉಲ್ಲೇಖಿಸಿದರು ಮತ್ತು ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಪ್ರತಿ ಪ್ರಮುಖ ನೀತಿ ನಿರ್ಧಾರದ ತಿರುಳು ಮಹಿಳೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸಂವಿಧಾನದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಭಾರತದ ರಾಷ್ಟ್ರಪತಿ ಹುದ್ದೆಯನ್ನು ಬುಡಕಟ್ಟು ಮಹಿಳೆಯೊಬ್ಬರು ನಿರ್ವಹಿಸುತ್ತಿರುವುದು ದೊಡ್ಡ ಕಾಕತಾಳೀಯ ಘಟನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದು ನಮ್ಮ ಸಂವಿಧಾನದ ಆಶಯದ ನಿಜವಾದ ಅಭಿವ್ಯಕ್ತಿಯಾಗಿದೆ ಎಂದು ಅವರು ಹೇಳಿದರು. ಸಂಸತ್ತಿನಲ್ಲಿ ಹಾಗೂ ಮಂತ್ರಿಮಂಡಲದಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಕೊಡುಗೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು. "ಸಾಮಾಜಿಕ, ರಾಜಕೀಯ, ಶಿಕ್ಷಣ, ಕ್ರೀಡೆ ಅಥವಾ ಇನ್ನಾವುದೇ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ಕೊಡುಗೆಯು ದೇಶಕ್ಕೆ ಹೆಮ್ಮೆ ತರುತ್ತಿದೆ" ಎಂದು ಶ್ರೀ ಮೋದಿ ಅವರು ಉದ್ಗರಿಸಿದರು ಮತ್ತು ಪ್ರತಿಯೊಬ್ಬ ಭಾರತೀಯರು ವಿಜ್ಞಾನ ಮತ್ತು ತಂತ್ರಜ್ಞಾನ, ವಿಶೇಷವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹಿಳಾ ಕೊಡುಗೆಗಳ ಬಗ್ಗೆ ಹೆಮ್ಮೆಪಡುತ್ತಾರೆ. ಇದಕ್ಕೆ ಸಂವಿಧಾನವೇ ಬಹುದೊಡ್ಡ ಪ್ರೇರಣೆಯಾಗಿದೆ ಎಂದೂ ಅವರು ತಿಳಿಸಿದರು.

ಭಾರತವು ವೇಗವಾಗಿ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ಪುನರುಚ್ಚರಿಸಿದ ಶ್ರೀ ಮೋದಿ, ಶೀಘ್ರದಲ್ಲೇ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದರು. 2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು 140 ಕೋಟಿ ಭಾರತೀಯರ ಸಂಯೋಜಿತ ಸಂಕಲ್ಪವಾಗಿದೆ ಎಂದು ಅವರು ಹೇಳಿದರು. ಈ ನಿರ್ಣಯವನ್ನು ಸಾಧಿಸಲು ಭಾರತದ ಏಕತೆ ಅತ್ಯಂತ ಪ್ರಮುಖ ಅಗತ್ಯವಾಗಿದೆ ಎಂದು ಅವರು ಹೇಳಿದರು. ನಮ್ಮ ಸಂವಿಧಾನವೂ ಭಾರತದ ಏಕತೆಯ ಬುನಾದಿಯಾಗಿದೆ ಎಂದು ಪ್ರಧಾನಿ ವಿವರಿಸಿದರು. ಸಂವಿಧಾನದ ರಚನೆಯ ಪ್ರಕ್ರಿಯೆಯು ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಲೇಖಕರು, ಚಿಂತಕರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ಇತರ ವೈವಿಧ್ಯಮಯ ಕ್ಷೇತ್ರಗಳ ವೃತ್ತಿಪರರನ್ನು ಒಳಗೊಂಡಿತ್ತು ಎಂಬುದನ್ನು ಸ್ಮರಿಸಿದ ಶ್ರೀ ಮೋದಿ, ಅವರೆಲ್ಲರೂ ಭಾರತದ ಏಕತೆಯ ವಾಸ್ತವ ಸಂಗತಿಯ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿದ್ದರು ಎಂದು ಹೇಳಿದರು.

ಸಂವಿಧಾನ ರಚನಾಕಾರರ ಹೃದಯ ಮತ್ತು ಮನಸ್ಸಿನಲ್ಲಿ ಏಕತೆ ಇತ್ತು ಎಂದು ಹೇಳಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯಾನಂತರ, ವಿಕೃತ ಮನಸ್ಥಿತಿ ಅಥವಾ ಸ್ವಾರ್ಥದಿಂದಾಗಿ, ರಾಷ್ಟ್ರದ ಏಕತೆಯ ಮೂಲ ಸ್ಫೂರ್ತಿಗೆ ದೊಡ್ಡ ಹೊಡೆತ ಬಿದ್ದಿತು ಎಂದರು. ವೈವಿಧ್ಯತೆಯಲ್ಲಿ ಏಕತೆ ಭಾರತದ ಹೆಗ್ಗುರುತಾಗಿದೆ ಮತ್ತು ನಾವು ವೈವಿಧ್ಯತೆಯನ್ನು ಕೊಂಡಾಡುತ್ತೇವೆ ಹಾಗು ಈ ವೈವಿಧ್ಯತೆಯನ್ನು ಆಚರಿಸುವುದರಲ್ಲಿ ದೇಶದ ಪ್ರಗತಿ ಅಡಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಆದಾಗ್ಯೂ, ವಸಾಹತುಶಾಹಿ ಮನಸ್ಥಿತಿಯನ್ನು ಹೊಂದಿರುವವರು, ಭಾರತದಲ್ಲಿ ಒಳ್ಳೆಯದನ್ನು ನೋಡಲು ಸಾಧ್ಯವಾಗದವರು ಮತ್ತು ಭಾರತವು 1947ರಲ್ಲಿ ಜನಿಸಿದೆ ಎಂದು ನಂಬುವವರು ಈ ವೈವಿಧ್ಯತೆಯಲ್ಲಿ ವಿರೋಧಾಭಾಸಗಳನ್ನು ಹುಡುಕಿದರು. ವೈವಿಧ್ಯತೆಯ ಈ ಅಮೂಲ್ಯ ನಿಧಿಯನ್ನು ಕೊಂಡಾಡುವ ಬದಲು, ರಾಷ್ಟ್ರದ ಏಕತೆಗೆ ಹಾನಿ ಮಾಡುವ ಉದ್ದೇಶದಿಂದ ಅದರೊಳಗೆ ವಿಷ ಬೀಜಗಳನ್ನು ಬಿತ್ತುವ ಪ್ರಯತ್ನಗಳನ್ನು ನಡೆಸಿದರು ಎಂದು ಪ್ರಧಾನಿ ಹೇಳಿದರು. ವೈವಿಧ್ಯತೆಯ ಆಚರಣೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವಂತೆ ಶ್ರೀ ಮೋದಿ ಪ್ರತಿಯೊಬ್ಬರನ್ನು ಒತ್ತಾಯಿಸಿದರು ಮತ್ತು ಅದು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದೂ ಹೇಳಿದರು.

ಕಳೆದ 10 ವರ್ಷಗಳಲ್ಲಿ ಸರ್ಕಾರದ ನೀತಿಗಳು ಸತತವಾಗಿ ಭಾರತದ ಏಕತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು. 370ನೇ ವಿಧಿಯು ರಾಷ್ಟ್ರದ ಏಕತೆಗೆ ಅಡ್ಡಿಯಾಗಿತ್ತು ಮತ್ತು ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅವರು ಹೇಳಿದರು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ದೇಶದ ಏಕತೆಗೆ ಆದ್ಯತೆ ನೀಡಲಾಗಿದೆ ಮತ್ತು ಆದ್ದರಿಂದ 370 ನೇ ವಿಧಿಯನ್ನು ರದ್ದುಗೊಳಿಸಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಆರ್ಥಿಕವಾಗಿ ಮುನ್ನಡೆಯಲು ಮತ್ತು ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಭಾರತದಲ್ಲಿ ಅನುಕೂಲಕರ ಪರಿಸ್ಥಿತಿಗಳ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. ದೇಶದಲ್ಲಿ ಜಿಎಸ್ಟಿ ಕುರಿತು ದೀರ್ಘಕಾಲದಿಂದ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಆರ್ಥಿಕ ಏಕತೆಯಲ್ಲಿ ಜಿಎಸ್ಟಿ ಮಹತ್ವದ ಪಾತ್ರ ವಹಿಸಿದೆ ಮತ್ತು ಹಿಂದಿನ ಸರ್ಕಾರದ ಕೊಡುಗೆಗಳನ್ನು ಒಪ್ಪಿಕೊಂಡಿದೆ ಹಾಗು ಪ್ರಸ್ತುತ ಸರ್ಕಾರಕ್ಕೆ ಅದನ್ನು ಕಾರ್ಯಗತಗೊಳಿಸಲು ಅವಕಾಶವಿದೆ ಎಂದು ಪ್ರಧಾನಿ ಹೇಳಿದರು, ಅದು "ಒಂದು ರಾಷ್ಟ್ರ, ಒಂದು ತೆರಿಗೆ" ಪರಿಕಲ್ಪನೆಯತ್ತ ಸಾಗುತ್ತದೆ ಎಂದರು.  

ನಮ್ಮ ದೇಶದಲ್ಲಿ ಬಡವರಿಗೆ ಪಡಿತರ ಚೀಟಿಗಳು ಹೇಗೆ ಮೌಲ್ಯಯುತ ದಾಖಲೆಯಾಗಿವೆ ಮತ್ತು ಬಡ ವ್ಯಕ್ತಿಯು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಎದುರಿಸುವ ತೊಂದರೆಗಳನ್ನು ಪ್ರಸ್ತಾಪಿಸಿದ  ಶ್ರೀ ಮೋದಿ, ಅವರು ಅಂತಹ ಸಂದರ್ಭಗಳಲ್ಲಿ ಅವರು ಯಾವುದೇ ಪ್ರಯೋಜನಗಳಿಗೆ ಅರ್ಹರಾಗುತ್ತಿರಲಿಲ್ಲ ಎಂದು ಹೇಳಿದರು. ಈ ವಿಶಾಲ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನೂ ಅತ ಎಲ್ಲಿದ್ದರೂ ಸಮಾನ ಹಕ್ಕುಗಳನ್ನು ಹೊಂದಿರಬೇಕು ಎಂದು ಅವರು ಒತ್ತಿ ಹೇಳಿದರು. ಮತ್ತು ಈ ಏಕತೆಯ ಪ್ರಜ್ಞೆಯನ್ನು ಬಲಪಡಿಸಲು, ಸರ್ಕಾರವು "ಒಂದು ರಾಷ್ಟ್ರ, ಒಂದು ಪಡಿತರ ಚೀಟಿ" ಪರಿಕಲ್ಪನೆಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಬಡವರು ಮತ್ತು ಸಾಮಾನ್ಯ ನಾಗರಿಕರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವುದು ಬಡತನದ ವಿರುದ್ಧ ಹೋರಾಡುವ ಅವರ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರು ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಸೇವೆ ಲಭ್ಯವಿದ್ದರೂ, ಅವರು ದೂರದಲ್ಲಿರುವಾಗ ಮತ್ತು ಮಾರಣಾಂತಿಕ ಸಂದರ್ಭಗಳನ್ನು ಎದುರಿಸುತ್ತಿರುವಾಗಲೂ ಅದು ಲಭ್ಯವಿರಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಏಕತೆಯ ತತ್ವವನ್ನು ಎತ್ತಿಹಿಡಿಯಲು ಸರ್ಕಾರವು ಆಯುಷ್ಮಾನ್ ಭಾರತ್ ಮೂಲಕ "ಒಂದು ರಾಷ್ಟ್ರ, ಒಂದು ಆರೋಗ್ಯ ಕಾರ್ಡ್" ಉಪಕ್ರಮವನ್ನು ಪರಿಚಯಿಸಿದೆ ಎಂದು ಪ್ರಧಾನಿ ನುಡಿದರು. ಪುಣೆಯಲ್ಲಿ ಕೆಲಸ ಮಾಡುವ ಬಿಹಾರದ ದೂರದ ಪ್ರದೇಶದ ವ್ಯಕ್ತಿ ಕೂಡ ಆಯುಷ್ಮಾನ್ ಕಾರ್ಡ್‌ನೊಂದಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು ಎಂಬುದರತ್ತ ಅವರು ಗಮನ ಸೆಳೆದರು..

ದೇಶದ ಒಂದು ಭಾಗವು ವಿದ್ಯುತ್ ಹೊಂದಿದ್ದರೆ ಮತ್ತೊಂದು ಭಾಗವು ಪೂರೈಕೆ ಸಮಸ್ಯೆಗಳಿಂದ ಕತ್ತಲೆಯಲ್ಲಿದ್ದ ಸಂದರ್ಭಗಳಿದ್ದವು ಎಂಬುದನ್ನು  ಶ್ರೀ ಮೋದಿ ಎತ್ತಿ ತೋರಿಸಿದರು. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತವು ತನ್ನ ವಿದ್ಯುತ್ ಕೊರತೆಗಾಗಿ ಜಾಗತಿಕವಾಗಿ ಆಗಾಗ್ಗೆ ಟೀಕೆಗೆ ಒಳಗಾಗಿತ್ತು ಎಂದು ಅವರು ಹೇಳಿದರು. ಸಂವಿಧಾನದ ಸ್ಫೂರ್ತಿ ಮತ್ತು ಏಕತೆಯ ಮಂತ್ರವನ್ನು ಎತ್ತಿಹಿಡಿಯಲು ಸರ್ಕಾರವು "ಒಂದು ರಾಷ್ಟ್ರ, ಒಂದು ಗ್ರಿಡ್" ಉಪಕ್ರಮವನ್ನು ಜಾರಿಗೆ ತಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಇಂದು, ಭಾರತದ ಮೂಲೆ ಮೂಲೆಗೆ ವಿದ್ಯುತ್ತನ್ನು ಅಡೆತಡೆರಹಿತವಾಗಿ  ಸರಬರಾಜು ಮಾಡಬಹುದು ಎಂಬುದರತ್ತ  ಅವರು ಗಮನ ಸೆಳೆದರು.

ದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿಯನ್ನು ಪ್ರಸ್ತಾಪಿಸಿದ  ಪ್ರಧಾನಿ, ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಸರ್ಕಾರವು ಸಮತೋಲಿತ ಅಭಿವೃದ್ಧಿಯತ್ತ ಗಮನಹರಿಸುತ್ತಿದೆ ಎಂದು ಒತ್ತಿ ಹೇಳಿದರು. ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಹಿಮಾಲಯ ಪ್ರದೇಶಗಳು ಅಥವಾ ಮರುಭೂಮಿ ಪ್ರದೇಶಗಳಿರಲಿ, ಮೂಲಸೌಕರ್ಯವನ್ನು ಸಮಗ್ರವಾಗಿ ಸಬಲೀಕರಣಗೊಳಿಸಲು ಸರ್ಕಾರವು ಪ್ರಯತ್ನಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು. ಈ ಉಪಕ್ರಮವು ಅಭಿವೃದ್ಧಿಯ ಕೊರತೆಯಿಂದಾಗಿ ತಮ್ಮನ್ನು ದೂರದಲ್ಲಿಡಲಾಗಿದೆ ಎಂಬ  ಭಾವನೆಯನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರಲ್ಲದೆ, ಇದು  ಏಕತೆಯನ್ನು ಬೆಳೆಸುತ್ತದೆ ಎಂದೂ ಅಭಿಪ್ರಾಯಪಟ್ಟರು.

"ಉಳ್ಳವರು" ಮತ್ತು "ಇಲ್ಲದವರ" ನಡುವಿನ ಡಿಜಿಟಲ್ ವಿಭಜನೆಯ ಬಗ್ಗೆ ಒತ್ತು ನೀಡಿದ ಶ್ರೀ ಮೋದಿ ಅವರು ಡಿಜಿಟಲ್ ಇಂಡಿಯಾದಲ್ಲಿ ಭಾರತದ ಯಶಸ್ಸಿನ ಕಥೆಯು ಜಾಗತಿಕವಾಗಿ ದೊಡ್ಡ ಹೆಮ್ಮೆಯ ಮೂಲವಾಗಿದೆ ಎಂದು ನುಡಿದರು. ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣವು ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಅವರು ಹೇಳಿದರು. ಸಂವಿಧಾನದ ರಚನೆಕಾರರ ದೂರದೃಷ್ಟಿಯಿಂದ ಮಾರ್ಗದರ್ಶನ ಪಡೆದು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಭಾರತದ ಪ್ರತಿಯೊಂದು ಪಂಚಾಯತ್‌ಗೆ ಆಪ್ಟಿಕಲ್ ಫೈಬರ್ ಅನ್ನು ವಿಸ್ತರಿಸಲು ಸರ್ಕಾರವು ಕೆಲಸ ಮಾಡಿದೆ ಎಂದೂ ಹೇಳಿದರು.

ಸಂವಿಧಾನವು ಏಕತೆಯನ್ನು ನಿರೀಕ್ಷಿಸುತ್ತದೆ ಮತ್ತು ಈ ಉತ್ಸಾಹದಲ್ಲಿ ಮಾತೃಭಾಷೆಯ ಮಹತ್ವವನ್ನು ಗುರುತಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ಮಾತೃಭಾಷೆಯನ್ನು ಹತ್ತಿಕ್ಕುವುದರಿಂದ ದೇಶದ ಜನತೆಯನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಲು ಸಾಧ್ಯವಿಲ್ಲ ಎಂದ ಅವರು. ಹೊಸ ಶಿಕ್ಷಣ ನೀತಿಯು ಮಾತೃಭಾಷೆಗೆ ಮಹತ್ವದ ಪ್ರಾಮುಖ್ಯತೆಯನ್ನು ನೀಡಿದೆ ಎಂದೂ ಹೇಳಿದರು.   ಬಡ ಮಕ್ಕಳೂ ಸಹ ತಮ್ಮ ಸ್ಥಳೀಯ ಭಾಷೆಗಳಲ್ಲಿ ಕಲಿತು ವೈದ್ಯರು ಮತ್ತು ಇಂಜಿನಿಯರ್ ಆಗಲು ಇದು ಅನುವು ಮಾಡಿಕೊಡುತ್ತದೆ. ಸಂವಿಧಾನವು ಪ್ರತಿಯೊಬ್ಬರನ್ನು ಬೆಂಬಲಿಸುತ್ತದೆ ಮತ್ತು ಅವರ ಅಗತ್ಯಗಳನ್ನು ಈಡೇರಿಸಲು ಆದೇಶಿಸುತ್ತದೆ ಎಂದು ಅವರು ಹೇಳಿದರು. ಹಲವಾರು ಶಾಸ್ತ್ರೀಯ ಭಾಷೆಗಳಿಗೆ ಸರಿಯಾದ ಸ್ಥಾನ ಮತ್ತು ಗೌರವವನ್ನು ನೀಡಲಾಗಿದೆ ಎಂದು ಶ್ರೀ ಮೋದಿ ಅವರು ಎತ್ತಿ ತೋರಿಸಿದರು. “ಏಕ್ ಭಾರತ್ ಶ್ರೇಷ್ಠ ಭಾರತ್” ಅಭಿಯಾನವು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತಿದೆ ಮತ್ತು ಹೊಸ ಪೀಳಿಗೆಯಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ತುಂಬುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಶಿ ತಮಿಳು ಸಂಗಮಮ್ ಮತ್ತು ತೆಲುಗು ಕಾಶಿ ಸಂಗಮಮ್ ಮಹತ್ವದ ಸಾಂಸ್ಥಿಕ ಕಾರ್ಯಕ್ರಮಗಳಾಗಿ ಮಾರ್ಪಟ್ಟಿವೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ  ಶ್ರೀ ಮೋದಿ, ಈ ಸಾಂಸ್ಕೃತಿಕ ಉಪಕ್ರಮಗಳು ಸಾಮಾಜಿಕ ಬಂಧಗಳನ್ನು ಬಲಪಡಿಸುತ್ತವೆ ಎಂದೂ ಒತ್ತಿ ಹೇಳಿದರು. ಸಂವಿಧಾನದ ಮೂಲ ತತ್ವಗಳಲ್ಲಿ ಭಾರತದ ಏಕತೆಯ ಮಹತ್ವವನ್ನು ಗುರುತಿಸಲಾಗಿದೆ ಮತ್ತು ಇದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು.

ಸಂವಿಧಾನವು 75ನೇ ವರ್ಷಾಚರಣೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ 25, 50 ಮತ್ತು 60 ವರ್ಷಗಳಂತಹ ಮೈಲಿಗಲ್ಲುಗಳು ಸಹ ಮಹತ್ವವನ್ನು ಹೊಂದಿವೆ ಎಂದು ಪ್ರಧಾನಿ ಹೇಳಿದರು. ಇತಿಹಾಸವನ್ನು ಪ್ರತಿಬಿಂಬಿಸಿದ ಅವರು, ಸಂವಿಧಾನದ 25 ನೇ ವರ್ಷಾಚರಣೆಯ ಸಂದರ್ಭದಲ್ಲಿ, ದೇಶದಲ್ಲಿ ಅದನ್ನು ಹರಿದು ಹಾಕಲಾಯಿತು. ತುರ್ತು ಪರಿಸ್ಥಿತಿಯನ್ನು ಹೇರಲಾಯಿತು, ಸಾಂವಿಧಾನಿಕ ವ್ಯವಸ್ಥೆಗಳನ್ನು ಕಿತ್ತುಹಾಕಲಾಯಿತು, ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು, ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಬೀಗ ಹಾಕಲಾಯಿತು ಎಂದು ಒತ್ತಿ ಹೇಳಿದರು. ಆಗ ಪ್ರಜಾಪ್ರಭುತ್ವದ ಕತ್ತು ಹಿಸುಕಲಾಯಿತು ಮತ್ತು ಸಂವಿಧಾನ ರಚನೆಕಾರರ ತ್ಯಾಗ ಬಲಿದಾನವನ್ನು ಸಮಾಧಿ ಮಾಡಲು ಪ್ರಯತ್ನಿಸಲಾಯಿತು ಎಂದೂ ಪ್ರಧಾನಿ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ರಾಷ್ಟ್ರವು 2000ದ ನವೆಂಬರ್ 26 ರಂದು ಸಂವಿಧಾನದ 50 ನೇ ವರ್ಷಾಚರಣೆಯನ್ನು ನಡೆಸಿತು ಎಂದು ಶ್ರೀ ಮೋದಿ ವಿವರಿಸಿದರು. ಅಟಲ್ ವಾಜಪೇಯಿ ಜೀ ಅವರು ಪ್ರಧಾನ ಮಂತ್ರಿಯಾಗಿ ರಾಷ್ಟ್ರಕ್ಕೆ ವಿಶೇಷ ಸಂದೇಶವನ್ನು ನೀಡಿದರು, ಏಕತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಏಕತೆ, ಸಾರ್ವಜನಿಕ ಸಹಭಾಗಿತ್ವ ಮತ್ತು ಪಾಲುದಾರಿಕೆಯ ಮಹತ್ವವನ್ನು ಅವರು ಸಾರಿದರು. ಶ್ರೀ ವಾಜಪೇಯಿ ಅವರ ಪ್ರಯತ್ನಗಳು ಸಂವಿಧಾನದ ಸ್ಫೂರ್ತಿಯನ್ನು ಪ್ರತಿನಿಧಿಸಿದವು ಮತ್ತು ಸಾರ್ವಜನಿಕರನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದ್ದವು ಎಂದು ಪ್ರಧಾನ ಮಂತ್ರಿ ನುಡಿದರು.  

ಸಂವಿಧಾನದ 50ನೇ ವರ್ಷಾಚರಣೆ ಸಂದರ್ಭದಲ್ಲಿ ತಮಗೆ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಮುಖ್ಯಮಂತ್ರಿಯಾಗುವ ಭಾಗ್ಯ ಸಿಕ್ಕಿತ್ತು ಎಂದು ಪ್ರಧಾನಿ ಹೇಳಿದರು. ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗುಜರಾತ್‌ನಲ್ಲಿ ಸಂವಿಧಾನದ 60 ನೇ ವರ್ಷಾಚರಣೆಯನ್ನು ಮಾಡಲಾಯಿತು.ಇತಿಹಾಸದಲ್ಲಿ ಅದೇ ಮೊದಲ ಬಾರಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿ ಸಂವಿಧಾನವನ್ನು ಆನೆಯ ಮೇಲಿಟ್ಟು ಸಂವಿಧಾನ ಗೌರವ ಯಾತ್ರೆ ನಡೆಸಲಾಯಿತು ಎಂದು ಅವರು ಹೇಳಿದರು. ಇಂದು 75 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ವಿಶೇಷ ಮಹತ್ವವಿದೆ ಎಂದರಲ್ಲದೆ ಲೋಕಸಭೆಯಲ್ಲಿ ಹಿರಿಯ ನಾಯಕರೊಬ್ಬರು ಜನವರಿ 26 ಅಸ್ತಿತ್ವದಲ್ಲಿರುವ  ಕಾರಣ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸುವ ಅಗತ್ಯವನ್ನು ಪ್ರಶ್ನಿಸಿದ ಘಟನೆಯನ್ನು ನೆನಪಿಸಿಕೊಂಡರು.

ವಿಶೇಷ ಅಧಿವೇಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿ, ಹೊಸ ಪೀಳಿಗೆಗೆ ಮೌಲ್ಯಯುತವಾಗಿರುವ ಸಂವಿಧಾನದ ಶಕ್ತಿ ಮತ್ತು ವೈವಿಧ್ಯತೆಯ ಬಗ್ಗೆ ಚರ್ಚಿಸಲು ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಆದಾಗ್ಯೂ, ಪ್ರತಿಯೊಬ್ಬರಿಗೂ  ತಮ್ಮದೇ ಆದ ಅಡ್ಡಿಗಳಿವೆ್, ಅವರು ವಿವಿಧ ರೂಪಗಳಲ್ಲಿ ತಮ್ಮದೇ ಆದ ಅನುಮಾನಗಳನ್ನು ಹೊಂದಿದ್ದಾರೆ, ಕೆಲವರು ತಮ್ಮ ವೈಫಲ್ಯಗಳನ್ನು ಬಹಿರಂಗಪಡಿಸುತ್ತಾರೆ ಎಂದ ಅವರು. ಪಕ್ಷಾತೀತ ಭಾವನೆಗಳನ್ನು ಮೀರಿ ಚರ್ಚೆಗಳು ಬೆಳೆದು ರಾಷ್ಟ್ರೀಯ ಹಿತಾಸಕ್ತಿಯತ್ತ ಗಮನಹರಿಸಿದರೆ ಉತ್ತಮ, ಅದು ಹೊಸ ಪೀಳಿಗೆಯನ್ನು ಶ್ರೀಮಂತಗೊಳಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಸಂವಿಧಾನದ ಬಗ್ಗೆ ವಿಶೇಷ ಗೌರವವನ್ನು ವ್ಯಕ್ತಪಡಿಸಿದ ಪ್ರಧಾನಿ, ಸಂವಿಧಾನದ ಆತ್ಮವು ಅನೇಕ ಜನರು ಇಂದು ಇರುವ ಸ್ಥಿತಿಗೆ ತಲುಪಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು. ಯಾವುದೇ ಹಿನ್ನೆಲೆ ಇಲ್ಲದೆ, ಸಂವಿಧಾನದ ಶಕ್ತಿ ಮತ್ತು ಜನರ ಆಶೀರ್ವಾದವೇ ಅವರನ್ನು ಇಲ್ಲಿಗೆ ಕರೆತಂದಿದೆ ಎಂದು ಅವರು ಒತ್ತಿ ಹೇಳಿದರು. ಸಂವಿಧಾನದ ಕಾರಣದಿಂದಾಗಿ ಇದೇ ರೀತಿಯ ಪರಿಸ್ಥಿತಿಗಳಲ್ಲಿದ್ದ ಅನೇಕ ವ್ಯಕ್ತಿಗಳು ಮಹತ್ವದ ಸ್ಥಾನಗಳನ್ನು ತಲುಪಿದ್ದಾರೆ ಎಂಬುದರತ್ತ ಶ್ರೀ ಮೋದಿ ಬೆಟ್ಟು ಮಾಡಿದರು. ಒಂದು ಬಾರಿ ಅಲ್ಲ, ಮೂರು ಬಾರಿ ಅಪಾರ ನಂಬಿಕೆಯನ್ನು ದೇಶ ಸಂವಿಧಾನದಲ್ಲಿ ತೋರಿರುವುದು ದೊಡ್ಡ ಭಾಗ್ಯ ಎಂದರು. ಸಂವಿಧಾನ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದೂ ಅವರು ವಿಶ್ಲೇಷಿಸಿದರು.  

1947 ರಿಂದ 1952 ರವರೆಗೆ, ಭಾರತವು ಚುನಾಯಿತ ಸರ್ಕಾರವನ್ನು ಹೊಂದಿರಲಿಲ್ಲ ಆದರೆ ಯಾವುದೇ ಚುನಾವಣೆಗಳಿಲ್ಲದೆ ತಾತ್ಕಾಲಿಕ, ಆಯ್ದ ಸರ್ಕಾರವನ್ನು ಹೊಂದಿತ್ತು ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು. 1952 ರ ಮೊದಲು ರಾಜ್ಯಸಭೆ ರಚನೆಯಾಗಿರಲಿಲ್ಲ ಮತ್ತು ರಾಜ್ಯ ಚುನಾವಣೆಗಳು ಇರಲಿಲ್ಲ, ಅಂದರೆ ಜನರಿಂದ ಯಾವುದೇ ಜನಾದೇಶ ಇರಲಿಲ್ಲ ಎಂದು ಅವರು ಹೇಳಿದರು. ಇದರ ಹೊರತಾಗಿಯೂ, 1951ರಲ್ಲಿ, ಚುನಾಯಿತ ಸರ್ಕಾರವಿಲ್ಲದೆ, ಸಂವಿಧಾನವನ್ನು ತಿದ್ದುಪಡಿ ಮಾಡಲು ಸುಗ್ರೀವಾಜ್ಞೆಯನ್ನು ಹೊರಡಿಸಲಾಯಿತು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡಲಾಯಿತು. ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಒತ್ತಿ ಹೇಳಿದರು. ಸಂವಿಧಾನ ರಚನಾ ಸಭೆಯಲ್ಲಿ ಇಂತಹ ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಅವಕಾಶ ಸಿಕ್ಕಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರು, ಇದಂತೂ ಸಂವಿಧಾನ ರಚನೆಕಾರರಿಗೆ ಮಾಡಿದ ಘೋರ ಅವಮಾನ ಎಂದು ಟೀಕಿಸಿದರು. ಸಂವಿಧಾನ ರಚನಾ ಸಭೆಯಲ್ಲಿ ಸಾಧಿಸಲಾಗದ್ದನ್ನು ಚುನಾಯಿತರಲ್ಲದ ಪ್ರಧಾನಿ ಹಿಂಬಾಗಿಲಿನಿಂದ ಮಾಡಿದ್ದು ಪಾಪ ಎಂದು ಪ್ರಧಾನಿ ಹೇಳಿದರು.

1971ರಲ್ಲಿ, ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ, ನ್ಯಾಯಾಂಗದ ರೆಕ್ಕೆಗಳನ್ನು ಕತ್ತರಿಸುವ ಮೂಲಕ ಸುಪ್ರೀಂ ಕೋರ್ಟ್ ತೀರ್ಪನ್ನು ಬುಡಮೇಲು ಮಾಡಲಾಯಿತು  ಎಂದು ಪ್ರಧಾನಿ ಎತ್ತಿ ತೋರಿಸಿದರು. ನ್ಯಾಯಾಂಗ ಪರಿಶೀಲನೆಯಿಲ್ಲದೆ ಸಂಸತ್ತು ಸಂವಿಧಾನದ ಯಾವುದೇ ಪರಿಚ್ಛೇದವನ್ನು ಬದಲಾಯಿಸಬಹುದು ಎಂದು ತಿದ್ದುಪಡಿ ಹೇಳುತ್ತದೆ, ಇದು ನ್ಯಾಯಾಲಯಗಳ ಅಧಿಕಾರವನ್ನು ಕಸಿದುಕೊಳ್ಳುವಂತಹದ್ದು ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು. ಇದರಿಂದ ಅಂದಿನ ಸರಕಾರಕ್ಕೆ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿ ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು ಎಂದರು.

ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಯಿತು ಮತ್ತು ಪ್ರಜಾಪ್ರಭುತ್ವದ  ಕತ್ತು ಹಿಸುಕಲಾಯಿತು ಎಂದು ಪ್ರಧಾನಿ ಹೇಳಿದರು. 1975ರಲ್ಲಿ, 39ನೇ ತಿದ್ದುಪಡಿಯನ್ನು ಅಂಗೀಕರಿಸಲಾಯಿತು, ಯಾವುದೇ ನ್ಯಾಯಾಲಯವು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಸ್ಪೀಕರ್ ಚುನಾವಣೆಗಳನ್ನು ಪ್ರಶ್ನಿಸುವುದನ್ನು ತಡೆಯುತ್ತದೆ ಮತ್ತು ಇದು ಹಿಂದಿನ ಕ್ರಮಗಳನ್ನು ಒಳಗೊಳ್ಳುವಂತೆ ಮಾಡಲು ಇದನ್ನು ಪೂರ್ವಾನ್ವಯ ಮಾಡಲಾಯಿತು ಎಂದು ಅವರು ಒತ್ತಿ ಹೇಳಿದರು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು, ಸಾವಿರಾರು ಮಂದಿಯನ್ನು ಜೈಲಿಗೆ ಹಾಕಲಾಯಿತು, ನ್ಯಾಯಾಂಗದ ಕತ್ತು ಹಿಸುಕಲಾಯಿತು ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಬೀಗ ಹಾಕಲಾಯಿತು ಎಂದು ಶ್ರೀ ಮೋದಿಯವರು ಮತ್ತಷ್ಟು ವಿವರಿಸಿದರು. ಬದ್ಧತೆಯ ನ್ಯಾಯಾಂಗದ ಕಲ್ಪನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಯಿತು ಎಂದು ಅವರು ಹೇಳಿದರು. ನ್ಯಾಯಾಲಯದ ಮೊಕದ್ದಮೆಯಲ್ಲಿ ಆಗಿನ ಪ್ರಧಾನಿ ವಿರುದ್ಧ ತೀರ್ಪು ನೀಡಿದ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಅವರ ಹಿರಿತನದ ಹೊರತಾಗಿಯೂ ಭಾರತದ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ನಿರಾಕರಿಸಲಾಯಿತು ಎಂಬುದರತ್ತ ಪ್ರಧಾನಿ ಗಮನ ಸೆಳೆದರು. ಇದು ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳ ಉಲ್ಲಂಘನೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಶಾ ಬಾನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ಮರಿಸಿದ ಪ್ರಧಾನ ಮಂತ್ರಿ ಅವರು ಸಂವಿಧಾನದ ಘನತೆ ಮತ್ತು ಸ್ಪೂರ್ತಿಯ ಆಧಾರದ ಮೇಲೆ ಭಾರತೀಯ ಮಹಿಳೆಗೆ ನ್ಯಾಯ ಒದಗಿಸಿದುದನ್ನು ನೆನಪಿಸಿಕೊಂಡರು.  ಸುಪ್ರೀಂ ಕೋರ್ಟ್ ವಯಸ್ಸಾದ ಮಹಿಳೆಗೆ ನ್ಯಾಯಯುತವಾದ ಹಕ್ಕನ್ನು ನೀಡಿತು, ಆದರೆ ಅಂದಿನ ಪ್ರಧಾನಿ ಈ ಸ್ಪೂರ್ತಿಯನ್ನು ತಳ್ಳಿಹಾಕಿದರು, ನಿರಾಕರಿಸಿದರು, ಸಂವಿಧಾನದ ಉದ್ದೇಶವನ್ನು/ಸಾರವನ್ನು ತ್ಯಾಗ ಮಾಡಿದರು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮತ್ತೊಮ್ಮೆ ರದ್ದುಗೊಳಿಸಲು ಸಂಸತ್ತು ಕಾನೂನನ್ನು ಅಂಗೀಕರಿಸಿತು ಎಂದೂ  ಪ್ರಧಾನಿ ಹೇಳಿದರು.

ಇತಿಹಾಸದಲ್ಲಿ ಮೊದಲ ಬಾರಿಗೆ ಸಂವಿಧಾನಕ್ಕೆ ಆಳವಾದ ಗಾಯಗಳಾದವು ಎಂದು ಹೇಳಿದ  ಪ್ರಧಾನಿ , ಸಂವಿಧಾನ ರಚನಾಕಾರರು ಚುನಾಯಿತ ಸರ್ಕಾರ ಮತ್ತು ಪ್ರಧಾನಿಯನ್ನು ಕಲ್ಪಿಸಿದ್ದಾರೆ,  ಆದಾಗ್ಯೂ, ಯಾವುದೇ ಪ್ರಮಾಣ ವಚನ ಸ್ವೀಕರಿಸದ ಸಂವಿಧಾನೇತರ ಘಟಕವಾದ ರಾಷ್ಟ್ರೀಯ ಸಲಹಾ ಮಂಡಳಿಯನ್ನು ಪ್ರಧಾನಮಂತ್ರಿ ಕಚೇರಿಯ (ಪಿ.ಎಂ.ಒ.) ಮೇಲೆ ಇರಿಸಲಾಯಿತು. ಈ ಘಟಕಕ್ಕೆ ಪಿಎಂಒ ಮೇಲೆ ಅನಧಿಕೃತ ಸ್ಥಾನಮಾನ ನೀಡಲಾಯಿತು ಎಂದು ಪ್ರಧಾನಿ ವಿವರಿಸಿದರು.

ಭಾರತೀಯ ಸಂವಿಧಾನದ ಅಡಿಯಲ್ಲಿ, ಜನರು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಮತ್ತು ಆ ಸರ್ಕಾರದ ಮುಖ್ಯಸ್ಥರು ಸಚಿವ ಸಂಪುಟವನ್ನು ರಚಿಸುತ್ತಾರೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಸಂವಿಧಾನಕ್ಕೆ ಅಗೌರವ ತೋರಿಸುವ  ದುರಹಂಕಾರಿ ವ್ಯಕ್ತಿಗಳು ಸಚಿವ ಸಂಪುಟದ ನಿರ್ಧಾರವನ್ನು ಪತ್ರಕರ್ತರ ಮುಂದೆ ಹರಿದು ಹಾಕಿದ ಘಟನೆಯನ್ನು ನೆನಪಿಸಿಕೊಂಡ ಶ್ರೀ ಮೋದಿ, ಈ ವ್ಯಕ್ತಿಗಳು ವಾಡಿಕೆಯಂತೆ ಸಂವಿಧಾನದೊಂದಿಗೆ ಆಟವಾಡುತ್ತಾರೆ ಮತ್ತು ಅದನ್ನು ಗೌರವಿಸುವುದಿಲ್ಲ ಎಂದು ಹೇಳಿದರು. ಆಗಿನ ಸಚಿವ ಸಂಪುಟವು ತನ್ನ ನಿರ್ಧಾರವನ್ನು ಬದಲಾಯಿಸಿದ್ದು ದುರದೃಷ್ಟಕರ ಎಂದೂ ಅವರು ಹೇಳಿದರು.

370ನೇ ವಿಧಿಯು ಸುಪ್ರಸಿದ್ಧವಾಗಿದ್ದರೂ, 35ಎ ಪರಿಚ್ಛೇದದ ಬಗ್ಗೆ ಕೆಲವೇ ಕೆಲವರು ತಿಳಿದಿರುತ್ತಾರೆ ಎಂಬುದರತ್ತ ಪ್ರಧಾನಿ ಗಮನ ಸೆಳೆದರು. ಸಂಸತ್ತಿನ ಅನುಮೋದನೆ ಇಲ್ಲದೆಯೇ 35ಎ ವಿಧಿಯನ್ನು ಹೇರಲಾಗಿದ್ದು, ಅದಕ್ಕೆ  ಸಂಸತ್ತಿನ ಅನುಮೋದನೆ ಪಡೆಯಬೇಕಿತ್ತು ಎಂಬುದನ್ನು ಅವರು ಒತ್ತಿ ಹೇಳಿದರು. ಸಂವಿಧಾನದ ಪ್ರಾಥಮಿಕ ರಕ್ಷಕ ಸಂಸತ್ತನ್ನು ಬೈಪಾಸ್ ಮಾಡಲಾಗಿದೆ ಮತ್ತು ದೇಶದ ಮೇಲೆ 35 ಎ ವಿಧಿಯನ್ನು ಹೇರಲಾಗಿದೆ, ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ಕಾರಣವಾಯಿತು ಎಂದು ಪ್ರಧಾನಿ ಹೇಳಿದರು. ಸಂಸತ್ತನ್ನು ಕತ್ತಲೆಯಲ್ಲಿಟ್ಟು ರಾಷ್ಟ್ರಪತಿಯವರ ಆದೇಶದ ಮೂಲಕ ಇದನ್ನು ಮಾಡಲಾಗಿದೆ ಎಂಬುದನ್ನು ಅವರು ಎತ್ತಿ ತೋರಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ಡಾ. ಅಂಬೇಡ್ಕರ್ ಅವರ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಲಾಯಿತು ಆದರೆ ಮುಂದಿನ 10 ವರ್ಷಗಳವರೆಗೆ ಈ ಕಾರ್ಯವನ್ನು ಪ್ರಾರಂಭಿಸಲಿಲ್ಲ ಅಥವಾ ಅದಕ್ಕೆ ಅವಕಾಶ ಒದಗಿಸಲಿಲ್ಲ ಎಂದು ಶ್ರೀ ಮೋದಿ ಹೇಳಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಡಾ.ಅಂಬೇಡ್ಕರ್ ಅವರ ಮೇಲಿನ ಗೌರವದಿಂದ ಅಲಿಪುರ ರಸ್ತೆಯಲ್ಲಿ ಡಾ.ಅಂಬೇಡ್ಕರ್ ಸ್ಮಾರಕವನ್ನು ನಿರ್ಮಿಸಿ ಕಾಮಗಾರಿ ಪೂರ್ಣಗೊಳಿಸಿದ್ದೇವೆ ಎಂದು ಪ್ರಧಾನಿ ಒತ್ತಿ ಹೇಳಿದರು.

1992 ರಲ್ಲಿ, ಶ್ರೀ ಚಂದ್ರಶೇಖರ್ ಅವರ ಅಧಿಕಾರಾವಧಿಯಲ್ಲಿ, ದಿಲ್ಲಿಯ ಜನಪಥ್ ಬಳಿ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಯಿತು ಎಂಬುದನ್ನು ನೆನಪಿಸಿಕೊಂಡ ಶ್ರೀ ಮೋದಿ, ಈ ಯೋಜನೆಯು 40 ವರ್ಷಗಳ ಕಾಲ ಕಾಗದದ ಮೇಲೆ ಉಳಿಯಿತು ಮತ್ತು ಕಾರ್ಯಗತಗೊಳ್ಳಲಿಲ್ಲ ಎಂದು ಹೇಳಿದರು. 2015ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಣ್ಣಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವುದನ್ನು ಸಹ ಪ್ರಧಾನಿ ಉಲ್ಲೇಖಿಸಿದರು ಮತ್ತು. ಸ್ವಾತಂತ್ರ್ಯದ  ಬಹಳ ದಿನಗಳ ಬಳಿಕ ಅವರಿಗೆ ಆ ಪ್ರಶಸ್ತಿ ಸಂದಿತು ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆಯನ್ನು ಶ್ರೀ ಮೋದಿಯವರು ಒತ್ತಿ ಹೇಳಿದರು. ಅಂಬೇಡ್ಕರ್ ಜನ್ಮದಿನವನ್ನು ಜಾಗತಿಕವಾಗಿ 120 ದೇಶಗಳಲ್ಲಿ ಆಚರಿಸಲಾಯಿತು ಮತ್ತು ಡಾ. ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ಡಾ. ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮೊವ್‌ನಲ್ಲಿ ಸ್ಮಾರಕವನ್ನು ಪುನರ್ನಿರ್ಮಿಸಲಾಯಿತು ಎಂಬುದನ್ನವರು ಒತ್ತಿ ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಕೊಂಡಾಡಿದ ಪ್ರಧಾನ ಮಂತ್ರಿ ಅವರು, ಸಮಾಜದ ಕಟ್ಟಕಡೆಯ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಬದ್ಧವಾಗಿರುವ ದಾರ್ಶನಿಕ ಅವರು ಎಂದು ಬಣ್ಣಿಸಿದರಲ್ಲದೆ, ಭಾರತ ಅಭಿವೃದ್ಧಿ ಹೊಂದಬೇಕಾದರೆ ದೇಶದ ಯಾವುದೇ ಭಾಗವು ದುರ್ಬಲವಾಗಿರಬಾರದು ಎಂದು ಡಾ. ಅಂಬೇಡ್ಕರ್ ನಂಬಿದ್ದರು ಎಂದೂ ಹೇಳಿದರು.  ಈ ಕಾಳಜಿಯು ಮೀಸಲಾತಿ ವ್ಯವಸ್ಥೆಯನ್ನು ಸ್ಥಾಪಿಸಲು ಕಾರಣವಾಯಿತು ಎಂದು ಅವರು ವಿವರಿಸಿದರು. ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವವರು ಮೀಸಲಾತಿ ವ್ಯವಸ್ಥೆಯೊಳಗೆ ಧಾರ್ಮಿಕ ತುಷ್ಟೀಕರಣದ ನೆಪದಲ್ಲಿ ವಿವಿಧ ಕ್ರಮಗಳನ್ನು ಜಾರಿಗೆ ತರಲು ಯತ್ನಿಸಿದ್ದು, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತಿದೆ ಎಂದು ಪ್ರಧಾನಿ ಆರೋಪಿಸಿದರು.

ಹಿಂದಿನ ಸರ್ಕಾರಗಳು ಮೀಸಲಾತಿಯನ್ನು ಬಲವಾಗಿ ವಿರೋಧಿಸಿದವು ಎಂದು ಪ್ರಧಾನಿ ಹೇಳಿದರು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾರತದಲ್ಲಿ ಸಮಾನತೆ ಮತ್ತು ಸಮತೋಲಿತ ಅಭಿವೃದ್ಧಿಗಾಗಿ ಮೀಸಲಾತಿಯನ್ನು ಪರಿಚಯಿಸಿದರು. ಮಂಡಲ್ ಆಯೋಗದ ವರದಿಯನ್ನು ದಶಕಗಳಿಂದ ಕಪಾಟಿನೊಳಗೆ ಇಡಲಾಯಿತು, ಇದರಿಂದ ಒಬಿಸಿಗಳಿಗೆ ಮೀಸಲಾತಿ ವಿಳಂಬವಾಯಿತು ಎಂದು ಪ್ರಧಾನಿ ನುಡಿದರು. ಈ ಹಿಂದೆಯೇ ಮೀಸಲಾತಿ ನೀಡಿದ್ದರೆ ಅನೇಕ ಒಬಿಸಿ ವ್ಯಕ್ತಿಗಳು ಇಂದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂಬುದರತ್ತ ಪ್ರಧಾನಿ ಗಮನ ಸೆಳೆದರು.

ಸಂವಿಧಾನದ ಕರಡು ರಚನೆಯ ಸಮಯದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಬೇಕೇ ಎಂಬುದರ ಕುರಿತು ವ್ಯಾಪಕವಾದ ಚರ್ಚೆಗಳು ನಡೆದಿರುವುದನ್ನು  ಉಲ್ಲೇಖಿಸಿದ  ಶ್ರೀ ಮೋದಿ, ಭಾರತದಂತಹ ದೇಶದ ಏಕತೆ ಮತ್ತು ಸಮಗ್ರತೆಗೆ ಧರ್ಮ ಅಥವಾ ಸಮುದಾಯದ ಆಧಾರದ ಮೇಲೆ ಮೀಸಲಾತಿ ಕಾರ್ಯಸಾಧ್ಯವಲ್ಲ ಎಂದು ಸಂವಿಧಾನ ರಚನಾಕಾರರು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಇದು ಚೆನ್ನಾಗಿ ಪರಿಗಣಿಸಿದ ನಿರ್ಧಾರವಾಗಿದೆ, ಪ್ರಮಾದವಲ್ಲ ಎಂದು ಅವರು ಹೇಳಿದರು. ಹಿಂದಿನ ಸರ್ಕಾರಗಳು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ಜಾರಿಗೆ ತಂದವು, ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಶ್ರೀ ಮೋದಿ ಹೇಳಿದರು. ಕೆಲವು ಅನುಷ್ಠಾನಗಳ ಹೊರತಾಗಿಯೂ, ಸುಪ್ರೀಂ ಕೋರ್ಟ್ ಅಂತಹ ಕ್ರಮಗಳನ್ನು ರದ್ದುಗೊಳಿಸಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಉದ್ದೇಶವು ಸಂವಿಧಾನ ರಚನೆಕಾರರ ಭಾವನೆಗಳಿಗೆ ಧಕ್ಕೆ ತರುವ ನಾಚಿಕೆಗೇಡಿನ ಪ್ರಯತ್ನ ಎಂಬುದು ಸ್ಪಷ್ಟವಾಗಿದೆ ಎಂದೂ  ಪ್ರಧಾನಿ ಟೀಕಿಸಿದರು.

ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜ್ವಲಂತ ಸಮಸ್ಯೆ ಎಂದು ವಿವರಿಸಿದ ಪ್ರಧಾನಿ, ಇದು ಸಂವಿಧಾನ ಸಭೆಯನ್ನು ಕಡೆಗಣಿಸಿಲ್ಲ, ಯುಸಿಸಿ ಕುರಿತು ಸಂವಿಧಾನ ಸಭೆಯು ವ್ಯಾಪಕ ಚರ್ಚೆಯಲ್ಲಿ ತೊಡಗಿದೆ ಮತ್ತು ಚುನಾಯಿತ ಸರ್ಕಾರವು ಅದನ್ನು ಜಾರಿಗೆ ತರುವುದು ಉತ್ತಮ ಎಂದು ನಿರ್ಧರಿಸಿದೆ ಎಂದು ಹೇಳಿದರು. ಇದು ಸಂವಿಧಾನ ಸಭೆಯ ನಿರ್ದೇಶನ ಎಂದು ಅವರು ಹೇಳಿದರು. ಡಾ. ಅಂಬೇಡ್ಕರ್ ಅವರು ಯುಸಿಸಿಗಾಗಿ ಪ್ರತಿಪಾದಿಸಿದರು ಮತ್ತು ಅವರ ಮಾತುಗಳನ್ನು ತಪ್ಪಾಗಿ ನಿರೂಪಿಸಬಾರದು ಎಂದು ಪ್ರಧಾನಿ ಮನವಿ ಮಾಡಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ವೈಯಕ್ತಿಕ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಬಲವಾಗಿ ಪ್ರತಿಪಾದಿಸಿದ್ದರು ಎಂಬುದನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು, ಸಂವಿಧಾನ ರಚನಾ ಸಭೆಯ ಸದಸ್ಯ ಕೆ.ಎಂ. ಮುನ್ಶಿ ಅವರು ರಾಷ್ಟ್ರೀಯ ಏಕತೆ ಮತ್ತು ಆಧುನಿಕತೆಗೆ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಗತ್ಯ ಎಂದು ಹೇಳಿದ್ದನ್ನು ಪ್ರಸ್ತಾಪಿಸಿದರು. ಯುಸಿಸಿಯ ಅಗತ್ಯವನ್ನು ಸುಪ್ರೀಂ ಕೋರ್ಟ್ ಪದೇ ಪದೇ ಒತ್ತಿ ಹೇಳುತ್ತಿದೆ ಮತ್ತು ಅದನ್ನು ಸಾಧ್ಯ ಇರುವಷ್ಟು ಬೇಗ ಜಾರಿಗೊಳಿಸಲು ಸರ್ಕಾರಗಳಿಗೆ ನಿರ್ದೇಶನ ನೀಡಿದೆ ಎಂದು ಶ್ರೀ ಮೋದಿ ಹೇಳಿದರು. ಸಂವಿಧಾನದ ಸ್ಫೂರ್ತಿ ಮತ್ತು ಅದರ ರಚನೆಕಾರರ ಆಶಯಗಳಿಗೆ ಅನುಗುಣವಾಗಿ, ಜಾತ್ಯತೀತ ನಾಗರಿಕ ಸಂಹಿತೆಯನ್ನು ಸ್ಥಾಪಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

ಹಿಂದಿನ ಘಟನೆಯೊಂದನ್ನು ಉಲ್ಲೇಖಿಸಿದ  ಪ್ರಧಾನಿ, ತಮ್ಮದೇ ಪಕ್ಷದ ಸಂವಿಧಾನವನ್ನು ಗೌರವಿಸದವರು ದೇಶದ ಸಂವಿಧಾನವನ್ನು ಹೇಗೆ ಗೌರವಿಸುತ್ತಾರೆ ಎಂದು ಪ್ರಶ್ನಿಸಿದರು.

1996 ರಲ್ಲಿ, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ಮತ್ತು ಸಂವಿಧಾನವನ್ನು ಗೌರವಿಸಿ ರಾಷ್ಟ್ರಪತಿಗಳು ಸರ್ಕಾರ ರಚಿಸಲು ಆಹ್ವಾನಿಸಿದ್ದರು ಎಂಬುದರತ್ತ  ಶ್ರೀ ಮೋದಿ ಗಮನ ಸೆಳೆದರು., ಅವರು ಸಂವಿಧಾನವನ್ನು ಗೌರವಿಸುವುದನ್ನು ಆಯ್ಕೆ ಮಾಡಿದ ಕಾರಣ ಸರ್ಕಾರವು ಕೇವಲ 13 ದಿನಗಳ ಕಾಲ ಉಳಿಯಿತು. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಚೌಕಾಸಿಯನ್ನು ಆರಿಸಿಕೊಳ್ಳಲಿಲ್ಲ ಆದರೆ ಸಂವಿಧಾನವನ್ನು ಗೌರವಿಸಿದರು ಮತ್ತು 13 ದಿನಗಳ ನಂತರ ರಾಜೀನಾಮೆ ನೀಡಿದರು ಎಂದು ಪ್ರಧಾನಿ ಒತ್ತಿ ಹೇಳಿದರು. 1998 ರಲ್ಲಿ ಎನ್‌ಡಿಎ ಸರ್ಕಾರ ಅಸ್ಥಿರತೆಯನ್ನು ಎದುರಿಸಿತು, ಆದರೆ ಸಂವಿಧಾನದ ಸ್ಫೂರ್ತಿಗೆ ಸಮರ್ಪಿತವಾದ ವಾಜಪೇಯಿ ಅವರ ಸರ್ಕಾರವು ಒಂದು ಮತದಿಂದ ಸೋಲು ಅಥವಾ ಅಸಾಂವಿಧಾನಿಕ ಸ್ಥಾನಗಳನ್ನು ಸ್ವೀಕರಿಸುವ ಬದಲು ರಾಜೀನಾಮೆ ನೀಡಲು ಆದ್ಯತೆ ನೀಡಿತು ಎಂದು ಅವರು ಹೇಳಿದರು. ಇದು ಅವರ ಇತಿಹಾಸ, ಮೌಲ್ಯಗಳು ಮತ್ತು ಸಂಪ್ರದಾಯ ಎಂದು ಒತ್ತಿ ಹೇಳಿದರು. ಮತ್ತೊಂದೆಡೆ, ಮತಕ್ಕಾಗಿ ನಗದು ಹಗರಣದ ಸಂದರ್ಭದಲ್ಲಿ, ಅಲ್ಪಸಂಖ್ಯಾತ ಸರ್ಕಾರವನ್ನು ಉಳಿಸಲು ಹಣವನ್ನು ಬಳಸಲಾಯಿತು, ಭಾರತೀಯ ಪ್ರಜಾಪ್ರಭುತ್ವದ ಮನೋಭಾವವನ್ನು/ಸ್ಪೂರ್ತಿಯನ್ನು ಮತಗಳನ್ನು ಖರೀದಿಸುವ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಾಯಿತು ಎಂಬುದರತ್ತ ಅವರು ಗಮನ ಸೆಳೆದರು.

2014 ರ ನಂತರ, ಎನ್‌.ಡಿ.ಎ. ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವ ಅವಕಾಶದೊಂದಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನೀಡಲಾಯಿತು ಎಂದು ಶ್ರೀ ಮೋದಿ ಹೇಳಿದರು. ದೇಶವನ್ನು ಹಳೆಯ ಕಾಯಿಲೆಗಳಿಂದ ಮುಕ್ತಗೊಳಿಸಲು ಅವರು ಅಭಿಯಾನವನ್ನು ಪ್ರಾರಂಭಿಸಿದರು. ಕಳೆದ 10 ವರ್ಷಗಳಲ್ಲಿ, ಅವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ, ಅದರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಸಂವಿಧಾನದ ಆತ್ಮಕ್ಕೆ ಸಂಪೂರ್ಣ ಸಮರ್ಪಣೆಯೊಂದಿಗೆ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು. ಒಬಿಸಿ ಸಮುದಾಯವು ಮೂರು ದಶಕಗಳಿಂದ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿದೆ ಎಂದು ಪ್ರಧಾನಿ ನುಡಿದರು. ಈ ಸ್ಥಾನಮಾನವನ್ನು ನೀಡಲು ತಾವು  ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು, ಅದಕ್ಕಾಗಿ ತಾವು  ಹೆಮ್ಮೆಪಡುವುದಾಗಿಯೂ  ಹೇಳಿದರು. ಸಮಾಜದ ಕಟ್ಟಕಡೆಯ ವರ್ಗಗಳೊಂದಿಗೆ ನಿಲ್ಲುವುದು ತಮ್ಮ ಕರ್ತವ್ಯವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು, ಅದಕ್ಕಾಗಿಯೇ ಸಾಂವಿಧಾನಿಕ ತಿದ್ದುಪಡಿಯನ್ನು ಮಾಡಲಾಗಿದೆ ಎಂದರು.

ಜಾತಿಯನ್ನು ಲೆಕ್ಕಿಸದೆ, ಬಡತನದಿಂದಾಗಿ ಅವಕಾಶಗಳನ್ನು ಪಡೆಯಲು ಸಾಧ್ಯವಾಗದ ಮತ್ತು ಪ್ರಗತಿ ಸಾಧಿಸಲು ಸಾಧ್ಯವಾಗದ ಸಮಾಜದ ದೊಡ್ಡ ವಿಭಾಗವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಈ ಅತೃಪ್ತಿ ಹೆಚ್ಚುತ್ತಿದೆ ಮತ್ತು ಬೇಡಿಕೆಗಳ ಹೊರತಾಗಿಯೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದ ಶ್ರೀ ಮೋದಿ, ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಮೀಸಲಾತಿ ನೀಡಲು ತಾವು ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾಗಿ ಹೇಳಿದರು. ಇದು ಯಾವುದೇ ವಿರೋಧವನ್ನು ಎದುರಿಸದ, ಎಲ್ಲರೂ ಪ್ರೀತಿಯಿಂದ ಅಂಗೀಕರಿಸಿದ ದೇಶದ ಮೊದಲ ಮೀಸಲಾತಿ ತಿದ್ದುಪಡಿಯಾಗಿದೆ ಮತ್ತು ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ಅವರು ಒತ್ತಿ ಹೇಳಿದರು. ಏಕೆಂದರೆ ಅದು ಸಾಮಾಜಿಕ ಏಕತೆಯನ್ನು ಬಲಪಡಿಸಿತು ಮತ್ತು ಸಂವಿಧಾನದ ಸ್ಫೂರ್ತಿಯೊಂದಿಗೆ ಹೊಂದಿಕೆಯಾಗಿದೆ ಎಂದೂ ಪ್ರಧಾನಿ ಹೇಳಿದರು.

ತಾವು  ಸಾಂವಿಧಾನಿಕ ತಿದ್ದುಪಡಿಗಳನ್ನು ಸಹ ಮಾಡಿದ್ದನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಆದರೆ ಇವು ಮಹಿಳೆಯರ ಸಬಲೀಕರಣಕ್ಕಾಗಿ ಎಂದು ಒತ್ತಿ ಹೇಳಿದರು. ತಾವು ದೇಶದ ಏಕತೆಗಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದು ಎಂದು ಅವರು ವಿವರಿಸಿದರು. 370 ನೇ ವಿಧಿಯಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣವಾಗಿ ಅನ್ವಯಿಸಲು ಸಾಧ್ಯವಾಗಲಿಲ್ಲ, ಆದರೆ ಡಾ. ಅಂಬೇಡ್ಕರ್ ಅವರ ಸಂವಿಧಾನವನ್ನು ಭಾರತದ ಪ್ರತಿಯೊಂದು ಭಾಗದಲ್ಲೂ ಜಾರಿಗೆ ತರಬೇಕೆಂದು ಸರ್ಕಾರ ಬಯಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಮತ್ತು ಡಾ. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ತಾವು  ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾಗಿ  ಅವರು ಹೇಳಿದರು. 370 ನೇ ವಿಧಿಯನ್ನು ತೆಗೆದುಹಾಕಿದ್ದನು ಸಮರ್ಥಿಸಿಕೊಂಡ ಪ್ರಧಾನ ಮಂತ್ರಿ ಈಗ ಭಾರತದ ಸುಪ್ರೀಂ ಕೋರ್ಟ್ ಕೂಡ ಈ ನಿರ್ಧಾರವನ್ನು ಎತ್ತಿಹಿಡಿದಿದೆ ಎಂದೂ  ಹೇಳಿದರು.

370ನೇ ವಿಧಿಯನ್ನು ತೆಗೆದುಹಾಕಲು ಸಂವಿಧಾನದ ತಿದ್ದುಪಡಿಯನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ವಿಭಜನೆಯ ಸಮಯದಲ್ಲಿ ಮಹಾತ್ಮ ಗಾಂಧಿ ಮತ್ತು ಇತರ ಹಿರಿಯ ನಾಯಕರು ನೀಡಿದ ಭರವಸೆಯನ್ನು ಈಡೇರಿಸಲು, ಬಿಕ್ಕಟ್ಟಿನ ಸಮಯದಲ್ಲಿ ನೆರೆಯ ದೇಶಗಳಲ್ಲಿನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳಲು ತಾವು ಕಾನೂನುಗಳನ್ನು ಜಾರಿಗೆ ತಂದಿದ್ದಾಗಿ  ಒತ್ತಿ ಹೇಳಿದರು. ಈ ಬದ್ಧತೆಯನ್ನು ಗೌರವಿಸಲು ತಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಪರಿಚಯಿಸಿದ್ದು ಎಂದು ಒತ್ತಿ ಹೇಳಿದ ಅವರು, ಈ ಕಾನೂನಿನ ಜೊತೆ  ತಾವು ಹೆಮ್ಮೆಯಿಂದ ನಿಲ್ಲುವುದಾಗಿ ಹೇಳಿದರಲ್ಲದೆ, ಇದು ಸಂವಿಧಾನದ ಸ್ಫೂರ್ತಿಯೊಂದಿಗೆ ಹೊಂದಿಕೆಯಾಗುತ್ತದೆ ಮತ್ತು ರಾಷ್ಟ್ರವನ್ನು ಬಲಪಡಿಸುತ್ತದೆ ಎಂದೂ ಹೇಳಿದರು.

ತಮ್ಮ ಸರ್ಕಾರ ಮಾಡಿದ ಸಾಂವಿಧಾನಿಕ ತಿದ್ದುಪಡಿಗಳು ಹಿಂದಿನ ತಪ್ಪುಗಳನ್ನು ಸರಿಪಡಿಸುವ ಮತ್ತು ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿವೆ ಎಂದು ಶ್ರೀ ಮೋದಿ ಸಮರ್ಥಿಸಿಕೊಂಡರು. ಅವುಗಳು ಸಮಯದ ಪರೀಕ್ಷೆಯನ್ನು ಎದುರಿಸಿ ನಿಲ್ಲುತ್ತವೆಯೋ  ಎಂಬುದನ್ನು ಸಮಯವೇ  ಹೇಳುತ್ತದೆ ಎಂದ ಅವರು ಈ ತಿದ್ದುಪಡಿಗಳು ಸ್ವಾರ್ಥದ  ಅಧಿಕಾರದ ಹಿತಾಸಕ್ತಿಗಳಿಂದ ಮಾಡಲ್ಪಟ್ಟದ್ದಲ್ಲ, ಆದರೆ ರಾಷ್ಟ್ರದ ಪ್ರಯೋಜನಕ್ಕಾಗಿ ಮಾಡಲಾದ ಪುಣ್ಯದ ಕಾರ್ಯಗಳಾಗಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅದರಿಂದಾಗಿಯೇ ಉದ್ಭವಿಸುವ ಯಾವುದೇ ಪ್ರಶ್ನೆಗಳನ್ನು ಆತ್ಮವಿಶ್ವಾಸದಿಂದ ಪರಿಹರಿಸುವಷ್ಟು ಅವು ಶಕ್ತವಾಗಿವೆ ಎಂದರು.  

ಸಂವಿಧಾನದ ಬಗ್ಗೆ ಹಲವಾರು ಭಾಷಣಗಳು ಮತ್ತು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ, ಪ್ರತಿಯೊಂದೂ ತನ್ನದೇ ಆದ ರಾಜಕೀಯ ಪ್ರೇರಣೆಗಳನ್ನು ಹೊಂದಿದೆ ಎಂಬುದನ್ನು ಗಮನಿಸಿದ ಪ್ರಧಾನಮಂತ್ರಿ, ಸಂವಿಧಾನವು ಭಾರತದ ಜನರ ಬಗ್ಗೆ ಅತ್ಯಂತ ಸಂವೇದನಾಶೀಲವಾಗಿದೆ,  "ನಾವು ಜನರು" ಎಂದು ಅದು ಹೇಳುತ್ತದೆ ಇದರಲ್ಲಿ  ಅವರ ಕಲ್ಯಾಣ, ಘನತೆ, ಮತ್ತು ಯೋಗಕ್ಷೇಮ ಅಡಕವಾಗಿದೆ. ಸಂವಿಧಾನವು ನಮಗೆ ಕಲ್ಯಾಣ ರಾಜ್ಯದತ್ತ ಮಾರ್ಗದರ್ಶನ ನೀಡುತ್ತದೆ, ಎಲ್ಲಾ ನಾಗರಿಕರಿಗೆ ಗೌರವಯುತ ಜೀವನವನ್ನು ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು..

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅನೇಕ ಕುಟುಂಬಗಳು ಗೌರವಯುತವಾಗಿ ಬದುಕಲು ಶೌಚಾಲಯದ ಸೌಲಭ್ಯವನ್ನು ಹೊಂದಿರಲಿಲ್ಲ ಎಂದು ಹೇಳಿದ  ಶ್ರೀ ಮೋದಿ, ಶೌಚಾಲಯ ನಿರ್ಮಿಸುವ ಅಭಿಯಾನವು ಬಡವರ ಕನಸಾಗಿತ್ತು ಮತ್ತು ಅವರು ಅದನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಕೈಗೆತ್ತಿಕೊಂಡರು. ಇದಕ್ಕಾಗಿ ತಮ್ಮ ಸರಕಾರವನ್ನು ಅಪಹಾಸ್ಯ ಮಾಡಲಾಯಿತಾದರೂ,   ಸರಕಾರ   ದೃಢವಾಗಿ ತನ್ನ ನಿಲುವಿಗೆ ಬದ್ದವಾಗಿ ಉಳಿಯಿತು. ಏಕೆಂದರೆ ಸಾಮಾನ್ಯ ನಾಗರಿಕರ ಘನತೆ ತಮ್ಮ  ಆದ್ಯತೆಯಾಗಿತ್ತು ಎಂದು ಹೇಳಿದರು. ಮಹಿಳೆಯರು ಸೂರ್ಯೋದಯಕ್ಕೆ ಮೊದಲು ಅಥವಾ ಸೂರ್ಯಾಸ್ತದ ನಂತರ ಬಯಲು ಶೌಚಕ್ಕೆ ಹೋಗಬೇಕು ಎಂಬ ಸ್ಥಿತಿ ಇತ್ತು ಎಂಬುದನ್ನು ಒತ್ತಿ ಹೇಳಿದ ಪ್ರಧಾನಿ, ಬಡವರನ್ನು ಟಿವಿಯಲ್ಲಿ ಅಥವಾ ಪತ್ರಿಕೆಗಳ ಮುಖ್ಯಾಂಶಗಳಲ್ಲಿ ಮಾತ್ರವೇ ನೋಡುವವರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ, ಬಡವರ ಬದುಕನ್ನು ಅರ್ಥ ಮಾಡಿಕೊಳ್ಳುವವರು  ಇಂತಹ ಅನ್ಯಾಯ ಎಸಗುವುದಿಲ್ಲ ಎಂದು ಪ್ರಧಾನಿ ಹೇಳಿದರು. ಸಂವಿಧಾನವು ಪ್ರತಿಯೊಬ್ಬರಿಗೂ ಮೂಲಭೂತ ಮಾನವ ಸೌಕರ್ಯಗಳನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದ್ದರೂ, ಈ ದೇಶದಲ್ಲಿ ಎಂಭತ್ತರಷ್ಟು ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದು ಹೇಗೆ  ಎಂದು ಶ್ರೀ ಮೋದಿ ಪ್ರಶ್ನಿಸಿದರು.

ದೇಶದ ಲಕ್ಷಾಂತರ ತಾಯಂದಿರು ಸಾಂಪ್ರದಾಯಿಕ ಒಲೆಯ ಮೇಲೆ ಅಡುಗೆ ಮಾಡುತ್ತಿದ್ದರು, ಇದರಿಂದ ಅವರ ಕಣ್ಣುಗಳು ಹೊಗೆಯಿಂದ ಕೆಂಪಾಗುತ್ತಿದ್ದವು, ಇದು ನೂರಾರು ಸಿಗರೇಟ್‌ಗಳ ಹೊಗೆಯನ್ನು ಉಸಿರಾಡುವುದಕ್ಕೆ ಸಮಾನವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಅವರ ಕಣ್ಣುಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ ಇದರಿಂದ ಅವರ ಆರೋಗ್ಯವೂ ಹದಗೆಡುತ್ತದೆ ಎಂದು ಅವರು ಎತ್ತಿ ತೋರಿಸಿದರು. ಸ್ವಾತಂತ್ರ್ಯದ 70 ವರ್ಷಗಳ ನಂತರವೂ 2013 ರವರೆಗೆ ಒಂಬತ್ತು ಅಥವಾ ಆರು ಸಿಲಿಂಡರ್‌ಗಳನ್ನು ನೀಡಬೇಕೇ ಎಂಬುದರ ಕುರಿತು ಚರ್ಚೆ ನಡೆಯುತ್ತಿತ್ತು ಎಂದು ಹೇಳಿದ ಶ್ರೀ ಮೋದಿ ಆದರೆ ತಮ್ಮ  ಸರ್ಕಾರವು ಪ್ರತಿ ಮನೆಗೆ ಗ್ಯಾಸ್ ಸಿಲಿಂಡರ್‌ಗಳನ್ನು ತಲುಪಿಸುವುದನ್ನು ಖಾತ್ರಿಪಡಿಸಿತು ಏಕೆಂದರೆ  ಪ್ರತಿ ನಾಗರಿಕರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಾವು ಆದ್ಯತೆ ನೀಡಿದ್ದಾಗಿ ತಿಳಿಸಿದರು. 

ಆರೋಗ್ಯ ಕ್ಷೇತ್ರದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಬಡತನದಿಂದ ಪಾರಾಗಲು ಮತ್ತು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು, ಅವರ ಯೋಜನೆಗಳು ಮತ್ತು ಪ್ರಯತ್ನಗಳಿಗೆ ಬೆಂಬಲ ನೀಡಲು ಹಗಲಿರುಳು ಶ್ರಮಿಸುವ ಬಡ ಕುಟುಂಬವನ್ನು ಒಂದೇ ಒಂದು ಕಾಯಿಲೆ ನಾಶಪಡಿಸುತ್ತದೆ ಎಂದರು. ಸಂವಿಧಾನದ ಆಶಯಗಳನ್ನು ಗೌರವಿಸಿ 50-60 ಕೋಟಿ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಯು 70 ವರ್ಷಕ್ಕಿಂತ ಮೇಲ್ಪಟ್ಟವರು ಸೇರಿದಂತೆ ಸಮಾಜದ ಯಾವುದೇ ವರ್ಗದವರಿಗೂ  ಆರೋಗ್ಯ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಬಡವರಿಗೆ ನೀಡಲಾಗುವ ಉಚಿತ ಪಡಿತರದ ಬಗ್ಗೆ ಪ್ರಸ್ತಾಪಿಸಿದ ಶ್ರೀ ಮೋದಿ, 25 ಕೋಟಿ ಜನರು ಯಶಸ್ವಿಯಾಗಿ ಬಡತನದಿಂದ  ಹೊರಗೆ ಬಂದಿದ್ದಾರೆ ಎಂದರು.  ಬಡತನದಿಂದ ಹೊರಬಂದವರು ಮಾತ್ರ ಬೆಂಬಲದ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು. ರೋಗ ಮರುಕಳಿಸುವುದನ್ನು ತಪ್ಪಿಸಲು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಾಳಜಿ ವಹಿಸಲು ರೋಗಿಗೆ ಸಲಹೆ ನೀಡುವಂತೆಯೇ, ಬಡವರು ಮತ್ತೆ ಬಡತನಕ್ಕೆ ಬೀಳದಂತೆ ತಡೆಯಲು ಅವರನ್ನು ಬೆಂಬಲಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿಯೇ ತಾವು ಉಚಿತ ಪಡಿತರವನ್ನು ಒದಗಿಸುತ್ತಿರುವುದಾಗಿ, ಬಡತನದಿಂದ ಮೇಲಕ್ಕೆತ್ತಲ್ಪಟ್ಟವರು ಮರಳಿ ಬಡತನಕ್ಕೆ ಜಾರದಂತೆ ನೋಡಿಕೊಳ್ಳಲು ಮತ್ತು ಇನ್ನೂ ಬಡತನದಲ್ಲಿರುವವರಿಗೆ ಅದರಿಂದ ಮೇಲಕ್ಕೇರಲು ಸಹಾಯ ಮಾಡುವುದಕ್ಕಾಗಿ ಇದನ್ನು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರಯತ್ನವನ್ನು ಅಪಹಾಸ್ಯ ಮಾಡುವುದು ಅನ್ಯಾಯ, ಏಕೆಂದರೆ ಇದು ನಾಗರಿಕರ ಘನತೆ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು.

ಬಡವರ ಹೆಸರಿನಲ್ಲಿ ಕೇವಲ ಘೋಷಣೆಗಳನ್ನು ಮಾಡಲಾಗಿದೆ ಮತ್ತು ಅವರ ಹೆಸರಿನಲ್ಲಿ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಗಿದೆ ಎಂದು ಹೇಳಿದ ಶ್ರೀ ಮೋದಿ, 2014 ರವರೆಗೆ ದೇಶದ 50 ಕೋಟಿ ನಾಗರಿಕರು ಬ್ಯಾಂಕಿನ ಒಳಭಾಗವನ್ನು ನೋಡಿರಲಿಲ್ಲ ಎಂದು ಒತ್ತಿ ಹೇಳಿದರು. ತಾವು 50 ಕೋಟಿ ಬಡ ನಾಗರಿಕರಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಇದರಿಂದಾಗಿ ಅವರಿಗೆ ಬ್ಯಾಂಕುಗಳ ಬಾಗಿಲು ತೆರೆಯಲಾಗಿದೆ ಎಂದು ಹೇಳಿದರು. ದಿಲ್ಲಿಯಿಂದ ಕಳುಹಿಸಲಾದ 1 ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಬಡವರಿಗೆ ತಲುಪಿದೆ ಎಂದು ಮಾಜಿ ಪ್ರಧಾನಿಯೊಬ್ಬರು ಒಮ್ಮೆ ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದರು. ಇಂದು ದಿಲ್ಲಿಯಿಂದ ಕಳುಹಿಸಲಾದ 1 ರೂ.ಗಳಲ್ಲಿ ಎಲ್ಲಾ 100 ಪೈಸೆಗಳನ್ನು ನೇರವಾಗಿ ಬಡವರ ಖಾತೆಗಳಿಗೆ ಜಮಾ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ತಮ್ಮ ಸರಕಾರ  ದಾರಿ ತೋರಿಸಿದೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಸರಕಾರ ಬ್ಯಾಂಕುಗಳ ಸರಿಯಾದ ಬಳಕೆಯನ್ನು ಪ್ರದರ್ಶಿಸಿದೆ  ಎಂದು ಪ್ರಧಾನಿ ಹೇಳಿದರು. ಈ ಹಿಂದೆ ಬ್ಯಾಂಕುಗಳ ಬಾಗಿಲುಗಳನ್ನು ಸಮೀಪಿಸಲು ಸಹ ಅವಕಾಶ ಇಲ್ಲದವರು ಈಗ ಯಾವುದೇ ಗ್ಯಾರಂಟಿ ಇಲ್ಲದೆ ಸಾಲಗಳನ್ನು ಪಡೆಯಬಹುದು ಎಂದು ಅವರು ಹೇಳಿದರು. ಬಡವರ ಈ ಸಬಲೀಕರಣವು ಸಂವಿಧಾನಕ್ಕೆ ಸರ್ಕಾರದ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ಅವರು ಒತ್ತಿ ಹೇಳಿದರು.

"ಗರೀಬಿ ಹಟಾವೋ" (ಬಡತನ ನಿರ್ಮೂಲನೆ) ಘೋಷಣೆ ಕೇವಲ ಘೋಷಣೆಯಾಗಿ ಉಳಿದಿತ್ತು,  ಏಕೆಂದರೆ ಬಡವರು ತಮ್ಮ ತೊಂದರೆಗಳಿಂದ ಮುಕ್ತರಾಗಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಬಡವರನ್ನು ಈ ಸಂಕಷ್ಟಗಳಿಂದ ಮುಕ್ತಗೊಳಿಸುವುದು ತಮ್ಮ ಸರಕಾರದ ಧ್ಯೇಯ ಮತ್ತು ಬದ್ಧತೆಯಾಗಿದೆ ಮತ್ತು ಇದನ್ನು ಸಾಧಿಸಲು ಸರಕಾರ   ಹಗಲು ರಾತ್ರಿ ಶ್ರಮಿಸುತ್ತಿದೆ ಎಂದೂ  ಅವರು ಒತ್ತಿ ಹೇಳಿದರು. ತಮ್ಮ ಸರಕಾರ,   ಬೆಂಬಲಕ್ಕೆ  ಯಾರೂ ಇಲ್ಲದವರ ಪರವಾಗಿ ನಿಲ್ಲುತ್ತದೆ ಎಂದು ಪ್ರಧಾನಿ ಹೇಳಿದರು.

ದಿವ್ಯಾಂಗರು ಎದುರಿಸಿದ ಸಮಸ್ಯೆಗಳ ಕುರಿತು ಮಾತನಾಡಿದ ಶ್ರೀ ಮೋದಿ, ಸರಕಾರ ಈಗ ವಿಕಲಚೇತನರಿಗೆ ಪ್ರವೇಶಿಸಬಹುದಾದ ಮೂಲಸೌಕರ್ಯಗಳನ್ನು ಒದಗಿಸಿದೆ, ಅವರ ಗಾಲಿಕುರ್ಚಿಗಳು ರೈಲು ಕಂಪಾರ್ಟ್‌ಮೆಂಟ್‌ಗಳನ್ನು ತಲುಪಲು ಅವಕಾಶ ಮಾಡಿಕೊಡಲಾಗಿದೆ. ಸಮಾಜದ ಅಂಚಿನಲ್ಲಿರುವ ವರ್ಗಗಳ ಬಗ್ಗೆ ಸರಕಾರದ ಕಾಳಜಿಯಿಂದ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಭಾಷೆಯನ್ನು, ಅದರ ವೈವಿಧ್ಯತೆಗಳನ್ನು ಕಲಿಸುವಾಗ, ವಿಕಲಾಂಗ ವ್ಯಕ್ತಿಗಳಿಗೆ ದೊಡ್ಡ ಅನ್ಯಾಯವನ್ನು ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಸಂಜ್ಞೆ ಭಾಷೆಯ ವ್ಯವಸ್ಥೆಗಳು ರಾಜ್ಯಗಳಾದ್ಯಂತ ವಿಭಿನ್ನವಾಗಿದ್ದು, ವಿಕಲಚೇತನರಿಗೆ ತೊಂದರೆಗಳನ್ನು ಉಂಟುಮಾಡುತ್ತಿತ್ತು  ಎಂದು ಪ್ರಧಾನಿ ಹೇಳಿದರು. ತಮ್ಮ ಸರಕಾರ  ಸಾಮಾನ್ಯ ಸಂಕೇತ ಭಾಷೆಯನ್ನು ರಚಿಸಿದ್ದು, ಇದು ಈಗ ದೇಶದ ಎಲ್ಲಾ ವಿಕಲಾಂಗ ವ್ಯಕ್ತಿಗಳಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ ಎಂದು ಪ್ರಧಾನಿ ಹೇಳಿದರು. ಸಂವಿಧಾನದ ಅಡಿಯಲ್ಲಿ ಈ ಜನರು ಆದ್ಯತೆಯಾಗಿರುವುದರಿಂದ ಅವರ ಯೋಗಕ್ಷೇಮಕ್ಕಾಗಿ ತಮ್ಮ ಸರ್ಕಾರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ ಎಂದು ಹೇಳಿದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ದಣಿವಿಲ್ಲದೆ ದುಡಿಯುವ ಬೀದಿ ವ್ಯಾಪಾರಿಗಳು ತಮ್ಮ ಗಾಡಿಗಳನ್ನು ಬಾಡಿಗೆಗೆ ಪಡೆಯುವುದು ಮತ್ತು ಹೆಚ್ಚಿನ ಬಡ್ಡಿದರದಲ್ಲಿ ಹಣವನ್ನು ಎರವಲು ಪಡೆಯುವುದು ಸೇರಿದಂತೆ ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತಾರೆ ಎಂದು ಪ್ರಧಾನಿ ನುಡಿದರು. ಬೀದಿ ಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲ ನೀಡಲು ಸರ್ಕಾರ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯನ್ನು ಪರಿಚಯಿಸಿದೆ ಎಂದು ಅವರು ಒತ್ತಿ ಹೇಳಿದರು. ಈ ಯೋಜನೆಯಿಂದಾಗಿ ಬೀದಿ ವ್ಯಾಪಾರಿಗಳು ಮೂರನೇ ಸುತ್ತಿನ ಸಾಲವನ್ನು ಪಡೆಯುವಲ್ಲಿಗೆ ತಲುಪಿದ್ದಾರೆ, ಗೌರವವನ್ನು ಗಳಿಸಿದ್ದಾರೆ ಮತ್ತು ತಮ್ಮ ವ್ಯವಹಾರಗಳನ್ನು ವಿಸ್ತರಿಸಿದ್ದಾರೆ ಎಂದೂ  ಪ್ರಧಾನಿ ವಿವರಿಸಿದರು.

ವಿಶ್ವಕರ್ಮ ಕುಶಲಕರ್ಮಿಗಳ ಸೇವೆ ಅಗತ್ಯವಿಲ್ಲ ಎನ್ನುವವರು ಈ ದೇಶದಲ್ಲಿ ಯಾರೂ ಇಲ್ಲ ಎಂದು ಹೇಳಿದ ಶ್ರೀ ಮೋದಿ, ಶತಮಾನಗಳಿಂದ ಇವರ  ಮಹತ್ವದ ವ್ಯವಸ್ಥೆ ಜಾರಿಯಲ್ಲಿದೆ, ಆದರೆ ವಿಶ್ವಕರ್ಮ ಕುಶಲಕರ್ಮಿಗಳ ಕಲ್ಯಾಣದತ್ತ ಎಂದಿಗೂ ಗಮನ ಹರಿಸಲಾಗಿರಲಿಲ್ಲ ಎಂದು ಒತ್ತಿ ಹೇಳಿದರು. ವಿಶ್ವಕರ್ಮ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ಬ್ಯಾಂಕ್ ಸಾಲ, ಹೊಸ ತರಬೇತಿ, ಆಧುನಿಕ ಉಪಕರಣಗಳು ಮತ್ತು ನವೀನ ವಿನ್ಯಾಸಗಳು ಸೇರಿದಂತೆ ಯೋಜನೆಯನ್ನು ತಮ್ಮ ಸರಕಾರ  ರೂಪಿಸಿದೆ ಎಂದು ಪ್ರಧಾನಿ ಹೇಳಿದರು. ವಿಶ್ವಕರ್ಮ ಸಮುದಾಯವನ್ನು ಬೆಂಬಲಿಸಲು ಈ ಉಪಕ್ರಮವನ್ನು ಬಲಪಡಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು.

ಭಾರತೀಯ ಸಂವಿಧಾನದ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಹಕ್ಕುಗಳನ್ನು ಸರ್ಕಾರ ಖಾತ್ರಿಪಡಿಸಿದೆ ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಗೆ ಗೌರವಯುತ ಜೀವನವನ್ನು ಒದಗಿಸಲು ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಮರ್ಗಾಮ್ ನಿಂದ ಅಂಬಾಜಿಯವರೆಗೆ ಇಡೀ ಬುಡಕಟ್ಟು ಪ್ರದೇಶದಲ್ಲಿ ಒಂದೇ ಒಂದು ವಿಜ್ಞಾನ ವಿಭಾಗದ ಶಾಲೆ ಇರಲಿಲ್ಲ ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ವಿಜ್ಞಾನ ವಿಭಾಗದ ಶಾಲೆಗಳಿಲ್ಲದೆ ಬುಡಕಟ್ಟು ವಿದ್ಯಾರ್ಥಿಗಳು ಎಂಜಿನಿಯರ್ ಗಳು ಅಥವಾ ವೈದ್ಯರಾಗುವುದು ಅಸಾಧ್ಯ ಎಂದರು. ಬುಡಕಟ್ಟು ಸಮುದಾಯದ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ತಮ್ಮ ಸರಕಾರ  ಈ ಪ್ರದೇಶದಲ್ಲಿ ವಿಜ್ಞಾನ ವಿಭಾಗದ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂದು ಅವರು ಒತ್ತಿ ಹೇಳಿದರು.

ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುವ ಪಿಎಂ ಜನ್ ಮನ್ ಯೋಜನೆಯನ್ನು ರೂಪಿಸುವಲ್ಲಿ ಮಾರ್ಗದರ್ಶನ ನೀಡಿದ ರಾಷ್ಟ್ರಪತಿಗಳಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದರು. ಮತ ರಾಜಕಾರಣದಲ್ಲಿ ಹೆಚ್ಚಾಗಿ ಕಡೆಗಣಿಸಲ್ಪಡುವ ಈ ಸಣ್ಣ ಗುಂಪುಗಳು ಈಗ ಈ ಯೋಜನೆಯ ಮೂಲಕ ಗಮನ ಮತ್ತು ಬೆಂಬಲವನ್ನು ಪಡೆದಿವೆ ಎಂದು ಅವರು ಒತ್ತಿ ಹೇಳಿದರು. ಸಮಾಜದ ಅತ್ಯಂತ ಅಂಚಿನಲ್ಲಿರುವ ವ್ಯಕ್ತಿಗಳನ್ನು ಸಹ ಹುಡುಕಲು ಮತ್ತು ಬೆಂಬಲಿಸಲು ತಾವು ಬದ್ಧರಾಗಿರುವುದಾಗಿ ಪ್ರಧಾನಿ ಹೇಳಿದರು.

ಕಳೆದ 60 ವರ್ಷಗಳಲ್ಲಿ 100 ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಗುರುತಿಸಲಾಗಿತ್ತು ಮತ್ತು ಈ ಹಣೆಪಟ್ಟಿಯಿಂದಾಗಿ ಜವಾಬ್ದಾರಿಯುತ ಅಧಿಕಾರಿಗಳಿಗೆ ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಡುವುದು ಶಿಕ್ಷೆಯಾಗಿತ್ತು ಎಂಬುದರತ್ತ  ಶ್ರೀ ಮೋದಿ ಗಮನ ಸೆಳೆದರು. ಆಶೋತ್ತರಗಳ/ಮಹತ್ವಾಕಾಂಕ್ಷೆಯ ಜಿಲ್ಲೆಗಳ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ, ನಿಯಮಿತವಾಗಿ 40 ಮಾನದಂಡ ನಿಯತಾಂಕಗಳನ್ನು ಆನ್ ಲೈನ್ ನಲ್ಲಿ ಮೇಲ್ವಿಚಾರಣೆ ಮಾಡುವ ಮೂಲಕ ತಾವು  ಈ ಪರಿಸ್ಥಿತಿಯನ್ನು ಬದಲಾಯಿಸಿರುವುದಾಗಿ  ಅವರು ಒತ್ತಿ ಹೇಳಿದರು. ಇಂದು, ಮಹತ್ವಾಕಾಂಕ್ಷೆಯ ಜಿಲ್ಲೆಗಳು ತಮ್ಮ ರಾಜ್ಯಗಳಲ್ಲಿನ ಅತ್ಯುತ್ತಮ ಜಿಲ್ಲೆಗಳಿಗೆ ಸರಿಸಾಟಿಯಾಗುತ್ತಿವೆ ಮತ್ತು ಕೆಲವು ರಾಷ್ಟ್ರೀಯ ಸರಾಸರಿಯನ್ನು ಸಹ ತಲುಪುತ್ತಿವೆ ಎಂದು ಪ್ರಧಾನಿ ಹೇಳಿದರು. ಯಾವುದೇ ಪ್ರದೇಶವನ್ನು ಹಿಂದುಳಿಯುವುದಕ್ಕೆ ಬಿಡಬಾರದು ಮತ್ತು ಈಗ 500 ಬ್ಲಾಕ್ ಗಳನ್ನು ಮಹತ್ವಾಕಾಂಕ್ಷೆಯ ಬ್ಲಾಕ್ ಗಳಾಗಿ ಅಭಿವೃದ್ಧಿಪಡಿಸುವತ್ತ ಸರಕಾರ ಗಮನ ಹರಿಸಿದೆ  ಎಂದು ಅವರು ಒತ್ತಿ ಹೇಳಿದರು.

ರಾಮ ಮತ್ತು ಕೃಷ್ಣರ ಕಾಲದಲ್ಲಿ ಬುಡಕಟ್ಟು ಸಮುದಾಯ ಅಸ್ತಿತ್ವದಲ್ಲಿತ್ತು, ಆದರೆ ಸ್ವಾತಂತ್ರ್ಯದ ದಶಕಗಳ ನಂತರವೂ ಅವರಿಗೆ ಪ್ರತ್ಯೇಕ ಸಚಿವಾಲಯವನ್ನು ರಚಿಸಲಾಗಿರಲಿಲ್ಲ ಎಂದು ಒತ್ತಿ ಹೇಳಿದ ಪ್ರಧಾನಿ, ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರವು ಮೊದಲು ಬುಡಕಟ್ಟು ವ್ಯವಹಾರಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿತು ಮತ್ತು ಅವರ ಅಭಿವೃದ್ಧಿ ಮತ್ತು ವಿಸ್ತರಣೆಗೆ ಬಜೆಟ್ ಅನ್ನು ನಿಗದಿಪಡಿಸಿತು ಎಂದು ಹೇಳಿದರು. ಮೀನುಗಾರರ ಕಲ್ಯಾಣದ ಬಗ್ಗೆ ಮಾತನಾಡಿದ ಶ್ರೀ ಮೋದಿ, ತಮ್ಮ ಸರ್ಕಾರವು ಮೊದಲ ಬಾರಿಗೆ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ರಚಿಸಿದೆ ಮತ್ತು ಅವರ ಕಲ್ಯಾಣಕ್ಕಾಗಿ ಪ್ರತ್ಯೇಕ ಬಜೆಟ್ ನೀಡಲಾಗಿದೆ ಎಂದು ಹೇಳಿದರು. ಸಮಾಜದ ಈ ವರ್ಗದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದೂ ಅವರು ಹೇಳಿದರು.

ದೇಶದ ಸಣ್ಣ ರೈತರಿಗೆ ಸಂಬಂಧಿಸಿದಂತೆ, ಸಹಕಾರವು ಅವರ ಜೀವನದ ಪ್ರಮುಖ ಭಾಗವಾಗಿದೆ ಎಂದು ಪ್ರಧಾನಿ ಹೇಳಿದರು. ಸಣ್ಣ ರೈತರ ಕಳವಳಗಳನ್ನು ಎತ್ತಿ ತೋರಿಸಿದ ಅವರು, ಸಹಕಾರಿ ಕ್ಷೇತ್ರವನ್ನು ಜವಾಬ್ದಾರಿಯುತ, ಬಲವಾದ ಮತ್ತು ಸಬಲೀಕರಣಗೊಳಿಸುವ ಮೂಲಕ ಸಣ್ಣ ರೈತರ ಜೀವನಕ್ಕೆ ಬಲ ನೀಡಲು ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ರಚಿಸಲಾಗಿದೆ ಎಂದು ಹೇಳಿದರು. ನುರಿತ ಕಾರ್ಮಿಕ ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿ, ಇಡೀ ಜಗತ್ತು ಇಂದು ಕಾರ್ಮಿಕ ಶಕ್ತಿಗಾಗಿ ಹಂಬಲಿಸುತ್ತಿದೆ ಎಂದರು. ನಾವು ದೇಶದಲ್ಲಿ ಜನಸಂಖ್ಯಾ ಲಾಭಾಂಶವನ್ನು ಪಡೆಯಲು ಬಯಸಿದರೆ, ನಮ್ಮ ಕಾರ್ಮಿಕ ಶಕ್ತಿಯು ಕೌಶಲ್ಯ ಹೊಂದಿರಬೇಕು ಎಂದು ಅವರು ಹೇಳಿದರು. ದೇಶದ ಯುವಜನರು ವಿಶ್ವದ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧರಾಗಲು ಮತ್ತು ಅವರು ಪ್ರಪಂಚದೊಂದಿಗೆ ಮುಂದೆ ಸಾಗಲು ಪ್ರತ್ಯೇಕ ಕೌಶಲ್ಯ ಸಚಿವಾಲಯವನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಈಶಾನ್ಯದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ನಮ್ಮ ಈಶಾನ್ಯದಲ್ಲಿ ಕಡಿಮೆ ಮತಗಳು ಅಥವಾ ಸ್ಥಾನಗಳಿಂದಾಗಿ ಅವರನ್ನು ನಿರ್ಲಕ್ಷಿಸಲಾಗಿತ್ತು ಎಂದರು. ಅಟಲ್ ಜಿ ಅವರ ಸರ್ಕಾರವು ಈಶಾನ್ಯದ ಕಲ್ಯಾಣಕ್ಕಾಗಿ ಮೊದಲ ಬಾರಿಗೆ ಡೋನರ್ ಸಚಿವಾಲಯವನ್ನು ರಚಿಸಿತು ಮತ್ತು ಇಂದು ಅದರ ಕಾರಣದಿಂದಾಗಿ ರೈಲ್ವೆ, ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳ ನಿರ್ಮಾಣದಲ್ಲಿ ಈಶಾನ್ಯದ ಅಭಿವೃದ್ಧಿಯನ್ನು ನೋಡಬಹುದು ಎಂದು ಅವರು ಹೇಳಿದರು.

ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಇಂದಿಗೂ ಭೂ ದಾಖಲೆಗಳ ಮಹತ್ವ ಮತ್ತು ಅವುಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಧಾನಿ ಒತ್ತಿ ಹೇಳಿದರು. ಭೂಮಿಯ ಮಾಲೀಕತ್ವವನ್ನು ಒದಗಿಸಲು ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ, ಇದರಿಂದ ಗ್ರಾಮದ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನು ತನ್ನ ಮನೆಯ ಭೂ ದಾಖಲೆಗಳು, ತನ್ನ ಮನೆಯ ಮಾಲೀಕತ್ವದ ದಾಖಲೆಗಳನ್ನು ಹೊಂದಿರುವಂತೆ ಮಾಡಲಾಗುತ್ತಿದೆ, ಇದರಿಂದ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಬಹುದು ಮತ್ತು ಅತಿಕ್ರಮಣದ  ಭಯ ನಿವಾರಣೆಯಾದಂತಾಗಿದೆ ಎಂದು ಹೇಳಿದರು.

ಈ ಎಲ್ಲ ಕಾರ್ಯಗಳಿಂದಾಗಿ, ಕಳೆದ 10 ವರ್ಷಗಳಲ್ಲಿ ಮಾಡಿದ ಪ್ರಯತ್ನಗಳು ಬಡವರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿವೆ ಮತ್ತು ಇಷ್ಟು ಕಡಿಮೆ ಅವಧಿಯಲ್ಲಿ 25 ಕೋಟಿ ಜನರು ಬಡತನವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ರೀ ಮೋದಿ ಹೇಳಿದರು. ನಾವು ಸಂವಿಧಾನದ ನಿರ್ದೇಶನದಲ್ಲಿ ಕೆಲಸ ಮಾಡುತ್ತಿರುವುದರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇವಲ ಘೋಷಣೆಯಲ್ಲ, ಇದು ನಮ್ಮ ನಂಬಿಕೆಯ ಅನುಚ್ಛೇದವಾಗಿದೆ ಮತ್ತು ಆದ್ದರಿಂದ ನಾವು ತಾರತಮ್ಯವಿಲ್ಲದೆ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನಿ ಹೇಳಿದರು. ಶೇ.100ರಷ್ಟು ಫಲಾನುಭವಿಗಳು ಇದರ ಲಾಭ ಪಡೆಯುವಂತೆ ಯೋಜನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು. ನಿಜವಾದ ಜಾತ್ಯತೀತತೆ ಇದ್ದರೆ ಅದು ಪರಿಪೂರ್ಣತೆಯಲ್ಲಿದೆ ಮತ್ತು ಯಾವುದೇ ನಿಜವಾದ ಸಾಮಾಜಿಕ ನ್ಯಾಯವಿದ್ದರೆ, ಅದು ಈ ಪರಿಪೂರ್ಣತೆ, ಅಂದರೆ 100% ಪ್ರಯೋಜನವನ್ನು ಯಾವುದೇ ತಾರತಮ್ಯವಿಲ್ಲದೆ ಅರ್ಹ ವ್ಯಕ್ತಿಗೆ ನೀಡಬೇಕು ಎಂದು ಅವರು ಹೇಳಿದರು. ಇದು ನಿಜವಾದ ಜಾತ್ಯತೀತತೆ ಮತ್ತು ನಿಜವಾದ ಸಾಮಾಜಿಕ ನ್ಯಾಯ ಎಂದು ಅವರು ಪ್ರತಿಪಾದಿಸಿದರು.

ದೇಶಕ್ಕೆ ನಿರ್ದೇಶನ ನೀಡುವ ಮಾಧ್ಯಮವಾಗಿ ಸಂವಿಧಾನದ ಸ್ಫೂರ್ತಿಯ ಬಗ್ಗೆ ಮಾತನಾಡಿದ ಪ್ರಧಾನಿ, ರಾಜಕೀಯವು ದೇಶದ ಚಾಲಕ ಶಕ್ತಿಯಾಗಿ ಕೇಂದ್ರದಲ್ಲಿದೆ ಎಂದರು. ಮುಂಬರುವ ದಶಕಗಳಲ್ಲಿ ನಮ್ಮ ಪ್ರಜಾಪ್ರಭುತ್ವ, ನಮ್ಮ ರಾಜಕೀಯದ ದಿಕ್ಕು ಏನಾಗಿರಬೇಕು ಎಂಬುದರ ಬಗ್ಗೆ ನಾವು ಯೋಚಿಸಬೇಕು ಎಂದು ಹೇಳಿದರು.

ಕೆಲವು ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥ ಮತ್ತು ಅಧಿಕಾರ ಪ್ರಜ್ಞೆಯಿಂದಾಗಿ ಈ  ಬಗ್ಗೆ ಎಂದಾದರೂ ಯೋಚಿಸಿದ್ದವೇ  ಎಂದು ಶ್ರೀ ಮೋದಿ ಪ್ರಶ್ನಿಸಿದರು ಮತ್ತು ಇದು  ಎಲ್ಲಾ ಪಕ್ಷಗಳಿಗೆ ಅನ್ವಯಿಸುತ್ತದೆ ಎಂದೂ ಹೇಳಿದರು. ಇವು ತಮ್ಮ ಮನಸ್ಸಿನ ಆಲೋಚನೆಗಳು, ಅವುಗಳನ್ನು ಈ ಸದನದ ಮುಂದೆ ಇಡಲು ಬಯಸಿದ್ದಾಗಿಯೂ  ಅವರು ಹೇಳಿದರು.

ದೇಶದ ಯುವಜನರನ್ನು ಆಕರ್ಷಿಸಲು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದೇಶದ ಯುವಜನರನ್ನು ಮುಂದೆ ತರಲು ಎಲ್ಲಾ ರಾಜಕೀಯ ಪಕ್ಷಗಳು ಪ್ರಯತ್ನಗಳನ್ನು ಮಾಡಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ಯುವಜನರನ್ನು ರಾಜಕೀಯಕ್ಕೆ ತರುವುದು ದೇಶದ ಪ್ರಜಾಪ್ರಭುತ್ವದ ಅಗತ್ಯವಾಗಿದೆ ಎಂದು ಹೇಳಿದ ಅವರು, ಯಾವುದೇ ರಾಜಕೀಯ ಕುಟುಂಬ ಹಿನ್ನೆಲೆಯಿಲ್ಲದ ಅಂತಹ 1 ಲಕ್ಷ ಯುವಜನರನ್ನು ದೇಶದ ರಾಜಕೀಯಕ್ಕೆ ತರಬೇಕು ಎಂದು ಪುನರುಚ್ಚರಿಸಿದರು. ದೇಶಕ್ಕೆ ಹೊಸ ಶಕ್ತಿ ಮತ್ತು ಹೊಸ ಸಂಕಲ್ಪಗಳು ಮತ್ತು ಕನಸುಗಳೊಂದಿಗೆ ಬರುವ ಯುವಜನರ ಅಗತ್ಯವಿದೆ ಮತ್ತು ನಾವು ಭಾರತದ ಸಂವಿಧಾನದ 75 ನೇ ವರ್ಷವನ್ನು ಆಚರಿಸುತ್ತಿರುವಾಗ ನಾವು ಆ ದಿಕ್ಕಿನಲ್ಲಿ ಮುಂದುವರಿಯಬೇಕು ಎಂದು ಅವರು ಹೇಳಿದರು.

ಕೆಂಪು ಕೋಟೆಯಿಂದ ಸಂವಿಧಾನದಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ತಮ್ಮ ಮಾತುಗಳನ್ನು ಸ್ಮರಿಸಿದ ಶ್ರೀ ಮೋದಿ, ಸಂವಿಧಾನವು ನಾಗರಿಕರ ಹಕ್ಕುಗಳನ್ನು ನಿರ್ಧರಿಸಿದ್ದರೂ ಅದು ಅವರಿಂದ ಕರ್ತವ್ಯಗಳನ್ನು ಸಹ ನಿರೀಕ್ಷಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳದಿರುವುದು ದುರದೃಷ್ಟಕರ ಎಂದರು. ನಮ್ಮ ನಾಗರಿಕತೆಯ ಸಾರವೆಂದರೆ ಧರ್ಮ, ನಮ್ಮ ಕರ್ತವ್ಯ ಎಂದು ಹೇಳಿದ ಅವರು, ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸಿದರು. ನಾವು ನಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರಿಂದ ಹಕ್ಕುಗಳು ಹೊರಹೊಮ್ಮುತ್ತವೆ ಎಂದು ಮಹಾತ್ಮಾ ಗಾಂಧೀಜಿ  ಅವರು ತಮ್ಮ ಅಶಿಕ್ಷಿತ ಆದರೆ ವಿದ್ಯಾವಂತ ತಾಯಿಯಿಂದ ಕಲಿತಿದ್ದಾಗಿ ಹೇಳಿದ್ದರು. ತಾವು ಮಹಾತ್ಮಾ ಗಾಂಧೀಜಿ ಅವರ ಮಾತುಗಳನ್ನು ಇನ್ನಷ್ಟು ವಿಸ್ತರಿಸಿ ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಅನುಸರಿಸಿದರೆ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಲು ಬಯಸುತ್ತೇನೆ ಎಂದರು.  ಸಂವಿಧಾನದ 75 ವರ್ಷಗಳು ಕರ್ತವ್ಯದ ಬಗೆಗಿನ ನಮ್ಮ ಸಮರ್ಪಣೆಗೆ ಹೆಚ್ಚಿನ ಶಕ್ತಿಯನ್ನು ನೀಡಬೇಕು, ನಮ್ಮ ಬದ್ಧತೆ ಮತ್ತು ದೇಶವು ಕರ್ತವ್ಯ ಪ್ರಜ್ಞೆಯೊಂದಿಗೆ ಮುಂದುವರಿಯಬೇಕು ಎಂಬುದು ಈ ಕ್ಷಣದ  ಅಗತ್ಯವಾಗಿದೆ ಎಂದು ಅವರು ಹೇಳಿದರು.

ಭಾರತದ ಭವಿಷ್ಯಕ್ಕಾಗಿ ಸಂವಿಧಾನದ ಸ್ಫೂರ್ತಿಯಿಂದ ಪ್ರೇರಿತರಾಗಿ ತಾವು 11 ನಿರ್ಣಯಗಳನ್ನು ಸದನದ ಮುಂದೆ ಇಡಲು ಬಯಸಿರುವುದಾಗಿ ಪ್ರಧಾನಿ ಹೇಳಿದರು. ಮೊದಲನೆಯ ನಿರ್ಣಯವೆಂದರೆ ಅದು ನಾಗರಿಕನಾಗಿರಲಿ ಅಥವಾ ಸರ್ಕಾರವಾಗಿರಲಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಎರಡನೇ ನಿರ್ಣಯವೆಂದರೆ ಪ್ರತಿಯೊಂದು ವಲಯ, ಪ್ರತಿಯೊಂದು ಸಮಾಜವು ಅಭಿವೃದ್ಧಿಯ ಲಾಭವನ್ನು ಪಡೆಯಬೇಕು, ಸಬ್ಕಾ ಸಾಥ್ ಸಬ್ಕಾ ವಿಕಾಸ್. ಮೂರನೆಯ ನಿರ್ಣಯವೆಂದರೆ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಇರಬೇಕು, ಭ್ರಷ್ಟರನ್ನು ಸಾಮಾಜಿಕವಾಗಿ ಸ್ವೀಕರಿಸಬಾರದು. ನಾಲ್ಕನೆಯ ನಿರ್ಣಯವೆಂದರೆ ದೇಶದ ನಾಗರಿಕರು ದೇಶದ ಕಾನೂನುಗಳು, ದೇಶದ ನಿಯಮಗಳು ಮತ್ತು ದೇಶದ ಸಂಪ್ರದಾಯಗಳನ್ನು ಅನುಸರಿಸುವಲ್ಲಿ ಹೆಮ್ಮೆ ಪಡಬೇಕು. ಐದನೇ ನಿರ್ಣಯವೆಂದರೆ ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವುದು, ದೇಶದ ಪರಂಪರೆಯ ಬಗ್ಗೆ ಹೆಮ್ಮೆ ಇರಬೇಕು. ದೇಶದ ರಾಜಕೀಯವನ್ನು ಸ್ವಜನಪಕ್ಷಪಾತದಿಂದ ಮುಕ್ತಗೊಳಿಸಬೇಕು ಎಂಬುದು ಆರನೇ ನಿರ್ಣಯವಾಗಿದೆ. ಏಳನೇ ನಿರ್ಣಯ, ಸಂವಿಧಾನವನ್ನು ಗೌರವಿಸಬೇಕು, ಸಂವಿಧಾನವನ್ನು ರಾಜಕೀಯ ಲಾಭಕ್ಕಾಗಿ ಅಸ್ತ್ರವಾಗಿ ಬಳಸಬಾರದು. ಎಂಟನೇ ನಿರ್ಣಯ, ಸಂವಿಧಾನದ ಆಶಯವನ್ನು ಗಮನದಲ್ಲಿಟ್ಟುಕೊಂಡು, ಮೀಸಲಾತಿಯನ್ನು ಪಡೆಯುತ್ತಿರುವವರಿಂದ ಅದನ್ನು ಕಸಿದುಕೊಳ್ಳಬಾರದು ಮತ್ತು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಪ್ರತಿಯೊಂದು ಪ್ರಯತ್ನವನ್ನು ನಿಲ್ಲಿಸಬೇಕು. ಒಂಬತ್ತನೇ ನಿರ್ಣಯ, ಮಹಿಳಾ ನೇತೃತ್ವದ ಅಭಿವೃದ್ಧಿಯಲ್ಲಿ ಭಾರತವು ವಿಶ್ವಕ್ಕೆ ಮಾದರಿಯಾಗಬೇಕು. ಹತ್ತನೇ ನಿರ್ಣಯ, ರಾಜ್ಯದ ಅಭಿವೃದ್ಧಿಯ ಮೂಲಕ ರಾಷ್ಟ್ರದ ಅಭಿವೃದ್ಧಿ, ಇದು ನಮ್ಮ ಅಭಿವೃದ್ಧಿಯ ಮಂತ್ರವಾಗಬೇಕು. ಹನ್ನೊಂದನೇ ನಿರ್ಣಯ, ಏಕ ಭಾರತ ಶ್ರೇಷ್ಠ ಭಾರತ ಎಂಬುದಕ್ಕೆ   ಅತ್ಯುನ್ನತ ಸ್ಥಾನ ನೀಡಬೇಕು. .

ಈ ಸಂಕಲ್ಪದೊಂದಿಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆದರೆ, ಎಲ್ಲರ ಪ್ರಯತ್ನದಿಂದ ನಾಡಿನ ಜನರಾದ ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡಬಹುದು ಎಂದು ಪ್ರಧಾನಿ ಹೇಳಿದರು. 140 ಕೋಟಿ ದೇಶವಾಸಿಗಳ ಕನಸು ನನಸಾದಾಗ ಮತ್ತು ದೇಶವು ದೃಢ ಸಂಕಲ್ಪದೊಂದಿಗೆ ಸಾಗಲು ಪ್ರಾರಂಭಿಸಿದಾಗ, ಅದು ಅಪೇಕ್ಷಿತ ಫಲಿತಾಂಶಗಳನ್ನು ತರುತ್ತದೆ ಎಂದು ಅವರು ಹೇಳಿದರು. 140 ಕೋಟಿ ದೇಶವಾಸಿಗಳ ಬಗ್ಗೆ ತಮಗೆ ಅಪಾರ ಗೌರವವಿದೆ ಮತ್ತು ಅವರ ಶಕ್ತಿಯಲ್ಲಿ ನಂಬಿಕೆ ಇದೆ, ದೇಶದ ಯುವ ಶಕ್ತಿಯಲ್ಲಿ, ದೇಶದ ಮಹಿಳಾ ಶಕ್ತಿಯಲ್ಲಿ ತಮಗೆ ಅಪಾರ ನಂಬಿಕೆ ಇದೆ ಎಂದೂ ಶ್ರೀ ಮೋದಿ ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, 2047ರಲ್ಲಿ ದೇಶವು 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ, ಅದನ್ನು ವಿಕ್ಷಿತ್ ಭಾರತ್ ಎಂದು ಆಚರಿಸುವ ಸಂಕಲ್ಪದೊಂದಿಗೆ ನಾವು ಮುಂದುವರಿಯಬೇಕು ಎಂದು ಹೇಳಿದರು.

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Media Coverage

"Saudi Arabia ‘one of India’s most valued partners, a trusted friend and a strategic ally,’ Indian PM Narendra Modi tells Arab News"
NM on the go

Nm on the go

Always be the first to hear from the PM. Get the App Now!
...
The World This Week on India
April 22, 2025

From diplomatic phone calls to groundbreaking scientific discoveries, India’s presence on the global stage this week was marked by collaboration, innovation, and cultural pride.

Modi and Musk Chart a Tech-Driven Future

Prime Minister Narendra Modi’s conversation with Elon Musk underscored India’s growing stature in technology and innovation. Modi reaffirmed his commitment to advancing partnerships with Musk’s companies, Tesla and Starlink, while Musk expressed enthusiasm for deeper collaboration. With a planned visit to India later this year, Musk’s engagement signals a new chapter in India’s tech ambitions, blending global expertise with local vision.

Indian origin Scientist Finds Clues to Extraterrestrial Life

Dr. Nikku Madhusudhan, an IIT BHU alumnus, made waves in the scientific community by uncovering chemical compounds—known to be produced only by life—on a planet 124 light years away. His discovery is being hailed as the strongest evidence yet of life beyond our solar system, putting India at the forefront of cosmic exploration.

Ambedkar’s Legacy Honoured in New York

In a nod to India’s social reform icon, New York City declared April 14, 2025, as Dr. Bhimrao Ramji Ambedkar Day. Announced by Mayor Eric Adams on Ambedkar’s 134th birth anniversary, the recognition reflects the global resonance of his fight for equality and justice.

Tourism as a Transformative Force

India’s travel and tourism sector, contributing 7% to the economy, is poised for 7% annual growth over the next decade, according to the World Travel & Tourism Council. WTTC CEO Simpson lauded PM Modi’s investments in the sector, noting its potential to transform communities and uplift lives across the country.

Pharma Giants Eye US Oncology Market

Indian pharmaceutical companies are setting their sights on the $145 billion US oncology market, which is growing at 11% annually. With recent FDA approvals for complex generics and biosimilars, Indian firms are poised to capture a larger share, strengthening their global footprint in healthcare.

US-India Ties Set to Soar

US President Donald Trump called PM Modi a friend, while State Department spokesperson MacLeod predicted a “bright future” for US-India relations. From counter-terrorism to advanced technology and business, the two nations are deepening ties, with India’s strategic importance in sharp focus.

India’s Cultural Treasures Go Global

The Bhagavad Gita and Bharata’s Natyashastra were added to UNESCO’s Memory of the World Register, joining 74 new entries this year. The inclusion celebrates India’s rich philosophical and artistic heritage, cementing its cultural influence worldwide.

Russia Lauds India’s Space Prowess

Russian Ambassador Denis Alipov praised India as a leader in space exploration, noting that Russia is learning from its advancements. He highlighted Russia’s pride in contributing to India’s upcoming manned mission, a testament to the deepening space collaboration between the two nations.

From forging tech partnerships to leaving an indelible mark on science, culture, and diplomacy, India this week showcased its ability to lead, inspire, and connect on a global scale.