"ಅಕ್ಟೋಬರ್ 31 ದೇಶದ ಮೂಲೆ ಮೂಲೆಯಲ್ಲಿ ರಾಷ್ಟ್ರೀಯತೆಯ ಮನೋಭಾವದ ಹಬ್ಬವಾಗಿ ಮಾರ್ಪಟ್ಟಿದೆ"
"ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಡೆಯುವ ಕಾರ್ಯಕ್ರಮ, ಜನವರಿ 26 ರಂದು ಕರ್ತವ್ಯ ಮಾರ್ಗದಲ್ಲಿ ನಡೆಯುವ ಮೆರವಣಿಗೆ ಹಾಗೂ ಏಕತಾ ಪ್ರತಿಮೆಯ ಅಡಿಯಲ್ಲಿ ನಡೆಯುವ ʻಏಕತಾ ದಿನʼದ ಆಚರಣೆಗಳು ರಾಷ್ಟ್ರೀಯ ಏಳಿಗೆಯ ತ್ರಿವಳಿ ಶಕ್ತಿಗಳಾಗಿವೆ"
"ಏಕತಾ ಪ್ರತಿಮೆಯು ʻಏಕ ಭಾರತ-ಶ್ರೇಷ್ಠ ಭಾರತʼದ ಆದರ್ಶಗಳನ್ನು ಪ್ರತಿನಿಧಿಸುತ್ತದೆ"
"ಗುಲಾಮಗಿರಿಯ ಮನಸ್ಥಿತಿಯನ್ನು ತ್ಯಜಿಸುವ ಪ್ರತಿಜ್ಞೆಯೊಂದಿಗೆ ಭಾರತ ಮುಂದುವರಿಯುತ್ತಿದೆ"
"ಭಾರತದ ವ್ಯಾಪ್ತಿಯನ್ನು ಮೀರಿದ ಯಾವುದೇ ಗುರಿ ಇಲ್ಲವೇ ಇಲ್ಲ"
“ಇಂದು ʻಏಕತಾ ನಗರʼವನ್ನು ಜಾಗತಿಕ ಹಸಿರು ನಗರವೆಂದು ಗುರುತಿಸಲಾಗಿದೆ"
, ಇಡೀ ಜಗತ್ತು ಭಾರತದ ಅಚಲ ದೃಢನಿಶ್ಚಯ, ದೇಶದ ಜನರ ಧೈರ್ಯ ಮತ್ತು ಸಾಮರ್ಥ್ಯವನ್ನು ಒಪ್ಪಿಕೊಂಡಿದೆ"
"ರಾಷ್ಟ್ರೀಯ ಏಕತೆಯ ಹಾದಿಯಲ್ಲಿ ಹಾಗೂ ನಮ್ಮ ಅಭಿವೃದ್ಧಿಯ ಪ್ರಯಾಣದಲ್ಲಿ, ತುಷ್ಟೀಕರಣದ ರಾಜಕೀಯವು ಅತಿದೊಡ್ಡ ಅಡಚಣೆಯಾಗಿದೆ"
"ಸಮೃದ್ಧ ಭಾರತದ ಆಕಾಂಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ನಮ್ಮ ರಾಷ್ಟ್ರದ ಏಕತೆಯನ್ನು ಎತ್ತಿಹಿಡಿಯುವತ್ತ ನಾವು ನಿರಂತರವಾಗಿ ಕೆಲಸ ಮಾಡಬೇಕು"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻರಾಷ್ಟ್ರೀಯ ಏಕತಾ ದಿನʼದ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸರ್ದಾರ್ ಪಟೇಲ್ ಅವರ ಜನ್ಮ ಜಯಂತಿಯಂದು ಏಕತಾ ಪ್ರತಿಮೆಗೆ ಅವರು ಗೌರವ ನಮನ ಸಲ್ಲಿಸಿದರು. ಬಿಎಸ್ಎಫ್ ಮತ್ತು ವಿವಿಧ ರಾಜ್ಯ ಪೊಲೀಸರ ತುಕಡಿಗಳನ್ನು ಒಳಗೊಂಡ ʻರಾಷ್ಟ್ರೀಯ ಏಕತಾ ದಿವಸ್ ಪೆರೇಡ್ʼ, ಸಂಪೂರ್ಣ ಮಹಿಳಾ ʻಸಿಆರ್‌ಪಿಎಫ್ʼ ಬೈಕ್ ಸವಾರರ ʻಡೇರ್ಡೆವಿಲ್ ಶೋʼ, ʻಬಿಎಸ್ಎಫ್‌ʼನ ಮಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ ಕಾರ್ಯಕ್ರಮ, ವಿಶೇಷ ಎನ್‌ಸಿಸಿ ಪ್ರದರ್ಶನ, ಶಾಲಾ ಬ್ಯಾಂಡ್‌ಗಳ ಪ್ರದರ್ಶನ, ಭಾರತೀಯ ವಾಯುಪಡೆಯ ವೈಮಾನಿಕ ಹಾರಾಟ, ʻರೋಮಾಂಚಕ ಗ್ರಾಮʼಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಶ್ರೀ ಮೋದಿ ಅವರು ಸಾಕ್ಷಿಯಾದರು.

 

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ʻರಾಷ್ಟ್ರೀಯ ಏಕತಾ ದಿನʼವು ಭಾರತದ ಯುವಕರು ಮತ್ತು ದೇಶದ ಯೋಧರ ಏಕತೆಯ ಶಕ್ತಿಯ ಆಚರಣೆಯಾಗಿದೆ ಎಂದರು. "ಒಂದು ರೀತಿಯಲ್ಲಿ, ನಾನು ʻಮಿನಿ ಭಾರತʼವನ್ನು ಇಲ್ಲಿ ನೋಡುತ್ತಿದ್ದೇನೆ,ʼʼ  ಎಂದು ಪ್ರಧಾನಿ ಒತ್ತಿ ಹೇಳಿದರು. ಭಾಷೆಗಳು, ರಾಜ್ಯಗಳು ಮತ್ತು ಸಂಪ್ರದಾಯಗಳು ವಿಭಿನ್ನವಾಗಿದ್ದರೂ, ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಏಕತೆ ಎಂಬ ಬಲಿಷ್ಠ ಎಳೆಯಿಂದ ಜೋಡಿಸಲ್ಪಟ್ಟಿದ್ದಾರೆ ಎಂದು ಅವರು ಒತ್ತಿಹೇಳಿದರು. "ಮಣಿಗಳು ಹೇರಳವಾಗಿರಬಹುದು, ಆದರೆ ಹಾರವು ಒಂದೇ. ನಾವು ವೈವಿಧ್ಯಮಯವಾಗಿದ್ದರೂ, ನಾವು ಒಗ್ಗಟ್ಟಾಗಿದ್ದೇವೆ " ಎಂದು ಪ್ರಧಾನಿ ಹೇಳಿದರು. ಆಗಸ್ಟ್ 15 ಮತ್ತು ಜನವರಿ 26 ಅನ್ನು ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವದ ದಿನಗಳಾಗಿ ಗುರುತಿಸಿದಂತೆಯೇ, ಅಕ್ಟೋಬರ್ 31 ಈಗ ದೇಶಾದ್ಯಂತ ʻಏಕತೆಯ ಹಬ್ಬʼವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗಳು, ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವದ ಮೆರವಣಿಗೆ ಮತ್ತು ನರ್ಮದಾ ನದಿಯ ದಡದಲ್ಲಿರುವ ಏಕತಾ ಪ್ರತಿಮೆಯ ಬಳಿ ʻರಾಷ್ಟ್ರೀಯ ಏಕತಾ ದಿನʼದ ಆಚರಣೆಗಳು ರಾಷ್ಟ್ರೀಯ ಏಳಿಗೆ ತ್ರಿಶಕ್ತಿಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ಇಂದಿನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ʻಏಕತಾ ನಗರʼಕ್ಕೆ ಭೇಟಿ ನೀಡುವವರು ಏಕತಾ ಪ್ರತಿಮೆಗೆ ಸಾಕ್ಷಿಯಾಗುವುದಲ್ಲದೆ, ಸರ್ದಾರ್ ಸಾಹೇಬ್ ಅವರ ಜೀವನ ಮತ್ತು ಭಾರತದ ರಾಷ್ಟ್ರೀಯ ಏಕೀಕರಣಕ್ಕೆ ಅವರು ನೀಡಿದ ಕೊಡುಗೆಯ ಒಂದು ಪಕ್ಷಿನೋಟವನ್ನು ಪಡೆಯುತ್ತಾರೆ ಎಂದರು. "ಏಕತಾ ಪ್ರತಿಮೆಯು ʻಏಕ ಭಾರತ -ಶ್ರೇಷ್ಠ ಭಾರತʼದ ಆದರ್ಶಗಳನ್ನು ಪ್ರತಿನಿಧಿಸುತ್ತದೆ," ಎಂದು ಶ್ರೀ ಮೋದಿ ಹೇಳಿದರು. ಪ್ರತಿಮೆಯ ನಿರ್ಮಾಣದಲ್ಲಿ ನಾಗರಿಕರ ಕೊಡುಗೆಗಳನ್ನು ಉಲ್ಲೇಖಿಸಿದ ಪ್ರಧಾನಿ, ತಮ್ಮ ಉಪಕರಣಗಳನ್ನು ದಾನ ಮಾಡಿದ ರೈತರ ಉದಾಹರಣೆಗಳನ್ನು ನೀಡಿದರು. ಏಕತೆಯ ಗೋಡೆಯ ನಿರ್ಮಾಣಕ್ಕಾಗಿ ಭಾರತದ ವಿವಿಧ ಭಾಗಗಳಿಂದ ಮಣ್ಣನ್ನು ಒಟ್ಟುಗೂಡಿಸಿದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ದೇಶಾದ್ಯಂತ 'ಏಕತೆಗಾಗಿ ಓಟʼ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕೋಟ್ಯಂತರ ನಾಗರಿಕರು ʻರಾಷ್ಟ್ರೀಯ ಏಕತಾ ದಿನʼದ ಆಚರಣೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಸರ್ದಾರ್ ಸಾಹೇಬ್ ಅವರ ಆದರ್ಶಗಳು 140 ಕೋಟಿ ನಾಗರಿಕರ ಹೃದಯವನ್ನು ರೂಪಿಸುತ್ತವೆ, ಅವರೆಲ್ಲರೂ ʻಏಕ ಭಾರತ-ಶ್ರೇಷ್ಠ ಭಾರತʼದ ಆಶಯವನ್ನು ಆಚರಿಸಲು ಒಗ್ಗೂಡುತ್ತಾರೆ" ಎಂದು ಪ್ರಧಾನಿ ಮೋದಿ ಹೇಳಿದರು. ಇದಕ್ಕೂ ಮುನ್ನ ಅವರು ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ಮತ್ತು ʻರಾಷ್ಟ್ರೀಯ ಏಕತಾ ದಿನʼದ ಅಂಗವಾಗಿ ನಾಗರಿಕರನ್ನು ಅಭಿನಂದಿಸಿದರು.

 

ಮುಂದಿನ 25 ವರ್ಷಗಳು ರಾಷ್ಟ್ರದ ಪಾಲಿಗೆ  ಈ ಶತಮಾನದಲ್ಲೇ ಅತ್ಯಂತ ಪ್ರಮುಖ 25 ವರ್ಷಗಳು. ಏಕೆಂದರೆ ಈ ಅವಧಿಯಲ್ಲಿ ಭಾರತವು ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಾಗಲಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಸ್ವಾತಂತ್ರ್ಯ ಪೂರ್ವದ 25 ವರ್ಷಗಳಲ್ಲಿ ಕಂಡಂತಹ ಸಮರ್ಪಣಾ ಮನೋಭಾವವನ್ನು ಈಗ ದೇಶಕ್ಕಾಗಿ ತೋರಬೇಕೆಂದು ಅವರು ಕರೆ ನೀಡಿದರು. ವಿಶ್ವದಲ್ಲಿ ಭಾರತದ ವರ್ಚಸ್ಸು ಬೆಳೆಯುತ್ತಿರುವ ಬಗ್ಗೆ ಅವರು ಗಮನ ಸೆಳೆದರು. "ನಾವು ಅತಿದೊಡ್ಡ ಪ್ರಜಾಪ್ರಭುತ್ವದ ಸ್ಥಾನಮಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವುದರಿಂದ, ನಮಗೆ ಹೆಮ್ಮೆ ಎನಿಸುತ್ತದೆ" ಎಂದು ಪ್ರಧಾನಿ ಹೇಳಿದರು. ಭದ್ರತೆ, ಆರ್ಥಿಕತೆ, ವಿಜ್ಞಾನ, ದೇಶೀಯ ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಮುಂಚೂಣಿ ಸ್ಥಾನಮಾನ ಹಾಗೂ  ಪ್ರಮುಖ ಜಾಗತಿಕ ಕಂಪನಿಗಳು ಮತ್ತು ಕ್ರೀಡೆಗಳಲ್ಲಿ ಭಾರತೀಯರು ಒದಗಿಸುತ್ತಿರುವ ಜಾಗತಿಕ ಕಾರ್ಪೊರೇಟ್ ನಾಯಕತ್ವದ ಬಗ್ಗೆ ಅವರು ಉಲ್ಲೇಖಿಸಿದರು.

ಗುಲಾಮಗಿರಿಯ ಮನಸ್ಥಿತಿಯನ್ನು ತ್ಯಜಿಸಿ ಮುಂದುವರಿಯುವ ಸಂಕಲ್ಪವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಭಾರತವು ಬೆಳೆಯುತ್ತಿದೆ ಮತ್ತು ತನ್ನ ಪರಂಪರೆಯನ್ನು ಸಂರಕ್ಷಿಸುತ್ತಿದೆ ಎಂದು ಹೇಳಿದರು. ನೌಕಾಪಡೆಯ ಧ್ವಜದಿಂದ ವಸಾಹತುಶಾಹಿ ಚಿಹ್ನೆಯನ್ನು ತೆಗೆದುಹಾಕುವುದು, ವಸಾಹತುಶಾಹಿ ಕಾಲದ ಅನಗತ್ಯ ಕಾನೂನುಗಳನ್ನು ತೆಗೆದುಹಾಕುವುದು, ʻಐಪಿಸಿʼಯ ಬದಲಾವಣೆ ಮತ್ತು ʻಇಂಡಿಯಾ ಗೇಟ್‌ʼನಲ್ಲಿ ವಸಾಹತುಶಾಹಿ ಪ್ರತಿನಿಧಿಗಳ ಸ್ಥಾನದಲ್ಲಿ ನೇತಾಜಿ ಪ್ರತಿಮೆಯನ್ನು ಈ ನಿಟ್ಟಿನಲ್ಲಿ ಅವರು ಉಲ್ಲೇಖಿಸಿದರು.

"ಇಂದು, ಭಾರತದ ವ್ಯಾಪ್ತಿಯನ್ನು ಮೀರಿದ ಗುರಿಗಳು ಯಾವುದೂ ಇಲ್ಲ," ಎಂದು ಪ್ರಧಾನಿ ಮೋದಿ ಹೇಳಿದರು. ʻಸಬ್‌ ಕಾ ಪ್ರಯಾಸ್‌ʼನ ಶಕ್ತಿಯನ್ನು ಒತ್ತಿ ಹೇಳಿದ ಅವರು, 370ನೇ ವಿಧಿಯನ್ನು ರದ್ದುಪಡಿಸಿದ ಕ್ರಮದ ಬಗ್ಗೆ ಉಲ್ಲೇಖಿಸಿದರು. “ಇಂದು ಕಾಶ್ಮೀರ ಮತ್ತು ದೇಶದ ಇತರ ಭಾಗಗಳ ನಡುವೆ ಇದ್ದ 370ನೇ ವಿಧಿಯೆಂಬ ಗೋಡೆಯನ್ನು ನೆಲಸಮಗೊಳಿಸಲಾಗಿದೆ. ಈ ನಡೆಯು ಸರ್ದಾರ್ ಪಟೇಲ್‌ ಅವರನ್ನು, ಅವರು ಎಲ್ಲೇ ಇದ್ದರೂ ಸಂತಸಗೊಳಿಸಿರುತ್ತದೆ ಎಂದು ಪ್ರಧಾನಿ ಬಣ್ಣಿಸಿದರು. 

ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 5-6 ದಶಕಗಳಿಂದ ಬಾಕಿ ಉಳಿದಿದ್ದ ಆದರೆ ಕಳೆದ ಕೆಲವೇ ವರ್ಷಗಳಲ್ಲಿ ಪೂರ್ಣಗೊಂಡಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಬಗ್ಗೆಯೂ ಹೇಳಿದರು. ಕೆವಾಡಿಯಾ - ಏಕತಾ ನಗರದ ಪರಿವರ್ತನೆಯನ್ನು ʻಸಂಕಲ್ಪದಿಂದ ಸಿದ್ಧಿʼಗೆ ಉದಾಹರಣೆಯಾಗಿ ಅವರು ಉಲ್ಲೇಖಿಸಿದರು. "ಇಂದು ʻಏಕತಾ ನಗರʼವನ್ನು ಜಾಗತಿಕ ಹಸಿರು ನಗರವೆಂದು ಗುರುತಿಸಲಾಗಿದೆ" ಎಂದು ಅವರು ಹೇಳಿದರು. ವಿವಿಧ ಪ್ರವಾಸಿ ಆಕರ್ಷಣೆಗಳಿರುವ ʻಏಕತಾ ನಗರʼದಲ್ಲಿ ಕಳೆದ 6 ತಿಂಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಈಗಾಗಲೇ ಪ್ರಬಲವಾಗಿರುವ ಸೌರ ವಿದ್ಯುತ್ ಉತ್ಪಾದನೆ ಮತ್ತು ನಗರ ಅನಿಲ ವಿತರಣೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇಂದು ʻಏಕತಾ ನಗರʼಕ್ಕೆ ಪಾರಂಪರಿಕ ರೈಲಿನ ಆಕರ್ಷಣೆಯೂ ಸೇರ್ಪಡೆಗೊಳ್ಳಲಿದೆ ಎಂದರು. ಕಳೆದ 5 ವರ್ಷಗಳಲ್ಲಿ 1.5 ಕೋಟಿಗೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಉದ್ಯೋಗದ ಮಾರ್ಗಗಳನ್ನು ಒದಗಿಸಲು ಸಹಾಯ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

 

"ಇಂದು, ಇಡೀ ಜಗತ್ತು ಭಾರತದ ಅಚಲ ದೃಢನಿಶ್ಚಯ, ದೇಶದ ಜನರ ಧೈರ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಿದೆ," ಎಂದು ಪ್ರಧಾನಿ ಹೇಳಿದರು. ಇದೇ ವೇಳೆ, ಜಗತ್ತು ಇಂದು ಇದರಿಂದ ಸ್ಫೂರ್ತಿ ಪಡೆಯುತ್ತಿರುವ ಸಂದರ್ಭದಲ್ಲಿ, ಕೆಲವು ಪ್ರವೃತ್ತಿಗಳ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಇಂದಿನ ಜಗತ್ತಿನಲ್ಲಿನ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಅಸ್ಥಿರತೆಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಿ, ಕೋವಿಡ್ ಸಾಂಕ್ರಾಮಿಕದ ನಂತರ ಅನೇಕ ರಾಷ್ಟ್ರಗಳ ಆರ್ಥಿಕತೆಗಳು ಕುಸಿಯುತ್ತಿರುವ ಬಗ್ಗೆ ಒತ್ತಿ ಹೇಳಿದರು. ಆ ದೇಶಗಳಲ್ಲಿ ಹಣದುಬ್ಬರ ಮತ್ತು ನಿರುದ್ಯೋಗವು ಕಳೆದ 30-40 ವರ್ಷಗಳಲ್ಲೇ ಗರಿಷ್ಠ ಮಟ್ಟದಲ್ಲಿದೆ. ಇಂತಹ ಸಂದರ್ಭಗಳಲ್ಲಿ, ಭಾರತವು ಹೊಸ ದಾಖಲೆಗಳು ಮತ್ತು ಅಭಿವೃದ್ಧಿಯೊಂದಿಗೆ ನಿರಂತರವಾಗಿ ಮುಂದುವರಿಯುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕಳೆದ 9 ವರ್ಷಗಳಲ್ಲಿ ಸರ್ಕಾರ ಕೈಗೊಂಡ ನೀತಿಗಳು ಮತ್ತು ನಿರ್ಧಾರಗಳ ಸಕಾರಾತ್ಮಕ ಪರಿಣಾಮವನ್ನು ಇಂದು ನೋಡಬಹುದಾಗಿದೆ ಎಂದು ಪ್ರಧಾನಿ ಹೇಳಿದರು. ಕಳೆದ 5 ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ದೇಶದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದ ಪ್ರಧಾನಿ, ಭಾರತವನ್ನು ಅಭಿವೃದ್ಧಿಯ ಪಥಕ್ಕೆ ತಂದ 140 ಕೋಟಿ ನಾಗರಿಕರ ಪ್ರಯತ್ನಗಳು ವ್ಯರ್ಥವಾಗಬಾರದು ಎಂದರು. "ನಾವು ಭವಿಷ್ಯದ ಮೇಲೆ ಕಣ್ಣಿಡಬೇಕು ಮತ್ತು ರಾಷ್ಟ್ರೀಯ ಗುರಿಗಳನ್ನು ಸಾಧಿಸುವ ನಮ್ಮ ಸಂಕಲ್ಪವನ್ನು ಮುಂದುವರಿಸಬೇಕು" ಎಂದು ಅವರು ಕರೆ ನೀಡಿದರು.

ಆಂತರಿಕ ಭದ್ರತೆಯ ಬಗ್ಗೆ ಉಕ್ಕಿನ ಮನುಷ್ಯ ಸರ್ದಾರ್ ಸಾಹೇಬ್ ಅವರ ಅಚಲ ಕಾಳಜಿಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ಕಳೆದ 9 ವರ್ಷಗಳಲ್ಲಿ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದರು. ಇದೇ ವೇಳೆ, ಈ ಹಿಂದೆ ಯಶಸ್ಸಿನಿಂದ ಬೀಗುತ್ತಿದ್ದ ವಿನಾಶಕಾರಿ ಶಕ್ತಿಗಳನ್ನು ದೃಢವಾಗಿ ಮೆಟ್ಟಿ ನಿಲ್ಲುವ ಮೂಲಕ ಸವಾಲುಗಳನ್ನು ಹೇಗೆ ಜಯಿಸಲಾಯಿತು ಎಂಬುದನ್ನು ವಿವರಿಸಿದರು. ರಾಷ್ಟ್ರದ ಏಕತೆಯ ಮೇಲಿನ ದಾಳಿಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಪ್ರಧಾನಿ ಒತ್ತಾಯಿಸಿದರು. 

 

ಭಾರತದ ಅಭಿವೃದ್ಧಿಯ ಪಯಣದಲ್ಲಿ ತುಷ್ಟೀಕರಣದ ರಾಜಕೀಯವು ಅತಿದೊಡ್ಡ ಅಡಚಣೆಯಾಗಿದೆ. ತುಷ್ಟೀಕರಣ ರಾಜಕೀಯದಲ್ಲಿ ತೊಡಗಿರುವವರು ಭಯೋತ್ಪಾದನೆಯ ವಿಚಾರವಾಗಿ ಕಣ್ಣುಮುಚ್ಚಿ ಕುಳಿತು, ಮನುಕುಲದ ಶತ್ರುಗಳಿಗೆ ಬೆಂಬಲಿಸುತ್ತಾರೆ. ಇದಕ್ಕೆ ಕಳೆದ ಹಲವಾರು ದಶಕಗಳೇ ಸಾಕ್ಷಿ ಎಂದು ಶ್ರೀ ಮೋದಿ ಗಮನಸೆಳೆದರು. ದೇಶದ ಏಕತೆಗೆ ಅಪಾಯವನ್ನುಂಟುಮಾಡುವ ಇಂತಹ ಚಿಂತನೆಯ ವಿರುದ್ಧ ಎಚ್ಚರಿಕೆಯಿಂದ ಇರುವಂತೆ ಅವರು ಕರೆ ನೀಡಿದರು.

 

ಪ್ರಸ್ತುತ ನಡೆಯುತ್ತಿರುವ ಮತ್ತು ಮುಂಬರುವ ಚುನಾವಣೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಸಕಾರಾತ್ಮಕ ರಾಜಕೀಯದಿಂದ ಸಂಪೂರ್ಣವಾಗಿ ದೂರವಾಗಿರುವ ಮತ್ತು ಸಮಾಜ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಬಣದ ವಿರುದ್ಧ ಎಚ್ಚರಿಕೆ ನೀಡಿದರು. "ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದೇಶದ ಏಕತೆಯನ್ನು ಕಾಪಾಡಿಕೊಳ್ಳಲು ನಾವು ಸದಾ ನಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ, ನಾವು ಅದರಲ್ಲಿ ನಮ್ಮ 100 ಪ್ರತಿಶತವನ್ನು ತೊಡಗಿಸಬೇಕು. ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಲು ಇದೊಂದೇ ಮಾರ್ಗ", ಎಂದು ಶ್ರೀ ಮೋದಿ ಹೇಳಿದರು.

.

ʻMyGovʼನಲ್ಲಿ ಸರ್ದಾರ್ ಪಟೇಲ್ ಕುರಿತ ರಾಷ್ಟ್ರೀಯ ಸ್ಪರ್ಧೆಯ ಬಗ್ಗೆಯೂ ಶ್ರೀ ಮೋದಿ ಮಾಹಿತಿ ನೀಡಿದರು.

ಇಂದಿನ ಭಾರತವು ʻನವ ಭಾರತʼವಾಗಿದ್ದು, ಅಲ್ಲಿ ಪ್ರತಿಯೊಬ್ಬ ನಾಗರಿಕ ಅದ್ಭುತವಾದ  ಆತ್ಮವಿಶ್ವಾಸ ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದರು. ಇದೇ ವಿಶ್ವಾಸ ಮತ್ತು ಏಕತೆಯ ಭಾವ ಮುಂದುವರಿಯುತ್ತದೆ ಎಂದು ಅವರು ಒತ್ತಿ ಹೇಳಿದರು. ನಾಗರಿಕರ ಪರವಾಗಿ ಸರ್ದಾರ್ ಪಟೇಲ್ ಅವರಿಗೆ ವಿನಮ್ರ ಗೌರವ ಸಲ್ಲಿಸುವ ಮೂಲಕ ಪ್ರಧಾನಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಜೊತೆಗೆ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಮತ್ತೊಮ್ಮೆ ಶುಭಾಶಯಗಳನ್ನು ತಿಳಿಸಿದರು.

ಹಿನ್ನೆಲೆ

ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡುವ ಹಾಗೂ ಬಲಪಡಿಸುವ ಉದ್ದೇಶದಿಂದ, ಪ್ರಧಾನಿಯವರು ತಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ʻರಾಷ್ಟ್ರೀಯ ಏಕತಾ ದಿನʼ ಎಂದು ಆಚರಿಸಲು ನಿರ್ಧರಿಸಿದರು.

 

Click here to read full text speech

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
iPhone exports from India nearly double to $12.1 billion in FY24: Report

Media Coverage

iPhone exports from India nearly double to $12.1 billion in FY24: Report
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಎಪ್ರಿಲ್ 2024
April 17, 2024

Holistic Development under the Leadership of PM Modi