ರಾಜ ಮನೆತನದ ಗೌರವಾನ್ವಿತರೆ,

ಸನ್ಮಾನ್ಯ ಪ್ರಧಾನ ಮಂತ್ರಿಗಳೆ,

ಎರಡೂ ದೇಶಗಳ ಉದ್ಯಮ ರಂಗದ ದಿಗ್ಗಜರೆ,

ಇಂದು, ನಾರ್ವೆ ಮತ್ತು ಭಾರತದ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ರಂಗದ ದಿಗ್ಗಜರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ನಮಗೆ ಸಿಕ್ಕಿದೆ. ಈ ಶೃಂಗಸಭೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಿದ್ದಕ್ಕಾಗಿ ನಾರ್ವೆಯ ಪ್ರಧಾನ ಮಂತ್ರಿ ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ.

ನಾರ್ವೆ ಮತ್ತು ಭಾರತದ ಉದ್ಯಮ ವ್ಯವಹಾರ ಮತ್ತು ಸಂಶೋಧನಾ ಸಮುದಾಯಗಳ ನಡುವೆ ಇಂದು ನಾನು ಇಲ್ಲಿರುವುದು ಬಹಳ ಸಂತೋಷದ ವಿಷಯ. ಇಲ್ಲಿರುವ ಪ್ರತಿನಿಧಿಗಳಲ್ಲಿ ಕೆಲವರನ್ನು ಮಾತನಾಡಿಸುವ ಅವಕಾಶ ನನಗೆ ಸಿಕ್ಕಿತು. ಅವರ ಮಾತುಗಳನ್ನು ಕೇಳಿದಾಗ, ನಮ್ಮ ಪಾಲುದಾರಿಕೆಯ ಅಡಿಪಾಯವು ತುಂಬಾ ಬಲಿಷ್ಠವಾಗಿದೆ ಎಂಬ ವಿಶ್ವಾಸವನ್ನು ನೀಡುತ್ತದೆ.

ಇದು ಕೇವಲ ಸಾಧ್ಯತೆಗಳ ಪಾಲುದಾರಿಕೆಯಲ್ಲ, ಇದು ಸಾಬೀತಾಗಿರುವ ಪಾಲುದಾರಿಕೆಯಾಗಿದೆ. ಇಂದು ಆಹಾರ, ಇಂಧನ ಮತ್ತು ರಸಗೊಬ್ಬರ ಭದ್ರತೆಯು ಜಾಗತಿಕ ಸವಾಲುಗಳಾಗಿ ಮಾರ್ಪಟ್ಟಿರುವಾಗ, ಭಾರತ ಮತ್ತು ನಾರ್ವೆ ಅವುಗಳನ್ನು ಪರಿಹರಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ. ಅದು ಭಾರತದ ಆಹಾರ ವಲಯದಲ್ಲಿ ಓರ್ಕ್ಲಾದ ಹೂಡಿಕೆಗಳಾಗಲಿ, ಈಕ್ವಿನಾರ್ ಭಾರತಕ್ಕೆ ಮಾಡುವ ಎಲ್ಪಿಜಿ ಮತ್ತು ಎಲ್ಎನ್ ಜಿ ಪೂರೈಕೆಯಾಗಿರಲಿ ಅಥವಾ ಭಾರತದ ರಸಗೊಬ್ಬರ ವಲಯಕ್ಕೆ ಯಾರಾ ಇಂಟರ್ ನ್ಯಾಷನಲ್‌ನ ಕೊಡುಗೆಯಾಗಿರಲಿ - ಈ ಸಹಭಾಗಿತ್ವಗಳು ನಮ್ಮ ಪಾಲುದಾರಿಕೆಯನ್ನು ಬಲಪಡಿಸುತ್ತಿವೆ.

 

ಇಲ್ಲಿ ಉಪಸ್ಥಿತರಿರುವ ನಿಮ್ಮಲ್ಲಿ ಅನೇಕರು, ಸಿಇಒಗಳು ವೈಬ್ರಂಟ್ ಗುಜರಾತ್ ಮತ್ತು ಭಾರತದಲ್ಲಿನ ಇತರ ಹೂಡಿಕೆದಾರರ ಶೃಂಗಸಭೆಗಳಲ್ಲಿ ನಿರಂತರವಾಗಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂಬುದನ್ನು ತಿಳಿದು ನನಗೆ ತುಂಬಾ ಸಂತೋಷವಾಗಿದೆ. ಈಗ ನಾವು ಈ ಪಾಲುದಾರಿಕೆಯ ತೀವ್ರತೆ ಹೆಚ್ಚಿಸಬೇಕು ಮತ್ತು ಅದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು.

ಮತ್ತು ಈಗ ಕೇವಲ ಒಂದೊಂದೇ ಹೆಜ್ಜೆ ಮುಂದಕ್ಕೆ ಸಾಗುವುದು ಸಾಕಾಗುವುದಿಲ್ಲ. ನಾವು ನಮ್ಮ ವೇಗವನ್ನು ಹೆಚ್ಚಿಸಬೇಕಾಗುತ್ತದೆ, ನಮ್ಮ ಗುರಿಗಳನ್ನು ಇನ್ನೂ ಹೆಚ್ಚಿನದಾಗಿ ಹೊಂದಿಸಿಕೊಳ್ಳಬೇಕು.

ಸ್ನೇಹಿತರೆ,

ಭಾರತದೊಂದಿಗೆ ಸಂಪರ್ಕ ಹೊಂದಿರುವ ನೀವೆಲ್ಲರೂ ಮತ್ತು ಭಾರತದ ಬಗ್ಗೆ ನೀವು ಇಲ್ಲಿ ನಡೆಸಿದ ಚರ್ಚೆಗಳು - ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ ಎಂದು ನಾನು ನಂಬುತ್ತೇನೆ. ಇಂದು ಉತ್ತಮ ಅವಕಾಶದ ಕ್ಷಣವಾಗಿದೆ,  ಅಲ್ಲಿ ಸರಿಯಾದ ಸಮಯದ ಸರಿಯಾದ ಬಳಕೆಯು ಗಮನಾರ್ಹ ವ್ಯತ್ಯಾಸ ಉಂಟು ಮಾಡುತ್ತದೆ.

2025 ಅಕ್ಟೋಬರ್ ನಲ್ಲಿ ನಾವು ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಸಂಘಟನೆಯೊಂದಿಗೆ  ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದ ಅಥವಾ "ಟಿಇಪಿಎ" ಜಾರಿಗೆ ತಂದಿದ್ದೇವೆ. ಈ ವಿಶಿಷ್ಟ ಮತ್ತು ವಿಶೇಷ ಒಪ್ಪಂದವು ನಮ್ಮ ನಡುವಿನ ಪ್ರತಿಭೆ, ತಂತ್ರಜ್ಞಾನ ಮತ್ತು ಪರಸ್ಪರ ನಂಬಿಕೆಯ ಒಪ್ಪಂದವಾಗಿದೆ.

ಈ ಒಪ್ಪಂದದ ಮೂಲಕ ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಸಂಘಟನೆ(ಇಎಫ್‌ಟಿಎ)ಗೆ ಸೇರಿದ ದೇಶಗಳು ಭಾರತದಲ್ಲಿ 100 ಶತಕೋಟಿ ಡಾಲರ್‌ ಹೂಡಿಕೆ ಮಾಡುವ ಮತ್ತು ಮುಂದಿನ 15 ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿವೆ. ಇದು ಮಹತ್ವಾಕಾಂಕ್ಷಿ ಗುರಿಯಾಗಿದೆ, ಇದನ್ನು ಸಾಧಿಸಬಹುದಾಗಿದೆ. ಭಾರತದಲ್ಲಿ ನಿಮ್ಮ ಹೂಡಿಕೆಗಳನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವುದು ನಮ್ಮ ಖಾತರಿ ಎಂದು ನಾನು ನಿಮಗೆ ವಿಶ್ವಾಸದಿಂದ ಭರವಸೆ ನೀಡುತ್ತೇನೆ.

 

ಸ್ನೇಹಿತರೆ,

ನಿಮಗೆ ವಿಶೇಷವಾಗಿ ಪ್ರಯೋಜನಕಾರಿಯಾಗಬಹುದಾದ 2 ವಲಯಗಳನ್ನು ನಾನು ಉಲ್ಲೇಖಿಸಲು ಬಯಸುತ್ತೇನೆ. ಭಾರತದ ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗವು ಪೌಷ್ಟಿಕಾಂಶ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಪ್ರಮುಖ ಬೇಡಿಕೆ ಸೃಷ್ಟಿಸುತ್ತಿದೆ. ಭಾರತದಲ್ಲಿ ಈ ಬೇಡಿಕೆ ಪೂರೈಸುವಲ್ಲಿ ನಾರ್ವೆಯ ಆಹಾರ, ಮೀನುಗಾರಿಕೆ ಮತ್ತು ಆರೋಗ್ಯ ಕಂಪನಿಗಳು ಬಲವಾದ ಪಾಲುದಾರರಾಗಬಹುದು.

ಅದೇ ರೀತಿ, ಸ್ವಚ್ಛ ಇಂಧನ ಕ್ಷೇತ್ರದಲ್ಲಿ ಭಾರತದ ಆಕಾಂಕ್ಷೆಗಳು ಜಗತ್ತಿನ ಎಲ್ಲಿಯೂ ಸರಿಸಾಟಿಯಿಲ್ಲ. 2030ರ ವೇಳೆಗೆ, ನಾವು 500 ಗಿಗಾವ್ಯಾಟ್ ಸ್ವಚ್ಛ ಇಂಧನ ಮತ್ತು 5 ದಶಲಕ್ಷ ಟನ್ ಹಸಿರು ಹೈಡ್ರೋಜನ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಸ್ವಚ್ಛ ಇಂಧನ ಹೂಡಿಕೆಯು ನಾರ್ವೆ ಸಂಪತ್ತಿನ ನಿಧಿಗೆ ಆದ್ಯತೆಯಾಗಿದೆ. ಭಾರತದ ಸ್ವಚ್ಛ ಇಂಧನ ಭವಿಷ್ಯದಲ್ಲಿ ಪ್ರಮುಖ ಪಾಲುದಾರರಾಗಲು ನಾನು ನಾರ್ವೆಯನ್ನು ಈ ಮೂಲಕ ಆಹ್ವಾನಿಸುತ್ತೇನೆ.

ಸ್ನೇಹಿತರೆ,

ನಾವು ಮುಂದುವರಿಯುತ್ತಿರುವಾಗ "ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ" ಎಂಬ ಮಂತ್ರದಿಂದ ಮಾರ್ಗದರ್ಶನ ಪಡೆದಿದ್ದೇವೆ. ಕಳೆದ 12 ವರ್ಷಗಳನ್ನು ಹಿಂತಿರುಗಿ ನೋಡಿದರೆ, ನಾವು ಭಾರತದ ಆರ್ಥಿಕ ವ್ಯವಸ್ಥೆಯನ್ನು ಮೂಲಭೂತವಾಗಿ ಪರಿವರ್ತಿಸಿದ್ದೇವೆ ಎಂಬುದನ್ನು ನಾವು ನೋಡಬಹುದು.

ನಾವು ನಿರಂತರವಾಗಿ ತೆರಿಗೆ ಮತ್ತು ನಿಯಮಗಳ ಅನುಸರಣೆಗಳನ್ನು ಕಡಿಮೆ ಮಾಡುತ್ತಿದ್ದೇವೆ, ವ್ಯಾಪಾರ ಮಾಡುವ ಸುಲಭತೆಯನ್ನು ಮತ್ತಷ್ಟು ಸುಧಾರಿಸಲು ಸರ್ಕಾರವು ಹೆಚ್ಚು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇತ್ತೀಚೆಗೆ, ತೆರಿಗೆ, ಕಾರ್ಮಿಕ ಸಂಹಿತೆಗಳು ಮತ್ತು ಆಡಳಿತದಂತಹ ಕ್ಷೇತ್ರಗಳಲ್ಲಿ ನಾವು ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಪರಿಚಯಿಸಿದ್ದೇವೆ. ಭಾರತದಲ್ಲಿ ಉತ್ಪಾದನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವು ಈಗ ಕೆಲವು ಅತ್ಯುತ್ತಮ ಅವಕಾಶಗಳನ್ನು ನೀಡುತ್ತಿದ್ದೇವೆ. ನಾವು ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಪ್ರೋತ್ಸಾಹಕಗಳನ್ನು ಸಹ ನೀಡುತ್ತಿದ್ದೇವೆ.

 

ಇದಕ್ಕೆ ಒಂದು ಪ್ರಕಾಶಮಾನ ಉದಾಹರಣೆಯೆಂದರೆ, ನಮ್ಮ ಹಡಗು ನಿರ್ಮಾಣ ವಲಯ. ಈ ವಲಯವನ್ನು ಕಾರ್ಯತಂತ್ರ ಉತ್ಪಾದನಾ ವಲಯವಾಗಿ ಅಭಿವೃದ್ಧಿಪಡಿಸಲು ನಾವು ವೇಗವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಹಡಗು ನಿರ್ಮಾಣ ಸಮೂಹಗಳನ್ನು ನಿರ್ಮಿಸುತ್ತಿದ್ದೇವೆ, ಅದರ ಬೆಳವಣಿಗೆಗೆ ಆರಂಭದಿಂದ ಕೊನೆಯವರೆಗೆ(ಪರಿಪೂರ್ಣ) ಪರಿಸರ ವ್ಯವಸ್ಥೆ ರಚಿಸುತ್ತಿದ್ದೇವೆ.

ಹಡಗು ನಿರ್ಮಾಣದ ಜತೆಗೆ ಭಾರತವು ಎಂಆರ್ ಒ, ಹಸಿರು ಸಾಗಣೆ ಮತ್ತು ಕಡಲ ಸೇವೆಗಳಿಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

ಇಂದು ನಾರ್ವೆಯ ಸುಮಾರು 10 ಪ್ರತಿಶತ ಹಡಗುಗಳು ಭಾರತದಲ್ಲಿ ನಿರ್ಮಿಸಲ್ಪಟ್ಟಿವೆ. ಮುಂದಿನ 5 ವರ್ಷಗಳಲ್ಲಿ ನಾವು ಇದನ್ನು ಶೇಕಡ 25ಕ್ಕೆ ಹೆಚ್ಚಿಸಬಹುದೇ? ಇದು ಕಷ್ಟಕರವಾದ ಕೆಲಸವಲ್ಲ ಎಂದು ನಾನು ನಂಬುತ್ತೇನೆ. ನಾವು ಈಗಾಗಲೇ ವೇಗ ಪಡೆದುಕೊಂಡಿದ್ದೇವೆ. ಈಗ ನಮಗೆ ಬೇಕಾಗಿರುವುದು ದೊಡ್ಡ ಮಹತ್ವಾಕಾಂಕ್ಷೆಗಳಿಂದ ಬೆಂಬಲಿತವಾದ ದೊಡ್ಡ ಹೆಜ್ಜೆಗಳು.

ಭಾರತದ ನೀತಿ ಸ್ಥಿರತೆ ಮತ್ತು ಪ್ರೋತ್ಸಾಹಕಗಳ ಲಾಭ ಪಡೆಯುವ ಮೂಲಕ ಈ ವಲಯದಲ್ಲಿ ಪ್ರಮುಖ ಪಾಲುದಾರರಾಗಲು ನಿಮ್ಮೆಲ್ಲರನ್ನು ನಾನು ಆಹ್ವಾನಿಸುತ್ತೇನೆ.

ಸ್ನೇಹಿತರೆ,

ಇಂದು ಪ್ರಧಾನಮಂತ್ರಿ ಮತ್ತು ನಾನು ಭಾರತ-ನಾರ್ವೆ ಸಂಬಂಧಗಳನ್ನು ಹಸಿರು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿದ್ದೇವೆ. ಈ ಕಾರ್ಯತಂತ್ರ ಪಾಲುದಾರಿಕೆಯ ಮೂಲಕ, ನಾರ್ವೆ ಕಂಪನಿಗಳು ನಿರ್ಣಾಯಕ ಖನಿಜಗಳು, ಎಐ, ಸೈಬರ್ ತಂತ್ರಜ್ಞಾನಗಳು, ಬಾಹ್ಯಾಕಾಶ ಮತ್ತು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಸಂಪೂರ್ಣ ಬೆಂಬಲ ಪಡೆಯುತ್ತವೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತವನ್ನು ನಾವೀನ್ಯತೆ ಮತ್ತು ಉತ್ಪಾದನೆಗೆ ನೆಲೆಯನ್ನಾಗಿ ಮಾಡುವಂತೆ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.

ಸ್ನೇಹಿತರೆ,

ಇಂದು ನಾವು ಭಾರತ-ನಾರ್ವೆ ಸಂಬಂಧಗಳನ್ನು ಪ್ರಯೋಗಾಲಯದಿಂದ ಪ್ರಯೋಗಾಲಯಕ್ಕೆ, ವಿಶ್ವವಿದ್ಯಾಲಯದಿಂದ ವಿಶ್ವವಿದ್ಯಾಲಯಕ್ಕೆ ಮತ್ತು ವಿಜ್ಞಾನಿಯಿಂದ ವಿಜ್ಞಾನಿಗೆ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ. ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್), ನವೋದ್ಯಮ ನಿಧಿಗಳು ಮತ್ತು ನಾರ್ವೆಯ ಸಂಶೋಧನಾ ಸಂಸ್ಥೆಗಳು ಪರಸ್ಪರ ಸಹಕಾರ ಬಲಪಡಿಸುತ್ತಿವೆ. ಇದು ಎರಡೂ ದೇಶಗಳ ಸಂಶೋಧನೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಗಳನ್ನು ಸಂಪರ್ಕಿಸುತ್ತದೆ.

 

ಸ್ನೇಹಿತರೆ,

ನಿಮ್ಮ ಅವಶ್ಯಕತೆಗಳನ್ನು ಕೇಂದ್ರೀಕೃತ ರೀತಿಯಲ್ಲಿ ಪರಿಹರಿಸಲು ನಾವು ನಾರ್ವೆಗಾಗಿ ಸಮರ್ಪಿತ ವ್ಯಾಪಾರ ಸೌಲಭ್ಯ ಮೇಜನ್ನು ಇನ್ವೆಸ್ಟ್ ಇಂಡಿಯಾದಲ್ಲಿ ತೆರೆದಿದ್ದೇವೆ. ಈ ಮೇಜು ಭಾರತದಲ್ಲಿ ನಿಮ್ಮ ಹೂಡಿಕೆ ಪ್ರಯಾಣವನ್ನು ಸುಗಮ, ವೇಗ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

ಅಂತಹ ಸಮರ್ಪಿತ ಕಾರ್ಯವಿಧಾನವು ಗಮನಾರ್ಹ ಅನುಕೂಲತೆಗಳನ್ನು ಒದಗಿಸುತ್ತದೆ. ಇದು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯವನ್ನು ನಿಮಗೆ ಹೆಚ್ಚು ಸುಲಭಗೊಳಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಹೊಂದಾಣಿಕೆಗಳು ಅಥವಾ ಬೆಂಬಲದ ಅಗತ್ಯವಿದ್ದಾಗಲೆಲ್ಲಾ, ಅವುಗಳನ್ನು ಸಹ ಹೆಚ್ಚಿನ ವೇಗದಲ್ಲಿ ಪರಿಹರಿಸಬಹುದು. ಅದಕ್ಕಾಗಿಯೇ ನಾವು ಈ ವಿಶೇಷ ವ್ಯವಸ್ಥೆ ರಚಿಸಿದ್ದೇವೆ.

ಈಗ ನಿಮ್ಮೆಲ್ಲರಿಗೂ ನನ್ನ ಪ್ರಮುಖ ಸಂದೇಶ ಇದು... ಬನ್ನಿ, ಭಾರತದಲ್ಲಿ ನಿಮ್ಮ ವ್ಯಾಪ್ತಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳನ್ನು ವಿಸ್ತರಿಸಿ. ನಾನು ನಿಮ್ಮನ್ನು ಭಾರತಕ್ಕೆ ಹೃತ್ಪೂರ್ವಕವಾಗಿ ಆಹ್ವಾನಿಸುತ್ತೇನೆ.

 

ಈ ಅನುಭವಗಳನ್ನು ನೇರವಾಗಿ ವೀಕ್ಷಿಸಲು ನಿಮಗೆ ಅವಕಾಶವೂ ಇರುತ್ತದೆ. ನಾನು ಕೂಡ ನನ್ನ ಕಡೆಯಿಂದ ನನ್ನ ಭರವಸೆ ಮತ್ತು ವಿಶ್ವಾಸವನ್ನು ನಿಮಗೆ ತಿಳಿಸಿದ್ದೇನೆ. ಒಂದು ರೀತಿಯಲ್ಲಿ, ಚೆಂಡು ಈಗ ನಿಮ್ಮ ಅಂಗಳದಲ್ಲಿದೆ.

ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian public relations industry pegged to reach ₹4,500 cr by 2030: Report

Media Coverage

Indian public relations industry pegged to reach ₹4,500 cr by 2030: Report
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam greeting all the devotees of Lord Shiva on the commencement of the sacred Shri Amarnath Yatra
July 03, 2026

The Prime Minister, Shri Narendra Modi, shared a Sanskrit Subhashitam, greeting all the devotees of Lord Shiva on the commencement of the sacred Shri Amarnath Yatra from today:

“वाग्बुद्धिचित्तकरणैश्च तपोभिरुग्रैः
शक्यं समाकलयितुं न यदीयरूपम्।

तं भक्तिभावसुलभं शरणं नतानां
नित्यं भजाम्यऽमरनाथमहं दयालुम्॥"

The Subhashitam says, "I daily worship the merciful Lord Amarnath, whose nature cannot be comprehended through speech, intellect, mind, the senses, or even through severe finances, who is easily attainable through devotion, and who is the refuge of those who bow before him."

The Prime Minister wrote on X;

समस्त शिवभक्तों को पावन-पुनीत श्री अमरनाथ यात्रा के शुभारंभ की अनंत शुभकामनाएं! बाबा बर्फानी के दिव्य दर्शन की यह यात्रा आप सभी के जीवन में सुख-समृद्धि, सौभाग्य और उत्तम स्वास्थ्य लेकर आए।

जय बाबा बर्फानी!

वाग्बुद्धिचित्तकरणैश्च तपोभिरुग्रैः
शक्यं समाकलयितुं न यदीयरूपम्।

तं भक्तिभावसुलभं शरणं नतानां
नित्यं भजाम्यऽमरनाथमहं दयालुम्॥