ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 19ರಂದು ಮಧ್ಯಾಹ್ನ 1ಗಂಟೆಗೆ ಇಂದೋರ್ನಲ್ಲಿ "ಗೋಬರ್-ಧನ್ (ಬಯೋ-ಸಿಎನ್ ಜಿ) ಘಟಕ"ವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
"ಕಸ ಮುಕ್ತ ನಗರಗಳನ್ನು" ಸೃಷ್ಟಿಸುವ ಸಮಗ್ರ ದೃಷ್ಟಿಕೋನದೊಂದಿಗೆ ಪ್ರಧಾನಮಂತ್ರಿಯವರು ಇತ್ತೀಚೆಗೆ ʻಸ್ವಚ್ಛ ಭಾರತ ಮಿಷನ್ ಅರ್ಬನ್ 2.0ʼಗೆ ಚಾಲನೆ ನೀಡಿದರು. ಸಂಪನ್ಮೂಲಗಳ ಮರುಗಳಿಕೆಯನ್ನು ಗರಿಷ್ಠಗೊಳಿಸಲು "ತ್ಯಾಜ್ಯದಿಂದ ಸಂಪತ್ತು" ಮತ್ತು "ಆವರ್ತನ ಆರ್ಥಿಕತೆ" ಎಂಬ ವಿಶಾಲ ತತ್ವಗಳ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ - ಇವೆರಡೂ ತತ್ವಗಳನ್ನು ಇಂದೋರ್ನ ʻಬಯೋ-ಸಿಎನ್ಜಿʼ ಘಟಕದಲ್ಲಿ ಮೂರ್ತೀಕರಿಸಲಾಗಿದೆ.
ಈ ಘಟಕವು ದಿನಕ್ಕೆ 550 ಟನ್ಗಳಷ್ಟು ಪ್ರತ್ಯೇಕಿಸಿದ ಹಸಿ ಸಾವಯವ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ದಿನಕ್ಕೆ ಸುಮಾರು 17,000 ಕೆ.ಜಿ. ʻಸಿಎನ್ಜಿʼ ಮತ್ತು ದಿನಕ್ಕೆ 100 ಟನ್ ಸಾವಯವ ಕಾಂಪೋಸ್ಟ್ ಉತ್ಪಾದಿಸುವ ನಿರೀಕ್ಷೆಯಿದೆ. ಈ ಸ್ಥಾವರವು ಶೂನ್ಯ ಭೂಭರ್ತಿ ಮಾದರಿಗಳನ್ನು ಆಧರಿಸಿದೆ. ಇದರಿಂದ ಯಾವುದೇ ತ್ಯಾಜ್ಯ ಸೃಷ್ಟಿಯಾಗುವುದಿಲ್ಲ. ಅಲ್ಲದೆ, ಈ ಯೋಜನೆಯು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಹಸಿರು ಇಂಧನ ಹಾಗೂ ರಸಗೊಬ್ಬರವಾಗಿ ಸಾವಯವ ಕಾಂಪೋಸ್ಟ್ ಒದಗಣೆ ಸೇರಿದಂತೆ ಅನೇಕ ಪರಿಸರ ಪ್ರಯೋಜನಗಳನ್ನು ನೀಡುವ ನಿರೀಕ್ಷೆಯಿದೆ.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ʻಇಂದೋರ್ ಕ್ಲೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ʼ ಎಂಬ ವಿಶೇಷ ಉದ್ದೇಶದ ಸಂಸ್ಥೆಯನ್ನು ರಚಿಸಲಾಗಿದೆ. ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ (ಐಎಂಸಿ) ಮತ್ತು ಇಂಡೋ ಎನ್ವಿರೊ ಇಂಟಿಗ್ರೇಟೆಡ್ ಸೊಲ್ಯೂಷನ್ಸ್ ಲಿಮಿಟೆಡ್ (ಐಐಎಸ್ಎಲ್) ಸಾರ್ವಜನಿಕ ಖಾಸಗಿ ಪಾಲುದಾರಿಕೆ ಮಾದರಿಯಡಿ ಈ ಸಂಸ್ಥೆಯನ್ನು ಸ್ಥಾಪಿಸಿವೆ. ಇದಕ್ಕಾಗಿ ʻಐಇಐಎಸ್ಎಲ್ʼ 100 ಪ್ರತಿಶತ 150 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದೆ. ಈ ಸ್ಥಾವರದಿಂದ ಉತ್ಪಾದಿಸಲಾದ ʻಸಿಎನ್ಜಿʼಯ ಕನಿಷ್ಠ ಶೇ. 50ರಷ್ಟನ್ನು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಖರೀದಿಸುತ್ತದೆ ಜೊತೆಗೆ ಇಂತಹ ಮೊದಲ ಉಪಕ್ರಮದ ಭಾಗವಾಗಿ ʻಸಿಎನ್ಜಿʼ ಇಂಧನ ಆಧರಿತ 400 ಸಿಟಿ ಬಸ್ಗಳನ್ನು ಕಾರ್ಯಾಚರಿಸುತ್ತದೆ. ಉಳಿದ ʻಸಿಎನ್ಜಿʼಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಥಾವರದಲ್ಲಿ ಉತ್ಪಾದನೆಯಾಗುವ ಸಾವಯವ ಗೊಬ್ಬರವನ್ನು ಕೃಷಿ ಮತ್ತು ತೋಟಗಾರಿಕಾ ಉದ್ದೇಶಗಳಿಗೆ ರಾಸಾಯನಿಕ ಗೊಬ್ಬರದ ಬದಲಾಗಿ ಬಳಸಲು ಸಹಾಯಕವಾಗಲಿದೆ.


