

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರುವಾರ ಪಿ.ಎಂ.ಜಿ.ಎಸ್.ವೈ, ವಸತಿ, ಕಲ್ಲಿದ್ದಲು ಮತ್ತು ಇಂಧನ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ವಲಯಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಪರಿಶೀಲನೆ ಸಭೆಯು ಸುಮಾರು ಎರಡೂವರೆ ಗಂಟೆಗಳ ಕಾಲ ನಡೆಯಿತು.
ಇದರಲ್ಲಿ ಪಿಎಂಓ, ನೀತಿ ಆಯೋಗ ಮತ್ತು ಭಾರತ ಸರ್ಕಾರದ ಮೂಲಸೌಕರ್ಯ ಸಚಿವಾಲಯಗಳ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.
ನೀತಿ ಆಯೋಗದ ಸಿಇಓ ಅವರು ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದ ವೇಳೆ, ಹಲವು ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಆಗಿರುವುದನ್ನು ಉಲ್ಲೇಖಿಸಲಾಯಿತು. ಪ್ರಧಾನಮಂತ್ರಿಗಳ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ, 1.45 ಲಕ್ಷದಷ್ಟು ಸಂಖ್ಯೆಯ ನಿರ್ದಿಷ್ಟ ವಸತಿ ಪ್ರದೇಶಗಳ ಶೇ.81ರಷ್ಟನ್ನು ಸಂಪರ್ಕಿಸಲಾಗಿದೆ. ಸೂಚಿತ ಕಾಲಮಿತಿಯೊಳಗೆ ಸಂಪರ್ಕರಹಿತ ಉಳಿದ ಜನವಸತಿಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾಮಗಾರಿಗಳಿಗೆ ಲಭ್ಯವಿರುವ ಸಂಪನ್ಮೂಲಗಳನ್ನು ವರ್ಷವಿಡಿ ಗರಿಷ್ಠಮಟ್ಟದಲ್ಲಿ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪ್ರಧಾನಿ ಗಮನಿಸಿದರು. ಕೇಂದ್ರ ಆಯವ್ಯಯದ ದಿನಾಂಕವನ್ನು ಹಿಂದಕ್ಕೆ ಹಾಕಿದ ಪರಿಣಾಮವಾಗಿ ಸಾಮರ್ಥ್ಯ ಪ್ರದರ್ಶನದಲ್ಲಿ ಮತ್ತಷ್ಟು ಸುಧಾರಣೆಯಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರಿಗೆ ನನ್ನ ರಸ್ತೆ ಆಪ್ (ಮೇರಿ ಸಡಕ್ ಆಪ್) ಮೂಲಕ ಸ್ವೀಕರಿಸಲಾದ ದೂರುಗಳನ್ನು ತ್ವರಿತವಾಗಿ ಪರಿಹರಿಸಲಾಗಿದೆ ಎಂದು ತಿಳಿಸಲಾಯಿತು. ಅವರು ದೂರುಗಳ ಸವಿವರ ವಿಶ್ಲೇಷಣೆಗೆ ಕರೆ ನೀಡಿದರು, ಆ ಮೂಲಕ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಸಕಾಲದಲ್ಲಿ ಪರಿಹಾರ ಒದಗಿಸಬಹುದು ಎಂದರು.
2019ರವೇಳೆಗೆ ಗ್ರಾಮೀಣ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸಿ ಕೊಡುವ ಮಾರ್ಗಸೂಚಿಯೆಡೆಗೆ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ ಪ್ರಧಾನಿ, ಫಲಾನುಭವಿಗಳ ಜೀವನದಲ್ಲಿ ವಸತಿಗಳ ಧನಾತ್ಮಕ ಪರಿಣಾಮವನ್ನು ಸೂಕ್ತವಾಗಿ ಪರೀಕ್ಷಿಸುವಂತೆ ಮತ್ತು ಅವರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಗಮನ ಹರಿಸುವಂತೆ ತಿಳಿಸಿದರು. .
ಕಲ್ಲಿದ್ದಲು ಕ್ಷೇತ್ರದ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ತಾಂತ್ರಿಕ ಪೂರಣದ ಮೂಲಕ ಭೂ ಗಣಿಗಾರಿಕೆ ಮತ್ತು ಕಲ್ಲಿದ್ದಲು ಅನಿಲೀಕರಣದ ಕಡೆಗೆ ನವೀಕೃತ ಪ್ರಯತ್ನಗಳನ್ನು ಮಾಡುವಂತೆ ಕರೆ ನೀಡಿದರು. ಗ್ರಾಮೀಣ ವಿದ್ಯುದ್ದೀಕರಣ ಮತ್ತು ಮನೆಗಳ ವಿದ್ಯುದ್ದೀಕರಣದ ಗುರಿಯತ್ತ ಆಗಿರುವ ಪ್ರಗತಿಯ ಬಗ್ಗೆಯೂ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಲಾಯಿತು.