ಪ್ರಧಾನಮಂತ್ರಿ ಕಾರ್ನಿ ಅವರೇ,
ಗೌರವಾನ್ವಿತರೇ,

ನಮಸ್ಕಾರ!

ನಮ್ಮನ್ನು G-7 ಶೃಂಗಸಭೆಗೆ ಆಹ್ವಾನಿಸಿದ್ದಕ್ಕಾಗಿ ಮತ್ತು ನಮಗೆ ನೀಡಿದ ಅದ್ಭುತ ಸ್ವಾಗತಕ್ಕಾಗಿ ನಾನು ಪ್ರಧಾನಮಂತ್ರಿ ಕಾರ್ನಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. G-7 ಗುಂಪು 50 ವರ್ಷಗಳನ್ನು ಪೂರ್ಣಗೊಳಿಸಿದ ಈ ಐತಿಹಾಸಿಕ ಸಂದರ್ಭದಲ್ಲಿ ನಾನು ನಮ್ಮೆಲ್ಲಾ ಸ್ನೇಹಿತರನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಭವಿಷ್ಯದ ಪೀಳಿಗೆಗೆ ಇಂಧನ ಭದ್ರತೆಯನ್ನು ಖಚಿತಪಡಿಸುವುದು ನಮ್ಮ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಇದನ್ನು ನಾವು ಆದ್ಯತೆಯಾಗಿ ಮಾತ್ರವಲ್ಲದೆ, ನಮ್ಮ ನಾಗರಿಕರ ಕಡೆಗೆ ಇರುವ ಜವಾಬ್ದಾರಿಯೆಂದು ಪರಿಗಣಿಸುತ್ತೇವೆ. ಲಭ್ಯತೆ, ಸುಲಭ ಪ್ರವೇಶ, ಕೈಗೆಟಕುವಿಕೆ ಮತ್ತು ಸ್ವೀಕಾರಾರ್ಹತೆಯ ಮೂಲಭೂತ ತತ್ವಗಳ ಮೇಲೆ ಮುನ್ನಡೆಯುತ್ತಾ, ಭಾರತವು ಸಮಗ್ರ ಅಭಿವೃದ್ಧಿಯ ಹಾದಿಯನ್ನು ಆರಿಸಿಕೊಂಡಿದೆ.

ಇಂದು, ಭಾರತದಲ್ಲಿ ಬಹುತೇಕ ಎಲ್ಲಾ ಮನೆಗಳು ವಿದ್ಯುತ್ ಸಂಪರ್ಕವನ್ನು ಹೊಂದಿವೆ. ಭಾರತವು ಪ್ರತಿ ಯೂನಿಟ್ ವಿದ್ಯುತ್ಗೆ ಅತಿ ಕಡಿಮೆ ವೆಚ್ಚವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದರೂ, ಭಾರತವು ತನ್ನ ಪ್ಯಾರಿಸ್ ಬದ್ಧತೆಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿದೆ. ನಾವು 2070 ರ ವೇಳೆಗೆ 'ನೆಟ್ ಝೀರೋ' (Net Zero) ಗುರಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಪ್ರಸ್ತುತ, ನಮ್ಮ ಒಟ್ಟು ಸ್ಥಾಪಿತ ಸಾಮರ್ಥ್ಯದಲ್ಲಿ ಸುಮಾರು 50% ನವೀಕರಿಸಬಹುದಾದ ಇಂಧನದಿಂದಾಗಿದೆ.

2030ರ ವೇಳೆಗೆ 500 GW ನವೀಕರಿಸಬಹುದಾದ ಇಂಧನದ ಗುರಿಯತ್ತ ನಾವು ದೃಢವಾಗಿ ಸಾಗುತ್ತಿದ್ದೇವೆ. ಶುದ್ಧ ಶಕ್ತಿಗಾಗಿ ನಾವು ಹಸಿರು ಹೈಡ್ರೋಜನ್, ಪರಮಾಣು ಶಕ್ತಿ, ಎಥೆನಾಲ್ ಮಿಶ್ರಣದ ಮೇಲೆ ಗಮನ ಹರಿಸುತ್ತಿದ್ದೇವೆ. ಹಸಿರು ಮತ್ತು ಸುಸ್ಥಿರ ಭವಿಷ್ಯದತ್ತ ಸಾಗಲು ನಾವು ವಿಶ್ವದ ಎಲ್ಲಾ ದೇಶಗಳಿಗೆ ಸ್ಫೂರ್ತಿ ನೀಡುತ್ತಿದ್ದೇವೆ.

ಈ ನಿಟ್ಟಿನಲ್ಲಿ, ನಾವು ಅಂತರರಾಷ್ಟ್ರೀಯ ಸೌರ ಒಕ್ಕೂಟ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ, ಮಿಷನ್ ಲೈಫ್, ಜಾಗತಿಕ ಜೈವಿಕ ಇಂಧನ ಒಕ್ಕೂಟ, ಮತ್ತು ಒಂದು ಸೂರ್ಯ-ಒಂದು ಜಗತ್ತು-ಒಂದು ಗ್ರಿಡ್ನಂತಹ ಜಾಗತಿಕ ಉಪಕ್ರಮಗಳನ್ನು ಪರಿಚಯಿಸಿದ್ದೇವೆ.

ಸ್ನೇಹಿತರೇ,

ಎಲ್ಲಾ ದೇಶಗಳು ಒಟ್ಟಾಗಿ ಇಂಧನ ಪರಿವರ್ತನೆಯ ಕಡೆಗೆ ಸಾಗುವುದು ಅತ್ಯಗತ್ಯ. ನಾವು "ನಾನಲ್ಲ, ನಾವೆಲ್ಲರೂ" ಎಂಬ ಮನೋಭಾವದಿಂದ ಮುಂದುವರಿಯಬೇಕು. ದುರದೃಷ್ಟವಶಾತ್, 'ಗ್ಲೋಬಲ್ ಸೌತ್'ನ ದೇಶಗಳು ಅನಿಶ್ಚಿತತೆ ಮತ್ತು ಸಂಘರ್ಷಗಳ ಅತಿ ಹೆಚ್ಚು ಪರಿಣಾಮವನ್ನು ಎದುರಿಸಬೇಕಾಗಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಉದ್ವಿಗ್ನತೆ ಉಂಟಾದರೂ, ಆಹಾರ, ಇಂಧನ, ರಸಗೊಬ್ಬರ ಮತ್ತು ಆರ್ಥಿಕ ಬಿಕ್ಕಟ್ಟುಗಳಿಂದ ಮೊದಲು ತೊಂದರೆಗೆ ಸಿಲುಕುವುದೇ ಈ ದೇಶಗಳು. 

ಜನಸಮೂಹ, ಕಚ್ಚಾ ವಸ್ತುಗಳು, ಉತ್ಪಾದನೆ ಮತ್ತು ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. 'ಗ್ಲೋಬಲ್ ಸೌತ್'ನ ಆದ್ಯತೆಗಳು ಮತ್ತು ಕಳವಳಗಳನ್ನು ವಿಶ್ವ ವೇದಿಕೆಗೆ ತರುವುದನ್ನು ಭಾರತವು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ. ಯಾವುದೇ ರೂಪದಲ್ಲಿ ದ್ವಿಮುಖ ನೀತಿಗಳು  ಇರುವವರೆಗೂ, ಮಾನವೀಯತೆಯ ಸುಸ್ಥಿರ ಮತ್ತು ಸಮಗ್ರ ಅಭಿವೃದ್ಧಿ ಕೈಗೆಟುಕುವುದಿಲ್ಲ ಎಂದು ನಾವು ನಂಬುತ್ತೇವೆ.

ಸ್ನೇಹಿತರೇ,

ನಾನು ನಿಮ್ಮ ಗಮನವನ್ನು ಇನ್ನೊಂದು ಗಂಭೀರ ವಿಷಯದ ಕಡೆಗೆ ಸೆಳೆಯಲು ಬಯಸುತ್ತೇನೆ - ಭಯೋತ್ಪಾದನೆ. ಭಯೋತ್ಪಾದನೆಯ ವಿಷಯ ಬಂದಾಗ ಯಾವುದೇ ರೀತಿಯ ದ್ವಂದ್ವ ನೀತಿ ಇರಬಾರದು. ಇತ್ತೀಚೆಗೆ, ಭಾರತವು ಭೀಕರ ಮತ್ತು ಹೇಡಿ ಭಯೋತ್ಪಾದಕ ದಾಳಿಯನ್ನು ಎದುರಿಸಿತು.

ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯು ಕೇವಲ ಪಹಲ್ಗಾಮ್ ಮೇಲಿನ ದಾಳಿಯಾಗಿರಲಿಲ್ಲ, ಬದಲಿಗೆ ಪ್ರತಿಯೊಬ್ಬ ಭಾರತೀಯನ ಆತ್ಮ, ಗುರುತು ಮತ್ತು ಘನತೆಯ ಮೇಲೆ ನೇರವಾದ ದಾಳಿಯಾಗಿತ್ತು. ಅದು ಇಡೀ ಮಾನವೀಯತೆಯ ಮೇಲಿನ ದಾಳಿಯಾಗಿತ್ತು. ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ ಮತ್ತು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ ಎಲ್ಲಾ ಸ್ನೇಹಿತರಿಗೂ ನಾನು ನನ್ನ ಪ್ರಾಮಾಣಿಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಭಯೋತ್ಪಾದನೆಯು ಮಾನವೀಯತೆಯ ಶತ್ರು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಎಲ್ಲಾ ರಾಷ್ಟ್ರಗಳಿಗೆ ಇದು ವಿರುದ್ಧವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಏಕತೆ ಅನಿವಾರ್ಯ. ದುರದೃಷ್ಟವಶಾತ್, ನಮ್ಮ ನೆರೆಹೊರೆಯು ಭಯೋತ್ಪಾದನೆಯ ತಾಣವಾಗಿ ಮಾರ್ಪಟ್ಟಿದೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಹಿತಾಸಕ್ತಿಗಾಗಿ, ನಮ್ಮ ಆಲೋಚನೆ ಮತ್ತು ನೀತಿಗಳು ಅತ್ಯಂತ ಸ್ಪಷ್ಟವಾಗಿರಬೇಕು - ಭಯೋತ್ಪಾದನೆಯನ್ನು ಬೆಂಬಲಿಸುವ ಯಾವುದೇ ದೇಶವನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಅದಕ್ಕೆ ಬೆಲೆ ತೆರುವಂತೆ ಮಾಡಬೇಕು.

ಆದರೆ, ದುರದೃಷ್ಟವಶಾತ್, ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ಒಂದೆಡೆ, ನಮ್ಮ ಆದ್ಯತೆಗಳು ಮತ್ತು ಹಿತಾಸಕ್ತಿಗಳ ಆಧಾರದ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲು ನಾವು ಆತುರಪಡುತ್ತೇವೆ. ಮತ್ತೊಂದೆಡೆ, ಭಯೋತ್ಪಾದನೆಯನ್ನು ಬಹಿರಂಗವಾಗಿ ಬೆಂಬಲಿಸುವ ರಾಷ್ಟ್ರಗಳಿಗೆ ಬಹುಮಾನ ನೀಡುವುದನ್ನು ಮುಂದುವರಿಸಲಾಗುತ್ತದೆ. ಈ ಕೋಣೆಯಲ್ಲಿ ಹಾಜರಿರುವವರಿಗೆ ನನ್ನ ಕೆಲವು ಗಂಭೀರ ಪ್ರಶ್ನೆಗಳಿವೆ.

ನಾವು ನಿಜವಾಗಿಯೂ ಭಯೋತ್ಪಾದನೆಯನ್ನು ಎದುರಿಸುವ ಬಗ್ಗೆ ಗಂಭೀರವಾಗಿದ್ದೇವೆಯೇ? ಭಯೋತ್ಪಾದನೆಯು ನಮ್ಮ ಬಾಗಿಲನ್ನು ತಟ್ಟಿದಾಗ ಮಾತ್ರ ಅದರ ನಿಜವಾದ ಅರ್ಥವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೇ? ಭಯೋತ್ಪಾದನೆಯನ್ನು ಹರಡುವವರನ್ನು ಮತ್ತು ಅದರಿಂದ ಬಳಲುತ್ತಿರುವವರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವೇ? ನಮ್ಮ ಜಾಗತಿಕ ಸಂಸ್ಥೆಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಅಪಾಯದಲ್ಲಿವೆಯೇ?

ಮಾನವೀಯತೆಯ ವಿರುದ್ಧ ನಿಂತಿರುವ ಈ ಭಯೋತ್ಪಾದನೆಯ ವಿರುದ್ಧ ನಾವು ಇಂದು ನಿರ್ಣಾಯಕ ಕ್ರಮ ಕೈಗೊಳ್ಳದಿದ್ದರೆ, ಇತಿಹಾಸವು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ಸ್ವಾರ್ಥಕ್ಕಾಗಿ ಭಯೋತ್ಪಾದನೆಯನ್ನು ಕಡೆಗಣಿಸುವುದು, ಅಥವಾ ಭಯೋತ್ಪಾದನೆ ಅಥವಾ ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಮಾನವೀಯತೆಗೆ ಮಾಡುವ ದ್ರೋಹವಾಗಿದೆ.

ಸ್ನೇಹಿತರೇ,

ಭಾರತವು ಯಾವಾಗಲೂ ತನ್ನ ಸ್ವಹಿತಾಸಕ್ತಿಗಿಂತ ಹೆಚ್ಚಾಗಿ, ಮಾನವೀಯತೆಯ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಿದೆ. ಭವಿಷ್ಯದಲ್ಲಿಯೂ ಸಹ ಎಲ್ಲಾ ವಿಷಯಗಳಲ್ಲಿ G-7 ನೊಂದಿಗೆ ಸಂವಾದ ಮತ್ತು ಸಹಕಾರವನ್ನು ನಾವು ಮುಂದುವರಿಸುತ್ತೇವೆ.

ತುಂಬಾ ಧನ್ಯವಾದಗಳು.

ಸ್ನೇಹಿತರೇ,

ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಮತ್ತು ಇಂಧನ ವಿಷಯಗಳ ಕುರಿತು ಕೆಲವು ಅಂಶಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಸ್ಸಂದೇಹವಾಗಿ, AI ಎಲ್ಲಾ ವಲಯಗಳಲ್ಲಿ ದಕ್ಷತೆಯನ್ನು ಹೆಚ್ಚಿಸಲು ಮತ್ತು ನಾವಿನ್ಯತೆಯನ್ನು ಉತ್ತೇಜಿಸಲು ಪ್ರಬಲ ಸಾಧನವಾಗಿ ಹೊರಹೊಮ್ಮುತ್ತಿದೆ. ಆದಾಗ್ಯೂ, AI ಸ್ವತಃ ಬಹಳಷ್ಟು ಶಕ್ತಿಯನ್ನು ಬಳಸುವ ತಂತ್ರಜ್ಞಾನವಾಗಿದೆ. AI ಡೇಟಾ ಸೆಂಟರ್ ಗಳಿಂದ ಹೆಚ್ಚುತ್ತಿರುವ ಇಂಧನ ಬಳಕೆ ಮತ್ತು ಇಂದಿನ ತಂತ್ರಜ್ಞಾನ-ಚಾಲಿತ ಸಮಾಜಗಳ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಮಾತ್ರ ಸುಸ್ಥಿರವಾಗಿ ಪರಿಹರಿಸಬಹುದು.

ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಸ್ಥಿರ ಶಕ್ತಿಯನ್ನು ಖಚಿತಪಡಿಸುವುದು ಭಾರತದ ಪ್ರಮುಖ ಆದ್ಯತೆಯಾಗಿದೆ. ಇದನ್ನು ಸಾಧಿಸಲು, ನಾವು ಸೌರಶಕ್ತಿ ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಬೇಡಿಕೆ ಕೇಂದ್ರಗಳೊಂದಿಗೆ ಸಂಪರ್ಕಿಸಲು ನಾವು ಸ್ಮಾರ್ಟ್ ಗ್ರಿಡ್ ಗಳು, ಇಂಧನ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಹಸಿರು ಇಂಧನ ಕಾರಿಡಾರ್ ಗಳನ್ನು ಸಹ ಅಭಿವೃದ್ಧಿಪಡಿಸುತ್ತಿದ್ದೇವೆ.

ಸ್ನೇಹಿತರೇ,

ಭಾರತದಲ್ಲಿ, ನಮ್ಮೆಲ್ಲಾ ಪ್ರಯತ್ನಗಳು ಮಾನವ-ಕೇಂದ್ರಿತ ವಿಧಾನವನ್ನು ಆಧರಿಸಿವೆ. ಯಾವುದೇ ತಂತ್ರಜ್ಞಾನದ ನಿಜವಾದ ಮೌಲ್ಯವು ಕಟ್ಟಕಡೆಯ ವ್ಯಕ್ತಿಗೂ ಪ್ರಯೋಜನವನ್ನು ನೀಡುವ ಸಾಮರ್ಥ್ಯದಲ್ಲಿದೆ ಎಂದು ನಾವು ನಂಬುತ್ತೇವೆ. ಗ್ಲೋಬಲ್ ಸೌತ್ನಲ್ಲಿ ಯಾರೂ ಹಿಂದೆ ಬೀಳಬಾರದು. ಉದಾಹರಣೆಗೆ, ನಾವು AI-ಆಧಾರಿತ ಹವಾಮಾನ ಮುನ್ಸೂಚನೆ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದರೆ, ಅದು ನನ್ನ ದೇಶದ ಸಣ್ಣ ಗ್ರಾಮದಲ್ಲಿ ವಾಸಿಸುವ ರೈತ ಅಥವಾ ಮೀನುಗಾರನಿಗೆ ಪ್ರಯೋಜನ ನೀಡಿದಾಗ ಮಾತ್ರ ಅದರ ನಿಜವಾದ ಯಶಸ್ಸು ಸಿಕ್ಕಂತೆ.

ಭಾರತದಲ್ಲಿ, ದೂರದ ಹಳ್ಳಿಯ ವ್ಯಕ್ತಿಯೂ ಸಹ ವಿಶ್ವದ ಭಾಷೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜಾಗತಿಕ ಸಂಭಾಷಣೆಯ ಭಾಗವಾಗಲು ಅನುವು ಮಾಡಿಕೊಡಲು, ನಾವು 'ಭಾಷಿಣಿ' (BHASHINI) ಎಂಬ AI-ಆಧಾರಿತ ಭಾಷಾ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದೇವೆ. ನಾವು ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಮ್ಮ ಆರ್ಥಿಕತೆ ಮತ್ತು ಸಾಮಾನ್ಯ ಮನುಷ್ಯನನ್ನು ಸಬಲೀಕರಣಗೊಳಿಸಿದ್ದೇವೆ.

ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ, ನಾವು ಮಾನವ-ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. AI ಯ ಸಾಮರ್ಥ್ಯ ಮತ್ತು ಉಪಯುಕ್ತತೆಯನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ, ನಿಜವಾದ ಸವಾಲು AI ಯ ಶಕ್ತಿ ಮತ್ತು ಸಾಮರ್ಥ್ಯದಲ್ಲಿಲ್ಲ, ಬದಲಿಗೆ AI ಉಪಕರಣಗಳು ಮಾನವ ಘನತೆ ಮತ್ತು ಸಬಲೀಕರಣವನ್ನು ಹೆಚ್ಚಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದರಲ್ಲಿದೆ.

ಸ್ನೇಹಿತರೇ,

ಸಮಗ್ರ, ಸಮರ್ಥ ಮತ್ತು ಜವಾಬ್ದಾರಿಯುತ AI ತಂತ್ರಜ್ಞಾನಕ್ಕೆ ಸಮೃದ್ಧ ದತ್ತಾಂಶವೇ ಅಡಿಪಾಯ. ಭಾರತದ ವೈವಿಧ್ಯತೆಯೇ ನಮ್ಮ ದೊಡ್ಡ ಶಕ್ತಿ. ನಮ್ಮ ಚೈತನ್ಯಪೂರ್ಣ ಜೀವನಶೈಲಿ, ಭಾಷಾ ವೈವಿಧ್ಯ ಮತ್ತು ವಿಶಾಲ ಭೌಗೋಳಿಕತೆಯು ಭಾರತವನ್ನು ಸಮೃದ್ಧ ದತ್ತಾಂಶದ ಅತ್ಯಮೂಲ್ಯ ಮತ್ತು ಪ್ರಬಲ ಆಗರವನ್ನಾಗಿ ಮಾಡಿದೆ. ಹೀಗಾಗಿ, ಭಾರತದ ವೈವಿಧ್ಯತೆಯನ್ನೇ ಮಾನದಂಡವಾಗಿಟ್ಟುಕೊಂಡು ಅಭಿವೃದ್ಧಿಪಡಿಸಿ, ಪರೀಕ್ಷಿಸಿದ AI ಮಾದರಿಗಳು ಇಡೀ ವಿಶ್ವಕ್ಕೆ ಅತ್ಯಂತ ಪ್ರಸ್ತುತ ಮತ್ತು ಉಪಯುಕ್ತವಾಗಲಿವೆ.

ಭಾರತದಲ್ಲಿ, ನಾವು ದತ್ತಾಂಶದ ಸಬಲೀಕರಣ ಮತ್ತು ಸಂರಕ್ಷಣೆಗಾಗಿ ಒಂದು ಬಲಿಷ್ಠವಾದ ವ್ಯವಸ್ಥೆಯನ್ನು ರೂಪಿಸಲು ಆದ್ಯತೆ ನೀಡಿದ್ದೇವೆ. ಇದರ ಜೊತೆಗೆ, ಭಾರತವು ಅಪಾರ ಪ್ರತಿಭಾ ಸಂಪತ್ತನ್ನು ಹೊಂದಿದೆ. ಇದು ತನ್ನ ಅಗಾಧ ಪ್ರಮಾಣ, ಕೌಶಲ್ಯ, ವೈವಿಧ್ಯತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಬಗೆಗಿನ ಬದ್ಧತೆಯಿಂದ, AI ಕ್ಷೇತ್ರದಲ್ಲಿನ ಜಾಗತಿಕ ಪ್ರಯತ್ನಗಳಿಗೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಸ್ನೇಹಿತರೇ,

ಕೃತಕ ಬುದ್ಧಿಮತ್ತೆಯ (AI) ವಿಷಯದ ಕುರಿತು ನಾನು ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ಮೊದಲನೆಯದಾಗಿ, ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಆಡಳಿತ ವ್ಯವಸ್ಥೆಗಾಗಿ ಕೆಲಸ ಮಾಡಬೇಕು. ಇದು AIಗೆ ಸಂಬಂಧಿಸಿದ ಕಳವಳಗಳನ್ನು ಬಗೆಹರಿಸುವುದರ ಜೊತೆಗೆ, ನಾವೀನ್ಯತೆಯನ್ನೂ ಉತ್ತೇಜಿಸಬೇಕು. ಆಗ ಮಾತ್ರ ನಾವು AI ಅನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಪರಿವರ್ತಿಸಬಹುದು.

ಎರಡನೆಯದಾಗಿ, AI ಯುಗದಲ್ಲಿ, ನಿರ್ಣಾಯಕ ಖನಿಜಗಳು ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ನಿಕಟ ಸಹಕಾರವು ಅತ್ಯಂತ ಮುಖ್ಯವಾಗಿದೆ. ನಾವು ಅವುಗಳ ಪೂರೈಕೆ ಸರಪಳಿಗಳನ್ನು ಸುರಕ್ಷಿತಗೊಳಿಸುವುದರ ಮತ್ತು ಅವುಗಳ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದರ ಮೇಲೆ ಗಮನ ಹರಿಸಬೇಕು. ಯಾವುದೇ ದೇಶವು ಅವುಗಳನ್ನು ಕೇವಲ ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಅಥವಾ ಅಸ್ತ್ರವಾಗಿ ಬಳಸದಂತೆ ನಾವು ಖಚಿತಪಡಿಸಿಕೊಳ್ಳಬೇಕು. ಮೂರನೆಯದಾಗಿ, 'ಡೀಪ್ ಫೇಕ್' ಗಳು ಕಳವಳಕ್ಕೆ ಒಂದು ಪ್ರಮುಖ ಕಾರಣವಾಗಿವೆ, ಏಕೆಂದರೆ ಅವು ಸಮಾಜದಲ್ಲಿ ವ್ಯಾಪಕವಾದ ಅಶಾಂತಿಯನ್ನು ಉಂಟುಮಾಡಬಲ್ಲವು. ಆದ್ದರಿಂದ, AI-ರಚಿತ ವಿಷಯವನ್ನು ಸ್ಪಷ್ಟವಾಗಿ 'ವಾಟರ್ ಮಾರ್ಕ್' ಮಾಡಬೇಕು ಅಥವಾ ಅದರೊಂದಿಗೆ ಒಂದು ಸ್ಪಷ್ಟವಾದ ಪ್ರಕಟಣೆ ಇರಬೇಕು.

ಸ್ನೇಹಿತರೇ,

ಕಳೆದ ಶತಮಾನದಲ್ಲಿ ನಾವು ಇಂಧನಕ್ಕಾಗಿ ಪೈಪೋಟಿಯನ್ನು ಕಂಡಿದ್ದೇವೆ. ಈ ಶತಮಾನದಲ್ಲಿ, ನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಅಳವಡಿಸಿಕೊಳ್ಳಬೇಕು. 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಔರ್ ಸಬ್ ಕಾ ಪ್ರಯಾಸ್', ಅಂದರೆ ಜನ, ಭೂಮಿ ಮತ್ತು ಪ್ರಗತಿಗಾಗಿ ಭಾರತದ ಕರೆ ಎಂಬ ಮಾರ್ಗದರ್ಶಿ ಸೂತ್ರದೊಂದಿಗೆ ನಾವು ಮುಂದುವರಿಯಬೇಕು. ಈ ಮನೋಭಾವದಿಂದ, ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ AI ಇಂಪ್ಯಾಕ್ಟ್ ಶೃಂಗಸಭೆಗೆ ನಿಮ್ಮೆಲ್ಲರಿಗೂ ನಾನು ಆತ್ಮೀಯ ಆಹ್ವಾನವನ್ನು ನೀಡುತ್ತೇನೆ.

ತುಂಬಾ ಧನ್ಯವಾದಗಳು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian IPOs set to raise up to $18 billion in second-half surge

Media Coverage

Indian IPOs set to raise up to $18 billion in second-half surge
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜುಲೈ 2025
July 11, 2025

Appreciation by Citizens in Building a Self-Reliant India PM Modi's Initiatives in Action