ನಾನು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜಪಾನ್ ನ ಒಸಾಕಾಗೆ ಭೇಟಿ ನೀಡುತ್ತಿದ್ದೇನೆ. ಇಂದು ಜಗತ್ತು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಮತ್ತು ಲಭ್ಯವಿರುವ ಅವಕಾಶಗಳ ಕುರಿತು ನಾನು ಜಾಗತಿಕ ನಾಯಕರೊಂದಿಗೆ ಸಮಾಲೋಚನೆಯನ್ನು ನಡೆಸಲು ಎದುರು ನೋಡುತ್ತಿದ್ದೇನೆ. ಮಹಿಳಾ ಸಬಲೀಕರಣ, ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿ ಮಾತ್ರವಲ್ಲದೆ, ಪ್ರಮುಖ ಜಾಗತಿಕ ಸವಾಲುಗಳಾದ ಭಯೋತ್ಪಾದನೆ ಮತ್ತು ಹವಾಮಾನ ವೈಪರೀತ್ಯ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗುವುದು.
ಅತಿ ವೇಗದಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿ ಸುಧಾರಿತ ಬಹುತ್ವಕ್ಕೆ ಬಲಿಷ್ಠ ಬೆಂಬಲ ಪುನರುಚ್ಚರಿಸುವುದು ಮತ್ತು ಅದನ್ನು ಪ್ರತಿಪಾದಿಸಲು ಈ ಶೃಂಗಸಭೆ ಒಂದು ಪ್ರಮುಖ ಅವಕಾಶವಾಗಿದೆ. ಕಳೆದ 5 ವರ್ಷಗಳಿಂದೀಚೆಗಿನ ಭಾರತದ ಬಲಿಷ್ಠ ಅಭಿವೃದ್ಧಿ ಅನುಭವವನ್ನು ಹಂಚಿಕೊಳ್ಳಲು ಈ ಶೃಂಗಸಭೆ ಒಂದು ವೇದಿಕೆಯಾಗಿದೆ. ಭಾರತ ಕಳೆದ ಐದು ವರ್ಷದಲ್ಲಿ ಉತ್ತಮ ಪ್ರಗತಿ ಮತ್ತು ಸ್ಥಿರತೆ ಮಾರ್ಗದಲ್ಲಿ ಮುನ್ನಡೆಯುತ್ತಿರುವುದರಿಂದ ಭಾರತದ ಜನತೆ ಸರ್ಕಾರಕ್ಕೆ ಅದ್ಭುತ ಜನಾದೇಶವನ್ನು ಮತ್ತೆ ನೀಡಿದೆ.
ಒಸಾಕಾ ಶೃಂಗಸಭೆ ಭಾರತಕ್ಕೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಕಾರಣ ಭಾರತ ಸ್ವಾತಂತ್ರ್ಯಗಳಿಸಿ 2022ರ ವೇಳೆಗೆ 75 ವರ್ಷ ಪೂರ್ಣಗೊಳ್ಳಲಿದೆ ಮತ್ತು ಆ ವೇಳೆಗೆ ನವಭಾರತ ನಿರ್ಮಾಣವಾಗಲಿದ್ದು, ಆ ಸಮಯದಲ್ಲಿ ಭಾರತ ಜಿ-20 ರಾಷ್ಟ್ರಗಳ ಶೃಂಗಸಭೆಯ ಆತಿಥ್ಯವನ್ನು ವಹಿಸಲಿದೆ.
ಶೃಂಗಸಭೆಯ ವೇಳೆ ನಾನು, ನಮ್ಮ ಹಲವು ಪ್ರಮುಖ ಪಾಲುದಾರ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮತ್ತು ಜಾಗತಿಕ ಪ್ರಾಮುಖ್ಯತೆಯ ಹಲವು ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದೇನೆ.
ನಾನು ಈ ಸಂದರ್ಭದಲ್ಲಿ ರಷ್ಯಾ, ಭಾರತ ಮತ್ತು ಚೀನಾ(ಆರ್ ಐ ಸಿ) ಅನೌಪಚಾರಿಕ ಶೃಂಗಸಭೆಯ ಆತಿಥ್ಯ ವಹಿಸುವುದನ್ನು ಎದುರು ನೋಡುತ್ತಿದ್ದೇನೆ ಮತ್ತು ಮುಂದಿನ ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣಆಫ್ರಿಕಾ) ಮತ್ತು ಜೆಎಐ(ಜಪಾನ್, ಅಮೆರಿಕ ಮತ್ತು ಭಾರತ) ನಾಯಕರ ಅನೌಪಚಾರಿಕ ಸಭೆಗಳಲ್ಲಿ ಭಾಗವಹಿಸಲು ನಾನು ಉತ್ಸುಕನಾಗಿದ್ದೇನೆ.