“ದೇಶದಲ್ಲಿ ವಂದೇ ಭಾರತ್ ರೈಲುಗಳ ವಿಸ್ತರಣೆ ಮತ್ತು ಆಧುನೀಕರಣದ ಮೂಲಕ ವಿಕಸಿತ ಭಾರತದ ಗುರಿ ತಲುಪಲು ರಾಷ್ಟ್ರ ಇಂಚಿಂಚು ಸಾಗುತ್ತಿದೆ”
“ವಿಕಸಿತ ಭಾರತದ ಗುರಿ ಸಾಧಿಸಲು ದಕ್ಷಿಣ ರಾಜ್ಯಗಳ ತ್ವರಿತ ಬೆಳವಣಿಗೆ ಅಗತ್ಯ”
“ರಾಷ್ಟ್ರೀಯ ರಾಜಧಾನಿ ವಲಯ [ಎನ್.ಸಿ.ಆರ್] ಆಧುನಿಕ ರೈಲುಗಳು, ಎಕ್ಸ್ ಪ್ರೆಸ್ ಹೆದ್ದಾರಿ ಸಂಪರ್ಕ ಜಾಲ ಮತ್ತು ರೈಲು ಸೇವೆಗಳ ವಿಸ್ತರಣೆ ಒಳಗೊಂಡಂತೆ ದೇಶದ ಮೂಲ ಸೌಕರ್ಯ ಅಭಿವೃದ್ಧಿಗೆ ಪಿಎಂ ಗತಿಶಕ್ತಿ ಉದಾಹರಣೆ”
“ಭಾರತೀಯ ರೈಲ್ವೆಯ ಆಧುನೀಕರಣಕ್ಕೆ ವಂದೇ ಭಾರತ್ ಹೊಸ ಮುಖವಾಗಿದೆ”

ಅಶ್ವಿನಿ ವೈಷ್ಣವ್ ಜೀ ಸೇರಿದಂತೆ ಕೇಂದ್ರ ಸರ್ಕಾರದ ನನ್ನ ಗೌರವಾನ್ವಿತ ಸಹೋದ್ಯೋಗಿಗಳೇ; ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಜೀ; ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ; ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್; ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್; ನನ್ನ ಇತರ ಸಂಪುಟ ಸಹೋದ್ಯೋಗಿಗಳೇ; ರಾಜ್ಯಗಳ ಉಪ ಮುಖ್ಯಮಂತ್ರಿಗಳು; ಮಂತ್ರಿಗಳು; ಸಂಸತ್ ಸದಸ್ಯರು; ಮತ್ತು ದೇಶದಾದ್ಯಂತದ ಇತರ ಸಾರ್ವಜನಿಕ ಪ್ರತಿನಿಧಿಗಳು, ಮಹಿಳೆಯರೇ ಮತ್ತು ಮಹನೀಯರೇ!

ಇಂದು, ಉತ್ತರದಿಂದ ದಕ್ಷಿಣಕ್ಕೆ, ನಮ್ಮ ರಾಷ್ಟ್ರದ ಅಭಿವೃದ್ಧಿಯ ಪಯಣದಲ್ಲಿ ನಾವು ಮತ್ತೊಂದು ಮಹತ್ವದ ಅಧ್ಯಾಯಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಮಧುರೈ-ಬೆಂಗಳೂರು, ಚೆನ್ನೈ-ನಾಗರ್ಕೋಯಿಲ್ ಮತ್ತು ಮೀರತ್-ಲಕ್ನೋ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿವೆ. ಈ ವಿಸ್ತರಣೆ, ಆಧುನಿಕತೆಯ ಈ ಅಪ್ಪುಗೆ ಮತ್ತು ವಂದೇ ಭಾರತ್ ರೈಲುಗಳ ಹೆಚ್ಚಿದ ವೇಗವು 'ಅಭಿವೃದ್ಧಿ ಹೊಂದಿದ ಭಾರತದ' ಗುರಿಯತ್ತ ನಮ್ಮ ರಾಷ್ಟ್ರದ ಸ್ಥಿರ, ನಿರಂತರ ಪ್ರಗತಿಯನ್ನು ಸೂಚಿಸುತ್ತದೆ. ಇಂದು ಉದ್ಘಾಟಿಸಲಾದ ಮೂರು ವಂದೇ ಭಾರತ್ ರೈಲುಗಳು ದೇಶಾದ್ಯಂತ ಪ್ರಮುಖ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಸಂಪರ್ಕವನ್ನು ಹೆಚ್ಚಿಸುತ್ತವೆ. ದೇವಾಲಯಗಳ ನಗರಿ ಮಧುರೈ ಈಗ ವಂದೇ ಭಾರತ್ ಮೂಲಕ ಬೆಂಗಳೂರಿನ ಐಟಿ ಹಬ್ ಗೆ ನೇರವಾಗಿ ಸಂಪರ್ಕ ಹೊಂದಿದೆ. ಈ ರೈಲು ಸೇವೆಯು ಹಬ್ಬಗಳು ಮತ್ತು ವಾರಾಂತ್ಯಗಳಲ್ಲಿ ಮಧುರೈ ಮತ್ತು ಬೆಂಗಳೂರು ನಡುವೆ ಪ್ರಯಾಣಿಸಲು ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಮತ್ತು ಯಾತ್ರಾರ್ಥಿಗಳ ಅಗತ್ಯಗಳನ್ನು ಪೂರೈಸುತ್ತದೆ. ಚೆನ್ನೈ-ನಾಗರ್ ಕೋಯಿಲ್ ಮಾರ್ಗದಲ್ಲಿ ವಂದೇ ಭಾರತ್ ರೈಲು ವಿದ್ಯಾರ್ಥಿಗಳು, ರೈತರು ಮತ್ತು ಐಟಿ ವೃತ್ತಿಪರರಿಗೆ ಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ ಕಾರ್ಯನಿರ್ವಹಿಸುವ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವನ್ನು ನಾವು ಈಗಾಗಲೇ ನೋಡುತ್ತಿದ್ದೇವೆ. ಪ್ರವಾಸೋದ್ಯಮದಲ್ಲಿನ ಈ ಹೆಚ್ಚಳವು ಸ್ಥಳೀಯ ವ್ಯವಹಾರಗಳು ಮತ್ತು ಅಂಗಡಿಯವರಿಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ. ಈ ಹೊಸ ರೈಲುಗಳಿಗಾಗಿ ನಮ್ಮ ರಾಷ್ಟ್ರದ ನಾಗರಿಕರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 

ಸ್ನೇಹಿತರೇ,

ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ನಮ್ಮ ದಕ್ಷಿಣದ ರಾಜ್ಯಗಳ ತ್ವರಿತ ಅಭಿವೃದ್ಧಿಯ ಅಗತ್ಯವಿದೆ. ದಕ್ಷಿಣ ಭಾರತವು ಪ್ರತಿಭೆ, ಸಂಪನ್ಮೂಲಗಳು ಮತ್ತು ಅವಕಾಶಗಳಿಂದ ಸಮೃದ್ಧವಾದ ಪ್ರದೇಶವಾಗಿದೆ. ಆದ್ದರಿಂದ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ವಲಯದ ಅಭಿವೃದ್ಧಿ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಕಳೆದ 10 ವರ್ಷಗಳಲ್ಲಿ ಈ ರಾಜ್ಯಗಳಲ್ಲಿ ರೈಲ್ವೆ ಸಾಧಿಸಿದ ಪ್ರಗತಿಯು ಈ ಬದ್ಧತೆಗೆ ಸಾಕ್ಷಿಯಾಗಿದೆ. ಈ ವರ್ಷದ ಬಜೆಟಿನಲ್ಲಿ ನಾವು ತಮಿಳುನಾಡಿಗೆ ರೈಲ್ವೆ ಬಜೆಟ್ ಗಾಗಿ 6,000 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದೇವೆ, ಇದು 2014 ರ ಬಜೆಟಿಗಿಂತ  7 ಪಟ್ಟು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಈಗಾಗಲೇ ಆರು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎರಡು ಹೊಸ ರೈಲುಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ ಈಗ ಎಂಟಕ್ಕೆ ಏರಲಿದೆ. ಅಂತೆಯೇ, ಕರ್ನಾಟಕಕ್ಕೆ 7,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ, ಇದು 2014 ರ ಬಜೆಟ್ ಗಿಂತ 9 ಪಟ್ಟು ಹೆಚ್ಚಾಗಿದೆ. ಇಂದು, 8 ಜೋಡಿ ವಂದೇ ಭಾರತ್ ರೈಲುಗಳು ಇಡೀ ಕರ್ನಾಟಕ ರಾಜ್ಯವನ್ನು ಜೋಡಿಸುತ್ತಿವೆ.

ಸ್ನೇಹಿತರೇ,

ಗಮನಾರ್ಹವಾಗಿ ಹೆಚ್ಚಿದ ಬಜೆಟ್ ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ರೈಲು ಸಾರಿಗೆಯನ್ನು ಮತ್ತಷ್ಟು ಬಲಪಡಿಸಿದೆ. ಈ ರಾಜ್ಯಗಳಲ್ಲಿ, ರೈಲ್ವೆ ಹಳಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ, ವಿದ್ಯುದ್ದೀಕರಣ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಅನೇಕ ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಈ ಬೆಳವಣಿಗೆಗಳು ಜನರ ಜೀವನವನ್ನು ಸುಲಭಗೊಳಿಸುವುದಲ್ಲದೆ, 'ಸುಗಮ ವ್ಯಾಪಾರ'ಕ್ಕೂ ಅನುಕೂಲ ಮಾಡಿಕೊಟ್ಟಿವೆ.

ಸ್ನೇಹಿತರೇ,

ಇಂದು ಮೀರತ್-ಲಕ್ನೋ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಪ್ರಾರಂಭಿಸುವ ಮೂಲಕ ಉತ್ತರ ಪ್ರದೇಶದ ಜನರಿಗೆ, ವಿಶೇಷವಾಗಿ ಪಶ್ಚಿಮ ಯುಪಿಯವರಿಗೆ ಒಳ್ಳೆಯ ಸುದ್ದಿಯನ್ನು ನೀಡಲಾಗಿದೆ. ಐತಿಹಾಸಿಕವಾಗಿ ಕ್ರಾಂತಿಯ ಭೂಮಿ ಎಂದು ಕರೆಯಲ್ಪಡುವ ಮೀರತ್ ಮತ್ತು ಪಶ್ಚಿಮ ಯುಪಿ ಈಗ ಅಭಿವೃದ್ಧಿಯಲ್ಲಿ ಹೊಸ ಕ್ರಾಂತಿಗೆ ಸಾಕ್ಷಿಯಾಗುತ್ತಿವೆ. ಒಂದೆಡೆ, ಮೀರತ್ತನ್ನು ರಾಜಧಾನಿ ದಿಲ್ಲಿಗೆ ಆರ್.ಆರ್.ಟಿ.ಎಸ್. ಮೂಲಕ ಸಂಪರ್ಕಿಸಲಾಗುತ್ತಿದೆ; ಮತ್ತೊಂದೆಡೆ, ವಂದೇ ಭಾರತ್ ರೈಲು ರಾಜ್ಯ ರಾಜಧಾನಿ ಲಕ್ನೋಗೆ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಆಧುನಿಕ ರೈಲುಗಳು, ಎಕ್ಸ್ ಪ್ರೆಸ್ ವೇಗಳ ಜಾಲ ಮತ್ತು ವಾಯು ಸೇವೆಗಳ ವಿಸ್ತರಣೆಯೊಂದಿಗೆ, ಪಿಎಂ ಗತಿ ಶಕ್ತಿ ಚಿಂತನೆಯ ದೃಷ್ಟಿಕೋನವು ದೇಶದ ಮೂಲಸೌಕರ್ಯವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದಕ್ಕೆ ಎನ್ ಸಿಆರ್ ಪ್ರಮುಖ ಉದಾಹರಣೆಯಾಗುತ್ತಿದೆ.

 

ಸ್ನೇಹಿತರೇ,

ವಂದೇ ಭಾರತ್ ಆಧುನೀಕರಣಗೊಳ್ಳುತ್ತಿರುವ ಭಾರತೀಯ ರೈಲ್ವೆಯ ಹೊಸ ಮುಖವನ್ನು ಪ್ರತಿನಿಧಿಸುತ್ತದೆ. ಪ್ರತಿ ನಗರದಲ್ಲಿ ಮತ್ತು ಪ್ರತಿ ಮಾರ್ಗದಲ್ಲಿ ವಂದೇ ಭಾರತ್ ಗೆ ಬೇಡಿಕೆ ಹೆಚ್ಚುತ್ತಿದೆ. ಹೈಸ್ಪೀಡ್ ರೈಲುಗಳ ಅಳವಡಿಕೆ, ಓಡಾಟವು ಜನರಲ್ಲಿ ತಮ್ಮ ವ್ಯವಹಾರಗಳನ್ನು ವಿಸ್ತರಿಸಲು, ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಅವರ ಕನಸುಗಳನ್ನು ಮುಂದುವರಿಸಲು ವಿಶ್ವಾಸವನ್ನು ತುಂಬಿದೆ. ಇಂದು, ದೇಶಾದ್ಯಂತ 102 ವಂದೇ ಭಾರತ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 3 ಕೋಟಿಗೂ ಹೆಚ್ಚು ಜನರು ಈಗಾಗಲೇ ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಸಂಖ್ಯೆಯು ವಂದೇ ಭಾರತದ ಯಶಸ್ಸನ್ನು ಪ್ರತಿಬಿಂಬಿಸುವುದಲ್ಲದೆ, ಮಹತ್ವಾಕಾಂಕ್ಷಿ ಭಾರತದ ಆಶೋತ್ತರಗಳು  ಮತ್ತು ಕನಸುಗಳನ್ನು ಸಂಕೇತಿಸುತ್ತದೆ.

ಸ್ನೇಹಿತರೇ,

ಆಧುನಿಕ ರೈಲು ಮೂಲಸೌಕರ್ಯವು ಅಭಿವೃದ್ಧಿ ಹೊಂದಿದ ಭಾರತದ ನಮ್ಮ ದೃಷ್ಟಿಕೋನದ ಪ್ರಮುಖ ಆಧಾರಸ್ತಂಭವಾಗಿದೆ. ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆ, ರೈಲು ಮಾರ್ಗಗಳ ವಿದ್ಯುದ್ದೀಕರಣ, ಹೊಸ ರೈಲುಗಳ ಅಳವಡಿಕೆ/ಪರಿಚಯ ಅಥವಾ ಹೊಸ ಮಾರ್ಗಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುತ್ತಿದೆ. ಈ ವರ್ಷದ ಬಜೆಟಿನಲ್ಲಿ ರೈಲ್ವೆಗೆ 2.5 ಲಕ್ಷ ಕೋಟಿ ರೂ. ಒದಗಿಸಲಾಗಿದೆ. ನಾವು ಭಾರತೀಯ ರೈಲ್ವೆಯನ್ನು ಹೈಟೆಕ್ ಸೇವೆಗಳೊಂದಿಗೆ ಪರಿವರ್ತಿಸುತ್ತಿದ್ದೇವೆ, ಅದನ್ನು ಅದರ ಸಾಂಪ್ರದಾಯಿಕ ಚಿತ್ರಣವನ್ನು ಮೀರಿ ಆಧುನೀಕರಿಸುತ್ತಿದ್ದೇವೆ. ವಂದೇ ಭಾರತ್ ರೈಲುಗಳ ವಿಸ್ತರಣೆಯ ಜೊತೆಗೆ, ಅಮೃತ್ ಭಾರತ್ ರೈಲುಗಳನ್ನು ಸಹ ಪರಿಚಯಿಸಲಾಗುತ್ತಿದೆ. ಇದಲ್ಲದೆ, ವಂದೇ ಭಾರತ್ ನ ಸ್ಲೀಪರ್ ಆವೃತ್ತಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ, ನಮೋ ಭಾರತ್ ರೈಲುಗಳು ಈಗ ಕಾರ್ಯನಿರ್ವಹಿಸುತ್ತಿವೆ ಮತ್ತು ನಗರ ಸಂಚಾರ ಸಮಸ್ಯೆಗಳನ್ನು ಪರಿಹರಿಸಲು, ವಂದೇ ಮೆಟ್ರೋ ಸೇವೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು.

ಸ್ನೇಹಿತರೇ,

ನಮ್ಮ ನಗರಗಳನ್ನು ಹೆಚ್ಚಾಗಿ ಅವುಗಳ ರೈಲ್ವೆ ನಿಲ್ದಾಣಗಳಿಂದ ವ್ಯಾಖ್ಯಾನಿಸಲಾಗುತ್ತದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯ ಮೂಲಕ, ಈ ನಿಲ್ದಾಣಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ, ಅದು ನಗರಗಳಿಗೆ ಹೊಸ ಗುರುತನ್ನು ನೀಡುತ್ತಿದೆ. ದೇಶಾದ್ಯಂತ 1,300 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಪ್ರಸ್ತುತ ನವೀಕರಣಕ್ಕೆ ಒಳಗಾಗುತ್ತಿವೆ. ಅನೇಕ ಸ್ಥಳಗಳಲ್ಲಿ, ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸಲಾಗುತ್ತಿದೆ, ಸಣ್ಣ ನಿಲ್ದಾಣಗಳು ಸಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದುತ್ತಿವೆ. ಈ ರೂಪಾಂತರವು ಸುಲಭ ಪ್ರಯಾಣದ ಅನುಕೂಲತೆಯನ್ನು  ಬಹಳವಾಗಿ ಹೆಚ್ಚಿಸುತ್ತಿದೆ.

 

ಸ್ನೇಹಿತರೇ,

ರೈಲ್ವೆ, ರಸ್ತೆ ಮಾರ್ಗಗಳು ಮತ್ತು ಜಲಮಾರ್ಗಗಳಂತಹ ಸಂಪರ್ಕ ಮೂಲಸೌಕರ್ಯಗಳನ್ನು ಬಲಪಡಿಸಿದಾಗ, ರಾಷ್ಟ್ರವು ಬಲಗೊಳ್ಳುತ್ತದೆ. ಈ ಅಭಿವೃದ್ಧಿಯು ಸಾಮಾನ್ಯ ನಾಗರಿಕರಿಗೆ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಪ್ರಯೋಜನವನ್ನು ನೀಡುತ್ತದೆ. ಆಧುನಿಕ ಮೂಲಸೌಕರ್ಯಗಳನ್ನು ಸ್ಥಾಪಿಸುತ್ತಿರುವುದರಿಂದ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಅವರ  ಸಬಲೀಕರಣವಾಗುತ್ತಿದೆ ಎಂಬುದಕ್ಕೆ ದೇಶ ಸಾಕ್ಷಿಯಾಗಿದೆ. ಮೂಲಸೌಕರ್ಯಗಳ ವಿಸ್ತರಣೆಯು ಹಳ್ಳಿಗಳಿಗೆ ಹೊಸ ಅವಕಾಶಗಳನ್ನು ತರುತ್ತಿದೆ. ಕೈಗೆಟುಕುವ ಡೇಟಾ ಮತ್ತು ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆಯು ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ. ದಾಖಲೆಯ ಸಂಖ್ಯೆಯಲ್ಲಿ ಆಸ್ಪತ್ರೆಗಳು, ಶೌಚಾಲಯಗಳು ಮತ್ತು ಕಾಂಕ್ರೀಟ್ ಮನೆಗಳ ನಿರ್ಮಾಣವು ರಾಷ್ಟ್ರದ ಪ್ರಗತಿಯಿಂದ ಕಡುಬಡವರು ಸಹ ಪ್ರಯೋಜನ ಪಡೆಯುವುದನ್ನು ಖಚಿತಪಡಿಸುತ್ತದೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳಂತಹ ಮೂಲಸೌಕರ್ಯಗಳ ಬೆಳವಣಿಗೆಯು ಯುವಜನರ ಪ್ರಗತಿಯ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಸಂಘಟಿತ ಪ್ರಯತ್ನಗಳಿಂದಾಗಿ, ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ.

ಸ್ನೇಹಿತರೇ,

ಹಲವು ವರ್ಷಗಳಿಂದ, ಭಾರತೀಯ ರೈಲ್ವೆ ದೀರ್ಘಕಾಲೀನ ಸಮಸ್ಯೆಗಳನ್ನು ಪರಿಹರಿಸಲು ದಣಿವರಿಯದೆ ಕೆಲಸ ಮಾಡಿದೆ, ಶಾಶ್ವತ ಪರಿಹಾರಗಳ ಭರವಸೆಯನ್ನು ಹೆಚ್ಚಿಸಿದೆ. ಆದಾಗ್ಯೂ, ಈ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಮಾಡಬೇಕಾಗಿದೆ. ಭಾರತೀಯ ರೈಲ್ವೆ ಎಲ್ಲರಿಗೂ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆರಾಮದಾಯಕ ಪ್ರಯಾಣದ ಸಂಕೇತವಾಗುವವರೆಗೂ ನಾವು ವಿಶ್ರಾಂತಿ ಪಡೆಯುವುದಿಲ್ಲ. ದೇಶಾದ್ಯಂತ ಈ ಮೂಲಸೌಕರ್ಯ ಅಭಿವೃದ್ಧಿಯು ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಮತ್ತೊಮ್ಮೆ, ಮೂರು ಹೊಸ ವಂದೇ ಭಾರತ್ ರೈಲುಗಳ ಉದ್ಘಾಟನೆಗಾಗಿ ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು, ಮತ್ತು ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Oman, India’s Gulf 'n' West Asia Gateway

Media Coverage

Oman, India’s Gulf 'n' West Asia Gateway
NM on the go

Nm on the go

Always be the first to hear from the PM. Get the App Now!
...
Prime Minister extends compliments for highlighting India’s cultural and linguistic diversity on the floor of the Parliament
December 23, 2025

The Prime Minister, Shri Narendra Modi has extended compliments to Speaker Om Birla Ji and MPs across Party lines for highlighting India’s cultural and linguistic diversity on the floor of the Parliament as regional-languages take precedence in Lok-Sabha addresses.

The Prime Minister posted on X:

"This is gladdening to see.

India’s cultural and linguistic diversity is our pride. Compliments to Speaker Om Birla Ji and MPs across Party lines for highlighting this vibrancy on the floor of the Parliament."

https://www.hindustantimes.com/india-news/regional-languages-take-precedence-in-lok-sabha-addresses-101766430177424.html

@ombirlakota